ದಯನೀಯ ಪರಿಸ್ಥಿತಿಗೆ ಇಳಿಯುತ್ತಿರುವ ಅರ್ಥವ್ಯವಸ್ಥೆಯೂ ಅಂಕಿ-ಅಂಶಗಳನ್ನು ಬಚ್ಚಿಡುತ್ತಿರುವ ಮೋದಿ ಸರಕಾರವೂ

ಪ್ರೊ. ಪ್ರಭಾತ್ ಪಟ್ನಾಯಕ್

ದಿನ ನಿತ್ಯವೂ ಒಂದೊಂದು ಹೊಸ ಹೊಸ ಸುದ್ದಿಯೊಂದಿಗೆ ಅರ್ಥವ್ಯವಸ್ಥೆಯ ದಯನೀಯ ಪರಿಸ್ಥಿತಿ ಪ್ರದರ್ಶನಗೊಳ್ಳುತ್ತಿರುವಾಗ ವಾಸ್ತವಾಂಶಗಳನ್ನು ನಿರಾಕರಿಸುವುದರಿಂದ ವಾಸ್ತವಿಕ ಸಮಸ್ಯೆಯಾದ ಬೇಡಿಕೆಯ ಕೊರತೆ ಎಂಬುದು ಬಗೆಹರಿಯದೆ ಉಳಿಯುತ್ತದೆ. ಪರಿಣಾಮವಾಗಿ, ಅರ್ಥವ್ಯವಸ್ಥೆಯ ದುಃಸ್ಥಿತಿಯೂ ಮುಂದುವರೆಯುತ್ತದೆ. ದೇಶವು ಒಂದು ಗಂಭೀರ ಆರ್ಥಿಕ ಬಿಕ್ಕಟ್ಟಿನ ಹಿಡಿತದಲ್ಲಿ ಸಿಲುಕಿರುವಾಗ, ಲಭ್ಯ ಮಾಹಿತಿಗಳ ಪ್ರತಿಯೊಂದು ತುಣುಕನ್ನೂ ಬಳಸಿ ಆ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದನ್ನು ಬಿಟ್ಟು, ದತ್ತಾಂಶಗಳನ್ನೇ ಮಂಗಮಾಯ ಮಾಡುತ್ತಿರುವುದು ಈ ಸರಕಾರ ಸಮಸ್ಯೆಯನ್ನು ಪರಿಹರಿಸುವಲ್ಲಿ ಏನೇನೂ ಗಂಭೀರತೆಯಿಂದ ವರ್ತಿಸುತ್ತಿಲ್ಲ ಎಂಬುದನ್ನೇ ತೋರಿಸುತ್ತದೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ(ಎನ್‌ಎಸ್‌ಒ) ಐದು ವರ್ಷಗಳಿಗೊಮ್ಮೆ ನಡೆಸುವ ಕುಟುಂಬಗಳ ಬಳಕೆಯ ವೆಚ್ಚಗಳ 2017-18ರ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡದಿರಲು ನಿರ್ಧರಿದೆ. ಏಕೆಂದರೆ, ನವೆಂಬರ್ 15ರಂದು ಬಿಸಿನೆಸ್ ಸ್ಟ್ಯಾಂಡರ್ಡ ಪತ್ರಿಕೆಯಲ್ಲಿ ಸೋರಿಕೆಯಾಗಿರುವ ಈ ಸಮೀಕ್ಷೆಯ ಅಂಕಿ-ಅಂಶಗಳ ಪ್ರಕಾರ, 2011-2012 ಮತ್ತು 2017-18ರ ಅವಧಿಯಲ್ಲಿ ಬಳಕೆಯ ತಲಾ ವೆಚ್ಚವು ಮಾಸಿಕ 1501 ರೂ ಗಳಿಂದ  1446 ರೂ ಗಳಿಗೆ ಇಳಿದಿದೆ (2009-10ರ ಬೆಲೆಗಳಲ್ಲಿ).

ಬಳಕೆಯ ತಲಾ ವೆಚ್ಚದ ವಾಸ್ತವಿಕ ಇಳಿಕೆಯು ಒಂದು ಬಲು ಗಂಭೀರ ವಿಷಯ. ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಇದೇ ಮೊದಲನೆಯ ಸಲ ಇಂತಹ ಇಳಿಕೆಯಾಗಿದೆ. ೧೯೭೨-೭೩ರಲ್ಲಿಯೂ ಸಹ ಬಳಕೆಯ ತಲಾ ವೆಚ್ಚದ ಇಳಿಕೆಯಾಗಿತ್ತು. ಆ ವರ್ಷದಲ್ಲಿ ಫಸಲಿನ ಇಳಿಕೆಯಾಗಿತ್ತು ಮತ್ತು ತೈಲ ಆಘಾತವಾಗಿತ್ತು (ಅಂದರೆ, ಮಧ್ಯ ಪ್ರಾಚ್ಯ ಯುದ್ಧದ ಕಾರಣದಿಂದಾಗಿ ತೈಲ ಉತ್ಪಾದಕ ದೇಶಗಳ ಒಕ್ಕೂಟವು ತೀವ್ರವಾಗಿ ತೈಲ ಬೆಲೆ ಏರಿಸಿತ್ತು). ಈ ಎರಡೂ  ಕಾರಣಗಳಿಂದಾಗಿ ಉಂಟಾಗಿದ್ದ ಹಣದುಬ್ಬರವು ಜನರ ಕೊಳ್ಳುವ ಶಕ್ತಿಯನ್ನು ಹಿಂಡಿತ್ತು. ಹಾಗಾಗಿ, ೧೯೭೨-೭೩ರಲ್ಲಿ ಬಳಕೆಯ ತಲಾ ವೆಚ್ಚ ಇಳಿದಿತ್ತು. ತೈಲ ಆಘಾತದಂತಹ ಬಾಹ್ಯ ಕಾರಣ ಅಥವಾ ಫಸಲಿನ ಇಳಿಕೆಯಂತಹ ಪ್ರಾಸಂಗಿಕ ಆಘಾತಗಳ ಬಗ್ಗೆ ಸರ್ಕಾರವನ್ನು ದೂಷಿಸಲಾಗದು; ಅಂತಹ ಪರಿಸ್ಥಿತಿಗಳನ್ನು ಅದು ನಿಭಾಯಿಸಿದ ರೀತಿಯ ಬಗ್ಗೆ ಆಕ್ಷೇಪಿಸಬಹದಾದರೂ.

೨೦೧೭-೧೮ರಲ್ಲಿ ಸರ್ಕಾರ ನಿಯಂತ್ರಿಸಲಾರದ ಇಂತಹ ಯಾವುದೇ ಆಕಸ್ಮಿಕ ಪ್ರಸಂಗಗಳೂ ಇರಲಿಲ್ಲ. ೨೦೧೭-೧೮ರ ಸಮೀಕ್ಷೆಯ ಅವಧಿಯಲ್ಲಿ ಅರ್ಥವ್ಯವಸ್ಥೆಯನ್ನು ಪ್ರಕ್ಷುಬ್ಧಗೊಳಿಸಿದ ಪ್ರಕರಣಗಳೆಂದರೆ, ನೋಟು ರದ್ದತಿ ಮತ್ತು ಜಿಎಸ್‌ಟಿಯ ಜಾರಿ. ಈ ಎರಡೂ ಅಧ್ವಾನದ ಕ್ರಮಗಳಿಗೆ ಮೋದಿ ಸರ್ಕಾರವೇ ನೇರ ಹೊಣೆ.

ಖಚಿತವಾಗಿ ಹೇಳುವುದಾದರೆ, ತಲಾ ಬಳಕೆಯ ವೆಚ್ಚದ ಇಳಿಕೆಗೆ ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಯ ಅಧ್ವಾನದ ಕ್ರಮಗಳಷ್ಟೇ ಸಮರ್ಪಕ ವಿವರಣೆಯಾಗುವುದಿಲ್ಲ. ೨೦೧೧-೨೦೧೨ ಮತ್ತು ೨೦೧೭-೧೮ ನಡುವೆ ಗ್ರಾಮೀಣ ಭಾರತದಲ್ಲಿ ತಲಾ ಬಳಕೆಯ ವೆಚ್ಚದ ಪ್ರಮಾಣವು ೮.೮% ಇಳಿದಿತ್ತು ಮತ್ತು ನಗರ ಭಾರತದಲ್ಲಿ ಕೇವಲ ೨% ಏರಿತ್ತು. ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಯ ಮುನ್ನವೇ ಗ್ರಾಮೀಣ ಭಾರತದಲ್ಲಿ ದಾರುಣ ಪರಿಸ್ಥಿತಿಯ ಸೂಚನೆಗಳಿದ್ದವು. ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಯ ಕ್ರಮಗಳು ಗಾಯದ ಮೇಲೆ ಬರೆ ಎಳೆದವು. ಅವು ಘಟಿಸದಿದ್ದರೆ ಅವರ ಬದುಕು ಸಹನೀಯವಾಗಿರುತ್ತಿತ್ತು ಎಂದೇನೂ ಅಲ್ಲ.

ಉತ್ಪಾದನೆಯ ಅಂಕಿ-ಅಂಶಗಳಿಗೂ ಮತ್ತು ಬಳಕೆದಾರರ ವೆಚ್ಚದ ಅಂಕಿ ಅಂಶಗಳಿಗೂ ತಾಳ ಮೇಳವಿಲ್ಲ ಎಂದು ಸರ್ಕಾರ ಹೇಳುತ್ತದೆ. ಇದು ತಪ್ಪು ಎಂಬುದಕ್ಕೆ ಉತ್ಪಾದನೆಯ ಅಂಕಿ-ಅಂಶಗಳೇ ಸಾಕ್ಷಿ ಒದಗಿಸುತ್ತವೆ. ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಕೊಡುಗೆಯ ಮೌಲ್ಯವನ್ನು ಬೇರ್ಪಡಿಸಿ, ಅದನ್ನು ಕೃಷಿ-ಅವಲಂಬಿತ ಜನಸಂಖ್ಯೆಯೊಂದಿಗೆ ಭಾಗಿಸಿ ನೋಡಿದಾಗ, ೨೦೧೩-೧೪ ಮತ್ತು ೨೦೧೭-೧೮ರ ನಡುವೆ ಕೃಷಿ-ಅವಲಂಬಿತ ಜನರ ತಲಾ ವರಮಾನವು ಸ್ವಲ್ಪ ಮಟ್ಟಿಗೆ ಇಳಿದಿರುವುದು ಕಾಣುತ್ತದೆ. ಆದರೆ, ಕೃಷಿ-ಅವಲಂಬಿತ ಜನಸಂಖ್ಯೆಯಲ್ಲಿ ಜಮೀನ್ದಾರರು ಮತ್ತು ಕೃಷಿಕ ಬಂಡವಾಳಗಾರರೂ ಇದ್ದಾರೆ ಮತ್ತು ಅವರ ಸಂಖ್ಯೆ ಸಣ್ಣದೇ ಇದ್ದರೂ ಸಹ ಉತ್ಪಾದನಾ ಕೊಡುಗೆಯ ಮೌಲ್ಯದಲ್ಲಿ ಅವರ ಪಾಲು ದೊಡ್ಡದೇ ಇರುತ್ತದೆ ಹಾಗೂ ಅವರ ವರಮಾನವು ಇಳಿಕೆಯಾಗಿರಲಿಲ್ಲ ಎಂಬುದನ್ನು ಸಲೀಸಾಗಿ ಊಹಿಸಿಕೊಳ್ಳಬಹುದು.

ಹಾಗಾಗಿ, ಗ್ರಾಮೀಣ ಭಾರತದ ದುಡಿಯುವ ಜನರ ವರಮಾನದ ಇಳಿಕೆಯ ಪ್ರಮಾಣವು ಸರಾಸರಿ ಅಂಕಿ ಅಂಶಗಳು ಸೂಚಿಸುವುದಕ್ಕಿಂತಲೂ ತೀವ್ರವಾಗಿರುತ್ತದೆ. ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿ ಪೂರ್ವದ ಅವಧಿಗೆ ಸಂಬಂಧಪಟ್ಟಂತೆಯೂ ಇದೇ ತೀರ್ಮಾನಕ್ಕೆ ಬರಬಹುದು.  ನವ ಉದಾರ ನೀತಿಗಳಿಂದಾಗಿ ಅದಾಗಲೇ ದಾರುಣ ಅವಸ್ಥೆಯಲ್ಲಿದ್ದ ಕೃಷಿಕ ಅರ್ಥವ್ಯವಸ್ಥೆಯ ತಲೆಯ ಮೇಲೆ ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಯಿಂದ ಉಂಟಾದ ಎಲ್ಲ ಸಂಕಷ್ಟಗಳ ಭಾರವನ್ನೂ ಹೊರಿಸಲಾಯಿತು. ಹಾಗಾಗಿ, ದುಡಿಯುವ ಜನತೆ ಅನುಭವಿಸುತ್ತಿರುವ ಎಲ್ಲ ಸಂಕಷ್ಟಗಳಿಗೂ ನವ ಉದಾರ ನೀತಿಗಳ ಜಾರಿಯ ಆರಂಭ ಕಾಲದಿಂದ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳೂ ಹೊಣೆಯಾಗುತ್ತವೆ. ಆದಾಗ್ಯೂ, ಮೋದಿ ಸರ್ಕಾರವು ಈ ನವ ಉದಾರ ನೀತಿಗಳ ಹಾದಿಯಲ್ಲಿ ಏಕ ಚಿತ್ತದಿಂದ ಮತ್ತು ನಿರ್ದಾಕ್ಷಣ್ಯವಾಗಿ ಸಾಗುತ್ತಿದೆ ಎಂಬುದು ಗಮನಾರ್ಹ.

೨೦೧೧-೧೨ ಮತ್ತು ೨೦೧೭-೧೮ರ ನಡುವಿನ ಅವಧಿಯಲ್ಲಿ ಗ್ರಾಮೀಣ ಜನತೆಯ ಆಹಾರದ ಮೇಲಿನ ವೆಚ್ಚವು ಶೇ.೧೦ರಷ್ಟು ಇಳಿದಿದೆ. ಇದು ಅವರ ಬಡತನದ ಅಗಾಧತೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ನವ ಉದಾರ ನೀತಿಗಳ ಅನುಸರಣೆಯ ಅವಧಿಯಲ್ಲಿ, ಭಾರತದಲ್ಲಿ ಬಡತನವನ್ನು ವ್ಯಾಖ್ಯಾನಿಸುವ ಕ್ಯೆಲೊರಿ ಮಾನದಂಡದ ಪ್ರಕಾರ, ಅಧಿಕೃತ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ, ನಗರ ಮತ್ತು ಗ್ರಾಮೀಣ ಈ ಎರಡೂ ಪ್ರದೇಶಗಳಲ್ಲೂ ಬಡತನ ಹೆಚ್ಚುತ್ತಿದೆ. ೧೯೯೩-೯೪ರ ಮತ್ತು ೨೦೧೧-೧೨ರ ಪಂಚವಾರ್ಷಿಕ ಸಮೀಕ್ಷೆಗಳ ಅಂಕಿ-ಅಂಶಗಳನ್ನು ಹೋಲಿಸಿದಾಗ ಬಡತನ ಹೆಚ್ಚುತ್ತಿರುವುದು ಸ್ಪಷ್ಟವಾಗುತ್ತದೆ. ಹಾಗಾಗಿ, ೨೦೧೭-೧೮ರ ನಂತರವಂತೂ ಬಡತನದ ಅಗಾಧತೆ ಖಂಡಿತವಾಗಿ ಹೆಚ್ಚಿರಲೇಬೇಕು.

ಮುಜುಗುರಕ್ಕೊಳಪಡಿಸುವ ಅಂಕಿ-ಅಂಶಗಳನ್ನು ಬಚ್ಚಿಡುವುದೇ ಮೋದಿ ಸರ್ಕಾರದ ಜಾಯಮಾನ. ಹಾಗಾಗಿ, ಬ್ಯುಸಿನೆಸ್ ಸ್ಟ್ಯಾಂಡರ್ಡ ಪತ್ರಿಕೆಯಲ್ಲಿ ಸೋರಿಕೆಯಾಗಿರುವ ಪ್ರಕಾರ, ೨೦೧೧-೨೦೧೨ ಮತ್ತು ೨೦೧೭-೧೮ರ ಅವಧಿಯಲ್ಲಿ  ಮಾಸಿಕ ೧೫೦೧ ರೂ ಗಳಿಂದ ೧೪೪೬ ರೂ ಗಳಿಗೆ ತಲಾ ಬಳಕೆ ವೆಚ್ಚದ ಇಳಿಕೆಯ ಮಾಹಿತಿಯನ್ನು ಅದುಮಿಡುವುದು ಆಶ್ಚರ್ಯವೂ ಅಲ್ಲ, ಹೊಸದೂ ಅಲ್ಲ. ಲೋಕಸಭಾ ಚುನಾವಣೆಯ ಸ್ವಲ್ಪ ಮೊದಲು, ಎನ್‌ಎಸ್‌ಒ ಸಮೀಕ್ಷಾ ವರದಿಯ ಪ್ರಕಾರ, ನಿರುದ್ಯೋಗವು ಕಳೆದ ೪೫ ವರ್ಷಗಳಲ್ಲೇ ಅತಿ ಹೆಚ್ಚಿನದು ಎಂಬ ಅಂಶವನ್ನೂ ಅದು ಮುಚ್ಚಿಟ್ಟಿತ್ತು.

ತಲಾ ಬಳಕೆ ವೆಚ್ಚದ ಇಳಿಕೆಯ ಅಂಕಿ-ಅಂಶಗಳನ್ನು ಬಚ್ಚಿಟ್ಟಿರುವುದಕ್ಕೆ ಮೋದಿ ಸರ್ಕಾರ ಕೊಟ್ಟಿರುವ ಸಮರ್ಥನೆ ಹಾಸ್ಯಾಸ್ಪದವಾಗಿದೆ: ಸಮೀಕ್ಷೆಯ ದತ್ತಾಂಶಗಳ ಗುಣ ಮಟ್ಟ ಕಳಪೆಯಾಗಿದೆಯಂತೆ. ಆದರೆ, ಈ ಅಂಕಿ-ಅಂಶಗಳ ಮೌಲ್ಯಮಾಪನವನ್ನು ಸಂಶೋಧಕರು ಮತ್ತು ಸಮಾಜಕ್ಕೆ ವಹಿಸುವುದರ ಬದಲು ಅಧಿಕಾರಿಗಳು ಮತ್ತು ಸರ್ಕಾರ ಹುಡುಕಿ ಆರಿಸಿದ ಪರಿಣಿತರು ಮಾಡಿದ್ದಾರೆ. ಸರ್ಕಾರವು ಅಂಕಿ-ಅಂಶಗಳನ್ನು ಸುಮ್ಮನೇ ಬಿಡುಗಡೆಮಾಡಿ, ಈ ಸಮೀಕ್ಷೆಯ ದತ್ತಾಂಶಗಳ ಗುಣ ಮಟ್ಟ ಕಳಪೆಯಾಗಿದೆ ಎಂದು ಹೇಳಬಹುದಿತ್ತು.

ಈ ಸಂದರ್ಭದಲ್ಲಿ ಒಂದು ವಾಸ್ತವಾಂಶವನ್ನು ಹೇಳುವುದಾದರೆ, ೨೦೦೯-೧೦ರ ಇದೇ ತಲಾ ಬಳಕೆ ವೆಚ್ಚದ ಸಮೀಕ್ಷೆಯ ಅಂಕಿ-ಅಂಶಗಳನ್ನು ೨೦೦೪-೦೫ರ ಸಮೀಕ್ಷೆಯ ಅಂಕಿ-ಅಂಶಗಳಿಗೆ ಹೋಲಿಸಿದಾಗ, ಆ ಐದು ವರ್ಷಗಳ ಅವಧಿಯಲ್ಲಿ ಬಡತನ ಗಮನಾರ್ಹವಾಗಿ ಹೆಚ್ಚುತ್ತಿರುವುದು ಕಂಡು ಬಂತು. ಆಗಿನ ಸರ್ಕಾರ, ಇನ್ನೂ ದೊಡ್ಡ ಪ್ರಮಾಣದ ಸ್ಯಾಂಪಲ್‌ಗಳಿಂದ ಕೂಡಿದ ಒಂದು ಹೊಸ ಸಮೀಕ್ಷೆಯನ್ನು ೨೦೧೧-೧೨ರಲ್ಲಿ ನಡೆಸುವಂತೆ ಆದೇಶಿಸಿತು. ಆಗ, ೨೦೦೯-೧೦ರ ಸಮೀಕ್ಷೆಯನ್ನು ಗಂಭಿರವಾಗಿ ಪರಿಗಣಿಸುವಂತಿಲ್ಲ, ಏಕೆಂದರೆ, ಆ ವರ್ಷದಲ್ಲಿ ಬರಗಾಲವಿತ್ತು ಎಂಬ ವಾದವನ್ನು ಮುಂದೊಡ್ಡಲಾಗಿತ್ತು. ಆದಾಗ್ಯೂ, ಅದು ಸಮೀಕ್ಷೆಯ ಅಂಕಿ-ಅಂಶಗಳ ಬಹಿರಂಗಪಡಿಸುವಿಕೆಯನ್ನು ತಡೆ ಹಿಡಿಯಲಿಲ್ಲ. ಮತ್ತು, ೨೦೧೧-೧೨ರ ಸಮೀಕ್ಷೆ ನೆಡೆದ ವರ್ಷವು ನಿಜಕ್ಕೂ ಒಂದು ಸುಭಿಕ್ಷದ ವರ್ಷವಾಗಿತ್ತು. ಹಾಗಾಗಿ, ಆ ವರ್ಷದ ತಲಾ ಬಳಕೆ ವೆಚ್ಚವು, ೨೦೦೯-೧೦ರ ಸಮೀಕ್ಷೆಯ ಅಂಕಿ-ಅಂಶಗಳೊಂದಿಗೆ ಹೋಲಿಸಿದಾಗ, ಹೆಚ್ಚಿಗೆ ಇರುವುದು ಕಂಡು ಬಂದರೂ ಅದು ನವ ಉದಾರ ನೀತಿಗಳ ಅವಧಿಯಲ್ಲಿ ಬಡತನ (ಬಡತನವನ್ನು ವ್ಯಾಖ್ಯಾನಿಸುವ ಕ್ಯೆಲೊರಿ ಮಾನದಂಡದ ಪ್ರಕಾರ) ಹೆಚ್ಚುತ್ತಿರುವ ಅಂಶವನ್ನು ಅಲ್ಲಗಳೆಯುವುದಿಲ್ಲ.

ಒಂದು ಅಧಿಕೃತ ಸಂಖ್ಯಾಶಾಸ್ತ್ರೀಯ ಸಮೀಕ್ಷೆಯು ಲೆಕ್ಕ ಹಾಕಿದ ಅಂಕಿ-ಅಂಶಗಳನ್ನು ಬಚ್ಚಿಟ್ಟಿರುವ ಮೊದಲನೆಯ ಪ್ರಕರಣ ಇದು. ಈ ಸಮೀಕ್ಷೆ ನಡೆಸಲು ಖಜಾನೆಯಿಂದ ಖರ್ಚಾದ ಹಣ ಹೊಳೆಯಲ್ಲಿ ಹುಣಿಸೇಹಣ್ಣು ಕಲಸಿದಂತೆ ಪೋಲಾಗಿದೆ. ಸರ್ಕಾರವೇ ನಿಯೋಜಿಸಿದ ಸಮೀಕ್ಷೆಯ ವರದಿಯನ್ನು ಬಚ್ಚಿಡುವ ಮೂಲಕ, ಒಳ್ಳೆಯ ದಿನಗಳು ಬರಲಿವೆ ಎಂಬುದಾಗಿ ಒಂದು ಮೋಸದ ಪ್ರಚಾರದ ಮೂಲಕ ಕುದುರಿಸಿದ ನಂಬಿಕೆ ಹಾಳಾಗಬಾರದು ಎಂಬ ಬಯಕೆಯಿಂದ, ರಾಷ್ಟ್ರದ ಅಮೂಲ್ಯ ಸಂಪನ್ಮೂಲವನ್ನು ಪೋಲು ಮಾಡಿರುವುದು ಅದರ ಸ್ವಪ್ರತಿಷ್ಠೆಯ ಗೀಳು ಊಹಿಸಲಾರದ ಮಟ್ಟದಲ್ಲಿದೆ ಎಂಬುದನ್ನು ತೋರಿಸುತ್ತದೆ.

ಇನ್ನೂ ಹೆಚ್ಚು ಚಿಂತೆಯನ್ನುಂಟು ಮಾಡುವ ಸಂಗತಿಯೆಂದರೆ, ಈ ಸ್ವಪ್ರತಿಷ್ಠೆಯ ಗೀಳು ಜವಹರಲಾಲ್ ನೆಹರೂ ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ ಖ್ಯಾತ ವಿಜ್ಞಾನಿ ಮತ್ತು ಸಂಖ್ಯಾಶಾಸ್ತ್ರಜ್ಞ ಪ್ರೊಫೆಸರ್ ಪಿ.ಸಿ. ಮಹಲನೋಬಿಸ್ ಅವರು ಎಚ್ಚರಿP ವಹಿಸಿ ಕಟ್ಟಿದ ದೇಶದ ಸಂಖ್ಯಾಶಾಸ್ತ್ರೀಯ ವ್ಯವಸ್ಥೆಯನ್ನು ಹಾಳುಗೆಡವುತ್ತದೆ ಎಂಬುದು. ಮಹಲನೋಬಿಸ್ ಅವರು ಆರಂಭಿಸಿದ ರಾಷ್ಟ್ರೀಯ ಸ್ಯಾಂಪಲ್ ಸರ್ವೆಯು, ಜಗತ್ತಿನಲ್ಲೇ ದೊಡ್ಡದು; ಮಾಹಿತಿಯ ಸರಿಸಾಟಿ ಇಲ್ಲದಂತಹ ಒಂದು ಮೂಲ; ದೇಶದ ಹೆಮ್ಮೆ ಮತ್ತು ಸಂಶೋಧಕರಿಗೆ ಅಪಾರ ಮೌಲ್ಯಯುತ ಆಕರವಾಗಿತ್ತು. ಅದನ್ನು ಗಬ್ಬೆಬ್ಬಿಸುವುದು, ಅಪಾರ ಮೌಲ್ಯಯುತ ಆಕರವನ್ನು ತನ್ನ ಸಾಧನೆಗಳ ಪೊಳ್ಳು ಹೊಗಳಿಕೆಗಳು ಬಯಲಾಗಬಾರದು ಎಂಬ ಉದ್ದೇಶದಿಂದ ಹಾಳುಗೆಡಹುವುದು ಸರ್ಕಾರದ ಕ್ರಿಮಿನಲ್ ನಿರ್ದಯತೆಯ ಉದಾಹರಣೆಯಾಗುತ್ತದೆ.

ತಲಾ ಬಳಕೆ ವೆಚ್ಚದ ಇಳಿಕೆಯ ಅಂಕಿ-ಅಂಶಗಳು ಬೇರೆ ಕೆಲವು ಅಧಿಕೃತ ಸೂಚಕಗಳೊಂದಿಗೆ ತಾಳೆಯಾಗುತ್ತಿಲ್ಲ ಎಂದು ಸರ್ಕಾರ ವಾದಿಸುತ್ತದೆ ಮತ್ತು ಈ ವಾದವನ್ನು ಆಧರಿಸಿ ದತ್ತಾಂಶಗಳ ಗುಣ ಮಟ್ಟ ಕಳಪೆಯಾಗಿದೆ ಎಂದು  ವಾದಿಸುತ್ತದೆ. ಆದರೆ, ಬೇರೆ ಬೇರೆ ಮೂಲಗಳಿಂದ ಆಯ್ದುಕೊಂಡ ಅಂಕಿ-ಅಂಶಗಳು ತಲಾ ಬಳಕೆ ವೆಚ್ಚದ ಇಳಿಕೆಯ ಅಂಕಿ-ಅಂಶಗಳೊಂದಿಗೆ ಹೋಲುತ್ತವೆ. ಅವು, ಮೇಲೆ ತಿಳಿಸಿದ ಕೃಷಿ ವರಮಾನದ ಅಂಕಿ-ಅಂಶಗಳೊಂದಿಗೆ ಹೋಲುತ್ತವೆ. ಅವು, ದಿನ ನಿತ್ಯವೂ ಒಂದೊಂದು ಹೊಸ ಹೊಸ ಸುದ್ದಿಯೊಂದಿಗೆ ಪ್ರದರ್ಶನಗೊಳ್ಳುತ್ತಿರುವ ದಯನೀಯ ಅರ್ಥವ್ಯವಸ್ಥೆಯ ಭಾರಿ ಇಳಿಕೆಯ ಅಂಕಿ-ಅಂಶಗಳೊಂದಿಗೂ ಹೋಲುತ್ತವೆ. ಐದು ರೂ ಬೆಲೆಯ ಬಿಸ್ಕತ್‌ನ ಸಣ್ಣ ಪೊಟ್ಟಣಗಳ ಮಾರಾಟವೂ ಇಳಿದಿರುವ ಅತಿ ಸರಳ ಅಂಶದೊಂದಿಗೂ ತಲಾ ಬಳಕೆ ವೆಚ್ಚದ ಇಳಿಕೆಯ ಅಂಕಿ-ಅಂಶಗಳು ಹೋಲುತ್ತವೆ.

ದೇಶವು ಒಂದು ಗಂಭೀರ ಆರ್ಥಿಕ ಬಿಕ್ಕಟ್ಟಿನ ಹಿಡಿತದಲ್ಲಿ ಸಿಲುಕಿರುವಾಗ, ಲಭ್ಯ ಮಾಹಿತಿಗಳ ಪ್ರತಿಯೊಂದು ತುಣುಕನ್ನೂ ಬಳಸಿ ಆ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳುವ ಬದಲು ಮೋದಿ ಸರಕಾರ ಬೆಲೆಬಾಳುವ ನಾಹಿತಿಯನ್ನೇ ಬಚ್ಚಿಡುತ್ತಿದೆ. ಇದು ಈ ಸರಕಾರ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಏನೇನೂ ಗಂಭೀರತೆಯಿಂದ ವರ್ತಿಸುತ್ತಿಲ್ಲ ಎಂಬುದನ್ನೇ ತೋರಿಸುತ್ತದೆ.

ಅನು: ಕೆ.ಎಂ.ನಾಗರಾಜ್

ಫೋಟೋ ಕೃಪೆ: ಪೊನ್ನಪ್ಪ ಮತ್ತು ನ್ಯೂಸ್‍ ಲಾಂಡ್ರಿ

Donate Janashakthi Media

Leave a Reply

Your email address will not be published. Required fields are marked *