ಗೋದಾರ್ದ : ವಿಗ್ರಹಭಂಜಕ, ಬಂಡುಕೋರ ನಿರ್ದೇಶಕ

ಬಿ. ಶ್ರೀಪಾದ ಭಟ್

ಟೈಮ್ ಪತ್ರಿಕೆ ‘ಗೋದಾರ್ದ ಸಿನಿಮಾಗಳನ್ನು ನೋಡುವುದು ಕಷ್ಟ, ನೋಡುವುದನ್ನು ನಿಲ್ಲಿಸುವುದೂ ಕಷ್ಟ’ ಎಂದು ವಿಮರ್ಶಿಸಿತ್ತು. 1970ರ ದಶಕದ ನಂತರ ಗೋದಾರ್ದ ಸಿನಿಮಾಗಳು ರಾಜಕೀಯಕರಣಗೊಂಡವು, ಹಿಂದಿನ auteur ಶೈಲಿಯನ್ನು ಅಣಕಿಸುವ ಪ್ರತಿಸಂಸ್ಕೃತಿಯಂತೆ ಬಿಂಬಿತವಾಗಿದ್ದವು ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. 1967ರಲ್ಲಿ ಬಿಡುಗಡೆಯಾದ ‘ವೀಕೆಂಡ್’ ಸಿನಿಮಾ ಮೂಲಕ ಸಾಮ್ರಾಜ್ಯಶಾಹಿ, ಬಂಡವಾಳಶಾಹಿ ವಿರೋಧಿ ಕಥನದ ಹಾದಿಯನ್ನು ತುಳಿದರು. ಚಾರ್ಲ್ಸ್‌ ಡಿಗಾಲೆ, ವಿಯೆಟ್ನಾಂ ಯುದ್ಧ, ಬಂಡವಾಳಶಾಹಿ, ಹಾಲಿವುಡ್ ವಿರುದ್ಧ ತನ್ನ ಬಂಡಾಯ ಘೋಷಿಸಿದ್ದ ಗೋದಾರ್ದ ಎಪ್ಪತ್ತರ ದಶಕದ ನಂತರ ಪಕ್ಕಾ ರಾಜಕೀಯ ವ್ಯಾಖ್ಯಾನಕಾರರಾಗಿ ಬದಲಾದರು ಎಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ.

ಫ್ರೆಂಚ್ ಹೊಸ ಅಲೆ ಸಿನಿಮಾ ಚಳುವಳಿಯ ಮುಂಚೂಣಿಯಲ್ಲಿದ್ದ, ನವ ವಾಸ್ತವತಾವಾದದ ಹರಿಕಾರ ನಿರ್ದೇಶಕ ಗೋದಾರ್ದ 91ನೆ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ವರ್ಷ ಕೇರಳ ಸಿನಿಮಾ ಉತ್ಸವದಲ್ಲಿ ಭಾಗವಹಿಸಿ ಆನ್‌ಲೈನ್ ಸಂದರ್ಶನದಲ್ಲಿ ಮಾತನಾಡುತ್ತಾ ‘ನಾನು ನನ್ನ ಸಿನಿಮಾ ಬದುಕನ್ನು ಮುಗಿಸುತ್ತಿದ್ದೇನೆ. ಹೌದು ನನ್ನ ಸಿನಿಮಾ ನಿರ್ಮಾಣದ ಬದುಕನ್ನು….. ಎರಡು ಚಿತ್ರಕತೆಗಳನ್ನು ಬರೆದು ಮುಗಿಸುತ್ತಿದ್ದೇನೆ, ನಂತರ ಗುಡ್ ಬೈ, ಗುಡ್ ಬೈ…’ ಎಂದು ಹೇಳಿದ್ದರು. ಕಡೆಗೂ ಮುಗಿಸಿದ್ದಾರೆ. ಅವರ ಅರವತ್ತು ವರ್ಷಗಳ ಸಿನಿಮಾ ಬದುಕು ನಾವೆಲ್ಲಾ ಕನಸುವಂತ ಪಯಣ. ಮೇಲ್ವರ್ಗದ ಕುಟುಂಬದಲ್ಲಿ ಜನಿಸಿದ ಗೋದಾರ್ದಗೆ ಅರಿವು ಮೂಡಿದಂತೆ ತನ್ನ ತಾತ ನಾಜಿಗಳೊಂದಿಗೆ ಹತ್ತಿರವಾಗಿದ್ದರು ಎಂದು ಗೊತ್ತಾಗಿ ಅಸಹ್ಯಪಟ್ಟರು ಮತ್ತು ಪ್ರತಿಭಟನೆಯಾಗಿ ಮನೆಯನ್ನೇ ತೊರೆದರು. ಎರಡನೇ ಯುದ್ಧದ ನಂತರದ ಫ್ರಾನ್ಸ್ ಆರ್ಥಿಕವಾಗಿ ದಿವಾಳಿಯಾಗಿತ್ತು. ಸಾಂಸ್ಕೃತಿಕವಾಗಿ ಬದಲಾವಣೆಗೆ ಹಾತೊರೆಯುತ್ತಿತ್ತು. ಇಂತಹ ಕುದಿಯುವಂತಹ ಐವತ್ತರ ದಶಕದ ಪ್ಯಾರಿಸ್‌ಗೆ ಬಂದ ಗೋದಾರ್ದ ಸಿನಿಮಾ ವಿಮರ್ಶಕರಾಗಿ ತಮ್ಮ ಇನ್ನಿಂಗ್ಸ್ ಆರಂಬಿಸಿದರು. ಅಲ್ಲಿ ತನ್ನ ಸಮಾನ ಮನಸ್ಕರಾದ ಎರಿಕ್ ರ‍್ಹೋಮರ್, ಅಗ್ನೇಸ್ ವಾರ್ದಾ, ಟ್ರುಫೋ, ರಿವೆಟ್ಟೆ, ಮೆಲ್ವಿಲ್ಲೆರಂತಹ ಉದಯೋನ್ಮುಖ ನಿರ್ದೇಶಕರ ಜೊತೆ ಸೇರಿ Cahiers du Cinéma ಪ್ರಕಾಶನದ ಮೂಲಕ ಹಳೆಯ ಯುರೋಪಿಯನ್ ಸಾಂಪ್ರದಾಯಿಕ ಶೈಲಿಯನ್ನು ಮುರಿದು ಹೊಸ ಅಲೆಯ ಸಿನಿಮಾ ಚಳುವಳಿಗೆ ನಾಂದಿ ಹಾಡಿದರು. ಇದನ್ನು ಫ್ರೆಂಚ್ ಮಾದ್ಯಮ La Nouvelle Vague ಎಂದು ಕರೆಯಿತು. ಈ ಒಡನಾಡಿಗಳು 1950ರ ದಶಕದ ಆರಂಭದಲ್ಲಿ ಸಿನಿಮಾ ನೋಡುವ ಮತ್ತು ವಿಮರ್ಶೆ ಮಾಡುವ ಮೂಲಕ auteur ಮಾದರಿಯನ್ನು ಪರಿಚಯಿಸಿದರು. ಅಂದರೆ ಒಂದು ಕತೆ, ಕಾದಂಬರಿಯ ರೀತಿ ಸಿನಿಮಾ ನಿರ್ಮಾಣ, ನಿರ್ದೇಶನ ಮಾಡುವ ಈ auteur ಶೈಲಿಯನ್ನು ನೆಚ್ಚಿಕೊಂಡಿದ್ದ ಗೋದಾರ್ದ ‘ವಿಮರ್ಶಕನಾಗಿ ನನ್ನ ಸಿನಿಮಾ ನಿರ್ಮಾಣವನ್ನು ವಿಮರ್ಶಕನಂತೆ ಪರಿಭಾವಿಸುತ್ತೇನೆ… ನಿರ್ದೇಶನವು ಒಂದು ನೋಟವಾದರೆ, ಸಂಯೋಜನೆಯು ಹೃದಯಬಡಿತವಿದ್ದಂತೆ’ ಎಂದು ವಿವರಿಸಿದರು.

1960-70ರ ಆ ದಶಕದ ಹೊಸ ಅಲೆಯ ಸಿನಿಮಾದ ಮುಂಚೂಣಿಯಲ್ಲಿದ್ದ ಗೋದಾರ್ದ ಮತ್ತು ಆತನ ಒಡನಾಡಿಗಳು ಸಿನಿಮಾ ಜಗತ್ತಿಗೆ ಇದ್ದ ಎಲ್ಲಾ ಮಡಿವಂತಿಕೆಯ ಗಡಿಗಳನ್ನು ಕಿತ್ತು ಬಿಸಾಡಿದರು. ‘ಹೊಸ ಅಲೆ ಸಿನಿಮಾವೆಂದರೆ ವಾಸ್ತವವನ್ನು ಅನುಕರಣೆ ಮಾಡುವುದಲ್ಲ, ವಾಸ್ತವವಾಗಿ ಚಿತ್ರೀಕರಿಸುವುದು’ ಎಂದ ಗೋದಾರ್ದ ಇಲ್ಲಿ ಮುರಿಯದೆ ಹೊಸದನ್ನು ಕಟ್ಟಲು ಸಾದ್ಯವಿಲ್ಲ ಎಂದು ಗಾಢವಾಗಿ ನಂಬಿದ್ದರು. 1958ರಲ್ಲಿ ನಿರ್ದೇಶಕ ಟ್ರುಫೋ ‘400 ಬ್ಲೋಸ್’ ಸಿನಿಮಾ ಮೂಲಕ ಈ ಹೊಸ ಅಲೆ ಚಳುವಳಿಗೆ ವಿಸ್ತಾರವಾದ ಅಡಿಪಾಯ ಹಾಕಿಕೊಟ್ಟರೆ ಗೋದಾರ್ದ, ವಾರ್ದ ಮುಂತಾದವರು ಅದನ್ನು ಕಟ್ಟುತ್ತಾ ಹೋದರು ಮತ್ತು ಹೊಸ ಸಂಚಲನ ಮೂಡಿಸಿದರು. ಸವಕಲಾದ ಮುಖ್ಯವಾಹಿನಿ ಸಿನಿಮಾವನ್ನು ಡೆಡ್ ಎಂಡ್ ತಲುಪಿದ ‘ಗುಣಮಟ್ಟದ ಪರಂಪರೆ’ ಎಂದು ಟೀಕಿಸುವ ಎದೆಗಾರಿಕೆಯಿದ್ದ ಗೋದಾರ್ದ ಯುರೋಪಿಯನ್ ಸಿನಿಮಾದ ರೂಢಿಗತ ಸಿದ್ಧ ಮಾದರಿಯನ್ನು ವಿಗ್ರಹಭಂಜಕನಂತೆ ಒಡೆಯುತ್ತಾ ಹೊಸ ರಚನೆಗಳನ್ನು ಕಟ್ಟಿದರು. ಕತೆ ಹೇಳುವುದೆಂದರೆ ಕಲೆಗಾರಿಕೆಯಲ್ಲ, ನಾಜೂಕುತನವಲ್ಲ. ಬದಲಿಗೆ ಅಡ್ಡಾದಿಡ್ಡಿಯಾಗಿದ್ದರೂ ಸಹ ಅದು ದಿಟ್ಟತನದಿಂದ ಕೂಡಿರಬೇಕು, ತಾಜಾತನವಿರಬೇಕು ಮತ್ತು ಅರ್ಥಪೂರ್ಣವಾಗಿರಬೇಕು ಎಂದು ನಂಬಿದ ಗೋದಾರ್ದ ಮುರಿದು ಕಟ್ಟುವುದಕ್ಕೆ ಮಾದರಿ ನಿರ್ದೇಶಕನಾಗಿದ್ದರು. ಅಲ್ಲಿ ಬಂಡುಕೋರುತನವಿತ್ತು, ಒರಟುತನವಿತ್ತು, ಆಧುನಿಕತೆಯೂ ಇತ್ತು, ಕೇಂದ್ರದಿಂದ ಪಕ್ಕಕ್ಕೆ ಜರಗುವ ಹೊರಳುವಿಕೆಯೂ ನಿರಂತರವಾಗಿತ್ತು. ಮುಖ್ಯವಾಗಿ ಶ್ರೇಷ್ಠತೆಯ ವ್ಯಸನವಿರಲಿಲ್ಲ.

1960ರಲ್ಲಿ ಬಿಡುಗಡೆಯಾದ ಗೋದಾರ್ದನ ‘ಬ್ರೆತ್‌ಲೆಸ್’ ಸಿನಿಮಾ ನಿರ್ಮಾಣದ ಮತ್ತು ನೋಡುವ ವ್ಯಾಕರಣವನ್ನೇ ಬದಲಿಸಿಬಿಟ್ಟಿತು. ‘ನಾನು ಏನನ್ನಾದರೂ ಹೇಳುತ್ತೇನೆ, ಆದರೆ ಅರ್ಥಪೂರ್ಣವಾಗಿರುತ್ತದೆ, ಅದನ್ನು ದಕ್ಕಿಸಿಕೊಳ್ಳುವುದು ನಿಮಗೆ ಬಿಟ್ಟಿದ್ದು’ ಎಂಬಂತೆ ಈ ಸಿನಿಮಾ ಮೂಲಕ ತಿರುಗುಮುರುಗಾದ ಫಾರ್ಮ ಮತ್ತು ಅಸಂಪ್ರದಾಯಿಕ ದೃಶ್ಯಗಳನ್ನು ಕಟ್ಟಿದ ಗೋದಾರ್ದ ಒಂದಕ್ಕೊಂದು ಹೆಣಿಗೆಯಿಲ್ಲದ ನಿರೂಪಣೆಯ ಸರ‍್ರಿಯಲಿಸಂ ಶೈಲಿಯನ್ನು ಹುಟ್ಟು ಹಾಕಿದರು. ಆಧುನಿಕ ಬದುಕಿನ ಸಂಘರ್ಷವನ್ನು ಉಡಾಫೆಯಲ್ಲಿ ತೋರಿಸಿದಂತೆ ಕಂಡುಬಂದರೂ ಅದಕ್ಕೆ ನಿರಂತರತೆಯೇ ಇಲ್ಲ ಎಂದು ಕಥನ ಕಟ್ಟಿದರು. ‘ಒಂದು ಸಿನಿಮಾಗೆ ಆರಂಭವಿರುತ್ತದೆ, ಮದ್ಯಂತರವಿರುತ್ತದೆ, ಕ್ಲೈಮಾಕ್ಸ್ ಇರುತ್ತದೆ. ಆದರೆ ಅದು ಅನುಕ್ರಮವಾಗಿರಬೇಕು ಎನ್ನುವ ನಿಯಮವಿಲ್ಲ’ ಎಂದು ಹೇಳಿದ ಗೋದಾರ್ದ ‘ಬ್ರೆತ್‌ಲೆಸ್’ ಸಿನಿಮಾ ಮೂಲಕ ‘ಜಂಪ್ ಕಟ್’ ಎನ್ನುವ ಹೊಸ ಟ್ರೆಂಡ್ ಸೃಷ್ಟಿಸಿದರು. (ಒಂದು ಶಾಟ್‌ನ ಮಧ್ಯಭಾಗವನ್ನು ತುಂಡರಸಿ ಮೊದಲ ಮತ್ತು ಕಡೆಯ ಭಾಗವನ್ನು ಜೋಡಿಸುವುದು). ಇದಕ್ಕೂ ಮೊದಲು ಮೂವತ್ತು, ನಲವತ್ತರ ದಶಕದಲ್ಲಿ ‘ಜಂಪ್ ಕಟ್’ ಶೈಲಿಯನ್ನು ಅಪ್ರಬುದ್ಧ, ಅಸಂಬದ್ಧ ಎಂದು ತಿರಸ್ಕಾರಕ್ಕೆ ಗುರಿಯಾಗಿತ್ತು. ಗೋದಾರ್ದ ಅದನ್ನು ರೂಢಿಗತಗೊಳಿಸಿದ ನಂತರ ಸಿದ್ಧ ಮಾದರಿಗಳನ್ನು ಮುರಿಯುವ ಶೈಲಿಯೆಂದೇ ಖ್ಯಾತಿಯಾಯಿತು. ಅದೇ ವರ್ಷ ಇಟಲಿಯಲ್ಲಿ ಅಂಟೋನಿಯೋನಿಯ ‘L’Avventura’, ಫೆಡರಿಕೋ ಫೆಲಿನಿಯ “La Dolce Vita”, ಭಾರತದಲ್ಲಿ ರುತ್ವಿಕ್ ಘಟಕ್ ನಿರ್ದೇಶನದ ‘ಮೇಘಾ ಡಾಕೆ ತಾರಾ’, ಸ್ವೀಡನ್‌ನಲ್ಲಿ ಇಂಗ್ಮರ್ ಬರ್ಗಮನ್ ನಿರ್ದೇಶನದ ‘The Virgin Spring’ ಎಂಬ ಹೊಸ ಸಂವೇದನೆ ಮತ್ತು ಹೊಸ ಅಲೆಯ ಸರ‍್ರಿಯಲಿಸಂ ಸ್ಪರ್ಶದ ಸಿನಿಮಾಗಳು ಬಿಡುಗಡೆಯಾದವು. ನಾವು ಬರುತ್ತಿದ್ದೇವೆ ಎನ್ನುವ ಹೇಳಿಕೆಯನ್ನು ನೀಡಿದರು. ಕ್ರಿಯಾಶೀಲ ನಿರ್ದೇಶಕರು ಏಕರೂಪದಲ್ಲಿ ಚಿಂತಿಸುವ ಈ ಬಗೆಯು ಕಾಕಾತಾಳಿಯವೇ?

1960ರ ದಶಕದಲ್ಲಿ ಸಾರ್ತ್ರೆಯ ‘ಆಸ್ತಿತ್ವವಾದದ’ ತತ್ವವನ್ನು ಅನುಸರಿಸಿದ ಗೋದಾರ್ದನ 1962ರಲ್ಲಿ ಬಿಡುಗಡೆಯಾದ Vivre sa vie ಸಿನಿಮಾ 12 ಎಪಿಸೋಡ್‌ಗಳ ಮೂಲಕ ನಿರೂಪಿತವಾಗಿದೆ. ಗೋದಾರ್ದನ ಮೊದಲ ಹೆಂಡತಿ ಅನ್ನಾ ಕರೀನಾ ಇಲ್ಲಿನ ಪ್ರೊಟಗಾನಿಸ್ಟ್. ಇಲ್ಲಿ ದುರಂತ ಪಾತ್ರಗಳನ್ನು ಅದ್ಭುತವೆನಿಸುವ ದೃಶ್ಯಗಳ ಮೂಲಕ ನಿರೂಪಿಸುತ್ತಾರೆ. 1963ರಲ್ಲಿ Le Petit Soldat (The Little Soldier) ಎನ್ನುವ ಪ್ರಭುತ್ವ ವಿರೋಧಿ ಸಿನಿಮಾ ನಿರ್ದೇಶಿಸಿದ. ತನ್ನದೇ ದೇಶ ಫ್ರೆಂಚ್ ವಸಾಹತುಶಾಹಿ ಪಕ್ಕದ ಅಲ್ಜೀರಿಯಾದ ಸಾರ್ವಭೌಮವನ್ನೇ ಧಿಕ್ಕರಿಸಿ ಅದರ ಸ್ವಾತಂತ್ರ್ಯವನ್ನು ನಿರಾಕರಿಸಿ ಯುದ್ಧ ನಡೆಸಿರುವುದನ್ನು ಟೀಕಿಸಿದ. ಆದರೆ ಇಲ್ಲಿ ವಸಾಹುತುಶಾಹಿ ವಿರೋಧಿ ಪ್ರಣಾಳಿಕೆಯಿಲ್ಲ ಎಂದು ವಿಮರ್ಶಕರು ಟೀಕಿಸಿದ್ದರು. ಆಗ ಫ್ರಾನ್ಸ್‌ನಲ್ಲಿ ಮೂರು ವರ್ಷಗಳ ಕಾಲ ‘Le Petit Soldat ಸಿನಿಮಾವನ್ನು ನಿಷೇಧಿಸಿದ್ದರು. 1963ರಲ್ಲಿ ಬಿಡುಗಡೆಯಾದ ‘ಕಂಟೆಂಪ್ಟ್’ ಬಹುಶಃ ಗೋದಾರ್ದರ ಕಮರ್ಷಿಯಲ್ ಸಿನಿಮಾ ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. ಅದು ಬಿಗ್ ಬಜೆಟ್ ಸಿನಿಮಾ. ದುರಹಂಕಾರಿ ಅಮೇರಿಕನ್ ನಿರ್ಮಾಪಕ, ಪ್ರತಿಷ್ಠೆಯ ಯುರೋಪಿಯನ್ ನಿರ್ದೇಶಕ ಮತ್ತು ಭ್ರಮನಿರಸನಗೊಂಡ ಹೆಂಡತಿಯ ನಡುವೆ ಬಳಲುವ ಚಿತ್ರಕತೆಗಾರ ಇಲ್ಲಿನ ಪ್ರೊಟಗಾನಿಸ್ಟ್. ವೈವಾಹಿಕ ಬದುಕಿನ ಬಿರುಕುಗಳನ್ನು ನಿರೂಪಿಸುವ ಈ ಸಿನಿಮಾ ಗೋದಾರ್ದತನವನ್ನು ಬಯಸುವ ಅಭಿಮಾನಿಗಳಿಗೆ ಹುಬ್ಬೇರಿಸುವಂತೆ ಮಾಡಿದ್ದು ನಿಜ. ಸಿನಿಮಾವೆಂದರೆ ಅದು ಹೇಳುವ ಕತೆ ಮತ್ತು ಸ್ವತಃ ಸಿನಿಮಾ ಹೇಗೆ ನಿರ್ಮಾಣವಾಗಿದೆ, ಪ್ರೇಕ್ಷಕ ಹೇಗೆ ಸ್ವೀಕರಿಸಿದ್ದಾನೆ ಎನ್ನುವ ಕತೆ ಎರಡೂ ಸಹ ಎಂದು ನಂಬಿದ್ದ ಗೋದಾರ್ದ ತನ್ನ ಈ ನಂಬಿಕೆಗೆ ಬದ್ಧನಾಗಿ ದ್ಯಾನಸ್ಥನಂತೆ ಪ್ರಯೋಗಗಳನ್ನು ಮಾಡಿದರು.

1964ರಲ್ಲಿ Bande à part (Band of Outsiders) ಎನ್ನುವ ಗ್ಯಾಂಗ್‌ಸ್ಟರ್ ಸಿನಿಮಾ ನಿರ್ದೇಶಿಸಿದರು. ಇದು ಒಡಿಲೆ, ಅರ್ಥುರ್, ಫ್ರಾಂಜ್ ನಡುವಿನ ಪ್ರೇಮವೂ ಹೌದು. ತ್ರಿಕೋನ ಪ್ರೇಮವೇ? ಹೌದು ಮತ್ತು ಇಲ್ಲ. 1960-65ರ ಅವಧಿಯಲ್ಲಿ 9 ಸಿನಿಮಾಗಳನ್ನು ನಿರ್ದೇಶಿಸಿದ, ತಮ್ಮ ಸಿನಿಮಾಗಳ ಮೂಲಕ ನಿರಂತರ ಪ್ರಯೋಗಕ್ಕೆ ಒಳಪಡಿಸಿಕೊಳ್ಳುತ್ತಿದ್ದ ಗೋದಾರ್ದ Pierrot le fou ಮೂಲಕ ಮತ್ತೊಂದು ದಿಕ್ಕಿಗೆ ಹೊರಳಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ‘ಈ ಬಾರಿ ನನ್ನ ಮೊದಲ ಸಿನಿಮಾ ಮಾಡುತ್ತಿದ್ದೇನೆ ಎನ್ನುವ ಅನುಭವವಾಗುತ್ತಿದೆ. ಹೊಸ ಪ್ರದೇಶವನ್ನು ಪ್ರವೇಶಿಸುತ್ತಿದ್ದೇನೆ’ ಎಂದು ಹೇಳಿದ್ದರು. 1966ರಲ್ಲಿ ಟೈಮ್ ಪತ್ರಿಕೆ ‘ಗೋದಾರ್ದ ಸಿನಿಮಾಗಳನ್ನು ನೋಡುವುದು ಕಷ್ಟ, ನೋಡುವುದನ್ನು ನಿಲ್ಲಿಸುವುದೂ ಕಷ್ಟ’ ಎಂದು ವಿಮರ್ಶಿಸಿತ್ತು. 1970ರ ದಶಕದ ನಂತರ ಗೋದಾರ್ದ ಸಿನಿಮಾಗಳು ರಾಜಕೀಯಕರಣಗೊಂಡವು, ಹಿಂದಿನ auteur ಶೈಲಿಯನ್ನು ಅಣಕಿಸುವ ಪ್ರತಿಸಂಸ್ಕೃತಿಯಂತೆ ಬಿಂಬಿತವಾಗಿದ್ದವು ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. 1967ರಲ್ಲಿ ಬಿಡುಗಡೆಯಾದ ‘ವೀಕೆಂಡ್’ ಸಿನಿಮಾ ಮೂಲಕ ಸಾಮ್ರಾಜ್ಯಶಾಹಿ, ಬಂಡವಾಳಶಾಹಿ ವಿರೋಧಿ ಕಥನದ ಹಾದಿಯನ್ನು ತುಳಿದರು. ಚಾರ್ಲ್ಸ್‌ ಡಿಗಾಲೆ, ವಿಯೆಟ್ನಾಂ ಯುದ್ಧ, ಬಂಡವಾಳಶಾಹಿ, ಹಾಲಿವುಡ್ ವಿರುದ್ಧ ತನ್ನ ಬಂಡಾಯ ಘೋಷಿಸಿದ್ದ ಗೋದಾರ್ದ ಎಪ್ಪತ್ತರ ದಶಕದ ನಂತರ ಪಕ್ಕಾ ರಾಜಕೀಯ ವ್ಯಾಖ್ಯಾನಕಾರರಾಗಿ ಬದಲಾದರು ಎಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ.

ವಿಶೇಷವೆಂದರೆ ಮುಖ್ಯವಾಹಿನಿಯನ್ನೇ ತಿರಸ್ಕರಿಸಿದ ಗೋದಾರ್ದನಿಂದ ಪ್ರಭಾವಿತರಾದ ಮಾರ್ಟಿನ್ ಸ್ಕಾರ್ಸೇಸ್, ಟೊರಿಂಟೋನೋ ನಿರ್ದೇಶಕರು ಆತನ ಶೈಲಿಯನ್ನು ಅನುಸರಿಸಿ ಟ್ಯಾಕ್ಸಿ ಡ್ರೈವರ್, ಪಲ್ಪ್ ಫಿಕ್ಷನ್‌ನಂತಹ ಪಕ್ಕಾ ಜನಪ್ರಿಯ ಮಾದರಿ ಸಿನಿಮಾಗಳನ್ನು ನಿರ್ದೇಶಿಸಿದರು.

ತನ್ನ ಸಿನಿಮಾ ಪ್ರಯೋಗಗಳನ್ನು ಹಾಲಿವುಡ್‌ಗೆ ಪ್ರತಿರೋಧ ಚಳುವಳಿ ಎಂದು ಹೇಳುತ್ತಿದ್ದ ಗೊದಾರ್ದ ಗೆ 2010ರಲ್ಲಿ ಗೌರವ ಆಸ್ಕರ್ ಪ್ರಶಸ್ತಿ ಘೋಷಿಸಿದರು. ಆದರೆ ಸ್ವೀಕರಿಸಲು ಸಮಾರಂಭಕ್ಕೆ ತೆರಳಲು ನಿರಾಕರಿಸಿದ ಗೋದಾರ್ದ ಅಕಾಡೆಮಿಗೆ ಇಷ್ಟವಾಗಿದ್ದರೆ ಕೊಟ್ಟುಕೊಳ್ಳಲಿ, ಅವರು ನನ್ನ ಸಿನಿಮಾಗಳನ್ನು ನೋಡಿದ್ದಾರೆಯೇ’ ಎಂದು ಖಾರವಾಗಿ ಪ್ರಶ್ನಿಸಿದರು. ಬಂಡವಾಳಶಾಹಿ ವ್ಯವಸ್ಥೆಯನ್ನು ಟೀಕಿಸುತ್ತಿದ್ದ ಗೋದಾರ್ದ ಮಾರ್ಕ್ಸಿಸ್ಟ್ ಚಿಂತನೆಗಳನ್ನು ಅಪ್ಪಿಕೊಂಡರು. ವಿಯೆಟ್ನಾಂ ಯುದ್ಧವನ್ನು ವಿರೋಧಿಸಿದರು, ಪ್ಯಾಲೇಸ್ಟಿಯನ್‌ರ ಸಾರ್ವಭೌಮತೆ, ಸ್ವಾಯತ್ತತೆ ಹೋರಾಟವನ್ನು ಬೆಂಬಲಿಸಿದರು. ಈ ಸಂದರ್ಭದಲ್ಲಿ ‘ಇಸ್ರೇಲ್’ ವಿರುದ್ಧ ಮಾಡಿದ ಟೀಕೆಗಳನ್ನು ಆಧರಿಸಿ ಗೋದಾರ್ದ ಸೆಮೆಟಿಕ್ ವಿರೋಧಿ ಎಂದು ಅಮೇರಿಕನ್ನರು ಜರೆದರು. ಆದರೆ 2011ರಲ್ಲಿ ಗೋದಾರ್ದ ಇದನ್ನು ಅಲ್ಲಗೆಳೆದರು. ನಾನು ಮೂಲಭೂತವಾಗಿ ವಿಮರ್ಶಕ, ಆದರೆ ಸಿನಿಮಾ ನಿರ್ದೇಶನ ಮಾಡಿದೆ ಎಂದು ತನ್ನನ್ನು ವಿಮರ್ಶಿಸಿಕೊಳ್ಳುತ್ತಿದ್ದ ಗೋದಾರ್ದ ತನ್ನ ಆದರ್ಶವಾಗಿ ಬ್ರೆಕ್ಟ್‌ ನ ‘ಎಪಿಕ್ ರಂಗಭೂಮಿ’ ಆಯಾಮಗಳನ್ನು ತನ್ನ ಸಿನಿಮಾಗಳಲ್ಲಿ ಆವಾಹಿಸಲು ಪ್ರಯತ್ನಿಸುತ್ತಿದ್ದರು. ಸಿನಿಮಾದಲ್ಲಿ ರಸಿಕತೆಯನ್ನು ಲೇವಡಿ ಮಾಡಲು ಬ್ರೆಕ್ಟಿಯನ್ ತಂತ್ರ ಬಳಸಿಕೊಳ್ಳುತ್ತಿದ್ದರು. ಗೋದಾರ್ದರ ಸಿನಿಮಾಗಳಿಗೆ ಕತೆಯ ಹಂಗಿರುತ್ತಿರಲಿಲ್ಲ. ‘ಎಲ್ಲಿಂದ ಆರಿಸಿಕೊಂಡೆ ಎಂಬುದಲ್ಲ, ಎಲ್ಲಿಗೆ ಕೊಂಡೊಯ್ಯುತ್ತೀಯ ಎಂಬುದು ಮುಖ್ಯ’ವೆಂದು ನಂಬಿದ್ದರು.

ಅವರ ಬಹುಕಾಲದ ಕಾನೂನು ಸಲಹೆಗಾರ ಪಾಟ್ರಿಕ್ ಜೆನ್ನೆರ್ಟ ‘ಇನ್ನು ಸಾಕು ಎಂದು ನಿರ್ಧರಿಸಿದ ಗೋದಾರ್ದ ನೆರವಿನ ಆತ್ಮಹತ್ಯೆಯ ಮೂಲಕ ನಿಧನರಾದರು’ ಎಂದು ತಿಳಿಸಿದರು. ನಮ್ಮ ಸಿನಿಮಾ ನೋಡುವ ದೃಷ್ಟಿಕೋನವನ್ನೇ ಬದಲಿಸಿದ ಈ ವಿಗ್ರಹಭಂಜಕನಿಗೆ ನಾವು ಖುಣಿಗಳಾಗಿದ್ದೇವೆ.

Donate Janashakthi Media

Leave a Reply

Your email address will not be published. Required fields are marked *