ಚೆನ್ನೈ: ಸಾಮಾಜಿಕ ನ್ಯಾಯ ಮತ್ತು ಒಕ್ಕೂಟ ತತ್ವಗಳಿಗೆ ಬದ್ಧವಾಗಿರುವವರಿಗೆ ಮಾತ್ರ ಮುಂಬರುವ 2024ರಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸುವವರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಮುಂದಿನ ಗುರಿಯಾಗಿದೆ ಡಿಎಂಕೆ ಪಕ್ಷದ ಅಧ್ಯಕ್ಷ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ನಾವು ಇದನ್ನು ಗುರಿಯಾಗಿಟ್ಟುಕೊಂಡು ರಾಜಕೀಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಸಂದೇಶ ನೀಡಿರುವ ಸ್ಟಾಲಿನ್ ಅವರು, 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲಾ 39 ಲೋಕಸಭಾ ಸ್ಥಾನ ಮತ್ತು ಪುದುಚೇರಿಯ ಏಕೈಕ ಸ್ಥಾನವನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ ಮತ್ತು ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಗೆ ಸಹಾಯ ಮಾಡುವುದೇ ನಮ್ಮ ಆದ್ಯತೆ ಎಂದು ತಿಳಿಸಿದ್ದಾರೆ.
ನರ್ಪತುಂ ನಮತೇ, ನಾಡುಂ ನಮತೇ ‘ (40 ಲೋಕಸಭೆ ಸ್ಥಾನಗಳೂ ನಮ್ಮದೆ, ರಾಷ್ಟ್ರವೂ ನಮ್ಮದೆ) ಎಂಬ ಘೋಷವಾಕ್ಯದಲ್ಲಿ ಸರಣಿ ವಿಡಿಯೊ ಸಂದೇಶಗಳನ್ನು ಹರಿಬಿಡಲಾಗಿದೆ.
ದ್ರಾವಿಡ ಸಿದ್ಧಾಂತ, ದ್ರಾವಿಡ ಮಾದರಿ ಆಡಳಿತ, ಆಡಳಿತ ಮತ್ತು ಮುಂತಾದ ವಿಷಯಗಳ ಕುರಿತು ಜನರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕೇಳುವ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವುದು I ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಡಿಎಂಕೆ ಹೇಳಿದೆ.
ನೀಟ್ ಕುರಿತ ಪ್ರಶ್ನೆಗೆ ಪ್ರತಿಕ್ರಿಸಿದ ಎಂ ಕೆ ಸ್ಟಾಲಿನ್, ತಮಿಳುನಾಡಿಗೆ ಪರೀಕ್ಷೆಯಿಂದ ವಿನಾಯಿತಿ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ “ವಿಳಂಬವಾಗಿದೆ ಎಂಬ ಕಾರಣಕ್ಕೆ ಅದು ಆಗುವುದಿಲ್ಲ ಎಂಬ ತೀರ್ಮಾನಕ್ಕೆ ಬರಬೇಡಿ. ನೀಟ್ ಜಾರಿಯ ಮೂಲಕ ಬಿಜೆಪಿ ಜನರಿಗೆ ಅನ್ಯಾಯ ಮಾಡಿದೆ. ಜನರೇ ಬಿಜೆಪಿ ನೇತೃತ್ವದ ಕೇಂದ್ರವನ್ನು ಟೀಕಿಸುತ್ತಿದ್ದಾರೆ. ಸಂಸತ್ ಚುನಾವಣೆಯಲ್ಲಿ ಕೇಸರಿ ಪಕ್ಷಕ್ಕೆ ಜನರು ತಕ್ಕ ಪಾಠವನ್ನೇ ಕಲಿಸುತ್ತಾರೆ ಎಂದು ಹೇಳಿದರು.
ಡಿಎಂಕೆ ಪಕ್ಷವು 2021ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುನ್ನ ನೀಡಿದ ಚುನಾವಣಾ ಭರವಸೆಗಳಲ್ಲಿ ಶೇಕಡಾ 70 ಕ್ಕಿಂತ ಹೆಚ್ಚು ಈಡೇರಿಸಿದೆ. ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಕೇಂದ್ರ ಸರ್ಕಾರವು ಸೂಕ್ತ ಬೆಂಬಲವನ್ನು ನೀಡಿದ್ದರೆ, ಡಿಎಂಕೆ ಆಡಳಿತವು ಹೆಚ್ಚಿನ ಕಲ್ಯಾಣ ಯೋಜನೆಗಳನ್ನು ರೂಪಿಸುತ್ತಿತ್ತು ಎಂದು ಅವರು ಹೇಳಿದರು.
ಬಿಜೆಪಿಯೊಂದಿಗೆ ಡಿಎಂಕೆ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಟೀಕೆಗಳ ಕುರಿತು ಕೇಳಿ ಬಂದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದು, “ಬಿಜೆಪಿಯೇ ಅಂತಹ ಹೇಳಿಕೆಯನ್ನು ಒಪ್ಪಿಕೊಳ್ಳುವುದಿಲ್ಲ” ಎಂದು ತಿರುಗೇಟು ನೀಡಿದರು.