ಬೆಂಗಳೂರು: ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಚಿಹ್ನೆಗಳಡಿ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶ ಕಲ್ಪಿಸಲು ಚಿಂತನೆ ನಡೆಸಿದೆ.
ಪ್ರಜಾಪ್ರಭುತ್ವದ ಬುನಾದಿ ಎನಿಸಿಕೊಂಡಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೂರು ದಶಕಗಳ ಹಿಂದೆ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಬಳಸಿಕೊಳ್ಳಲಾಗುತ್ತಿತ್ತು.
ಕರ್ನಾಟಕದಲ್ಲಿ ಮೊದಲ ಬಾರಿ 1987ರಲ್ಲಿ ನಡೆದಿದ್ದ ಗ್ರಾಮ ಪಂಚಾಯಿತಿ (ಆಗ ಮಂಡಲ ಪಂಚಾಯಿತಿ) ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಆ ಬಳಿಕ ರೂಪಿಸಿದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿ ನಿಯಮ-1993ರ ಪ್ರಕಾರ ರಾಜಕೀಯ ಪಕ್ಷಗಳ ಚಿಹ್ನೆ ಬಿಟ್ಟು ಚುನಾವಣೆ ನಡೆಸಲು ನಿಯಮ ರೂಪಿಸಲಾಗಿತ್ತು.
ಇದನ್ನೂ ಓದಿ: ಅಗೆಯುವ ಅಭಿಯಾನಕ್ಕೆ ಸದ್ಯಕ್ಕೆ ತಡೆ
1993ರಿಂದ ಇಲ್ಲಿಯವರೆಗೆ ಮೂರು ದಶಕಗಳಲ್ಲಿ ಗ್ರಾಮ ಪಂಚಾಯಿತಿಗಳಿಗೆ ನಡೆದ ಯಾವುದೇ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಬಳಸಿಲ್ಲ.
ಆದರೆ, ಎಲ್ಲ ಪಕ್ಷಗಳೂ ಸ್ಪರ್ಧಿಸಿದ ಅಭ್ಯರ್ಥಿಗಳನ್ನು ಬೆಂಬಲಿತ ಎಂದೇ ಬಿಂಬಿಸುತ್ತಾ ಚುನಾವಣೆ ನಡೆಸುತ್ತಾ ಬಂದಿವೆ. ಅಭ್ಯರ್ಥಿಗಳೂ ಚುನಾವಣಾ ಆಯೋಗ ತಮಗೆ ಹಂಚಿಕೆ ಮಾಡಿದ ಚಿಹ್ನೆಯ ಜತೆಗೆ, ಪಕ್ಷದ ಚಿಹ್ನೆಗಳನ್ನೂ ಬಳಸಿಕೊಂಡು ಪ್ರಚಾರ ನಡೆಸುವುದು ಸಾಮಾನ್ಯ ಸಂಗತಿಯಾಗಿದೆ.
ಗೆದ್ದ ಅಭ್ಯರ್ಥಿಗಳನ್ನು ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಅಭ್ಯರ್ಥಿಗಳೆಂದೇ ಬಿಂಬಿಸಿಕೊಳ್ಳುತ್ತವೆ. ಇದು ಗ್ರಾಮ ಗದ್ದುಗೆ ಏರುವಲ್ಲಿ ಹಲವು ಗೊಂದಲಗಳಿಗೆ ದಾರಿ ಮಾಡಿಕೊಡುತ್ತಿದೆ. ಪಕ್ಷಾಂತರ ನಿಷೇಧ ಕಾಯ್ದೆಯ ಹಂಗಿಲ್ಲದ ಕಾರಣ ವಿಜೇತರಾದ ಅಭ್ಯರ್ಥಿಗಳು ತಮ್ಮ ಅನುಕೂಲ ನೋಡಿಕೊಂಡು ಬಣಗಳನ್ನು ಬದಲಿಸುತ್ತಾರೆ.
‘ಇಂತಹ ಅನಿಶ್ಚಿತ ಸ್ಥಿತಿಗೆ ತೆರೆ ಎಳೆಯಲು ಪಕ್ಷದ ಚಿಹ್ನೆ ಅಡಿಯಲ್ಲೇ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು’ ಎಂದು ಹಲವು ಶಾಸಕರು, ವಿಧಾನಪರಿಷತ್ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ವಿಷಯ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲೂ ಚರ್ಚೆಗೆ ಬರಲಿದೆ.
ಪ್ರಸ್ತುತ ಕೇರಳದಲ್ಲಿ ಪಕ್ಷಗಳ ಚಿಹ್ನೆ ಅಡಿಯಲ್ಲೇ ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆಯುತ್ತಿದ್ದು, ಅಲ್ಲಿನ ಪಂಚಾಯಿತಿಗಳು ಕರ್ನಾಟಕದ ಗ್ರಾಮಗಳಿಗಿಂತಲೂ ಹೆಚ್ಚಿನ ಅಭಿವೃದ್ಧಿ ಸಾಧಿಸಿವೆ. ಉತ್ತಮ ಆಡಳಿತಕ್ಕೆ ಮಾದರಿಯಾಗಿವೆ. ಎಲ್ಲ ರಾಜಕೀಯ ಪಕ್ಷಗಳ ಬುನಾದಿಯೂ ಗಟ್ಟಿಗೊಂಡಿವೆ ಎನ್ನುವ ಮಾಹಿತಿಯನ್ನು ಸರ್ಕಾರಕ್ಕೆ ನೀಡಲಾಗಿದೆ.
ಇದನ್ನೂ ನೋಡಿ: Karnataka legislative assembly Day 04 Live. 16ನೇ ವಿಧಾನಸಭೆಯ ಚಳಿಗಾಲದ ಅಧಿವೇಶನದ ನೇರ ಪ್ರಸಾರ