-ಸಿ.ಸಿದ್ದಯ್ಯ
ಹತ್ತು ವರ್ಷಗಳ ತಮ್ಮ ಆಡಳಿತದಲ್ಲಿ ದೇಶ ಹಾಗಾಗಿದೆ, ಹೀಗಾಗಿದೆ ಎಂದು ಪ್ರಧಾನಿ ಮೋದಿ, ಬಿಜೆಪಿ, ಮತ್ತವರ ಮಂದಿಮಾಗದರು ದೇಶ ವಿದೇಶಗಳಲ್ಲಿ ಕೊಚ್ಚಿಕೊಳ್ಳುತ್ತಿರುವ ಸಂದರ್ಭದಲ್ಲಿ, 2024ನೇ ವರ್ಷಕ್ಕೆ ಪ್ರಕಟಿಸಿದ ಜಾಗತಿಕ ಹಸಿವಿನ ಸೂಚ್ಯಂಕ (ಗ್ಲೋಬಲ್ ಹಂಗರ್ ಇಂಡೆಕ್ಸ್- ಜಿಎಚ್ ಐ)ವು ಅದೆಲ್ಲವೂ ಮಾತಿನ ಆಡಂಬರ ಎಂಬುದನ್ನು ತೋರಿಸಿದೆ. ಒಟ್ಟು 127 ದೇಶಗಳಲ್ಲಿ ಭಾರತ 105ನೇ ಸ್ಥಾನದಲ್ಲಿ ನಿಂತಿದೆ. ನೆರೆಯ ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕಿಂತ ಭಾರತ ಹಿಂದುಳಿದಿದೆ.
2024ನೇ ವರ್ಷಕ್ಕೆ ಜಾಗತಿಕ ಹಸಿವಿನ ಸೂಚ್ಯಂಕ (ಗ್ಲೋಬಲ್ ಹಂಗರ್ ಇಂಡೆಕ್ಸ್- GHI) ಪ್ರಕಟವಾಗಿದೆ. ಒಟ್ಟು 127 ದೇಶಗಳ ಪಟ್ಟಿಯಲ್ಲಿ ಭಾರತ 105ನೇ ಸ್ಥಾನದಲ್ಲಿ ನಿಂತಿದೆ. ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ವೆಲ್ತ್ ಹಂಗರ್ ಲೈಫ್ ಸಂಸ್ಥೆಗಳು ಜಂಟಿಯಾಗಿ ಜಿಎಚ್ ಐ ವಿವರಗಳನ್ನು ವಾರ್ಷಿಕವಾಗಿ ಪ್ರಕಟಿಸುತ್ತವೆ. ಪ್ರಸ್ತುತ ವರದಿಯಲ್ಲಿ ಭಾರತದ ಅಂಕ ಶೇ. 27.3 ರಷ್ಟಿದೆ. ಇದು 2016 ರಲ್ಲಿ 29.3 ಪ್ರತಿಶತದಿಂದ ಸ್ವಲ್ಪ ಸುಧಾರಣೆಯಾಗಿದೆ ಎಂದು ಗಮನಿಸಬೇಕು. ಜಾಗತಿಕ
ಹಸಿವಿನ ವಿಶ್ಲೇಷಣೆಯ ವಿಷಯದಲ್ಲಿ ಭಾರತವನ್ನು “ಗಂಭೀರ” ಎಂದು ವರ್ಗೀಕರಿಸಲಾಗಿದೆ. ನೆರೆಯ ದೇಶಗಳಿಗಿಂತ ಹಿಂದುಳಿದಿದೆ. ವಿಶೇಷವಾಗಿ “ಮಧ್ಯಮ” ವರ್ಗಕ್ಕೆ ಸೇರುವ ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾದಂತಹ ದಕ್ಷಿಣ ಏಷ್ಯಾದ ನೆರೆಹೊರೆಗಳಿಗೆ ಹೋಲಿಸಿದರೆ ಭಾರತ ಹಿಂದುಳಿದಿದೆ. ಮ್ಯಾನ್ಮಾರ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕಿಂತ ಭಾರತ ಹಿಂದುಳಿದಿದೆ. ಸ್ವಾತಂತ್ರ್ಯ ಬಂದು ಏಳೂವರೆ ದಶಕ ಕಳೆದರೂ ಜನರ ಹಸಿವಿನ ಕೂಗು ಇನ್ನೂ ಉರಿಯುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಜಾಗತಿಕ
ಇದನ್ನೂ ಓದಿ: ಉಪಚುನಾವಣೆ: ನಾಮಪತ್ರ ಸಲ್ಲಿಕೆ ಮುಕ್ತಾಯ; ಅಭ್ಯರ್ಥಿಗಳಿಗೆ ಬಂಡಾಯ ಭೀತಿ
ಸೂಚ್ಯಂಕ ನಾಲ್ಕು ವಿಶಾಲವಾದ ನಿಯತಾಂಕಗಳನ್ನು ಆಧರಿಸಿದೆ. ಅಂದರೆ, ಮಕ್ಕಳ ಕುಂಠಿತ (ಅವರ ವಯಸ್ಸಿಗೆ ಅನುಗುಣವಾಗಿ ಕಡಿಮೆ ಎತ್ತರವಿರುವ ಐದು ವರ್ಷದೊಳಗಿನ ಮಕ್ಕಳ ಪಾಲು, ದೀರ್ಘಕಾಲದ ಅಪೌಷ್ಟಿಕತೆಯನ್ನು ಪ್ರತಿಬಿಂಬಿಸುತ್ತದೆ), ಅಪೌಷ್ಟಿಕತೆ (ಸಾಕಷ್ಟು ಕ್ಯಾಲೋರಿ ಸೇವನೆಯೊಂದಿಗೆ ಜನಸಂಖ್ಯೆಯ ಪಾಲು), ಮಕ್ಕಳ ಕ್ಷೀಣತೆ (ಮಕ್ಕಳ ಪಾಲು ಐದಕ್ಕಿಂತ ಕಡಿಮೆ ತೂಕದೊಂದಿಗೆ ಅವರ ಎತ್ತರಕ್ಕೆ ಅನುಗುಣವಾಗಿ) ಮತ್ತು ಮಕ್ಕಳ ಮರಣ (ಅವರ ಐದನೇ ಹುಟ್ಟುಹಬ್ಬದ ಮೊದಲು ಸಾಯುವ ಮಕ್ಕಳ ಪಾಲು). ಜಾಗತಿಕ
ವರದಿಯು ಜನಸಂಖ್ಯೆಯ ಶೇ. 13.7ರಷ್ಟು ಅಪೌಷ್ಟಿಕತೆಯನ್ನು ಹೊಂದಿದೆ, ಶೇ. 35.5 ರಷ್ಟು ಮಕ್ಕಳು ಕುಂಠಿತರಾಗಿದ್ದಾರೆ, ಶೇ. 18.7 ಮಕ್ಕಳು ವ್ಯರ್ಥವಾಗಿದ್ದಾರೆ. ಒಂದು ದೇಶವು ಶೇ. 15 ಕ್ಕಿಂತ ಹೆಚ್ಚು ಮಕ್ಕಳನ್ನು ‘ವೇಸ್ಟ್’ ಹೊಂದಿದ್ದರೆ, ಅದನ್ನು ವರದಿಯಲ್ಲಿ ‘ಅತ್ಯಂತ ಉನ್ನತ’ ಮಟ್ಟದ ಕಾಳಜಿ ಎಂದು ಗುರುತಿಸಲಾಗುತ್ತದೆ. ಮತ್ತು ಶೇ. 2.9 ಮಕ್ಕಳು ತಮ್ಮ ಐದನೇ ಹುಟ್ಟುಹಬ್ಬದ ಮೊದಲು ಸಾಯುತ್ತಿದ್ದಾರೆ. ಸಮೀಕ್ಷೆಯ ಪ್ರಕಾರ, ಭಾರತವು ಜಾಗತಿಕವಾಗಿ ಅತಿ ಹೆಚ್ಚು ಮಕ್ಕಳ ವ್ಯರ್ಥ ಪ್ರಮಾಣವನ್ನು ಹೊಂದಿದೆ. ಜಾಗತಿಕ
ಭಾರತದಲ್ಲಿ ಅಪೌಷ್ಟಿಕತೆಗೆ ಬಾಧಿತರಾಗಿರುವ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚುತ್ತಿದೆ ಎಂಬುದನ್ನು ಜಿಎಚ್ ಐ ವರದಿ ತೋರಿಸಿದೆ. ಎಲ್ಲಾ ರೋಗಗಳಿಗೂ ಅಪೌಷ್ಟಿಕತೆಯೇ ಕಾರಣ ಎಂದು ಆರೋಗ್ಯ ವಿಜ್ಞಾನಗಳು ಒತ್ತಿ ಹೇಳುತ್ತವೆ. ಐದು ವರ್ಷದೊಳಗಿನ ಶೇ. 2.9ರಷ್ಟು ಮಕ್ಕಳು ಸಾವನ್ನಪ್ಪುತ್ತಿರುವುದು ಆತಂಕದ ವಿಷಯವಾಗಿದೆ. ಶೇ. 13.7 ರಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ನಮ್ಮ ದೇಶದಲ್ಲಿ ಎತ್ತರಕ್ಕೆ ಕಡಿಮೆ ತೂಕದ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಮಕ್ಕಳಲ್ಲಿ ಶೇ. 35.5 ರಷ್ಟು ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಪರಿಸ್ಥಿತಿ ಹೀಗಾದರೆ ಇಂದಿನ ಮಕ್ಕಳು ಭಾರತದ ನಾಳಿನ ಪ್ರಜೆಗಳು ಹೇಗಾಗಬಹುದು?
ಆಹಾರ ಭದ್ರತಾ ಕಾಯಿದೆ
ಜಿಎಚ್ ಐ ನಲ್ಲಿರುವ ದೇಶಗಳ ಪಟ್ಟಿಯಲ್ಲಿ ಭಾರತ ಇಷ್ಟೊಂದು ಕೆಳಕ್ಕೆ ಬೀಳಲು ಸರ್ಕಾರಗಳ ವೈಫಲ್ಯವೇ ಕಾರಣ. ಸಂವಿಧಾನದ 21ನೇ ವಿಧಿಯು ಪ್ರತಿಯೊಬ್ಬ ನಾಗರಿಕನಿಗೂ ಬದುಕುವ ಹಕ್ಕನ್ನು ನೀಡುತ್ತದೆ. ಆಹಾರ ನಾಗರಿಕರ ಮೂಲಭೂತ ಹಕ್ಕು. ಯೂನೈಟೆಡ್ ಪ್ರೋಗ್ರೆಸಿವ್ ಅಲಯನ್ಸ್ -ಯುಪಿಎ (ಸಾಮಾನ್ಯ ಕನಿಷ್ಟ ಕಾರ್ಯಕ್ರಮದ ಆಧಾರದ ಮೇಲೆ 60 ಸಂಸದರ ಬಲವಿದ್ದ ಎಡಪಕ್ಷಗಳು, ಯುಪಿಎ-1ರ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಕೊಟ್ಟಿದ್ದವು.) ಸರಕಾರ ಆಹಾರ ಭದ್ರತಾ ಕಾಯಿದೆ ತಂದಿತು. ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ಆ ಕಾನೂನಿನ ಅಡಿಯಲ್ಲಿ ಬರುತ್ತಾರೆ. ಜಾಗತಿಕ
ಪ್ರತಿ ವ್ಯಕ್ತಿಗೆ ಐದು ಕೆಜಿಯಂತೆ ಆಹಾರ ಧಾನ್ಯಗಳನ್ನು ಸಬ್ಸಿಡಿ ಮೇಲೆ ನೀಡಬೇಕು. ಈ ಕಾನೂನನ್ನು ರದ್ದುಗೊಳಿಸುವ ಪ್ರಯತ್ನವನ್ನು ಮೋದಿ ಸರಕಾರ ಮಾಡಿಲ್ಲವಾದರೂ, ಕೊರೊನಾ ಅವಧಿಯಲ್ಲಿ ಹೆಚ್ಚುವರಿಯಾಗಿ ನೀಡಲಾಗಿದ್ದ ಉಚಿತ ಅಕ್ಕಿ ಮತ್ತು ಗೋಧಿ, ಈ ಹಿಂದೆ ಇದ್ದ ಸಬ್ಸಿಡಿ ಆಹಾರ ಧಾನ್ಯಗಳನ್ನು ಬದಲಿಸಿದೆ. ರೈತರಿಂದ ಕನಿಷ್ಟ ಬೆಂಬಲ ಬೆಲೆ ಮೇಲೆ ಧಾನ್ಯಗಳ ಸಂಗ್ರಹವನ್ನು ಕಡಿಮೆ ಮಾಡಲಾಗಿದೆ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ( FCI)ವನ್ನು ಕಿರುದುಗೊಳಿಸಲಾಗಿದೆ. ಕೇಂದ್ರೀಯ ಉಗ್ರಾಣವನ್ನು ನ್ಯಾಷನಲ್ ಮೊನಿಟೇಸನ್ ಪೈಪ್‌ಲೈನ್ (NMP) –ರಾಷ್ಟ್ರೀಯ ಹಣಗಳಿಕೆಯ ಕೊಳವೆ ಮಾರ್ಗ- ಯೋಜನೆಯಲ್ಲಿ ಇರಿಸಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯ ನಾಶದತ್ತ ಹೆಜ್ಜೆ
ಸಾರ್ವಜನಿಕ ವಿತರಣಾ ವ್ಯವಸ್ಥೆ ವಿಫಲವಾಗಿದೆ ಮಾತ್ರವಲ್ಲ, ಹಲವು ಕಠಿಣ ಷರತ್ತುಗಳನ್ನು ವಿಧಿಸುವ ಮೂಲಕ ಕೇಂದ್ರ ಸರ್ಕಾರವು ಅನೇಕ ಬಡ ಕುಟುಂಬಗಳನ್ನು ಪಡಿತರದಿಂದ ವಂಚಿತರನ್ನಾಗಿ ಮಾಡುತ್ತಿದೆ. ಬಡತನ ರೇಖೆಯನ್ನು (ಬಿಪಿಎಲ್) ಅವೈಜ್ಞಾನಿಕವಾಗಿ ನಿಗದಿಮಾಡುವ ಮೂಲಕವೂ ಬಡವರನ್ನು ಪಡಿತರ ಚೀಟಿ ಕಸಿದುಕೊಳ್ಳತೊಡಗಿದೆ. ಪಡಿತರ ಆಹಾರ ಧಾನ್ಯಗಳ ಬದಲಿಗೆ ನೇರ ನಗದು ಯೋಜನೆ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ಅಂಗನವಾಡಿ ಕೇಂದ್ರಗಳ ಖಾಸಗೀಕರಣ ಎತ್ತಿಹಿಡಿಯುವುದು, ಸಂವಿಧಾನ ನೀಡುರುವ ಶಿಕ್ಷಣ ಹಕ್ಕು ಕಾಯಿದೆಯನ್ನು ಉಲ್ಲಂಘಿಸುವುದು, ಈ ರೀತಿ ಇನ್ನೂ ಅನೇಕ ಜನವಿರೋಧಿ ಸುಧಾರಣೆಗಳನ್ನು ಮಾಡಿದೆ. ಮತ್ತೊಂದಡೆ ಅಗತ್ಯ ವಸ್ತುಗಳ ಬೆಲೆಗಳು ವಿಪರೀತವಾಗಿ ಏರಿಕೆಯಾಗಿವೆ. ಇವೆಲ್ಲದರ ಪ್ರಭಾವವು ಹಸಿವಿನ ಸೂಚ್ಯಂಕದಲ್ಲಿ ಭಾರತವನ್ನು ಕೆಳಗಿನ ಸ್ಥಾನದಲ್ಲಿ ಭದ್ರಪಡಿಸಿದೆ.
ಹಸಿವು ನೀಗಿಸಲು ಭಾರತ ಸರ್ಕಾರ ಯೋಜಿಸಿರುವ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, ಪೋಶನ್ ಅಭಿಯಾನ (ರಾಷ್ಟ್ರೀಯ ಪೋಷಣೆ ಮಿಷನ್), ಪಿಎಂ ಗರೀಬ್ ಕಲ್ಯಾಣ್ ಯೋಜನೆ ಮತ್ತು ನೈಸರ್ಗಿಕ ಕೃಷಿಗಾಗಿ ರಾಷ್ಟ್ರೀಯ ಮಿಷನ್ ಈ ಎಲ್ಲಾ ಯೋಜನೆಗಳೂ ಕೇವಲ ಯೋಜನೆಗಳಾಗಷ್ಟೇ ಉಳಿದಿವೆ ವಿನಃ ಜನರ ಅಪೌಷ್ಠಕತೆಯನ್ನು ತೊಲಗಿಸಲು, ಜನರ ಹಸಿವನ್ನು ನೀಗಿಸಲು, ಜಾಗತಿಕ ಹಸಿವಿನ ಸೂಚ್ಯಂಕದ ಪಟ್ಟಿಯಲ್ಲಿ ಮೇಲೇರಲು ಸಹಕಾರಿಯಾಗುತ್ತಿಲ್ಲ ಎಂಬುದನ್ನು ಇಂದಿನ ಜಿಎಚ್ ಐ ಸೂಚಿಸುತ್ತದೆ.
2030 ರ ವೇಳೆಗೆ ಜಗತ್ತನ್ನು ಹಸಿವು ಮುಕ್ತಗೊಳಿಸುವ ಗುರಿಯು ಸಾಕಾರಗೊಳ್ಳುವ ಲಕ್ಷಣಗಳನ್ನು ತೋರಿಸುತ್ತಿಲ್ಲ ಎಂದು GHI ವರದಿ ಸ್ಪಷ್ಟಪಡಿಸಿದೆ. ಆ ಅಭಿಪ್ರಾಯಕ್ಕೆ ಕಾರಣವೆಂದರೆ 127 ದೇಶಗಳಲ್ಲಿ 42 ದೇಶಗಳು ಇನ್ನೂ ತೀವ್ರ ಪರಿಣಾಮದ ವರ್ಗದಲ್ಲಿವೆ. ಹಸಿವು, ಹವಾಮಾನ ಬದಲಾವಣೆ, ಲಿಂಗ ಅಸಮಾನತೆ ಈ ಮೂರೂ ಒಂದಕ್ಕೊಂದು ತಳುಕು ಹಾಕಿಕೊಂಡಿದೆ ಎಂಬ ವರದಿಯ ಮೌಲ್ಯಮಾಪನ ಆಡಳಿತಗಾರರನ್ನು ಕಾಡುತ್ತಿದೆ. ತಾರತಮ್ಯದ ನಿಯಮಗಳು ನಮ್ಮ ದೇಶದಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಂದ ಆಹಾರ ಭದ್ರತೆಯನ್ನು ದೂರ ಮಾಡುತ್ತಿದೆ.
ನರೇಗಾ ಯೋಜನೆಗೆ ಕಡಿತವಾಗುತ್ತಿರುವ ಬಜೆಟ್ ಹಂಚಿಕೆ
ಗ್ರಾಮೀಣ ಜನರ ಹಸಿವು ನೀಗಿಸಲು ತಂದ ಮತ್ತೊಂದು ಯೋಜನೆ ‘ಮಹಾತ್ಮ ಗಾಂಧಿಯವರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’. ಈ ಯೋಜನೆ ಮೂಲಕ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಕಾಯ್ದೆಯಡಿ ವರ್ಷಕ್ಕೆ 100 ದಿನಗಳ ಕೆಲಸ ಮತ್ತು ಕನಿಷ್ಠ ಕೂಲಿ ನೀಡಬೇಕು. ಈ ಕೆಲಸದ ದಿನಗಳು ಸಾಕಾಗದಿದ್ದರೂ ಇದು ಕೋಟ್ಯಂತರ ಜನರ ಜೀವನಾಡಿಯಾಗಿದೆ. ದೇಶದಲ್ಲಿ ಬೇರೆ ಯಾವುದೇ ಉದ್ಯೋಗವಿಲ್ಲದಿರುವಾಗ, ಗಳಿಸಿದ ಅತ್ಯಲ್ಪ ವೇತನವು ಅವರಿಗೆ ಬಹಳ ಮೌಲ್ಯಯುತವಾಗಿದೆ. ಕೇಂದ್ರ ಸರ್ಕಾರದ ಬಜೆಟ್ ಹಂಚಿಕೆಯಲ್ಲಿ ತೀವ್ರ ಕಡಿತ ಮಾಡಲಾಗುತ್ತಿದೆ. ನರೇಗಾ ಯೋಜನೆಯನ್ನೂ ಕ್ರಮೇಣ ಇಲ್ಲವಾಗಿಸುವ ಪ್ರಯತ್ನಗಳು ನಡೆಯುತ್ತಿವೆ.
ಇದನ್ನೂ ಓದಿ: 7 ವರ್ಷದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ ಆರೋಪಿ ಬಂಧನ
ಸಾಲದ ಸುಳಿಯಲ್ಲಿ ಮಹಿಳೆಯರು
ಕ್ಷೀಣಿಸುತ್ತಿರುವ ಜೀವನೋಪಾಯ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಗಳು ಹೆಚ್ಚಿನ ಬಡ್ಡಿದರದಲ್ಲಿ ಕಿರುಬಂಡವಾಳ ಸಂಸ್ಥೆಗಳಿಂದ ಸಾಲ ಪಡೆಯಲು ಮಹಿಳೆಯರನ್ನು ತಳ್ಳುತ್ತಿವೆ. ಕೇಂದ್ರ ಸರ್ಕಾರದ ಹಲವು ಯೋಜನೆಗಳಿಗೆ ಸ್ವಸಹಾಯ ಗುಂಪುಗಳ ರಚನೆಯ ಅಗತ್ಯವಿದೆ. ಇವುಗಳಲ್ಲಿ, ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಕಿರುಬಂಡವಾಳ ಸಂಸ್ಥೆಗಳು ಸುಲಭವಾಗಿ ನುಸುಳುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ ತಂದ ನೀತಿ ಬದಲಾವಣೆಗಳು ಇದಕ್ಕೆ ಅನುಕೂಲ ಮಾಡಿಕೊಟ್ಟಿವೆ. ಸಾಲಗಾರರ ಕಿರುಕುಳ ಹೆಚ್ಚಾಗಿದೆ. ಪಡೆದ ಸಾಲ ತೀರಿಸಲಾಗದೆ ಹಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಇದನ್ನು ನಿವಾರಿಸುವುದು ಹೇಗೆ?
ಅನುಮಾನ ಸಹಜ. ಸರ್ಕಾರಗಳ ನಿರ್ಲಕ್ಷ್ಯ, ಅಸ್ಪಷ್ಟ ರಾಷ್ಟ್ರೀಯ ನೀತಿಗಳು, ಭ್ರಷ್ಟಾಚಾರ, ಬಡತನ, ಅನಕ್ಷರತೆ ಮತ್ತು ಇತರ ಸಮಸ್ಯೆಗಳನ್ನು ಪ್ರಶ್ನಿಸಲಾಗುತ್ತಿದೆ. ಹೆಚ್ಚಿನ ಜನಸಂಖ್ಯೆಯು ಸಮರ್ಪಕ ಸಂಪನ್ಮೂಲಗಳನ್ನು ಸರಿಯಾಗಿ ಬಳಸದ ಕಾರಣ ಈ ಸಮಸ್ಯೆ ಮತ್ತಷ್ಟು ಉದ್ಭವಿಸುತ್ತಿದೆ. ಬರಗಾಲ, ರೋಗ, ಪರಿಸರ ಮಾಲಿನ್ಯ, ಸಾಂಪ್ರದಾಯಿಕ ಕೃಷಿ ವಿಧಾನಗಳು, ವಿತರಣೆಯಲ್ಲಿನ ದೋಷಗಳು, ಮಾರುಕಟ್ಟೆಗಳ ಲಭ್ಯತೆ, ಸಾರಿಗೆ ಮತ್ತು ಸಾಮಾಜಿಕ ಸಮಸ್ಯೆಗಳಂತಹ ಸಮಸ್ಯೆಗಳು ಆಹಾರದ ಕೊರತೆಗೆ ಕಾರಣಗಳಾಗಿವೆ.
ಗ್ರಾಮೀಣ ಕೃಷಿ ಮೂಲಸೌಕರ್ಯಗಳನ್ನು ನಿರ್ಮಿಸಲು ಅಸಮರ್ಪಕ ಪ್ರಯತ್ನಗಳಿಂದಾಗಿ ಆಹಾರ ಭದ್ರತೆ ಇಂದು ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಬೆಂಬಲ ಬೆಲೆ, ಆಧುನಿಕ ಕೃಷಿ ಪದ್ಧತಿಗಳಿಗೆ ಬೆಂಬಲ, ಸಣ್ಣ ಅತಿ ಸಣ್ಣ ರೈತರಿಗೆ ಕೃಷಿ ಬಂಡವಾಳವನ್ನು ಸಕಾಲದಲ್ಲಿ ಒದಗಿಸುವುದು, ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವುದು ಆಹಾರದ ಕೊರತೆಯನ್ನು ಕಡಿಮೆ ಮಾಡುತ್ತದೆ.
ಹಸಿವಾದಾಗ ಹೊಟ್ಟೆ ತುಂಬಿಸಿಕೊಳ್ಳಲು ಆಹಾರ ಸೇವಿಸುವುದೊಂದೇ ಆರೋಗ್ಯಕ್ಕೆ ಪರಿಹಾರವಲ್ಲ, ನಾವು ಸೇವಿಸುವ ಆಹಾರವು ಸಮತೋಲಿತ ಪೋಷಕಾಂಶಗಳಿಂದ ಕೂಡಿರಬೇಕು ಎಂಬುದು ಅತ್ಯಂತ ಮುಖ್ಯವಾದ ವಿಷಯ ಎಂದು ಅರ್ಥಮಾಡಿಕೊಳ್ಳಬೇಕು. ಆಡಳಿತಗಾರರು ಹಸಿವಿನಿಂದ ಕಂಗೆಡದೆ ಸಮೃದ್ಧ ಭಾರತ ನಿರ್ಮಾಣದ ಗುರಿಯೊಂದಿಗೆ ಮುನ್ನಡೆಯಬೇಕು. ಜನರನ್ನು ಅದರಲ್ಲಿ ಭಾಗಿಗಳನ್ನಾಗಿ ಮಾಡಬೇಕು.
ಇದನ್ನೂ ನೋಡಿ: ಖಾಲಿ ಹುದ್ದೆ 18 ಸಾವಿರ | ನೇಮಕಾತಿ ಆದೇಶ ಐದು ಸಾವಿರು|ನಾವೆಲ್ಲಿಗೆ ಹೋಗೋಣ ಹೇಳಿ ಸಿಎಂ ಸರ್ -ಉದ್ಯೋಗಾಕಾಂಕ್ಷಿಗಳ ಅಳಲು