ಪ್ರೊ.ಪ್ರಭಾತ್ ಪಟ್ನಾಯಕ್
ಅನು:ಕೆ.ಎಂ.ನಾಗರಾಜ್
ವರಮಾನಗಳ ಅಸಮತೆ ಮತ್ತು ಬಡತನದ ಹೆಚ್ಚಳ ಇವು ಜಿಡಿಪಿಯ ಬೆಳವಣಿಗೆ ದರದ ಮೇಲೆ ತಮ್ಮ ಪ್ರಬಾವವನ್ನು ನಿಜಕ್ಕೂ ಬೀರಿವೆ. ನವ-ಉದಾರವಾದವು ತಾನು ಸೃಷ್ಟಿಸಿದ ಮತ್ತು ವೇಗವಾಗಿ ಬೆಳೆಯುತ್ತಿರುವ ವರಮಾನಗಳ ಅಸಮತೆಯ ಕಾರಣದಿಂದಾಗಿ ಮುಂದೆ ದಾರಿ ಕಾಣದ ಒಂದು ಹಂತವನ್ನು ತಲುಪಿರುವ ಸಂದರ್ಭದಲ್ಲಿ ವಿಶ್ವ ಮಟ್ಟದಲ್ಲಿ ಇದು ನಿಜವಾಗಿದೆ ಮಾತ್ರವಲ್ಲ, ಭಾರತದ ಅರ್ಥವ್ಯವಸ್ಥೆಯ ಮಟ್ಟಿಗೂ ನಿಜ- ಇದು ಒಟ್ಟಾರೆ ಬೇಡಿಕೆಯ ಬೆಳವಣಿಗೆಯ ಉಸಿರುಗಟ್ಟಿಸಿದೆ . ಜಿಡಿಪಿಯು ಉನ್ನತ ದರದಲ್ಲಿ ಬೆಳೆಯುತ್ತಿದ್ದರೂ ಸಹ ಉದ್ಯೋಗ ಬೆಳವಣಿಗೆಯ ದರವು ಅತಿ ಕೆಳಗಿನ ಮಟ್ಟದಲ್ಲೇ ಉಳಿದಿದೆ. ನವ-ಉದಾರವಾದದ ಅಡಿಯಲ್ಲಿ ಸರ್ಕಾರವು ಹೊಂದಿರುವ ಜಿಡಿಪಿ ಬೆಳವಣಿಗೆ ದರದ ವ್ಯಾಮೋಹವು ಬಡತನದ ಹೆಚ್ಚಳವನ್ನು ತಡೆಯುವಲ್ಲಿ ಯಶಸ್ವಿಯಾಗುವುದಿಲ್ಲ ಅಥವಾ ಸ್ವತಃ ಜಿಡಿಪಿ ಬೆಳವಣಿಗೆ ದರ ಇಳಿಕೆಯನ್ನು ತಡೆಯುವಲ್ಲಿಯೂ ಯಶಸ್ವಿಯಾಗುವುದಿಲ್ಲ.
ಆಧುನಿಕ ಕಾಲದ ಅಗ್ರಗಣ್ಯ ಉದಾರವಾದಿ ಚಿಂತಕ ಜಾನ್ ಸ್ಟುವರ್ಟ್ ಮಿಲ್ (1806-1873), ಅರ್ಥಶಾಸ್ತ್ರ ಮತ್ತು ತತ್ತ್ವಶಾಸ್ತ್ರದ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ. ತಮ್ಮ ಪತ್ನಿ ಹ್ಯಾರಿಯೆಟ್ ಟೇಲರ್ ಮಿಲ್ ಪ್ರಭಾವದದಿಂದ ತಮ್ಮ ಕೊನೆಗಾಲದಲ್ಲಿ ಸಮಾಜವಾದದತ್ತ ಆಕರ್ಷಿತರಾಗಿದ್ದ ಮತ್ತು ಒಂದು ರೀತಿಯ ಸಹಕಾರಿ ಸಮಾಜವಾದದ ಬಗ್ಗೆ ಒಲವು ಹೊಂದಿದ್ದ ಮಿಲ್ ಅವರನ್ನು ಪ್ರಧಾನವಾಗಿ ಒಬ್ಬ ಸರ್ವ ಶ್ರೇಷ್ಠ ಉದಾರವಾದಿ ಚಿಂತಕ ಎಂದೇ ಪರಿಗಣಿಸಲಾಗಿದೆ. ಬಂಡವಾಳಶಾಹಿಯ ಆರ್ಥಿಕ ಬೆಳವಣಿಗೆಯ ದರ ಶೂನ್ಯ ಮಟ್ಟಕ್ಕೆ ಇಳಿಯಲಿದ್ದು, ಇನ್ನು ಮುಂದೆ ಬಂಡವಾಳ ಶೇಖರಣೆಗೆ ಅವಕಾಶವಿಲ್ಲದ ಕೇವಲ ಒಂದು ಪುನರುತ್ಪಾದನೆಯ ಸ್ಥಿತಿಯನ್ನು ಅಥವಾ ಒಂದು ಸ್ಥಾಯಿ ಸ್ಥಿತಿಯನ್ನು ತಲುಪುವ ಕಾಲ ಸನ್ನಿಹಿತವಾಗಲಿದೆ ಎಂಬ ಭಯ ಮಿಲ್ ಅವರ ಕಾಲದ ಅರ್ಥಶಾಸ್ತ್ರಜ್ಞರನ್ನು ಕಾಡುತ್ತಿತ್ತು. ಈ ತಳಮಳವನ್ನು ಸಮಚಿತ್ತದಿಂದ ನೋಡಿದ ಮಿಲ್, ಬರಿಯ ಉತ್ಪಾದನೆಯನ್ನು ಹೆಚ್ಚಿಸಲು ಅನಗತ್ಯವಾಗಿ ಹೆಚ್ಚಿನ ಮಹತ್ವವನ್ನು ಕೊಡುವುದಕ್ಕಿಂತ “ವಿತರಣೆಯನ್ನು ಉತ್ತಮಗೊಳಿಸಲು ಮತ್ತು ಕಾರ್ಮಿಕರಿಗೆ ಕೊಡುವ ಸಂಭಾವನೆಯನ್ನು ಹೆಚ್ಚಿಸಲು ಗಮನ ಕೊಡುವುದೇ ನಿಜವಾಗಿಯು ಅಪೇಕ್ಷಣೀಯ” ಎಂದು ಭಾವಿಸಿದ್ದರು.
ಹತ್ತೊಂಬತ್ತನೇ ಶತಮಾನದ ಈ ಉದಾರವಾದಿ ಚಿಂತಕ ಹೊಂದಿದ್ದ ಅಭಿಪ್ರಾಯವನ್ನು ಅಂತಾರಾಷ್ಟ್ರೀಯ ಆರ್ಥಿಕ ಸಂಸ್ಥೆಗಳು ಮತ್ತು ಭಾರತದ ಸರ್ಕಾರವೂ ಸೇರಿದಂತೆ ರಾಷ್ಟ್ರೀಯ ಸರ್ಕಾರಗಳ ನಿಲುವುಗಳೊಂದಿಗೆ ಹೋಲಿಸಿ ನೋಡೋಣ. ಜಿಡಿಪಿಯ ಬೆಳವಣಿಗೆಯೊಂದಿಗೇ ಬಡತನವೂ ಅಗಾಧವಾಗಿ ಬೆಳೆಯುತ್ತಿರುವ ಸನ್ನಿವೇಶದಲ್ಲಿ, ಭಾರತ ಸರ್ಕಾರವೂ ಸೇರಿದಂತೆ ಈ ಅಂತಾರಾಷ್ಟ್ರೀಯ ಆರ್ಥಿಕ ಸಂಸ್ಥೆಗಳು ಜಿಡಿಪಿ ಬೆಳವಣಿಗೆಯನ್ನು ಮಾತ್ರವೇ ಒತ್ತಿಹೇಳುತ್ತವೆ. ವಿತರಣೆಯನ್ನು ಉತ್ತಮಗೊಳಿಸುವ ಮತ್ತು ಕಾರ್ಮಿಕರಿಗೆ ಕೊಡುವ ಸಂಭಾವನೆಯನ್ನು ಹೆಚ್ಚಿಸುವುದು ಅಪೇಕ್ಷಣೀಯವಾಗಿದ್ದರೂ ಸಹ, ಜಿಡಿಪಿಯ ಬೆಳವಣಿಗೆಗೆ ಮಾತ್ರವೇ ಮಹತ್ವ ನೀಡುತ್ತವೆ.
ನಮ್ಮಂತಹ ದೇಶಗಳಲ್ಲಿ ನಿರುದ್ಯೋಗವನ್ನು ಮತ್ತು ಬಡತನವನ್ನು ನಿವಾರಿಸಲು ಜಿಡಿಪಿಯು ಉನ್ನತ ದರದಲ್ಲಿ ಬೆಳೆಯುವುದು ಅಗತ್ಯವೆಂದು ಪರಿಗಣಿಸಲ್ಪಟ್ಟ ಕಾಲವೊಂದಿತ್ತು. ಆಗ, “ಉತ್ಪಾದನೆಯ ಹೆಚ್ಚಳ” ಮತ್ತು “ಕಾರ್ಮಿಕರ ಸಂಬಳ ಹೆಚ್ಚಳ” ಇವುಗಳ ನಡುವೆ ಇರುವ ತಿಕ್ಕಾಟವನ್ನು ಗ್ರಹಿಸುವ ಮಾತಿರಲಿ, ಅವುಗಳನ್ನು ವಿಂಗಡಿಸಿ ನೋಡುವ ಪರಿಸ್ಥಿತಿಯೇ ಇರಲಿಲ್ಲ. ಜಿಡಿಪಿಯ ಉನ್ನತ ಬೆಳವಣಿಗೆಯು, ಉದ್ಯೋಗ ಬೆಳವಣಿಗೆಯ ದರವನ್ನು ಹೆಚ್ಚಿಸುತ್ತದೆ, ಇದು ಶ್ರಮ ಮೀಸಲು ಪಡೆಯ ಗಾತ್ರವನ್ನುಸಾಪೇಕ್ಷವಾಗಿ ಕಡಿಮೆ ಮಾಡುತ್ತದೆ, ಶ್ರಮ ಮಾರುಕಟ್ಟೆಯಲ್ಲಿ ಬಿಗಿತವನ್ನು ಸೃಷ್ಟಿಸುತ್ತದೆ ಮತ್ತು ನಿಜ ವೇತನದ ದರವನ್ನು ಹೆಚ್ಚಿಸುತ್ತದೆ ಎಂದು ವಾದಿಸಲಾಯಿತು. ಅಂತಹ ಒಂದು ಪರಿಸ್ಥಿತಿಯಲ್ಲಿ ನಿಜ ಕೂಲಿಯ ದರವು ಶ್ರಮದ ಉತ್ಪಾದಕತೆಯಷ್ಟು ವೇಗವಾಗಿ ಏರದಿದ್ದರೂ ಸಹ, ಶ್ರಮದ ಉತ್ಪಾದಕತೆಯ ಹೋಲಿಕೆ ಇಲ್ಲದಿದ್ದರೆ ಆಗುವುದಕ್ಕಿಂತ ಹೆಚ್ಚು ವೇಗವಾಗಿ ಆಗುತ್ತದೆ; ಹೇಗೆಯೇ ಆದರೂ ಜಿಡಿಪಿಯ ವೇಗದ ಬೆಳವಣಿಗೆಯು ನಿರುದ್ಯೋಗವನ್ನು ಇಳಿಕೆ ಮಾಡುವ ಮತ್ತು ಕೆಲಸಗಾರರ ಪರಿಸ್ಥಿತಿಯನ್ನು ನಿರುದ್ಯೋಗ ಇಳಿಕೆಯಾಗದಿದ್ದರೆ ಏನಾಗುತ್ತಿತ್ತೊ ಅದಕ್ಕೆ ಹೋಲಿಸಿದರೆ ನಿಜ ವೇತನವನ್ನು ಹೆಚ್ಚಿಸುವ ಈ ಎರಡೂ ಅಂಶಗಳ ಮೂಲಕ ಉತ್ತಮಗೊಳಿಸುತ್ತದೆ ಎಂದು ವಾದಿಸಲಾಯಿತು.
ಜಿಡಿಪಿ ಬೆಳವಣಿಗೆ ಮತ್ತು ಉದ್ಯೋಗದ ಬೆಳವಣಿಗೆ
ಈ ವಾದದಲ್ಲಿ ಹುರುಳಿಲ್ಲ. ಒಂದು ನಿರ್ದಿಷ್ಟ ದರದಲ್ಲಿ ಬೆಳೆಯುವ ಜಿಡಿಪಿಯೊಂದಿಗೆ ಉಂಟಾಗುವ ಉದ್ಯೋಗದ ಬೆಳವಣಿಗೆಯು ಒಂದು ಅರ್ಥವ್ಯವಸ್ಥೆಯು ಹೊಂದಿರುವ ಬೆಳವಣಿಗೆ-ಪ್ರಕ್ರಿಯೆಯ ಸ್ವರೂಪ ಮತ್ತು ಅದು ಯಾವ ಯಾವ ಸರಕುಗಳನ್ನು ಮತ್ತು ಯಾವ ಯಾವ ವಲಯಗಳನ್ನು ಒಳಗೊಳ್ಳುತ್ತದೆ ಅಥವಾ ಯಾವ ವರ್ಗದ ಬೇಡಿಕೆಗಳಿಗೆ ಸ್ಪಂದಿಸುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ. ಜಿಡಿಪಿಯ ಬೆಳವಣಿಗೆಯಲ್ಲಿ ಕೃಷಿ ಮತ್ತು ಕಿರು ಉತ್ಪಾದನಾ ವಲಯಗಳ ಕೊಡುಗೆಯು ಒಂದು ವೇಳೆ ದೊಡ್ಡ ಪ್ರಮಾಣದಲ್ಲಿದ್ದರೆ ಅದರ ಪರಿಣಾಮಗಳು ಉದ್ಯೋಗ ಸೃಷ್ಟಿಯಲ್ಲಿ ಸಾಕಷ್ಟು ಗಣನೀಯವಾಗಿರುತ್ತವೆ. ಆದರೆ ಒಂದು ನವ-ಉದಾರವಾದಿ ಅರ್ಥವ್ಯವಸ್ಥೆಯ ಕೃಷಿ ಮತ್ತು ಕಿರು ಉತ್ಪಾದನಾ ವಲಯಗಳು ಅನೇಕ ವರ್ಷಗಳಿಂದಲೂ ಬಿಕ್ಕಟ್ಟಿನಿಂದ ಪೀಡಿತವಾಗಿರುವ ಸನ್ನಿವೇಶದಲ್ಲಿ, ಬೆಳವಣಿಗೆಯು ವಿಶಿಷ್ಟವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯ ಬೇಡಿಕೆಯನ್ನು ಪೂರೈಸುವ ವಲಯದಲ್ಲಿರುತ್ತದೆ ಮತ್ತು ದೇಶದಲ್ಲಿ ಆರ್ಥಿಕ ಮಿಗುತಾಯದ ಮೇಲೆ ಜೀವಿಸುವವರ ಬಳಕೆ ಬೇಡಿಕೆಗಳನ್ನು ಪೂರೈಸುವ ವಲಯದಲ್ಲಿರುತ್ತದೆ. ಆದರೆ ನಿಖರವಾಗಿ ಈ ವಲಯಗಳಲ್ಲೇ ಉದ್ಯೋಗಗಳ ಪ್ರಮಾಣ ಅತಿ ಕಡಿಮೆ, ಮಾತ್ರವಲ್ಲ, ಇಲ್ಲಿ ನಿರಂತರವಾಗಿ ಸಾಗುವ ಉತ್ಪಾದನಾ ಪ್ರಕ್ರಿಯೆಯ ಬದಲಾವಣೆ ಮತ್ತು ಉತ್ಪನ್ನ-ನಾವೀನ್ಯತೆಗಳ ಮೂಲಕ ಉದ್ಯೋಗಗಳು ನಿರಂತರವಾಗಿ ಕಡಿಮೆಯಾಗುತ್ತಲೇ ಹೋಗುತ್ತವೆ. ಹಾಗಾಗಿ, ಒಂದು ನವ-ಉದಾರವಾದಿ ಆಳ್ವಿಕೆಯಲ್ಲಿ ಜಿಡಿಪಿಯು ಉನ್ನತ ದರದಲ್ಲಿ ಬೆಳೆದರೂ ಸಹ, ಉದ್ಯೋಗ ಬೆಳವಣಿಗೆಯು ಅತಿ ಕಡಿಮೆ ಇರುತ್ತದೆ; ಅಥವಾ, ಉತ್ಪತ್ತಿಗೆ ಸಂಬಂಧಿಸಿದಂತೆ ಉದ್ಯೋಗದ ಸ್ಥಿತಿಸ್ಥಾಪಕತ್ವ ಎಂದು ಹೇಳಲಾಗುವ ಸ್ಥಿತಿಯಲ್ಲಿರುತ್ತದೆ, ಅಂದರೆ, ಉತ್ಪತ್ತಿಯ ಶೇ. ಒಂದರಷ್ಟು ಬದಲಾವಣೆಯೊಂದಿಗೆ ಉದ್ಯೋಗದ ಶೇಕಡಾವಾರು ಬದಲಾವಣೆಯು ಬಹಳ ಕಡಿಮೆಯಿರುತ್ತದೆ, ಶೂನ್ಯಕ್ಕೆ ಹತ್ತಿರದಲ್ಲಿರುತ್ತದೆ (ಇದನ್ನು ಸಾಮಾನ್ಯವಾಗಿ “ಉದ್ಯೋಗ ರಹಿತ ಬೆಳವಣಿಗೆ” ಎಂದು ಕರೆಯಲಾಗುತ್ತದೆ). ಅಷ್ಟೇ ಅಲ್ಲದೆ, ಉತ್ಪತ್ತಿಯ ಬೆಳವಣಿಗೆ ದರವನ್ನು ಹೆಚ್ಚಿಸಿದಂತೆ, ಕಂಡುಬರುವ ಉದ್ಯೋಗದ ಸ್ಥಿತಿಸ್ಥಾಪಕತ್ವವು ಕ್ಷೀಣಿಸುತ್ತಾ ಹೋಗುತ್ತದೆ. ಹಾಗಾಗಿ, ಜಿಡಿಪಿಯ ಉನ್ನತ ಬೆಳವಣಿಗೆಯು ಹೆಚ್ಚೆಂದರೆ, ಉದ್ಯೋಗದ ಬೆಳವಣಿಗೆಯ ದರದಲ್ಲಿ ಅತ್ಯಲ್ಪ ಹೆಚ್ಚಳವನ್ನು ತರುತ್ತದೆ.
ಜನಸಂಖ್ಯೆಯು ಹೆಚ್ಚುತ್ತಾ ಹೋಗುವ ಸನ್ನಿವೇಶದಲ್ಲಿ ಶ್ರಮಜೀವಿಗಳ ಸಂಖ್ಯೆಯೂ ಹೆಚ್ಚುತ್ತದೆ. ಆದರೆ, ನವ-ಉದಾರವಾದದ ಅಡಿಯಲ್ಲಿ ಜಿಡಿಪಿಯು ಉನ್ನತ ದರದಲ್ಲಿ ಬೆಳೆಯುತ್ತಿದ್ದರೂ ಸಹ ಉದ್ಯೋಗ ಬೆಳವಣಿಗೆಯ ದರವು ಅತಿ ಕೆಳಗಿನ ಮಟ್ಟದಲ್ಲೇ ಉಳಿದಿದೆ. ಅದು ಶ್ರಮಿಕ-ಪಡೆಯ ಬೆಳವಣಿಗೆಯ ದರಕ್ಕಿಂತಲೂ ಎಷ್ಟು ಕೆಳಗಿದೆ ಎಂದರೆ, ಶ್ರಮ ಮೀಸಲು ಪಡೆಯ ಸಾಪೇಕ್ಷ ಗಾತ್ರವು ಇಳಿಕೆಯಾಗುವುದೇ ಇಲ್ಲ; ಬದಲಿಗೆ ಉಬ್ಬುತ್ತಲೇ ಹೋಗುತ್ತದೆ. ಅಂತಹ ಒಂದು ಪರಿಸ್ಥಿತಿಯಲ್ಲಿ ಕೂಲಿಯ ದರವು ಏನೇನೂ ಅಲ್ಲ ಅನ್ನುವಷ್ಟು ನಿಕೃಷ್ಟವಾಗಿ ಹೆಚ್ಚುತ್ತದೆ ಮತ್ತು ಉದ್ಯೋಗ ಲಭಿಸುವ ಅವಕಾಶವು ತಲಾ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಈ ವಿದ್ಯಮಾನ ದುಡಿಯುವ ಜನರಿಗೆ ದುರವಸ್ಥೆಯನ್ನು ಉಂಟುಮಾಡುವಲ್ಲಿ ಪರಿಣಮಿಸುತ್ತದೆ.
ಭಾರತದ ಅರ್ಥವ್ಯವಸ್ಥೆಯಲ್ಲಿ ನಿಖರವಾಗಿ ಈ ವಿದ್ಯಮಾನವೇ ಜರುಗುತ್ತಿದೆ. ನವ-ಉದಾರವಾದಿ ಯುಗದಲ್ಲಿ ಮತ್ತು ಅದರಲ್ಲೂ ವಿಶೇಷವಾಗಿ ಮೋದಿ ಯುಗದಲ್ಲಿ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಗಳಲ್ಲಿ ಭಾರತವೂ ಒಂದು ಎಂದು ಹೇಳಲಾದ ಸಂದರ್ಭದಲ್ಲಿ, ಭಾರತದಲ್ಲಿ ಸಂಪೂರ್ಣ ಬಡತನದಲ್ಲಿ ಬದುಕುತ್ತಿರುವ ಜನರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಹಾಗಾಗಿ, ಎರಡು ಪ್ರಶ್ನೆಗಳು ಈ ಸಂದರ್ಭದಲ್ಲಿ ಉದ್ಭವಿಸುತ್ತವೆ: ಮೊದಲನೆಯದು, ಒಬ್ಬ ಉದಾರವಾದಿ ಚಿಂತಕನಾಗಿದ್ದ ಜೆಎಸ್ ಮಿಲ್ ಕೂಡ ಯಾವುದನ್ನು ಒಂದು “ನಿಜವಾಗಿಯೂ ಅಪೇಕ್ಷಣೀಯ” ಎಂದು ಪರಿಗಣಿಸಿದ್ದರೋ ಅದರತ್ತ ಗಮನ ಹರಿಸುವ ಬದಲು ಸರ್ಕಾರಗಳು ಹಾಡಿದ ಅದೇ ಜಿಡಿಪಿ ಬೆಳವಣಿಗೆಯ ದರದ ಹಾಡನ್ನೇ ಏಕೆ ಹಾಡುತ್ತವೆ? ಎರಡನೆಯದು, ವರಮಾನದ ಅಸಮತೆ ಮಾತ್ರವಲ್ಲದೆ ಹೆಚ್ಚುತ್ತಿರುವ ಬಡತನವು, ಅಂದರೆ, ಸರಕು ಸೇವೆಗಳ ಅನುಭೋಗ ಕುಸಿದ ಕಾರಣದಿಂದಾಗಿ ಪರಿಣಮಿಸಿದ ಬೇಡಿಕೆಯ ಕುಸಿತ ಮತ್ತು ಈ ವಿದ್ಯಮಾನವು ಬೆಳವಣಿಯನ್ನು ಉಸಿರುಗಟ್ಟಿಸುತ್ತಿರುವ ಸಂರ್ಭದಲ್ಲಿ, ಜಿಡಿಪಿ ಬೆಳವಣಿಗೆಯ ಉನ್ನತ ದರಗಳನ್ನು ನಾವು ವಿವರಿಸುವುದಾದರೂ ಹೇಗೆ?
ನವ-ಉದಾರವಾದಿ ಬಂಡವಾಳಶಾಹಿಯ ನಿಜ ಸಿದ್ಧಾಂತ
ಮೊದಲನೆಯ ಪ್ರಶ್ನೆಗೆ ಕೊಡಬಹದಾದ ಒಂದು ಸರಳ ಉತ್ತರವೆಂದರೆ, ನವ-ಉದಾರವಾದವು ಜೆ.ಎಸ್.ಮಿಲ್ “ನಿಜವಾಗಿಯು ಅಪೇಕ್ಷಣೀಯ” ‘ಎಂದಿರುವುದನ್ನು ಒಪ್ಪುವುದಿಲ್ಲ ಎಂಬುದು. ದೇಶ ದೇಶಗಳ ಗಡಿಗಳಾದ್ಯಂತ ಹಣಕಾಸು ಬಂಡವಾಳವೂ ಸೇರಿದಂತೆ ಬಂಡವಾಳ ಮತ್ತು ಸರಕು ಮತ್ತು ಸೇವೆಗಳ ಅನಿಯಂತ್ರಿತ ಚಲನೆಯೇ ನವ-ಉದಾರವಾದದ ಮುಖ್ಯ ಲಕ್ಷಣ. ಮತ್ತು, ಪ್ರಭುತ್ವದ ಪಾತ್ರ “ಕಾರ್ಮಿಕರಿಗೆ ಹೆಚ್ಚು ಸಂಭಾವನೆ” ನೀಡುವ ಬದಲು ಬಂಡವಾಳದ ಹಿತಾಸಕ್ತಿಗಳನ್ನು ಕಾಪಾಡುವ ಪೋಷಕ ಪಾತ್ರದ ಮಟ್ಟಕ್ಕೆ ಇಳಿಸಲ್ಪಟ್ಟಿದೆ. ಮಿಲ್ ಸೂಚಿಸಿದ ರೀತಿಯ ಅಪೇಕ್ಷೆಯನ್ನು ಹೊಂದುವ ಕ್ರಮವು ಕಾರ್ಮಿಕರ ಪರವಾಗಿ ಪ್ರಭುತ್ವವು ಮಧ್ಯಪ್ರವೇಶಿಸುವುದರ ಸಮರ್ಥನೆಯಾಗುವುದರಿಂದ ನವ-ಉದಾರವಾದವು ಅದನ್ನು ಸಹಿಸದು. ಆದ್ದರಿಂದ, ಅದು, ಬಂಡವಾಳಕ್ಕೆ ಸ್ವಾತಂತ್ರ‍್ಯವನ್ನು ನೀಡುವ ಮೂಲಕ (ಅಂದರೆ, ಬಂಡವಾಳದ ಹಿತಾಸಕ್ತಿಗಳಿಗೆ ಪ್ರಭುತ್ವವು ಉತ್ತೇಜನ ನೀಡುವ ಮೂಲಕ) ಬೆಳವಣಿಗೆ ಸಂಭವಿಸುತ್ತದೆ ಎಂಬುದಾಗಿ ಮತ್ತು ಜಿಡಿಪಿಯ ಉನ್ನತ ಬೆಳವಣಿಗೆಯನ್ನು ಸಾಧಿಸುವ ಮೂಲಕ ಎಲ್ಲ ಅಪೇಕ್ಷೆಗಳೂ ಅಪ್ರಯತ್ನವಾಗಿ ಕೈಗೂಡುತ್ತವೆ ಎಂಬುದಾಗಿಯೂ ನಟನೆ ಮಾಡಬೇಕಾಗುತ್ತದೆ. ಇದು ನಿಜವೇ ಎಂಬುದು ಮುಖ್ಯ ವಿಷಯವಲ್ಲ (ಅಲ್ಲ ಎಂಬುದು ಸ್ಪಷ್ಟವಾಗಿದೆ); ಬದಲಿಗೆ, ಇದುವೇ ನವ-ಉದಾರವಾದಿ ಬಂಡವಾಳಶಾಹಿಯ ನಿಜ ಸಿದ್ಧಾಂತ. ಮತ್ತು, ಭಾರತದಂತಹ ಸರ್ಕಾರಗಳು ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್‌ನಂತಹ ಸಂಸ್ಥೆಗಳು ಪ್ರತಿಪಾದಿಸುವುದು ಈ ಸಿದ್ಧಾಂತವನ್ನೇ.
ಎರಡನೆಯ ಪ್ರಶ್ನೆಗೆ ಉತ್ತರವೆಂದರೆ, ವರಮಾನಗಳ ಅಸಮತೆ ಮತ್ತು ಬಡತನದ ಹೆಚ್ಚಳ ಇವು ಜಿಡಿಪಿಯ ಬೆಳವಣಿಗೆ ದರದ ಮೇಲೆ ತಮ್ಮ ಪ್ರಬಾವವನ್ನು ನಿಜಕ್ಕೂ ಬೀರಿವೆ. ನವ-ಉದಾರವಾದವು ತಾನು ಸೃಷ್ಟಿಸಿದ ಮತ್ತು ವೇಗವಾಗಿ ಬೆಳೆಯುತ್ತಿರುವ ವರಮಾನಗಳ ಅಸಮತೆಯ ಕಾರಣದಿಂದಾಗಿ ಮುಂದೆ ದಾರಿ ಕಾಣದ ಒಂದು ಹಂತವನ್ನು ತಲುಪಿರುವ ಸಂದರ್ಭದಲ್ಲಿ ವಿಶ್ವ ಮಟ್ಟದಲ್ಲಿ ಇದು ನಿಜವಾಗಿದೆ ಮಾತ್ರವಲ್ಲ, ಭಾರತದ ಅರ್ಥವ್ಯವಸ್ಥೆಯ ಮಟ್ಟಿಗೂ ನಿಜ- ಇದು ಒಟ್ಟಾರೆ ಬೇಡಿಕೆಯ ಬೆಳವಣಿಗೆಯ ಉಸಿರುಗಟ್ಟಿಸಿದೆ ಮತ್ತು ಅತಿ-ಉತ್ಪಾದನೆಯ ಒಂದು ಪ್ರವೃತ್ತಿಯನ್ನು ಹುಟ್ಟುಹಾಕಿದೆ.
ಇದನ್ನು ಓದಿ : 26 ಸಾವಿರ ಶಿಕ್ಷಕರ ನೇಮಕಾತಿ ಹಗರಣ; ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ತಡೆ
ಬೆಳವಣಿಗೆ ದರ ನಿಧಾನಗೊಳ್ಳುತ್ತಿರುವುದರ ಬಗ್ಗೆ ಕಾಳಜಿ
ಅದೇನೇ ಇರಲಿ, ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರಿಂದ ಹಿಡಿದು, ಅಶೋಕ ಮೋದಿ, ದೇಶದ ಮಾಜಿ ಮುಖ್ಯ ಅಂಕಿಅಂಶ ತಜ್ಞ ಪ್ರಣಬ್ ಸೆನ್ ವರೆಗೆ ಎಲ್ಲ ಲೇಖಕರೂ, ಭಾರತದ ಜಿಡಿಪಿ ಬೆಳವಣಿಗೆಯ ದರವು ಅತಿ-ಅಂದಾಜು ಮಾಡಲ್ಪಟ್ಟಿದೆ ಎಂಬ ಏಕಾಭಿಪ್ರಾಯವನ್ನು ಹೊಂದಿದ್ದಾರೆ. ಈ ಅತಿ-ಅಂದಾಜಿಗೆ ಅವರೆಲ್ಲರೂ ಬೇರೆ ಬೇರೆ ಕಾರಣಗಳನ್ನು ಕೊಡುತ್ತಾರೆ. ಈ ಎಲ್ಲ ಕಾರಣಗಳೂ ಒಂದು ಮಟ್ಟದ ಅಂಗೀಕಾರಾರ್ಹತೆಯನ್ನು ಹೊಂದಿವೆ. ಹಾಗಾಗಿ, ಈ ಅತಿ-ಅಂದಾಜು ಅಂಶದ ಬಗ್ಗೆ ವಿವಾದವಿಲ್ಲ. ಆದಾಗ್ಯೂ, ಅತಿ ಎಂದರೆ ಎಷ್ಟು? ಎಂಬ ಪ್ರಶ್ನೆ ಉಳಿಯುತ್ತದೆ. ಕೆಲವು ಲೇಖಕರು ಸೂಚಿಸುವ ಪ್ರಕಾರ, ವಾರ್ಷಿಕ ಶೇ. 2ರಷ್ಟು ಅಧಿಕವಾಗಿ ಅಂದಾಜು ಮಾಡಲ್ಪಟ್ಟಿದೆ ಎಂದು ಭಾವಿಸಿದರೆ, ನವ-ಉದಾರವಾದಿ ಯುಗದ ಜಿಡಿಪಿ ಬೆಳವಣಿಗೆಯ ದರವು ಹಿಂದಿನ ನಿಯಂತ್ರಣಗಳ ಆಳ್ವಿಕೆಯ ದರಕ್ಕಿಂತ ತುಸುವೇ ಹೆಚ್ಚಿನ ಮಟ್ಟದಲ್ಲಿದೆ. ಅದರ ಬಗ್ಗೆ ಪ್ರಶಂಸೆ ಮಾಡುವಂಥದ್ದು ಏನೂ ಇಲ್ಲ.
ಬೆಳವಣಿಗೆಯ ದರ ಯಾವ ಮಟ್ಟದಲ್ಲಿದೆ ಎಂಬುದಕ್ಕಿಂತ ಹೆಚ್ಚಾಗಿ ಜಿಡಿಪಿ ಬೆಳವಣಿಗೆಯ ದರ ನಿಧಾನಗೊಳ್ಳುತ್ತಿರುವುದರ ಬಗ್ಗೆ ನಮ್ಮ ಕಾಳಜಿ ಸಂಬಂಧಿಸಿದೆ. ಒಂದು ವೇಳೆ ಬೆಳವಣಿಗೆಯ ಮಟ್ಟವನ್ನು ಅತಿಯಾಗಿ ಅಂದಾಜು ಮಾಡಿದರೆ, ಕಾಲಾನಂತರದಲ್ಲಿ ಅದರ ಚಲನೆಯ ಬಗ್ಗೆ ಮಾಡುವ ಅಂದಾಜು ತನ್ನ ವಿಶ್ವಾಸಾರ್ಹತೆಯನ್ನು ಸ್ವಲ್ಪಮಟ್ಟಿಗೆ ಕಳೆದುಕೊಳ್ಳುತ್ತದೆ. ಆದಾಗ್ಯೂ, ಅಧಿಕೃತ ಅಂಕಿಅಂಶಗಳಿAದ ಒಂದು ನಿರ್ದಿಷ್ಟ ನಿಧಾನಗತಿಯನ್ನು ರುಜುವಾತುಪಡಿಸಬಹುದು. ಅಧಿಕೃತ ಅಂಕಿಅಂಶಗಳ ಪ್ರಕಾರ, 2001-02 ಮತ್ತು 2011-12ರ ನಡುವೆ, ಭಾರತದ ಅರ್ಥವ್ಯವಸ್ಥೆಯಲ್ಲಿ ಸೇರಿಸಲಾದ ನೈಜ ಒಟ್ಟು ಮೌಲ್ಯದ ಬೆಳವಣಿಗೆಯ ಒಟ್ಟು ವಾರ್ಷಿಕ ದರವು ಶೇ. 6.7ರಷ್ಟಿತ್ತು; 2011-12 ಮತ್ತು 2019-20ರ ಅವಧಿಯಲ್ಲಿ, ಅಂದರೆ, ಸಾಂಕ್ರಾಮಿಕದ ಕಾರಣದಿಂದಾಗಿ ಬೆಳವಣಿಗೆಯ ದರದಲ್ಲಿ ನಿಧಾನಗತಿ ಸಂಭವಿಸುವ ಮೊದಲೇ, ನೈಜ ಒಟ್ಟು ಮೌಲ್ಯದ ಒಟ್ಟು ವಾರ್ಷಿಕ ಬೆಳವಣಿಗೆ ದರವು ಶೇ. 5.4ಕ್ಕೆ ಕುಸಿದಿತ್ತು. 2022-23ರ ವೇಳೆಗೆ ಅರ್ಥವ್ಯವಸ್ಥೆಯ ಬೆಳವಣಿಗೆಯು ಇದೇ ಮಟ್ಟಕ್ಕೆ ಚೇತರಿಸಿಕೊಂಡಿತ್ತು. ಮತ್ತೆ, 2011-12ರಿಂದ ಹಿಡಿದು 2022-23ರ ವರೆಗಿನ ಅವಧಿಯನ್ನು ನೋಡಿದರೂ ಸಹ, ಅದು ಶೇ. 5.4ರಷ್ಟೇ ಇದೆ.
ಅರ್ಥವ್ಯವಸ್ಥೆಯ ಈ ನಿಧಾನಗತಿಯ ಬಗ್ಗೆ ಆಶ್ಚರ್ಯಪಡಬೇಕಾಗಿಲ್ಲ. ವರಮಾನದ ಹಂಚಿಕೆ ಹದಗೆಡುವುದರೊಂದಿಗೆ, ಅಂದರೆ, ಆರ್ಥಿಕ ಮಿಗುತಾಯದ ಪಾಲಿನ ಏರಿಕೆಯೊಂದಿಗೆ, ವರಮಾನದ ಬೆಳವಣಿಗೆಗೆ ಹೋಲಿಸಿದರೆ ಒಟ್ಟಾರೆ ಬೇಡಿಕೆಯ ಬೆಳವಣಿಗೆಯ ಗತಿ ನಿಧಾನಗೊಳ್ಳುವ ಅಂದಾಜು ಅನಿವಾರ್ಯವಾಗುತ್ತದೆ. ಹಿಂದೆ, ಈ ಪ್ರತಿಪಾದನೆಯ ಬಗ್ಗೆ ರಷ್ಯಾದ ಅರ್ಥಶಾಸ್ತ್ರಜ್ಞ ಮಿಖಾಯಿಲ್ ತುಗಾನ್-ಬರಾನೋವ್ಸ್ಕಿ ಒಂದು ಭಿನ್ನವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಬಳಕೆಯ ಬೆಳವಣಿಗೆಯ ಕುಸಿತವನ್ನು ಸರಿದೂಗಿಸಲು ಹೂಡಿಕೆಯ ಬೆಳವಣಿಗೆಯಲ್ಲಿ ಏರಿಕೆಯಾಗುವ ಸಾಧ್ಯತೆಯನ್ನು ಅವರು ಸೂಚಿಸಿದ್ದರು. ಇದು ಒಂದು ತಾರ್ಕಿಕ ಸಾಧ್ಯತೆಯಾಗಿದ್ದರೂ ಸಹ, ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಹೂಡಿಕೆ ಹೇಗೆ ಸ್ಪಂದಿಸುತ್ತದೆ ಎಂಬ ಅಂಶವನ್ನು ಪರಿಶಿಲಿಸಿದಾಗ, ಒಟ್ಟಾರೆ ಬೇಡಿಕೆಯ ಇಳಿಕೆಯಾಗುವ ಅಂದಾಜಿನ ಸನ್ನಿವೇಶದಲ್ಲಿ ಹೂಡಿಕೆ ಹೆಚ್ಚುತ್ತದೆ ಎಂದು ನಂಬಲಾಗದು. ಏಕೆಂದರೆ, ಬಂಡವಾಳಗಾರರು ಮಾರುಕಟ್ಟೆ ವಿಸ್ತರಿಸುವ ನಿರೀಕ್ಷೆಗಳಿರುವಾಗ ಮಾತ್ರ ಹೂಡಿಕೆ ಮಾಡುತ್ತಾರೆ. ಸರಕಾರವು ನಿಸ್ಸಂದೇಹವಾಗಿ ಅಧಿಕ ಉತ್ಪಾದನಾ ಪ್ರವೃತ್ತಿಯ ಅಂದಾಜನ್ನು ಎದುರಿಸುವ ನಿಟ್ಟಿನಲ್ಲಿ ಅಂದರೆ, ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವ ಸಲುವಾಗಿ, ಮಧ್ಯಪ್ರವೇಶ ಮಾಡಬಹುದು. ಆದರೆ ಅದಕ್ಕಾಗಿ ಹಣ ಒದಗಿಸಿಕೊಳ್ಳಲು ಇರುವ ಏಕೈಕ ಸಾಧನವನ್ನು (ಅಂದರೆ, ಶ್ರೀಮಂತರ ಮೇಲೆ ವಿಧಿಸುವ ತೆರಿಗೆಯನ್ನು ಹೆಚ್ಚಿಸಬೇಕಾಗುವ ಮತ್ತು ಬಜೆಟ್ ಕೊರತೆಯನ್ನು ಹೆಚ್ಚಿಸಿಕೊಳ್ಳುವ ಕ್ರಮಗಳನ್ನು) ಜಾಗತೀಕರಣಗೊಂಡ ಹಣಕಾಸು ಬಂಡವಾಳದ ವಿರೋಧದಿಂದಾಗಿ ಬಳಸುವಂತಿಲ್ಲ.
ಹಾಗಾಗಿ, ನವ-ಉದಾರವಾದದ ಅಡಿಯಲ್ಲಿ ಸರ್ಕಾರವು ಹೊಂದಿರುವ ಜಿಡಿಪಿ ಬೆಳವಣಿಗೆ ದರದ ವ್ಯಾಮೋಹವು ಬಡತನದ ಹೆಚ್ಚಳವನ್ನು ತಡೆಯುವಲ್ಲಿ ಯಶಸ್ವಿಯಾಗುವುದಿಲ್ಲ ಅಥವಾ ಸ್ವತಃ ಜಿಡಿಪಿ ಬೆಳವಣಿಗೆ ದರ ಇಳಿಕೆಯನ್ನು ತಡೆಯುವಲ್ಲಿಯೂ ಯಶಸ್ವಿಯಾಗುವುದಿಲ್ಲ.
ಇದನ್ನು ನೋಡಿ : ಕೊಪ್ಪಳ ಲೋಕಸಭೆ : ಬಿಜೆಪಿಯ ಬಂಡಾಯ ಕಾಂಗ್ರೆಸ್‌ಗೆ ಲಾಭ, ಕರಡಿಯ ಕುಣಿತದ ಮೇಲೆ ಫಲಿತಾಂಶ Janashakthi Media