ಜಾಗತಿಕ ಹಸಿವು ಸೂಚ್ಯಂಕದಲ್ಲಿ ಮತ್ತಷ್ಟು ಕುಸಿತ ಜನರ ಬಗ್ಗೆ ಮೋದಿ ಸರ್ಕಾರದ ಉದಾಸೀನತೆ, ನಿರಾಸಕ್ತಿಯ ಪರಿಣಾಮ- ಎಐಕೆಎಸ್

ಕಳೆದ ವಾರ ಬಿಡುಗಡೆಯಾದ ಇತ್ತೀಚಿನ ಜಾಗತಿಕ ಹಸಿವಿನ ಸೂಚ್ಯಂಕ (ಜಿಎಚ್‌ಐ)ದಲ್ಲಿ ಭಾರತದ ಶ್ರೇಯಾಂಕವು 125 ದೇಶಗಳಲ್ಲಿ 111 ಕ್ಕೆ ಕುಸಿದಿರುವುದು ಭಾರತದಲ್ಲಿ ಆಹಾರ ಅಭದ್ರತೆ ಮತ್ತು ಅಪೌಷ್ಟಿಕತೆಯ ಪರಿಸ್ಥಿತಿ ಹದಗೆಟ್ಟಿರುವುದನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಕಳವಳ ವ್ಯಕ್ತಪಡಿಸಿದೆ. ಎಐಕೆಎಸ್

ಮತ್ತೊಂದು ವಿಶ್ವ ಆಹಾರ ದಿನ (ಅಕ್ಟೋಬರ್ 16) ವನ್ನು ಆಚರಿಸುತ್ತಿರುವಾಗ, ಭಾರತದಲ್ಲಿ ಕೋಟ್ಯಂತರ ಜನರು ಆಹಾರದ ಕೊರತೆಯನ್ನು ಎದುರಿಸುತ್ತಿರುವ ಈ ಶೋಚನೀಯ ವಾಸ್ತವವನ್ನು ನಾವು ಎದುರಿಸುತ್ತಿದ್ದೇವೆ, ಬಹುಪಾಲು ಮಕ್ಕಳು ಮತ್ತು ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಆರೋಗ್ಯಕರ ಆಹಾರಗಳು ಹೆಚ್ಚಿನ ಜನರನ್ನು ತಲುಪದೆ ದೂರವೇ ಉಳಿದಿವೆ ಎಂದು ಅದು ಖೇದ ವ್ಯಕ್ತಪಡಿಸಿದೆ. ಎಐಕೆಎಸ್

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಕಳೆದ ವರ್ಷ ಭಾರತ 121 ದೇಶಗಳಲ್ಲಿ 107 ನೇ ಸ್ಥಾನದಲ್ಲಿತ್ತು. 2014 ರಲ್ಲಿ, ಮೋದಿ ಆಡಳಿತಕ್ಕೆ ಬಂದಾಗ, ಭಾರತವು 120 ದೇಶಗಳಲ್ಲಿ 55 ನೇ ಸ್ಥಾನದಲ್ಲಿತ್ತು. ಅಂದರೆ ಮೋದಿ ಆಳ್ವಿಕೆಯ ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ಆಹಾರ ಅಭದ್ರತೆ ಮತ್ತು ಅಪೌಷ್ಟಿಕತೆಯ ಪರಿಸ್ಥಿತಿ ಎಷ್ಟೊಂದು ಹದಗೆಟ್ಟಿದೆ ಎಂಬುದನ್ನು ಕಾಣಬಹುದು ಎಂದು ಎಐಕೆಎಸ್ ಹೇಳಿದೆ.

ಕಳೆದ ವರ್ಷದಂತೆ, ಈ ವರ್ಷವೂ ಅಫ್ಘಾನಿಸ್ತಾನ ಹೊರತುಪಡಿಸಿ ದಕ್ಷಿಣ ಏಷ್ಯಾದ ಎಲ್ಲಾ ದೇಶಗಳು ಜಿಎಚ್‌ಐ ಪಟ್ಟಿಯಲ್ಲಿ ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿವೆ. ಇದೇ ಜುಲೈನಲ್ಲಿ, ಐದು ವಿಶ್ವಸಂಸ್ಥೆಯ ಸಂಘಟನೆಗಳು ಜಂಟಿಯಾಗಿ ಬಿಡುಗಡೆ ಮಾಡಿದ ‘ಆಹಾರ ಭದ್ರತೆ ಮತ್ತು ಪೋಷಣಾಂಶ ಸ್ಥಿತಿ’ಯ ವರದಿಯು 2019-21 ಮತ್ತು 2020-22 ರ ನಡುವೆ, ಮಧ್ಯಮ ಅಥವಾ ತೀವ್ರ ಆಹಾರ ಅಭದ್ರತೆಯನ್ನು ಎದುರಿಸುತ್ತಿರುವ ಜನರ ಸಂಖ್ಯೆಯು ಭಾರತದಲ್ಲಿ 57 ಕೋಟಿಗಳಿಂದ 59 ಕೋಟಿಗೆ ಏರಿದೆ ಮತ್ತು ಬಹುಕಾಲದಿಂದ ಹಸಿವು ಎದುರಿಸುತ್ತಿರುವ ಜನರ ಸಂಖ್ಯೆ 22 ಕೋಟಿಯಿಂದ 23 ಕೋಟಿಗೆ ಏರಿತು ಎಂದು ತೋರಿಸಿದೆ.

ಜಿಎಚ್‌ಐ ವಿಷಯದಲ್ಲಿ ಭಾರತದ ಕುಸಿತವು ಕೋವಿಡ್ ಮಹಾಸೋಂಕಿನ ಸಂದರ್ಭದಲ್ಲಿ 2020 ರಲ್ಲಿ ಮೋದಿ ಸರ್ಕಾರವು ಯಾವುದೇ ಯೋಜನೆ ಇಲ್ಲದೆ ಹೇರಿದ ಕರಾಳ ಲಾಕ್‌ಡೌನ್ ಜನರ ಜೀವನದ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಿದೆ ಎಂಬುದನ್ನು ಮತ್ತೊಮ್ಮೆ ತೋರಿಸಿದೆ. ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ನಿಂದ ಉಂಟಾದ ಜೀವನೋಪಾಯಗಳ ಹಾನಿಯ ಪ್ರತಿಕೂಲ ಪರಿಣಾಮವನ್ನು ತಡೆಗಟ್ಟಲು ಮೋದಿ ಸರ್ಕಾರ ಅಗತ್ಯ ಕಲ್ಯಾಣ ಕಾರ್ಯಕ್ರಮಗಳನ್ನು ತರಲಿಲ್ಲ. ಗೋದಾಮುಗಳಲ್ಲಿ 10 ಕೋಟಿ ಟನ್‌ಗೂ ಹೆಚ್ಚು ಧಾನ್ಯಗಳಿದ್ದರೂ, ಸಾರ್ವಜನಿಕ ವಿತರಣಾ ವ್ಯವಸ್ಥೆಯ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಸಾಂಕ್ರಾಮಿಕದ ಸಮಯದಲ್ಲಿ ಆಹಾರವಸ್ತುಗಳ ಲಭ್ಯತೆಯನ್ನು ಸಾರ್ವತ್ರಿಕಗೊಳಿಸಲು ಮೋದಿ ಸರ್ಕಾರ ನಿರಾಕರಿಸಿತು ಎಂಬುದನ್ನು ನೆನಪಿಸಿಕೊಳ್ಳಬೇಕಾಗಿದೆ ಎಂದಿರುವ ಎಐಕೆಎಸ್ ಭಾರತದಲ್ಲಿ ಆಹಾರದ ಅಭದ್ರತೆಯ ಪರಿಸ್ಥಿತಿಯ ನಿರಂತರವಾಗಿ ಹದಗೆಡುತ್ತಿರುವುದು ಭಾರತೀಯ ಜನರ ಬಗ್ಗೆ ಮೋದಿ ಸರ್ಕಾರದ ಉದಾಸೀನತೆ ಮತ್ತು ನಿರಾಸಕ್ತಿಯ ಪರಿಣಾಮವಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.

ಭಾರತದಲ್ಲಿ ಲಕ್ಷಾಂತರ ಜನರು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ನಿರ್ದಿಷ್ಟವಾಗಿ ಕೃಷಿ ಬಿಕ್ಕಟ್ಟಿನ ಗಹನತೆಯನ್ನು ಗುರುತಿಸುವ ಬದಲು ಹಾಗೂ ಭಾರತದಲ್ಲಿ ಬಡತನ ಮತ್ತು ಆಹಾರದ ಅಭದ್ರತೆಯನ್ನು ನಿವಾರಿಸಲು ಕೆಲಸ ಮಾಡುವ ಬದಲು, ಮೋದಿ ಸರಕಾರ ಮಾಡಿದ ಕೆಲಸವೆಂದರೆ ಸಮೀಕ್ಷೆಗಳನ್ನು ನಡೆಸುವುದನ್ನು ನಿಲ್ಲಿಸುವುದು, ಎಲ್ಲಾ ಸ್ವತಂತ್ರ ಪುರಾವೆಗಳನ್ನು ತಿರಸ್ಕರಿಸುವುದು ಮತ್ತು ಸರ್ಕಾರದ ವೈಫಲ್ಯವನ್ನು ಬಯಲಿಗೆ ತಂದವರನ್ನು ಜೈಲಿಗಟ್ಟುವುದು.

ದೇಶದಲ್ಲಿ ನಿರುದ್ಯೋಗ, ಬಡತನ ಮತ್ತು ಆಹಾರದ ಅಭದ್ರತೆಯ ಪರಿಸ್ಥಿತಿ ಹದಗೆಟ್ಟಿದೆ ಎಂಬುದನ್ನು ಒಪ್ಪಿಕೊಳ್ಳಲು ನಿರಾಕರಿಸುವ ಮೋದಿ ಸರ್ಕಾರವು ಕಲ್ಯಾಣ ವೆಚ್ಚಗಳನ್ನು ಸತತವಾಗಿ ಕಡಿಮೆ ಮಾಡುತ್ತ ಬಂದಿದೆ. ಕಳೆದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಆಹಾರ ಸಬ್ಸಿಡಿಯಲ್ಲಿ 90,000 ಕೋಟಿ ರೂ ಕಡಿತ ಮಾಡಿತು. ಇತರ ಸಾಮಾಜಿಕ ಕಲ್ಯಾಣ ಯೋಜನೆಗಳ ವೆಚ್ಚವನ್ನು ಸಹ ತೀವ್ರವಾಗಿ ಕಡಿತಗೊಳಿಸಲಾಯಿತು. ಉದಾಹರಣೆಗೆ, ಮನರೇಗಕ್ಕೆ ಹಂಚಿಕೆಯನ್ನು ಶೇಕಡಾ 30 ರಷ್ಟು ಕಡಿತಗೊಳಿಸಲಾಯಿತು ಎಂಬ ಸಂಗತಿಯತ್ತ ಗಮನ ಸೆಳೆದಿರುವ ಅಖಿಲ ಭಾರತ ಕಿಸಾನ್ ಸಭಾ ಈ ಜನವಿರೋಧಿ ಸರಕಾರವನ್ನು ಸೋಲಿಸಲು ಮುಂಬರುವ ತಿಂಗಳುಗಳಲ್ಲಿ ಎಐಕೆಎಸ್ ರೈತ ಸಮೂಹವನ್ನು ಅಣಿನೆರೆಸಲಿದೆ, ಮೋದಿ ಸರ್ಕಾರವು ತನ್ನ ಜನವಿರೋಧಿ ನೀತಿಗಳು ಮತ್ತು ಅದು ಜನರ ಮೇಲೆ ಹೇರಿದ ದುಃಸ್ಥಿತಿಗೆ ಉತ್ತರ ಕೊಡಬೇಕಾಗಿ ಬರಲಿದೆ ಎಂದು ಎಚ್ಚರಿಸಿದೆ.

ಇದನ್ನೂ ಓದಿ: ಸಚಿವರಿಗೆ ಹೊಸ ಕಾರು ಭಾಗ್ಯ| ಸುಮಾರು 10 ಕೋಟಿ ರೂ. ವೆಚ್ಚದಲ್ಲಿ 33 ಇನ್ನೋವಾ ಖರೀದಿ

ಭಾರತ ಸರಕಾರದ ಆಕ್ಷೇಪಣೆ-ತಿರಸ್ಕಾರ

ಈ ವರದಿಯ ಪ್ರಕಾರ, ಭಾರತವು ವಿಶ್ವದಾದ್ಯಂತ ಅತಿ ಹೆಚ್ಚು ಮಕ್ಕಳ ‘ಕ್ಷೀಣಿಸುವಿಕೆ’ (ವೇಸ್ಟಿಂಗ್-ಎತ್ತರಕ್ಕೆ ಕಡಿಮೆ ತೂಕ) ದರವನ್ನು ಹೊಂದಿದೆ, ಇದು 18.7%, ಇದು ತೀವ್ರವಾದ ಅಪೌಷ್ಟಿಕತೆಯನ್ನು ಪ್ರತಿಬಿಂಬಿಸುತ್ತದೆ. ಒಂದು ದೇಶವು 15% ಕ್ಕಿಂತ ಹೆಚ್ಚು ಮಕ್ಕಳನ್ನು ಈ ವಿಧದಲ್ಲಿ ಹೊಂದಿದ್ದರೆ, ಅದನ್ನು ವರದಿಯಲ್ಲಿ ‘ಅತಿ ಹೆಚ್ಚು’ ಅಪಾಯದ ವಿಭಾಗದಲ್ಲಿ ಇಡಲಾಗುತ್ತದೆ.

ಕುಂಠಿತ ಬಾಲ್ಯ(ಸ್ಟಂಟಿಂಗ್-ವಯಸ್ಸಿಗೆ ಕಡಿಮೆ ಎತ್ತರ)ದ ಪ್ರಮಾಣ 35%ಕ್ಕಿಂತ ಹೆಚ್ಚಿದ್ದು, ಇದೂ ‘ಅತಿ ಹೆಚ್ಚು’ ಅಪಾಯದ ವಿಭಾಗದಲ್ಲಿ ಬರುತ್ತದೆ.

ಭಾರತದ ಅಪೌಷ್ಟಿಕತೆಯ ಮಟ್ಟ ಒಟ್ಟಾರೆ ಜನಸಂಖ್ಯೆಯ ಸುಮಾರು 16.6% ರಷ್ಟು ಇದ್ದು, ಇದನ್ನು ‘ಮಧ್ಯಮ’ ಅಪಾಯವೆಂದು ಗುರುತಿಸಲಾಗಿದೆ.

5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ 3.1% ಇದ್ದು, , ಭಾರತವನ್ನು ‘ಕಡಿಮೆ ಅಪಾಯ’ ವಿಭಾಗದಲ್ಲಿ ಇಡಲಾಗಿದೆ.

15-24 ವರ್ಷ ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆ ದೇಶದ ಪ್ರಮುಖ ಸಮಸ್ಯೆ ಎಂದು ವರದಿಯಾಗಿದೆ. ದೇಶದಲ್ಲಿ 50% ಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಹದಿಹರೆಯದವರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಭಾರತ ಸರ್ಕಾರವು ಹಿಂದಿನ ಸಂದರ್ಭಗಳಲ್ಲಿ ಮಾಡಿದಂತೆ ಈ ವರ್ಷವೂ ಈ ವರದಿಯನ್ನು ತಿರಸ್ಕರಿಸಿದೆ. ಅಕ್ಟೋಬರ್ 12 ರಂದು ಹೇಳಿಕೆಯನ್ನು ಹೊರಡಿಸಿದ ಸರ್ಕಾರವು ವರದಿಯನ್ನು ಸಿದ್ಧಪಡಿಸುವ ವಿಧಾನವು ದೋಷಪೂರಿತವಾಗಿದೆ ಎಂದು ಕರೆದಿದೆ ಮತ್ತು ನಾಲ್ಕು ನಿಯತಾಂಕಗಳ ಆಯ್ಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಆದರೆ ಹಸಿವಿನ ಸೂಚ್ಯಂಕದ ವರದಿ ತಯಾರಿಸಿದವರು ಭಾರತ ಸರ್ಕಾರದ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ಸೂಚ್ಯಂಕವನ್ನು ಲೆಕ್ಕ ಹಾಕಲು ಬಳಸಿರುವ ವಿಧಾನದ ಬಗ್ಗೆ ಬೇರಾವ ದೇಶವೂ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದೂ ಅವರು ಹೇಳಿದ್ದಾರೆ.

ಪೌಷ್ಟಿಕತೆಯ ಕ್ಷೇತ್ರದಲ್ಲಿ ಭಾರತದ ಕಳಪೆ ಪ್ರದರ್ಶನವನ್ನು ಇತರ ವರದಿಗಳೂ ಗಮನಿಸಿವೆ. ಎಐಕೆಎಸ್ ಹೇಳಿಕೆಯಲ್ಲಿ ತಿಳಿಸಿರುವಂತೆ, ಇದೇ ಜುಲೈನಲ್ಲಿ, ಐದು ವಿಶ್ವಸಂಸ್ಥೆಯ ಸಂಘಟನೆಗಳು ಜಂಟಿಯಾಗಿ ಬಿಡುಗಡೆ ಮಾಡಿದ ‘ಆಹಾರ ಭದ್ರತೆ ಮತ್ತು ಪೋಷಣಾಂಶ ಸ್ಥಿತಿ’ಯ ವರದಿಯು( ಎಸ್‌ಒಎಫ್‌ಐ-2023) ಕೂಡ ಭಾರತದ ಜನಸಂಖ್ಯೆಯ 74.1% ಜನರು ಆರೋಗ್ಯಕರ ಆಹಾರವನ್ನು ಪಡೆಯಲು ಅಸಮರ್ಥರಾಗಿದ್ದಾರೆ ಎಂದು ಹೇಳಿದೆ. ನೇಪಾಳ, ಪಾಕಿಸ್ತಾನ, ಸಿಯೆರಾ ಲಿಯೋನ್, ನೈಜೀರಿಯಾ, ನೈಜರ್, ಬುರ್ಕಿನಾ-ಫಾಸೊ, ಘಾನಾ, ಲೈಬೀರಿಯಾ, ಗಿನಿಯಾ ಮತ್ತು ಗಿನಿಯಾ ಬಿಸ್ಸೌ ದೇಶಗಳಲ್ಲಿ ಮಾತ್ರ ಆರೋಗ್ಯಕರ ಆಹಾರವನ್ನು ಪಡೆಯಲು ಸಾಧ್ಯವಾಗದ ಜನಸಂಖ್ಯೆಯ ಪ್ರಮಾಣ ಇದಕ್ಕಿಂತ ಹೆಚ್ಚಿದೆ.

ಈ ವರದಿಯು ಭಾರತದಲ್ಲಿ 23.39 ಕೋಟಿ ಜನರು ‘ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ’ ಎಂದೂ ಹೇಳಿದೆ. ಅಪೌಷ್ಟಿಕತೆ ಎಂದರೆ, ಒಬ್ಬ ವ್ಯಕ್ತಿಯ ಎಂದಿನ ಆಹಾರ ಸೇವನೆ ಸಾಮಾನ್ಯ, ಸಕ್ರಿಯ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಅಗತ್ಯವಿರುವ ಶಕ್ತಿಯ ಪ್ರಮಾಣವನ್ನು ಒದಗಿಸಲು ಸಾಕಾಗದ ಮಟ್ಟದಲ್ಲಿರುವುದು ಎಂದು ಈ ವರದಿ ನಿರೂಪಿಸುತ್ತದೆ.

ವಿಡಿಯೋ ನೋಡಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ಶಾಂತಿ ನೆಲೆಸಲಿ ಎಂದವರನ್ನು ಬಂಧಿಸಿದ ಸರ್ಕಾರ! Janashakthi Media

Donate Janashakthi Media

Leave a Reply

Your email address will not be published. Required fields are marked *