-ಲಿಂಗರಾಜು ಮಳವಳ್ಳಿ
ಬೆಂಗಳೂರು ನಗರದ ಏಳು ಬಿಡಿಎ ವಾಣಿಜ್ಯ ಕಾಂಪ್ಲೆಕ್ಸ್ ಗಳನ್ನು ಮರು ನಿರ್ಮಾಣ ಮಾಡುವ ಹೆಸರಿನಲ್ಲಿ ಖಾಸಗಿ ಕಂಪನಿಗಳಿಗೆ ಗುತ್ತಿಗೆಗೆ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಇಂದಿರಾನಗರ ವಾಣಿಜ್ಯ ಸಂಕೀರ್ಣವನ್ನು Mavrick Holidings Investments Pvt Ltd ಕಂಪನಿಗೂ ಹಾಗೂ ಕೋರಮಂಗಲ, ಹೆಚ್‌ಎಸ್‌ಆರ್ ಬಡಾವಣೆ, ಆರ್.ಟಿ.ನಗರ, ಆಸ್ಟಿನ್ ಟೌನ್, ಸದಾಶಿವನಗರ ಮತ್ತು ವಿಜಯನಗರ ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು M-FAR Developers Pvt Ltd ಕಂಪನಿಗೆ ಸಾರ್ವಜನಿಕ – ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಮರು ನಿರ್ಮಾಣ ಮಾಡುವ ಗುತ್ತಿಗೆ ನೀಡಲಾಗಿದೆ.
ಈ ಏಳೂ ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಟೆಂಡರ್ ಪಡೆದ ಖಾಸಗಿ ಕಂಪನಿಗಳು ಮರು ನಿರ್ಮಾಣ ಮಾಡಿ, ಅದರಲ್ಲಿ 70:30 ಅನುಪಾತದಲ್ಲಿ 30 ವರ್ಷಕ್ಕೆ ಗುತ್ತಿಗೆ ನೀಡುವುದೆಂದೂ; ಮುಂದಿನ 30 ವರ್ಷಕ್ಕೆ ಗುತ್ತಿಗೆ ಅವಧಿಯನ್ನು ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ಮದ್ಯಪಾನ ಮಾಡಿ ವಾಹನ ಚಲಾಯಿಸಿದ 26 ಸ್ಕೂಲ್ ಬಸ್ ಚಾಲಕರ ಬಂಧನ; ಪ್ರಕರಣ ದಾಖಲು
ಮೇವರಿಕ್ – ಎಂಫಾರ್ ಯಾರು?
ಮೇವರಿಕ್ ಕಂಪನಿಯು ಬೆಂಗಳೂರಿನ ಬಿಜೆಪಿ ಶಾಸಕರೊಬ್ಬರಿಗೆ ಸೇರಿದ್ದರೆ, ಎಂ-ಫಾರ್ ಕಂಪನಿಯಲ್ಲಿ ಕಾಂಗ್ರೆಸ್ ನ ಮಂತ್ರಿಯೊಬ್ಬರು ಹಾಗು ಕೆಲ ಶಾಸಕರು ಹೂಡಿಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ 2008ರಲ್ಲೇ ಆರಂಭವಾದ ಈ ಪ್ರಕ್ರಿಯೆ ಇದೀಗ ತರಾತುರಿಯಲ್ಲಿ ಜಾರಿಯಾಗಿದೆ. ಈಗಾಗಲೇ ಸದಾಶಿವ ನಗರ, ವಿಜಯ ನಗರ ಬಿಡಿಎ ಕಾಂಪ್ಲೆಕ್ಸ್ ನ್ನು ಕೆಡಹುವ ಕೆಲಸವೂ ನಡೆದಿದೆ. ಎಲ್ಲ ವಾಣಿಜ್ಯ ಸಂಕೀರ್ಣಗಳ ಎಲ್ಲ ವರ್ತಕರಿಗೆ ಮಳಿಗೆಗಳನ್ನು ಒಂದು ತಿಂಗಳಲ್ಲಿ ಖಾಲಿ ಮಾಡುವಂತೆ ನೋಟೀಸ್ ಕೂಡ ನೀಡಲಾಗಿದೆ.
2008ರಲ್ಲಿ ಇಂದಿರಾನಗರ ಬಿಡಿಎ ವಾಣಿಜ್ಯ ಸಂಕೀರ್ಣವನ್ನು ಮರು ನಿರ್ಮಾಣ ಮಾಡಲು ಪಿಪಿಪಿ ಮಾದರಿಯಲ್ಲಿ ಮೇವರಿಕ್ ಕಂಪನಿಗೆ ಗುತ್ತಿಗೆಯ ಟೆಂಡರ್ ನೀಡಲಾಗಿತ್ತು. ಆದರೆ ಅಲ್ಲಿನ ನಿವಾಸಿಗಳ ವಿರೋಧದ ಕಾರಣ, ಈ ಪ್ರಕ್ರಿಯೆ ಅಲ್ಲಿಗೆ ನಿಂತಿತ್ತು. ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಅಂದರೆ 28 ಏಪ್ರಿಲ್ 2022 ರಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಹಿಂದಿನ ಟೆಂಡರ್ ಅನ್ನು ಮುಂದುವರೆಸಲು ಕ್ರಮಕೈಗೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಅದರಂತೆ ಮುಂದುವರಿದು, 2023 ಜೂನ್ ನಂತರ ಬಂದ ಹೊಸದಾಗಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ, ಅಂದರೆ 26 ಸೆಪ್ಟೆಂಬರ್ 2023 ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಇವರು ಬಿಡಿಎ ಆಯುಕ್ತರಿಗೆ ಪತ್ರ ಬರೆದು, ಸದರಿ ಟೆಂಡರ್ ಅನ್ನು ಮುಂದುವರಿಸಿ, ಸದರಿ ಯೋಜನೆಯನ್ನು ಕಾರ್ಯಗತಗೊಳಿಸುವಂತೆ ಸೂಚಿಸಿದ್ದಾರೆ.
ಹೀಗಾಗಿ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಈ ಯೋಜನೆಗೆ ಅಧಿಕೃತ ಮುದ್ರೆ ಒತ್ತಿವೆ ಎಂಬುದು ಸ್ಪಷ್ಟ. ಮಾತ್ರವಲ್ಲದೇ 2008ರಿಂದ 2024ರವರೆಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಈ ಯೋಜನೆಯನ್ನು ತಾತ್ವಿಕವಾಗಿ ವಿರೋಧಿಸಿಲ್ಲ, ಜತೆಗೆ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಿದ್ದವು.
ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆದ ತೀರ್ಮಾನವು ಗೊಂದಲಮಯವೂ, ಸ್ವಾರಸ್ಯಕರವೂ ಆಗಿದೆ. ನಡಾವಳಿಯಲ್ಲಿ ಹೀಗೆ ಹೇಳಲಾಗಿದೆ. ‘2017-18ರಲ್ಲಿ ಇಂದಿರಾನಗರ ಬಿಡಿಎ ವಾಣಿಜ್ಯ ಸಂಕೀರ್ಣವನ್ನು ಮೇವರಿಕ್ ಕಂಪನಿಗೂ, ಕೋರಮಂಗಲ, ಹೆಚ್‌ಎಸ್‌ಆರ್ ಬಡಾವಣೆ, ಆರ್.ಟಿ.ನಗರ, ಆಸ್ಟಿನ್ ಟೌನ್, ಸದಾಶಿವನಗರ ಮತ್ತು ವಿಜಯನಗರ ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು M-FAR Developers Pvt Ltd ಕಂಪನಿಗೆ ಸಾರ್ವಜನಿಕ – ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಮರು ನಿರ್ಮಾಣ ಮಾಡುವ ಗುತ್ತಿಗೆ ನೀಡಲಾಗಿದ್ದು, ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸದರಿ ಟೆಂಡರ್ ಅನ್ನು ತಡೆಹಿಡಿಯಲು ಆದೇಶಿಸಲಾಗಿತ್ತು. ಆದರೆ ತಡೆಹಿಡಿಯಲಾದ / ರದ್ದುಪಡಿಸಲಾದ ಆದೇಶವನ್ನು ಟೆಂಡರ್ ಪಡೆದ ಕಂಪನಿಗಳಿಗೆ ಮಾಹಿತಿ ತಿಳಿಸಲಾಗಿರುವುದಿಲ್ಲ. ಆದಕಾರಣ, ಇದೇ ಟೆಂಡರ್ ಅನ್ನು ಮುಂದುವರಿಸಿ, ಯೋಜನೆಯನ್ನು ಕಾರ್ಯಗತಗೊಳಿಸಲು ಆದೇಶಿಸಲಾಗಿದೆ’ ಎಂದು ಹೇಳಲಾಗಿದೆ.
ಅಂದರೆ ಈ ತೀರ್ಮಾನವು ಹಿಂದಿನ ಸರ್ಕಾರದ ಅವಧಿಯಲ್ಲೇ ಆಗಿದ್ದು, ತಮ್ಮದೇನು ಪಾತ್ರವಿಲ್ಲ ಎಂಬಂತೆ ಬಿಂಬಿಸಿಕೊಳ್ಳಲು ಬೊಮ್ಮಾಯಿ ಸರ್ಕಾರ ಯತ್ನಿಸಿದರೆ, ಇದೀಗ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಇದು ಬಿಜೆಪಿ ಸರ್ಕಾರದ ಅವಧಿಯಲ್ಲೇ ಆಗಿರುವ ಆದೇಶ ಎಂದು ನುಣುಚಿಕೊಳ್ಳುವ ಪ್ರಯತ್ನ ನಡೆಸಿದೆ.
20 ಸಾವಿರ ಕೋಟಿ ರೂಪಾಯಿ ಆಸ್ತಿ ಖಾಸಗಿಗೆ!
ಏಳೂ ಬಿಡಿಎ ಕಾಂಪ್ಲೆಕ್ಸ್ಗಳ ಒಟ್ಟು ವಿಸ್ತೀರ್ಣ 25 ಎಕರೆಯಷ್ಟಿದೆ. ಈ ಆಸ್ತಿಯ ಮೌಲ್ಯ ಸುಮಾರು 20 ಸಾವಿರ ಕೋಟಿ ಬಾಳುತ್ತದೆ! ಇಂತಹ ಸಾರ್ವಜನಿಕರ ಸ್ವತ್ತನ್ನು ಖಾಸಗಿಯವರಿಗೆ ನೀಡುವ ತೀರ್ಮಾನದ ಹಿಂದೆ ನೂರಾರು ಕೋಟಿ ರೂಪಾಯಿಗಳ ಕಿಕ್ ಬ್ಯಾಕ್ ವ್ಯವಹಾರ ನಡೆದಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಈ ಏಳೂ ಬಿಡಿಎ ಕಾಂಪ್ಲೆಕ್ಸ್ಗಳು ಆಯಕಟ್ಟಿನ ಜಾಗದಲ್ಲಿವೆ. ಉದಾಹರಣೆಗೆ ಹೆಚ್‌ಎಸ್‌ಆರ್ ಮತ್ತು ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್ ಇರುವ ಜಾಗ ಪ್ರಸ್ತುತ ಚದರ ಅಡಿಗೆ 50 ಸಾವಿರ ರೂಪಾಯಿವರೆಗೂ ಇದೆ. ಹೀಗಾಗಿ ಇಂತಹ ಬೆಲೆಬಾಳುವ ಆಸ್ತಿಗಳನ್ನು ಖಾಸಗಿಯವರಿಗೆ ವಹಿಸುವುದು ಅಕ್ಷರಶಃ ಆತ್ಮಾಹುತಿ ನಿರ್ಧಾರವಾಗುತ್ತದೆ. ಮಾತ್ರವಲ್ಲದೇ ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡುತ್ತಾ ಹೋದಲ್ಲಿ ಭವಿಷ್ಯದ ಪೀಳಿಗೆಗೆ ಆಸ್ಪತ್ರೆ, ಶಾಲೆ, ಆಟದ ಮೈದಾನ ಇತ್ಯಾದಿಗಳಿಗಾಗಿ ಜಮೀನುಗಳೇ ಇಲ್ಲದ ಸ್ಥಿತಿ ನಿರ್ಮಾಣವಾಗಬಹುದು.
ಶಾಪಿಂಗ್ ಮಾಲ್ ಕಟ್ಟಲು ಬಿಡಿಎ ಗೆ ಸಾಮರ್ಥ್ಯ ಇಲ್ಲವೇ?
ಬಿಡಿಎ ಕಾಂಪ್ಲೆಕ್ಸ್ಗಳನ್ನು ಸರಿಯಾಗಿ ನಿರ್ವಹಣೆ ಮಾಡಿದ್ದೇ ಆದಲ್ಲಿ ಇವುಗಳಿಂದಲೇ ಸಾಕಷ್ಟು ಆದಾಯವನ್ನು ಗಳಿಸಲು ಸಾಧ್ಯವಿದೆ. ಆದಾಯ ಸೋರಿಕೆ ಮತ್ತು ಲಂಚಗುಳಿತನವನ್ನು ನಿಯಂತ್ರಣಕ್ಕೆ ತರಲು ಕಟ್ಟುನಿಟ್ಟಿನ ಕ್ರಮ ಆಗಬೇಕು. ಉದಾಹರಣೆಗೆ ಹೆಚ್‌ಎಸ್‌ಆರ್ ಬಿಡಿಎ ಕಾಂಪ್ಲೆಕ್ಸ್ ಸಾಕಷ್ಟು ಮಳಿಗೆಗಳು ಖಾಲಿ ಬಿದ್ದಿವೆ. ಇತ್ತೀಚೆಗೆ ಈ ವಾಣಿಜ್ಯ ಸಂಕೀರ್ಣವನ್ನು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ದುರಸ್ತಿಗೊಳಿಸಲಾಗಿದೆ. ಹೀಗಿದ್ದೂ ಖಾಸಗಿ ಕಂಪನಿಗೆ ಪರಬಾರೆ ಮಾಡುವ ತೀರ್ಮಾನದ ಹಿಂದೆ ಸಾರ್ವಜನಿಕ ಹಿತಾಸಕ್ತಿಯಂತೂ ಕಾಣುತ್ತಿಲ್ಲ! ಬದಲಾಗಿ ವ್ಯಕ್ತಿಗತ ಹಿತಾಸಕ್ತಿಗಳು ಕೆಲಸ ಮಾಡಿವೆ.
ಶಿಥಿಲಾವಸ್ಥೆಯಲ್ಲಿರುವ ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಮರು ನಿರ್ಮಾಣ ಮಾಡುವುದೇ ಆದಲಿ,್ಲ ಸರ್ಕಾರವೇ ಬ್ಯಾಂಕ್ ಸಾಲ ಪಡೆದು ಮರು ನಿರ್ಮಾಣ ಮಾಡಲು ಸಾಧ್ಯವಿದೆ. ಇದರ ಬದಲು ಖಾಸಗಿ ಕಂಪನಿಗೆ ಕೊಡುವ ಉದ್ದೇಶವು ಜನಹಿತದ ತೀರ್ಮಾನ ಆಗಲಾರದು. ಜೊತೆಗೆ ಹೆಚ್‌ಎಸ್‌ಆರ್ ಮತ್ತು ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್ಗಳು ಸೇರಿದಂತೆ ಕೆಲ ಬಿಡಿಎ ಕಾಂಪ್ಲೆಕ್ಸ್ಗಳು ಇನ್ನೂ ಹತ್ತಾರು ವರ್ಷ ಬಾಳಿಕೆ ಬರುವಷ್ಟು ಸದೃಢವಾಗಿವೆ ಮತ್ತು ಸುಸ್ಥಿತಿಯಲ್ಲಿವೆ. ಹೀಗಿರುವಾಗ ಒಡೆದು ಕಟ್ಟುವುದಾದರೂ ಏಕೆ? ಎಂಬುದನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಾರ್ವಜನಿಕರಿಗೆ ಸ್ಪಷ್ಟನೆ ನೀಡುವ ಗೋಜಿಗೆ ಹೋಗಿಲ್ಲ.
ಬಿಡಿಎ ವಸತಿ ಬಡಾವಣೆ ನಿರ್ಮಾಣ ಮಾಡುವಾಗ ನಿವಾಸಿಗಳ ಅನುಕೂಲಕ್ಕಾಗಿ ಅಲ್ಲಿನ ಸಿ.ಎ.ನಿವೇಶನಗಳಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಾಣ ಮಾಡಲಾಗಿತ್ತು. ಹೀಗಿರುವಾಗ ಬಡಾವಣೆಯ ನಿವಾಸಿಗಳ ಅಭಿಪ್ರಾಯವನ್ನೂ ಸಂಗ್ರಹಿಸದೇ, ಜನರನ್ನು ಕತ್ತಲಲ್ಲಿ ಇಟ್ಟು ನಾಲ್ಕು ಗೋಡೆಯ ಮಧ್ಯೆ ಏಕಾಏಕಿ ತೀರ್ಮಾನ ಮಾಡುವುದು ಜನವಿರೋಧಿ ತೀರ್ಮಾನವಾಗುತ್ತದೆ. ಜೊತೆಗೆ ಕಾನೂನಿನ ಉಲ್ಲಂಘನೆಯೂ ಆಗುತ್ತದೆ.
ಉದಾಹರಣೆಗೆ, ಕೋರಮಂಗಲ ಬಿಡಿಎ ವಾಣಿಜ್ಯ ಸಂಕೀರ್ಣದಲ್ಲಿ ಬೆಸ್ಕಾಂ, ರೈಲ್ವೆ, ಉಪ ನೋಂದಣಾಧಿಕಾರಿ ಕಚೇರಿಗಳು ಇರುವುದರಿಂದ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಿದೆ. ಜೊತೆಗೆ ಬಿಡಿಎ ವಾಣಿಜ್ಯ ಸಂಕೀರ್ಣಗಳಲ್ಲಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಸರಕುಗಳನ್ನು ಖರೀದಿಸಬಹುದಾಗಿದೆ. ಅಷ್ಟು ಮಾತ್ರವಲ್ಲದೇ, ಅಲ್ಲಿನ ನಿವಾಸಿಗಳಿಗೆ ಬಿಡಿಎ ವಾಣಿಜ್ಯ ಸಂಕೀರ್ಣಗಳು, ಕೇವಲ ವಾಣಿಜ್ಯ ವ್ಯವಹಾರದ ಕೇಂದ್ರವಾಗಿರದೇ, ಬಹಳ ಧೀರ್ಘಕಾಲದಿಂದ ಭಾವನಾತ್ಮಕ ಸಂಬಂಧವನ್ನು ಬೆಸೆದಿವೆ. ಇದು ಸಾಧ್ಯವಾಗಿದ್ದು ಸಾರ್ವಜನಿಕ ಸ್ವತ್ತಾಗಿದ್ದ ಕಾರಣಕ್ಕೆ. ಜನರಲ್ಲಿ ಇದು ನಮ್ಮದು ಎಂಬ ಭಾವನೆ ಮೂಡಿರುತ್ತದೆ. ಹೀಗಾಗಿಯೇ ಬೆಂಗಳೂರು ನಗರದ ನಾಗರಿಕರು ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ. ಹೀಗಿರುವಾಗ ಸರ್ಕಾರದ ಈ ತೀರ್ಮಾನ ಬಿಡಿಎ ಕಾಂಪ್ಲೆಕ್ಸ್ ಜತೆಗಿನ ಜನರ ಭಾವನಾತ್ಮಕ ಸಂಬಂಧವನ್ನು ನಿರ್ದಯವಾಗಿ ಕತ್ತರಿಸಿಹಾಕುವ ಕಟುಕತನದ ತೀರ್ಮಾನವಲ್ಲವೇ!
ಸಾರ್ವಜನಿಕ – ಖಾಸಗಿ ಸಹಭಾಗಿತ್ವ (Public Private Partnership) ಎಂಬುದು ಹೆಸರಿಗಷ್ಟೇ ಸಹಭಾಗಿತ್ವ. ಬದಲಾಗಿ ಇದು ಸಾರ್ವಜನಿಕ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಪ್ರಕ್ರಿಯೆಯೇ ಆಗಿದೆ. ಮುಖ್ಯಮಂತ್ರಿಗಳು ತಮ್ಮ ಬಜೆಟ್‌ನಲ್ಲೇ ಪಿಪಿಪಿ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ. ಬಿಡಿಎ ಕಾಂಪ್ಲೆಕ್ಸ್ ಮಾತ್ರವಲ್ಲದೇ ಹಲವು ರಂಗಗಳಲ್ಲಿ ಪಿಪಿಪಿ ಯೋಜನೆಯನ್ನು ತರುವುದನ್ನು ಪ್ರಸ್ತಾಪಿಸಿದ್ದಾರೆ. ಸರ್ಕಾರಿ ಆಸ್ತಿಗಳ ಮಾರಾಟಕ್ಕೆ ನಗದೀಕರಣ ಯೋಜನೆಯನ್ನೂ ತರಲು ಹೊರಟಿದ್ದಾರೆ. ಹೀಗಾಗಿ ಸರ್ಕಾರದ ಆರ್ಥಿಕ ನೀತಿಗಳ ಭಾಗವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ ಎಂಬುದು ಸ್ಪಷ್ಟ. ರಾಜ್ಯದ ಜನರ ತೆರಿಗೆ ಹಣದಿಂದ ಕಟ್ಟಿ ಬೆಳೆಸಲಾದ ಆಸ್ತಿ, ಸಂಪತ್ತನ್ನು ಖಾಸಗಿಯವರಿಗೆ ಒತ್ತೆ ಇಡುವ ಜನವಿರೋಧಿಯನ್ನು ಒಪ್ಪಲಾಗದು.
ಪಿಪಿಪಿ ಮಾದರಿ ಮತ್ತು ನಗದೀಕರಣ ಯೋಜನೆಗಳು ಕೇಂದ್ರದ ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಿಂದಲೂ ಅನುಸರಿಕೊಂಡು ಬಂದ ನೀತಿಗಳೇ ಆಗಿವೆ. ಇವು ನವ ಉದಾರಿಕೀರಣ ನೀತಿಗಳ ಉಪ ಉತ್ಪನ್ನಗಳಷ್ಟೆ. ಇಂತಹ ಕಾರ್ಪೋರೇಟ್ ಬಂಡವಾಳದಾರರ ತುಷ್ಟೀಕರಣದ ಮಾದರಿಗಳನ್ನೇ ರಾಜ್ಯದ ಕಾಂಗ್ರೆಸ್ ಸರ್ಕಾರವೂ ಅನುಸರಿಸುತ್ತಿರುವುದು ವಿಪರ್ಯಾಸ.
ಇದನ್ನೂ ನೋಡಿ: ಏಕಾಏಕಿ ಕತ್ತು ಹಿಡಿದು ತಳ್ಳಿದರೆ ನಮ್ಮ ಬದುಕು ಬೀದಿಗೆ ಬರುತ್ತೆ – ಬಿಡಿಎ ಖಾಸಗೀಕರಣದ ವಿರುದ್ಧ ವರ್ತಕರ ಆಕ್ರೋಶ