ಲಾಭದಲ್ಲಿ ಕುಸಿತ; ಗೂಗಲ್ ಮಾತೃಸಂಸ್ಥೆಯ 10000 ಉದ್ಯೋಗಿಗಳ ವಜಾಕ್ಕೆ ಸಿದ್ದತೆ

ನವದೆಹಲಿ: ಹೆಚ್ಚುತ್ತಿರುವ ಆರ್ಥಿಕ ಹೊರೆಯನ್ನು ನಿಭಾಯಿಸುವುದಕ್ಕಾಗಿ ಗೂಗಲ್‌ ಮಾತೃಸಂಸ್ಥೆ ಅಲ್ಪಾಬೆಟ್‌ ಸದ್ಯದಲ್ಲೇ ತನ್ನ 10,000 ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಮೈಕ್ರೋಸಾಫ್ಟ್, ಮೆಟಾ, ಟ್ವಿಟರ್, ಅಮೆಜಾನ್ ಬಳಿಕ ಗೂಗಲ್‌ ಮಾತೃಸಂಸ್ಥೆ ಅಲ್ಫಾಬೆಟ್‌ ತನ್ನ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿದೆ. ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ ಆವರಿಸುತ್ತಿದ್ದಂತೆ ಟೆಕ್‌ ಕಂಪನಿಗಳು ಉದ್ಯೋಗಿಗಳನ್ನು ಖರ್ಚು ಕಡಿಮೆ ಮಾಡಲು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ. ಈಗ ಕಳಪೆ ಕಾರ್ಯಕ್ಷಮತೆ ಆಧಾರದ ಮೇಲೆ ಸುಮಾರು 10 ಸಾವಿರ ಉದ್ಯೋಗಿಗಳನ್ನು ಅಥವಾ ಅದರ ಶೇ. 6ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಕಳಪೆ ಕಾರ್ಯಕ್ಷಮತೆ ಹೊಂದಿರುವ ಉದ್ಯೋಗಿಗಳನ್ನು ಗುರುತಿಸಬೇಕೆಂದು ಗೂಗಲ್​ ಸಂಸ್ಥೆಯ ವಿವಿಧ ವಿಭಾಗಗಳಲ್ಲಿನ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ. ಕಂಪನಿಯು ಒಟ್ಟು ಉದ್ಯೋಗಿಗಳ ಶೇಕಡಾ 6ರಷ್ಟು ಮಂದಿಯನ್ನು ವಜಾಗೊಳಿಸಲು ಮುಂದಾಗಿದೆ. ಕಳಪೆ ಕಾರ್ಯಕ್ಷಮತೆ ಗುರುತಿಸುವಿಕೆಗೆ ಗೂಗಲ್ ಶ್ರೇಯಾಂಕ ಪದ್ಧತಿ ಅನುಸರಿಸಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಉದ್ಯೋಗಳನ್ನು ನೇಮಿಸಿಕೊಳ್ಳುವುದನ್ನು ವಿಳಂಬಗೊಳಿಸುವುದಾಗಿ ತಿಳಿಸಿದ್ದ ಗೂಗಲ್‌ ಸಂಸ್ಥೆಯೂ ಆರ್ಥಿಕತೆಯು ಉದ್ಯೋಗಿ ಸ್ನೇಹಿ ಕಂಪನಿಯನ್ನು ಉದ್ಯೋಗ ಕಡಿತ ಮಾಡುವ ಕಂಪನಿಯನ್ನಾಗಿ ಪರಿವರ್ತಿಸಿದೆ. ಇದು ನಿರೀಕ್ಷೆಗಿಂತಲೂ ಮೂರು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.

ಗೂಗಲ್​ ಸಂಸ್ಥೆಯ ಲಾಭದ ಪ್ರಮಾಣ ಕುಸಿಯುತ್ತಿದೆ. ಮೂರನೇ ತ್ರೈಮಾಸಿಕದಲ್ಲಿ ಕಂಪನಿಯು 13.9 ಶತಕೋಟಿ ಡಾಲರ್ ನಿವ್ವಳ ಲಾಭ ಗಳಿಸಿದೆ. ಇದು ಕಳೆದ ವರ್ಷದ ಮೂರನೇ ತ್ರೈಮಾಸಿಕ ಅವಧಿಯ ನಿವ್ವಳ ಲಾಭಕ್ಕಿಂತ ಶೇಕಡಾ 27ರಷ್ಟು ಕಡಿಮೆ ಎಂದು ಅಂದಾಜಿಸಲಾಗಿದೆ. ಆದಾಯದಲ್ಲಿ ಶೇಕಡಾ 6ರಷ್ಟು ಹೆಚ್ಚಳವಾಗಿ 69.1 ಶತಕೋಟಿ ಡಾಲರ್ ಆದ ಹೊರತಾಗಿಯೂ ಲಾಭದಲ್ಲಿ ಕುಸಿತವಾಗಿದೆ. ಇದು ಅಲ್ಫಾಬೆಟ್​ನ ಉದ್ಯೋಗ ಕಡಿತ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.

ಪ್ರಸ್ತುತ ಅಲ್ಫಾಬೆಟ್​ 1,87,000 ಉದ್ಯೋಗಿಗಳನ್ನು ಒಳಗೊಂಡಿದೆ. ಈ ಮೂಲಕ ಟೆಕ್ ಉದ್ಯಮದಲ್ಲೇ ಅತಿಹೆಚ್ಚು ಮಂದಿಗೆ ಉದ್ಯೋಗ ನೀಡುತ್ತಿರುವ ಕಂಪನಿಯಾಗಿ ಗುರುತಿಸಿಕೊಂಡಿದೆ. ಅಮೆರಿಕದ ಎಸ್​ಇಸಿಯಲ್ಲಿ ನೋಂದಾಯಿಸಿರುವ ಪ್ರಕಾರ ಗೂಗಲ್ ತನ್ನ ಉದ್ಯೋಗಿಗಳಿಗೆ ನೀಡುವ ವಾರ್ಷಿಕ ವೇತನದ ಮೊತ್ತ ಅಂದಾಜು 2.41 ಕೋಟಿ ರೂ. ಆಗಿದೆ.

ಕಳೆದ ತ್ರೈಮಾಸಿಕ ಅವಧಿಯಲ್ಲಿ ಗೂಗಲ್​ ನೇಮಕಾತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿತ್ತು. ಉದ್ಯೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ವೇತನದ ಬಗ್ಗೆ ತಜ್ಞರು ಗೂಗಲ್​ಗೆ ಎಚ್ಚರಿಕೆ ನೀಡಿದ್ದರು. ಟೆಕ್ ಕ್ಷೇತ್ರದ ಇತರ ಕಂಪನಿಗಳಿಗೆ ಹೋಲಿಸಿದರೆ ಗೂಗಲ್ ತುಂಬಾ ಹೆಚ್ಚು ವೇತನ ನೀಡುತ್ತಿದೆ ಎಂದು ಶತಕೋಟ್ಯಧಿಪತಿ ಹೂಡಿಕೆದಾರ ಕ್ರಿಸ್ಟೋಫರ್ ಹಾನ್ ಇತ್ತೀಚೆಗೆ ಹೇಳಿದ್ದರು. ನೇಮಕಾತಿಯು ಕಂಪನಿಯ ಅಗತ್ಯಕ್ಕಿಂತಲೂ ಹೆಚ್ಚಾಗಿದೆ ಎಂದೂ ಅವರು ಹೇಳಿದ್ದರು.

ಮೆಟಾ ಇತ್ತೀಚೆಗೆ 11,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಮೈಕ್ರೋಸಾಫ್ಟ್​ ಸುಮಾರು 1000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಟ್ವಿಟರ್ 3,500ಕ್ಕೂ ಹೆಚ್ಚು ಮಂದಿ ಸಿಬ್ಬಂದಿಯನ್ನು ಮನೆಗೆ ಕಳುಹಿಸಿತ್ತು. ಅಮೆಜಾನ್ ಸಹ 2023ರ ವರೆಗೂ ಉದ್ಯೋಗ ಕಡಿತ ಮುಂದುವರಿಸುವುದಾಗಿ ಇತ್ತೀಚೆಗೆ ಹೇಳಿದೆ. ಇದೀಗ ಗೂಗಲ್‌ ಸಂಸ್ಥೆಯೂ ಸಹ 10 ಸಾವಿರ ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾಗಿದೆ.

Donate Janashakthi Media

Leave a Reply

Your email address will not be published. Required fields are marked *