ನವದೆಹಲಿ: ನ್ಯಾಯಮೂರ್ತಿಗಳ ವಿರುದ್ಧ ವೈಯಕ್ತಿಕ ದಾಳಿ ನಡೆಸುವ ಪ್ರವೃತ್ತಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಗುರುವಾರ ಕಟುವಾಗಿ ಟೀಕಿಸಿದ್ದಾರೆ. ವಕೀಲರೊಬ್ಬರು ಕ್ರಿಶ್ಚಿಯನ್ ಸಮುದಾಯದ ವಿರುದ್ಧದ ಹಿಂಸಾಚಾರವನ್ನು ಎತ್ತಿ ತೋರಿಸುವ ಅರ್ಜಿಯನ್ನು ಪ್ರಸ್ತಾಪಿಸಿ ಅದರ ತುರ್ತು ವಿಚಾರಣೆ ನಡೆಸುವಂತೆ ಪಟ್ಟಿ ಮಾಡಬೇಕು ಎಂದು ಕೋರಿದ್ದರು. ಇದನ್ನು ಆಲಿಸಿದ ನ್ಯಾಯಮೂರ್ತಿ ಚಂದ್ರಚೂಡ್ ಅವರು, ಸುಪ್ರೀಂ ಕೋರ್ಟ್ ಈ ವಿಷಯದ ವಿಚಾರಣೆಯನ್ನು ವಿಳಂಬ ಮಾಡುತ್ತಿದೆ ಎಂದು ಸೂಚಿಸುವ ಕೆಲವು ಸುದ್ದಿ ಲೇಖನವನ್ನು ನೋಡಿದೆ ಎಂದು ಹೇಳಿದ್ದಾರೆ.
“ನಾನು ಕೋವಿಡ್‌ನಿಂದ ಬಳಲುತ್ತಿದ್ದೆ, ಆದ್ದರಿಂದ ವಿಷಯವನ್ನು ಕೈಗೆತ್ತಿಕೊಳ್ಳಲಾಗಲಿಲ್ಲ. ಆದರೆ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ವಿಳಂಬಗೊಳಿಸುತ್ತಿದೆ ಎಂಬ ಸುದ್ದಿ ಲೇಖನವನ್ನು ನಾನು ಇತ್ತೀಚೆಗೆ ಓದಿದ್ದೇನೆ… ನಮಗೂ ವಿಶ್ರಾಂತಿ ನೀಡಿ! ನ್ಯಾಯಾಧೀಶರಲ್ಲಿ ಒಬ್ಬರು ಕೋವಿಡ್‌ನಿಂದ ಬಳಲುತ್ತಿದ್ದರು, ಅದಕ್ಕಾಗಿಯೇ ನಾವು ಅದನ್ನು ವಿಚಾರಣೆ ನಡೆಸಲು ಸಾಧ್ಯವಾಗಲಿಲ್ಲ. ನೀವು ನ್ಯಾಯಾಧೀಶರನ್ನು ಗುರಿಯಾಗಿಸುತ್ತಿರುವುದಕ್ಕೂ ಒಂದು ಮಿತಿಯಿದೆ…. ಅಂತಹ ಸುದ್ದಿಗಳನ್ನು ಯಾರು ಪ್ರಕಟಿಸುತ್ತಿದ್ದಾರೆ?…” ಎಂದು ಅವರು ಕೇಳಿದ್ದಾರೆ.
ಜುಲೈ 19 ರಂದು ಸುಪ್ರೀಂ ಕೋರ್ಟ್ ಅರ್ಜಿಯನ್ನು ಮುಂದೂಡಿದ ಸುದ್ದಿಯನ್ನು, ಕೆಲವು ನ್ಯೂಸ್ ಪೋರ್ಟಲ್‌ಗಳು “ಭಾರತದ ಸುಪ್ರೀಂಕೋರ್ಟ್ ಕ್ರಿಶ್ಚಿಯನ್ ವಿರೋಧಿ ಹಿಂಸಾಚಾರದ ಅರ್ಜಿಯ ವಿಚಾರಣೆಯನ್ನು ವಿಳಂಬಗೊಳಿಸುತ್ತದೆ” ಎಂಬ ಶೀರ್ಷಿಕೆಯನ್ನು ಹೊಂದಿತ್ತು.
ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ಪೀಠವು ಅರ್ಜಿಯ ವಿಚಾರಣೆಗೆ ವಿಷಯವನ್ನು ಪಟ್ಟಿ ಮಾಡಲು ಒಪ್ಪಿಕೊಂಡಿತು. “….ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಿ. ಇಲ್ಲದಿದ್ದರೆ ಇನ್ನೊಂದು ಸುದ್ದಿ ಬರುತ್ತದೆ” ಎಂದು ಹೇಳಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಕ್ರಿಶ್ಚಿಯನ್ ಸಮುದಾಯದ ವಿರುದ್ಧ ಹಿಂಸಾಚಾರ ಮತ್ತು ಗುಂಪು ದಾಳಿಗಳನ್ನು ನಿಲ್ಲಿಸಲು ನಿರ್ದೇಶನಗಳನ್ನು ಕೋರಿ ಸುಪ್ರೀಂಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲಾಯಿತು. ಬೆಂಗಳೂರು ಡಯಾಸಿಸ್‌ನ ಆರ್ಚ್‌ಬಿಷಪ್ ಡಾ. ಪೀಟರ್ ಮಚಾದೊ ಅವರು ನ್ಯಾಷನಲ್ ಸಾಲಿಡಾರಿಟಿ ಫಾರಂ, ಇವಾಂಜೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾದೊಂದಿಗೆ ಈ ಅರ್ಜಿಯನ್ನು ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ಜುಲೈ 11, 2022 ರಂದು ಅರ್ಜಿಯನ್ನು ಪಟ್ಟಿ ಮಾಡಲು ಜೂನ್ ಕೊನೆಯ ವಾರದಲ್ಲಿ ಒಪ್ಪಿಕೊಂಡಿತ್ತು. ಹಿರಿಯ ವಕೀಲ ಡಾ. ಕಾಲಿನ್ ಗೊನ್ಸಾಲ್ವಿಸ್ ಅವರು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ರಜಾಕಾಲದ ಪೀಠದ ಮುಂದೆ ದೇಶದಲ್ಲಿ ಕ್ರಿಶ್ಚಿಯನ್ ಸಂಸ್ಥೆಗಳ ವಿರುದ್ಧದ ದಾಳಿ ಹೆಚ್ಚುತ್ತಿವೆ ಎಂದು ಅರ್ಜಿಯನ್ನು ತುರ್ತು ಪಟ್ಟಿಗಾಗಿ ಕೇಳಿದ್ದರು
ಜುಲೈ 11 ರಂದು, ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎಎಸ್ ಬೋಪಣ್ಣ ಅವರ ಪೀಠವು ಜುಲೈ 15 ರಂದು ವಿಚಾರಣೆಯನ್ನು ಮುಂದೂಡಿತ್ತು. ಆದರೆ, ನ್ಯಾಯಮೂರ್ತಿ ಚಂದ್ರಚೂಡ್ ಅವರು ಕೊರೊನಾದಿಂದ ಬಳಲುತ್ತಿರುವ ಕಾರಣ ಈ ವಿಷಯವನ್ನು ಕೈಗೆತ್ತಿಕೊಳ್ಳಲಾಗಲಿಲ್ಲ.
ಇತ್ತೀಚೆಗೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಧೀಶರ ವಿರುದ್ಧ ವೈಯಕ್ತಿಕ ದಾಳಿಯ ಪ್ರವೃತ್ತಿಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದರು.