ಚಾಮುಂಡೇಶ್ವರಿ ದೇವಸ್ಥಾನಕ್ಕೆ ಗೃಹಲಕ್ಷ್ಮಿ ದುಡ್ಡು | ಪಡಿತರ ಚೀಟಿ, ಆಧಾರ್‌ ಲಿಂಕ್ ಆಗಿದೆಯೆ ಎಂದ ಜನರು!

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ 5 ವರ್ಷಗಳ ಕಂತನ್ನು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ನೀಡಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಚುನಾವಣೆ ವೇಳೆಗೆ ನೀಡಿದ ಮಾತಿನಂತೆ ರಾಜ್ಯದ ಎಲ್ಲಾ ಕುಟುಂಬದ ಯಜಮಾನಿ ಮಹಿಳೆಯರಿಗೆ ಇನ್ನೂ ಹಣ ನೀಡದ ಸರ್ಕಾರ ಜನರನ್ನು ಹಿಡಿಟ್ಟುಕೊಳ್ಳಲು ಭಾವನಾತ್ಮಕ ವಿಚಾರಗಳಿಗೆ ಮಹತ್ವ ನೀಡುತ್ತಾ ತಪ್ಪು ದಾರಿಗೆಳೆಯುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, “ಚಾಮುಂಡೇಶ್ವರಿ ದೇವಿಗೆ 5 ವರ್ಷಗಳ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಮಾಡಿದ್ದೇವೆ” ಎಂದು ತಿಳಿಸಿದ್ದರು. ಸರ್ಕಾರ ರಚನೆಯಾಗಿ 6 ತಿಂಗಳು ಕಳೆದರೂ ಇನ್ನೂ 7 ಲಕ್ಷ ಯಜಮಾನಿಯರಿಗೆ ಗೃಹ ಲಕ್ಷ್ಮಿ ಹಣ ಜಮೆಯಾಗಿಲ್ಲ ಎಂದು ಖುದ್ದು ಸಚಿವರೆ ಸಾಮಾಜಿಕ ಮಾಧ್ಯಮದ ತನ್ನ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ: ಹಾಸನ | ಆಟವಾಡುವ ವೇಳೆ ಮೆಟ್ಟಿಲಿನಿಂದ ಕೆಳಗೆ ಬಿದ್ದ ಮಗು, ಜೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ರವಾನೆ

“ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಐದು ವರ್ಷಗಳ ಕಂತನ್ನು ನನ್ನ ಪರವಾಗಿ ಶಾಸಕ ದಿನೇಶ್ ಗೂಳಿಗೌಡ ಅವರು ತಾಯಿ ಚಾಮುಂಡೇಶ್ವರಿಗೆ ಸಮರ್ಪಿಸಿದರು. ಪ್ರತಿ ತಿಂಗಳಿಗೆ 2 ಸಾವಿರ ರೂ.ನಂತೆ 59 ತಿಂಗಳ ಕಂತಿನ ಹಣ ಒಟ್ಟು 1.18 ಲಕ್ಷ ರೂ.ಗಳನ್ನು ವೈಯಕ್ತಿಕವಾಗಿ ಸಲ್ಲಿಸಿದ್ದೇನೆ. ಈಗಾಗಲೇ ಮೊದಲ ಕಂತನ್ನು ಸಿಎಂ ಸಿದ್ದರಾಮಯ್ಯನವರು, ಡಿಸಿಎಂ ಡಿ.ಕೆ.ಶಿವಕುಮಾರ ರವರು ಸಲ್ಲಿಸಿದ್ದರು” ಎಂದು ಅವರು ಹೇಳಿದ್ದರು.

“ಪ್ರತಿ ತಿಂಗಳು ತಾಯಿ ಚಾಮುಂಡೇಶ್ವರಿ ದೇವಿಗೆ ಗೃಹಲಕ್ಷ್ಮಿ ಕಂತನ್ನು ನೀಡುವಂತೆ ಶಾಸಕ ದಿನೇಶ ಗೂಳಿಗೌಡ ಅವರು ಸಿಎಂ‌ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದರು. ಅವರು ತಕ್ಷಣ ಈ ಕುರಿತು ಕ್ರಮ ವಹಿಸುವಂತೆ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ಒಂದೇ ಸಲ ಎಲ್ಲಾ ಕಂತಿನ ಹಣವನ್ನು ನಾಡದೇವಿಗೆ ಅರ್ಪಿಸಲಾಗಿದೆ” ಎಂದು ಅವರು ಹೇಳಿದ್ದರು.

ಇದುವರೆಗೆ ರಾಜ್ಯಾದ್ಯಂತ 1 ಕೋಟಿ 17 ಲಕ್ಷ ಯಜಮಾನಿಯರು ಗೃಹಲಕ್ಷ್ಮಿ ಯೋಜನೆ ಮೂಲಕ ಹಣ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದ ಅವರು, ನೋಂದಣಿ ಮಾಡಿಕೊಂಡಿದ್ದ ಇನ್ನೂ 7 ಲಕ್ಷ ಯಜಮಾನಿಯರ ಖಾತೆಗಳಿಗೆ ಹಣ ಜಮಾ ಆಗದೆ ಇರುವ ಬಗ್ಗೆ ಕೂಡಾ ಹೇಳಿದ್ದರು. ಈ ಬಗ್ಗೆ ಕೂಡಾ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಜನರು ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಸಾಮಾನ್ಯ ಮಹಿಳೆಯರು ಈಗಲೂ ಯೋಜನೆಯ ಹಣಕ್ಕಾಗಿ ಅಲೆದಾಡುತ್ತಿದ್ದಾರೆ. ಆಧಾರ್ ಕಾರ್ಡ್‌ ಲಿಂಕ್ ಇಲ್ಲ ಎಂದರೆ ಅವರಿಗೆ ಯೋಜನೆಯ ನಿರಾಕರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ಹೊಳೆನರಸೀಪುರ| ಚಿಟ್ಟನಹಳ್ಳಿ ಗ್ರಾಮದ ವಾಟರ್‌ಮನ್ ಭೈರಯ್ಯ ಬದುಕು ದುಸ್ತರ

ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಹೆಸರು ಹೇಳಲಿಚ್ಚಿಸದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು, “ಗೃಹಲಕ್ಷ್ಮಿ ಯೋಜನೆ ಹಣವನ್ನು ಒಂದು ಬಾರಿಗೆ ನೀಡಿದ್ದಾಗಿ ಸಚಿವರು ಹೇಳಿದ್ದಾರೆ. ಆದರೆ ಸರ್ಕಾರದ ಹಣ ಜಮೆ ಆಗಲು ಅವರಿಗೆ ಪಡಿತರ ಚೀಟಿ ಬೇಕು, ಮೊಬೈಲ್ ನಂಬರ್‌ಗೆ ಆಧಾರ ಕಾರ್ಡ್ ಲಿಂಕ್ ಆಗಿರಬೇಕು. ನಗದು ರೂಪದಲ್ಲಿ ಹಣ ಪಾವತಿಯಾಗುವುದಿಲ್ಲ. ಡಿಬಿಟಿ ಮೂಲಕ ಪಾವತಿಯಾಗಬೇಕಿದೆ” ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಜ್ಯೋತಿ ಸುಬ್ಬಾರಾವ್, “ಕರ್ನಾಟಕ ಸರ್ಕಾರ ಚಾಮುಂಡಿ ದೇವಿಯನ್ನು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯನ್ನಾಗಿ ಮಾಡಿರುವುದಂತೂ ದಿಟ. ಇಲ್ಲಿ ಒಂದು ಪ್ರಶ್ನೆ. ನಮ್ಮ ಮನೆಯೊಡತಿಯರಿಗೆ ಇರುವಂತೆ ಈ ಚಾಮುಂಡಿ ದೇವಿಗೆ ಗೃಹಲಕ್ಷ್ಮಿ ಯೋಜನೆಯನ್ನು ಪಡೆಯುವ ಅರ್ಹತೆ ಇದೆಯೇ? ಎಲ್ಲರಿಗೂ ವರ ನೀಡುತ್ತಾಳೆಂದು ನಂಬಿರುವ ಈ ದೇವಿಗೆ ಈ ಯೋಜನೆಯ ಅಗತ್ಯವಿದೆಯೇ? ಅಥವಾ ಈ ಸರ್ಕಾರ ಅವಳ ಕೈಯನ್ನೂ ಬಿಸಿ ಮಾಡುತ್ತಿದೆಯೇ?” ಎಂದು ಕೇಳಿದ್ದಾರೆ.

“ಜೀವವಿಲ್ಲದ ದೇವತೆಗೆ ಸರ್ಕಾರದ ಯೋಜನೆಯ ಫಲವನ್ನು ನೀಡುವ ಸರ್ಕಾರ ಮೌಢ್ಯವನ್ನು ಬಿತ್ತುತ್ತ ನಿರ್ಗತಿಕ ಹೆಣ್ಣುಮಕ್ಕಳಿಗೆ ಅನ್ಯಾಯ ಎಸಗುತ್ತಿದೆ ಮತ್ತು ತೆರಿಗೆದಾರರ ಹಣವನ್ನು ಪೋಲು ಮಾಡುತ್ತಿದೆ. ಮಹಿಳೆಯರಿಗೆ ದಕ್ಕಬೇಕಾದ ಯೋಜನೆಯನ್ನು ಹೇಗೆ ತಾನೇ ನಿರ್ಜೀವಿ ದೇವತೆಗೆ ನೀಡಿದೆ ಸರ್ಕಾರ? ಇದನ್ನು ಕೇಳಿದವರ ವಿರುದ್ಧವೇ ಬೈಗುಳದ ಸುರಿಮಳೆ ಗೈಯಲಾಗುತ್ತದೆ ಎಂಬ ಅರಿವಿನಿಂದಲೇ, ಸಾಮಾಜಿಕ ಪ್ರಜ್ಞೆಯ ಜವಾಬ್ದಾರಿಯಿಂದಲೇ ಮಾತನಾಡುತ್ತಿದ್ದೇನೆ. ಯಾಕೋ ಸಿದ್ಧರಾಮಯ್ಯನವರೂ ಮೌನ ವಹಿಸಿದ್ದಾರೆ.” ಎಂದು ಜ್ಯೋತಿ ಅವರು ಕೇಳಿದ್ದಾರೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಇಂದು ವಿಧಾನಸಭೆ ಚುನಾವಣೆ 2023, ಆರಂಭ

ಮಹಿಳಾ ಹೋರಾಟಗಾರ್ತಿ ಕೆ. ಎಸ್. ವಿಮಲಾ ಅವರು ಪ್ರತಿಕ್ರಿಯಿಸಿ, “ಸರಕಾರವೊಂದು ಹೀಗೆ ನಡೆದುಕೊಳ್ಳಲು ಅವಕಾಶವಿದೆಯೇ? ಯಾವ ಯಾವ ವಿಷಯಕ್ಕೆ ತಲೆ ಕೆಡಿಸಿಕೊಂಡು ಬೀದಿಗಿಳಿಯೋಣ ಹೇಳಿ? ಜನರ ತೆರಿಗೆಯ ಹಣವನ್ನು ಹೀಗೆ ವೆಚ್ಚ ಮಾಡುವುದು ಯಾವುದೇ ಕಾರಣಕ್ಕೂ ಸಲ್ಲದು. ಪೂಜೆ, ನಂಬಿಕೆ, ಕಾಣಿಕೆ ಇವು‌ ವೈಯಕ್ತಿಕ,ಕೇವಲ ಖಾಸಗಿ. ಇನ್ನು ಮುಜರಾಯಿ/ ವಕ್ಫ್ ಧಾರ್ಮಿಕ ದತ್ತಿ ಇತ್ಯಾದಿ ಇಲಾಖೆಯ ಮೂಲಕ ಮಂದಿರ ಮಸೀದಿಗಳಿಗೆ ಕೊಡುವ ವ್ಯವಸ್ಥೆ ಈಗಾಗಲೇ ಇದೆ” ಎಂದು ಹೇಳಿದ್ದಾರೆ.

“ಯಡಿಯೂರಪ್ಪನವರ ಕಾಲದಿಂದ ಸರಕಾರದ ಬಜೆಟ್‌ನಲ್ಲಿ ಜಾತಿ, ಮಠಗಳಿಗೆ ಅನುದಾನವೂ ಭದ್ರವಾಯಿತು. ಈಗ ಬಡ ಹೆಣ್ಣುಮಕ್ಕಳಿಗೆ ಗ್ಯಾರಂಟಿ ಎಂದು ಘೋಷಿಸಿ ಚಾಮುಂಡೇಶ್ವರಿಗೆ ಲಕ್ಷಕ್ಕೂ‌ ಹೆಚ್ಚು ಹಣ ಗ್ಯಾರಂಟಿಯ ಫಲಾನುಭವಿ ಎಂದು ಸರಕಾರದ ಹಣ ಕೊಟ್ಟಿದ್ದು ಯಾವ‌ಕಾರಣಕ್ಕೂ ಸರಿಯಲ್ಲ. ಸಚಿವರು ತಮ್ಮ ಸ್ವಂತ ಹಣ ಕಾಣಿಕೆ ಹಾಕಿಕೊಳ್ಳಬಹುದೆ ಹೊರತು ಸರಕಾರದ ಹಣವನ್ನಲ್ಲ. ಅದು ಸಾರ್ವಜನಿಕರ ಹಣ” ಎಂದು ಕೆ.ಎಸ್. ವಿಮಲಾ ಹೇಳಿದ್ದಾರೆ.

ಕಾರ್ಮಿಕ ಮುಖಂಡ ಕೆ.ಮಹಾಂತೇಶ್ ಪ್ರತಿಕ್ರಿಯಿಸಿ, “ರಾಜ್ಯ ಸರ್ಕಾರದ ಸಚಿವೆ ಲಕ್ಷ್ಮೀಹೆಬ್ಬಾಳಕರ್ ಅವರು ಬಡತನ ರೇಖೆ ಕೆಳಗಿದ್ದಾರೆಯೇ..? ಲಕ್ಷಾಂತರ ಬಡ ಮಹಿಳೆಯರು ಅರ್ಜಿ ಹಾಕಲು ಈಗಲೂ ಕಂಪ್ಯೂಟರ್ ಕೇಂದ್ರಕ್ಕೆ ಅಲೆದಾಡುತ್ತಿದ್ದಾರೆ. ಸಾವಿರಾರು ಮಹಿಳೆಯರಿಗೆ ಹಣವೇ ಬಂದಿಲ್ಲ, ಆದರೂ ಸಚಿವರಿಗೆ 59 ತಿಂಗಳ ಹಣ 1.18 ಲಕ್ಷ ಪೂರ್ತಿ ಪಾವತಿಯಾಗಿ ಶ್ರೀ ಚಾಮುಂಡೇಶ್ವರಿ ಖಜಾನೆ ಸೇರಿದೆ. ಸಿದ್ದರಾಮಯ್ಯ ತಮ್ಮ ಆದಿಕಾರದ ಕೊನೆಗಾಲದಲ್ಲಿ ಹೆಸರು ಕೆಡಿಸಿಕೊಳ್ಳಲು ಸಿದ್ದರಾಗೇ ಇದ್ದಂತಿದೆ” ಎಂದು ಕಿಡಿ ಕಾರಿದ್ದಾರೆ.

ವಿಡಿಯೊ ನೋಡಿ: ದುಡಿವ ಜನರ ಮಹಾಧರಣಿ ಹೇಗಿತ್ತು? ಮೂರು ದಿನಗಳ ಕಾಲ ಅಲ್ಲಿ ಏನು ನಡೆಯಿತು. ವಿಶೇಷ ಸುದ್ದಿ Janashakthi Media

Donate Janashakthi Media

Leave a Reply

Your email address will not be published. Required fields are marked *