ಕುಂದಾಪುರ : ಹಿಜಾಬ್ ವಿವಾದದ ಬೆನ್ನಲ್ಲೆ ಉಡುಪಿ ಜಿಲ್ಲೆಯಲ್ಲಿ ಮತ್ತೊಮ್ಮೆ ತಲೆತಗ್ಗಿಸುವ ಪ್ರಕರಣ ವರದಿಯಾಗಿದೆ. ಬೈಂದೂರು ಬಿಜೆಪಿ ಶಾಸಕ ಸುಕುಮಾರ್ ಶೆಟ್ಟಿ ಆಡಳಿತದ ಕುಂದಾಪುರ ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ (PRO) ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿರುವುದಾಗಿ ಆರೋಪಿಸಿ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಬಿ.ಬಿ.ಹೆಗ್ಡೆ ಕಾಲೇಜಿನ ಸಂಪರ್ಕಾಧಿಕಾರಿಯಾಗಿರುವ ನಾಗರಾಜ ಶೆಟ್ಟಿ, ಕಾಲೇಜಿನ ಆರಂಭದ ದಿನಗಳಿಂದಲೂ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸುವುದರ ಜೊತೆಗೆ ಅವರ ಭಾವಚಿತ್ರಕ್ಕಾಗಿ ಬೇಡಿಕೆ ಇಡುತ್ತಿದ್ದನು. ತಡರಾತ್ರಿ ವಿಡಿಯೋ ಕಾಲ್ ಮಾಡಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಇದಕ್ಕೆ ಸಂಬಂಧಿಸಿದ ಪುರಾವೆಗಳು ನಮ್ಮಲ್ಲಿವೆ. 25 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಅಶ್ಲೀಲ ಮೆಸೆಜ್ ಕಳುಹಿಸಿರುವ ಸ್ಕ್ರೀನ್ ಶಾಟ್ ಫೋಟೊಗಳು ನಮ್ಮ ಬಳಿ ಇವೆ. ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ, ಸಾಂಸ್ಕೃತಿಕ ಕಾರ್ಯಕ್ರಮಗಳ ವಿಚಾರದಲ್ಲಿ ಮತ್ತು ಹಳೆ ವಿದ್ಯಾರ್ಥಿಗಳಿಗೆ ಕೆಲಸ ಕೊಡುವ ಆಮಿಷವೊಡ್ಡಿ ಪ್ರತಿದಿನ ಕಿರುಕುಳ ನೀಡುತ್ತಿದ್ದಾನೆ. ಈ ರೀತಿ ತಪ್ಪು ಎಸಗಿರುವ ನಾಗರಾಜ್ ಶೆಟ್ಟಿ ಎಲ್ಲರ ಮುಂದೆ ವಿದ್ಯಾರ್ಥಿನಿಯರಲ್ಲಿ ಕ್ಷಮೆಯಾಚಿಸಬೇಕು. ಅಲ್ಲದೆ ಕೆಲಸದಿಂದ ವಜಾಗೊಳಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.
ವಿದ್ಯಾರ್ಥಿನಿಯರು ನಡೆಸಿದ ಪ್ರತಿಭಟನೆಗೆ ಕಾಲೇಜಿನ ಹುಡುಗರು ಸಾಥ್ ನೀಡುವ ಮೂಲಕ ನಾಗರಾಜ್ ಶೆಟ್ಟಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪ್ರತಿನಿತ್ಯ ಕಿರುಕುಳ : ಬಿಬಿ ಹೆಗ್ಡೆ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಯಲ್ಲಿರುವ ನಾಗರಾಜ ಶೆಟ್ಟಿ ನೈಕಂಂಬ್ಳಿ ಎಂಬಾತ ಸಾರ್ವಜನಿಕ ಸಂಪರ್ಕ ಮಾಡದೆ ರಾತ್ರಿ ಹೊತ್ತು ಕಾಲೇಜಿನ ಹುಡುಗಿಯರನ್ನು ಅವರ ಮೊಬೈಲ್ ಮೂಲಕ ಸಂಪರ್ಕಿಸುತ್ತಿದ್ದಾನೆ. Whatsapp ನಲ್ಲಿ ಆಪ್ತವಾಗಿ ಮೆಸೇಜ್ ಮಾಡು, ಬೋಲ್ಡ್ ಆಗಿ ಮೆಸೇಜ್ ಮಾಡು, ಏನು ಬೇಕಾದರೂ ಮೆಸೇಜ್ ಮಾಡು, ಒಬ್ಬಳೆ ಮಲಗಿದ್ದೀಯ, ಸೆಲ್ಫೀ ಕಳಿಸು ಎಂದೆಲ್ಲ ರಾತ್ರಿ ಹೊತ್ತಿನಲ್ಲಿ ಕಾಲೇಜಿನ ಹುಡುಗಿಯರಿಗೆ ಮೆಸೇಜ್ ಮಾಡುತ್ತಿದ್ದಾನೆ. ಎಲ್ಲ ಮೆಸೇಜ್ ಡಿಲಿಟ್ ಮಾಡು, all clear ಮಾಡು, Delete for everyone ಮಾಡು ಎಂದು ಮೆಸೇಜ್ ಮಾಡಿದ ಬಳಿಕ ರಿಕ್ವೆಸ್ಟ್ ಕೂಡ ಮಾಡುತ್ತಾನೆ. ಜಾನು, ಕೋತಿ, ಚಿನ್ನು ಇನ್ನೂ ಏನೇನೋ. ಇಂತಹ ಮೆಸೇಜ್‌ಗಳನ್ನು ಒಂದೆರಡು ಹುಡುಗಿಯರಿಗೆ ಮಾಡಿದ್ದಲ್ಲ. ಈ ರೀತಿ ಕಾಲೇಜಿನ ಹಲವು ಹುಡುಗಿಯರಿಗೆ ಮಾಡಿದ್ದಾನೆ. ಕಾಲೇಜಿನ ಪ್ರಾಂಶುಪಾಲರಿಗೆ ಹಲವು ಬಾರಿ ಈ ಕುರಿತು ಮಾಹಿತಿ ನೀಡಿ ನೈಕಂಬ್ಳಿ ವಿರುದ್ಧ ಕ್ರಮ ಕೈಗೊಳ್ಳಿ ಎಂದರೂ ಈ ತನಕ ಯಾವುದೇ ಕ್ರಮವನ್ನು ಪ್ರಾಂಶುಪಾಲರು ಕೈಗೊಳ್ಳದ ಕಾರಣ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿಭಟನೆಗೆ ಇಳಿದಿದ್ದಾರೆ.
ನಾಗರಾಜ್ ಶೆಟ್ಟಿ ಯಾರೂ : ನಾಗರಾಜ ನೈಕಂಭ್ಳಿ ಆರೆಸ್ಸೆಸ್‌ನ ಕಟ್ಟಾಳು. ಬೈಂದೂರು ಶಾಸಕ ಸುಕುಮಾರ ಶೆಟ್ಟರ ಸೋಷಿಯಲ್ ಮೀಡಿಯಾ ಮುಖ್ಯಸ್ಥ. ಬಿಜೆಪಿಯ ಸೋಷಿಯಲ್ ಮೀಡಿಯಾದಲ್ಲಿ ವರ್ಷಗಳಿಂದ ಸಕ್ರಿಯ ಈತ. ಈ ಕಾರಣಕ್ಕಾಗಿ ಈಗ ಸುಕುಮಾರ ಶೆಟ್ಟಿ ಮತ್ತು ಕಾಲೇಜಿನ ಆಡಳಿತ ಮಂಡಳಿ ಈತನನ್ನು ರಕ್ಷಿಸುತ್ತಿದೆ. ಜೊತೆಗೆ ಪೊಲೀಸರು ವಿದ್ಯಾರ್ಥಿನಿಯರ ಅಳಲು ಕೇಳದೆ ಆ ವಿದ್ಯಾರ್ಥಿನಿಯರಿಗೆ ಅನ್ಯಾಯ ಮಾಡುತ್ತಿದ್ದಾರೆ.
ರಕ್ಷಣೆಗೆ ನಿಂತ ಪೊಲೀಸರು : “ನಾಗರಾಜ ನೈಕಂಬ್ಳಿಯ ರಕ್ಷಣೆಗೆ ಪೊಲೀಸರು ನಿಂತಂತೆ ಕಾಣುತ್ತಿದೆ. ವಿದ್ಯಾರ್ಥಿಗಳು ಧರಣಿ ನಡೆಸುತ್ತಿರುವ ವೇಳೆ ಕಾಲೇಜಿಗೆ ಬಂದ ಪೊಲೀಸರು ಪ್ರತಿಭನೆ ನಿಲ್ಲಿಸಿ, ತರಗತಿಗಳಿಗೆ ಹೋಗಿ ಇಲ್ಲವೆ ಮನೆಗೆ ಹೋಗಿ ಎಂದು ಬೆದರಿಸುವ ಕೆಲಸ ಮಾಡಿದ್ದಾರೆ. ಆದರೆ ಇದ್ಯಾವುದಕ್ಕೂ ಜಗ್ಗದ ವಿದ್ಯಾರ್ಥಿಗಳು ನಾಗರಾಜ್ ಶೆಟ್ಟಿಮೇಲೆ ಕ್ರಮ ಕೈಗೊಳ್ಳಿ ಎಂದು ಘೋಷಣೆ ಹಾಕಿದ್ದಾರೆ. ವಿದ್ಯಾರಥಿನಿಯರ ಪ್ರತಿಭಟನೆಯನ್ನು ಗೌರವಿಸಿ ನಾಗರಾಜ್ ಶೆಟ್ಟಿಯನ್ನು ಕರೆಯಿಸಿ ವಿಚಾರಣೆ ನಡೆಸುವ ಕ್ರಮವನ್ನಾದರೂ ಪೊಲೀಸರು ಕೈಗೊಳ್ಳಬಹುದಿತ್ತು. ಆದರೆ ಪೊಲೀಸರು ಆತನ ರಕ್ಷಣೆಗೆ ನಿಂತಿರುವುದನ್ನು ನೋಡಿದರೆ, ಪೊಲೀಸರು ಶಾಸಕರ ಕೈಗೊಂಬೆಯಾಗಿದ್ದಾರೆ ಎಂಬುದನ್ನು ತೋರಿಸುತ್ತದೆ.
ಪೊಲೀಸರ ನಡೆಗೆ ಹಿರಿಯ ಪತ್ರಕರ್ತ ಶಶೀಧರ್ ಹೆಮ್ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ವಿದ್ಯಾರ್ಥಿನಿಯರಿಗೆ ನೈಕಂಬ್ಳಿ ಅಲ್ಲಸಲ್ಲದ ಮೆಸೇಜ್ ಕಳಿಸಿದ್ದಾನೆ, ಅದಕ್ಕೆ ಸಾಕ್ಷಿ ಬೇರೆ ಇದೆ, ಅವನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸುವ ಹಕ್ಕೂ ವಿದ್ಯಾರ್ಥಿನಿಯರಿಗೆ ಇಲ್ಲವೆ? ಇಷ್ಟೆಲ್ಲ ವಿದ್ಯಾರ್ಥಿನಿಯರು ಒಗ್ಗಟ್ಟಾಗಿ ತಮಗಾಗುತ್ತಿರುವ ಕಿರುಕುಳವನ್ನು ಸಹಿಸಲಾಗದೆ ನೈಕಂಭ್ಳಿ ವಿರುದ್ಧ ಪ್ರತಿಭಟಿಸುತ್ತಿರುವಾಗ ಪೊಲೀಸರು ಈ ವಿದ್ಯಾರ್ಥಿನಿಯರಿಗೆ ನ್ಯಾಯ ದೊರಕಿಸಿಕೊಡಬೇಕಲ್ಲವೆ? ಆದರೆ ಪೊಲೀಸರಿಗೆ ವಿದ್ಯಾರ್ಥಿನಿಯರೇ ಬಂದು ದೂರು ಕೊಡಬೇಕಂತೆ. ಯಾವ ವಿದ್ಯಾರ್ಥಿನಿಯರಿಗೆ ಆತ ಮೆಸೇಜ್ ಮಾಡಿ ತೊಂದರೆ ಕೊಟ್ಟಿದ್ದಾನೊ ಆ ವಿದ್ಯಾರ್ಥಿನಿಯರು ಒಬ್ಬೊಬ್ಬರಾಗಿ ಬಂದು ಕಂಪ್ಲೇಂಟ್ ಕೊಟ್ಟರೆ ಮಾತ್ರ ಅವರು ಕ್ರಮ ಕೈಗೊಳ್ಳುತ್ತಾರಂತೆ. ಈ ಪ್ರತಿಭಟನೆ ಎಲ್ಲ ನಮಗೆ ಲೆಕ್ಕಕ್ಕಿಲ್ಲ ಎಂಬುದು ಪೊಲೀಸರ ಲೆಕ್ಕಾಚಾರ ಇರಬೇಕು ಎಂದು ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿನಿಯರು ಒಟ್ಟಾಗಿ ಸೇರಿ ಒಬ್ಬತಾನ ಕಿರುಕುಳದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆಂದರೆ ಕನಿಷ್ಟ ಅವರಿಗೆ ಸ್ಪಂದಿಸಬೇಕಾದ ಜವಾಬ್ದಾರಿಯೂ ಪೊಲೀಸರಿಗೆ ಇಲ್ಲವೆ? ನಾಗರಾಜ ನೈಕಂಬ್ಳಿಯನ್ನು ಕರೆಯಿಸಿ ವಿಚಾರಿಸಬೇಕಾದದ್ದು ಪೊಲೀಸರ ಕರ್ತವ್ಯವಲ್ಲವೆ? ನಾಗರಾಜ ಶೆಟ್ಟಿ ನೈಕಂಬ್ಳಿ ಮಾಡಿದ ಕೆಲಸವನ್ನೇ ನದೀಮನೋ, ನವಾಝನೋ ಮಾಡಿದ್ದರೆ ಅಥವಾ ದಲಿತ, ಹಿಂದುಳಿದ ಸಮುದಾಯಗಳ ಯುವಕರು ಹೀಗೆ ಮಾಡಿದ್ದರೆ ಇಷ್ಟು ಹೊತ್ತಿಗೆ ಅವರ ಮೇಲೆ ಯಾವ್ಯಾವ ಸೆಕ್ಷನ್‌ನಲ್ಲಿ ಕೇಸ್ ಮಾಡಬಹುದೊ ಅದೆಲ್ಲ ಕೇಸ್ ಮಾಡಿ ಜೈಲಿಗೆ ಅಟ್ಟುತ್ತಿದ್ದರು. ಆದರೆ ಇಲ್ಲಿ ಆತ ಸುಕುಮಾರ ಶೆಟ್ಟಿಗೆ ಆಪ್ತ ಎಂಬ ಕಾರಣಕ್ಕೆ ರಕ್ಷಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಶಶಿಧರ್ ಹೆಮ್ಮಾಡಿ ಆರೋಪಿಸಿದ್ದಾರೆ.
ಬೇಟಿ ಬಚಾವೊ, ಬೇಟಿ ಪಡಾವೊ ಎಂದು ಬೊಂಬಡಾ ಬಿಡುವ ಪಕ್ಷದ ಶಾಸಕ ಸುಕುಮಾರ ಶೆಟ್ಟರಿಗೆ ತಮ್ಮ ಕಾಲೇಜಿನ ವಿದ್ಯಾರ್ಥಿನಿಯರಿಗೆ ಆಗುತ್ತಿರುವ ಈ ಕಿರುಕುಳದ ಬಗ್ಗೆ ಕಿಂಚಿತ್ ಕಾಳಜಿ ಇದ್ದರೆ ಸ್ವತ: ಅವರೇ ನಾಗರಾಜ್ ಶೆಟ್ಟಿ ವಿರುದ್ಧ ದೂರು ದಾಖಲಿಸಬೇಕು. ಜೊತೆಗೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯಿರಿಗೆ ರಕ್ಷಣೆ ಮತ್ತು ಭದ್ರತೆ ನೀಡಲು ಮುಂದಾಗಬೇಕು.