ಸಿಬಿಐ, ಇಡಿ ನಿರ್ದೇಶಕರ ಅಧಿಕಾರಾವಧಿ 5 ವರ್ಷ ವಿಸ್ತರಣೆಗೆ ಸಂಸತ್ ಒಪ್ಪಿಗೆ

ನವದೆಹಲಿ: ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ತನಿಖಾ ದಳದ ನಿರ್ದೇಶಕರ ಅಧಿಕಾರಾವಧಿಯನ್ನು ಪ್ರಸ್ತುತ ಎರಡು ವರ್ಷಗಳಿಂದ ಗರಿಷ್ಠ 5 ವರ್ಷಗಳವರೆಗೆ ವಿಸ್ತರಿಸಲು ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲಿ ಅಂಗೀಕಾರವಾಗಿದೆ.  ಕೇಂದ್ರ ತನಿಖಾ ದಳದ (ಸಿಬಿಐ) ನಿರ್ದೇಶಕರ ಅವಧಿಯು ಎರಡು ವರ್ಷಗಳಿಂದ ಗರಿಷ್ಠ ಐದು ವರ್ಷಗಳವರೆಗೆ ವಿಸ್ತರಣೆಯಾಗಲಿದೆ.

12 ಸದಸ್ಯರ ಅಮಾನತು ಖಂಡಿಸಿ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆಯ ನಡುವೆಯೇ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆಯಲ್ಲಿ ‘ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಮಸೂದೆ 2021’ ಅನ್ನು ಮಂಡಿಸಿದರು.  ನಂತರ ಮಸೂದೆಯನ್ನು ಮೇಲ್ಮನೆಯಲ್ಲಿ (ರಾಜ್ಯಸಭೆ) ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಡಿಸೆಂಬರ್‌ ರಂದು ಈ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರವಾಗಿತ್ತು.

ಸಿಬಿಐ ನಿರ್ದೇಶಕರ ಅಧಿಕಾರ ಅವಧಿಯನ್ನು ವಿಸ್ತರಿಸಲು ದೆಹಲಿ ವಿಶೇಷ ಪೊಲೀಸ್ ವ್ಯವಸ್ಥೆ (ತಿದ್ದುಪಡಿ) ಸುಗ್ರೀವಾಜ್ಞೆ–2021 ಮತ್ತು ಇ.ಡಿ ನಿರ್ದೇಶಕರ ಅಧಿಕಾರ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಲು ಕೇಂದ್ರೀಯ ಜಾಗೃತ ಆಯೋಗ (ತಿದ್ದುಪಡಿ) ಸುಗ್ರೀವಾಜ್ಞೆ–2021ಗಳನ್ನು ಕೇಂದ್ರ ಸರ್ಕಾರ ಹೊರಡಿಸಿದ್ದವು.

ಈ ಎರಡು ಮಸೂದೆಗಳು ಲೋಕಸಭೆಯು ಡಿಸೆಂಬರ್ 9 ರಂದು ಪ್ರತ್ಯೇಕವಾಗಿ ಧ್ವನಿ ಮತದ ಮೂಲಕ ಅಂಗೀಕರಿಸಿದ್ದವು. ಇವುಗಳ ಕುರಿತು ವಿರೋಧ ಪಕ್ಷದ ಸದಸ್ಯರು ಮಂಡಿಸಿದ ವಿವಿಧ ತಿದ್ದುಪಡಿಗಳನ್ನು ಸದನವು ತಿರಸ್ಕರಿಸಿತು.

ಸುಗ್ರೀವಾಜ್ಞೆಯಲ್ಲಿ ತಿಳಿಸಿದಂತೆ ನಿರ್ದೇಶಕರು ತಮ್ಮ ಆರಂಭಿಕ ನೇಮಕಾತಿಯಲ್ಲಿ ಅಧಿಕಾರವನ್ನು ಹೊಂದಿರುವ ಅವಧಿಯು ಸಾರ್ವಜನಿಕ ಹಿತಾಸಕ್ತಿಯಲ್ಲಿ, ವಿಭಾಗ 4ಎ ರ ಉಪ-ವಿಭಾಗ (1) ರ ಅಡಿಯಲ್ಲಿ ಸಮಿತಿಯ ಶಿಫಾರಸಿನ ಮೇರೆಗೆ ಮತ್ತು ಲಿಖಿತವಾಗಿ ದಾಖಲಿಸಬೇಕಾದ ಕಾರಣಗಳಿಗಾಗಿ, ಒಂದು ಬಾರಿಗೆ ಒಂದು ವರ್ಷದವರೆಗೆ ವಿಸ್ತರಿಸಲಾಗುವುದು.

ಆರಂಭಿಕ ನೇಮಕಾತಿಯಲ್ಲಿ ನಮೂದಿಸಲಾದ ಅವಧಿಯನ್ನು ಒಳಗೊಂಡಂತೆ ಒಟ್ಟು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಅಂತಹ ಯಾವುದೇ ವಿಸ್ತರಣೆಯನ್ನು ನೀಡಲಾಗುವುದಿಲ್ಲ ಎಂದು ಉಲ್ಲೇಖಿಸಲಾಗಿದೆ.

ರಾಹುಲ್‌ ಗಾಂಧಿ ವಿರೋಧ

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ʻಸಂಸತ್ ಅಧಿವೇಶನದಲ್ಲಿ ಹಲವು ಮಸೂದೆಗಳು ಗದ್ದಲದ ನಡುವೆಯೇ ಅಂಗೀಕಾರಗೊಳ್ಳುತ್ತಿವೆ. ಇದು ಸಂಸತ್ತನ್ನು ನಡೆಸುವ ವಿಧಾನವಲ್ಲ. ಪ್ರಧಾನಿ ಸದನಕ್ಕೆ ಬರುವುದಿಲ್ಲ. ರಾಷ್ಟ್ರೀಯ ಮಹತ್ವದ ಯಾವುದೇ ವಿಷಯವನ್ನು ಪ್ರಸ್ತಾಪಿಸಲು ನಮಗೆ ಅವಕಾಶವಿಲ್ಲ. ಪ್ರಜಾಪ್ರಭುತ್ವದ ಹತ್ಯೆ ದುರದೃಷ್ಟಕರ. ಒಬ್ಬ ಸಚಿವರು ರೈತರನ್ನು ಕೊಂದರು. ಪ್ರಧಾನಿಗೆ ಇದರ ಅರಿವಿದೆ. ಸತ್ಯವೆಂದರೆ 2-3 ಬಂಡವಾಳಶಾಹಿಗಳು ರೈತರ ವಿರುದ್ಧವಾಗಿದ್ದಾರೆ. ಈ ಸಂಸದರನ್ನು ರಾಜ್ಯಸಭಾ ಅಧ್ಯಕ್ಷರು ಅಥವಾ ಪ್ರಧಾನಿ ಅಮಾನತು ಮಾಡಿಲ್ಲ, ಆದರೆ ರೈತರ ಆದಾಯವನ್ನು ಕದಿಯಲು ಬಯಸುವ ಶಕ್ತಿ ಅಮಾನತು ಮಾಡಿದೆ. ಪ್ರಧಾನಿ ಮತ್ತು ಅಧ್ಯಕ್ಷರು ಕೇವಲ ಅನುಷ್ಠಾನಕಾರರುʼ ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *