ಬೆಂಗಳೂರು: 2025ರ ಡಿಸೆಂಬರ್‌ನಲ್ಲಿ ನಡೆದ ಬೆಳಗಾವಿ ಅಧಿವೇಶನದ ವೇಳೆ ಅನುಮೋದನೆಗೊಂಡು ರಾಜ್ಯಪಾಲರ ಅಂಕಿತಕ್ಕೆ ರವಾನಿಸಿದ್ದ 23 ವಿಧೇಯಕಗಳಲ್ಲಿ 7ಕ್ಕೆ ಅನುಮೋದನೆ ದೊರೆತಿದೆ ಎಂದು ತಿಳಿದುಬಂದಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರ್ಥಿಕ ಮತ್ತು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳನ್ನು ಜಿಬಿಎ ಪದನಿಮಿತ್ತ ಸದಸ್ಯರನ್ನಾಗಿಸುವುದು ಹಾಗೂ ಜಿಬಿಎ ವ್ಯಾಪ್ತಿಗೆ ಬರುವ ಸಂಸದರು, ಮೇಲ್ಮನೆ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರನ್ನೂ ಪ್ರಾಧಿಕಾರದ ಸದಸ್ಯರನ್ನಾಗಿ ಮಾಡುವ ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ಅಧಿನಿಯಮಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ಇದನ್ನೂ ಓದಿ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿ ಕೆಲಸ ನಿರ್ವಹಣೆ ಮಾಡಿದ ಶಿಕ್ಷಕರು
ಜತೆಗೆ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ನಿರ್ದೇಶಕರು ಹಾಗೂ ಜಿಬಿಎ ಮುಖ್ಯ ನಗರ ಯೋಜಕರನ್ನು ಪ್ರಾಧಿಕಾರದ ಪದನಿಮಿತ್ತ ಸದಸ್ಯರನ್ನಾಗಿ ಮಾಡಲು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರಿ (ಎರಡನೇ ತಿದ್ದುಪಡಿ) ಅಧಿನಿಯಮ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, ಬಾಂಬೆ ಸಾರ್ವಜನಿಕ ನ್ಯಾಸ (ಕರ್ನಾಟಕ ತಿದ್ದುಪಡಿ) ಅಧಿನಿಯಮ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಅಧಿನಿಯಮಗಳಿಗೆ ಅನುಮೋದನೆ ನೀಡಿದ್ದಾರೆ.
10ಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಹೊಂದಿರುವ ಸಂಸ್ಥೆಗಳು ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪಿಸುವ ಅಂಶವುಳ್ಳ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ಅಧಿನಿಯಮ ಹಾಗೂ ಬೆಳಗಾವಿ ಅಧಿವೇಶನದ ವೇಳೆ ಮಂಡಿಸಿದ್ದ 6783 ಕೋಟಿ ರೂ.ಗಳ ಎರಡನೇ ಕಂತಿನ ಪೂರಕ ಅಂದಾಜಿಗೆ ಪೂರಕವಾಗಿ ಧನ ವಿನಿಯೋಗ ಅಧಿನಿಯಮಕ್ಕೂ ಸಹಿ ಹಾಕಿದ್ದಾರೆ.
16 ವಿಧೇಯಕಗಳು ರಾಜ್ಯಪಾಲರ ಮುಂದೆ ಬಾಕಿ
ಸಾಮಾಜಿಕ ಬಹಿಷ್ಕಾರ ವಿಧೇಯಕ, ಎಸ್ಸಿ-ಎಸ್ಟಿ ಆಯೋಗದ ವಿಧೇಯಕ, ಎಸ್ಸಿ ಒಳಮೀಸಲು ವಿಧೇಯಕ, ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಸೇರಿದಂತೆ ಇನ್ನೂ 16 ವಿಧೇಯಕಗಳು ರಾಜ್ಯಪಾಲರ ಅಂಕಿತಕ್ಕೆ ಕಾಯುತ್ತಿವೆ. ಇದಲ್ಲದೆ, ಕೆರೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಸಂರಕ್ಷಿತ ವಲಯ (ಬಫರ್ ಜೋನ್) ನಿಗದಿಪಡಿಸುವ ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ’ವೂ ರಾಜ್ಯಪಾಲರ ಅಂಗಳದಲ್ಲೇ ಇದ್ದು, ಕಳೆದ ಸೆ.4 ರಂದು ಕಳುಹಿಸಿದ್ದ ವಿಧೇಯಕವನ್ನು ರಾಜ್ಯಪಾಲರು ಅದೇ ತಿಂಗಳ 15ರಂದು ಸ್ಪಷ್ಟನೆ ಕೇಳಿ ಸರ್ಕಾರಕ್ಕೆ ಹಿಂದಿರುಗಿಸಿದ್ದರು. ಇದುವರೆಗೆ ರಾಜ್ಯಪಾಲರ ಅಂಕಿತ ಬಿದ್ದಿಲ್ಲ.
ಇದನ್ನೂ ನೋಡಿ: ಸಾವಿತ್ರಿಬಾಯಿ ಫುಲೆ ಹುಟ್ಟಿದ ದಿನ : ಅವ್ವ ಕವಿತೆ | ಕವಿ : ಆದಿತ್ಯ , ವಾಚನ : ರಾಗಿಣಿ ಮಾಲೂರು Janashakthi Media
