ಕೊನೆಗೂ ಸಂಸತ್ತಿನ ವಿಶೇಷ ಅಧಿವೇಶನದ ಅಜೆಂಡಾ ಬಹಿರಂಗಪಡಿಸಿದ ಸರ್ಕಾರ; ಏನೇನಿದೆ ಇಲ್ಲಿದೆ ಮಾಹಿತಿ

ನವದೆಹಲಿ: ಮುಂದಿನ ವಾರ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದ ಅಜೆಂಡಾವನ್ನು ಕೇಂದ್ರ ಸರ್ಕಾರ ಕೊನೆಗೂ ಬಹಿರಂಗಪಡಿಸಿದೆ. ಮುಖ್ಯ ಚುನಾವಣಾ ಆಯುಕ್ತರು (CEC) ಮತ್ತು ಇತರ ಚುನಾವಣಾ ಆಯುಕ್ತರ ನೇಮಕದ ಮಸೂದೆ ಸೇರಿದಂತೆ ಒಟ್ಟು ನಾಲ್ಕು ವಿಧೇಯಕಗಳನ್ನು ಸರ್ಕಾರ ಪಟ್ಟಿ ಮಾಡಿದೆ. ವಿಶೇಷ ಅಧಿವೇಶನವು ಸೆಪ್ಟೆಂಬರ್ 18 ಮತ್ತು 22 ರ ನಡುವೆ ನಡೆಯಲಿದೆ.

ವಿಶೇಷ ಅಧಿವೇಶನದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ – 2023ಯನ್ನುಮಂಡಿಸುವುದಾಗಿ ಸರ್ಕಾರ ಹೇಳಿದೆ. ಈ ವರೆಗೆ ಚುನಾವಣಾ ಆಯುಕ್ತರನ್ನು ಪ್ರಧಾನಮಂತ್ರಿ ಅಧ್ಯಕ್ಷರಾಗಿರುವ ಸಮಿತಿ ನೇಮಿಸುತ್ತಿತ್ತು. ಈ ಸಮಿತಿಯಲ್ಲಿ ಪ್ರಧಾನಮಂತ್ರಿ ನೇಮಿಸಿದ ಕೇಂದ್ರ ಸಚಿವರು, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರು (CJI) ಇರುತ್ತಿದ್ದರು.

ಇದನ್ನೂ ಓದಿ: ಸೋಲಾರ್ ಪ್ರಕರಣದ ದೂರುದಾರರ ಪತ್ರದಲ್ಲಿ ಉಮ್ಮನ್ ಚಾಂಡಿ ಹೆಸರಿದೆ: ಮಧ್ಯವರ್ತಿ ಟಿ.ಜಿ.ನಂದಕುಮಾರ್ ಆರೋಪ

ಹೊಸ ಮಸೂದೆಯ ಮೂಲಕ ಸಮಿತಿಯಿಂದ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಡಲು ಸರ್ಕಾರ ಪ್ರಯತ್ನಸುತ್ತಿದೆ. ಕೇಂದ್ರ ಸರ್ಕಾರದ ಈ ಪ್ರಯತ್ನಕ್ಕೆ  ಪ್ರತಿಪಕ್ಷ ಇಂಡಿಯಾ ಒಕ್ಕೂಟ ಸೇರಿದಂತೆ ಹಲವಾರು ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಅಧಿವೇಶನದ ಅಜೆಂಡಾ ಬಹಿರಂಗಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರು, “ಅಂತಿಮವಾಗಿ ಶ್ರೀಮತಿ ಸೋನಿಯಾ ಗಾಂಧಿಯವರು ಪ್ರಧಾನಿಗೆ ಪತ್ರ ಬರೆದು ಒತ್ತಡ ಹೇರಿದ ನಂತರ ಸೆಪ್ಟೆಂಬರ್‌ 18 ರಿಂದ ಪ್ರಾರಂಭವಾಗುವ ಸಂಸತ್ತಿನ ವಿಶೇಷ 5 ದಿನಗಳ ಅಧಿವೇಶನದ ಕಾರ್ಯಸೂಚಿಯನ್ನು ಘೋಷಿಸಲು ಮೋದಿ ಸರ್ಕಾರವು ಒಪ್ಪಿಕೊಂಡಿದೆ” ಎಂದು ಹೇಳಿದ್ದಾರೆ.

“ಈಗ ಪ್ರಕಟಿಸಲಾದ ಕಾರ್ಯಸೂಚಿಯಲ್ಲಿ ಹೆಚ್ಚಿನ ಗೊಂದಲಗಳಿವೆ. ಇವೆಲ್ಲವನ್ನೂ ನವೆಂಬರ್‌ನಲ್ಲಿ ಚಳಿಗಾಲದ ಅಧಿವೇಶನದವರೆಗೆ ಕಾಯಬಹುದಿತ್ತು. ಇದಲ್ಲದೆ ಬೇರೇನೋ ಇದೆ ಎಂದು ನನಗೆ ಖಾತ್ರಿಯಿದೆ. ಪರದೇ ಕೆ ಪೀಚೆ ಕುಚ್ ಔರ್ ಹೈ (ಹಿಡನ್ ಅಜೆಂಡಾ ಇದೆ)! ಅದೇನೇ ಇರಲಿ, ಇಂಡಿಯಾ ಒಕ್ಕೂಟದ ಪಕ್ಷಗಳು ಕಪಟ CEC ಮಸೂದೆಯನ್ನು ಗಟ್ಟಿಯಾಗಿ ವಿರೋಧಿಸುತ್ತವೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ : ರಾಜ್ಯದ ಸಂಸದರ ನಿವಾಸಕ್ಕೆ ಮುತ್ತಿಗೆ ಕರವೇ ಎಚ್ಚರಿಕೆ

ಈ ವರ್ಷದ ಮಾರ್ಚ್‌ನಲ್ಲಿ, ಭಾರತದ ಸರ್ವೋಚ್ಚ ನ್ಯಾಯಾಲಯವು ಪ್ರಧಾನ ಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು CJI ಒಳಗೊಂಡಿರುವ ಉನ್ನತ ಅಧಿಕಾರ ಸಮಿತಿಯು CEC ಮತ್ತು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಬೇಕು ಎಂದು ತೀರ್ಪು ನೀಡಿತ್ತು.

ವಿಶೇಷ ಅಧಿವೇಶನದಲ್ಲಿ ನಿಯತಕಾಲಿಕಗಳ ಪತ್ರಿಕಾ ಮತ್ತು ನೋಂದಣಿ ಮಸೂದೆ – 2023, ವಕೀಲರ (ತಿದ್ದುಪಡಿ) ಮಸೂದೆ-2023 ಯನ್ನು ಸರ್ಕಾರ ಪರಿಚಯಿಸಲಿದೆ. ಇವೆರಡನ್ನೂ ರಾಜ್ಯಸಭೆಯು ಆಗಸ್ಟ್ 3 ರಂದು ಮುಂಗಾರು ಅಧಿವೇಶನದಲ್ಲಿ ಅಂಗೀಕರಿಸಿತು ಮತ್ತು ಇದೀಗ ಪರಿಗಣನೆಗೆ ಲೋಕಸಭೆಯ ಮುಂದೆ ಬರುವ ನಿರೀಕ್ಷೆಯಿದೆ. ಹೆಚ್ಚುವರಿಯಾಗಿ ಸರ್ಕಾರವು ಪೋಸ್ಟ್ ಆಫೀಸ್ ಬಿಲ್- 2023 ಅನ್ನು ಸಹ ಪರಿಚಯಿಸುತ್ತದೆ. ಈ ಮಸೂದೆಯನ್ನು ಸರ್ಕಾರ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ.

ಇಷ್ಟೆ ಅಲ್ಲದೆ, ‘ಸಂವಿಧಾನ ಸಭೆಯಿಂದ ಪ್ರಾರಂಭವಾದ 75 ವರ್ಷಗಳ ಸಂಸತ್ತಿನ ಪಯಣ – ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆಗಳು’ ಎಂಬ ವಿಷಯದ ಬಗ್ಗೆಯೂ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ.

ವಿಶೇಷ ಅಧಿವೇಶನದಲ್ಲಿ ಯಾವುದೇ ಪ್ರಶ್ನೋತ್ತರ ಸಮಯ ಅಥವಾ ಖಾಸಗಿ ಸದಸ್ಯರ ಮಸೂದೆಗಳು ಅಥವಾ ಅನುದಾನಕ್ಕಾಗಿ ಬೇಡಿಕೆಗಳು ಅಥವಾ ಶೂನ್ಯ ಸಮಯ ಇರುವುದಿಲ್ಲ. ವಿಶೇ‍ಷವೇನೆಂದರೆ ಲೋಕಸಭೆಯ ಸೆಕ್ರೆಟರಿಯೇಟ್ ಹೊರಡಿಸಿದ ಬುಲೆಟಿನ್‌ನಲ್ಲಿ, ವಿಶೇಷ ಅಧಿವೇಶನವನ್ನು 17 ನೇ ಲೋಕಸಭೆಯ 13 ನೇ ಅಧಿವೇಶನ ಎಂದು ಸರಳವಾಗಿ ಉಲ್ಲೇಖಿಸಲಾಗಿದೆ.

ವಿಡಿಯೊ ನೋಡಿ: ‘ಸಿನಿಮಾ’ ಸಾಮಾಜಿಕ ತಲ್ಲಣಗಳ ಪ್ರತಿಬಿಂಬ – ನಟ, ನಿರ್ದೇಶಕ ಬಿ.ಸುರೇಶ ಜೊತೆ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *