ಕರ್ನಾಟಕ ರಾಜ್ಯೋತ್ಸವ-ದೀಪಾವಳಿ ಆಚರಣೆ: ಸರ್ಕಾರದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆ ಆಚರಣೆ ಸಂಬಂಧ ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ದೀಪಾವಳಿ ವೇಳೆ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಲಾಗುವುದು.

ಕೊವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಮತ್ತು ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಅಲ್ಲದೇ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆ ಮತ್ತು ಪ್ರಾಧಿಕಾರಗಳಿಂದ ಹೊರಡಿಸಲಾದ ಸೂಚನೆ ಮತ್ತು ಮಾರ್ಗಸೂಚಿಗಳನ್ನು ಸಹ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ವಿವರಿಸಲಾಗಿದೆ.

ಸರ್ವೋಚ್ಛ ನ್ಯಾಯಾಲಯ ನಿರ್ದೇಶನಗಳಲ್ಲಿ ಅನುಮತಿಸಲಾದ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಇತರೆ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ, ಹಚ್ಚುವಂತಿಲ್ಲ.

ನವೆಂಬರ್ 1 ರಿಂದ 10 ರವರೆಗೆ ಪಟಾಕಿ ಮಾರಾಟಕ್ಕೆ ಅವಕಾಶ ಇದೆ. ಪರವಾನಗಿ ಪಡೆದವರು ಮಾತ್ರ ಪಟಾಕಿ ಮಾರಾಟ ಮಾಡಬೇಕು ಎಂದು ರಾಜ್ಯ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಹಾಗೂ ಬಯಲು ಪ್ರದೇಶಗಳಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯುವುದಕ್ಕೆ ಮಾತ್ರ ಸಂಬಂಧಿತ ಅಧಿಕಾರಿಗಳು ಹಾಗೂ ಪ್ರಾಧಿಕಾರಗಳು ಅನುಮತಿ ನೀಡಬೇಕು.

ಪಟಾಕಿ ಮಳಿಗೆಗಳಲ್ಲಿ ಎರಡೂ ಕಡೆಗಳಿಂದ ಸರಾಗವಾಗಿ ಗಾಳಿ ಆಡುವಂತಿರಬೇಕು. ಒಂದು ಮಾರಾಟ ಮಳಿಗೆಯಿಂದ ಮತ್ತೊಂದು ಮಾರಾಟ ಮಳಿಗೆ ನಡುವೆ ಕನಿಷ್ಠ 6 ಮೀಟರ್ ಅಂತರವಿರಬೇಕು.

ಪ್ರತಿಯೊಂದು ಮಳಿಗೆಯಲ್ಲಿ ಸಂಬಂಧಿಸಿದ ಇಲಾಖೆ ಅಥವಾ ಪ್ರಾಧಿಕಾರವು ನೀಡಿರುವ ಪರವಾನಗಿ ಪ್ರತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದು. ಪರವಾನಗಿ ಪಡೆದವರು ಕಡ್ಡಾಯವಾಗಿ ಮಳಿಗೆಯಲ್ಲಿ ಹಾಜರಿರಬೇಕು.

ಕರ್ನಾಟಕ ರಾಜ್ಯೋತ್ಸವ: 500 ಜನರಿಗೆ ಮಾತ್ರ ಅವಕಾಶ

ಕರ್ನಾಟಕ ರಾಜ್ಯೋತ್ಸವ ಆಚರಣೆ ಬಗ್ಗೆಯೂ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜ್ಯೋತ್ಸವದ ವೇಳೆ 500 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ದೈಹಿಕ ಅಂತರವಿಲ್ಲದ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗುವುದು. ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಕಡ್ಡಾಯ ಎಂದು ಕರ್ನಾಟಕ ರಾಜ್ಯೋತ್ಸವ ಆಚರಣೆಯ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಇದು ಬೆಂಗಳೂರಿಗೆ ಮಾತ್ರ ಸೀಮಿತವಲ್ಲ. ಸಾಮಾಜಿಕ ಅಂತರವಿಲ್ಲದೇ ನಡೆಸುವ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗುತ್ತದೆ ಎಂದು ತಿಳಿಸಲಾಗಿದೆ.

ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸಣ್ಣ ಮಕ್ಕಳು, ಹಿರಿಯ ನಾಗಕರಿಕರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ರಾಜ್ಯೋತ್ಸವದಲ್ಲಿ ಭಾಗವಹಿಸದಂತೆ ಎಚ್ಚರವಹಿಸಬೇಕೆಂದು ತಿಳಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *