ಗೋವಾ: ಕಳೆದ 5 ವರ್ಷಗಳಲ್ಲಿ ಶೇ 60 ಶಾಸಕರ ಪಕ್ಷಾಂತರ!

ಪಣಜಿ: ಗೋವಾ ವಿಧಾನಸಭೆಯಲ್ಲಿ ಒಟ್ಟು 40 ಸ್ಥಾನಗಳಿದ್ದು, ಕಳೆದ ಐದು ವರ್ಷಗಳಲ್ಲಿ ಶೇ 60ರಷ್ಟು, ಅಂದರೆ 24 ಶಾಸಕರು ಪಕ್ಷಾಂತರ ಮಾಡುವ ಮೂಲಕ ‘ದಾಖಲೆ’ ಮಾಡಿದ್ದಾರೆ.

ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಗೋವಾ ರಾಜಕೀಯವು ಪಕ್ಷಾಂತರ ವಿಚಾರದಲ್ಲಿ ಅಸಮಾನ ದಾಖಲೆ ನಿರ್ಮಿಸಿದೆ ಎಂದು ‘ಅಸೋಸಿಯೇಷನ್‌ ಆಫ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌’ (ಎಡಿಆರ್‌) ವರದಿ ಮಾಡಿದೆ. ಫೆಬ್ರವರಿ 14ರಂದು ಗೋವಾ ವಿಧಾನಸಭೆ ಚುನಾವಣೆ ನಡೆಯಲಿದೆ.

‘ಪ್ರಸಕ್ತ ವಿಧಾನಸಭೆಯ 5 ವರ್ಷಗಳ ಅವಧಿಯಲ್ಲಿ (2017-2022) ಸುಮಾರು 24 ಶಾಸಕರು ಪಕ್ಷವನ್ನು ಬದಲಿಸಿದ್ದಾರೆ. ಅಂದರೆ ಒಟ್ಟು ವಿಧಾನಸಭೆ ಸದಸ್ಯರ ಸಂಖ್ಯೆಯ ಶೇಕಡಾ 60ರಷ್ಟು ಶಾಸಕರು ಪಕ್ಷಾಂತರ ಮಾಡಿದ್ದಾರೆ. ಭಾರತದ ಯಾವುದೇ ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಪಕ್ಷಾಂತರ ಚಟುವಟಿಕೆ ನಡೆದಿಲ್ಲ. ಮತದಾರರ ತೀರ್ಪಿಗೆ ಜನಪ್ರತಿನಿಧಿಗಳು ತೋರಿದ ಅಗೌರವದ ಪ್ರಮುಖ ಉದಾಹರಣೆಯಿದು’ ಎಂದು ಎಡಿಆರ್‌ ವರದಿಯಲ್ಲಿ ಉಲ್ಲೇಖಿಸಿದೆ.

2017ರ ಚುನಾವಣೆಗೂ ಮುನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆಗೊಂಡ ವಿಶ್ವಜಿತ್‌ ರಾಣೆ, ಸುಭಾಶ್‌ ಶಿರೋಡ್ಕರ್‌ ಮತ್ತು ದಯಾನಂದ ಸೊಪ್ಟೆ ಅವರ ಹೆಸರನ್ನು 24 ಮಂದಿಯಿರುವ ಪಕ್ಷಾಂತರಿಗಳ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.

2019ರಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಚಂದ್ರಕಾಂತ್‌ ಕಾವ್ಲೆಕರ್‌ ಸೇರಿದಂತೆ 10 ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರಿದ್ದಾರೆ. ಇದೇ ಅವಧಿಯಲ್ಲಿ ಮಹಾ ರಾಷ್ಟ್ರವಾದಿ ಗೋಮಂತಕ್‌ ಪಾರ್ಟಿ (ಎಂಜಿಪಿ)ಯ ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಗೋವಾ ಫಾರ್ವರ್ಡ್‌ ಪಾರ್ಟಿ (ಜಿಎಫ್‌ಪಿ)ಯ ಓರ್ವ ಶಾಸಕ ಬಿಜೆಪಿಗೆ ಹೋಗಿದ್ದಾರೆ.

ಮಾಜಿ ಮುಖ್ಯಮಂತ್ರಿಗಳ ಪಕ್ಷಾಂತರ

ಇತ್ತೀಚೆಗೆ ಗೋವಾ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಶಾಸಕ ರವಿ ನಾಯ್ಕ್‌ ಅವರೂ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮತ್ತೊಬ್ಬ ಗೋವಾ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ ಮುಖಂಡ ಲೂಯಿಜಿನ್ಹೊ ಫಲೆರಿಯೊ ಅವರು ತೃಣಮೂಲ ಕಾಂಗ್ರೆಸ್‌ಗೆ(ಟಿಎಂಸಿ) ಸೇರ್ಪಡೆಗೊಂಡಿದ್ದಾರೆ. ಮತ್ತೊಬ್ಬ ಮಾಜಿ ಮುಖ್ಯಮಂತ್ರಿ, ಎನ್‌ಸಿಪಿ ಮುಖಂಡ ಚರ್ಚಿಲ್‌ ಅಲೆಮಾವೊ ಅವರು ಟಿಎಂಸಿಗೆ ಸೇರಿದ್ದಾರೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಸೆಳೆದುಕೊಂಡಿರುವ ಟಿಎಂಸಿ ಇದೇ ಮೊದಲ ಬಾರಿಗೆ ಗೋವಾದಲ್ಲಿ ಸತ್ವ ಪರೀಕ್ಷೆಗೆ ಇಳಿದಿದೆ.

ಕಾಂಗ್ರೆಸ್‌ನ ಕರ್ಟೊರಿಮ್‌ನ ಶಾಸಕ ರೆಜಿನಾಲ್ಡೊ ಲಾರೆಂಕೊ ಅವರು ಟಿಎಂಸಿ ಸೇರಿದ್ದರು. ಬಳಿಕ ಟಿಎಂಸಿ ತೊರೆದು ಮಾತೃಪಕ್ಷ ಕಾಂಗ್ರೆಸ್‌ಗೆ ಹಿಂತಿರುಗಲು ಯತ್ನಿಸಿದ್ದರು. ಆದರೆ ಕಾಂಗ್ರೆಸ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿಲ್ಲ. ಇದೀಗ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಲಾರೆಂಕೊ ನಿರ್ಧರಿಸಿದ್ದಾರೆ.

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಮತ್ತೊಬ್ಬ ಶಾಸಕ ವಿಲ್‌ಫ್ರೆಜ್‌ ಡಿಸೌಜಾ ಅವರು ಆಡಳಿತ ಪಕ್ಷವನ್ನು ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುತ್ತಿದ್ದಾರೆ. ದೀಪಕ್‌ ಪೌಸ್ಕರ್‌ ಅವರು ಬಿಜೆಪಿ ತೊರೆದಿದ್ದಾರೆ.

ಸ್ವತಂತ್ರ ಎಂಎಲ್‌ಎಗಳಾದ ರೋಹನ್‌ ಖೌಂಟೆ ಮತ್ತು ಗೋವಿಂದ್‌ ಗೌಡೆ ಅವರು ಬಿಜೆಪಿ ಸೇರಿದ್ದಾರೆ. ಮತ್ತೊಬ್ಬ ಸ್ವತಂತ್ರ ಶಾಸಕ ಪ್ರಸಾದ್‌ ಗಾಂವ್ಕರ್‌ ಅವರು ಕಾಂಗ್ರೆಸ್‌ ಕೈ ಹಿಡಿದಿದ್ದಾರೆ.

ಬಿಜೆಪಿ ತೊರೆದ ಶಾಸಕರು : ಪ್ರವೀಣ್‌ ಜಾಂತೆ, ಎಂಜಿಪಿ, ಮೈಕಲ್‌ ಲೊಬೊ, ಕಾಂಗ್ರೆಸ್‌, ಜೋಸ್‌ ಲೂಯಿಸ್‌ ಕಾರ್ಲೂಸ್‌ ಅಲ್ಮೈಡಾ, ಕಾಂಗ್ರೆಸ್‌, – ಅಲಿನಾ ಸಲದಾನ್ಹಾ, ಎಎಪಿ ಸೇರಿದ್ದಾರೆ.

ಒಟ್ಟಾರೆ ವ್ಯಾಪಕ ಪಕ್ಷಾಂತರದ ಫಲಿತಾಂಶವೆಂಬಂತೆ ಪ್ರಸಕ್ತ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಬಲ ಕೇವಲ 2 ಸ್ಥಾನಕ್ಕೆ ಕುಸಿದಿದೆ. ಬಿಜೆಪಿ ಸಂಖ್ಯಾಬಲ 27 ಇದೆ.

2022ರ ವಿಧಾನಸಭೆ ಚುನಾವಣೆಗೆ ಪ್ರಾದೇಶಿಕ ಪಕ್ಷ ಎಂಜಿಪಿ ಮತ್ತು ಟಿಎಂಸಿ ನಡುವೆ ಮೈತ್ರಿ ಏರ್ಪಟ್ಟಿದ್ದರೆ, ಕಾಂಗ್ರೆಸ್‌ ಮತ್ತು ಜಿಎಫ್‌ಪಿ ನಡುವೆ ಮೈತ್ರಿ ನಡೆದಿದೆ. 2017ರಲ್ಲಿ 17 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ 13 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಯು ಪಕ್ಷೇತರ ಶಾಸಕರನ್ನು ಮತ್ತು ಪ್ರಾದೇಶಿಕ ಪಕ್ಷಗಳ ಎಂಎಲ್ಎಗಳ ಜೊತೆ ಮೈತ್ರಿ ಸಾಧಿಸಿ ಅಧಿಕಾರ ಹಿಡಿದಿತ್ತು.

Donate Janashakthi Media

Leave a Reply

Your email address will not be published. Required fields are marked *