ಭಾರೀ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರವಾಗಿದೆ. ಕಾಂಗ್ರೆಸ್ ಸದನವನ್ನು ಬಹಿಷ್ಕರಿಸಿದರೆ, ಜೆಡಿಎಸ್ ಸಭಾತ್ಯಾಗವನ್ನು ಮಾಡಿತು. ಮಸೂದೆ ಅಂಗೀಕಾರಕ್ಕೆ ಬಿಜೆಪಿ, ವಿಶ್ವ ಹಿಂದುಪರಿಷತ್ ಸಂಭ್ರಮ ವ್ಯಕ್ತಪಡಿಸಿದ್ದರೆ, ಗೋಹತ್ಯೆ ನಿಷೇಧವು ಆಹಾರದ ಹಕ್ಕಿನ ಮೇಲೆ ನಡೆಯುತ್ತಿರುವ ದಾಳಿ ಎಂದು ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಮಸೂದೆಯಲ್ಲಿರುವ ಪ್ರಮುಖ ಅಂಶಗಳು ಏನು? ಈ ಮಸೂದೆಗೆ ಯಾಕೆ ವಿರೋಧ ವ್ಯಕ್ತವಾಗುತ್ತದೆ? ಗೋಹತ್ಯಾ ಹೆಸರಲ್ಲಿ ಬಿಜೆಪಿಯ ರಾಜಕೀಯ ಲೆಕ್ಕಾಚಾರಗಳೇನು? ಎಂಬ ಹಲವು ಪ್ರಶ್ನೆಗಳು ಉದ್ಬವವಾಗಿದೆ
ಗೋಹತ್ಯೆ ನಿಷೇಧ ಕುರುತಂತೆ ಹಲವು ವರ್ಷಗಳಿಂದ ಚರ್ಚೆಯಾಗುತ್ತಿತ್ತು. ಹಿಂದುಪರ ಸಂಘಟನೆಗಳು ಗೋವುಗಳನ್ನು ರಕ್ಷಿಸಬೇಕು, ಅದಕ್ಕಾಗಿ ಕಾಯ್ದೆಯನ್ನು ರೂಪಿಸಬೇಕು ಎಂದು ಒತ್ತಾಯಿಸುತ್ತಿದ್ದವು. ಈಗ ಅಂಗೀಕಾರ ಮಾಡಿರುವ ವಿಧೇಯಕದಲ್ಲಿ ಕಠಿಣ ನಿಯಮಗಳನ್ನು ಅಳವಡಿಸಲಾಗಿದೆ. ವಿಧಾನ ಪರಿಷತ್ತಿನಲ್ಲಿಯೂ ಅಂಗೀಕಾರಗೊಂಡ ನಂತರ ಇದು ರಾಜ್ಯಪಾಲರ ಒಪ್ಪಿಗೆ ಬಳಿಕ ಕಾಯ್ದೆಯಾಗಿ ಜಾರಿಯಾಗಲಿದೆ. ವಿಧಾನ ಸಭೆಯಲ್ಲಿ ಅಂಗೀಕಾರಗೊಂಡಿರುವ ಗೋ ಹತ್ಯೆ ನಿಷೇಧ ಮಸೂದೆಯಲ್ಲಿ 25 ಕಠಿಣ ನಿಯಮಗಳನ್ನು ಪ್ರಸ್ತಾಪಿಸಲಾಗಿದೆ. ಮಸೂದೆಯಲ್ಲಿ ಪ್ರಸ್ತಾಪವಾಗಿರುವ ಪ್ರಮುಖ ಅಂಶಗಳು ಈ ರೀತಿ ಇವೆ.
- ಜಾನುವಾರು ವ್ಯಾಪ್ತಿಯಲ್ಲಿ ಹಸು, ಕರು, ಎಮ್ಮೆ, ಎತ್ತು ಸೇರಿವೆ. 13 ವರ್ಷದೊಳಗಿನ ಎಮ್ಮೆ ಮತ್ತು ಕೋಣಗಳು ಒಳಗೊಂಡಿವೆ.
- ಗೋಹತ್ಯೆ ಮಾಡಿದರೆ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ ಗರಿಷ್ಠ 7 ವರ್ಷಗಳ ವರೆಗೆ ಜೈಲು ಶಿಕ್ಷೆ
- ಒಂದು ಜಾನುವಾರು ಹತ್ಯೆ ಮಾಡಿದರೆ 50 ಸಾವಿರದಿಂದ 15 ಲಕ್ಷದವರೆಗೆ ದಂಡ ಎರಡು ಅಥವಾ ಹೆಚ್ಚಿನ ಅಪರಾಧಕ್ಕೆ 1 ಲಕ್ಷದಿಂದ 10 ಲಕ್ಷ ದಂಡ ಮತ್ತು 7 ವರ್ಷ ಕಾರಾಗೃಹ ವಾಸ
- ಗೋ ಹತ್ಯೆ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ
- ಗೋರಕ್ಷಣೆಗೆ ಶ್ರಮಿಸುವವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ
- ಸೆಕ್ಷನ್ 19 ರ ಪ್ರಕಾರ ವಶಕ್ಕೆ ಪಡೆದ ಹಸುಗಳನ್ನು ಆರೋಪಿಗಳಿಗೆ ವಾಪಸ್ ಮಾಡುವಂತಿಲ್ಲ, ಮತ್ತು ಆ ಹಸುಗಳನ್ನು ಹರಾಜು ಹಾಕಬಹುದಾಗಿದೆ ಎಂಬುದು ಸೇರಿದಂತೆ 25 ಪ್ರಮುಖ ಅಂಶಗಳಿವೆ.
ಸರಕಾರದ ಈ ನಿರ್ಧಾರಕ್ಕೆ ಕಾಂಗ್ರೇಸ್ ಆಕ್ರೋಶವನ್ನು ವ್ಯಕಪಡಿಸಿದೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಪ್ರತಿಕ್ರೀಯೆಯನ್ನು ನೀಡಿದ್ದು, ಸದನದಲ್ಲಿ ನಾವು ಸಾಕಷ್ಟು ವಿರೋಧ ಮಾಡಿದರೂ ನಮ್ಮ ಮಾತುಗಳಿಗೆ ಕಿವಿಗೊಡಲಿಲ್ಲ, ಕರ್ನಾಟಕದ ಇತಿಹಾಸದಲ್ಲಿ ಈ ರೀತಿ ನಡೆದಿಲ್ಲ, ಕಲಾಪದ ನಿಯಮಗಳನ್ನು ಗಾಳಿಗೆ ತೂರಿ ಮಸೂದೆಯನ್ನು ಅಂಗೀಕಾರ ಮಾಡಿದ್ದಾರೆ, ನಾವು ಜನತಾ ನ್ಯಾಯಾಲಯದ ಮುಂದೆ ಹೋಗುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಗೋಹತ್ಯಾ ನಿಷೇಧದ ಹೆಸರಲ್ಲಿ ರಾಜಕೀಯ ನಡೆಸುತ್ತಿದೆ, ಗೋವಾ ಮತ್ತು ಅಸ್ಸಾಂಗಳಲ್ಲಿ ಈ ವಿಚಾರವನ್ನು ಮಾತನಾಡದ ಬಿಜೆಪಿ ಇತರ ರಾಜ್ಯಗಳಲ್ಲಿ ಮಾತ್ರ ಈ ಚರ್ಚೆಯನ್ನು ಮಾಡುತ್ತಿದೆ, ಹಿಂದುತ್ವದ ಅಜೆಂಡಾವನ್ನು ಜಾರಿ ಮಾಡುವುದು ಬಿಜೆಪಿ ಕೆಲಸವಾಗಿದೆಯೆ ಹೊರತು ಉಳಿದವರ ಹಿತ ಬೇಕಿಲ್ಲ, ಮುಂಬರುವ ಚುನಾವಣೆಯಲ್ಲಿ ಹಿಂದುಗಳ ಮತವನ್ನು ಪಡೆಯಲು ನಡೆಸುತ್ತಿರುವ ರಾಜಕೀಯ ಗಿಮಿಕ್ ಆಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘಟನೆಯ ರಾಜ್ಯಾಧ್ಯಕ್ಷರಾದ ನಿತ್ಯಾನಂದ ಸ್ವಾಮಿರವರು ಆರೋಪವನ್ನು ಮಾಡಿದ್ದಾರೆ.
ಸರಕಾರ ತರಲು ಹೊರಟಿರುವ ಕಾಯ್ದೆ ರೈತಾಪಿ ಜನರಿಗೆ ಮಾರಕವಾಗಲಿದೆ. ಪಶುಸಂಗೋಪನೆಗೆ ಸರಕಾರ ಒತ್ತು ನೀಡುತ್ತಿಲ್ಲ, ಜಾನುವಾರಗಳ ಸಾಕಾಣಿಕೆಗೆ ಬೇಕಾದ ಸಾಮಾಗ್ರಿಗಳನ್ನು ಉಚಿತವಾಗಿ ನೀಡಲು ಮುಂದೆ ಬರುತ್ತಿಲ್ಲ. ರೈತರು ಗೋವನ್ನು ಪೂಜ್ಯನೀಯ ಸ್ಥಾನದಲ್ಲಿಟ್ಟು ಗೌರವಿಸುತ್ತಾರೆ ಎಂಬ ಭಾವನಾತ್ಮಕತೆಯನ್ನು ಮುಂದೆ ಇಟ್ಟು ರಾಜಕೀಯ ಮಾಡುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಸಿ ಬಯ್ಯಾರೆಡ್ಡಿ ಅವರು ಆರೋಪಿಸಿದ್ದಾರೆ.
ಇದನ್ನು ಓದಿ : ಗೋಹತ್ಯೆ ನಿಷೇದ ಕಾಯ್ದೆ ವಾಪಾಸಾತಿಗೆ ಆಗ್ರಹ
ಗೋ ಹತ್ಯ ನಿಷೇಧ ಜಾರಿಯಾದರೆ, ಆಹಾರದ ಹಕ್ಕಿನ ಮೇಲೆ ದಾಳಿ ನಡೆಯುತ್ತದೆ. ದನದ ಮಾಂಸವನ್ನು ಅಲ್ಪಸಂಖ್ಯಾತರು, ದಲಿತರು ಸೇವನೆ ಮಾಡುತ್ತಾರೆ. ಹಿಂದುಗಳಲ್ಲಿನ ಅನೇಕ ಮೇಲ್ಜಾತಿಯವರು ಕೂಡಾ ದನದ ಮಾಂಸದ ಸೇವನೆ ಮಾಡುತ್ತಾರೆ, ಬಿಜೆಪಿ ಹಿಂದು ಎಂಬ ಪದವನ್ನು ಭಾವನಾತ್ಮಕವಾಗಿ ಪ್ರಯೋಗಮಾಡುತ್ತಿದೆ. ದಲಿತರು ಹಿಂದುಗಳಲ್ಲವೆ? ಅವರ ಆಹಾರದ ಹಕ್ಕನ್ನು ಕಸಿಯುವುದು ಎಷ್ಟು ಸರಿ ಎಂದು ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಹರಳಹಳ್ಳಿಯವರು ಪ್ರಶ್ನಿಸಿದ್ದಾರೆ.
ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ಸ್ ಪಡೆಯಬೇಕೆಂದು ಸೌಹಾರ್ದ ಕರ್ನಾಟಕ ಆಗ್ರಹಿಸಿದೆ. ಜಾನುವಾರಿಗೆ ಪ್ರಮಾಣಪತ್ರ ನೀಡುವ ಪೂರ್ಣ ಅಧಿಕಾರವನ್ನು ನೇಮಕ ಮಾಡಲಾದ ಅಧಿಕಾರಿಗೆ ನೀಡಿರುವುದು ಸನ್ನಿವೇಶದ ದುರುಪಯೋಗ ಮತ್ತು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡಬಹುದು. ಇದು ರೈತರಿಗೆ ಮತ್ತಷ್ಟೂ ತೊಂದರೆಗಳನ್ನು ಹುಟ್ಟು ಹಾಕಬಹುದು. ಜಾನುವಾರುಗಳನ್ನು ಸಂರಕ್ಷಿಸಲು ‘ಉತ್ತಮ ನಂಬಿಕೆ’ಯಿಂದ ಕಾರ್ಯ ನಿರ್ವಹಿಸುವ ವ್ಯಕ್ತಿಗಳ ಮೇಲೆ ಯಾವುದೇ ಕ್ರಮವನ್ನು ವಹಿಸುವಂತಿಲ್ಲ ಎನ್ನುವ ಮುಕ್ತ ಅಧಿಕಾರವು ಕಾನೂನೇತರ ಶಕ್ತಿಗಳು ಯಾರ ಮೇಲೆ, ಯಾವಾಗ ಬೇಕಾದರೂ ಧಾಳಿ ಮಾಡಿ ರಕ್ಷಣೆ ಪಡೆಯಲು ಅವಕಾಶ ನೀಡುತ್ತದೆ. ಈ ಮೂಲಕ ಕಾಯ್ದೆ ಜಾರಿಗೊಳಿಸುವ ಅಧಿಕಾರವನ್ನು ಖಾಸಗಿ ಗುಂಪು ಪಡೆಗಳಿಗೆ ಅಥವಾ ವ್ಯಕ್ತಿಗಳಿಗೆ ಕೊಡುವುದು ಮತ್ತು ಜಾನುವಾರುಗಳನ್ನು ತಡೆಯುವ ಹೆಸರಿನಲ್ಲಿ ಕಾನೂನು ಅವರ ಕೈಗೆ ನೀಡಿರುವುದು, ಗೋರಕ್ಷಕರೆಂಬ ಹೆಸರಿನಲ್ಲಿ ಯಾರು ಬೇಕಾದರೂ ಧಾಳಿಗಳನ್ನು ನಡೆಸಲು ಮುಕ್ತ ಅವಕಾಶ ಕಲ್ಪಿಸುವುದು ಕಾನೂನು ಬದ್ಧ ಆಡಳಿತ, ಸುವ್ಯವಸ್ಥೆಯನ್ನೇ ಹಾಳು ಮಾಡಬಲ್ಲದು. ಶಿಕ್ಷೆಯ ಅವಧಿ, ದಂಡದ ಮೊತ್ತವೂ ಅತ್ಯಧಿಕವಾಗಿದೆ ಎಂದು ಸೌಹಾರ್ದ ಕರ್ನಾಟಕ ಆತಂಕವನ್ನು ವ್ಯಕ್ತ ಪಡಿಸಿದೆ.
ವಿಶ್ವದ ನಾನಾ ರಾಷ್ಟ್ರಗಳು ಗೋ ಮಾಂಸವನ್ನು ರಫ್ತು ಮಾಡುತ್ತವೆ. ಇದರಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ. 2017-19ರ ಅವಧಿಯಲ್ಲಿ ಗೋಮಾಂಸ ರಫ್ತಿನಲ್ಲಿ ಬ್ರೆಜಿಲ್ ಮೊದಲ ಸ್ಥಾನ ಪಡೆದುಕೊಂಡರೆ, ಭಾರತಕ್ಕೆ ಎರಡನೇ ಸ್ಥಾನದಲ್ಲಿದೆ. 2017ರಲ್ಲಿ 18 ಲಕ್ಷ ಮೆಟ್ರಿಕ್ ಟನ್, 2018ರಲ್ಲಿ 19 ಮೆಟ್ರಿಕ್ ಲಕ್ಷ ಟನ್ ಗೋಮಾಂಸವನ್ನು ಭಾರತ ರಫ್ತು ಮಾಡಿದೆ. 2019ರಲ್ಲಿ 17 ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡಲಾಗಿದೆ. ದನವನ್ನು ಕಡಿಯದೆ, ಮಾಂಸವನ್ನು ಮಾರಾಟ ಮಾಡಲು ಸಾಧ್ಯವಿಲ್ಲ, ಮೋದಿ ಸರಕಾರ ಬಂದ ಮೇಲೆ ದನದ ರಫ್ತು ಹೆಚ್ಚಾಗಿದೆ, ಬಿಜೆಪಿಯ ಮುಖಂಡರೆ ಹೆಚ್ಚಾಗಿ ದನದ ಮಾಂಸವನ್ನು ರಫ್ತು ಮಾಡುವುದರಲ್ಲಿ ತೊಡಗಿದ್ದಾರೆ. ಮತಬ್ಯಾಂಕ್ ಗಾಗಿ ಬಿಜೆಪಿಯವರು ನಡೆಸುತ್ತಿರುವ ನಾಟಕ ಇದಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಗೋ ಹತ್ಯೆ ನಿಷೇಧದಿಂದ ಚರ್ಮ ಉದ್ಯಮಕ್ಕೂ ಧಕ್ಕೆಯಾಗಲಿದೆ. 25 ಲಕ್ಷ ಕುಟುಂಬಗಳು ಚರ್ಮೋದ್ಯೋಗದಲ್ಲಿದ್ದಾರೆ. ಸುಮಾರು 8 ಲಕ್ಷ ಪರಿಶಿಷ್ಟ ಜಾತಿಯ ಜನರು ಚರ್ಮ ಸುಲಿಯುವ ಕೆಲಸ ನಂಬಿಯೇ ಬದುಕಿದ್ದಾರೆ. ಚರ್ಮೋದ್ಯೋಗದಿಂದ 5.5 ಬಿಲಿಯನ್ ಡಾಲರ್ಸ್ ಜಿಡಿಪಿ ಆದಾಯ ಇದೆ. ಚರ್ಮೋದ್ಯೋಗದಲ್ಲಿ ನಮ್ಮ ದೇಶ ಎರಡನೇ ಸ್ಥಾನದಲ್ಲಿದೆ. ಚರ್ಮದ ಉತ್ಪನ್ನಗಳ ಮೇಲೆ ಸಾಕಷ್ಟು ಮಂದಿ ಅವಲಂಬಿತರಾಗಿದ್ದಾರೆ. ಈಗಲೇ ದೇಶದಲ್ಲಿ ನಿರುದ್ಯೋಗ ಹೆಚ್ಚಿದೆ. ಉದ್ಯೋಗ ಕೊಡಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಗೋಹತ್ಯೆ ನಿಷೇಧದಿಂದ ನಿರೋದ್ಯೋಗ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಬಹಳಷ್ಟು ಜನ ವಿರೋಧ ವ್ಯಕ್ತ ಪಡಿಸುತ್ತಿದ್ದರೂ ಬಿಜೆಪಿ ಇದರ ಹಿಂದೆ ಸರಿಯುತ್ತಿಲ್ಲ. ಸಿಟಿ ರವಿ, ಆರ್,ಅಶೋಕ್, ಅಶ್ವತ್ ನಾರಾಯಣರವರು ಜಾರಿ ಮಾಡುವುದಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಮಸೂದೆಗೆ ಅಂಗೀಕಾರ ಪಡೆಯುವುದಕ್ಕಾಗಿ ವಿಧಾನ ಮಂಡಲ ಅಧಿವೇಶನಕ್ಕೆ ಸಿದ್ದತೆ ನಡೆಸಿದೆ. ಯಡಿಯೂರಪ್ಪನವರ ಬೆನ್ನು ಬಿದ್ದು, ಸ್ಪೀಕರ್ ಕಾಗೇರಿಯವರ ಮನವೊಲಿಸಿ ಈ ಮಸೂದೆ ಮಂಡಿಸಿದ್ದೇವೆ ಎಂದು ಸಿಟಿ ರವಿ ತಮ್ಮ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಗೋಹತ್ಯೆ ನಿಷೇಧದಿಂದ ಆಹಾರದ ಹಕ್ಕಿನ ಮೇಲೆ ದಾಳಿಯಾಗುತ್ತಿದೆ, ರೈತರ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ, ನಿರುದ್ಯೋಗ ಸೃಷ್ಟಿಯಾಗುತ್ತಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಇವರೆಲ್ಲರ ಅಭಿಪ್ರಾಯಾಕ್ಕೆ ಸರಕಾರ ಗೌರವ ನೀಡಬಹುದಾ? ಅಥವಾ ಆರ್.ಎಸ್.ಎಸ್ ಅಜೆಂಡಾದ ಅನುಷ್ಠಾನದಲ್ಲಿ ಯಡಿಯೂರಪ್ಪ ಸಂಭ್ರಮಿಸಬಹುದಾ? ಕಾದು ನೋಡಬೇಕಿದೆ.
ವಿಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ