ಕೆ.ಮಹಾಂತೇಶ
ಹಿರಿಯ ಅಧ್ಯಾಪಕ, ನಟ ಹಾಗೂ ಕರ್ನಾಟಕ ದಲಿತ,ಬಂಡಾಯ,ರೈತ ಹಾಗೂ ಕಾರ್ಮಿಕ ಸೇರಿ ಎಲ್ಲ ಜನಪರ ಚಳವಳಿಗಳ ಧ್ವನಿಯಾಗಿದ್ದ ಪ್ರೊ;ಜಿ.ಕೆ ಗೋವಿಂದರಾವ್ ಇನ್ನಿಲ್ಲ ಎನ್ನುವುದನ್ನು ಊಹೆ ಮಾಡಿಕೊಳ್ಳಲು ಕಷ್ಟವಾಗುತ್ತಿದೆ.
ನಾನು ನೋಡಿದಂತೆ ಇವರಷ್ಟು ನೇರ ನಿಷ್ಟುರತೆ ವ್ಯಕ್ತಿತ್ವ ಕರ್ನಾಟಕ ಸಾಹಿತ್ಯ ಮತ್ತು ಬುದ್ದಿಜೀವಿ ವಲಯದಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಅವರ ನೇರ ಮತ್ತು ಕಠೋರ ನುಡಿಗಳು ಕೇವಲ ಆಳುವವರ ವಿರುದ್ದ ಮಾತ್ರ ಇರುತ್ತಿರಲಿಲ್ಲ ಕೆಲವೊಮ್ಮೆ ನಮ್ಮಂತಹವರು ತಪ್ಪು ಮಾಡಿದಾಗಲೂ ಕಟ್ಟಿಟ್ಟ ಬುತ್ತಿಯಾಗಿರುತ್ತಿದ್ದವು.
ನಾನು ಪ್ರಥಮ ಬಾರಿಗೆ 2000 ನೇ ಇಸ್ವಿಯಲ್ಲಿ ಮಂಗಳೂರಿನ ಉಲ್ಲಾಳದ ಡಿವೈಎಫ್.ಐ ಸಮ್ಮೇಳನ ಸಮ್ಮೇಳನಕ್ಕೆ ಅವರನ್ನು ಅತಿಥಿಯಾಗಿ ಕರೆದೊಯ್ದಿದ್ದೆ. ಹೊಟೇಲ್ ನಿಂದ ಸಮ್ಮೇಳನ ಸಭಾಂಗಣಕ್ಕೆ ಕಾರಿನಲ್ಲಿ ಹೋಗುವಾಗ ಒಂದು ಕಡೆ ನಮ್ಮ ಕಾರ್ಯಕರ್ತರು ಗೋಡೆಯ ಬರಹದಲ್ಲಿ ಸಮ್ಮೇಳನದ ಪ್ರಚಾರ ಮಾಡಿದ್ದರು ಅದರಲ್ಲಿ ಪೊ; ಜಿ.ಕೆ ಗೋವಿಂದ ರಾವ್ ಅವರಿಗೆ ಸ್ವಾಗತ ಎಂದು ಬರೆದಿದ್ದು ರಾಯರು ಗಮನಿಸಿ ಅಲ್ಲಿಂದಲೇ ಏನ್ರೀ ಯಾರ್ರೀ ಇದನ್ನು ಬರೆದಿದ್ದು ? ಎಂದು ಜತೆ ಇದ್ದ ನನ್ನ ಮೇಲೆ ಗರಂ ಆದರು. ನಂತರವೂ ಅವರ ಸಿಟ್ಟು ತಣ್ಣಗಾಗಲಿಲ್ಲ ಯುವಜನ ಸಮ್ಮೇಳನ ಉದ್ಘಾಟಿಸಿ ಅವರು ಇಡೀ ಭಾಷಣವನ್ನೇ ಕಮ್ಯೂನಿಸ್ಟ್ ರ ವಿರುದ್ದ ಮಾಡಿಬಿಟ್ಟರು! ಅವರನ್ನು ಸಾವಿರಾರು ರುಪಾಯಿ ಖರ್ಚು ಮಾಡಿಕೊಂಡ ನಮ್ಮ ಕಾರ್ಯಕರ್ಯರು ಸುಸ್ತೋ ಸುಸ್ತಾದರು.!
ಇದಾದ ಬಳಿಕ ನಾವು ಎಚ್ಚರಗೊಂಡೆವು ಮುಂದೆ ಅಂತಹ ತಪ್ಪುಗಳನ್ನು ಮಾಡಲಿಲ್ಲ.
RSSಗೆ ಬಿನ್ ಲಾಡನ್ ಸ್ಪೂರ್ತಿ!? : ಗುಜರಾತ್ ನ ಗೋದ್ರ ನರಮೇಧದ ಬಳಿಕ ಡಿವೈಎಫೈ ನೇತೃತ್ವದಲ್ಲಿ ನಾವು ಸರಣಿ ಸಭೆಗಳನ್ನು ಪಾದಯಾತ್ರೆ ಗಳನ್ನು ಸಂಘಟಿಸಿದ್ದೇವು.ದಾವಣಗೆರೆ,ಗಂಗಾವತಿ, ಶಿರಸಿ, ಮೊದಲಾ ಕಡೆಗಳಲ್ಲಿ ಪ್ರೊ ಗೋವಿಂದರಾವ್ ಮುಖ್ಯ ಭಾಷಣಕಾರರು ಆ ಸಭೆಗಳಲ್ಲಿ ಅವರು ನೇರ ವಾಗ್ದಾಳಿಯನ್ನು RSS ವಿರುದ್ದ ಮಾಡುತ್ತಿದ್ದರು. ದಾವಣಗೆರೆ ಕಾರ್ಯಕ್ರಮದಲ್ಲಿ ಅವರು RSS ಗೆ ಬಿನ್ ಲಾಡನ್ ನೇ ಸ್ಪೂರ್ತಿ ಎಂದು ಹೇಳಿದ ಹೇಳಿಕೆ ಭಾರೀ ಸಂಚಲನ ಉಂಟು ಮಾಡಿತ್ತು.
ಅವರು ಹೇಳಿದ್ದು ಹೌದು ಬಿನ್ ಲಾಡನ್ ವಿಮಾನಗಳ ಮೂಲಕ ಭಯೋತ್ಪಾದನಾ ಕೃತ್ಯ ನಡೆಸುತ್ತಿದ್ದರೆ ನಾವಿನ್ನೂ ಕತ್ತಿ ಗುರಾಣಿ, ಬಂದೂಕು ಹಿಡಿದು ಗಲಭೆ ನಡೆಸುತ್ತಿದ್ದೇವೆ. ನಾವು ಬಿನ್ ಲಾಡನ್ ತರಹ ಆಧುನಿಕ ತಂತ್ರಜ್ಞಾನದ ಮೂಲಕ ಗಲಭೆ ಸೃಷ್ಟಿಸಲು ತಯಾರಾಗಬೇಕು ಎಂದು RSS ಬಯಸುತ್ತಿದೆ. ಹೀಗಾಗಿ ಬಿನ್ ಲಾಡನ್ ಅವರಿಗೆ ಸ್ಪೂರ್ತಿ ಎಂದಿದ್ದರು. ಮೋದಿ ಸರ್ಕಾರದ ನೀತಿಗಳ ವಿರುದ್ದ ಮತ್ತು ಮೋದಿ ಆರಾಧಕರ ವಿರುದ್ದವೂ ಗೋವಿಂದ ರಾವ್ ತೀವ್ರ ಟೀಕೆಗಳನ್ನು ಮಾಡಲು ಹಿಂದೇಟು ಹಾಕಲಿಲ್ಲ. ಮೈಸೂರಿನಲ್ಲಿ ಅವರು ಒಮ್ಮೆ ಮೋದಿ ಬಗ್ಗೆ ಟೀಕೆ ಮಾಡಬಾರದು ಎನ್ನುವುದಕ್ಕೆ ಪ್ರತಿಕ್ರಿಯೆಯಾಗಿ ಅವರೇನೋ ದೇವರೇ ?ಎಂದು ಪ್ರಶ್ನಿಸಿದ್ದರು.
ನಕ್ಸಲೀಸಂ ವಿರುದ್ದ ನಿಷ್ಠೂರ ಧ್ವನಿ : ಗೊವಿಂದರಾವ್ ಅವರಿಗೆ ಹಿಂಸೆ ನಂಬಿಕೆ ಇರಲಿಲ್ಲ. ಸ್ವತಃ ಗಾಂಧಿವಾದಿಯಾಗಿದ್ದ ಅವರು ಎಲ್ಲ ಬಗೆಯ ಹಿಂಸೆಗಳನ್ನು ತಮ್ಮ ಬದುಕಿನುದ್ದಕ್ಕೂ ವಿರೋಧಿಸುತ್ತಾ ಬಂದರು. ಬಾಬಾ ಬುಡನಗಿರಿ ವಿವಾದ ಸಂದರ್ಭದಲ್ಲಿ ಅಂದಿನ ಸರ್ಕಾರಗಳು ಮಲೆನಾಡಿನಲ್ಲಿ ಶಾಂತಿಯನ್ನು ಸ್ಥಾಪಿಸಲು ವಿಫಲರಾದಾಗ ಕೋಮುವಾದಿಗಳು ಆ ಪ್ರದೇಶದಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸಲು ಯತ್ನಿಸಿದಾಗ ಗೋವಿಂದರಾವ್ ಅವರು ಸಹಜವಾಗಿಯೇ ಸೌಹಾರ್ಧತೆಗಾಗಿ ಅಂದು ಆರಂಭದಲ್ಲಿ ಎಲ್ಲ ಜನಪರ ಚಳವಳಿಗಳನ್ನು ಒಳಗೊಂಡ ಕೋಮುಸೌಹಾರ್ಧ ವೇದಿಕೆ ಜತೆ ಹೆಜ್ಜೆ ಹಾಕಿದರು.
ಬಾಬಬುಡನ್ ಗಿರಿ ಚಲೋದಲ್ಲಿ ಭಾಗವಹಿಸಲು ಚಿಕ್ಕಮಗಳೂರಿನ ಕಡೆ ತೆರಳುವಾಗ ಹಾಸನದಲ್ಲಿ ಗಿರೀಶ್ ಕಾರ್ನಾಡ್, ಡಾ; ಮರಳಸಿದ್ದಪ್ಪ, ಆರಂಧತಿ ನಾಗ್ ಮೊದಲಾದವರ ಜತೆ ಬಂಧನಕ್ಕೊಳಗಾದರು. ನಾವು ಡಿವೈಎಫ್ ಐ ಮತ್ತು ವಿಶೇಷವಾಗಿ ಭಾನು ಮಸ್ತಾಕ್ ಅವರ ಜತೆ ಸೇರಿ ಒಂದು ದೊಡ್ಡ ಕಾರ್ಯಕ್ರಮವನ್ನೇ ಆ ಸಂಧರ್ಭದಲ್ಲಿ ಹಾಸನದಲ್ಲಿ ಆಯೋಜಿಸಿದ್ದೇವು. ಬಳಿಕ ಸಂಘಪರಿವಾರಕ್ಕೆ ಹೇಗೆ ಕೋಮುಉನ್ಮಾದವನ್ನು ಸೃಷ್ಟಿಸುವ ಅಜೆಂಡಾವಿದೆಯೋ ಹಾಗೆ ಕೋಮು ಸೌಹಾರ್ಧ ವೇದಿಕೆಯನ್ನು ಹಿಡಿತದಲ್ಲಿಟ್ಟುಕೊಂಡ ಹಲವರು ನಕ್ಸಲೀಯ ಚಟುವಟಿಕೆಗಾಗಿ ಬಳಸಿಕೊಂಡರು.
ಇದರಿಂದ ಜನಪರ ಸಂಘಟನೆಗಳು ಅದರಿಂದ ದೂರ ಸರಿದವು. ರಾಜ್ಯದ ಹತ್ತಾರು ಜನಪರ ವ್ಯಕ್ತಿತ್ವಗಳು ,ಬುದ್ದೀಜೀವಿಗಳು ಅದನ್ನು ಗ್ರಹಿಸಿ ಹಿಂದೆ ಸರಿದರು.ಈ ಸಂದರ್ಭದಲ್ಲಿ ಪ್ರೊ; ಜಿ.ಕೆ ಗೋವಿಂದರಾವ್ ಅವರಂತೂ ಸಂಘಪರಿವಾರದ ವಿರುದ್ದ ಎಷ್ಟು ವ್ಯಾಘ್ರಗೊಂಡಿದ್ದರೋ ಅಷ್ಟೇ ನಕ್ಸಲೀಯಯರ ದಾಳಿಗಳನ್ನು ಖಂಡಾತುಂಡವಾಗಿ ಖಂಡಿಸಿ ಕೋಮು ಸೌಹಾರ್ಧ ವೇದಿಕೆಯ ಎಲ್ಲ ಕಾರ್ಯಕ್ರಮಗಳಿಂದ ದೂರವಾದರು.
ಇದೇ ವೇಳೆಯಲ್ಲಿ ಒಂದು ಬಾರಿ ಅವರ ಮನೆಗೆ ನಾವು ಸಂಗಾತಿಗಳು ಹೋದಾಗ ಅವರು ಕೆಲವು ದಿನಗಳ ಹಿಂದಷ್ಟೇ ಕ್ಯಾನ್ಸರ್ ನಿಂದ ನಿಧನರಾದ ಸಿಪಿಎಂ ಪಶ್ಚಿಮ ಬಂಗಾಳದ ರಾಜ್ಯ ಕಾರ್ಯದರ್ಶಿ ಅನಿಲ್ ಬಿಸ್ವಾಸ್ ಅವರು ನಕ್ಸಲೀಜಂ ಕುರಿತಾಗಿ ಬರೆದಿದ್ದ ಒಂದು ಲೇಖನವನ್ನು ಓದಿ ಮುಗಿಸಿದ್ದರು. ಎಂತಹ ಕಣ್ಣು ತೆರೆಸುವ ಪ್ರಬುದ್ಧ ಲೇಖನವನ್ನು ಬರೆದ ಅನಿಲ್ ಬಿಸ್ವಾಸ್ ಇನ್ನಿಲ್ಲ ಎನ್ನುವ ಅವರ ಸಾವಿನ ಕುರಿತು ತಮ್ಮ ಅತೀವ ಸಂತಾಪ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ನಕ್ಸಲೀಜಂ ಆಂಧ್ರದಲ್ಲಿ ಕಂಡ ಏಳು ಬೀಳುಗಳ ಕುತಿತಾಗಿ ಪಾಠ ಕೂಡ ಮಾಡಿದ್ದು ನೆನಪಿದೆ.
ಪ್ರೊ; ಗೋವಿಂದರಾವ್ ಅವರದ್ದು ಸದಾ ಜನಮುಖಿ, ಶಾಂತಿಯುತ ಬದುಕಿಗಾಗಿ ಹಾತೊರೆಯುವ ಮನಸ್ಸಾಗಿತ್ತು . ಪ್ರಶಾಂತವಾದ ನಿರ್ಮಲ ಸಮಾಜವನ್ನು ಸೃಷ್ಟಿಸಬೇಕೆಂದು ಅವರ ಮನಸ್ಸು ಸದಾ ಬಯಸುತ್ತಿತ್ತು. ಅಳವಾದ ಓದು ಮತ್ತು ಅತ್ಯುತ್ತಮ ತಿಳುವಳಿಕೆ ಮತ್ತು ತೀಕ್ಷ್ಣವಾದ ಮಾತುಗಳು ನಮ್ಮಂತಹವರನ್ನು ಸದಾ ಎಚ್ಚರದಲ್ಲಿ ಇರುವಂತೆ ಮಾಡುತ್ತಿದ್ದವು. ಅಪರೂಪದಲ್ಲೇ ಅಪರೂಪದ ವ್ಯಕ್ತಿತ್ವ ಅವರದ್ದು. ಅವರ ಅಗಲುವಿಕೆ ಕರ್ನಾಟಕ ಎಲ್ಲ ಜನಪರ ಚಳವಳಿ ಸಂಘಟನೆಗಳಿಗೆ ತುಂಬಾಲಾರದ ನಷ್ಟವೇ ಸರಿ.
ಸಾರ್ ಹೋಗಿ ಬನ್ನಿ ಕರ್ನಾಟಕದ ನಾವು ಸದಾ ನೀವು ಮೂಡಿಸಿದ ಎಚ್ಚರದಲ್ಲೇ ಇರುತ್ತೇವೆ.ನೀವು ಕಂಡ ಸುಂದರ ಸಮಾಜವನ್ನು ಕಟ್ಟಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆ. ಭಾವಪೂರ್ಣ ನಮನಗಳು