ಬೆಂಗಳೂರು: ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಕಾಯಿದೆ- 2020ರ ಸೆಕ್ಷನ್ 5 ಮತ್ತು ಅದರ ಅಡಿ ರೂಪಿಸಿರುವ ನಿಯಮಗಳ ಜಾರಿಗೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಅನುಮತಿಸಿದೆ. ಆದರೆ, ಈ ಅನುಮತಿಯು ಅರ್ಜಿ ಕುರಿತು ನ್ಯಾಯಾಲಯ ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದೂ ಹೈಕೋರ್ಟ್ ಹೇಳಿದೆ.
ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣೆ ನಿಯಮಗಳನ್ನು (ಜಾನುವಾರು ಸಾಗಣೆ 2021ರ ನಿಯಮಗಳು) ರೂಪಿಸಿರುವ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರಿಫ್ ಜಮೀಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯು ಕರ್ನಾಟಕ ಹೈಕೋರ್ಟ್ನಲ್ಲಿ ನಡೆಯಿತು.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ “ಸೆಕ್ಷನ್ 5ರಡಿ ನಿಯಮ ರೂಪಿಸಿ ಅವುಗಳನ್ನು ಜಾರಿಗೆ ತರುವವರೆಗೆ ಯಾವುದೇ ವ್ಯಕ್ತಿಯ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯವು ಸರ್ಕಾರವನ್ನು ನಿರ್ಬಂಧಿಸಿತ್ತು. ಅದರಂತೆ, ಜಾನುವಾರು ಸಾಗಣೆ 2021ರ ನಿಯಮಗಳನ್ನು ರೂಪಿಸಿರುವುದರಿಂದ ಕಾಯಿದೆಯ ಸೆಕ್ಷನ್ 5 ಅನ್ನು ಜಾರಿ ಮಾಡುವ ಸಂಬಂಧ ನ್ಯಾಯಾಲಯದ ಹಿಂದಿನ ಆದೇಶದಲ್ಲಿ ಮಾರ್ಪಾಡು ಮಾಡಬೇಕು” ಎಂದು ಕೋರಿದರು.
ರಾಜ್ಯ ಸರ್ಕಾರದ ಮನವಿ ಮತ್ತು ಅರ್ಜಿದಾರ ಆಕ್ಷೇಪಣೆ ದಾಖಲಿಸಿಕೊಂಡ ನ್ಯಾಯಪೀಠ, ಕರ್ನಾಟಕ ಜಾರುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ-2020 ಅನ್ನು ಸರ್ಕಾರವು 2021ರ ಫೆಬ್ರವರಿ 15ರಂದು ಜಾರಿ ಮಾಡಿದೆ. 2021ರ ಮೇ 24ರಂದು ಅಧಿಸೂಚನೆ ಹೊರಡಿಸಲಾಗಿದೆ. 2021ರ ಮೇ 25ರಂದು ಗೆಜೆಟ್ನಲ್ಲಿ ಪ್ರಕಟಿಸಲಾಗಿದೆ. ಇದೀಗ ಕಾಯ್ದೆ ಸೆಕ್ಷನ್ 5 ಮತ್ತದರ ಅಡಿ ನಿಯಮ ರೂಪಿಸಲಾಗಿದ್ದು, ಜಾರಿಗೊಳಿಸಲು ನ್ಯಾಯಾಲಯದ ಅನುಮತಿ ಕೋರಿದೆ. ಆದ್ದರಿಂದ 2021ರ ಜನವರಿ 20ರಂದು ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಮಾರ್ಪಾಡು ಮಾಡಲಾಗುತ್ತಿದ್ದು, ಸೆಕ್ಷನ್ 5ರ ಜಾರಿಗೆ ಅನುಮತಿ ನೀಡಲಾಗುತ್ತಿದೆ. ಆದರೆ, ಇದು ಅರ್ಜಿ ಕುರಿತು ನ್ಯಾಯಾಲಯ ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಇದನ್ನು ಓದಿ: ಜ.18 ರಿಂದ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು “ಕಾಯಿದೆಯ ಸಿಂಧುತ್ವವನ್ನು ಪ್ರಶ್ನಿಸಿದ್ದು, ಕಾಯಿದೆ ಮತ್ತು ನಿಯಮಗಳು ಜಾರಿ ಮಾಡುವುದರಿಂದ ನಿರ್ದಿಷ್ಟ ಸಮುದಾಯದ ಕುರಿತು ಪೂರ್ವಾಗ್ರಹ ಉಂಟು ಮಾಡಲಿದೆ. ಹೀಗಾಗಿ, ಅದಕ್ಕೆ ಅನುಮತಿಸಬಾರದು” ಎಂದು ಆಕ್ಷೇಪಿಸಿದರು.
ನ್ಯಾಯಾಲಯದ ಆದೇಶದ ತೆರವಿಗೆ ಸಂಬಂಧಿಸಿದ ರಾಜ್ಯ ಸರ್ಕಾರದ ಮನವಿ ಮತ್ತು ಅದಕ್ಕೆ ಅರ್ಜಿದಾರರು ಸಲ್ಲಿಸಿರುವ ಆಕ್ಷೇಪಣೆಯನ್ನು ಪೀಠವು ಪರಿಗಣಿಸಿದೆ.
ಪ್ರಕರಣದ ಹಿನ್ನೆಲೆ
2021ರ ಜನವರಿ 5ರಂದು ಜಾರಿಗೆ ಬಂದಿದ್ದ ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣೆ ಸುಗ್ರೀವಾಜ್ಞೆ ಸೆಕ್ಷನ್ 4ರ ಅಡಿ ಜಾನುವಾರು ವಧೆ ನಿಷೇಧಿಸಲಾಗಿದೆ. ತಪ್ಪಿದಲ್ಲಿ ಕನಿಷ್ಠ ಮೂರು ವರ್ಷ ಮತ್ತು ಗರಿಷ್ಠ ಏಳು ವರ್ಷ ಜೈಲು ಶಿಕ್ಷೆ ಮತ್ತು/ಅಥವಾ ಪ್ರತಿ ರಾಸಿಗೆ ರೂ 50,000ಕ್ಕೆ ಕಡಿಮೆಯಿಲ್ಲದಂತೆ 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ. ಪುನರಾವರ್ತಿತ ಅಪರಾಧಗಳಿಗಾಗಿ ರೂಪಾಯಿ ಒಂದು ಲಕ್ಷಕ್ಕಿಂತ ಕಡಿಮೆಯಿಲ್ಲದಂತೆ 10 ಲಕ್ಷ ರೂಪಾಯಿವರೆಗೆ ವಿಸ್ತೃತ ದಂಡ ವಿಧಿಸಬಹುದು ಎಂದು ಹೇಳಲಾಗಿದೆ.
ಇದನ್ನು ಓದಿ: ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗೆ ಸುಗ್ರೀವಾಜ್ಞೆ ಅಸಿಂಧು – ನ್ಯಾ. ವಿ.ಗೋಪಾಲಗೌಡ
ಅಂದಿನ ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ್ ಅವರು “ಒಬ್ಬ ರೈತನ ಮನೆ ಪಕ್ಕದಲ್ಲಿ ದನಗಳ ಕೊಟ್ಟಿಗೆ ಇರುತ್ತದೆ. ಆತ ಅವುಗಳನ್ನು ತನ್ನ ಜಮೀನಿಗೆ ಕೊಂಡೊಯ್ಯಲು ಪ್ರತಿ ಬಾರಿಯೂ ಪ್ರಮಾಣಪತ್ರ ತೆಗೆದುಕೊಳ್ಳಬೇಕೆ?” ಎಂದು ಸೆಕ್ಷನ್ 5ರ ಅಸಮಂಜಸತೆಯ ಬಗ್ಗೆ ಬೆರಳು ಮಾಡಿತ್ತು.
ಆಗ ಎಜಿ ನಾವದಗಿ ಅವರು ಮೊದಲ ಹದಿನೈದು ಕಿಮೀ ವ್ಯಾಪ್ತಿಗೆ ವಿನಾಯ್ತಿ ಇದೆ. ಈ ನಿಟ್ಟಿನಲ್ಲಿ ಇನ್ನಷ್ಟೇ ನಿಯಮ ಜಾರಿಗೆ ತರಬೇಕಿದೆ” ಎಂದು ಹೇಳಿದರು. ಆದರೆ ಇದರಿಂದ ಅಸಮಾಧಾನಗೊಂಡ ಅಂದಿನ ಮುಖ್ಯ ನ್ಯಾಯಮೂರ್ತಿ ಓಕ್ ಅವರು, “ಇದು (ಸೆಕ್ಷನ್ 5ರ ನಿಬಂಧನೆ) ಸಮಸ್ಯೆ ಸೃಷ್ಟಿಸುತ್ತದೆ. ಇದು ಪೊಲೀಸರ ವಿವೇಚನೆಗೆ ಬಿಟ್ಟದ್ದು” ಎಂದು ಹೇಳಿ, ನಿಯಮ ರೂಪಿಸುವವರೆಗೆ ಸೆಕ್ಷನ್ 5ರ ಜಾರಿಗೆ ಅವಕಾಶ ನೀಡಲಾಗದು ಎಂದು ನಿರ್ಬಂಧ ವಿಧಿಸಿತ್ತು.