ಜಿಡಿಪಿ ವೃದ್ಧಿ ದರ 8.7%, ಆದರೆ ಚೇತರಿಕೆಯ ಹಾದಿ ಇನ್ನೂ ದೂರ

ವೇದರಾಜ.ಎನ್.ಕೆ

ಮೇ 31ರಂದು ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿ (ಎನ್‌ಎಸ್‌ಒ) 2021-22ರ ಜಿಡಿಪಿ ಬೆಳವಣಿಗೆಯ ಅಧಿಕೃತ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಕಳೆದ ವಾರ ಈ ಮೊದಲು 2021-22ರ ಕೊನೆಯ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ 3.5%ಕ್ಕೆ ಇಳಿಯಬಹುದು ಎಂದು ಐಸಿಆರ್‌ಎ ಅಂದಾಜು ಮಾಡಿರುವುದಾಗಿ ವರದಿಯಾಗಿತ್ತು. ಈಗ ಅಧಿಕೃತವಾಗಿ ಅದು 4.1% ಎಂದು ಹೇಳಲಾಗಿದೆ.

ಅಂದರೆ ಒಟ್ಟು ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ದರ ಸತತವಾಗಿ ಇಳಿಯುತ್ತಲೇ ಬಂದಿದೆ. ಮೊದಲ ತ್ರೈಮಾಸಿಕದಲ್ಲಿ 20.1% ರಷ್ಟಿದ್ದ ದರ, ಎರಡನೇತ್ರೈಮಾಸಿಕದಲ್ಲಿ 8.4%ಕ್ಕೆ, ಮತ್ತು ಮೂರನೇ ತ್ರೈಮಾಸಿಕದಲ್ಲಿ 5.4%ಕ್ಕೆ ಇಳಿದಿತ್ತು.

ಒಟ್ಟಾರೆಯಾಗಿ, 2021-22ರ ಜಿಡಿಪಿ ಬೆಳವಣಿಗೆ ದರ 8.7% ಎಂದು ಹೇಳಲಾಗಿದೆ. ಎನ್‍.ಎಸ್.ಒ.ಈ ಮೊದಲು ಫೆಬ್ರುವರಿ ತಿಂಗಳಲ್ಲಿ ಈ ದರ 8.9% ಇರಬಹುದು ಎಂದು ಅಂದಾಜು ಮಾಡಿತ್ತು. ನಿವ್ವಳ ಮೌಲ್ಯವರ್ಧನೆ(ಜಿವಿಎ) 8.3% ಇರಬಹುದು ಎಂದೂ ಅಂದಾಜು ಮಾಡಿತ್ತು. ಈಗ ಅದು 8.1% ಎಂದು ಹೇಳಿದೆ.

ಈ ಅಂಕಿ-ಅಂಶಗಳು ದೇಶದ ಅರ್ಥವ್ಯವಸ್ಥೆ ಪೂರ್ಣವಾಗಿ ಚೇತರಿಕೆ ಕಾಣುತ್ತಿದೆ ಎಂದು ದೃಢಪಡಿಸುತ್ತವೆ ಎಂದು ಕೇಂದ್ರ ಹಣಕಾಸು ಮಂತ್ರಾಲಯ ಹೇಳಿದೆ. ಮುಖ್ಯಧಾರೆಯ ಮಾಧ್ಯಮಗಳು ಅದನ್ನು ಪುನರುಚ್ಛರಿಸುತ್ತಿವೆ. ಆದರೆ ಬಹಳಷ್ಟು ನಿಷ್ಪಕ್ಷ ಅರ್ಥಶಾಸ್ತ್ರಜ್ಞರು ಇದನ್ನು ಒಪ್ಪುತ್ತಿಲ್ಲ. ಇದು ಅಂಕಿ-ಅಂಶಗಳ ಬಿಸಿಲ್ಗುದುರೆ ಎನ್ನುತ್ತಾರೆ ಅವರು. ಅದಕ್ಕೆ ಕಾರಣವೂ ಇದೆ.

ಏಕೆಂದರೆ 2020-21ರಲ್ಲಿ ಜಿಡಿಪಿ ಬೆಳವಣಿಗೆ ದರ (-)6.6% ಮತ್ತು ಜಿವಿಎ (-)4.8% ಇತ್ತು.

2019-20ರಲ್ಲಿ ಅಂದರೆ ಕೊವಿಡ್-ಪೂರ್ವ ಅವಧಿಯಲ್ಲಿ ಇವು ಅನುಕ್ರಮವಾಗಿ 3.7% ಮತ್ತು 3.8%.

ಜಿಡಿಪಿ ಮತ್ತು ಜಿವಿಎ ವೃದ್ಧಿ ದರಗಳು(%)-2011-12ರ ಸ್ಥಿರ ಬೆಲೆಗಳಲ್ಲಿ

ಅಂದರೆ ಜಿಡಿಪಿ 10.3%ದಷ್ಟು ಭಾರೀ ಕುಸಿತದ ನಂತರ ಈಗ ಆ ಕುಸಿತವನ್ನೂ ಪೂರ್ಣವಾಗಿ ತುಂಬಿಲ್ಲ. ಜಿವಿಎ ವಿಷಯದಲ್ಲೂ ಇದೇ ಕತೆ.

ಇಂತಹ ಸಂದರ್ಭದಲ್ಲಿ, ಒಟ್ಟು ಜಿಡಿಪಿಯನ್ನು ಹೋಲಿಸುವುದು ಮಾತ್ರವೇ ಅರ್ಥವ್ಯವಸ್ಥೆಯ ಬಗ್ಗೆ ಸರಿಯಾದ ಚಿತ್ರವನ್ನು ಕೊಡುತ್ತದೆ ಎನ್ನುತ್ತಾರೆ ಈ ಅರ್ಥಶಾಸ್ತಜ್ಞರು.

2021-22ರಲ್ಲಿ ಒಟ್ಟು ಜಿಡಿಪಿ ರೂ.147.36 ಲಕ್ಷ ಕೋಟಿ, 2020-21ರಲ್ಲಿ ರೂ.135.58 ಲಕ್ಷ ಕೋಟಿ ಮತ್ತು 2019-20ರಲ್ಲಿ ರೂ.145.16 ಲಕ್ಷ ಕೋಟಿ. ಅಂದರೆ 2019-20ಕ್ಕೆ ಹೋಲಿಸಿದರೆ ಎರಡು ವರ್ಷಗಳಲ್ಲಿ ಕೇವಲ 1.5% ಏರಿಕೆ, ವಾರ್ಷಿಕ ಏರಿಕೆ ದರ ಕೇವಲ 0.76%.

ಜಿವಿಎ ದ ವಲಯವಾರು ಅಂಕಿ-ಅಂಶಗಳ ವಿಶ್ಲೇಷಣೆ ಇನ್ನೂ ಆತಂಕಕಾರಿ ಚಿತ್ರವನ್ನು ಕೊಡುತ್ತದೆ(ದಿ ಮಿರಾಜ್ ಆಫ್ ಇಕನಾಮಿಕ್ ರಿಕವರಿ, ವಿ.ಶ್ರೀಧರ್, ನ್ಯೂಸ್‌ಕ್ಲಿಕ್, ಜೂನ್3).

ಈ ಪರಿಸ್ಥಿತಿಯನ್ನು ಯಾವ ಅರ್ಥದಲ್ಲೂ ಆರ್ಥಿಕ ಚೇತರಿಕೆ ಎಂದು ವರ್ಣಿಸಲು ಸಾಧ್ಯವಿಲ್ಲ. ಹೆಚ್ಚೆಂದರೆ ಇದನ್ನು ಆರ್ಥಿಕ ಸ್ಥಗಿತತೆ ಎನ್ನಬಹುದಷ್ಟೇ ಎನ್ನುತ್ತಾರೆ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಪ್ರೊ.ಅರುಣ್ ಕುಮಾರ್( ದಿ ಲೀಫ್‌ಲೆಟ್, ಮೇ 27).

ವಾಸ್ತವವಾಗಿ, ಅಸಂಘಟಿತ ವಲಯದಲ್ಲಿನ ಬೆಳವಣಿಗೆಗಳನ್ನು ಪರಿಗಣಿಸುವುದಾದರೆ ನಿಜವಾದ ಆರ್ಥಿಕ ಬೆಳವಣಿಗೆ ಇನ್ನೂ ಕಡಿಮೆ. ಈ ವಲಯದಲ್ಲಿನ ಕೃಷಿ ವಲಯವನ್ನು ಬಿಟ್ಟು ಉಳಿದ ಅಸಂಘಟಿತ ಕ್ಷೇತ್ರಗಳಲ್ಲಿನ ಸ್ವತಂತ್ರ ಅಂಕಿ-ಅಂಶಗಳು ಲಭ್ಯವಿರುವುದಿಲ್ಲ. ಅದಕ್ಕೆ ಸಂಘಟಿತ ಆರ್ಥಿಕ ವಲಯದ ಅಂದಾಜುಗಳನ್ನೇ ಬಳಸಲಾಗುತ್ತದೆ. ಆದರೆ ಇದು ಸರಿಯಾದ ಚಿತ್ರವನ್ನು ಕೊಡುವುದಿಲ, ವಿಶೇಷವಾಗಿ 2016ರ ನೋಟುರದ್ಧತಿಯ ನಂತರ, ಎನ್ನುವ ಪ್ರೊ.ಅರುಣ್ ಕುಮಾರ್, ಕೊವಿಡ್ ಕಾಲದಲ್ಲೂ ಲಾಕ್‌ಡೌನಿನಿಂದ ಅತ್ಯಂತ ಹೆಚ್ಚು ಕುಸಿತ ಕಂಡದ್ದು ಅಸಂಘಟಿತ ವಲಯ ಎಂದು ನೆನಪಿಸುತ್ತಾರೆ.

ಹೀಗೆ ಅಸಂಘಟಿತ ಆರ್ಥಿಕ ಕ್ಷೇತ್ರಗಳ ಇಳಿಕೆಯನ್ನು ಪರಿಗಣಿಸಿದರೆ, ಜಿಡಿಪಿ 2019-20ರಲ್ಲಿ ಇದ್ದುದಕ್ಕಿಂತಲೂ ಕಡಿಮೆಯಿದ್ದಿರಬೇಕು. ಅರ್ಥವ್ಯವಸ್ಥೆ ಈಗಲೂ ಕೊವಿಡ್-ಪೂರ್ವದ ಮಟ್ಟವನ್ನು ತಲುಪಿಲ್ಲ ಮಾತ್ರವೇ ಅಲ್ಲ. ಕೊವಿಡ್ ಬಾಧಿಸದೇ ಇರುತ್ತಿದ್ದರೆ, ಅರ್ಥವ್ಯವಸ್ಥೆ ಸುಮಾರು 4% ದರದಲ್ಲಿ ವೃದ್ದಿಯಾಗುತ್ತಿರಬೇಕಾಗಿತ್ತು. ಆದ್ದರಿಂದಲೇ ಹೆಚ್ಚೆಂದರೆ ನಮ್ಮ ಅರ್ಥವ್ಯವಸ್ಥೆ ಸ್ಥಗಿತತೆಯಲ್ಲಿದೆ ಎಂದಷ್ಟೇ ಹೇಳಬಹುದು.

ಎಪ್ರಿಲ್ 2022ರಲ್ಲಿ ಸಗಟು ಹಣದುಬ್ಬರ 15.08% ಮತ್ತು ಚಿಲ್ಲರೆ ಹಣದುಬ್ಬರ 7.8% ಎಂಬುದನ್ನು ಪರಿಗಣಿಸಿದರೆ ದೇಶದ ಅರ್ಥವ್ಯವಸ್ಥೆ ‘ಸ್ಥಗಿತದುಬ್ಬರ’ (ಸ್ಟಾಗ್‌ಫ್ಲೇಷನ್) ಸ್ಥಿತಿಯಲ್ಲಿದೆ ಎಂದೇ ಹೇಳಬೇಕಾಗುತ್ತದೆ. ಉಕ್ರೇನ್ ಯುದ್ಧದಿಂದ ಜಾಗತಿಕ ಅರ್ಥವ್ಯವಸ್ಥೆ ನಿಧಾನಗತಿಗೆ ಇಳಿದಿರುವ ಸಂದರ್ಭದಲ್ಲಿ ಪರಿಸ್ಥಿತಿ ಇನ್ನಷ್ಟು ಕಳವಳಕಾರಿಯಾಗಿದೆ, ವಿಶೇಷವಾಗಿ ನಮ್ಮ ಸಮಾಜದ ಬಡವಿಭಾಗಗಳಿಗೆ ಎನ್ನುತ್ತಾರೆ ಪ್ರೊ.ಅರುಣ್ ಕುಮಾರ್.

ಇಂತಹ ಸಂದರ್ಭದಲ್ಲಿ ರಿಜರ್ವ್ ಬಾಂಕ್ ಕ್ರಮಗಳಿಂದ ಏನೂ ಆಗದು, ಸರಕಾರವೇ ಕ್ರಮ ಕೈಗೊಳ್ಳಬೇಕು.

ಹಾಗಿದ್ದರೆ ಸರಕಾರ ಏನು ಮಾಡಬೇಕು?

ಸರಕುಗಳ ಪೂರೈಕೆಗೆ ಇರುವ ಅಡ-ತಡೆಗಳನ್ನು ನಿವಾರಿಸಬೇಕು, ಸಟ್ಟಾಕೋರತನವನ್ನು ತಡೆಯಬೇಕು, ಪರೋಕ್ಷ ತೆರಿಗೆಗಳನ್ನು ಇಳಿಸಬೇಕು, ಇದರಿಂದ ಬಜೆಟಿನ ಹಣಕಾಸು ಕೊರತೆ ಹೆಚ್ಚುವುದಾದರೆ ಶ್ರೀಮಂತ ವಿಭಾಗಗಳ ಮೇಲಿನ ನೇರ ತೆರಿಗೆಗಳನ್ನು ಹೆಚ್ಚಿಸಬೇಕು ಎಂದು ಪ್ರೊ. ಅರುಣ್ ಕುಮಾರ್ ಹೇಳುತ್ತಾರೆ.

ಆದರೆ ಹಣದುಬ್ಬರ, ಏರುತ್ತಿರುವ ಬಡ್ಡಿದರಗಳು, ರೂಪಾಯಿಯ ಮೌಲ್ಯದಲ್ಲಿ ಇಳಿಕೆ ಮತ್ತು ಏರುತ್ತಿರುವ ನಿರುದ್ಯೋಗದ ಪರಿಸ್ಥಿತಿ ಇರುವಾಗಲೂ ಆರ್ಥಿಕ ಚೇತರಿಕೆ ಆರಂಭವಾಗಿದೆ ಎಂದು ಘೋಷಿಸಿರುವ ಸರಕಾರ “ಸೇವಾ-ಸುಶಾಸನ್-ಗರೀಬ್ ಕಲ್ಯಾಣ್’ನ ಘೋಷಣೆ ಕೊಟ್ಟಿರುವ ಸನ್ನಿವೇಶದಲ್ಲಾದರೂ ಇಂತಹ ಕ್ರಮಗಳನ್ನು ಕೈಗೊಳ್ಳುತ್ತದೆಯೇ? ಕಾದು ನೋಡಬೇಕು.

Donate Janashakthi Media

Leave a Reply

Your email address will not be published. Required fields are marked *