-ಜಿ.ಎನ್. ನಾಗರಾಜ್
ಪ್ರಿಯ ಓದುಗರೇ, ಟಾಟಾ ಬಂಡವಾಳ ಉದ್ಭವವಾದ ಹಾಗೂ ಬೆಳೆದ ಬಗೆಯ ಹಿನ್ನೆಲೆಗಳನ್ನು ಪ್ರಸ್ತಾಪಿಸಿದ ಬರಹ ಭಾಗ-1 ರಲ್ಲಿ ಓದಿದ್ದೀರಿ. ಭಾರತದಲ್ಲೇ ಬಹುದೊಡ್ಡ ಬಂಡವಾಳ, ಕೈಗಾರಿಕೋದ್ಯಮವನ್ನು ಹೊಂದಿರುವ ಟಾಟಾ ಸಮೂಹದ ಬಂಡವಾಳ ಹೇಗೆ, ಎಲ್ಲಿಂದ ಬಂತು ಎಂಬ ಬಗ್ಗೆ ಮಹತ್ವದ ಆಸಕ್ತಿದಾಯಕ ವಿವರಗಳು, ವಿಶ್ಲೇಷಣೆ – ಈ ಲೇಖನದಲ್ಲಿ. ಓದಿ.
ಟಾಟಾ ಸಾಮ್ರಾಜ್ಯದ ಬಂಡವಾಳ ಉದ್ಭವವಾದ ಬಗೆಯನ್ನು ಬಗೆಯುತ್ತಾ ಹೋದಾಗ, ಅತ್ಯಂತ ನೀಚ ಅಫೀಮು ವ್ಯಾಪಾರದ ಜೊತೆಗೆ ಅಂತಹುದೇ ಪಾತಕವಾದ ಮಿಲಿಟರಿ ಸಪ್ಲೈ ಕಂಟ್ರಾಕ್ಟರ್ ಆಗಿ ಕ್ರೂರ, ಆಕ್ರಮಣಕಾರ ಬ್ರಿಟಿಷ್ ಸೈನ್ಯಕ್ಕೆ ಸೇವೆ ಸಲ್ಲಿಸಿದ್ದರಿಂದ ಸಂಪಾದಿಸಿದ ಸಂಪತ್ತು ಸೇರಿಕೊಳ್ಳುತ್ತದೆ.
ಬ್ರಿಟಿಷ್ ಮಿಲಿಟರಿ ಎಂದರೇ ಆಕ್ರಮಣ, ನರಹತ್ಯೆ. ಭಾರತದಲ್ಲಿ ಬಂಗಾಲ, ವಾರಣಾಸಿ, ಮೈಸೂರು ಸಂಸ್ಥಾನ, ಕಿತ್ತೂರು, ನರಗುಂದ, ಸುರಪುರ ಕೊಡಗು, ಸುಳ್ಯ ಮೊದಲಾದ ಕರ್ನಾಟಕದ ಪ್ರದೇಶಗಳನ್ನು ಆಕ್ರಮಿಸಲು ಮಾಡಿದ ಆಕ್ರಮಣಕಾರಿ ಯುದ್ಧಗಳು, ನಡೆಸಿದ ಕುತಂತ್ರಗಳು, ಹತ್ತಾರು ಸಾವಿರ ಜನರ ಸಾವು ನೋವು, ದಾರಿಯಲ್ಲಿನ ಹಳ್ಳಿಗಳ ಲೂಟಿ, ಮಹಿಳೆಯರ ಮೇಲಿನ ಅತ್ಯಾಚಾರ ಇತ್ಯಾದಿ ಥಟ್ಟನೆ ನೆನಪಿಗೆ ಬರುತ್ತವೆ.
ಇದನ್ನೂ ಓದಿ: ಸಾರ್ವತ್ರಿಕ ಸಾಮಾಜಿಕ ಭದ್ರತೆ ನೀಡುವುದು ಸರ್ಕಾರಗಳ ಹೊಣೆ – ವಿಜೆಕೆ ನಾಯರ್
ಇಂತಹ ಬ್ರಿಟಿಷ್ ಸೈನ್ಯದಲ್ಲಿ ಲೆಫ್ಟಿನೆಂಟ್ ಜನರಲ್ ನೇಪಿಯರ್ ಎಂಬೊಬ್ಬ ಸೇನಾಧಿಕಾರಿ, ವೈಸ್ರಾಯ್ರವರ ಮಂಡಳಿಯಲ್ಲಿ ಮಿಲಿಟರಿ ಸದಸ್ಯನೂ (ಇಂದಿನ ರಕ್ಷಣಾ ಮಂತ್ರಿ, ಜೊತೆಗೆ ಮಿಲಿಟರಿಯ ಮುಖ್ಯ ಕಮ್ಯಾಂಡರನ ಹುದ್ದೆ ಎಂದೆನ್ನಬಹುದು) ಆಗಿದ್ದವನು. ಅವನು ಎರಡು ಸಿಖ್ ರಾಜ್ಯದ ಆಕ್ರಮಣ ಯುದ್ಧಗಳಲ್ಲಿ ಭಾಗವಹಿಸಿದ್ದವನು, ಸಿಪಾಯಿ ದಂಗೆ ಎಂದು ಪ್ರಸಿದ್ಧವಾದ, ಬ್ರಿಟಿಷರನ್ನು ಉತ್ತರ ಪ್ರದೇಶ, ದೆಹಲಿ ಮೊದಲಾದ ಪ್ರದೇಶಗಳಿಂದ ಓಡಿಸಿ, ಭಾರತವನ್ನೇ ಬಿಟ್ಟು ಓಡಿ ಹೋಗಬೇಕಾದ ಪರಿಸ್ಥಿತಿ ತಂದೊಡ್ಡಿದ 1857ರ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮವನ್ನು ಕ್ರೂರವಾಗಿ ಹತ್ತಿಕ್ಕುವುದರಲ್ಲಿ ಭಾಗವಹಿಸಿದ್ದವನು.
ಓಪಿಯಮ್ ವಾರ್
ಹಿಂದಿನ ಲೇಖನದಲ್ಲಿ ವಿವರಿಸಲಾದ ಓಪಿಯಮ್ ವಾರ್ ನಲ್ಲಿ ಚೀನಾದ ರಾಜಧಾನಿ ಪ್ರಸಿದ್ಧ ಪೀಕಿಂಗ್ (ಇಂದು ಬೀಜಿಂಗ್) ಅನ್ನು ಬ್ರಿಟಿಷರು ವಶಪಡಿಸಿಕೊಳ್ಳುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದವನು.
ಹತ್ತು ಪಟ್ಟು ಹೆಚ್ಚು ಲಾಭ ತಂದುಕೊಡುತ್ತಿದ್ದ ಅಕ್ರಮ ಅಫೀಮು ವ್ಯಾಪಾರದಲ್ಲಿ ಟಾಟಾಗಳು ಬ್ರಿಟಿಷರಿಗೂ ಚಳ್ಳೆ ಹಣ್ಣು ತಿನ್ನಿಸಿ ಅಪಾರ ಲಾಭ ಮಾಡಿಕೊಳ್ಳುತ್ತಿದ್ದುದನ್ನು ಹಿಂದೆ ವಿವರಿಸಲಾಗಿದೆ. ಓಪಿಯಮ್ ವಾರ್ ಈ ಅಫೀಮು ವ್ಯಾಪಾರ ಮತ್ತೆ ಎರಡು ಎರಡೂವರೆ ದಶಕಗಳ ಕಾಲ ಮುಂದುವರೆಯುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಈ ಯುದ್ಧ ಬ್ರಿಟಿಷರು ಮತ್ತು ಟಾಟಾಗಳಂತಹ ಭಾರತೀಯ ಅಫೀಮು ವ್ಯಾಪಾರಿಗಳಿಬ್ಬರಿಗೂ ಬಹಳ ತುರ್ತಾಗಿತ್ತು. ಇಂತಹ ಅನೈತಿಕ, ಅಮಾನವೀಯ ಯುದ್ಧದಲ್ಲಿ ಟಾಟಾ ಮತ್ತು ನೇಪಿಯರ್ನ ಸಂಬಂಧ ಏರ್ಪಟ್ಟಿತು. ಟಾಟಾಗಳ ಹಡುಗುಗಳು, ಚೀನಾದಲ್ಲಿದ್ದ ಗೋದಾಮುಗಳು ನೇಪಿಯರ್ ನ ವಿಜಯದಲ್ಲಿ ನೆರವಿಗೆ ಬಂದವು. ನಂತರ ಈ ನೇಪಿಯರ್ ಮುಂಬಯಿ ಪ್ರಾಂತ್ಯದ ಬ್ರಿಟಿಷ್ ಕಮ್ಯಾಂಡರ್ ಆದ. ಟಾಟಾ ಮತ್ತು ಇವರ ನಡುವಣ ಸಖ್ಯತೆ ಮತ್ತಷ್ಟು ಬಲಿಯಿತು.
ಈ ನೇಪಿಯರ್ ಗೆ ಭಾರತದ ಸೈನ್ಯ ಪಡೆಯೊಂದಿಗೆ ಅಬಿಸೀನಿಯಾ (ಇಂದು ಇಥಿಯೋಪಿಯ ಮತ್ತಿತರ ಪ್ರದೇಶಗಳು) ಎಂಬ ಪೂರ್ವ ಆಫ್ರಿಕನ್ ಪ್ರದೇಶದ ರಾಜನ ಮೇಲೆ ದಂಡೆತ್ತಿ ಹೋಗಿ ವಶಪಡಿಸಿಕೊಳ್ಳಲು 1867ರಲ್ಲಿ ಬಿಟಿಷ್ ಸರ್ಕಾರದ ಆಜ್ಞೆಯಾಯಿತು. ಈ ಪ್ರದೇಶ ಗುಡ್ಡ, ಬೆಟ್ಟಗಳಿಂದ ಕೂಡಿದ್ದು, ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸಲು ಯಾವುದೇ ರಸ್ತೆಗಳಿಲ್ಲದೆ 644 ಕಿಮೀ ಪ್ರಯಾಣ ಮಾಡುವ ಅನಿವಾರ್ಯತೆಯಿದ್ದ ಆಕ್ರಮಣ ಬಹಳ ಕಠಿಣ ಎಂದು ಪರಿಗಣಿಸಲಾಗಿತ್ತು.
ಇದನ್ನೂ ಓದಿ: ಮಂಡ್ಯ| ದೇಗುಲದೊಳಗೆ ದಲಿತರು ಪ್ರವೇಶಿಸಿದರೆಂದು ಉತ್ಸವ ಮೂರ್ತಿಯನ್ನೇ ಹೊರತಂದ್ರು
ಇಂತಹ ಆಕ್ರಮಣಕ್ಕೆ ಸಹಾಯಕವಾಗಿ ರೈಲು ಮಾರ್ಗ, ರಸ್ತೆ, ಸೇತುವೆಗಳು ಮಾತ್ರವಲ್ಲ ಬಂದರಿನ ನಿರ್ಮಾಣವನ್ನೂ ತುರ್ತಾಗಿ ಮಾಡಬೇಕಾಗಿತ್ತು. ಈ ಕಾರಣವಾಗಿ ಯುದ್ಧ ಅಂದಿನ ಕಾಲದ ಅತಿ ದುಬಾರಿ ಯುದ್ಧವೆಂದು ಹೆಸರಾಗಿದೆ. ಇಂತಹ ಅತ್ಯಂತ ಹೆಚ್ಚು ಹಣ ಹೂಡಿಕೆಯ ಯುದ್ಧೋದ್ಯಮಕ್ಕೆ ನೇಪಿಯರ್, ಆ ವೇಳೆಗಾಗಲೇ ಈಜಿಪ್ಟ್ ಮೊದಲಾದ ಆಫ್ರಿಕಾದ ದೇಶಗಳೊಡನೆ ವ್ಯಾಪಾರ ನಡೆಸುತ್ತಿದ್ದ, ತನ್ನ ಯುದ್ಧಗಳಿಗೆ ಸರಬರಾಜು ಸಹಾಯಕರಾಗಿದ್ದ ಟಾಟಾಗಳನ್ನು ಆಯ್ಕೆ ಮಾಡಿದ.
ಈ ಸೈನ್ಯದ ಜೊತೆಗೆ ಅದಕ್ಕೆ ಸಹಾಯಕವಾಗಿ 44 ಆನೆಗಳನ್ನೂ ಮತ್ತಿತರ ವಸ್ತುಗಳನ್ನೂ ಬಾಂಬೆಯಿಂದ ಸಾಗಿಸಲಾಯಿತು. 40,000 ಹೆಸರಕತ್ತೆ, ಒಂಟೆ ಮೊದಲಾದ ಪ್ರಾಣಿಗಳೂ ಈ ಯುದ್ಧದಲ್ಲಿ ಜೊತೆಗಾರರಾಗಿದ್ದವು ಎಂದರೆ ಊಹಿಸಿಕೊಳ್ಳಿ, ಎಷ್ಟು ದೊಡ್ಡ ಸರಬರಾಜು ಕಂಟ್ರಾಕ್ಟ್ ಟಾಟಾರಿಗೆ ದೊರಕಿತ್ತು ಎಂದು. ಆಫ್ರಿಕಾವನ್ನು ವಶಪಡಿಸಿಕೊಳ್ಳುವ ಬ್ರಿಟಿಷರ ವಸಾಹತುಶಾಹಿ ಆಕ್ರಮಣ ಯುದ್ಧದ ಕಂಟ್ರಾಕ್ಟ್ ಟಾಟಾರಿಗೆ ವರದಾನವೆಂಬಂತಾಗಿತ್ತು.
ಯುದ್ಧದ ಸರಬರಾಜು ಎಂದರೇ ಸಾಕು ಯಾರಿಗಾದರೂ, ಎಲ್ಲಿಯಾದರೂ ಲಾಭದ ಸುರಿಮಳೆ. ಹೇಳಿದ್ದೇ ಬೆಲೆ, ಕೊಟ್ಟದ್ದೇ ಮಾಲು. ಅದರಲ್ಲೂ ಈ ಯುದ್ಧ ಅಪಾರ ವೆಚ್ಚದ್ದು ಎನ್ನುವಾಗ ಅದರ ಸಿಂಹಪಾಲು ಟಾಟಾರಿಗೆ ದೊರಕಿತು. ಟಾಟಾ ದಿಢೀರ್ ಶ್ರೀಮಂತರಾದರು.
ಯುದ್ದದಿಂದ ಗಳಿಸಿದ ಹಣ
ಈ ಯುದ್ಧ ಕೊನೆಗೊಂಡ ಕೂಡಲೇ ಹೀಗೆ ಗಳಿಸಿದ ಹಣವನ್ನು ಹೂಡಲು ದಾರಿಗಳನ್ನು ಹುಡುಕತೊಡಗಿದರು. ಹೀಗೆ ಮೊದಲಾದ ವಿನಾಶಕ ಯುದ್ಧಗಳು ಮತ್ತು ಟಾಟಾರ ಬಂಡವಾಳದ ಉದ್ಭವದ ಸಂಬಂಧ ಮುಂದೆ ಮೊದಲನೇ ಜಾಗತಿಕ ಮಹಾಯುದ್ಧ, ಎರಡನೇ ಜಾಗತಿಕ ಮಹಾಯುದ್ಧದ ಸಮಯದಲ್ಲಿ ಮತ್ತಷ್ಟು ಬೆಳೆಯಿತು. ಸ್ವಾತಂತ್ರ್ಯಾ ನಂತರವೂ ಹಲವು ಬಗೆಯಲ್ಲಿ ಮುಂದುವರೆಯಿತು. ಈಗ ಟಾಟಾ ಎಂದರೆ ಭಾರತದ ಅತಿ ದೊಡ್ಡ ಮಿಲಿಟರಿ ಇಂಡಸ್ಟ್ರಿ ಕಾಂಪ್ಲೆಕ್ಸ್ ನ ಒಡೆಯ. ಕೇವಲ ಭಾರತದ್ದು ಮಾತ್ರವಲ್ಲ, ವಿಶ್ವದ ಅತಿ ದೊಡ್ಡ ಮಿಲಿಟರಿ ಇಂಡಸ್ಟ್ರಿ ಕಾಂಪ್ಲೆಕ್ಸ್ ಗಳಾದ ಅಮೆರಿಕ, ಫ್ರಾನ್ಸ್, ಬ್ರಿಟನ್ಗಳ ಮಿಲಿಟರಿ ಕಾಂಪ್ಲೆಕ್ಸ್ ಗಳ ಜಾಲದ ಒಬ್ಬ ಮುಖ್ಯ ಪಾತ್ರದಾರ. ಇಸ್ರೇಲ್ ನ ಶಸ್ತ್ರಾಸ್ತ್ರ ಉತ್ಪಾದನೆಯ ಸಹಚರರಾಗಿ ಪ್ಯಾಲೆಸ್ಟೈನ್ ನರಹತ್ಯೆಗಳ ಭಾಗಿದಾರರು. ಈ ಎಲ್ಲ ಚರಿತ್ರೆ, ಆಯಾ ಕಾಲಘಟ್ಟದಲ್ಲಿ ಹಲವು ವಿವರಗಳೊಡನೆ ನಿಮ್ಮ ಮುಂದೆ ಬರಲಿದೆ.
ಇನ್ನು ಕ್ರಿ.ಶ. 1860ರ ಕಾಲಕ್ಕೆ ಮರಳೋಣ. ಈ ದೊಡ್ಡ ಮಿಲಿಟರಿ ಲಾಟರಿಯ ಜೊತೆಗೆ ಮತ್ತೊಂದು ಲಾಟರಿಯೂ ಟಾಟಾರನ್ನು ಅರಸಿ ಬಂತು. ಟಾಟಾರವರು ಪರಂಪರಾಗತವಾಗಿ ದೀರ್ಘಕಾಲದಿಂದ ಅಂತರರಾಷ್ಟ್ರೀಯ ಹತ್ತಿ ವ್ಯಾಪಾರದಲ್ಲಿ ತೊಡಗಿದ್ದರು. ಈ ವ್ಯಾಪಾರ ಇದ್ದಕ್ಕಿದ್ದಂತೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿ ಬದಲಾಗಿಬಿಟ್ಟಿತು. ದೂರದ ಅಮೆರಿಕಾದಲ್ಲಾಗುತ್ತಿದ್ದ ಒಂದು ದೊಡ್ಡ ಅಂತರ್ಯುದ್ಧದಿಂದ. ಈ ಯುದ್ಧದಲ್ಲಿ ಟಾಟಾಗಳದೇನೂ ಪಾತ್ರವಿರಲಿಲ್ಲ. ಆದರೆ ಅದರಿಂದ ಟಾಟಾಗಳಿಗೆ ದೊಡ್ಡ ಲಾಭ ಮಾತ್ರ ದಕ್ಕಿತು.
ಹತ್ತಿ ವ್ಯಾಪಾರದ ದಿಢೀರ್ ಲಾಭ
ಅಮೇರಿಕದಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ, ಸಾವಿರಾರು ಎಕರೆಗಳ ಫಾರಂಗಳಲ್ಲಿ ಉತ್ತಮ ಗುಣಮಟ್ಟದ ಹತ್ತಿಯನ್ನು ಬೆಳೆಯುತ್ತಿದ್ದರು. ಆಫ್ರಿಕಾದಿಂದ ಬಲ ಪ್ರಯೋಗ ಮಾಡಿ 1709ರಿಂದ 1807ರ ನಡುವೆ ಹಿಡಿದು ತಂದ ನಾಲ್ಕುವರೆ ಲಕ್ಷ ಕಪ್ಪು ಜನರನ್ನು ಗುಲಾಮರನ್ನಾಗಿಸಿದರು. ಗುಲಾಮರ ಮಾರುಕಟ್ಟೆಗಳಲ್ಲಿ ಹರಾಜು ಕೂಗಿ ಕೊಂಡುಕೊಂಡರು. ಗಂಡ, ಹೆಂಡತಿ, ಅಪ್ಪ, ಅಮ್ಮ, ಮಕ್ಕಳನ್ನು ಬೇರೆ ಮಾಡಿ, ಕೈಯಲ್ಲಿ ಚಾಟಿ ಹಿಡಿದು, ಹೊಗೆಸೊಪ್ಪು (ಪ್ರಸಿದ್ಧ ವರ್ಜೀನಿಯಾ ಟೊಬ್ಯಾಕೊ ಗುಲಾಮರು ಬೆಳೆದದ್ದೇ), ಹತ್ತಿ ಬೆಳೆ ಬೆಳೆಯಲು ದುಡಿಮೆಗೆ ಹಚ್ಚಿದರು. ಗಂಡಸರು ಮಾತ್ರವಲ್ಲದೆ, ಹೆಂಗಸರು, ಮಕ್ಕಳನ್ನೂ ಅಮಾನವೀಯವಾಗಿ ಹಿಂಸಿಸಿ ದುಡಿಸಿಕೊಳ್ಳುತ್ತಾ ಹತ್ತಿಯನ್ನು ನೂರಾರು ವರ್ಷಗಳಿಂದ ಬೆಳೆಯಲಾಗುತ್ತಿತ್ತು. ಬ್ರಿಟನ್ನಿನ ಹತ್ತಿ ಜವಳಿ ಕಾರ್ಖಾನೆಗಳಿಗೆ ಈ ಹತ್ತಿಯನ್ನೇ ಪ್ರಧಾನವಾಗಿ ಆಮದು ಮಾಡಿಕೊಳ್ಳಲಾಗುತ್ತಿತ್ತು.
ಈ ಗುಲಾಮಗಿರಿಯ ವಿರುದ್ಧ ಕಪ್ಪುಜನರು ಸೆಣೆಸಾಡುತ್ತಲೇ ಇದ್ದರು. ಅದು 1860ರಲ್ಲಿ ಅಬ್ರಹಾಂ ಲಿಂಕನ್ ಎಂಬುವರು ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಹೋರಾಟ ಮತ್ತಷ್ಟು ತೀವ್ರವಾಯಿತು. ಗುಲಾಮರ ವಿಮೋಚನೆಗಾಗಿ ಅಮೆರಿಕದ ಸಂಯುಕ್ತ ಸಂಸ್ಥಾನದ ಹತ್ತಿ ಬೆಳೆ ಪ್ರದೇಶಗಳಾದ ದಕ್ಷಿಣ ಭಾಗ, ಉತ್ತರ ಭಾಗದ ನಡುವೆ ವರ್ಷಗಳ ಕಾಲ ಯುದ್ಧ ನಡೆಯಿತು. ಕೊನೆಗೆ 1865ರಲ್ಲಿ ಗುಲಾಮಗಿರಿಯನ್ನು ಕಿತ್ತು ಹಾಕಿ ಎಲ್ಲ ಕಪ್ಪು ಜನರೂ ಸ್ವತಂತ್ರರು ಎಂದು ಘೋಷಿಸುವುದರೊಂದಿಗೆ ಮುಕ್ತಾಯವಾಯಿತು.
ಗುಲಾಮಗಿರಿಯ ವಿಮೋಚನೆಯ ಈ ಯುದ್ಧದ ಕಾಲಘಟ್ಟದಲ್ಲಿ ಮತ್ತು ನಂತರದ ಕೆಲ ವರ್ಷಗಳಲ್ಲಿ ಅಮೆರಿಕದಿಂದ ಬ್ರಿಟನ್ಗೆ ರಫ್ತಾಗುವ ಹತ್ತಿಯ ಪ್ರಮಾಣ ಬಹುವಾಗಿ ಕುಗ್ಗಿತು. ಈ ಸಮಯ ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಹತ್ತಿಯ ರಫ್ತಾಯಿತು. 1858ರಲ್ಲಿ ಭಾರತದಿಂದ ಬ್ರಿಟನ್ ಗೆ ರಫ್ತಾದ ವಸ್ತುಗಳಲ್ಲಿ ಹತ್ತಿಯ ಪಾಲು ಕೇವಲ ಶೇ. 14.60 ಇದ್ದರೆ 1870ರ ವೇಳೆಗೆ ಅದು ಶೇ. 35.23ರಷ್ಟು ಪ್ರಮಾಣ ಮುಟ್ಟಿತ್ತು. ಬ್ರಿಟನ್ನ ಹತ್ತಿಯ ಅಗತ್ಯದ ಮುಕ್ಕಾಲು ಭಾಗ ಭಾರತದಿಂದ ಪೂರೈಕೆಯಾಯಿತು. ಇದಕ್ಕೆ `ಕಾಟನ್ ಬೂಮ್’ ಎಂದು ಕರೆಯುತ್ತಾರೆ. ಇದು ಮುಖ್ಯವಾಗಿ ಟಾಟಾಗಳಿಗೆ ಮತ್ತು ಇತರ ಹತ್ತಿ ವ್ಯಾಪಾರಗಾರರಿಗೆ ದಿಢೀರ್ ಲಾಭ ಗಳಿಸಲು ಮತ್ತೊಂದು ಅವಕಾಶವಾಯಿತು.
ವಿಡಿಯೋ ನೋಡಿ : ಉಪನ್ಯಾಸ ಸರಣಿ ಉದ್ಘಾಟನೆ | ಡಾ. ಪುರುಷೋತ್ತಮ ಬಿಳಿಮಲೆ, ತೇಜಸ್ವಿನಿ ನಿರಂಜನ ಮಾತುಗಳು
ಆಹಾರ ಧಾನ್ಯಗಳ ಉತ್ಪಾದನೆ ಕುಗ್ಗಿತು
ಇದು ಭಾರತದ ಕಪ್ಪು ಭೂಮಿಯ ಪ್ರದೇಶಗಳಲ್ಲಿ ಬೆಳೆಯುತ್ತಿದ್ದ ಜೋಳ, ಗೋಧಿ ಮತ್ತಿತರ ಆಹಾರ ಧಾನ್ಯಗಳ ಬದಲಾಗಿ ಹತ್ತಿಯನ್ನು ಬೆಳೆಯುವ ಒತ್ತಡವನ್ನು ಹೇರಿತು. ಹೀಗೆ ಉತ್ಪಾದನೆಯಾದ ಹತ್ತಿಯನ್ನು ತ್ವರಿತವಾಗಿ ಬಂದರುಗಳಿಗೆ ಸಾಗಿಸಲು ರೈಲ್ವೆ ಮಾರ್ಗಗಳನ್ನೂ ಹಾಕಲಾಯಿತು. ಈ ಸಂದರ್ಭದಲ್ಲಿ ಭಾರತದಲ್ಲಿ ಬೆಳೆಯುತ್ತಿದ್ದ ಗಿಡ್ಡ ನೂಲಿನ ಹತ್ತಿಗೆ ಬದಲಾಗಿ ಉದ್ದ ನೂಲಿನ, ಮಧ್ಯಮ ನೂಲಿನ ತಳಿಗಳನ್ನು ಆಮದು ಮಾಡಿಕೊಂಡು ಬೆಳೆಸಲಾಯಿತು. ಇದರಲ್ಲಿ ಟಾಟಾಗಳು, ಅವರ ಈಜಿಪ್ಟ್, ಉತ್ತರ ಆಫ್ರಿಕಾ ಸಂಬಂಧಗಳ ಮೂಲಕ ಮುಂದಿದ್ದುದರಿಂದ ಅವರ ಕೈ ಉಳಿದವರಿಗಿಂತ ಮೇಲಾಯಿತು. ಟಾಟಾಗಳಿಗೇನೋ ಲಾಭದ ಸೂರೆಯಾಯಿತು. ಆದರೆ ಆಹಾರ ಧಾನ್ಯಗಳ ಉತ್ಪಾದನೆ ಕುಗ್ಗಿದುದರಿಂದ ಭಾರತದಲ್ಲಿ ಮಳೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೂಡಾ ದೊಡ್ಡ ಬರಗಾಲಗಳಾಗಿ ಪರಿಣಮಿಸಿತು. ಈ ಕ್ಷಾಮಗಳ ಫಲವಾಗಿ ಒಂದೊಂದು ಕ್ಷಾಮದಲ್ಲೂ ಹಲವು ಲಕ್ಷ ಜನರು ಸಾವಿಗೀಡಾದರು.
ಕೇವಲ ಒಂದು ದಶಕ ಕಾಲದ ಈ ಹತ್ತಿ ಬೂಮ್ ಇಳಿತ ಕಾಣುವುದರೊಳಗೆ ಟಾಟಾಗಳು ಗಣನೀಯ ಹಣ ಸಂಪಾದಿಸಿದ್ದರು. ಒಂದು ಕಡೆ 1867ರ ಯುದ್ಧದ ಅತಿ ಲಾಭ, ಹತ್ತಿ ವ್ಯಾಪಾರದ ದಿಢೀರ್ ಲಾಭದ ಜೊತೆಗೆ ಅಫೀಮು ವ್ಯಾಪಾರದ ದುರ್ಲಾಭ 1880ರ ದಶಕದವರೆಗೆ ಮುಂದುವರೆದಿತ್ತು. ಈ ಮೂರೂ ಜೊತೆಗೆ ಚೀನಾದ ರೇಷ್ಮೆ ಮತ್ತಿತರ ಆಮದುಗಳ ಲಾಭ ಟಾಟಾಗಳ ಮೂಲ ಬಂಡವಾಳ ಸಂಗ್ರಹಣೆಯ ಆಧಾರಗಳಾದವು.
ಈ ರೀತಿಯ ಬಂಡವಾಳ ಶೇಖರಣೆಯ ವಿಧಾನಗಳಿಗೆ ಆದಿಮ ಬಂಡವಾಳ ಶೇಖರಣೆ ಎನ್ನುತ್ತಾರೆ. ಇಂತಹ ಆದಿಮ ಬಂಡವಾಳ ಶೇಖರಣೆಗೆ ಬ್ರಿಟನ್ ಮೊದಲಾದ ಯುರೋಪಿನ ದೇಶಗಳ ಬಂಡವಾಳಶಾಹಿಗಳಿಗೆ ಇರುವಷ್ಟು ವಿಪುಲ ಅವಕಾಶ ಭಾರತದ ಬಂಡವಾಳಶಾಹಿಗಳಿಗೆ ಇರಲಿಲ್ಲ. ವಸಾಹತುಶಾಹಿಗಳ ದಬ್ಬಾಳಿಕೆಯ ಮಿತಿಯಲ್ಲಿಯೇ ಸೀಮಿತ ಬಂಡವಾಳ ಶೇಖರಣೆಗೆ ಅವಕಾಶ ದೊರಕಿದ್ದು. ಬ್ರಿಟಿಷ್ ಬಂಡವಾಳದ ವ್ಯಾಪಾರ ವ್ಯವಹಾರಗಳ ಬಾಲಂಗೋಚಿಯಾಗಿ ಲಾಭ ಗಳಿಸುತ್ತಿದ್ದ ಟಾಟಾರಂತಹ ಕೆಲವೇ ಗುಂಪುಗಳಿಗೆ ಮಾತ್ರವೇ ಬಂಡವಾಳ ಶೇಖರಣೆಯ ಅವಕಾಶ ದೊರಕಿತು. ಆದರೆ ವಸಾಹತುಶಾಹಿ ವ್ಯವಸ್ಥೆ ಅವರ ಮೇಲೂ ಗಣನೀಯ ಮಿತಿ ಹೇರಿತ್ತು. ಅಂದ ಮೇಲೆ ಉಳಿದವರ ಪಾಡೇನು? ಅದರಿಂದಾಗಿ ಮುಕ್ತ ವ್ಯಾಪಾರ ಫ್ರೀ ಟ್ರೇಡ್ ಎಂದು ಘೋಷಿಸುತ್ತಾ ಉದಯವಾದ ಬಂಡವಾಳಶಾಹಿ ವ್ಯವಸ್ಥೆಯ ಮೂಲಭೂತ ತತ್ವಕ್ಕೆ ಭಾರತದಂತಹ ವಸಾಹತುಗಳಲ್ಲಿ ಅವಕಾಶವೇ ಇರಲಿಲ್ಲ.
ಈ ವಿಪರೀತ ವಿಶಿಷ್ಟ ಪರಿಸ್ಥಿತಿಯನ್ನು ಟಾಟಾಗಳ ಬೆಳವಣಿಗೆ ಮತ್ತು ಒಟ್ಟಾರೆ ಭಾರತದ ಬಂಡವಾಳಶಾಹಿಗಳ ಬೆಳವಣಿಗೆಗೆ ಸಂಬಂಧಿಸಿದಂತೆ ಗಮನದಲ್ಲಿ ಇಟ್ಟುಕೊಂಡೇ ಭಾರತದ ಕೈಗಾರಿಕಾ ಬೆಳವಣಿಗೆಯನ್ನು ವಿಶ್ಲೇಷಿಸಬೇಕಾಗುತ್ತದೆ.
ಈ ರೀತಿ ಮಾಡಿದ ಹಣ ಸಂಗ್ರಹವನ್ನು ಮತ್ತಷ್ಟು ಹೆಚ್ಚು ಮತ್ತು ದೀರ್ಘ ಕಾಲದ ಲಾಭ ಸಂಪಾದನೆಯ ಮೇಲೆ ಹೂಡಲು, ಕೇವಲ ಹಣವಾಗಿದ್ದುದನ್ನು ಲಾಭಕರ ಬಂಡವಾಳವಾಗಿ ಪರಿವರ್ತಿಸಲು ಟಾಟಾಗಳು ತಹತಹಿಸುತ್ತಿದ್ದರು.
ಹತ್ತಿ ವ್ಯಾಪಾರದ ಮೂಲಕ ಜವಳಿ ಉದ್ಯಮದ ಹತ್ತಿರದ ಪರಿಚಯ ಪಡೆದಿದ್ದ ಜಮ್ ಶೇಟ್ಜಿ ಟಾಟಾ 1868ರಲ್ಲಿ ತಮ್ಮದೇ ಸ್ವಂತ ವಾಣಿಜ್ಯ ಕಂಪನಿ ಸ್ಥಾಪಿಸಲು ತಮ್ಮ ಸಂಪಾದನೆಯಿಂದ 20,000 ರೂ. (1870ರ ಬೆಲೆಗಳಲ್ಲಿ) ಹೂಡಿದರು. ಅದು ಇಂದಿನ ಬೆಲೆಗಳಲ್ಲಿ ಎಷ್ಟು ಸಾವಿರ ಕೋಟಿ ರೂ.ಗಳಾಗಬಹುದು ಎಂದು ಊಹಿಸಿಕೊಳ್ಳಿ. ಇಲ್ಲಿಯವರೆಗೆ ವ್ಯಾಪಾರಿ ಬಂಡವಾಳಗಾರರಾಗಿದ್ದ ಅವರು ನಂತರ ಅವರು ಒಂದರ ನಂತರ ಒಂದು ಹಲವು ಕಾರ್ಖಾನೆಗಳಲ್ಲಿ ಈ ಸಂಪಾದನೆಯನ್ನು ಹೂಡಿ ಕೈಗಾರಿಕಾ ಬಂಡವಾಳಗಾರರಾದರು.
ಮುಂದಿನ ಭಾಗ…. : ಉತ್ಪಾದನಾ ಬಂಡವಾಳಗಾರರಾಗಿ ಟಾಟಾಗಳು ಮತ್ತು ಬ್ರಿಟಿಷರ ಜೊತೆ ಸಂಘರ್ಷ