-ಜಿ ಎನ್ ನಾಗರಾಜ್
ರತನ್ ಟಾಟಾ ಮಹಾದಾನಿ, ಎಷ್ಟೊಂದು ದಾನ ಮಾಡಿದ್ದಾರೆ. ದೊಡ್ಡ ಕೈಗಾರಿಕಾ ಸಾಮ್ರಾಜ್ಯ ಕಟ್ಟಿದವರು , ಟಾಟಾ ಸಾಮ್ರಾಜ್ಯ ಭಾರತದಿಂದ ಬೇರೆ ದೇಶಗಳ ಹಲವು ಕೈಗಾರಿಕೆಗಳನ್ನು ವಶ ಪಡಿಸಿಕೊಂಡು ವಿಶ್ವ ಮಟ್ಟದ ಸಾಮ್ರಾಜ್ಯವಾಗಿ ಮಾಡಿದವರು ಹಾಗೇ, ಹೀಗೆ ಎಂಬ ಮಾತುಗಳು ಏಕಸ್ವಾಮ್ಯ ಕಾರ್ಪೊರೇಟ್ ಮಾಧ್ಯಮಗಳು ಉದುರಿಸುತ್ತಿವೆ. ರತನ್
ಇಂತಹ ಟಾಟಾ ಸಾಮ್ರಾಜ್ಯ ಹುಟ್ಟಿದ್ದು -ಬ್ರಿಟಿಷರು 1820 ರಿಂದ ಆರಂಭಿಸಿ ಚೀನಾದ ಜನತೆಗೆ ವಿಷವುಣಿಸಲು ಮತ್ತು ಅದರಿಂದ ಮಿತಿ ಮೀರಿ ಲಾಭ ( 250 ರೂ ಬೆಲೆಯ ಅಫೀಮನ್ನು ಕೇವಲ 1200 ರೂನಿಂದ ಎರಡು ಸಾವಿರ ರೂಗೂ ಹೆಚ್ಚು ಬೆಲೆಗೆ ಮಾರಿ) ಪಡೆಯಲು ನಡೆಸುತ್ತಿದ್ದ ಅಫೀಮು ವ್ಯಾಪಾರದಲ್ಲಿ ಟಾಟಾ ಬಿರ್ಲಾ ಮೊದಲಾದ ಹಲವರು ಬ್ರಿಟಿಷರ ಅಧೀನದ ಏಜೆಂಟರಾಗಿ ಗಣನೀಯ ಬಂಡವಾಳ ಶೇಖರಿಸಿದರು. ಬಿಹಾರ, ಬನಾರಸ್, ಮಧ್ಯ ಪ್ರದೇಶ ,ರಾಜಾಸ್ಥಾನ, ಮಹಾರಾಷ್ಟ್ರ ಸಂಸ್ಥಾನಗಳಲ್ಲಿ, ಬ್ರಿಟಿಷ್ ಆಡಳಿತದ ಪ್ರದೇಶಗಳಲ್ಲಿ ಬ್ರಿಟಿಷರು ಒತ್ತಾಯ ಹೇರಿ ಅಫೀಮು ಬೆಳೆಸುತ್ತಿದ್ದರು. ಇದು ಅಂದು ಆಹಾರದ ಕೊರತೆಗೆ , ಕ್ಷಾಮಗಳಿಗೆ ಕಾರಣವಾಗಿತ್ತು. ಚೀನಾದಲ್ಲಂತೂ ಅಫೀಮು ಮಾದಕ ವ್ಯಸನ ಕೋಟ್ಯಾಂತರ ಜನರ ಬದುಕು ಮತ್ತು ಆರೋಗ್ಯ ಮೂರಾಬಟ್ಟೆಯಾಗುವಂತೆ ಮಾಡಿತ್ತು. ಇದನ್ನು ದಾದಾಭಾಯಿ ನವರೋಜಿಯಂತಹ ಭಾರತ ಸ್ವಾತಂತ್ರ್ಯದ ಮೊದಲ ಹೋರಾಟಗಾರರು , ಅನೇಕ ಬ್ರಿಟಿಷ್ ಮಾನವೀಯವಾದಿಗಳು ಖಂಡಿಸಿದರು. ಪ್ರತಿಭಟನೆಗಳನ್ನೇ ನಡೆಸಿದರು. ರತನ್
ಆದರೆ ಟಾಟಾರಂತಹ ಹಲವು ವ್ಯಾಪಾರಿಗಳಿಗೆ ಅದರಿಂದ ದೊರಕುತ್ತಿದ್ದ ಲಾಭವನ್ನು ರಕ್ಷಿಸಲು ದೊಡ್ಡದಾಗಿ ಹಿಂದೂ ಸಂಸ್ಕೃತಿಯ ಬಗ್ಗೆ, ನೈತಿಕತೆಯ ಬಗ್ಗೆ ಮಾತಾಡುತ್ತಿದ್ದ ತಿಲಕರು, ಸುಧಾರಣಾವಾದಿ ಎಂ.ಜಿ.ರಾನಡೆಯವರು, ಬ್ಯಾನರ್ಜಿ ಮೊದಲಾದವರು ಅಫೀಮು ವ್ಯಾಪಾರ ನಿಲ್ಲಿಸಬಾರದು, ಅದರಿಂದ ಭಾರತಕ್ಕೆ ನಷ್ಟ ಎಂದು ವಾದಿಸುತ್ತಾ ಬ್ರಿಟಿಷ್ ಸರ್ಕಾರಕ್ಕೆ, ಈಸ್ಟ್ ಇಂಡಿಯಾ ಕಂಪನಿಗೆ ಬೆಂಬಲ ನೀಡಿದರು. ಅಂದು ಭಾರತೀಯ ಬಜೆಟ್ಗೆ ಎರಡನೇ ಅತ್ಯಂತ ದೊಡ್ಡ ಆದಾಯ ದೊರಕುತ್ತಿದ್ದುದು ಅಫೀಮು ವ್ಯಾಪಾರದಿಂದ. ಇದೇ ಅದರಲ್ಲಿ ತೊಡಗಿದವರಿಗೆ ಎಷ್ಟು ಲಾಭವಾಗಿರಬಹುದು ಎಂಬುದನ್ನು ಸೂಚಿಸುತ್ತದೆ.
ಹೀಗೆ ಅರ್ಧ ಶತಮಾನ ನಡೆದ ಈ ವ್ಯಾಪಾರದಲ್ಲಿ ಶೇಖರಿಸಿದ ಬಂಡವಾಳವನ್ನು ಟಾಟಾಗಳು ಮುಂದೆ ಹತ್ತಿ ಬಟ್ಟೆಯ ಗಿರಣಿ ಸ್ಥಾಪಿಸಿವುದಕ್ಕೆ ತೊಡಗಿದರು. ಆಗ ಅವರ ಕಂಪನಿಯ ಹೆಸರು ಎಂಪ್ರೆಸ್ ಮಿಲ್ಸ್ – ಭಾರತವನ್ನಾಳುತ್ತಿದ್ದ ವಿಕ್ಟೋರಿಯಾ ರಾಣಿಯನ್ನು ಮೆಚ್ಚಿಸಲು. ಮುಂದೆ ಮತ್ತೊಂದು ಬಟ್ಟೆ ಕಾರ್ಖಾನೆ ಸ್ಥಾಪಿಸುವ ವೇಳೆಗೆ ಭಾರತದಲ್ಲಿ ೧೯೦೫ ರ ಸ್ವದೇಶಿ ಚಳುವಳಿ ನಡೆಯುತ್ತಿದ್ದ ಸಮಯ. ಆಗ ಈ ಹೊಸ ಕಂಪನಿಯ ಹೆಸರು ಸ್ವದೇಶಿ ಮಿಲ್ಸ್ ಹೀಗೆ ಆರಂಭವಾದ ಭಾರತೀಯ ಒಡೆತನದ ಹಾಗೂ ಬ್ರಿಟಿಷ್ ಒಡೆತನದ ಕೈಗಾರಿಕೆಗಳ ನಡುವಣ ಸಂಘರ್ಷ ಸುಡಿ ಸುಡಿ ಪರದೇಶಿ ವಸ್ತ್ರಗಳ ಎನ್ನುವ ಚಳುವಳಿ, ವಿದೇಶಿ ಬಟ್ಟೆ ಅಂಗಡಿಗಳ ಪಿಕೆಟಿಂಗ್ ಕಡೆಗೆ ಹೋಯಿತು. ರತನ್
ಇದನ್ನೂ ಓದಿ: ಉದ್ಯಮಿ ರತನ್ ಟಾಟಾ ನಿಧನ
(ಖಾದಿ ತೊಡಿ ಎಂಬ ಆಂದೋಲನ ಇದ್ದರೂ, ಈ ಬಹಿಷ್ಕಾರದಿಂದ ಅತಿ ಹೆಚ್ಚು ಲಾಭವಾದದ್ದು ಭಾರತೀಯ ಗಿರಣಿ ಮಾಲೀಕರಿಗೆ ) ಹೀಗೆ ಪಡೆದ ಲಾಭಗಳಿಂದ ಟಾಟಾ ಕೈಗಾರಿಕಾ ಸಾಮ್ರಾಜ್ಯ ವಿಸ್ತರಿಸಿತು. ಒಂದು ಕಡೆ ಟೀ ತೋಟಗಳು, ಮತ್ತೊಂದು ಕಡೆ ಆಧುನಿಕ ಉಕ್ಕು ಕೈಗಾರಿಕೆ , ವಿಮಾನ ಸಾರಿಗೆ, ಇತ್ಯಾದಿಗಳು ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪನೆಗೊಂಡವು. ಅಂದಿನ ಭಾರತದ ಅತಿ ದೊಡ್ಡ ಕೈಗಾರಿಕಾ ಒಡೆಯರಾದರು. ಗಾಂಧೀಜಿಯವರಿಗೆ ಕಾಂಗ್ರೆಸ್ಗೆ ದೊಡ್ಡ ದೇಣಿಗೆಗಳನ್ನು ನೀಡಿದರು. ಗಾಂಧೀಜಿಯರಂತೂ ಕಾರ್ಮಿಕರು ಭಾರತೀಯ ಕೈಗಾರಿಕೆಗಳಲ್ಲಿ ಮುಷ್ಕರ ಮಾಡಬಾರದು. ಬ್ರಿಟಿಷರ ಕೈಗಾರಿಕೆಗಳಲ್ಲಿ ಮಾತ್ರ ನಿಮ್ಮ ಹಕ್ಕುಗಳನ್ನು ಕೇಳಿ ಎನ್ನುತ್ತಿದ್ದರು. ಕಾರ್ಮಿಕರ ಮುಷ್ಕರದಲ್ಲಿ ತೊಡಗಿದ ಕಾರ್ಮಿಕರು ಉಪವಾಸ ಬೀಳುವ ಸ್ಥಿತಿಯಲ್ಲಿಯೂ ಬೆಂಬಲ ನೀಡಲು ಹಿಂದೆ ಮುಂದೆ ನೋಡುತ್ತಿದ್ದರು.
ಬಿರ್ಲಾಗೆ ಸೇರಿದ ಗಿರಣಿಯ ಕಾರ್ಮಿಕರು ” ಗಾಂದೀಜಿ ದೊಡ್ಡ ಮನುಷ್ಯ ಇರಬಹುದು, ಆದರೆ ಬಿರ್ಲಾ ಮನೆಯಲ್ಲಿದ್ದಾರೆ. ಅವನ ಅನ್ನ ತಿನ್ನುತ್ತಿದ್ದಾರೆ. ಇಲ್ಲಿ ಗುಂಡು ಹಾರಿಸಿದಾಗಲೂ ಸುಮ್ಮನಿದ್ದರು ಎನ್ನುತ್ತಿದ್ದರು. ಬಿರ್ಲಾ ಬಗ್ಗೆ ಹೇಳಿದ್ದನ್ನೇ ಟಾಟಾಗೂ ಅನ್ವಯಿಸಬಹುದು. ಇಂತಹ ಟಾಟಾ ಸ್ವಾತಂತ್ರ್ಯ ಹತ್ತಿರ ಬಂದ ಕೂಡಲೇ ಸ್ವಾತಂತ್ರ್ಯಾನಂತರದ ಭಾರತ ಟಾಟಾರಂತಹ ಬಂಡವಾಳಿಗರಿಗೆ ಸರ್ಕಾರ ಜನರಿಂದ ವಸೂಲಿ ಮಾಡುವ ತೆರಿಗೆ ಹಣದಿಂದ ಏನೆಲ್ಲ ಅನುಕೂಲ ಕಲ್ಪಿಸಿಕೊಡಬೇಕು ಎಂಬ ಟಾಟಾ ಬಿರ್ಲಾ ಪ್ಲಾನ್ ಎಂದು ಹೆಸರಾದ ಬಾಂಬೆ ಪ್ಲಾನ್ ತಯಾರಿಸಿ ಸರ್ಕಾರದ ಮುಂದಿಟ್ಟರು. ಮುಂದಿನ ನೆಹರೂ, ಇಂದಿರಾ ಸರ್ಕಾರಗಳು ಈ ಸೂಚನೆಗಳನ್ನು ಬಹುಮಟ್ಟಿಗೆ ಪಾಲಿಸಿದವು. ರತನ್
ಈಗ ನಮ್ಮ ಶಕ್ತಿ ಕಡಿಮೆ ಇರುವಾಗ ಸರ್ಕಾರವೇ ಪ್ರಧಾನ ಮೂಲಭೂತ ಕೈಗಾರಿಕೆಗಳನ್ನು ನಡೆಸಿ ಅಗ್ಗದ ದರದಲ್ಲಿ ನಮ್ಮ ಕೈಗಾರಿಕೆಗಳಿಗೆ ಬೇಕಾದ ವಸ್ತುಗಳು, ಯಂತ್ರಗಳನ್ನು ಒದಗಿಸಿಕೊಡಬೇಕು. ನಮ್ಮ ರೆಕ್ಕೆ ಬಲಿತಾಗ ಸರ್ಕಾರದ ಕೈಗಾರಿಕೆ ನಡೆಸುವುದನ್ನು ಕೈಬಿಟ್ಟು ಅವನ್ನೆಲ್ಲ ನಮಗೆ ವಹಿಸಿಕೊಡಬೇಕು, ಬ್ಯಾಂಕುಗಳು ಅವರುಗಳಿಗೆ ಸುಲಭ ಬಡ್ಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಲ ನೀಡಬೇಕು ಮೊದಲಾದುವೆಲ್ಲ ಅದರಲ್ಲಿ ಸೇರಿತ್ತು. ಸ್ವಾತಂತ್ರ್ಯಾನಂತರ ಸ್ಥಾಪನೆಯಾದ ಬೃಹತ್ ಪಬ್ಲಿಕ್ ರಂಗದ ಕೈಗಾರಿಕೆಗಳು, ರಾಷ್ಟ್ರೀಕರಣಗೊಂಡ ಬ್ಯಾಂಕುಗಳ ನಿರ್ದೇಶಕ ಮಂಡಳಿಗಳಲ್ಲಿ ಇವರುಗಳ ಪ್ರತಿನಿಧಿಗಳೇ ನೇಮಕವಾದರು. ಅವುಗಳ ನೀತಿ ಉತ್ಪಾದನೆ ಟಾಟಾ ಬಿರ್ಲಾಗಳಿಗೆ ಅನುಕೂಲ ಒದಗಿಸುವಂತಾಯಿತು. ಇದನ್ನು ಪಕ್ಷದ ಕಾರ್ಯಕ್ರಮದಲ್ಲಿ ವಿಶ್ಲೇಷಣೆ ಮಾಡಲಾಗಿದೆ. 1991 ರ ನಂತರದ ಖಾಸಗೀಕರಣ ಯುಗದಲ್ಲಿ ಈ ಸಾರ್ವಜನಿಕ ರಂಗ ಅವರುಗಳ ಕೈ ಸೇರುತ್ತಿವೆ. ಏರ್ ಇಂಡಿಯಾದ ಮಾಲಿಕತ್ವದ ಜೊತೆಗೆ ಅಪಾರ ಭೂಮಿ ಮತ್ತಿತರ ಸೌಲಭ್ಯಗಳನ್ನು ಅಗ್ಗವಾಗಿ ಟಾಟಾ ಕಂಪನಿಗೆ ವಹಿಸಿಕೊಡಲಾಗಿದೆ.
ಇದನ್ನೂ ಓದಿ: ಜೀವಂತ ಜಿಲಟಿನ್ ಕಡ್ಡಿ ಸ್ಫೋಟ; ಬೆರಳುಗಳು ತುಂಡು
ಟಾಟಾರಂತಹ ಏಕಸ್ವಾಮ್ಯ ಬಂಡವಾಳಗಾರರು ತಮ್ಮಂತಹವರ ಹೊರತು ಬೇರೆ ಸಣ್ಣ ಮಧ್ಯಮ ಕೈಗಾರಿಕೆಗಳು ಬೆಳೆಯಬಾರದು ಎಂಬ ಧೋರಣೆಯಿಂದ ಉಪ್ಪು, ಉಪ್ಪಿನಕಾಯಿಗಳನ್ನೂ ಸಣ್ಣ ಬಂಡವಾಳಗಾರರಿಗೆ ಬಿಡದೆ ಆಕ್ರಮಿಸಿಕೊಂಡಿದ್ದಾರೆ. ಈ ನೀತಿಯ ಭಾಗವಾಗಿ ಭಾರತದಲ್ಲಿ ವಿವಿಧ ರಾಜ್ಯಗಳ ಮಾರುಕಟ್ಟೆ ಹಿಡಿಯಲು ತಮಗೆ ತೊಂದರೆಯಾಗುವುದರಿಂದ ಭಾಷಾವಾರು ರಾಜ್ಯಗಳು ಬೇಡ. ದಕ್ಷಿಣ ಭಾರತ, ಪಶ್ಚಿಮ ಭಾರತ ಉತ್ತರ ಭಾರತ, ಮಧ್ಯ ಭಾರತ ಪೂರ್ವ ಭಾರತ ಎಂಬ ಪ್ರಾಂತ್ಯಗಳು ಕೇವಲ ಆಡಳಿತ ವಿಭಾಗಗಳಾಗಿ ಮಾತ್ರ ಇರಬೇಕು. ರಾಜ್ಯಗಳ ಸ್ವಾಯತ್ತತೆ ಎಂಬುದೇನು ಇಲ್ಲದೆ ಅಧಿಕಾರ ಕೇಂದ್ರ ಸರ್ಕಾರದಲ್ಲಿ ಕೇಂದ್ರೀಕೃತವಾಗಿರಬೇಕು. ಸರ್ಕಾರ ತಮಗೆ ತೆರಿಗೆ ವಿನಾಯತಿ, ಸಹಾಯಧನ ಸೌಲಭ್ಯ ಕಲ್ಪಿಸಿಕೊಡುವುದಕ್ಕೆ ಅದು ಬಹಳ ಅನುಕೂಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಜ್ಯಾಮಿಟ್ರಿ ಬಾಕ್ಸ್ನಿಂದ ನೇರ ರೇಖೆಗಳನ್ನು ಈ ಆಡಳಿತ ವಿಭಾಗಗಳನ್ನು ಮಾಡಬೇಕು ಎಂದು ಬಯಸಿದ್ದರು.
ಅಂದು ನೆಹರೂ , ಪಟೇಲರು ಇಂತಹುದೇ ರಾಜ್ಯಗಳನ್ನು ಸ್ಥಾಪಿಸಲು ಬಯಸಿದ್ದರು. ಭಾಷಾವಾರು ರಾಜ್ಯಗಳ ವಿರುದ್ಧ ನಿರ್ಣಯ ಮಾಡಿದರು. ಆದರೆ ಜನರು ವಿವಿಧ ರಾಜ್ಯಗಳಲ್ಲಿ ಏಕೀಕರಣ ಹೋರಾಟಗಳಿಗೆ ಇಳಿದು ಈ ದುಷ್ಟ ಚಿಂತನೆಯನ್ನು ಹೊರಗಟ್ಟಿದರು. ಭಾಷಾವಾರು ರಾಜ್ಯಗಳು ಸ್ಥಾಪನೆಗೊಂಡವು. ಈಗ ಮೋದಿ ಇದೇ ಟಾಟಾ ಬಿರ್ಲಾ ಮಾತ್ರವಲ್ಲ ಅದಾನಿ ಅಂಬಾನಿ ಪ್ಲಾನ್ ಜಾರಿಗೊಳಿಸುತ್ತಿದ್ದಾರೆ. ಮೋದಿ ಅದಾನಿ, ಅಂಬಾನಿಗಳನ್ನು ತನ್ನ ಬಾಲಂಗೋಚಿ ಬಂಡವಾಳಗಾರರಂತೆ ಬೆಳೆಸುತ್ತಿದ್ದರೂ, ಸಾರ್ವಜನಿಕ ಆಸ್ತಿಗಳನ್ನು ಅವರ ಕೈವಶ ಮಾಡುತ್ತಿದ್ದರೂ ಟಾಟಾ, ಬಿರ್ಲಾಗಳು ಕಿಮಕ್ಕೆನ್ನುತ್ತಿಲ್ಲ. ಏಕೆಂದರೆ ಇವರಿಗೆ ಸಿಗಬೇಕಾದ್ದು ಇವರಿಗೂ ದಕ್ಕುತ್ತಿದೆ. ಸಂಸದ್ ಭವನದ ನಿರ್ಮಾಣ ಮಾಡಿಕೊಟ್ಟ ಟಾಟಾ ಸಾಮ್ರಾಜ್ಯ ಆರೆಸ್ಸೆಸ್ ಸ್ಥಾಪಕ ಹೆಗಡೇವಾರ್ ಆಸ್ಪತ್ರೆ (ಕಾಲೇಜೂ ಇರಬಹುದೇನೋ ಮರೆತಿದೆ ) ಯನ್ನು ಕೂಡಾ ಸ್ಥಾಪಿಸಿದ್ದಾರೆ.
ಕೊನೆ ಮಾತು
ಟಾಟಾ ಮತ್ತು ಬಿರ್ಲಾ ನಡುವೆ ಒಂದು ವ್ಯತ್ಯಾಸ ಹೇಳಲೇಬೇಕು- ಇಪ್ಪತ್ತನೆಯ ಶತಮಾನಕ್ಕೆ ಮೊದಲೇ ಟಾಟಾ ವಿಜ್ಞಾನ ಸಂಸ್ಥೆಗಳನ್ನು ಸ್ಥಾಪಿಸಲು ಹಣ ಹೂಡಿದರು. ಉಕ್ಕಿನ ಕೈಗಾರಿಕೆಗಳಂತಹ ಅವರ ಕೈಗಾರಿಕಾ ಸಾಮ್ರಾಜ್ಯದ ಬೆಳವಣಿಗೆಗೆ ಅದು ಅತ್ಯವಶ್ಯ ಎಂದು ಮನಗಂಡರು . ಬೆಂಗಳೂರಿನ ಟಾಟಾ ವಿಜ್ಞಾನ ಸಂಸ್ಥೆ, ಐಐ ಎಸ್ಸಿ, ಮುಂಬಯಿಯ ಟಾಟಾ ಮೂಲಭೂತ ಸಂಶೋಧನೆಗಳ ಸಂಸ್ಥೆ ಟಿಐಎಫ್ಆರ್ ಟಾಟಾ ಸಾಮಾಜಿಕ ವಿಜ್ಞಾನಗಳ ಸಂಸ್ಥೆ ಟಿಐಎಸ್ಎಸ್ ಮೊದಲಾದವನ್ನು ಸ್ಥಾಪಿಸಿದರು . ಇದರಿಂದ ಮುಂದೆ ಅಣು ವಿದ್ಯುತ್, ಬಾಹ್ಯಾಕಾಶ ಸಂಶೋಧನೆ ಮೊದಲಾದವುಗಳಿಗೆ ಸಹಾಯವಾಯಿತು.
ಆದರೆ ಬಿರ್ಲಾ ವಿವಿಧ ನಗರಗಳಲ್ಲಿ ಬಿರ್ಲಾ ದೇವಾಲಯಗಳನ್ನು ನಿರ್ಮಿಸಿದರು. ಅವುಗಳು ಹೈದರಾಬಾದಿನ ವೆಂಕಟೇಶ್ವರ, ದೆಹಲಿಯ ಲಕ್ಷ್ಮಿ ನಾರಾಯಣ ಇತ್ಯಾದಿ ದೇವರುಗಳ ಆಲಯವಾಗಿದ್ದರೂ ಬಿರ್ಲಾ ಮಂದಿರ ಎನ್ನುತ್ತಾರೆಯೇ ಹೊರತು ಆ ದೇವರುಗಳ ಹೆಸರು ಹೇಳುವುದಿಲ್ಲ.
ಇದು ರತನ್ ಟಾಟಾ ಬಗೆಗಿನ ಬರಹ ಅಲ್ಲ, ಟಾಟಾ ಕೈಗಾರಿಕಾ ಸಾಮ್ರಾಜ್ಯ ಬೆಳೆದುಬಂದ ಬಗ್ಗೆ. ಆದರೆ ರತನ್ ಟಾಟಾ ಮಾಡಿದ ಸಾಮ್ರಾಜ್ಯ ವಿಸ್ತರಣೆ , ಮಹಾದಾನಗಳ ಅಡಿಪಾಯದ ಬಗ್ಗೆ ಮಾತ್ರ.
ಇದನ್ನೂ ನೋಡಿ: ICDS 50 | ಐಸಿಡಿಎಸ್ ಬಲವರ್ಧನೆ – ಶಿಕ್ಷಕರು ಮತ್ತು ಪೋಷಕರ ಪಾತ್ರ