ಜಿಲೆಟಿನ್ ಕಡ್ಡಿಸ್ಪೋಟ : ಇಬ್ಬರು ಮಕ್ಕಳಿಗೆ ಗಂಭೀರ ಗಾಯ

ಹಾಸನ: ಜಿಲೆಟಿನ್ ಕಡ್ಡಿ ಸ್ಫೋಟಗೊಂಡು ಇಬ್ಬರು ಮಕ್ಕಳು ಗಾಯಗೊಂಡ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಚನ್ನೇನಹಳ್ಳಿಯಲ್ಲಿ ನಡೆದಿದೆ.

ವಾಟೆಹೊಳೆ ಜಲಾಶಯ ಸಮೀಪದಲ್ಲಿರುವ ಚನ್ನಹಳ್ಳಿ ಗ್ರಾಮದಲ್ಲಿ ಸೋಮವಾರ ಆಟವಾಡುವ ಸಂದರ್ಭದಲ್ಲಿ ಸಿಕ್ಕಿದ ಜಿಲೆಟಿನ್ ಕಡ್ಡಿಯನ್ನು ಕಲ್ಲಿನಿಂದ ಜಜ್ಜುವಾಗ ಸ್ಫೋಟಗೊಂಡು, ಇಬ್ಬರು ಮಕ್ಕಳು ಗಾಯ ಗೊಂಡಿದ್ದಾರೆ. ಗ್ರಾಮದ ರಘು ಅವರ ಪುತ್ರ ಅಭಿಷೇಕ್ (12) ಹಾಗೂ ರಂಗಸ್ವಾಮಿ ಅವರ ಪುತ್ರಿ ಕೃತಿಕಾ (8) ಗಾಯಗೊಂಡವರು. ಇಬ್ಬರ ಮುಖದಲ್ಲಿ ಗಾಯಗಳಾಗಿವೆ. ಸ್ಥಳೀಯರು ಇಬ್ಬರನ್ನೂ ಹಾಸನದ ಆಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಎತ್ತಿನಹೊಳೆ ಯೋಜನೆಯ ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು, ಎರಡು ವರ್ಷಗಳ ಹಿಂದೆ ಚನ್ನಹಳ್ಳಿ ಗ್ರಾಮದಲ್ಲಿ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿ ವಾಸವಾಗಿದ್ದರು. ಕಲ್ಲು ಸ್ಫೋಟಿಸಲು ಬಳಸುತ್ತಿದ್ದ ಜಿಲೆಟಿನ್‍ ಕಡ್ಡಿಗಳನ್ನು ಅವರು ಸ್ಥಳಾಂತರಗೊಳ್ಳುವ ಸಂದರ್ಭದಲ್ಲಿ ಬಿಟ್ಟು ಹೋಗಿರುವ ಸಾಧ್ಯತೆ ಇದೆ.

ಮಕ್ಕಳು ಆಟ ಆಡುವಾಗ ಅವು ಸಿಕ್ಕಿದ್ದು, ಈ ಅವಘಡ ಸಂಭವಿಸಿದೆ ಎಂದು ಆಲೂರು ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್‌ ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಡಿವೈಎಸ್ಪಿ ಗೋಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ : ಅಕ್ರಮ ಕಲ್ಲು ಗಣಿಗಾರಿಕೆಗೆ ಕಡಿವಾಣ ಯಾವಾಗ? ಕಲ್ಲು ಕ್ವಾರಿಯ ಕರಾಳತೆ ಹೇಗಿದೆ?

ಯಾಕಿಲ್ಲ ಕಡಿವಾಣ : ಈ ರೀತಿ ನಿರಲಕ್ಷ್ಯ ವಹಿಸುವ ಗುತ್ತಿಗೆದಾರ ಕಂಪನಿಗಳ ಮೇಲೆ ಸರಕಾರ ಕ್ರಮ ಜರುಗಿಸದಿರವುದ ದುರಂತವೇ ಸರಿ. ಹಾಸನ ಜಿಲ್ಲೆಯಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಜಿಲಿಟಿನ್‌ನ್ನು ಹೆಚ್ಚಾಗಿ ಕಲ್ಲುಕ್ವಾರಿ ಗುತ್ತಿಗೆ ದಾರರು ಬಳಸುತ್ತಾರೆ. ಸರಕಾರಕ್ಕೆ ಇದರಿಂದ ದೊಡ್ಡ ಪ್ರಮಾಣದಲ್ಲಿ ಆದಾಯವಿರುವ ಕಾರಣ ಕಡಿವಾಣ ಹಾಕಲು ಹಿಂದೇಟು ಹಾಕುತ್ತರಿವ ಅಂಶಗಳು ಬೆಳಕಿಗೆ ಬರುತ್ತಿವೆ. ರಾಜ್ಯದಲ್ಲಿ ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ 2802 ಕಲ್ಲು ಗಣಿಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ಸರ್ಕಾರಕ್ಕೆ 1500 ಕೋಟಿ ರೂ. ವಾರ್ಷಿಕ ಆದಾಯ ಬರುತ್ತಿದೆ. 1 ಟನ್ ಕಲ್ಲಿಗೆ 650 ರೂ.ನಿಂದ 700 ರೂ.ವರೆಗೆ ದರ ನಿಗದಿ ಮಾಡಲಾಗಿದೆ. ಕಿ.ಮೀ ಆಧಾರದ ಮೇಲೆ ಸಾಗಾಣಿಕ ವೆಚ್ಚವನ್ನು ತೆಗೆದುಕೊಳ್ಳಲಾಗುತ್ತಿದೆ. 60 ರೂ. ರಾಜಧನ, 30 ರೂ. ಜಿಲ್ಲಾ ನಿರ್ವಹಣೆ ನಿಧಿ ಮತ್ತು ಇನ್ನಿತರ ಸೇರಿ ಪ್ರತಿ ಟನ್ ಕಲ್ಲಿಗೆ ಒಟ್ಟು 107 ರೂ. ಶುಲ್ಕವನ್ನು ಸರ್ಕಾರಕ್ಕೆ ಕಟ್ಟಲಾ ಗುತ್ತಿದೆ. ವಾರ್ಷಿಕ ಸಾವಿರಾರು ಮಿಲಿಯನ್ ಮೆಟ್ರಿಕ್ ಟನ್ ಕಲ್ಲು ತೆಗೆಯಲಾಗುತ್ತಿದೆ.

ಕಲ್ಲು ಕ್ವಾರಿಯಲ್ಲಿ ಸ್ಫೋಟಕ್ಕಾಗಿ ಜಿಲೆಟಿನ್ ಸ್ಟಿಕ್​​ಗಳನ್ನು ಬಳಸಲಾಗುತ್ತದೆ. ಈ ಜಿಲೆಟಿನ್ ಬಳಕೆ ಮತ್ತು ಸಾಗಾಟಕ್ಕೆ ಪರವಾನಗಿ ಪಡೆಯುವುದು ಅಗತ್ಯವಾಗಿದೆ. ಖನಿಜ ಮತ್ತು ಗಣಿಗಾರಿಕೆ (ಸ್ಫೋಟಕ) ನಿಯಂತ್ರಣ ಕಾಯ್ದೆ 2012 ರಡಿ ನಿರ್ವಹಣಾ ಪರವಾನಗಿ ಪಡೆಯಬೇಕು. ಪರವಾನಗಿ ಒಂದು ವರ್ಷದ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ಪ್ರತಿ ವರ್ಷ ಪರವಾನಗಿ ನವೀಕರಣ‌ ಮಾಡಬೇಕಾಗುತ್ತದೆ. ಸ್ಫೋಟಕಗಳ ಖರೀದಿ, ಸಂಗ್ರಹ ಮತ್ತು ಸಾಗಣಿಕೆಗೆ ಪ್ರತ್ಯೇಕವಾಗಿ ಪರವಾನಗಿ ಪಡೆಯಬೇಕು. ಈ ಎಲ್ಲದಕ್ಕೂ ಪರವಾನಗಿ ಪಡೆದಿದ್ದರೆ ಮಾತ್ರ ಸ್ಫೋಟಕಗಳನ್ನು ನಿರ್ವಹಣೆ ಮಾಡಬಹುದಾಗಿದೆ. ಕಲ್ಲು ಗಣಿಗಾರಿಕೆಯ ಪರವಾನಗಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು, ಜಂಟಿ ನಿರ್ದೇಶಕರು, ಹಿರಿಯ ಭೂ ವಿಜ್ಞಾನಿಗಳು ಮಾತ್ರ ನೀಡಬಹುದಾಗಿದೆ. ಇವರ ಅನುಮತಿಯನ್ನು ಪಡೆಯದೆ ನಡೆಯುವ ಕಲ್ಲು ಕ್ವಾರಿಗಳು ಕಾನೂನು ಬಾಹಿರವಾಗಿರುತ್ತವೆ. ಸರಕಾರ ಇನ್ನದಾರೂ ಎಚ್ಚೆತ್ತುಕೊಂಡು ಇಂತಹ ಅಪಾಯಗಳನ್ನು ತಪ್ಪಿಸಲು ಮುಂದಾಗಬೇಕಿದೆ.

 

 

Donate Janashakthi Media

Leave a Reply

Your email address will not be published. Required fields are marked *