ನವದೆಹಲಿ: ಮುಂಬರುವ ಜಿ20 ಶೃಂಗಸಭೆ 2023 ರ ಸಿದ್ಧತೆಗಳು ನಗರದಲ್ಲಿ ನಡೆಯುತ್ತಿದ್ದು, ಸಭೆಯು ಸೆಪ್ಟೆಂಬರ್ 9-10 ರಂದು ನಡೆಯಲಿದೆ. ವಿಶ್ವ ನಾಯಕರು ರಾಷ್ಟ್ರ ರಾಜಧಾನಿಗೆ ಆಗಮಿಸುತ್ತಿರುವ ಹಿನ್ನೆಯಲ್ಲಿ ನಗರಾದ್ಯಂತ ಹಲವಾರು ಬದಲಾವಣೆಗಳನ್ನು ಸರ್ಕಾರ ಮಾಡುತ್ತಿವೆ. ಅದರಲ್ಲೂ ನಗರದ ಕೊಳೆಗೇರಿ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ಅವರು ವಾಸಿಸುವ ಪ್ರದೇಶಗಳಿಗೆ ಫ್ಲೆಕ್ಸ್ ಬೋರ್ಡ್ ಮತ್ತು ಪ್ಲಾಸ್ಟಿಕ್ ಹಾಳೆಗಳನ್ನು ಬಳಸಿ ಮುಚ್ಚಲಾಗುತ್ತಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ವಿಶ್ವ ನಾಯಕರು ದೆಹಲಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗಳ ನವೀಕರಣ, ಅಂಡರ್‌ಪಾಸ್‌ಗಳ ನಿರ್ಮಾಣ ಮತ್ತು ಭಿತ್ತಿಚಿತ್ರಗಳನ್ನು ಒಳಗೊಂಡಂತೆ ನಗರವನ್ನು ಸೌಂದರ್ಯೀಕರಣ ಯೋಜನೆಯನ್ನು ಕೇಂದ್ರ ಸರ್ಕಾರವು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಕೊಳೆಗೇರಿ ನಿವಾಸಿಗಳ ಸ್ಥಳಾಂತರಿಸಲಾಗಿದ್ದು, ಅವರು ವಾಸಿಸುವ ಪ್ರದೇಶಗಳನ್ನು ಪ್ಲಾಸ್ಟಿಕ್ ಹಾಳೆಗಳು ಮತ್ತು ಫ್ಲೆಕ್ಸ್ ಬೋರ್ಡ್‌ಗಳಿಂದ ಮುಚ್ಚಲಾಗುತ್ತಿವೆ.
ಇದನ್ನೂ ಓದಿ: ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ಆಹ್ವಾನಿಸದಿರುವುದೇ ಸನಾತನ ಧರ್ಮದ ತಾರತಮ್ಯ: ಉದಯನಿಧಿ ಸ್ಟಾಲಿನ್
“ಭದ್ರತಾ ಕಾರಣಗಳಿಗಾಗಿ ಫ್ಲೈಓವರ್ ಅಡಿಯಲ್ಲಿ ವಾಸಿಸುವ ಜನರು ಅಲ್ಲಿಂದ ತೊರೆಯುಂತೆ ಹೇಳಲಾಗಿದೆ. ಅಲ್ಲಿರುವ ಬಹಳಷ್ಟು ಜನರು ರಾಜಸ್ಥಾನದಿಂದ ದೆಹಲಿಗೆ ಬಂದಿದ್ದರು. ನಾವು ಕೂಡಾ ನಮ್ಮ ಸ್ವಂತ ಗ್ರಾಮವಾದ ಅಲಿಪುರಕ್ಕೆ ಹೋಗಬೇಕಾಗುತ್ತದೆ” ಎಂದು ದೆಹಲಿಯ ಲಜಪತ್ ನಗರದಲ್ಲಿರುವ ಮೂಲಚಂದ್ ಫ್ಲೈಓವರ್ ಅಡಿಯಲ್ಲಿ ಕರವಸ್ತ್ರಗಳನ್ನು ಮಾರಾಟ ಮಾಡುವ ದೀಪಕ್ ಹೇಳಿದ್ದಾರೆ.
“15 ದಿನಗಳ ಹಿಂದೆ, ಅಧಿಕಾರಿಗಳು ಬಂದು ಫ್ಲೈಓವರ್ ಅಡಿಯಲ್ಲಿ ವಾಸಿಸುತ್ತಿದ್ದ ನಮ್ಮ ಇಡೀ ಸಮುದಾಯವನ್ನು ಜಿ 20 ಶೃಂಗಸಭೆಯ ಕಾರಣ ಪ್ರದೇಶವನ್ನು ಖಾಲಿ ಮಾಡುವಂತೆ ಕೇಳಿಕೊಂಡರು” ಎಂದು ಮಮತಾ ಅವರು ಹೇಳಿದ್ದಾರೆ. ಮಮತಾ ಮತ್ತು ಅವರ ಕುಟುಂಬದ ಮೂವರು ಮೂಲಚಂದ್ ಫ್ಲೈಓವರ್ ಅಡಿಯಲ್ಲಿ ವಾಸಿಸುತ್ತಿದ್ದಾರೆ. ಭಿಕ್ಷಾಟನೆಯಿಂದ ಬದುಕುತ್ತಿರುವ ಅವರು ಆ ಪ್ರದೇಶದ ಮೂಲಕ ಪ್ರಯಾಣಿಸುವ ವಾಹನ ಚಾಲಕರಿಂದ ಸಿಗುವ ಅಲ್ಪಸ್ವಲ್ಪ ಹಣವನ್ನಷ್ಟೆ ಅವಲಂಬಿಸಿದ್ದಾರೆ.
ಇದನ್ನೂ ಓದಿ: ಗೌರಿ ಹತ್ಯೆಯ ಯಾರೊಬ್ಬರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ
G20 ನಾಯಕರು ಪ್ರಯಾಣಿಸುವ ಮಾರ್ಗದಲ್ಲಿರುವ ದೆಹಲಿಯ ಕೂಲಿ ಕ್ಯಾಂಪ್‌ನಲ್ಲಿರುವ ಸ್ಥಳೀಯ ಅಂಗಡಿ ನಡೆಸುವವರು ಮತ್ತು ಕಿರಾಣಿ ಅಂಗಡಿ ಮಾಲೀಕರು ತಮ್ಮ ಅಂಗಡಿಗಳನ್ನು ಹಸಿರು ಹಾಳೆಗಳಿಂದ ಮುಚ್ಚಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಅಧಿಕಾರಿಗಳು ಒಂದು ವಾರದ ಹಿಂದೆಯೇ ಪ್ರದೇಶಕ್ಕೆ ಭೇಟಿ ನೀಡಿದರು. ಎಲ್ಲಾ ಕೊಳೆಗೇರಿಗಳು ಮತ್ತು ಅಂಗಡಿಗಳನ್ನು ಹಸಿರು ಹಾಳೆಗಳಿಂದ ಮುಚ್ಚಿದರು” ಎಂದು ಕಳೆದ 50 ವರ್ಷಗಳಿಂದ ಕೂಲಿ ಕ್ಯಾಂಪ್‌ನ ನಿವಾಸಿಯಾಗಿರುವ ಶಂಕರ್ ಲಾಲ್ ಹೇಳಿದ್ದಾರೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.
ಹಸಿರು ಹಾಳೆಗಳ ಮೂಲಕ ತಮ್ಮ ಅಂಗಡಿಗಳನ್ನು ಮುಚ್ಚಿದರೆ ತಮ್ಮ ಸಣ್ಣ ಕಿರಾಣಿ ಅಂಗಡಿಯು ದಾರಿಹೋಕರಿಗೆ ಕಾಣುವುದಿಲ್ಲ, ಇದು ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂಗಡಿಯ ಮಾಲಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಜಿ 20 ಗಾಗಿ ವಿದೇಶಿಯರು ಭಾರತಕ್ಕೆ ಬರುತ್ತಿರುವ ಕಾರಣ ಬಡ ಭಾರತೀಯರನ್ನು ದೂರ ತಳ್ಳಲಾಗುತ್ತಿದೆ ಮತ್ತು ಮರೆಮಾಡಲಾಗಿದೆ” ಎಂದು ವ್ಯಾಪಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಆಯುಧ ಹಿಡಿದು ಬರುವವರು ಧೀರರಲ್ಲ, ಹೇಡಿಗಳು: ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್
ಇದೇ ರೀತಿಯ ವಿದ್ಯಮಾನ 2023ರ ಮಾರ್ಚ್ 28-29ರಂದು ವಿಶಾಖಪಟ್ಟಣಂನಲ್ಲಿಯೂ ನಡೆದಿತ್ತು. ಅಲ್ಲಿನ ಎಎಸ್‌ಆರ್ ನಗರದಲ್ಲಿ ನಡೆದ G20 ಕಾರ್ಯಕಾರಿ ಸಭೆಯ ವೇಳೆ ಅಲ್ಲಿ ವಾಸಿಸುತ್ತಿರುವ ಬುಡಕಟ್ಟು ಕುಟುಂಬಗಳು ಪ್ರಯಾಣಿಸುವವರ ಕಣ್ಣಿಗೆ ಕಾಣಿಸದಂತೆ ಹಸಿರು ಹಾಳೆಗಳ ಹಿಂದೆ ಮರೆಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಜಿ20 ಸಭೆಯಲ್ಲಿ ಆಧುನಿಕ ಸೂಪರ್ ಪವರ್, ಜಗತ್ತಿನ ದಕ್ಷಿಣದ ಪ್ರಮುಖ ನಾಯಕ ಮತ್ತು ಬಡ ರಾಷ್ಟ್ರಗಳ ಪರವಾಗಿ ಧ್ವನಿ ಎತ್ತುವ ರಾಷ್ಟ್ರವಾಗಿ ಭಾರತ ಇರಲಿದೆ ಎಂಬ ದೃಷ್ಟಿಕೋನವನ್ನು ಹೊಂದಿದ್ದಾರೆ. ಆದರೆ, ದೇಶದ ಬಡತನವನ್ನು ಸರ್ಕಾರ ಮರೆಮಾಚಲು ನೋಡುತ್ತಿದೆ ಎಂದು ವಿಮರ್ಶಕರು ಟೀಕಿಸಿದ್ದಾರೆ.
“ಭಾರತವು ಸ್ಪಷ್ಟವಾದ ಬಡತನದಿಂದ ಮುಜುಗರಕ್ಕೊಳಗಾಗುತ್ತಿದೆ. ದೇಶಕ್ಕೆ ಭೇಟಿ ನೀಡುವ ಗಣ್ಯರಿಗೆ ದೇಶದ ಬಡತನ ಕಣ್ಣಿಗೆ ಬೀಳದಂತೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ” ಎಂದು ಸಾಮಾಜಿಕ ಕಾರ್ಯಕರ್ತ ಹರ್ಷ್ ಮಂದರ್ ಕಳೆದ ಮೇ ತಿಂಗಳಲ್ಲಿ ಹೇಳಿದ್ದರು.
ವಿಡಿಯೊ ನೋಡಿ: ಗೌರಿ ಹತ್ಯೆ ಪ್ರಕರಣದ ವಿಚಾರಣೆ ವೇಗವಾಗಿ ನಡೆಯುತ್ತಿದೆ – ಸಿಎಂ ಸಿದ್ದರಾಮಯ್ಯ Janashakthi Media