ಸರ್ಕಾರಗಳು ರೈತರನ್ನು ಮರೆತು ವಿಜ್ಞಾನ, ಕೈಗಾರಿಕೋದ್ಯಮಿಗಳಿಗೆ ಹೆಚ್ಚು ಬೆಂಬಲ ನೀಡುತ್ತಿದೆ: ನಾಗೇಶ ಹೆಗಡೆ

ಬೆಂಗಳೂರು: ಮಂಗಳವಾರ, 10 ಸೆಪ್ಟೆಂಬರ್‌, ಸಂಯುಕ್ತ ಹೋರಾಟ– ಕರ್ನಾಟಕದ ವತಿಯಿಂದ  ಆಯೋಜಿಸಿದ್ದ ‘ನೀರಿನ ಬಿಕ್ಕಟ್ಟು, ಹವಾಮಾನ ಬದಲಾವಣೆ, ಕೃಷಿ ಮೇಲಿನ ಪರಿಣಾಮಗಳು, ನೀರು, ಭೂಮಿ, ಖನಿಜ ಇತ್ಯಾದಿ ನೈಸರ್ಗಿಕ ಸಂಪನ್ಮೂಲಗಳ ಸರಕೀಕರಣ’ ವಿಷಯದ ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ ಪರಿಸರ ವಿಜ್ಞಾನಿ ನಾಗೇಶ ಹೆಗಡೆ ಮಾತನಾಡಿ, ‘ಸರ್ಕಾರಗಳು ರೈತರನ್ನು ಮರೆತು ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೋದ್ಯಮಿಗಳಿಗೆ ಇತ್ತೀಚೆಗೆ ಹೆಚ್ಚು ಬೆಂಬಲ ನೀಡಿ, ರೈತರನ್ನು ಮೂಲೆ ಗುಂಪು ಮಾಡುತ್ತಿವೆ’ ಎಂದು ತಿಳಿಸಿದರು. ವಿಜ್ಞಾನ

‘ಭೂಮಿ, ಪ್ರಕೃತಿಯನ್ನು ಎಂಟು ಸಾವಿರ ವರ್ಷಗಳಿಂದ ಕಾಪಾಡಿಕೊಂಡು ಬಂದ ರೈತರನ್ನು ಮೂಲೆ ಗುಂಪು ಮಾಡುತ್ತಿರುವುದೇ ಪ್ರಕೃತಿ ವಿಕೋಪಕ್ಕೆ ಪ್ರಮುಖ ಕಾರಣ. ಪ್ರಕೃತಿಯನ್ನು ಮಲಿನಗೊಳಿಸುತ್ತಿರುವ ಖಾಸಗಿ ಕಂಪನಿಗಳಿಗೆ, ಕೃಷಿ ಭೂಮಿ ಸೇರಿದಂತೆ ನೈಸರ್ಗಿಕ ಸಂಪತ್ತನ್ನು ಇನ್ನೂ ಹೆಚ್ಚು ಹೆಚ್ಚು ನೀಡಲಾಗುತ್ತಿದೆ. ಬೃಹತ್‌ ನಿರ್ಮಾಣಗಳಿಗೆ ದೊಡ್ಡ ಯಂತ್ರಗಳನ್ನು ಬಳಕೆ ಮಾಡುತ್ತಿರುವುದರಿಂದ ಭಾರಿ ಪ್ರಮಾಣದ ಇಂಗಾಲ ಪರಿಸರ ಸೇರುತ್ತಿದೆ’ ಎಂದರು.

‘15 ವರ್ಷಗಳಿಂದೀಚೆಗೆ ವಿಶ್ವದಾದ್ಯಂತ ಅನೇಕ ನದಿ, ಸರೋವರಗಳು ಬತ್ತಿಹೋಗುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ ಏಕಾಏಕಿ ಸಂಭವಿಸುತ್ತಿವೆ. ಕಾಡ್ಗಿಚ್ಚು, ಹಿಮಪಾತ, ಸಮುದ್ರ ಮಟ್ಟ ಏರುವ ಜೊತೆಗೆ ಹವಾಮಾನ ಏರುಪೇರಾಗುತ್ತಿದೆ. ಇವೆಲ್ಲಕ್ಕೂ ಮನುಷ್ಯನೇ ಕಾರಣ’ ಎಂದು ಹೇಳಿದರು.

ಕೃಷಿ ಫಲವತ್ತತೆ ಶೇ 36ರಷ್ಟು ಇಳಿಕೆ: ಪ್ರಕಾಶ್ ಕಮ್ಮರಡಿ ‘ರಾಜ್ಯದಲ್ಲಿ ಕೃಷಿ ಭೂಮಿ ಫಲವತ್ತತೆ ಶೇ 36ರಷ್ಟು ಇಳಿಕೆಯಾಗಿದೆ. ಕೃಷಿ ಹಿಡುವಳಿಗಳು ಸಣ್ಣದಾಗುತ್ತಿವೆ. ಕೃಷಿಗೆ ಆದ್ಯತೆ ಕಡಿಮೆಯಾಗುತ್ತಿದ್ದು ಖಾಸಗಿ ಕಂಪನಿಗಳ ತಾಳಕ್ಕೆ ಸರ್ಕಾರಗಳು ಕುಣಿಯುತ್ತಿವೆ’ ಎಂದು ಕೃಷಿ ಅರ್ಥಶಾಸ್ತ್ರಜ್ಞ ಪ್ರಕಾಶ್‌ ಕಮ್ಮರಡಿ ಅಭಿಪ್ರಾಯಪಟ್ಟರು. ‘ನೈಸರ್ಗಿಕ ಸಂಪನ್ಮೂಲವನ್ನು ತೆಗೆದು ರಫ್ತು ಮಾಡಿದರೆ ದೇಶದ ಜಿಡಿಪಿ ಹೆಚ್ಚಾಗುತ್ತದೆ ಎನ್ನಲಾಗುತ್ತಿದೆ. ಆದರೆ ಇದರಿಂದ ಜಿಡಿಪಿ ನಷ್ಟವಾಗುತ್ತದೆ ಎಂದು ತೋರಿಸುವಂತಾಗಬೇಕು. ದೇಶಕ್ಕೆ ಹೊಸ ಜಿಡಿಪಿ ಪರಿಕಲ್ಪನೆ ಬೇಕಿದೆ’ ಎಂದರು.

ಇದನ್ನೂ ಓದಿ: ಇರುವೆಯ ಕೌತುಕದ ಬದುಕು!

‘ಜಾಗತಿಕ ತಾಪಮಾನ ಹೆಚ್ಚಳದಿಂದ ಕೃಷಿ ಮೇಲಾಗುತ್ತಿರುವ ಪರಿಣಾಮ ಕುರಿತು ಚರ್ಚಿಸಲು ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕು. ಈ ಪರಿಣಾಮದ ತಡೆಗೆ ವಿಶೇಷ ಯೋಜನೆ ರೂಪಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕು’ ಎಂದು ವಿಚಾರಸಂಕಿರಣದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರ ಬಿ.ಆರ್. ಪಾಟೀಲ, ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಘಟಕದ ಅಧ್ಯಕ್ಷ ಸಿದ್ದನಗೌಡ ಪಾಟೀಲ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕರ್ನಾಟಕ ಪ್ರಾಂತ್ಯರೈತ ಸಂಘದ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ, ಜನಾಂದೋಲನ ಮಹಾಮೈತ್ರಿಯ ಸಂಚಾಲಕ ಎಸ್‌.ಆರ್‌. ಹಿರೇಮಠ , ಕರ್ನಾಟಕ ಜನಶಕ್ತಿಯ ನೂರ್‌ ಶ್ರೀಧರ್‌, ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌ ವರಲಕ್ಷ್ಮಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳ ನೂರಾರು ಹೋರಾಟಗಾರರು ಭಾಗವಹಿಸಿದ್ದರು.

 

ಇದನ್ನೂ ನೋಡಿ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ : ಬೀದರ್‌ನಿಂದ ಚಾಮರಾಜನಗರ ವರೆಗೆ ಮಾನವ ಸರಪಳಿ ನಿರ್ಮಾಣ

Donate Janashakthi Media

Leave a Reply

Your email address will not be published. Required fields are marked *