ಕೆಪಿಟಿಸಿಎಲ್‌ ನೌಕರರು, ಅಧಿಕಾರಿಗಳ ವೇತನ ಶೇ 20ರಷ್ಟು ಪರಿಷ್ಕರಣೆಗೆ ಸರ್ಕಾರ ಒಪ್ಪಿಗೆ

ಬೆಂಗಳೂರು: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ಮತ್ತು ವಿದ್ಯುತ್‌ ಸರಬರಾಜು ಕಂಪನಿಗಳ ನೌಕರರು ಹಾಗೂ ಅಧಿಕಾರಿಗಳ ವೇತನವನ್ನು ಈಗಿರುವ ವೇತನದ ಮೇಲೆ ಶೇ 20 ರಷ್ಟು ಪರಿಷ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ 2022 ರ ಏಪ್ರಿಲ್‌ನಿಂದ ಅನ್ವಯವಾಗುವಂತೆ ವೇತನ ಪರಿಷ್ಕರಿಸಲು ಇಂಧನ ಸಚಿವ ವಿ.ಸುನಿಲ್‌ಕುಮಾರ್ ಅವರು ಇಲಾಖೆ ಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ.

ಸಿಎಂರೊಟ್ಟಿಗೆ ಸಮಾಲೋಚಿಸಿ ವೇತನ ಪರಿಷ್ಕರಣೆಗೆ ಒಪ್ಪಿಗೆ :
ವೇತನವನ್ನು ಶೇ 22 ರಷ್ಟು ಹೆಚ್ಚಳ ಮಾಡುವಂತೆ ಒತ್ತಾಯಿಸಿ ಗುರುವಾರದಿಂದ ರಾಜ್ಯದಾದ್ಯಂತ ಎಲ್ಲ ನೌಕರರು ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಈ ವಿಚಾರವಾಗಿ ಇಂಧನ ಸಚಿವ ವಿ. ಸುನಿಲ್‌ಕುಮಾರ್ ಅವರು ಕೆಪಿಟಿಸಿಎಲ್‌ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳ ಜತೆಗೆ ಮಂಗಳವಾರ ಚರ್ಚೆ ನಡೆಸಿ, ಬಳಿಕ ಮುಖ್ಯಮಂತ್ರಿಯವರೊಂದಿಗೆ ಸಮಾಲೋಚನೆ ನಡೆಸಿ ವೇತನ ಪರಿಷ್ಕರಣೆಗೆ ಒಪ್ಪಿಗೆ ಸೂಚಿಸಲಾಯಿತು.

ಇದನ್ನೂ ಓದಿ : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳೆಯಿಂದ ಕೆಪಿಟಿಸಿಎಲ್‌ ನೌಕರರಿಂದ ಮುಷ್ಕರ

ಮುಷ್ಕರ ಕೈಬಿಟ್ಟ ಕೆಪಿಟಿಸಿಎಲ್‌ ನೌಕರರು:
ನೌಕರರ ಬೇಡಿಕೆಗಳ ಕುರಿತು ಬುಧವಾರ ರಾತ್ರಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ನೌಕರರ ಸಂಘದ ಪದಾಧಿಕಾರಿಗಳು ಚರ್ಚೆ ನಡೆಸಿದರು. ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ, ಗುರುವಾರ ಕರ್ತವ್ಯಕ್ಕೆ ಎಂದಿನಂತೆ ನೌಕರರು ಹಾಜರಾಗಲಿದ್ದಾರೆ’ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *