ಗಾಜಾದಲ್ಲಿ ‘ಸಾಮೂಹಿಕ ಶಿಕ್ಷೆ’ಯ ನೆಪದಲ್ಲಿ ನರಮೇಧ

ಪ್ರೊ. ಪ್ರಭಾತ್ ಪಟ್ನಾಯಕ್
ಅನು : ಕೆ.ಎಂ.ನಾಗರಾಜ್

ಗಾಜಾದಲ್ಲಿ ಏನು ನಡೆಯುತ್ತಿದೆಯೋ ಅದು ವಿಶ್ವಸಂಸ್ಥೆಯ 1948ರ ಅಧಿನಿರ್ಣಯ ನರಮೇಧದ ಬಗ್ಗೆ ಕೊಟ್ಟಿರುವ ವ್ಯಾಖ್ಯಾನಕ್ಕೆ ನಿಖರವಾಗಿ ಹೊಂದಿಕೆಯಾಗುತ್ತದೆ. ಹಮಾಸ್ ಒಂದು ಭಯೋತ್ಪಾದಕ ಸಂಘಟನೆ ಎಂಬ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಗಳ, ಮತ್ತು ನರೇಂದ್ರ ಮೋದಿ ಕೂಡ ನಿಷ್ಠೆಯಿಂದ ಪುನರುಚ್ಚರಿಸಿರುವ ಬಣ್ಣನೆಯನ್ನು ಸರಿಯೆಂದು ಭಾವಿಸಿದರೂ ಕೂಡ, ಯಾವುದೇ ಅಂತರರಾಷ್ಟ್ರೀಯ ಕಾನೂನು, ಇಸ್ರೇಲ್ ಇಡೀ ಪ್ಯಾಲೆಸ್ತೈನ್ ಜನತೆಯ ವಿರುದ್ಧ, ಅವರ ನಡುವೆ ಭಯೋತ್ಪಾದಕರು ಇದ್ದಾರೆ ಎಂಬ ಕಾರಣದ ಮೇಲೆ, ನರಮೇಧ ನಡೆಸಲು ಅನುಮತಿಸುವುದಿಲ್ಲ. ವಾಸ್ತವವಾಗಿ, ಒಂದು ಇಡೀ ಜನ ಸಮುದಾಯದ ವಿರುದ್ಧ ಅವರು ವೈಯಕ್ತಿಕವಾಗಿ ಮಾಡದ ಅಪರಾಧಗಳಿಗಾಗಿ ವಿಧಿಸುವ ‘ಸಾಮೂಹಿಕ ಶಿಕ್ಷೆ’ಯೂ ಒಂದು ಯುದ್ಧಾಪರಾಧವಾಗುತ್ತದೆ. ವಿಶ್ವಸಂಸ್ಥೆಯು, ಹಮಾಸ್ ದಾಳಿಯ ನಂತರ ಇಸ್ರೇಲ್ ಕೈಗೊಂಡ ಕ್ರಮಗಳನ್ನು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಕರೆದಿದೆ. ಆದರೆ ಭದ್ರತಾ ಮಂಡಳಿಯನ್ನು ಸಾಮ್ರಾಜ್ಯಶಾಹಿಯು ನಿಷ್ಕ್ರಿಯಗೊಳಿಸಿರುವುದರಿಂದ, ವಿಶ್ವಸಂಸ್ಥೆಯು ಅಸಹಾಯಕ ಪ್ರೇಕ್ಷಕನಾಗಿ ಬಿಟ್ಟಿದೆ. ವಿಶ್ವ ಸಾರ್ವಜನಿಕ ಅಭಿಪ್ರಾಯವನ್ನು ಜಾಗೃತಗೊಳಿಸುವುದು ಮಾತ್ರವೇ ಈಗ ಉಳಿದಿರುವ ಏಕೈಕ ಭರವಸೆ. 

ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ, ಇಸ್ರೇಲಿ ಪಡೆಗಳು ಗಾಜಾ ಪಟ್ಟಿಯ ಮೇಲೆ ಭಾರಿ ಬಾಂಬ್ ದಾಳಿ ನಡೆಸಿದ್ದು, ಸುಮಾರು 2000 ಪ್ಯಾಲೆಸ್ತೀನೀಯರನ್ನು ಕೊಂದಿವೆ ಮತ್ತು ಕನಿಷ್ಠ 7000 ಜನರನ್ನು ಗಾಯಗೊಳಿಸಿವೆ. (ಅಕ್ಟೋಬರ್13, ಶುಕ್ರವಾರ ರಾತ್ರಿಯವರೆಗೆ). ಗಾಜಾದ ಜನರಿಗೆ ಆಹಾರ, ವಿದ್ಯುತ್, ಅನಿಲ ಮತ್ತು ನೀರಿನ ಪೂರೈಕೆಯನ್ನು ಇಸ್ರೇಲ್ ನಿಲ್ಲಿಸಿದೆ. ಅಷ್ಟೇ ಅಲ್ಲದೆ, ಇಸ್ರೇಲಿ ಭೂ ಸೇನೆಯ ದಾಳಿಗೆ ಸಿದ್ಧತೆಯಾಗಿ, ಗಾಜಾ ಉತ್ತರ ಭಾಗದ ಹನ್ನೊಂದು ಲಕ್ಷ ಜನರು, (ಅಂದರೆ ಇಡೀ ಗಾಜಾ ಪಟ್ಟಿಯ ಜನಸಂಖ್ಯೆಯ ಅರ್ಧದಷ್ಟು. ಕೇವಲ 365 ಚದರ ಕಿಲೋಮೀಟರ್ ವಿಸ್ತೀರ್ಣದ ಗಾಜಾ ಪಟ್ಟಿ ಪ್ರದೇಶದಲ್ಲಿ 22 ಲಕ್ಷ ಜನರನ್ನು ಕಿಕ್ಕಿರಿದು ತುಂಬಲಾಗಿದೆ) ತಮ್ಮ ಮನೆಗಳನ್ನು ತೊರೆದು 24 ಗಂಟೆಗಳ ಒಳಗೆ ಆ ಇಡೀ ಪ್ರದೇಶವನ್ನು ಖಾಲಿ ಮಾಡುವಂತೆ ಒಂದು ಎಚ್ಚರಿಕೆಯನ್ನು ಇಸ್ರೇಲ್ ಶುಕ್ರವಾರದಂದು ಕೊಟ್ಟಿದೆ. ಗಾಜಾದಿಂದ ಇಸ್ರೇಲಿಗೆ ಹೋಗುವ ಎಲ್ಲಾ ಪ್ರವೇಶ-ದ್ವಾರಗಳನ್ನೂ ಮುಚ್ಚಿರುವುದರಿಂದ ಮತ್ತು ಗಾಜಾದಿಂದ ಈಜಿಪ್ಟಿಗೆ ಹೋಗುವ ಏಕೈಕ ಪ್ರವೇಶ ದ್ವಾರದ ಮೇಲೆ ಬಾಂಬ್ ದಾಳಿ ನಡೆದಿರುವುದರಿಂದ, ಜನರು ಅದನ್ನು ಬಳಸುವುದು ಸಾಧ್ಯವಿಲ್ಲ. ಪ್ಯಾಲೆಸ್ತೀನೀ ನಿರಾಶ್ರಿತರು ಆಗಮಿಸುವಂತಿಲ್ಲ ಎಂದು ಈಜಿಪ್ಟ್ ಹೇಳಿದೆ. ಹಾಗಾಗಿ, ಜಾಗ ಖಾಲಿ ಮಾಡುವಂತೆ ಹೇಳಿರುವ ಇಸ್ರೇಲಿನ ಆದೇಶ ಪಾಲನೆ ಒಂದು ಸಾಧ್ಯವಿಲ್ಲದ ಮಾತು.

ಮೇಲಾಗಿ, ಗಾಜಾದಿಂದ ನಿರ್ಗಮಿಸಲು ರಸ್ತೆಗಳು-ದಾರಿಗಳು ಲಭ್ಯವಿದ್ದರೂ ಮತ್ತು ಅವು ತೆರೆದಿದ್ದರೂ ಸಹ, ಕೇವಲ ಇಪ್ಪತ್ನಾಲ್ಕು ಗಂಟೆಗಳ ಗಡುವಿನ ಅವಧಿಯಲ್ಲಿ ವೃದ್ಧರು, ಕಾಯಿಲೆ ಕಸಾಲೆಯಿಂದ ನರಳುವವರು, ಅಶಕ್ತರು, ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ಹತ್ತು ಲಕ್ಷಕ್ಕೂ ಹೆಚ್ಚು ಜನರ ನಿರ್ಗಮನದ ಅಗಾಧ ಪ್ರಮಾಣವು – ಒಂದು ಗಂಟೆಗೆ 42,000 ಮಂದಿಯಂತೆ ಅಥವಾ ಒಂದು ಸೆಕೆಂಡಿಗೆ 12 ಮಂದಿಯ ಲೆಕ್ಕದಲ್ಲಿ ಜಾಗ ಖಾಲಿ ಮಾಡುವುದು – ವಾಸ್ತವಿಕವಾಗಿ ಒಂದು ಅಸಾಧ್ಯತೆಯೇ ಸರಿ. ಗಾಜಾದ ನಿವಾಸಿಗಳಿಗೆ ಎರಗಲಿರುವ ಈ ಅನಾಹುತವನ್ನು ಅಂದರೆ, ಇಸ್ರೇಲಿ ಭೂ ಸೇನೆಯ ದಾಳಿಯಿಂದಾಗಿ ಪರಿಣಮಿಸುವ ಹತ್ಯಾಕಾಂಡವನ್ನು ಸಮರ್ಥಿಸಲು ಈ ಆದೇಶವು ಇಸ್ರೇಲಿಗೆ ಒಂದು ನೆಪವಾಗುತ್ತದೆ: ಜನರಿಗೆ ಮುಂಚಿತವಾಗಿಯೇ ಎಚ್ಚರಿಕೆ ನೀಡಲಾಗಿತ್ತು. ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಅಲ್ಲಿಯೇ ಉಳಿದವರು ಹತರಾದರೆ ಅದು ಇಸ್ರೇಲಿ ಸೇನೆಯ ತಪ್ಪಲ್ಲ ಎಂದು ಸಮಜಾಯಿಷಿ ಕೊಡಬಹುದು. ದಾಳಿಕೋರ ಪಡೆಗಳು ನಡೆಸುವ ಹತ್ಯೆಗಳ ಜೊತೆಗೆ, ಜಾಗ ತೆರವುಗೊಳಿಸುವ ಆದೇಶವು ಉಂಟು ಮಾಡುವ ಹತಾಶೆ ಮತ್ತು ಭೀತಿ ಮತ್ತು ಗಾಬರಿಗೊಂಡ ಈ ನಿರಾಶ್ರಿತರು ರಸ್ತೆಗಳ ಮೇಲೆ ಚೆಲ್ಲಾ ಪಿಲ್ಲಿಯಾಗಿ ಓಡುತ್ತಿರುವಾಗ ಅವರ ಮೇಲೆ ನಿರಂತರವಾಗಿ ಸುರಿಸುವ ಬಾಂಬ್‌ಗಳು ಇವೆಲ್ಲವೂ ಸೇರಿ ಸಾವಿರಾರು ಜೀವಗಳನ್ನು ಬಲಿತೆಗೆದುಕೊಳ್ಳುತ್ತವೆ. ಸಂಕ್ಷಿಪ್ತವಾಗಿ ನಾವು ನೋಡುತ್ತಿರುವುದು ಇಂಥಹ ನರಮೇಧದ ಒಂದು ಕರ್ಮಕಾಂಡವನ್ನು.

ಇಸ್ರೇಲ್ ಎಸಗುತ್ತಿರುವುದು ಯುದ್ಧಾಪರಾಧಗಳನ್ನು

ವಿಶ್ವ ಸಂಸ್ಥೆಯ 1948ರ ನರಮೇಧ ಅಧಿನಿರ್ಣಯದ ಪ್ರಕಾರ, ನರಮೇಧವನ್ನು “ಒಂದು ರಾಷ್ಟ್ರೀಯ, ಜನಾಂಗೀಯ ಅಥವಾ ಧಾರ್ಮಿಕ ಗುಂಪನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಾಶಪಡಿಸುವ ಕೃತ್ಯ” ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. ಗಾಜಾದಲ್ಲಿ ಏನು ನಡೆಯುತ್ತಿದೆಯೋ ಅದು ವಿಶ್ವ ಸಂಸ್ಥೆಯು ನರಮೇಧದ ಬಗ್ಗೆ ಕೊಟ್ಟಿರುವ ಈ ವ್ಯಾಖ್ಯಾನಕ್ಕೆ ನಿಖರವಾಗಿ ಹೊಂದಿಕೆಯಾಗುತ್ತದೆ. ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿ ಶಕ್ತಿಗಳು ಈ ನರಮೇಧವನ್ನು ಸಮರ್ಥಿಸುತ್ತಿವೆ. ಭಯೋತ್ಪಾದಕ ದಾಳಿಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಇಸ್ರೇಲ್‌ಗೆ ಇದೆ, ಭಯೋತ್ಪಾದಕ ಸಂಘಟನೆಯಾದ ಹಮಾಸ್ ಇಸ್ರೇಲಿನ ಮೇಲೆ ಒಂದು ಕ್ರೂರ ದಾಳಿಯನ್ನು ನಡೆಸಿದೆ. ಭವಿಷ್ಯದಲ್ಲೂ ದಾಳಿ ಮಾಡುತ್ತದೆ. ಹಮಾಸ್, ಗಾಜಾದ ಜನರ ಹಿಂದೆ ಅಡಗಿಕೊಂಡಿರುವುದರಿಂದ ಅದನ್ನು ನಿಗ್ರಹಿಸಲು ಇಸ್ರೇಲ್ ಈ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವೆಂಬ ನೆಲೆಯಲ್ಲಿ ಈ ನರಮೇಧವನ್ನು ಸಾಮ್ರಾಜ್ಯಶಾಹಿ ದೇಶಗಳು ಸಮರ್ಥಿಸುತ್ತಿವೆ.

ಹಮಾಸ್ ಒಂದು ಭಯೋತ್ಪಾದಕ ಸಂಘಟನೆ ಎಂಬ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಗಳ ಬಣ್ಣನೆಯನ್ನು ನರೇಂದ್ರ ಮೋದಿ ಕೂಡ ನಿಷ್ಠೆಯಿಂದ ಪುನರುಚ್ಚರಿಸಿದ್ದಾರೆ. ಈ ಬಣ್ಣನೆಯನ್ನು ಒಂದು ಕ್ಷಣ ಒಪ್ಪಿಕೊಳ್ಳೋಣ. ಆದರೆ, ಯಾವುದೇ ಅಂತರರಾಷ್ಟ್ರೀಯ ಕಾನೂನು, ಇಸ್ರೇಲ್ ಅಥವಾ ಯಾವುದೇ ಒಂದು ದೇಶವು ಇಡೀ ಜನತೆಯ ವಿರುದ್ಧ, ಅವರ ನಡುವೆ ಭಯೋತ್ಪಾದಕರು ಇದ್ದಾರೆ ಎಂಬ ಕಾರಣದ ಮೇಲೆ, ನರಮೇಧ ನಡೆಸಲು ಅನುಮತಿಸುವುದಿಲ್ಲ. ವಾಸ್ತವವಾಗಿ, ಒಂದು ಇಡೀ ಜನ ಸಮುದಾಯದ ವಿರುದ್ಧ ಅವರು ವೈಯಕ್ತಿಕವಾಗಿ ಮಾಡದ ಅಪರಾಧಗಳಿಗಾಗಿ ವಿಧಿಸುವ ಸಾಮೂಹಿಕ ಶಿಕ್ಷೆಯು, ನಾಲ್ಕನೇ ಜಿನೀವಾ ಅಧಿನಿರ್ಣಯದ ಅಡಿಯಲ್ಲಿ ಒಂದು ಯುದ್ಧಾಪರಾಧವಾಗುತ್ತದೆ.

ಇದನ್ನೂ ಓದಿ: ಗಾಜಾ ಯುದ್ಧ ಇಡೀ ಪ್ರದೇಶಕ್ಕೆ ವ್ಯಾಪಿಸುವ ಅಪಾಯ ಇದೆಯಾ?

ಇಸ್ರೇಲ್ ಈಗ ಏನು ಮಾಡುತ್ತಿದೆಯೊ ಅದು ಕೇವಲ ಒಂದು “ಸಾಮೂಹಿಕ ಶಿಕ್ಷೆ”ಯಲ್ಲ. ಅದು ಒಂದು ನರಮೇಧವೇ. ಗಾಜಾದ ಜನರಿಗೆ ನೀರು, ವಿದ್ಯುತ್ ಮತ್ತು ಅನಿಲ ಸರಬರಾಜನ್ನು ನಿಲ್ಲಿಸಿದ ಇಸ್ರೇಲ್‌ನ ಕ್ರಮವು “ಸಾಮೂಹಿಕ ಶಿಕ್ಷೆ”ಯ ಒಂದು ರೂಪವೇ. “ಸಾಮೂಹಿಕ ಶಿಕ್ಷೆ”ಯೂ ಒಂದು ಯುದ್ಧಾಪರಾಧವೇ. ನಾಗರಿಕರು ವಾಸಿಸುವ ಪ್ರದೇಶಗಳ ಮೇಲೆ ಬಾಂಬ್ ದಾಳಿ ಮಾಡುವುದೂ ಯುದ್ಧಾಪರಾಧವೇ (ಮತ್ತು ನಾಗರಿಕರಲ್ಲದವರು ಅಂತಹ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೂ ಸಹ, ನಾಗರಿಕರು ವಾಸಿಸುವ ಪ್ರದೇಶ ಎಂಬ ಅದರ ವರ್ಗೀಕರಣವನ್ನು ಬದಲಾಯಿಸಲಾಗದು. ಆದ್ದರಿಂದ, ಅಂತಹ ಪ್ರದೇಶದ ಮೇಲೆ ಮಾಡುವ ಬಾಂಬ್ ದಾಳಿಯೂ ಒಂದು ಯುದ್ಧಾಪರಾಧವೇ ಎಂಬುದನ್ನು ಅಲ್ಲಗಳೆಯಲಾಗದು).

ಹಾಗಾಗಿ, ಗಾಜಾ ಉತ್ತರ ಭಾಗದ ಜನರು ತಮ್ಮ ಮನೆಗಳನ್ನು ತೊರೆದು ಆ ಪ್ರದೇಶವನ್ನು ಖಾಲಿ ಮಾಡುವಂತೆ ಆದೇಶಿಸಿದ ಅಸಾಧ್ಯವಾದ ಈ ಎಚ್ಚರಿಕೆಯೂ ಸಹ, ಊಹಿಸಲಾಗದ ಪ್ರಮಾಣದ ಒಂದು ಯುದ್ಧಾಪರಾಧವೇ. ಗಾಜಾ ಪಟ್ಟಿಯ ಜನರಿಗೆ ಆಹಾರ ಸರಬರಾಜಿನ ನಿರಾಕರಣೆಯೂ ಸಹ, ಊಹಿಸಲಾಗದ ಪ್ರಮಾಣದ ಒಂದು ಯುದ್ಧಾಪರಾಧವೇ.  ವಿಶ್ವಸಂಸ್ಥೆಯು, ಹಮಾಸ್ ದಾಳಿಯ ನಂತರ ಇಸ್ರೇಲ್ ಕೈಗೊಂಡ ಕ್ರಮಗಳನ್ನು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಕರೆದಿದೆ. ಈ ಉಲ್ಲಂಘನೆಯು ನರಮೇಧಕ್ಕಿಂತ ಕಡಿಮೆಯೇನಲ್ಲ.

ಸಾಮ್ರಾಜ್ಯಶಾಹಿಗಳ ಜನಾಂಗವಾದೀ ಮನಸ್ಥಿತಿ

ಹಮಾಸ್ ದಾಳಿಯಿಂದ ಉಂಟಾದ ಇಸ್ರೇಲಿ ನಾಗರಿಕರ ಸಾವುನೋವುಗಳ ಬಗ್ಗೆ ಕೆರಳುವ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿ ದೇಶಗಳು, ಪ್ಯಾಲೆಸ್ತೀನೀ ಜನರ ಮೇಲೆ ನಡೆಯುತ್ತಿರುವ ನರಹತ್ಯೆಯೂ ಸೇರಿದಂತೆ ಇಸ್ರೇಲಿನ ಬೃಹತ್ ಯುದ್ಧಾಪರಾಧಗಳ ವಿರುದ್ಧ ಒಂದೇ ಒಂದು ಮಾತನ್ನೂ ಆಡುವುದಿಲ್ಲ ಎಂಬ ಅಂಶವು ಇಸ್ರೇಲೀ ಜೀವಗಳಿಗಿಂತ ಪ್ಯಾಲೆಸ್ತೀನೀ ಜೀವಗಳು ಕಡಿಮೆ ಪ್ರಾಮುಖ್ಯತೆ ಹೊಂದಿವೆ ಎಂಬ ಮನಸ್ಥಿತಿಯನ್ನು ತೋರಿಸುತ್ತದೆ. ಇದು ಸಾಮ್ರಾಜ್ಯಶಾಹಿ ಶಕ್ತಿಗಳು ಹೊಂದಿರುವ ಜನಾಂಗೀಯ ಮನಸ್ಥಿತಿ. ಈ ಜನಾಂಗೀಯ ಮನಸ್ಥಿತಿಯನ್ನು, ತಮ್ಮ ಬೆಂಬಲದೊಂದಿಗೆ ಆಳ್ವಿಕೆ ನಡೆಸುತ್ತಿರುವ ವರ್ಣಭೇದ ಅನುಸರಿಸುವ ಇಸ್ರೇಲಿನೊಂದಿಗೆ ಅವರು ಹಂಚಿಕೊಂಡಿದ್ದಾರೆ.

ಯಹೂದಿ ಶಿಶುಗಳನ್ನು ತಲೆ ಕಡಿದು ಹಮಾಸ್ ಕೊಲ್ಲುತ್ತಿದೆ ಎಂಬುದಾಗಿ ಮತಾಂಧ ಇಸ್ರೇಲಿ ವಸಾಹತುಗಾರರು ಹರಡಿದ ಸುಳ್ಳು ಕಥೆಗಳನ್ನು ಉಲ್ಲೇಖಿಸುವ ಮೂಲಕ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿ ದೇಶಗಳು ತಮ್ಮ ಈ ಮನಸ್ಥಿತಿಯನ್ನು ತೋರಿಸಿಕೊಂಡಿದ್ದಾರೆ. ಗಾಜಾದ ಮೇಲೆ ನಡೆಸುವ “ಸಂಪೂರ್ಣ ಮುತ್ತಿಗೆ”ಯನ್ನು ಸಮರ್ಥಿಸಿಕೊಳ್ಳಲು ಇಸ್ರೇಲಿನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಬಳಸಿದ ಪದಗಳಲ್ಲಿ ಈ ಮನಸ್ಥಿತಿ ಸ್ಪಷ್ಟವಾಗಿ ಗೋಚರಿಸುತ್ತದೆ: “ಮೃಗಗಳ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಅದಕ್ಕೆ ತಕ್ಕಂತೆ ವರ್ತಿಸುತ್ತೇವೆ” (ಟ್ರೂಥ್‌ಔಟï ಪತ್ರಿಕೆಯಲ್ಲಿ ಮಾರ್ಜೋರಿ ಕೋನ್ ಅವರ ಅಕ್ಟೋಬರ್ 12ರ ಲೇಖನದಲ್ಲಿ ಇದನ್ನು ಉಲ್ಲೇಖಿಸಲಾಗಿದೆ).

ಆದರೆ, ಹಮಾಸ್‌ ಅನ್ನು ಒಂದು “ಭಯೋತ್ಪಾದಕ ಸಂಘಟನೆ” ಎಂದು ಕರೆಯುವುದು, ಪ್ಯಾಲೆಸ್ಟೈನ್ ಭೂಪ್ರದೇಶಗಳನ್ನು ಇಸ್ರೇಲ್ ಆಕ್ರಮಿಸಿಕೊಂಡಿರುವ ಮುಕ್ಕಾಲು ಶತಮಾನದ ಆಕ್ರಮಣದ ಬಗ್ಗೆ ಕಣ್ಣು ಮುಚ್ಚಿಕೊಂಡಂತಾಗುತ್ತದೆ. ಈ ಮುಕ್ಕಾಲು ಶತಮಾನದ ಆಕ್ರಮಣದ ಅವಧಿಯಲ್ಲಿ ಪ್ಯಾಲೆಸ್ತೀನೀ ಜನರನ್ನು ನಿರ್ದಯವಾಗಿ ದಮನಿಸಲಾಗಿದೆ, ಅವರಲ್ಲಿ ಕ್ರೌರ್ಯ ತುಂಬಿಸಿದೆ, ನಿರ್ಗತಿಕರನ್ನಾಗಿಸಿದೆ ಮತ್ತು ಅವಮಾನಿಸಲಾಗಿದೆ. ಇತ್ತೀಚೆಗೆ ನಾನು ಅಮೇರಿಕ ಸಾಮ್ರಾಜ್ಯಶಾಹಿ ನಿರ್ಬಂಧಗಳ ಬಗ್ಗೆ ನೇಮಿಸಿದ್ದ ಒಂದು ಅಂತಾರಾಷ್ಟ್ರೀಯ ನ್ಯಾಯದರ್ಶಿ ಮಂಡಳಿಯಲ್ಲಿ ಒಬ್ಬ ನ್ಯಾಯದರ್ಶಿ(ಜೂರರ್) ಆಗಿ ಕಾರ್ಯನಿರ್ವಹಿಸಿದ್ದೇನೆ. ಅಮೆರಿಕ ಮತ್ತು ಇತರ ಸಾಮ್ರಾಜ್ಯಶಾಹಿ ದೇಶಗಳು ವಿಧಿಸಿದ ಆರ್ಥಿಕ ನಿರ್ಬಂಧಗಳಿಗೆ ಒಳಗಾದ 15 ದೇಶಗಳ ಸಾಕ್ಷಿಗಳಿಂದ ನಾವು ಸಾಕ್ಷ್ಯಗಳನ್ನು ಆಲಿಸಿದೆವು. ಕೆಲವು ತಿಂಗಳುಗಳ ಹಿಂದೆ ಗಾಜಾದ ಸಾಕ್ಷಿದಾರರು ನ್ಯಾಯಾಧಿಕರಣದ ಮುಂದೆ ಸಾಕ್ಷ್ಯ ನುಡಿಯುತ್ತಿದ್ದಾಗ, ಹಿಂಭಾಗದಲ್ಲಿ  ನಿಜಕ್ಕೂ ಬಾಂಬ್‌ಗಳು ಸಿಡಿಯುತ್ತಿದ್ದವು. ಸ್ಪಷ್ಟವಾಗಿ ಇದು ನಾಗರಿಕರ ಮೇಲೆ ನಡೆಸಿದ ಬಾಂಬ್ ದಾಳಿಯ ಪ್ರಕರಣವಾಗಿತ್ತು.

ಆದ್ದರಿಂದ, ಅದು ಒಂದು ಯುದ್ಧಾಪರಾಧವಾಗಿತ್ತು. ಯುದ್ಧಾಪರಾಧಗಳ ಈ ಸರಣಿ, ನೆಲಸಿಗ ವಸಾಹತುಶಾಹಿಯನ್ನು ನೆನಪಿಸುವ ರೀತಿಯಲ್ಲಿ ಇಡೀ ಜನತೆಯನ್ನು ಅಧೀನಗೊಳಿಸುವುದು, ಅಲ್-ಅಕ್ಸಾ ಮಸೀದಿಯನ್ನು ಅಪವಿತ್ರಗೊಳಿಸುವ ಮೂಲಕ ಪರಾಕಾಷ್ಠೆ ತಲುಪಿದ ಈ ರೀತಿಯ ಕ್ರಮಗಳು, ಹಮಾಸ್ ತೊಡಗಿರುವ ರೀತಿಯ ಕ್ರಮವನ್ನು ಸೃಷ್ಟಿಸಿವೆ.

ಆಕ್ರಮಣಕ್ಕೆ ಪ್ರತಿರೋಧ ನ್ಯಾಯಸಮ್ಮತ – ಯೆಹೂದ್ಯರೂ ವಾರ್ಸಾದಲ್ಲಿ ದಂಗೆಯೆದ್ದಿದ್ದರು

ಇಸ್ರೇಲಿ ಆಕ್ರಮಣಕಾರರು ತಮ್ಮ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡಿರುವುದನ್ನು, ಸಶಸ್ತ್ರ ಹೋರಾಟದ ಮೂಲಕವೂ ಸೇರಿದಂತೆ, ಪ್ರತಿರೋಧಿಸುವ ಹಕ್ಕನ್ನು ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ, ಪ್ಯಾಲೆಸ್ಟೀನಿಯನ್ನರು ಹೊಂದಿದ್ದಾರೆ.

ಈ ಪ್ರತಿಪಾದನೆಯನ್ನು ವಿಶ್ವ ಸಂಸ್ಥೆಯ 1983ರ ಜನರಲ್ ಅಸೆಂಬ್ಲಿ ನಿರ್ಣಯದಲ್ಲಿ ಕಾಣಬಹುದಾಗಿದೆ. ಈ ನಿರ್ಣಯವು “ಸಶಸ್ತ್ರ ಹೋರಾಟವೂ ಸೇರಿದಂತೆ ಲಭ್ಯವಿರುವ ಎಲ್ಲಾ ವಿಧಾನಗಳ ಮೂಲಕ ಸ್ವಾತಂತ್ರ‍್ಯಕ್ಕಾಗಿ, ಪ್ರಾದೇಶಿಕ ಸಮಗ್ರತೆಗಾಗಿ, ರಾಷ್ಟ್ರೀಯ ಐಕ್ಯತೆಗಾಗಿ ಮತ್ತು ವಸಾಹತುಶಾಹಿ ಪ್ರಾಬಲ್ಯದಿಂದ, ವರ್ಣಭೇದದಿಂದ ಮತ್ತು ವಿದೇಶಿ ಆಕ್ರಮಣದಿಂದ ವಿಮೋಚನೆಗಾಗಿ ನಡೆಯುವ ಜನರ ಹೋರಾಟವು ನ್ಯಾಯಸಮ್ಮತವಾಗಿರುತ್ತದೆ” ಎಂಬುದನ್ನು ಪ್ರತಿಪಾದಿಸಿದೆ (ಈ ಹಿಂದೆ ಉಲ್ಲೇಖಿಸಿದ ಕೋನ್ ಅವರ ಲೇಖನ ಆಧರಿತ). ಹಮಾಸ್ ಒಂದು ವಸಾಹತುಶಾಹಿ ವಿರೋಧಿ ಹೋರಾಟದಲ್ಲಿ ತೊಡಗಿರುವ ಗುಂಪು ಎಂದು ಗುರುತಿಸುವುದರ ಬದಲಾಗಿ ಅದನ್ನು ಒಂದು ಶುದ್ಧ ಭಯೋತ್ಪಾದಕ ಸಂಘಟನೆ ಎಂದು ತಳ್ಳಿಹಾಕುವ ಕ್ರಮವು, ಪ್ಯಾಲೆಸ್ತೀನಿಯರನ್ನು ನಿರ್ಲಜ್ಜವಾಗಿ ಅಧೀನಗೊಳಿಸಿಕೊಂಡಿರುವ ಸನ್ನಿವೇಶವನ್ನು ಪೂರ್ಣವಾಗಿ ನಿರ್ಲಕ್ಷಿಸಿದಂತಾಗುತ್ತದೆ.

ಪ್ಯಾಲೆಸ್ತೀನಿಯರ ಭೂಮಿಯನ್ನು ಇಸ್ರೇಲಿ ವಸಾಹತುಗಾರರು ಆಕ್ರಮಿಸಿಕೊಂಡು ಅವರನ್ನು ದಾಸ್ಯಕ್ಕೆ ಗುರಿಪಡಿಸಿರುವ ಸನ್ನಿವೇಶವು ಹಮಾಸ್‌ನಂಥಹ ಸಂಘಟನೆಗಳ ಉದಯಕ್ಕೆ ಕಾರಣವಾಗುತ್ತದೆ.  ಇಂಥಹ ಸಂಘಟನೆಗಳು ನಡೆಸುವ ಸಶಸ್ತ್ರ ಹೋರಾಟವನ್ನು ಕಾನೂನುಬಾಹಿರ ಅಥವಾ ಅನೈತಿಕ ಎಂದು ತಳ್ಳಿಹಾಕಲಾಗದು – ಈ ಸಶಸ್ತ್ರ ಹೋರಾಟವು ಒಂದು ಆಯ್ಕೆಯೋ ಅಥವಾ ಅನಿವಾರ್ಯವೋ, ಅದು ವಿವೇಕವೋ ಅಥವಾ ಅವಿವೇಕವೋ, ಮುಂತಾದ ವ್ಯಾಖ್ಯಾನಗಳು ಮತ್ತು ಅಭಿಪ್ರಾಯಗಳು ಏನೇ ಇರಲಿ.

ಈ ಎಲ್ಲವನ್ನೂ, ಹಮಾಸ್ ಮಾಡುತ್ತಿರುವುದೆಲ್ಲವನ್ನೂ ಅನುಮೋದಿಸುವುಕ್ಕಾಗಿ ಹೇಳುತ್ತಿಲ್ಲ. ಆದರೆ, ಬಲಪ್ರಯೋಗದ ಮೂಲಕ ಯಾವುದೇ ಒಂದು ಇಡೀ ಜನ ಸಮುದಾಯವನ್ನು ತಮ್ಮ ಅಧೀನತೆಗೆ ಒಳಪಡಿಸಿಕೊಳ್ಳುವುದನ್ನು ‘ಸಾಮಾನ್ಯಗೊಳಿಸಬಹುದು’ ಮತ್ತು ಅವರ ಭೂಮಿಯನ್ನು ಆಕ್ರಮಿಸಿಕೊಂಡಿರುವ ಕ್ರಮವನ್ನು ದಕ್ಕಿಸಿಕೊಳ್ಳಬಹುದು ಎಂಬ ಇಸ್ರೇಲಿ ಆಡಳಿತದ ಮೂಲಭೂತ ಎಣಿಕೆಯನ್ನು ಮತ್ತು ಇಸ್ರೇಲಿನ ಈ ನಿಲುವನ್ನು ಸಮರ್ಥಿಸುವ ಅದರ  ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿ ಬೆಂಬಲಿಗರ ಧೋರಣೆ ಸಂಪೂರ್ಣವಾಗಿ ಅನೂರ್ಜಿತ ಎಂಬುದನ್ನು ಒತ್ತಿಹೇಳುವುದಕ್ಕಾಗಿ ಈ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಈ ಅಭಿಪ್ರಾಯವನ್ನು ಇಸ್ರೇಲಿನ ಅನೇಕರು ಹೊಂದಿದ್ದಾರೆ ಮತ್ತು ಅವರ ಸಂಖ್ಯೆ ಹೆಚ್ಚುತ್ತಲೂ ಇದೆ.

ಹಮಾಸ್ ದಾಳಿಗೆ ಇಸ್ರೇಲಿ ಆಡಳಿತದ ಪ್ರತಿಕ್ರಿಯೆಯು ಅದರ ಈ ಎಣಿಕೆಯನ್ನು, ಅಂದರೆ, ಕೆಲವು “ಗಲಭೆಕೋರ” “ಭಯೋತ್ಪಾದಕ” ಸಂಘಟನೆಗಳನ್ನು ಹೊಸಕಿಹಾಕುವ ಮೂಲಕ ಸಮಸ್ಯೆಯನ್ನು “ಪರಿಹರಿಸಬಹುದು” ಮತ್ತು ಇಸ್ರೇಲಿನಲ್ಲಿ ಶಾಂತಿಯನ್ನು ಸ್ಥಾಪಿಸಬಹುದು ಎಂಬ ಅನಿಸಿಕೆಯನ್ನು ಆಧರಿಸಿದೆ. ಕಳೆದ 75 ವರ್ಷಗಳಲ್ಲಿ ಅದನ್ನು ಸಾಧಿಸಲಾಗಿಲ್ಲ ಎಂಬದನ್ನು ಅದು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಇಸ್ರೇಲಿನ ಪ್ರಸ್ತುತ ನರಮೇಧದ ಪ್ರಯತ್ನವು ಭವಿಷ್ಯದಲ್ಲಿ ಹಮಾಸ್‌ನಿಂದ ಅಲ್ಲದಿದ್ದರೂ ಬೇರೆ ಯಾವುದೋ ಒಂದು ಪ್ಯಾಲೆಸ್ತೀನೀ ಸಂಘಟನೆಯಿಂದ ಇನ್ನೂ ಹೆಚ್ಚಿನ ಪ್ರತೀಕಾರವನ್ನು ತರುತ್ತದೆ. ಏರುತ್ತಾ ಹೋಗುವ ಹಿಂಸಾಚಾರದ ಈ ಸುರುಳಿಯು ಇನ್ನೂ ಹೆಚ್ಚಿನ ಪ್ರಾಣಹಾನಿಗೆ ಕಾರಣವಾಗುತ್ತದೆ.

ಇತಿಹಾಸದುದ್ದಕ್ಕೂ ಮತ್ತು ಅದರಲ್ಲೂ ವಿಶೇಷವಾಗಿ ಯುರೋಪಿನ ನಾಜೀವಾದದ ಅಡಿಯಲ್ಲಿ ಯಹೂದಿ ಜನರು ಅನುಭವಿಸಿದ ನರಕ-ಯಾತನೆಗಳ ಬಗ್ಗೆ ವಿಶ್ವದ ಪ್ರಜಾಪ್ರಭುತ್ವವಾದೀ ಅಭಿಪ್ರಾಯದ ಜನರು ಆಳವಾದ ಸಹಾನುಭೂತಿ ಹೊಂದಿದ್ದಾರೆ. ಆದರೆ, ಈ ಯಹೂದೀ ಯಾತನೆಯನ್ನು ಇಸ್ರೇಲಿ ಆಡಳಿತ ಮತ್ತು ಅದರ ಮೆಟ್ರೋಪಾಲಿಟನ್ ಬೆಂಬಲಿಗರು ಸಾಮ್ರಾಜ್ಯಶಾಹಿ ಹಿತಾಸಕ್ತಿಗಳಿಗಾಗಿ ಬಳಸುತ್ತಿದ್ದಾರೆ. ಆ ಮೂಲಕ ಯಹೂದಿಗಳು ಇತಿಹಾಸದುದ್ದಕ್ಕೂ ಅನುಭವಿಸಿದ ಯಾತನೆಯನ್ನು ಕ್ಷುಲ್ಲಕಗೊಳಿಸುತ್ತಿದ್ದಾರೆ. ಇಸ್ರೇಲಿಗಳು ಪ್ಯಾಲೆಸ್ತೀನೀ ಜನರಿಗೆ ಉಂಟುಮಾಡುತ್ತಿರುವ ಹಿಂಸೆ-ಯಾತನೆಗಳು, ಯಹೂದಿಗಳು
ಸ್ವತಃ ನಾಜಿಗಳ ಅಡಿಯಲ್ಲಿ ಅನುಭವಿಸಿದ ಯಾತನೆಗಳನ್ನು ಅನೇಕ ರೀತಿಯಲ್ಲಿ ನೆನಪಿಸುತ್ತವೆ: ಗಾಜಾದಲ್ಲಿ ನಡೆದ ದಂಗೆ ಮತ್ತು 1943ರಲ್ಲಿ ವಾರ್ಸಾದ ಕೊಂಪೆಯಲ್ಲಿ ನಾಜಿ ಆಕ್ರಮಣಕಾರರ ವಿರುದ್ಧ ನಡೆದ ಯಹೂದಿ ದಂಗೆ ಇವುಗಳ ನಡುವಿನ ಸಾಮ್ಯವನ್ನು ಕೆಲವರು ಗುರುತಿಸಿದ್ದಾರೆ.

ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಯ ಬೆಂಬಲ ಪಡೆದ ನೆತನ್ಯಾಹು ಅದೆಷ್ಟು ನಿಷ್ಕರುಣಿಯೊ ಅಷ್ಟೇ ಫ್ಯಾಸಿಸ್ಟ್ ದುಷ್ಟನೂ ಹೌದು ಮತ್ತು ಸಮೀಪ-ದೃಷ್ಟಿಯ ವ್ಯಕ್ತಿಯೂ ಹೌದು. ಯಹೂದಿ-ದ್ವೇಷವನ್ನು ಎದುರಿಸುವ ನೆಪದಲ್ಲಿ, ಫ್ರೆಂಚ್ ಸರ್ಕಾರವು ಪ್ಯಾಲೆಸ್ತೀನೀ ಜನರ ಹತ್ಯೆಯ ವಿರುದ್ಧ ನಡೆಸುವ ಪ್ರದರ್ಶನಗಳನ್ನು ನಿಷೇಧಿಸಿದೆ. ಈ ನಿಷೇಧವನ್ನು ಅನೇಕ ಮೆಟ್ರೋಪಾಲಿಟನ್ ದೇಶಗಳಲ್ಲಿ ನಕಲುಮಾಡಲಾಗಿದೆ.

ಇದನ್ನೂ ಓದಿ: ಯುದ್ಧವೆಂದರೆ ಸಾವಲ್ಲ !!!

ಇತ್ತೀಚೆಗೆ ಭಗ್ಗನೆ ಹೊತ್ತಿಕೊಂಡು ಉರಿಯುತ್ತಿರುವ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು, ಪ್ಯಾಲೆಸ್ತೀನಿಯರ ಸಂಘರ್ಷವನ್ನು ಮಾತುಕತೆಯ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳುವ ಒಂದು ಅಗತ್ಯವನ್ನು ಮುನ್ನೆಲೆಗೆ ತಂದಿದೆ. ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ಹೇರಿರುವ ದಿಗ್ಬಂಧನವನ್ನು ತೆಗೆದುಹಾಕುವ ಮೂಲಕ ಮತ್ತು ಗಾಜಾ ಪಟ್ಟಿಯ ಮೇಲೆ ಇಸ್ರೇಲಿ ಭೂಸೇನೆಯ ದಾಳಿಯನ್ನು ತಡೆಯುವ ಮೂಲಕ ಪ್ಯಾಲೆಸ್ತೀನಿಯರ ನರಮೇಧವನ್ನು ನಿಲ್ಲಿಸುವುದು ತಕ್ಷಣದ ಕಾರ್ಯವಾಗಿದೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯನ್ನು ಸಾಮ್ರಾಜ್ಯಶಾಹಿಯು ನಿಷ್ಕ್ರಿಯಗೊಳಿಸಿರುವುದರಿಂದ, ವಿಶ್ವ ಸಂಸ್ಥೆಯು ಅಸಹಾಯಕ ಪ್ರೇಕ್ಷಕನಾಗಿಬಿಟ್ಟಿದೆ. ವಿಶ್ವ ಸಾರ್ವಜನಿಕ ಅಭಿಪ್ರಾಯವನ್ನು ಜಾಗೃತಗೊಳಿಸುವುದು ಮಾತ್ರವೇ ಉಳಿದಿರುವ ಏಕೈಕ ಭರವಸೆ.

ವಿಡಿಯೋ ನೋಡಿ: ಪ್ಯಾಲಿಸ್ತೇನ್‌ ಪರ ಪ್ರತಿಭಟನೆ ಮಾಡುವುದು ಅಪರಾಧವೆ? Janashakthi Media

Donate Janashakthi Media

Leave a Reply

Your email address will not be published. Required fields are marked *