ಬೆಂಗಳೂರು : ಸದನದಲ್ಲಿ ಚರ್ಚೆಗೂ ಅವಕಾಶ ಕೊಡದೇ ತರಾತುರಿಯಲ್ಲಿ ಅಂಗೀಕರಿಸಲಾದ ’ಗೋಹತ್ಯೆ ನಿಷೇಧ ಮಸೂದೆ -೨೦೨೦’ ಒಂದೆಡೆ ರೈತಾಪಿ ಸಮುದಾಯದ ಆರ್ಥಿಕತೆಗೆ ದೊಡ್ಡ ಪೆಟ್ಟು ಕೊಡಲಿದೆ ಮತ್ತು ಜನತೆಯ ಆಹಾರದ ಹಕ್ಕಿನ ಮೇಲೆ ನಡೆಸಿದ ದಾಳಿಯಾಗಿದ್ದು ಸಮಾಜದ ಸ್ವಾಸ್ತ್ಯವನ್ನು ಹಾಳುಗೆಡಹುವ ಇಂತಹ ಅಪ್ರಜಾಸತ್ತಾತ್ಮಕ ಕಾಯ್ದೆಯನ್ನು ವಾಪಾಸು ಪಡೆಯಬೇಕೆಂದು ‘ಸೌಹಾರ್ದ ಕರ್ನಾಟಕ’ ವು ಆಗ್ರಹಿಸಿದೆ.
ಗೋವು ಒಳಗೊಂಡು ಜಾನುವಾರುಗಳನ್ನು ರಕ್ಷಿಸಲು ಈಗಾಗಲೇ ಕಾಯ್ದೆ ಇರುವಾಗ ಇಂತಹ ಕಾಯ್ದೆಯನ್ನು ತರುವುದರ ಅವಶ್ಯಕತೆಯಾದರೂ ಏನಿದೆ? ಭಾರತದ ಸಂವಿಧಾನವು ಪ್ರತಿಯೊಬ್ಬ ಭಾರತೀಯ ಪ್ರಜೆಗೆ ಆಹಾರ, ಉಡುಗೆ, ಮತಧರ್ಮ, ಉದ್ಯೋಗ ಮುಂತಾದ ಹಕ್ಕುಗಳ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಿದೆ. ಈ ಮಸೂದೆ ಅಂತಹ ನಾಗರೀಕ ಹಕ್ಕನ್ನು ನಿರ್ಭಂಧಿಸುತ್ತದೆ. ಜಾನುವಾರಿಗೆ ಪ್ರಮಾಣಪತ್ರ ನೀಡುವ ಪೂರ್ಣ ಅಧಿಕಾರವನ್ನು ನೇಮಕ ಮಾಡಲಾದ ಅಧಿಕಾರಿಗೆ ನೀಡಿರುವುದು ಸನ್ನಿವೇಶದ ದುರುಪಯೋಗ ಮತ್ತು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡಬಹುದು. ಇದು ರೈತರಿಗೆ ಮತ್ತಷ್ಟೂ ತೊಂದರೆಗಳನ್ನು ಹುಟ್ಟು ಹಾಕಬಹುದು.
ಜಾನುವಾರುಗಳನ್ನು ಸಂರಕ್ಷಿಸಲು ’ಉತ್ತಮ ನಂಬಿಕೆ’ಯಿಂದ ಕಾರ್ಯ ನಿರ್ವಹಿಸುವ ವ್ಯಕ್ತಿಗಳ ಮೇಲೆ ಯಾವುದೇ ಕ್ರಮವನ್ನು ವಹಿಸುವಂತಿಲ್ಲ ಎನ್ನುವ ಮುಕ್ತ ಅಧಿಕಾರವು ಕಾನೂನೇತರ ಶಕ್ತಿಗಳು ಯಾರ ಮೇಲೆ, ಯಾವಾಗ ಬೇಕಾದರೂ ಧಾಳಿ ಮಾಡಿ ರಕ್ಷಣೆ ಪಡೆಯಲು ಅವಕಾಶ ನೀಡುತ್ತದೆ. ಈ ಮೂಲಕ ಕಾಯ್ದೆ ಜಾರಿಗೊಳಿಸುವ ಅಧಿಕಾರವನ್ನು ಖಾಸಗಿ ಗುಂಪಿಗೆ, ಪಡೆಗಳಿಗೆ ಅಥವಾ ವ್ಯಕ್ತಿಗಳಿಗೆ ಕೊಡುವುದು ಮತ್ತು ಜಾನುವಾರುಗಳನ್ನು ತಡೆಯುವ ಹೆಸರಿನಲ್ಲಿ ಕಾನೂನು ಅವರ ಕೈಗೆ ನೀಡಿರುವುದು, ಗೋರಕ್ಷಕರೆಂಬ ಹೆಸರಿನಲ್ಲಿ ಯಾರು ಬೇಕಾದರೂ ಧಾಳಿಗಳನ್ನು ನಡೆಸಲು ಮುಕ್ತ ಅವಕಾಶ ಕಲ್ಪಿಸುವುದು ಕಾನೂನು ಬದ್ಧ ಆಡಳಿತ, ಸುವ್ಯವಸ್ಥೆಯನ್ನೇ ಹಾಳು ಮಾಡಬಲ್ಲದು. ಶಿಕ್ಷೆಯ ಅವಧಿ, ದಂಡದ ಮೊತ್ತವೂ ಅತ್ಯಧಿಕವಾಗಿದೆ.
ಇದುವರೆಗೂ ಬಜರಂಗದಳ, ಗೋರಕ್ಷಕದಳ ಗಳಂತಹ ಸಂಘಪರಿವಾರ-ಅದರ ಅಂಗಸಂಸ್ಥೆಗಳು ರಾಜ್ಯದ ಹಲವು ಕಡೆಗಳಲ್ಲಿ ನಡೆಸುತ್ತಾ ಬಂದ ಗೂಂಡಾಗಿರಿ, ಹಿಂಸಾತ್ಮಕ ಪುಂಡಾಟಿಕೆಗಳಿಗೆ ಕಾನೂನಾತ್ಮಕ ಸಂರಕ್ಷಣೆಯನ್ನು ಕೊಡುವ ಕಾಯ್ದೆಯಾಗಿರುವುದು, ಅತ್ಯಂತ ಅಪಾಯಕಾರಿ ಕ್ರಮವಾಗಿದೆ ಎಂದು ಸೌಹಾರ್ದ ಕರ್ನಾಟಕ ಅಭಿಪ್ರಾಯಪಟ್ಟಿದೆ. ಈ ಕಾಯ್ದೆಯು ಜಾನುವಾರುಗಳನ್ನು ರಕ್ಷಿಸುವುದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ದ್ವೇ?-ತಲ್ಲಣಗಳನ್ನು ಹುಟ್ಟು ಹಾಕಿ ಜನತೆಯನ್ನು ವಿಭಜಿಸಲು ಬಳಸುವ ವಿಪುಲ ಸಾಧ್ಯತೆಗಳಿವೆ. ಈ ಹಿಂದೆ ಗೋ ರಕ್ಷಣೆಯ ಹೆಸರಿನಲ್ಲಿ ನಡೆದಿರುವ ಹಲವಾರು ಹಿಂಸಾತ್ಮಕ ವಿದ್ಯಮಾನಗಳನ್ನು ಗಮನಿಸಿದರೆ ಈ ಸಂಗತಿಯು ಸ್ಪಷ್ಟವಾಗುತ್ತದೆ.
ಸದನ ನಡೆಯುತ್ತಿರುವಾಗ ಇಂತಹ ವಿವಾದಾತ್ಮಕ ವಿ?ಯವುಳ್ಳ ಮಸೂದೆಯನ್ನು ಅಧ್ಯಯನ ಮಾಡಲು ಮತ್ತು ಅಭಿಪ್ರಾಯ ನೀಡಲು ಯಾರಿಗೂ ಅವಕಾಶವನ್ನೇ ಕೊಡದೇ ಏಕಾಏಕಿ ಅಂಗೀಕಾರಕ್ಕೆ ಮಂಡಿಸುವ ಮೂಲಕ ರಾಜ್ಯ ಸರ್ಕಾರದ ಈ ಅಪ್ರಜಾಸತ್ತಾತ್ಮಕ ನಡೆಯು ಸಂಸದೀಯ ಪ್ರಜಾಪ್ರಭುತ್ವದ ಉನ್ನತ ಪರಂಪರೆಯನ್ನು ಧಿಕ್ಕರಿಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಸೌಹಾರ್ಧ ಕರ್ನಾಟಕ ತಿಳಿಸಿದೆ.
ರೈತರು, ಕಾರ್ಮಿಕರು-ದುಡಿಯುವ ಜನತೆ ಸಂಕಷ್ಟದಲ್ಲಿ ಇರುವಾಗ ಇಂತಹ ಕಾಯ್ದೆಯನ್ನು ತಂದಿರುವುದು ಜನತೆಯ ಗಮನವನ್ನು ಬೇರೆ ದಿಕ್ಕಿಗೆ ಸೆಳೆಯುವ ಪ್ರಯತ್ನವಾಗಿದೆ ಎಂದು ಸೌಹಾರ್ದ ಕರ್ನಾಟಕ ಅಭಿಪ್ರಾಯ ಪಡುತ್ತದೆ.
ಈ ಕಾಯ್ದೆ ಜಾರಿಯಾದಲ್ಲಿ ಹಾಲು ಹಾಗೂ ಚರ್ಮ, ಮಾಂಸದ ಉದ್ಯಮಗಳನ್ನು ತೀವ್ರವಾಗಿ ಬಾಧಿಸಲಿದೆ. ಈ ಉದ್ಯಮಗಳನ್ನು ಕಾರ್ಪೋರೇಟ್ ಗಳಿಗೆ ವಹಿಸಿ ಕೊಡಲು ಮಾರ್ಗ ಸೃಷ್ಟಿಸಲಿದೆ. ಉದ್ಯೋಗದ ಮೇಲೂ ಹಾನಿ ತಟ್ಟಲಿದೆ. ಸಮಾಜದ ಸ್ವಾಸ್ತ್ಯಕ್ಕೆ, ಆರ್ಥಿಕತೆಗೂ ಹಾನಿ ತರುವ ಈ ಕಾಯ್ದೆಯನ್ನು ಕೂಡಲೇ ವಾಪಸು ಪಡೆಯ ಬೇಕೆಂದು ಸೌಹಾರ್ದ ಕರ್ನಾಟಕ ವು ಸರಕಾರಕ್ಕೆ ಆಗ್ರಹಿಸಿದೆ.
ಸಂವಿಧಾನದ ವಿಧಿ ವಿಧಾನಗಳನ್ಮು ಪಾಲಿಸದೇ ಅಂಗೀಕರಿಸಿರುವ, ಸೌಹಾರ್ದ ಬದುಕಿಗೆ, ಜನತೆಯ ಹಕ್ಕುಗಳಿಗೆ ಆತಂಕ ಸೃಷ್ಟಿಸುವ ಈ ಮಸೂದೆಗೆ ಅಂಕಿತ ಹಾಕದೇ ವಾಪಾಸು ಕಳಿಸಬೇಕು ಎಂದು ಮಾನ್ಯ ರಾಜ್ಯಪಾಲರನ್ನು ವಿನಂತಿಸುತ್ತೇವೆ. ಈ ಮಸೂದೆಯನ್ನು ವಾಪಾಸು ಪಡೆಯಲು ಸರಕಾರವನ್ನು ಒತ್ತಾಯಿಸಿ ಜನರು ಪ್ರತಿಭಟನೆಗೆ ಮುಂದಾಗಬೇಕು ಎಂದು ನ್ಯಾಯಮೂರ್ತಿ ವಿ.ಗೋಪಾಲಗೌಡ, ಹಿರಿಯ ಸಾಹಿತಿ ಡಾ.ಮರುಳಸಿದ್ಧಪ್ಪ, ಸುಕನ್ಯಾ ಮಾರುತಿ, ಡಾ. ಕೆ ಶರೀಫಾ, ಸಾಮಾಜಿಕ ಕಾರ್ಯಕರ್ತರಾದ ಎಸ್.ವೈ. ಗುರುಶಾಂತ, ಕೆ.ಎಸ್. ವಿಮಲಾ, ದಲಿತ ಹಕ್ಕುಗಳ ಸಮಿತಿಯ ಗೋಪಾಲಕೃಷ್ಣ ಅರಳಹಳ್ಳಿ, ಕಾರ್ಮಿಕ ಮುಖಂಡರಾದ ಕೆ.ಎನ್ ಉಮೇಶ್, ಪ್ರತಾಪ್ ಸಿಂಹ್ ರವರು ಮನವಿ ಮಾಡಿದ್ದಾರೆ.