ಪ್ರೊ. ಪ್ರಭಾತ್ ಪಟ್ನಾಯಕ್
ಬಂಡವಾಳಶಾಹಿಯ ಕೇಂದ್ರಗಳಿಂದ ಮೂರನೇ ಜಗತ್ತಿನ ದೇಶಗಳಿಗೆ ಬಂಡವಾಳದ ವಲಸೆ ಮತ್ತು ಹಿಂದಿನ ಎರಡನೇ ಜಗತ್ತಿನ ದೇಶಗಳಿಂದ ಬಂಡವಾಳದ ಕೆಂದ್ರಗಳಿಗೆ ಸಂಭವಿಸುತ್ತಿರುವ ಕಾರ್ಮಿಕರ ವಲಸೆ – ಸಮಕಾಲೀನ ಜಾಗತೀಕರಣಕ್ಕೆ ಸಂಬಂಧಿಸಿದ ಈ ಅವಳಿ ವಿದ್ಯಮಾನಗಳು ಎಲ್ಲೆಡೆ ಕಾರ್ಮಿಕ ವರ್ಗದ ಚಳುವಳಿಯನ್ನು ದುರ್ಬಲಗೊಳಿಸುತ್ತವೆ. ಜತೆಗೇ ಇವು ಬಂಡವಾಳಶಾಹಿಯು ಎದುರಿಸುತ್ತಿರುವ ಬಿಕ್ಕಟ್ಟನ್ನು ಕೂಡಾ ಇನ್ನಷ್ಟು ಉಲ್ಬಣಗೊಳಿಸುತ್ತವೆ. ಬಂಡವಾಳದ ಮತ್ತು ಶ್ರಮದ ಈ ಸ್ಥಳಾಂತರದ ನಿವ್ವಳ ಫಲಿತಾಂಶವೆಂದರೆ, ಜಾಗತಿಕ ಉತ್ಪಾದನೆಯ ಮೊತ್ತದಲ್ಲಿ ಮಿಗುತಾಯದ ಪಾಲು ಹೆಚ್ಚುತ್ತದೆ ಮತ್ತು. ಇದರ ಪರಿಣಾಮವಾಗಿ ಅರ್ಥವ್ಯವಸ್ಥೆಯಲ್ಲಿ ಒಟ್ಟಾರೆ ಬೇಡಿಕೆ ಕಡಿಮೆಯಾಗುತ್ತದೆ. ಸಮಕಾಲೀನ ಬಂಡವಾಳಶಾಹಿಯ ಒಂದು ವಿಪರ್ಯಾಸವೆಂದರೆ, ಶ್ರಮಶಕ್ತಿಯನ್ನು ಅಗ್ಗಗೊಳಿಸುವ, ಕೂಲಿಗಳನ್ನು ಇಳಿಸುವ ಗೀಳು ಬಂಡವಾಳಶಾಹಿ ವ್ಯವಸ್ಥೆಯನ್ನು ದೀರ್ಘಕಾಲೀನ ಬಿಕ್ಕಟ್ಟಿನ ಸ್ಥಿತಿಗೆ ತಳ್ಳುತ್ತಿದೆ.
ಜಾಗತೀಕರಣದ ಇಂದಿನ ದಿನಮಾನಗಳಲ್ಲಿ ಬಂಡವಾಳವು ಉತ್ತರದ ಮುಂದುವರಿದ ಬಂಡವಾಳಶಾಹಿ ದೇಶಗಳಿಂದ ಕಡಿಮೆ ಕೂಲಿಯ ದಕ್ಷಿಣದ ದೇಶಗಳಿಗೆ ಹರಿಯುತ್ತಿರುವ ಸಂಗತಿಯು ಎಲ್ಲರ ಗಮನ ಸೆಳೆದಿದೆ. ಆದರೆ, ಇದಕ್ಕೆ ಹೋಲಿಸಿದರೆ, ಪೂರ್ವ ಯೂರೋಪಿನ ಕೆಲವು ಕಡಿಮೆ-ಕೂಲಿಯ ದೇಶಗಳಿಂದ ಕೆಲಸಗಾರರು ಮುಂದುವರಿದ ಬಂಡವಾಳಶಾಹಿ ದೇಶಗಳಿಗೆ ವಲಸೆ ಹೋಗುವ ಸಂಗತಿಯು ಅಷ್ಟಾಗಿ ಗಮನ ಸೆಳೆದಿಲ್ಲ. ಐರೋಪ್ಯ ಒಕ್ಕೂಟದ ದೇಶಗಳ ನಡುವೆ ಕಾರ್ಮಿಕರು ಮುಕ್ತವಾಗಿ ವಲಸೆ ಹೋಗಬಹುದಾದ ಅವಕಾಶವನ್ನು ಹೊಂದಿರುವುದರಿಂದ, ಪೂರ್ವ ಯುರೋಪಿನ ದೇಶಗಳು ಐರೋಪ್ಯ ಒಕ್ಕೂಟವನ್ನು ಸೇರಲು ಹಾತೊರೆಯುತ್ತವೆ. ಕಾರ್ಮಿಕರನ್ನು ರಫ್ತು ಮಾಡುವ ಈ ವಿದ್ಯಮಾನಕ್ಕೆ ಪ್ರೇರಣೆ ಒದಗಿಸುವ ಕೆಲವು ಅಂಶಗಳನ್ನು ಈ ದೇಶಗಳಲ್ಲಿ ಗುರುತಿಸಬಹುದು: ಜನಸಂಖ್ಯೆ ಇಳಿಯುತ್ತಿದೆ; ದುಡಿಯುವ ವಯೋಮಾನದ ದೈಹಿಕ ಶಕ್ತಿಯಿರುವ ಪುರುಷರ ಸ್ಥಾನದಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರೂ ದುಡಿಯಬೇಕಾಗಿರುವ ಪರಿಸ್ಥಿತಿಯಿಂದಾಗಿ ಈ ದೇಶಗಳ ಜನಸಂಖ್ಯೆಯ ಸಂರಚನೆಯೇ ಬದಲಾಗಿದೆ; ಮತ್ತು, ಉತ್ಪಾದನೆಯ ಸ್ಥಾನದಲ್ಲಿ ರವಾನೆ-ಹಣ ಸ್ವೀಕರಿಸುವುದೇ ಅರ್ಥವ್ಯವಸ್ಥೆಯ ಪ್ರಧಾನ ಚಟುವಟಿಕೆಯಾಗಿದೆ. ಸೋವಿಯತ್ ಒಕ್ಕೂಟದ ಪತನದ ನಂತರ ಅದರ ಪಶ್ಚಿಮಕ್ಕಿರುವ ದೇಶಗಳ ಜನಸಂಖ್ಯೆಯು ಇಳಿಯುತ್ತಿರುವ ಒಂದು ಪ್ರವೃತ್ತಿಯನ್ನು ಕಾಣಬಹುದು.
ಕಳೆದ ದಶಕದಲ್ಲಿ ಬಲ್ಗೇರಿಯಾದ ಜನಸಂಖ್ಯೆಯು 7.3 ಮಿಲಿಯನ್‌ನಿಂದ 6.5 ಮಿಲಿಯನ್‌ಗೆ (11.5%) ಇಳಿದಿದೆ. 1990ರಲ್ಲಿ 23.2 ಮಿಲಿಯನ್ ಜನಸಂಖ್ಯೆ ಹೊಂದಿದ್ದ ರೊಮೇನಿಯಾದಲ್ಲಿ 2019ರ ವೇಳೆಗೆ 19.4 ಮಿಲಿಯನ್‌ಗೆ (ಅಂದರೆ, 3.8 ಮಿಲಿಯನ್ ಅಥವಾ 16.4%) ಇಳಿದಿದೆ. 2000ದ ಇಸವಿಯಲ್ಲಿ 2.38 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದ್ದ ಲಾಟ್ವಿಯಾದಲ್ಲಿ 2022ರ ಆರಂಭದ ವೇಳೆಗೆ 18.2%ರಷ್ಟು ಕುಸಿತ ಕಂಡು 1.95 ಮಿಲಿಯನ್‌ಗೆ ಇಳಿದಿತ್ತು. ಲಿಥುವೇನಿಯಾ ಮತ್ತು ಜಾರ್ಜಿಯಾದಲ್ಲಿ ಜನಸಂಖ್ಯೆಯ ಕುಸಿತವು ಇದೇ ಅವಧಿಯಲ್ಲಿ ಸುಮಾರು ಸರಾಸರಿಯಾಗಿ ಇದೇ ಪ್ರಮಾಣದಲ್ಲಿದೆ. ಉಕ್ರೇನ್ ಈಗ ಮತ್ತು 2050ರ ನಡುವೆ ತನ್ನ ಜನಸಂಖ್ಯೆಯ ಐದನೇ ಒಂದು ಭಾಗವನ್ನು ಕಳೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ.
ಜನಸಂಖ್ಯೆಯ ಈ ರೀತಿಯ ಇಳಿಕೆಯು ಹಿಂದಿನ ಸೋವಿಯತ್ ಗಣರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. 1990ರ ಹಿಂದೆ ಯುಗೊಸ್ಲಾವಿಯಾದ ಭಾಗವಾಗಿದ್ದ ಮತ್ತು ಇಂದು ಸ್ವತಂತ್ರವಾಗಿರುವ ದೇಶಗಳನ್ನೂ ಸಹ, ಈ ಸಮಸ್ಯೆ ಕಾಡುತ್ತಿದೆ. ಯುಗೊಸ್ಲಾವಿಯಾದ ವಿಭಜನೆಯ ನಂತರ, ಬೋಸ್ನಿಯಾ ಮತ್ತು ಹರ್ಜೆಗೊವಿನಾ ದೇಶಗಳು ತಮ್ಮ ಜನಸಂಖ್ಯೆಯ 24%, ಸರ್ಬಿಯಾ 9% ಮತ್ತು ಕ್ರೊಯೇಷಿಯಾ 15% ಜನರನ್ನು ಕಳೆದುಕೊಂಡಿವೆ. ಈ ರೀತಿಯ ಕುಸಿತಗಳು ಅಲ್ಬೇನಿಯಾ ಮತ್ತು ಮಾಲ್ಡೋವಾ ದೇಶಗಳಲ್ಲೂ ಸಂಭವಿಸಿವೆ. ಜನಸಂಖ್ಯಾ ಕುಸಿತದ ದೃಷ್ಟಿಯಿಂದ ಒಂದು ವಾಸ್ತವಾಂಶವಾಗಿ ಹೇಳುವುದಾದರೆ, ಕುಸಿತದ ಪಟ್ಟಿಯಲ್ಲಿರುವ ಅಗ್ರ 10 ದೇಶಗಳು ಮಧ್ಯ ಮತ್ತು ಪೂರ್ವ ಯುರೋಪ್‌ನಲ್ಲಿವೆ. ಈ 10 ದೇಶಗಳ ಪೈಕಿ ಏಳು ದೇಶಗಳನ್ನು ಐರೋಪ್ಯ ಒಕ್ಕೂಟಕ್ಕೆ ಸೇರಿಸಿಕೊಳ್ಳಲಾಗಿದೆ. ಹಾಗಾಗಿ, ಜನಸಂಖ್ಯೆಯ ಕುಸಿತದ ಪ್ರಮುಖ ಕಾರಣವೆಂದರೆ, ಜನರು ಪಶ್ಚಿಮ ದೇಶಗಳಿಗೆ ವಲಸೆ ಹೋಗಿರುವುದೇ.
ಬಂಡವಾಳ ಮತ್ತು ಶ್ರಮದ ಸ್ಥಳಾಂತರ
ಬಂಡವಾಳಶಾಹಿಯು ಹೊಂದಿರುವ ಪ್ರಭಾವ ವ್ಯಾಪ್ತಿಯೊಳಗೆ ಬಂಡವಾಳ ಮತ್ತು ಕಾರ್ಮಿಕರು (ಶ್ರಮ ಶಕ್ತಿ) ಸ್ಥಳಾಂತರಗೊಂಡಿರುವುದು ಇದೇ ಮೊದಲನೆಯದಲ್ಲ. ಬಂಡವಾಳಶಾಹಿ ಬೆಳವಣಿಗೆಯ ಪ್ರತಿ ಹಂತದಲ್ಲೂ ಬಂಡವಾಳ ಮತ್ತು ಶ್ರಮ ಶಕ್ತಿ ಸ್ಥಳಾಂತರಗೊಂಡಿವೆ. ಈ ಸ್ಥಳಾಂತರದ ಮಾದರಿಗಳು ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆಯಾಗಿದ್ದವು ಅಷ್ಟೇ. ಹತ್ತೊಂಬತ್ತನೇ ಶತಮಾನದ ಮಧ್ಯಭಾಗಕ್ಕೂ ಮೊದಲಿನ ಅವಧಿಯಲ್ಲಿ, ಅಟ್ಲಾಂಟಿಕ್ ಸಾಗರದ ಉದ್ದಕ್ಕೂ ನಡೆದ ಶ್ರಮಶಕ್ತಿಯ ಸ್ಥಳಾಂತರವು ಬಲವಂತ ಮತ್ತು ಕ್ರೌರ್ಯದಿಂದ ಕೂಡಿದ ಗುಲಾಮರ ವ್ಯಾಪಾರವೇ ಆಗಿತ್ತು. ಅಲ್ಲಿಂದ ಹಿಡಿದು ಮೊದಲನೆಯ ಮಹಾ ಯುದ್ಧದವರೆಗಿನ ಅವಧಿಯಲ್ಲಿ ನಡೆದ ಬಂಡವಾಳದ ಸ್ಥಳಾಂತರವು/ಚಲನೆಯು, ಬಂಡವಾಳಶಾಹಿಯ ಬೃಹತ್ ಹರಡುವಿಕೆಗೆ ಕಾರಣವಾದ “ಹೊಸ ಜಗತ್ತಿ”ನಲ್ಲಿ ಸಂಭವಿಸಿದ ಯುರೋಪಿಯನ್ ಹೂಡಿಕೆಯ ರೂಪವನ್ನು ಪಡೆಯಿತು. ಈ ಹೂಡಿಕೆಯ ಹಣವನ್ನು ಯೂರೋಪಿಯನ್ ದೇಶಗಳು ತಮ್ಮ ತಮ್ಮ ವಸಾಹತುಗಳಲ್ಲಿನ ಸಂಪತ್ತನ್ನು ಬರಿದು ಮಾಡುವ ಮೂಲಕ ಹೊಂದಿಸಿಕೊಂಡಿದ್ದವು.
ಆದರೆ, ಇದೇ ಅವಧಿಯಲ್ಲಿ ನಡೆದ ಕಾರ್ಮಿಕರ ಸ್ಥಳಾಂತರವು ಎರಡು ವಿಭಿನ್ನ ರೂಪದ್ದಾಗಿತ್ತು. ಬಂಡವಾಳದ ವಲಸೆಗೆ ಪೂರಕವಾಗಿ ಯೂರೋಪಿನ ಕಾರ್ಮಿಕರು ಒಂದು ಹೊಸ ಜಗತ್ತಿಗೆ (ಅಂದರೆ, ಬಿಳಿಯರು ಹೋಗಿ ನೆಲೆಸಿದ ಸಮಶೀತೋಷ್ಣವಲಯದ ಪ್ರದೇಶಗಳಿಗೆ) ವಲಸೆ ಹೋದದ್ದು ಒಂದು ರೀತಿಯದ್ದಾದರೆ, ಇನ್ನೊಂದು, ಭಾರತದ ಮತ್ತು ಚೀನಾದ ಕಾರ್ಮಿಕರು ವಿಶ್ವದ ಉಷ್ಣವಲಯದ ಮತ್ತು ಅರೆ-ಉಷ್ಣವಲಯದ ಪ್ರದೇಶಗಳಿಗೆ ವಲಸೆ ಹೋದದ್ದು ಮತ್ತೊಂದು ರೀತಿಯದ್ದಾಗಿತ್ತು. ಕಾರ್ಮಿಕರ ಈ ವಲಸೆಯಲ್ಲಿದ್ದ ಒಂದು ವಿಶೇಷವಾದ ಅಂಶವೆಂದರೆ, ಉಷ್ಣ ವಲಯದ ಅಥವಾ ಅರೆ-ಉಷ್ಣವಲಯದ ಕಾರ್ಮಿಕರು ಸಮಶೀತೋಷ್ಣ ಪ್ರದೇಶಗಳಿಗೆ ವಲಸೆ ಹೋಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು. ಯುದ್ಧಾನಂತರದ ಅವಧಿಯಲ್ಲಿ ಬಂಡವಾಳದ ಹರಿವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿತ್ತು. ಹಾಗಾಗಿ, “ಸುಂಕ-ಜಿಗಿತ”ದಂತಹ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಬಂಡವಾಳವು ಮೂರನೇ ಜಗತ್ತಿನ ಸಂರಕ್ಷಿತ ಮಾರುಕಟ್ಟೆಗಳನ್ನು ಪ್ರವೇಶಿಸುವುದು ಸಾಧ್ಯವಿತ್ತು. ಅಥವಾ, ಮುಂದುವರಿದ ಬಂಡವಾಳಶಾಹಿ ಜಗತ್ತಿನ ದೇಶಗಳು ಪರಸ್ಪರ ಬಂಡವಾಳ ಹೂಡಿಕೆ ಮಾಡಿಕೊಳ್ಳುತ್ತಿದ್ದವು. ಆದರೆ, ಭಾರತ, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್‌ಗಳಂತಹ ಹಿಂದಿನ ವಸಾಹತುಗಳಿಂದ ಅಥವಾ ಅವಲಂಬಿತ ಪ್ರದೇಶಗಳಿಂದ ಮೆಟ್ರೊಪೊಲಿಸ್(ಬಂಡವಾಳಶಾಹಿಯ ಕೇಂದ್ರ)ಗಳಿಗೆ ವಲಸೆ ಹೋಗುವ ಕಾರ್ಮಿಕರ ಸಂಖ್ಯೆಯನ್ನು ನಿಯಂತ್ರಿಸಲಾಗಿತ್ತು. ಹಾಗಾಗಿ, ಕಾರ್ಮಿಕರು ಭಾರತದಿಂದ ಇಂಗ್ಲೆಂಡಿಗೆ, ಅಲ್ಜೀರಿಯಾದಿಂದ ಮತ್ತು ಮೊರಾಕ್ಕೊದಿಂದ ಫ್ರಾನ್ಸ್‌ಗೆ ಮತ್ತು ಟರ್ಕಿಯಿಂದ ಜರ್ಮನಿಗೆ ವಲಸೆ ಹೋದರು.
ಈ ಪರಿಸ್ಥಿತಿಗೆ ವ್ಯತಿರಿಕ್ತವಾಗಿ, ಪ್ರಸ್ತುತ ಕಾಲ ಘಟ್ಟದಲ್ಲಿ ಬಂಡವಾಳವು ಮೆಟ್ರೊಪಲಿಸ್‌ನಿಂದ ಮೂರನೇ ಜಗತ್ತಿನ ದೇಶಗಳಿಗೆ ಹರಿರುವ ಬದಲಾವಣೆ ಮತ್ತು ಪೂರ್ವ ಯೂರೋಪಿನಿಂದ ಕಾರ್ಮಿಕರು ಮುಂದುವರಿದ ದೇಶಗಳಿಗೆ ವಲಸೆ ಹೋಗುವ ಬದಲಾವಣೆ, ಇವು ಗಮನಾರ್ಹವಾಗಿವೆ. ಬಂಡವಾಳದ ದೃಷ್ಟಿಕೋನದಿಂದ ಹೇಳುವುದಾದರೆ, ಈ ಎರಡೂ ಪಲ್ಲಟಗಳ ಹಿಂದಿರುವ ಮುಖ್ಯ ಪ್ರೇರಣೆಯೆಂದರೆ, ಬಂಡವಾಳದ ಮಟ್ಟಿಗೆ ಅಗ್ಗದ ಕೂಲಿಯ ಅನ್ವೇಷಣೆಯೇ.
ಬೂರ್ಜ್ವಾ ಅರ್ಥಶಾಸ್ತ್ರದ ಪೀಕಲಾಟ
ವಿಪರ್ಯಾಸವೆಂದರೆ, ಬೂರ್ಜ್ವಾ ಅರ್ಥಶಾಸ್ತ್ರದ “ಮುಖ್ಯ ಧಾರೆ”ಯು ಬಂಡವಾಳದ ಮತ್ತು ಶ್ರಮದ ಸ್ಥಳಾಂತರದ ಅಂಶವನ್ನು ಒಪ್ಪಿಕೊಳ್ಳುವುದಿಲ್ಲ. ಅದು ಬಂಡವಾಳದ ಮತ್ತು ಕಾರ್ಮಿಕರ ಈ ಸ್ಥಳಾಂತರದ ಬದಲಾಗಿ, ಸರಕು ಮತ್ತು ಸೇವೆಗಳ ವ್ಯಾಪಾರದ ಮೂಲಕವಾಗಿ ಕಾರಣವನ್ನು ಕಂಡುಕೊಳ್ಳುತ್ತದೆ. ಶ್ರಮದ ಪ್ರತಿ ಯೂನಿಟ್‌ಗೆ ಅನುಪಾತವಾಗಿ ಹೆಚ್ಚು ಬಂಡವಾಳವನ್ನು ಹೊಂದಿರುವ ಒಂದು ದೇಶವು, ಶ್ರಮದ ಪ್ರತಿ ಯೂನಿಟ್‌ಗೆ ಅನುಪಾತವಾಗಿ ಕಡಿಮೆ ಬಂಡವಾಳವನ್ನು ಹೊಂದಿರುವ ಮತ್ತೊಂದು ದೇಶಕ್ಕೆ ಬಂಡವಾಳವನ್ನು ರಫ್ತು ಮಾಡಲು ಸಾಧ್ಯವಿಲ್ಲದ ಕಾರಣ, ಅದು ಮಾಡಬಹುದಾದ “ಮುಂದಿನ ಅತ್ಯುತ್ತಮ ಕೆಲಸ”ವೆಂದರೆ, ಹೆಚ್ಚು ಬಂಡವಾಳ-ಹೂಡಿಕೆಯ ಉತ್ಪನ್ನಗಳನ್ನು ಆ ಇನ್ನೊಂದು ದೇಶಕ್ಕೆ ರಫ್ತು ಮಾಡುವುದು ಮತ್ತು ಅದಕ್ಕೆ ಪ್ರತಿಯಾಗಿ ಹೆಚ್ಚು-ಶ್ರಮದಿಂದ ಕೂಡಿದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು. ವಾಸ್ತವವಾಗಿ, ಬಂಡವಾಳ ಮತ್ತು ಶ್ರಮದ ಸ್ಥಳಾಂತರವನ್ನು ವಿವರಿಸಲಾಗದುದರಿಂದ ಅರ್ಥಶಾಸ್ತ್ರದ ಈ “ಮುಖ್ಯ ಧಾರೆ”ಯು ವ್ಯಾಪಾರ-ಮಾದರಿಯ ವಿವರಣೆಯನ್ನು ಕೊಡುತ್ತದೆ.
ಬಂಡವಾಳಶಾಹಿಯ ಅಡಿಯಲ್ಲಿ ಸಂಭವಿಸಿದ ಬಂಡವಾಳದ ಮತ್ತು ಶ್ರಮದ ಸ್ಥಳಾಂತರವನ್ನು ಬೂರ್ಜ್ವಾ ಅರ್ಥಶಾಸ್ತ್ರದ “ಮುಖ್ಯ ಧಾರೆ”ಯು ಒಂದು ವೇಳೆ ಒಪ್ಪಿಕೊಂಡರೆ, ಆಗ, ಉತ್ಪನ್ನಗಳ ವ್ಯಾಪಾರವನ್ನು ಅದು ಬೇರೆ ರೀತಿಯಲ್ಲಿ ವಿವರಿಸಲೇ ಬೇಕಾಗುತ್ತದೆ. ಈ ಇನ್ನೊಂದು ಮಾರ್ಗವು ಭೌಗೋಳಿಕ ನಿರ್ದಿಷ್ಟ ಪ್ರದೇಶಗಳಲ್ಲಿ ಬೆಳೆಯಲು ಸಾಧ್ಯವಿರುವ ಬೆಳೆಗಳನ್ನು ಆಧರಿಸಿರುವ ವ್ಯಾಪಾರ. ಇದರ ಅರ್ಥವೇನೆಂದರೆ, ಇತರ ಪ್ರದೇಶಗಳಿಗೆ ಅಗತ್ಯವಾಗಿ ಬೇಕಾಗಿರುವ ಸರಕುಗಳನ್ನು ಬೆಳೆದರೂ ವ್ಯಾಪಾರ ಮಾಡಲು ಇಷ್ಟವಿಲ್ಲದ ಪ್ರದೇಶಗಳನ್ನು ವ್ಯಾಪಾರಕ್ಕಾಗಿ “ತೆರೆಯ”ಬೇಕಾಗುತ್ತದೆ. ಸಂಕ್ಷಿಪ್ತವಾಗಿ ಇದು ಸಾಮ್ರಾಜ್ಯಶಾಹಿಯನ್ನು ಎದುರಿಸುವ ವಿದ್ಯಮಾನವಾಗುತ್ತದೆ. ಬೂರ್ಜ್ವಾ ಅರ್ಥಶಾಸ್ತ್ರದ “ಮುಖ್ಯ ಧಾರೆ”ಯ ಸಮರ್ಥಕರ ವ್ಯಾಪಾರ ಸಿದ್ಧಾಂತವು ತಡೆಯುವುದು ಇದನ್ನೇ.
ಉದಾಹರಣೆಗೆ, ಹತ್ತಿ ಬಟ್ಟೆಯ ಉದ್ಯಮದಿಂದ ಆರಂಭಗೊಂಡ ಕೈಗಾರಿಕಾ ಕ್ರಾಂತಿಗೆ ನಾಂದಿ ಹಾಡಿದ ದೇಶ ಬ್ರಿಟನ್. ಆದರೆ, ಬ್ರಿಟನ್ ಕಚ್ಚಾ ಹತ್ತಿಯನ್ನು ಬೆಳೆಯಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ, ಕೈಗಾರಿಕಾ ಪ್ರವರ್ತಕ ದೇಶವು (ಬ್ರಿಟನ್) ಕಚ್ಚಾ ಹತ್ತಿಯನ್ನು ಉತ್ಪಾದಿಸಬಲ್ಲ ಮತ್ತು ತನಗೆ ಅಗತ್ಯವಿರುವ ಪ್ರಮಾಣದ ಹತ್ತಿಯನ್ನು ಪೂರೈಸುವಂತೆ ದೂರದ ಉಷ್ಣವಲಯದ ಮತ್ತು ಅರೆ-ಉಷ್ಣವಲಯದ ಭೂ ಪ್ರದೇಶಗಳ ಮೇಲೆ ನಿಯಂತ್ರಣ ಹೊಂದುವುದು ಅಗತ್ಯವಾಗುತ್ತದೆ. ಹೀಗಾಗಿ, ಭೂಮಿ, ಶ್ರಮ ಶಕ್ತಿ, ಬಂಡವಾಳ ಮತ್ತು ಉದ್ಯಮಶೀಲತೆಗಳು ಇತ್ಯಾದಿಗಳಿಗೆ ಅನುಸಾರವಾಗಿ ವ್ಯಾಪಾರ ನಡೆಯುತ್ತದೆ ಎಂಬ ಕಟ್ಟುಕತೆಯಿಂದ, ಅವೆಲ್ಲವೂ ನಿಷ್ಕ್ರಿಯಗೊಂಡಿವೆಯೆಂಬ ಮತ್ತು ಅವು ದೇಶದ ಗಡಿಗಳ ಆಚೆ ಚಲಿಸಲಾರದ ಸನ್ನಿವೇಶದಲ್ಲಿ, ದೂರ ಸರಿದರೆ, “ಸಾಮ್ರಾಜ್ಯಶಾಹಿ”ಯನ್ನು ನಿರ್ಲಕ್ಷಿಸುವುದು ಅಸಾಧ್ಯವಾಗುತ್ತದೆ. ಬೂರ್ಜ್ವಾ ಅರ್ಥಶಾಸ್ತ್ರದ “ಮುಖ್ಯ ಧಾರೆ”ಯು ನಿಖರವಾಗಿ ಮಾಡುವುದು ಇದನ್ನೇ: ಅದು ಸಾಮ್ರಾಜ್ಯಶಾಹಿಯನ್ನು ನಿರ್ಲಕ್ಷಿಸುತ್ತದೆ ಮತ್ತು ವ್ಯಾಪಾರವು ಬಂಡವಾಳ ಮತ್ತು ಶ್ರಮ ಸ್ಥಳಾಂತರಗೊಳ್ಳದ ಪರಿಣಾಮವೆಂದು ವಿವರಿಸುತ್ತದೆ.
ಅವಳಿ ವಿದ್ಯಮಾನಗಳು
ಪಶ್ಚಿಮ ಯೂರೋಪ್ ಕೂಡ ನಿರುದ್ಯೋಗ ಪೀಡಿತವಾಗಿರುವುದರಿಂದ, ಅದರ ನೆರೆಯ ಕಡಿಮೆ-ವೇತನದ ಪೂರ್ವದ ದೇಶಗಳಿಂದ ಪಶ್ಚಿಮ ಯೂರೋಪಿನ ದೇಶಗಳಿಗೆ ಸಂಭವಿಸುತ್ತಿರುವ ವಲಸೆಯ ವಿದ್ಯಮಾನವು ಮೇಲ್ನೋಟಕ್ಕೆ ಕುತೂಹಲಕರವಾಗಿ ತೋರಬಹುದು. ಆದರೆ, ಈ ವಲಸೆಯು ಕಾರ್ಮಿಕರ ಕೊರತೆಯ ದೇಶಗಳಿಗೆ ಮಾತ್ರ ಸಂಭವಿಸುವುದಿಲ್ಲ. ನಿರುದ್ಯೋಗವು ಎಲ್ಲೆಲ್ಲೂ ತಾಂಡವವಾಡುತ್ತಿರುವ ಜಗತ್ತಿನಲ್ಲಿ ಇನ್ನೂ ಎರಡು ಕಾರಣಗಳಿಂದಾಗಿ ಕಡಿಮೆ ವೇತನದ ಪ್ರದೇಶಗಳಿಂದ ಉನ್ನತ ವೇತನ ಪ್ರದೇಶಗಳಿಗೆ ವಲಸೆ ಹೋಗುವುದು ಕಂಡುಬರುತ್ತದೆ: ಒಂದು, ವಲಸೆಯ ಉದ್ದೇಶವು ಒಬ್ಬನ ಪ್ರಸ್ತುತ ಆದಾಯಕ್ಕೆ ಹೋಲಿಸಿದರೆ ಆತನು ಗಳಿಸಬಹುದಾದ ಉನ್ನತ ಮಟ್ಟದ ಆದಾಯಕ್ಕೆ ಸಂಬಂಧಿಸುತ್ತದೆ. ಎರಡನೆಯದು, ವಲಸಿಗರು ಸಾಮಾನ್ಯವಾಗಿ ಸ್ಥಳೀಯ ಜನರಿಗಿಂತ ತುಸು ಕಡಿಮೆ ವೇತನದಲ್ಲಿ ಕೆಲಸ ಮಾಡಲು ಸಿದ್ಧರಿರುತ್ತಾರೆ. ಹಾಗಾಗಿ, ಉದ್ಯೋಗ ಗಿಟ್ಟಿಸಿಕೊಳ್ಳುವ ಅವರ ಸಾಧ್ಯತೆಯು ಸ್ಥಳೀಯರಿಗಿಂತ ಉತ್ತಮವಾಗಿರುತ್ತದೆ. ಈ ವಿದ್ಯಮಾನವು ಸಮಾಜವಾದದ ಅವನತಿಯ ನಂತರ, ಬಿಕ್ಕಟ್ಟು ಪೀಡಿತ ಪಶ್ಚಿಮ ಯುರೋಪ್ ಕೂಡ, ಸ್ಥಗಿತತೆಗೆ ಒಳಗಾಗಿರುವ ಪೂರ್ವ ಯೂರೋಪಿನ ದೇಶಗಳಿಂದ ವಲಸಿಗರನ್ನು ಸೆಳೆಯುವ ವಿರೋಧಾಭಾಸವನ್ನು ಇದರಿಂದ ಅರ್ಥಮಾಡಿಕೊಳ್ಳಬಹುದು.
ಸಮಕಾಲೀನ ಜಾಗತೀಕರಣಕ್ಕೆ ಸಂಬಂಧಿಸಿದ ಅವಳಿ ವಿದ್ಯಮಾನಗಳು-ಬಂಡವಾಳಶಾಹಿಯ ಕೇಂದ್ರ(ಮೆಟ್ರೊಪೊಲಿಸ್)ಗಳಿಂದ ಮೂರನೇ ಜಗತ್ತಿನ ದೇಶಗಳಿಗೆ ಬಂಡವಾಳದ ವಲಸೆ ಮತ್ತು ಹಿಂದಿನ ಎರಡನೇ ಜಗತ್ತಿನ ದೇಶಗಳಿಂದ ಮೆಟ್ರೊಪಲಿಸ್‌ಗೆ ಸಂಭವಿಸುತ್ತಿರುವ ಕಾರ್ಮಿಕರ ವಲಸೆ – ಇವು ಎಲ್ಲೆಡೆ ಕಾರ್ಮಿಕ ವರ್ಗದ ಚಳುವಳಿಯನ್ನು ದುರ್ಬಲಗೊಳಿಸುತ್ತವೆ. ಈ ವಿದ್ಯಮಾನಗಳು ಮೆಟ್ರೊಪಲಿಸ್‌ನಲ್ಲಿ ಕಾರ್ಮಿಕ ವರ್ಗದ ಚಳುವಳಿಯನ್ನು ದುರ್ಬಲಗೊಳಿಸುತ್ತವೆ; ಬಂಡವಾಳವು ತಾನು ವಲಸೆ ಹೋಗುವ ದೇಶಗಳಲ್ಲೂ ಕಾರ್ಮಿಕ ವರ್ಗವನ್ನು ದುರ್ಬಲಗೊಳಿಸುತ್ತದೆ. ಇಲ್ಲದಿದ್ದರೆ ಅದು ಬೇರೊಂದು ಗಮ್ಯಸ್ಥಾನವನ್ನು ಆಯ್ದುಕೊಳ್ಳುತ್ತದೆ. ಈ ಅವಳಿ ವಿದ್ಯಮಾನಗಳು ವಲಸೆ ಕಾರ್ಮಿಕರ ಸ್ಥಾನ-ಮಾನವನ್ನು ದುರ್ಬಲಗೊಳಿಸುತ್ತವೆ. ಅವರಿಗೆ ಉದ್ಯೋಗ ದೊರಕುವ ಸಾಧ್ಯತೆಯು ಅವರು ಸಂಘಟಿತರಾಗಿಲ್ಲ ಎಂಬುದನ್ನೇ ಅವಲಂಬಿಸಿದೆ. ಹೀಗೆ, ವಿಶ್ವ ಮಟ್ಟದಲ್ಲಿ ವರ್ಗ ಶಕ್ತಿಯ ಬಲಾಬಲ ದುಡಿಯುವ ವರ್ಗದಿಂದ ಬಂಡವಾಳಶಾಹಿಗಳ ಪರವಾಗಿ ಪಲ್ಲಟಗೊಂಡಿದೆ.
ಆದರೆ, ಇದು ಬಂಡವಾಳಶಾಹಿಯು ಎದುರಿಸುತ್ತಿರುವ ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆಯಷ್ಟೇ. ಬಂಡವಾಳದ ಮತ್ತು ಶ್ರಮದ ಸ್ಥಳಾಂತರದ ನಿವ್ವಳ ಫಲಿತಾಂಶವೆಂದರೆ, ಜಾಗತಿಕ ಉತ್ಪಾದನೆಯ ಮೊತ್ತದಲ್ಲಿ ಮಿಗುತಾಯದ ಪಾಲನ್ನು ಹೆಚ್ಚಿಸುವುದು. ಇದರ ಪರಿಣಾಮವಾಗಿ ಒಟ್ಟಾರೆ ಬೇಡಿಕೆ ಕಡಿಮೆಯಾಗುತ್ತದೆ. ಏಕೆಂದರೆ, ಆರ್ಥಿಕ ಮಿಗುತಾಯದ ಪ್ರಮಾಣಕ್ಕೆ ಹೋಲಿಸಿದರೆ, ದುಡಿಯುವ ಜನರು ತಮ್ಮ ಆದಾಯದ ಹೆಚ್ಚಿನ ಭಾಗವನ್ನು ಬಳಕೆಗಾಗಿ ಖರ್ಚು ಮಾಡುತ್ತಾರೆ. ಸಮಕಾಲೀನ ಬಂಡವಾಳಶಾಹಿಯ ಒಂದು ವಿಪರ್ಯಾಸವೆಂದರೆ, ಕಡಿಮೆ ಕೂಲಿಯ ಹುಚ್ಚು ಅನ್ವೇಷಣೆಯು ಬಂಡವಾಳಶಾಹಿ ವ್ಯವಸ್ಥೆಯನ್ನು ದೀರ್ಘಕಾಲೀನ ಬಿಕ್ಕಟ್ಟಿನ ಸ್ಥಿತಿಗೆ ತಳ್ಳಿದೆ.
ಅನು: ಕೆ.ಎಂ.ನಾಗರಾಜ್