ಈಶಾನ್ಯದ ಕೆಲವೆಡೆ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ವ್ಯಾಪ್ತಿ ಕಡಿತ: ಅಮಿತ್‌ ಶಾ

ನವದೆಹಲಿ: ದೇಶದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಗೆ (ಎಎಫ್‌ಎಸ್‌ಪಿಎ) ಒಳಪಡುವ ಪ್ರದೇಶವನ್ನು ಕೇಂದ್ರ ಸರ್ಕಾರ ಇಂದು(ಮಾ.31) ಕಡಿಮೆಗೊಳಿಸಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್‌ ಮಾಡಿದ್ದು, ನಾಗಾಲ್ಯಾಂಡ್‌, ಅಸ್ಸಾಂ ಹಾಗೂ ಮಣಿಪುರದಲ್ಲಿ ಹಲವು ವರ್ಷಗಳ ಬಳಿಕ ಎಎಫ್‌ಎಸ್‌ಪಿಎ(ಆಫ್‌ ಸ್ಪಾ) ನಿಯಂತ್ರಿತ ಪ್ರದೇಶವು ಕಡಿತಗೊಂಡಿರುವ ತಿಳಿಸಿದ್ದಾರೆ.

ಈ ನಡೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೇಯಸ್ಸು ಸಲ್ಲಿಸಿರುವ ಅಮಿತ್ ಶಾ, ಈಶಾನ್ಯ ರಾಜ್ಯಗಳಲ್ಲಿ ಉಗ್ರಗಾಮಿ ಚಟುವಟಿಕೆಯನ್ನು ನಿಲ್ಲಿಸಲು ಮತ್ತು ಸಂಪೂರ್ಣ ಶಾಂತಿ ತರಲು ನಡೆಸಿದ ಸತತ ಪ್ರಯತ್ನಗಳು ಹಾಗೂ ವಿವಿಧ ಒಪ್ಪಂದಗಳಿಂದ ನಿರ್ಮಾಣವಾದ ಸುಧಾರಿಸಿದ ಭದ್ರತಾ ಸನ್ನಿವೇಶ ಮತ್ತು ತ್ವರಿತ ವೇಗದ ಅಭಿವೃದ್ಧಿಗಳು ಇದನ್ನು ಸಾಧ್ಯವಾಗಿಸಿದೆ ಎಂದಿದ್ದಾರೆ.

ಇದನ್ನು ಓದಿ: ಘೋರ ಕಾನೂನು ಎಎಫ್‌ಎಸ್‌ಪಿಎ ರದ್ದಾಗಬೇಕು

ಈ ಪ್ರದೇಶದ ಜನರನ್ನು ಅಭಿನಂದಿಸಿರುವ ಅವರು, ಹಿಂದೆ ಇದ್ದ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಭಾಗವನ್ನು ದಶಕಗಳಿಂದ ಕಡೆಗಣಿಸಲಾಗಿತ್ತು. ಈಗ ಶಾಂತಿ, ಸಮೃದ್ಧಿ ಮತ್ತು ಅಭೂತಪೂರ್ವ ಅಭಿವೃದ್ಧಿಯ ಹೊಸ ಯುಗಕ್ಕೆ ಸಾಕ್ಷಿಯಾಗುತ್ತಿದ್ದೇವೆ ಎಂದು ಹೇಳಿದ್ದಾರೆ.

ಬ್ರಿಟಿಷರ ವಿರುದ್ಧ ದೇಶದಲ್ಲಿ ನಡೆಯುತ್ತಿದ್ದ ಕ್ವಿಟ್‌ ಇಂಡಿಯಾ ಚಳವಳಿಯನ್ನು ಹತ್ತಿಕ್ಕಲು ಬ್ರಿಟಿಷ್‌ ಆಡಳಿತವು 1942ರಲ್ಲಿ ಆಫ್‌ ಸ್ಪಾ ಜಾರಿಗೊಳಿಸಿತು. ಭಾರತ ಸ್ವಾತಂತ್ರ್ಯ ಪಡೆದ ನಂತರವೂ ಆಫ್‌ ಸ್ಪಾ ಉಳಿಸಿಕೊಳ್ಳಲಾಗಿತ್ತು. ಹಾಗೂ 1958ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಯಿತು. ಪ್ರಕ್ಷುಬ್ಧ ಪರಿಸ್ಥಿತಿಯನ್ನು ನಿಯಂತ್ರಿಸಿ ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಶಸ್ತ್ರ ಪಡೆಗಳನ್ನು ಬಳಸಿಕೊಳ್ಳಲು ‘ಆಫ್‌ ಸ್ಪಾ’ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಇದನ್ನು ಓದಿ: ನಾಗಾಲ್ಯಾಂಡ್‌ನಿಂದ ಅಫ್ ಸ್ಪಾ ಹಿಂದಕ್ಕೆ ಪಡೆಯುವ ಕುರಿತು ಪರಿಶೀಲನಾ ಸಮಿತಿ ರಚನೆ

ಇದು 1958ರ ಸೆಪ್ಟೆಂಬರ್ 11ರಂದು ಕಾಯ್ದೆಯಾಗಿ, ಸಶಸ್ತ್ರ ಪಡೆಗಳ (ಅಸ್ಸಾಂ ಮತ್ತು ಮಣಿಪುರ) ವಿಶೇಷ ಅಧಿಕಾರ ಕಾಯ್ದೆ, 1958 ಎಂದು ಬದಲಾಗಿತ್ತು.

ಈ ಕಾಯ್ದೆ ವ್ಯಾಪಕ ವಿರೋಧಕ್ಕೆ ಒಳಗಾಗಿದೆ. ಈ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ನಾಗರಿಕರ ಮೇಲೆ ದೌರ್ಜನ್ಯಗಳು ನಡೆದಿವೆ. ಮಹಿಳೆಯರನ್ನು ಅತ್ಯಾಚಾರ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಕಾಯ್ದೆ ರದ್ದತಿಗೆ ಆಗ್ರಹಿಸಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.

ಕಾರ್ಯಾಚರಣೆಗೆ ಕಾನೂನು ಕ್ರಮವಿಲ್ಲ

ಈ ಕಾಯ್ದೆಯ ಸೆಕ್ಷನ್‌ 4ರ ಅಡಿ ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಲಾದ ಪ್ರದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ಅಗತ್ಯ ಎನಿಸಿದರೆ, ಸೇನಾಧಿಕಾರಿ ಅಥವಾ ಸೈನಿಕರು ಎಚ್ಚರಿಕೆ ನೀಡಿ, ನಂತರ ಗುಂಡು ಹಾರಿಸಬಹುದು. ಶಂಕಿತ ವ್ಯಕ್ತಿಯನ್ನು ವಾರಂಟ್‌ ಇಲ್ಲದೆ ಬಂಧಿಸಬಹುದು ಹಾಗೂ ಬಂಧನದ ವೇಳೆ ಅಗತ್ಯವಿದ್ದರೆ ಬಲ ಪ್ರಯೋಗಿಸಬಹುದು.

ಕಾಯ್ದೆಯ ಸೆಕ್ಷನ್‌ 6ರ ಅಡಿ ಘೋಷಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುವಾಗ ಸೇನೆಯ ಯಾವುದೇ ರ‍್ಯಾಂಕ್‌ನ ಅಧಿಕಾರಿಗಳು ನಡೆಸುವ, ಯಾವುದೇ ಕೃತ್ಯದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದನ್ನು ಈ ಕಾಯ್ದೆಯಲ್ಲಿ ನಿರ್ಬಂಧವಿದೆ.

ಯಾವುದೇ ಕಾರ್ಯಾಚರಣೆ ತಪ್ಪಾಗಿ ನಡೆದರೂ ಭದ್ರತಾ ಪಡೆಗಳ ಲೋಪಕ್ಕೆ ಯಾವುದೇ ಶಿಕ್ಷೆ ಇರುವುದಿಲ್ಲ. ಈಶಾನ್ಯ ರಾಜ್ಯಗಳಲ್ಲಿ ಬಂಡುಕೋರರ ವಿಪರೀತ ಹಿಂಸಾಚಾರಗಳನ್ನು ನಿಯಂತ್ರಿಸಲು ಸರ್ಕಾರವು ಭದ್ರತಾ ಪಡೆಗಳಿಗೆ ಈ ವಿಶೇಷ ಅಧಿಕಾರ ನೀಡಿತ್ತು.

Donate Janashakthi Media

Leave a Reply

Your email address will not be published. Required fields are marked *