ಬೆಳಗಾವಿ: ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಪ್ರಯಾಣಕ್ಕೆ ಅನುಕೂಲ ಆಗುವಂತೆ 30 ವಿಮಾನ ಟಿಕೆಟ್ ಉಚಿತವಾಗಿ ಕೊಡಿ ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ಉತ್ತರ ಕರ್ನಾಟಕದ ಕುರಿತಾದ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ಉತ್ತರ ಕರ್ನಾಟಕದ ಭಾಗದ ಶಾಸಕರಿಗೆ ಮೂವತ್ತು ಟಿಕೆಟ್ ಕೊಡಿ ಹಾಗೂ ಲೋಕಸಭೆ ಮಾದರಿಯಲ್ಲಿ ಎಲ್ಲ ಶಾಸಕರಿಗೆ ಕನಿಷ್ಟ 15 ಟಿಕೆಟ್ ಉಚಿತವಾಗಿ ಕೊಡಿ . ಇದರಿಂದ ನಮಗೆ ಪ್ರಯಾಣದ ಸಮಯ ಉಳಿಯುತ್ತದೆ ” ಎಂದರು.
ಪ್ರತಿ ಬಾರಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡ್ತರೆ. ಮೊದಲು ರಾಜ್ಯ ಸರ್ಕಾರದ ಹಣ ವಿನಿಯೋಗ ಮಾಡಿ. ಉತ್ತರ ಕರ್ನಾಟಕದ ಸಮಸ್ಯೆ ಬೆಳಗಾವಿಯಲ್ಲಿ ಚರ್ಚೆ ಆಗಬೇಕು. ನಾವು ಪ್ರತಿಷ್ಠೆಗೆ ಬೀಳುವುದು ಬೇಡ. ನಂಜುಡಪ್ಪ ವರದಿಯಂತೆ ಉತ್ತರ ಕರ್ನಾಟಕ ಪ್ರತ್ಯೇಕ ಕೃಷಿ ಅಭಿವೃದ್ಧಿ ಕೇಂದ್ರ ಮಾಡಿ ” ಎಂದೂ ಆಗ್ರಹಿಸಿದರು.
ವಿಮಾನ ನಿಲ್ದಾಣದ ವಿಚಾರವಾಗಿಯೂ ಕೂಡ ಉತ್ತರ ಕರ್ನಾಟಕದ ಭಾಗದ ಜನರಿಗೆ ತಾರತಮ್ಯ ಆಗಿದೆ. ಕಾರ್ಗೋ ವ್ಯವಸ್ಥೆ ಇರಲಿಲ್ಲ, ನಾನು ವಿಜಯಪುರಕ್ಕೆ ಹೋರಾಟ ಮಾಡಿ ತಂದೆ. ಬೀದರ್,ಕಲ್ಬುರ್ಗಿ, ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿ ಆಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಅಭಿವೃದ್ಧಿ ಮಾಡಬೇಕು. ಬೆಂಗಳೂರು ಕೇಂದ್ರ ಬಿಟ್ಟು ಉತ್ತರ ಕರ್ನಾಟಕದಲ್ಲಿ ಕೇಂದ್ರ ಮಾಡಿ. ಹಾವೇರಿ, ಬಾಗಲಕೋಟೆ ಹಾಗೂ ವಿಜಯಪುರದಲ್ಲಿ ಕಾರ್ಖಾನೆಗಳನ್ನು ಆರಂಭಿಸಿ ಎಂದು ಮನವಿ ಮಾಡಿದರು.
ಉತ್ತರ ಕರ್ನಾಟಕದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕೇವಲ ಬೆಂಗಳೂರು, ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಸಾಲದು, ಬಾದಾಮಿ, ಪಟ್ಟದಕಲ್ಲು, ಐಹೊಳೆ ಇವೆಲ್ಲವೂ ದೊಡ್ಡಮಟ್ಟದಲ್ಲಿ ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಅಭಿವೃದ್ಧಿ ಮಾಡಬೇಕು ಎಂದು ಬೇಡಿಕೆ ಇಟ್ಟರು.
ಮೆಕ್ಕೆಜೋಳಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಜೋಳಕ್ಕೆ ಉತ್ತೇಜನ ನೀಡಿದರೆ ಸಹಜವಾಗಿಯೇ ಗೋಸಂಪತ್ತು ಹೆಚ್ಚುತ್ತದೆ. ಆಯಾ ಭಾಗಕ್ಕೆ ಅನುಗುಣವಾಗಿ ಆಹಾರ ನೀಡಬೇಕು. ನಮ್ಮ ಭಾಗದಲ್ಲಿ ಜೋಳ ನೀಡಿ, ಹಳೇ ಮೈಸೂರು ಭಾಗದಲ್ಲಿ ರಾಗಿಯನ್ನ ನೀಡಿ. ಐದು ಕೆಜಿ ಅಕ್ಕಿ ಜೊತೆಗೆ ಆಯಾ ಭಾಗದ ಧಾನ್ಯ ನೀಡಬೇಕು.ಐದು ಕೆಜೆ ಅಕ್ಕಿಗೆ ಹಣ ಕೊಟ್ಟರೆ ಬಡವರು ಕುಡಿದು ಹಾಳು ಮಾಡುಕೊಳ್ಳುತ್ತಾರೆ ಎಂದರು.
ಉತ್ತರ ಕರ್ನಾಟಕ ಭಾಗದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಯತ್ನಾಳ್ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಕಾಲೆಳೆದರು ಚಾಮರಾಜನಗರ, ಕನಕಪುರ ಇದೆಲ್ಲಾ ಅಂತ್ಯದ ಹಿಂದುಳಿದಿವೆ. ಅಲ್ಲಿ ವೈಯಕ್ತಿಕವಾಗಿ ಬೆಳೆದಿದ್ದಾರೆ ಅಷ್ಟೇ ಬದಲಾಗಿ ಕನಕಪುರ ಬೆಳೆದಿಲ್ಲ. ಒಬ್ಬೊಬ್ಬ ಶಾಸಕರದ್ದು ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುತ್ತದೆ.ಐವತ್ತು ಕೋಟಿ ಇದ್ದದ್ದು ಮತ್ತೊಂದು ವರ್ಷಕ್ಕೆ ನೂರು ಕೋಟಿ ಆಗಿರುತ್ತೆ, ಮತ್ತೆ ಅದು 1583 ಕೋಟಿ ಆಗುತ್ತೆ. ಈ ರೀತಿ ಆದಾಯ ಹೆಚ್ಚುತ್ತಲೇ ಹೋಗುತ್ತದೆ ಎಂದರು.