ರಾಯಪುರ: ಪ್ರತಿಭಟನಾ ನಿರತ ರೈತರ ಜತೆ ಮಾತುಕತೆಗೆ ಸಿದ್ಧವಿದೆ ಎಂದು ಕೇಂದ್ರದ ಬಿಜೆಪಿ ಸರಕಾರವು ಸುಳ್ಳು ಹೇಳುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟೀಕಾಯತ್ ಆರೋಪಿಸಿದ್ದಾರೆ. ರಾಯಪುರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ಸುಳ್ಳು ಹೇಳುತ್ತಿದೆ. ಅದು ಷರತ್ತುಬದ್ದ ಮಾತುಕತೆಗಳನ್ನು ಮಾತ್ರ ನಡೆಸುತ್ತದೆ ಎಂದು ಹೇಳಿದರು.
ಸರ್ಕಾರವು ನಮ್ಮನ್ನು ಮಾತುಕತೆಗೆ ಆಹ್ವಾನಿಸಿದಾಗ, ನಾವು ಹೋಗುತ್ತೇವೆ. ಸರ್ಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ರೈತರ ಆಂದೋಲನ ಮುಂದುವರಿಯುತ್ತದೆ. ಈ ಚಳುವಳಿ ಗೆದ್ದಾಗ ಮಾತ್ರ ನಾವು ನಮ್ಮ ಮನೆಗಳಿಗೆ ಬರುತ್ತೇವೆ. ರೈತರ ಪ್ರತಿಭಟನೆಯ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ ಆಂದೋಲನ ಮುಂದುವರಿಯುತ್ತದೆ. ನಮ್ಮ ಸ್ಮಶಾನವನ್ನು ನಿರ್ಮಿಸಿದರೂ ನಾವು ಪ್ರತಿಭಟನಾ ಸ್ಥಳವನ್ನು ಬಿಡುವುದಿಲ್ಲ ಎಂದು ನಾವು ಪ್ರತಿಜ್ಞೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ʻನಮ್ಮ ಮುಂದಿನ ಗುರಿ ಮಾಧ್ಯಮಗಳುʼ ಎಂದು ಹೇಳಿದ್ದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದು, ಇದನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾವು ಮಾಧ್ಯಮಗಳ ವಿರುದ್ಧವಾಗಿ ಏನನ್ನೂ ಮಾತನಾಡಿಲ್ಲ. ನಾವು ಹೇಳಿರುವುದು ಕೇಂದ್ರದ ಮುಂದಿನ ಗುರಿ ಮಾಧ್ಯಮ ಸಂಸ್ಥೆಗಳಾಗಿರುತ್ತವೆ. ನೀವು ಉಳಿಯಬೇಕೆಂದರೆ ನಮ್ಮೊಂದಿಗೆ ಕೈಜೋಡಿಸಿ, ಇಲ್ಲದಿದ್ದರೆ ನಿಮಗೂ ತೊಂದರೆಯಾಗುತ್ತದೆ ಎಂದಷ್ಟೇ ಹೇಳಿರುವೆ ಎಂದು ಟೀಕಾಯತ್ ಸ್ಪಷ್ಟನೆ ನೀಡಿದ್ದಾರೆ.
ನಾವು ಛತ್ತೀಸ್ಗಢದ ರೈತರ ಸಮಸ್ಯೆಗಳ ವಿರುದ್ಧ ಹೋರಾಡಲಿದ್ದೇವೆ. ಕನಿಷ್ಠ ಬೆಂಬಲ ಬೆಲೆ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿದೆ. ಆದ್ದರಿಂದ ಎಲ್ಲರೂ ಒಂದಾಗಿ ಹೋರಾಡಲಿದ್ದೇವೆ. ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ನೀಡಿದ ಭಾರತ್ ಬಂದ್‌ಗೆ ಕರೆ ನೀಡಿತ್ತು. ಸಾಕಷ್ಟು ಸಂಘ ಸಂಸ್ಥೆಗಳು ಈ ಪ್ರತಿಭಟನೆಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದವು ಹೋರಾಟ ಯಶಸ್ವಿಯಾಗಿತ್ತು.
ಗ್ವಾಲಿಯರ್ ನ ಕೃಷಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ನರೇಂದ್ರ ಸಿಂಗ್ ತೋಮರ್ ಅವರು, ಪ್ರತಿಭಟನಾ ಹಾದಿ ಬಿಡುವಂತೆ ರೈತರ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ರೈತರು ಎತ್ತಿರುವ ವಿರೋಧಗಳನ್ನು ಪರಿಗಣಿಸಲು ಸರ್ಕಾರ ಸಿದ್ಧವಿದೆ ಎಂದಿದ್ದಾರೆ. ರೈತರು ಪ್ರತಿಭಟನಾ ಹಾದಿಯನ್ನು ಬಿಟ್ಟು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಹಾದಿಗೆ ಬರಬೇಕೆಂದು ಕೇಂದ್ರದ ಕೃಷಿ ಸಚಿವರು ಹೇಳುತ್ತಿದ್ದಾರೆ. ಈ ಹಿಂದೆ ಕೂಡ ಸಾಕಷ್ಟು ಬಾರಿ ಮಾತುಕತೆಗಳು ನಡೆದಿವೆ. ಇನ್ನೂ ಮಾತುಕತೆ ನಡೆಸಬೇಕೆಂದಿದ್ದರೆ, ಮಾತುಕತೆಗೆ ಸರ್ಕಾರ ಸಿದ್ಧವಿದೆ. ರೈತರ ಪ್ರತಿಭಟನೆ ರಾಜಕೀಯ ವಿಚಾರವಾಗಬಾರದು ಎಂದು ಹೇಳಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರ ಕಾಯ್ದೆ ರಚಿಸಿದ್ದು, ರೈತರು ಸಹಿ ಹಾಕಬೇಕೆಂಬುದು ಕೇಂದ್ರ ಸರ್ಕಾರದ ಒತ್ತಾಯ ಮಾಡುತ್ತಿದೆ. ಆದರೆ ನಮ್ಮ ಬೇಡಿಕೆ ಇರುವುದು ಮೂರು ಕೃಷಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಮಾಡಬೇಕೆಂಬುದಾಗಿದೆ ಎಂದು ರಾಕೇಶ್ ಟಿಕಾಯತ್ ಹೇಳಿದರು.
ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಬಡ್ತಿ ಮತ್ತು ಸೌಲಭ್ಯ) ಕಾಯಿದೆ, 2020; ರೈತರ ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆ 2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ, 2020ರ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದೆ. ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಕಳೆದ ವರ್ಷ ನವೆಂಬರ್ 26 ರಿಂದ ರೈತರು ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.