ಹಣದುಬ್ಬರ ತಡೆಯಲು ವಿಶ್ವದೆಲ್ಲೆಡೆ ಬಡ್ಡಿದರ ಏರಿಕೆಯಿಂದಾಗಿ ಜಾಗತಿಕ ಬೆಳವಣಿಗೆಯು ತೀವ್ರವಾಗಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಹೆಚ್ಚಿನ ದೇಶಗಳು ಆರ್ಥಿಕ ಹಿಂಜರಿತಕ್ಕೆ ಸಿಲುಕುವುದರಿಂದ ಬೆಳವಣಿಗೆ ಮತ್ತಷ್ಟು ನಿಧಾನವಾಗುವ ಸಾಧ್ಯತೆಯಿದೆ. ಇದರಿಂದಾಗಿ 2023ರಲ್ಲಿ ಆರ್ಥಿಕ ಹಿಂಜರಿತ ಭಾದಿಸಲಿದ್ದು, ಇದು 1970ಕ್ಕಿಂತ ತೀವ್ರವಾಗಿ ಕಾಡುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಏಕಕಾಲದಲ್ಲಿ ವಿತ್ತೀಯ ನೀತಿಯನ್ನು ಬಿಗಿಗೊಳಿಸುತ್ತಿದೆ. ಇದರಿಂದ ಮುಂದಿನ ವರ್ಷ ಜಗತ್ತು ಆರ್ಥಿಕ ಹಿಂಜರಿತವನ್ನು ಎದುರಿಸಬಹುದು ಎಂದು ವಿಶ್ವಬ್ಯಾಂಕ್ ಹೊಸ ವರದಿಯಲ್ಲಿ ಹೇಳಿದೆ. ಇದೇ ವೇಳೆ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಹಣದುಬ್ಬರವನ್ನು ತಗ್ಗಿಸಲು ಪೂರೈಕೆ ಅಡಚಣೆಗಳನ್ನು ತೆಗೆದುಹಾಕಲು ಕರೆ ನೀಡಿದೆ.
ಭಾರತ ಸೇರಿದಂತೆ ವಿಶ್ವವು ಮುಂದಿನ ವರ್ಷ ಆರ್ಥಿಕ ಹಿಂಜರಿತ ಕಾಣಬಹುದು ಎಂದು ವಿಶ್ವ ಬ್ಯಾಂಕ್ ಮುಖ್ಯಸ್ಥ ಡೇವಿಡ್ ಮಾಲ್ಪಾಸ್ ಹೇಳಿದ್ದಾರೆ. ಈಗಾಗಲೇ ಆರ್ಥಿಕ ಹಿಂಜರಿತದ ಲಕ್ಷಣ ಕಾಣತೊಡಗಿವೆ. 1970ರಲ್ಲಿ ಉಂಟಾದ ಆರ್ಥಿಕ ಹಿಂಜರಿತಕ್ಕಿಂತ ಗರಿಷ್ಠ ಮಟ್ಟದಲ್ಲಿ ಹಿಂಜರಿತ 2023ರಲ್ಲಿ ಆಗಬಹುದು ಎನ್ನಲಾಗುತ್ತಿದೆ.
ಕೇಂದ್ರೀಯ ಬ್ಯಾಂಕುಗಳ ಜಾಗತಿಕ ಬಡ್ಡಿದರ ಹೆಚ್ಚಳವು ಶೇ. 4ಕ್ಕೆ ತಲುಪಬಹುದು. ಇದು 2021ಕ್ಕಿಂತ ಇದು ದ್ವಿಗುಣಗೊಳ್ಳಬಹುದು. ಯುನೈಟೆಡ್ ಸ್ಟೇಟ್ಸ್‌ನಿಂದ ಯುರೋಪ್ ಮತ್ತು ಭಾರತದವರೆಗೆ, ದೇಶಗಳು ಸಾಲದ ದರಗಳನ್ನು ಆಕ್ರಮಣಕಾರಿಯಾಗಿ ಹೆಚ್ಚಿಸುತ್ತಿವೆ. ಇದು ಅಗ್ಗದ ಹಣದ ಪೂರೈಕೆಯನ್ನು ತಡೆಯುವ ಗುರಿಯನ್ನು ಹೊಂದಿದ್ದು ಆ ಮೂಲಕ ಹಣದುಬ್ಬರವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಆದರೆ ಅಂತಹ ವಿತ್ತೀಯ ಬಿಗಿಗೊಳಿಸುವಿಕೆಗೆ ಬೆಲೆ ತೆರಬೇಕಾಗುತ್ತದೆ. ಇದು ಹೂಡಿಕೆಯನ್ನು ಕುಗ್ಗಿಸುತ್ತದೆ, ಉದ್ಯೋಗಗಳನ್ನು ಕಡಿಮೆ ಮಾಡುತ್ತದೆ ಮತ್ತು ಬೆಳವಣಿಗೆಗೆ ತಡೆಯೊಡ್ಡಲಿದೆ ಎನ್ನಲಾಗಿದೆ.
ರಷ್ಯಾ-ಉಕ್ರೇನ್ ಯುದ್ಧ, ಜಾಗತಿಕ ಆಹಾರ ಪೂರೈಕೆ, ಕೃಷಿ ಉತ್ಪಾದನೆ ಕುಂಠಿತ, ಕೊರೊನಾ ಸಾಂಕ್ರಾಮಿಕತೆ, ಕೋವಿಡ್ ಹರಡುವಿಕೆಯಿಂದಾಗಿ ಚೀನಾದಲ್ಲಿ ಉಂಟಾದ ಸತತ ಲಾಕ್‌ಡೌನ್‌ಗಳು- ಮುಂತಾದ ಜಾಗತಿಕ ಪ್ರಮುಖ ಕಾರಣದಿಂದಾಗಿ ಹಣದುಬ್ಬರ ಹೆಚ್ಚುತ್ತಿದೆ.
34.5 ಕೋಟಿ ಜನ ಉಪವಾಸದತ್ತ
ಕೋವಿಡ್ ಸಾಂಕ್ರಾಮಿಕ ಹರಡುವಿಕೆ, ರಷ್ಯಾ-ಉಕ್ರೇನ್ ಯುದ್ಧ ಮತ್ತು ಆಹಾರ ಪೂರೈಕೆ ಮೇಲೆ ಭಾರೀ ಹೊಡೆತ ಅತ್ಯಂತ ಪ್ರಮುಖ ಕಾರಣವಾಗಿದ್ದು, ಜಗತ್ತಿನ 82 ದೇಶಗಳಲ್ಲಿ 34.5 ಕೋಟಿ ಮಂದಿ ಉಪವಾಸ ಬೀಳುವುದಕ್ಕೆ ಹತ್ತಿರವಾಗುತ್ತಿದ್ದಾರೆ. ಈಗಾಗಲೇ 7 ಕೋಟಿ ಮಂದಿ ಆ ಸ್ಥಿತಿಗೆ ಸಮೀಪಿದ್ದಾರೆ ಎಂದು ವಿಶ್ವ ಆಹಾರ ಸಂಸ್ಥೆ ಹೇಳಿದೆ.
ಇದು ಜಾಗತಿಕ ತುರ್ತುಪರಿಸ್ಥಿತಿಯಾಗಿದ್ದು, ಈಗಾಗಲೇ ಸೋಮಾಲಿಯಾ, ಅಪ್ಘಾನಿಸ್ತಾನ ಸೇರಿ 45 ದೇಶಗಳಲ್ಲಿನ ಸುಮಾರು 7 ಕೋಟಿ ಜನರು ಹಸಿವು ಹಾಗೂ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಆಹಾರ, ಇಂಧನ ಹಾಗೂ ಗೊಬ್ಬರದ ಬೆಲೆಯು ತೀವ್ರವಾದ ಏರುಗತಿಯಲ್ಲಿ ಸಾಗುತ್ತಿದೆ.
ಉಕ್ರೇನಿನ ಆಹಾರ ಧಾನ್ಯಗಳು ಹಡಗುಗಳ ಮೂಲಕ ಕಪ್ಪು ಸಮುದ್ರದ ಬಂದರುಗಳಿಂದ ಸಾಗಿಸಲು ಮುಂದಾದಾಗ ರಷ್ಯಾ ಅವುಗಳನ್ನು ತಡೆಹಿಡಿದಿದೆ. ಆರ್ಥಿಕ ನಿರ್ಬಂಧದಿಂದಾಗಿ ರಷ್ಯಾದ ಗೊಬ್ಬರಗಳು ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿಲ್ಲ. ಹೀಗಾಗಿ ಈಗಲೇ ತಾವು ಈ ಬಗ್ಗೆ ಎಚ್ಚರ ವಹಿಸಿ ಕಾರ್ಯ ನಿರ್ವಹಿಸದಿದ್ದರೆ ಈಗಿನ ಆಹಾರ ಬಿಕ್ಕಟ್ಟು ಮುಂದಿನ ದಿನಗಳಲ್ಲಿ ಆಹಾರ ಲಭ್ಯತೆ ಬಿಕ್ಕಟ್ಟಾಗಿ ಪರಿರ್ವತೆಯಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಆರ್‌ಬಿಐ ರೆಪೊ ದರ ಹೆಚ್ಚಳ
ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಕಳೆದ ತಿಂಗಳು ಆಗಸ್ಟ್ ನಲ್ಲಿ ಮೂರನೇ ರೆಪೊ ದರ ಹೆಚ್ಚಳ ಮಾಡಿ ಶೇ 5.40ಕ್ಕೆ 50 ಬೇಸಿಸ್ ಪಾಯಿಂಟ್ ಹೆಚ್ಚಿಸಿದೆ. ಭಾರತದಲ್ಲಿ ಸಾಲದ ಬಡ್ಡಿದರ ಏರಿಕೆಗೆ ಕಾರಣವಾಗಿದೆ. ಆರ್‌ಬಿಐ ತನ್ನ ಹಣದುಬ್ಬರ ಅಂದಾಜನ್ನು 2022-23ಕ್ಕೆ ಶೇ. 6.7ನಲ್ಲಿ ಉಳಿಸಿಕೊಂಡಿದೆ. ಅಧಿಕೃತ ಮಾಹಿತಿಯ ಪ್ರಕಾರ, ಜುಲೈನಲ್ಲಿ ಶೇ 6.71 ಏರಿಕೆಗೆ ಹೋಲಿಸಿದರೆ, ಹೆಚ್ಚಿನ ಆಹಾರ ಬೆಲೆಗಳ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಭಾರತದ ಚಿಲ್ಲರೆ ಹಣದುಬ್ಬರವು ಶೇ 7ಕ್ಕೆ ಏರಿಕೆ ಆಗಿದೆ. ಗ್ರಾಹಕರ ಹಣದುಬ್ಬರವು ಎಂಟನೇ ಸತತ ತಿಂಗಳಿಗೆ ಸೆಂಟ್ರಲ್ ಬ್ಯಾಂಕಿನ ಶೇ 4 (+/-2%) ಮಿತಿಯನ್ನು ಮೀರಿದೆ.