2022-23ರ ಜಿಡಿಪಿ ಅಂದಾಜು ಮತ್ತು ಸರಕಾರದ ಪ್ರಚಾರದ ಸುರಿಮಳೆ

ಪ್ರೊ. ಪ್ರಭಾತ್ಪಟ್ನಾಯಕ್

ಅನು: ಕೆ.ಎಂ.ನಾಗರಾಜ್

 ಇತ್ತೀಚಿನ ಜಿಡಿಪಿ ಬೆಳವಣಿಗೆಯ ಅಂಕಿಅಂಶಗಳ ಆಧಾರದ ಮೇಲೆ ಪ್ರಚಾರದ ಒಂದು ಸುರಿಮಳೆ ಯೇನಡೆಯುತ್ತಿದೆ. ಭಾರತದ ಅರ್ಥವ್ಯವಸ್ಥೆಯು ಈಗ ವಿಶ್ವದಲ್ಲೇ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿದೆ, ಮತ್ತು ಈಸಂಗತಿಯೇ ತಾನು ಅರ್ಥವ್ಯವಸ್ಥೆಯನ್ನು ಚಾಣಾಕ್ಷವಾಗಿ ನಿರ್ವಹಿಸಿರುವುದಕ್ಕೆ  ಒಂದು ಸಾಕ್ಷಿ ಎಂದು ಮೋದಿ  ಸರಕಾರ ಹೇಳಿಕೊಳ್ಳುತ್ತಿದೆ. ಆದರೆ ಜಿಡಿಪಿಯು ಹೆಚ್ಚುತ್ತಿರುವ ಈ ಅವಧಿಯಲ್ಲಿ ನಿರುದ್ಯೋಗ ದರವೂ ಏರಿದೆ. ಏಕೆ? ಅಲ್ಲದೆ ದುಡಿಯುವ  ಜನರ ಜೀವನಾವಶ್ಯಕ ವಸ್ತುಗಳ ಬಳಕೆಯು ತಗ್ಗಿದೆ ಎಂಬುದು ಇದೇ ಜಿಡಿಪಿ ಅಂಕಿ ಅಂಶಗಳು ಬಹಿರಂಗ ಪಡಿಸಿರುವ ಅತ್ಯಂತ ಆತಂಕಕಾರಿ ಸಂಗತಿ. ಭಾರತವು ವಿಶ್ವದಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಎಂದು ಎಷ್ಟೇ ಜೋರಾಗಿ ಡಂಗುರ ಹೊಡೆದರೂ ಈ ವಾಸ್ತವವನ್ನು ಬಹುಶಃ ಮರೆಮಾಚುವುದು ಸಾಧ್ಯವಿಲ್ಲ.

2022-23 ರ ನಾಲ್ಕನೇ ತ್ರೈಮಾಸಿಕದ ಜಿಡಿಪಿಯ ಅಂದಾಜುಗಳನ್ನು ಮೇ  31ರಂದು ಪ್ರಕಟಿಸಲಾಗಿದೆ. ಇದರಲ್ಲಿ ಹಿಂದಿನ ವರ್ಷದನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ . 6.1ರಷ್ಟು ಬೆಳವಣಿಗೆ ಕಂಡುಬರುತ್ತದೆ. ಮೂರನೆಯ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್ 2022) ಅದರ ಹಿಂದಿನ ವರ್ಷದ ಮೂರನೆಯ ತ್ರೈಮಾಸಿಕದೊಂದಿಗೆ ಹೋಲಿಸಿದಾಗ ಬೆಳವಣಿಗೆಯು ಶೇ. 4.4 ರಷ್ಟುಇತ್ತು. ಒಟ್ಟಾರೆಯಾಗಿ 2022-23ನೇ ವರ್ಷದಲ್ಲಿ ಜಿಡಿಪಿಯು, ಹಿಂದಿನವರ್ಷಕ್ಕೆ ಹೋಲಿಸಿದರೆ, ಶೇ. 7.2ರಷ್ಟು ವೃದ್ಧಿಸಿದೆ. ಈ ಬೆಳವಣಿಗೆಯು ಐಎಂಎಫ್ ರಿಸರ್ವ್‌ ಬ್ಯಾಂಕ್‌  ಆಫ್‌ ಇಂಡಿಯಾ ಈ ಹಿಂದೆ ನಿರೀಕ್ಷಿಸಿದ ಶೇಕಡಾ 6.8 ಕ್ಕಿಂತಲೂ ಉತ್ತಮವಾಗಿದೆ.

ಜಿಡಿಪಿಯ ಈ ಅಂಕಿ ಸಂಖ್ಯೆಗಳು ಈ ಹಿಂದೆ ನಿರೀಕ್ಷಿಸಿದ್ದಕ್ಕಿಂತಲೂ ಉತ್ತಮವಾಗಿದೆ ಎಂಬ ಅಂಶವು ಭಾರತದ ಅರ್ಥವ್ಯವಸ್ಥೆಯ ಪ್ರಸ್ತುತ ಪರಿಸ್ಥಿತಿಯ ಮೌಲ್ಯಮಾಪನದ ಮೇಲೆ ಸ್ವಲ್ಪವೂ ಪ್ರಭಾವ ಬೀರುವುದಿಲ್ಲ (ಜನಶಕ್ತಿ, ಸಂಚಿಕೆ 18, ಮೇ 1-7, 2023 – ಪಿಡಿಏಪ್ರಿಲ್ 23, 2023 – ನೋಡಿ). 2020-21ರ ಲಾಕ್‌ಡೌನ್‌   ಪರಿಣಾಮವಾಗಿ ಉಂಟಾದ ತೀವ್ರ ಕುಸಿತವನ್ನು ನಿರ್ಲಕ್ಷಿಸಿದರೂ, 2019-20ರಿಂದ 2022-23 ರವರೆಗಿನ ಮೂರು ವರ್ಷಗಳ ಜಿಡಿಪಿಯ ಒಟ್ಟು ಗೂಡಿದ ವಾರ್ಷಿಕ ಪಾಯಿಂಟ್-ಟು-ಪಾಯಿಂಟ್ ಬೆಳವಣಿಗೆಯ ದರವು ಕೇವಲಶೇ. 2.85 (ಈ ದರವನ್ನುನಾಲ್ಕನೇ ತ್ರೈಮಾಸಿಕದ ನಿರೀಕ್ಷಿತ ಬೆಳವಣಿಗೆ ದರದ ಆಧಾರದ ಮೇಲೆಶೇ. 2.7 ಎಂದು ಅಂದಾಜು ಮಾಡಲಾಗಿತ್ತು). ಬಹುತೇಕವೀಕ್ಷಕರ ಪ್ರಕಾರ, ಒಟ್ಟು ಬೇಡಿಕೆಯ ವಿವಿಧ ಅಂಶಗಳ ಬೆಳವಣಿಗೆಯ ನಿಧಾನಗತಿಯಿಂದಾಗಿ  2022-23ರ ಜಿಡಿಪಿಯ ಬೆಳವಣಿಗೆಯ ದರವನ್ನು 2023-24ರಲ್ಲಿಉಳಿಸಿಕೊಳ್ಳುವುದು ಸಾಧ್ಯವಾಗದು. ಹೀಗಾಗಿ ಭಾರತದ ಅರ್ಥವ್ಯವಸ್ಥೆಯು ನಿಂತಲ್ಲೇನಿಂತಿದೆ ಎಂಬುದುಸ್ಪಷ್ಟವಾಗಿದೆ.

ಆದಾಗ್ಯೂ, ಸರ್ಕಾರವು ತನ್ನ ಸ್ವಭಾವಕ್ಕೆ ಅನುಗುಣವಾಗಿ, ಇತ್ತೀಚಿನ ಜಿಡಿಪಿ ಬೆಳವಣಿಗೆಯ ಅಂಕಿಅಂಶಗಳ ಆಧಾರದ ಮೇಲೆ ಪ್ರಚಾರದ ಒಂದು ಸುರಿಮಳೆಯನ್ನೇ ಸುರಿಸುತ್ತಿದೆ. ಭಾರತದ ಅರ್ಥವ್ಯವಸ್ಥೆಯು ಈಗ ವಿಶ್ವದಲ್ಲೇ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿಕೊಳ್ಳುತ್ತದೆ ಮತ್ತು ಈ ಸಂಗತಿಯೇ ತಾನು ಅರ್ಥವ್ಯವಸ್ಥೆಯನ್ನು ಚಾಣಾಕ್ಷವಾಗಿ ನಿರ್ವಹಿಸಿರುವುದಕ್ಕೆ ಒಂದು ಸಾಕ್ಷಿ ಎಂದು ಹೇಳಿಕೊಳ್ಳುತ್ತದೆ. ಅದು ಹೇಳದೇ ಬಿಟ್ಟದ್ದು ಏನೆಂದರೆ, ವಿಶ್ವದ ಪ್ರಮುಖ ಅರ್ಥವ್ಯವಸ್ಥೆಗಳ ಪೈಕಿ ಭಾರತದ ಅರ್ಥವ್ಯವಸ್ಥೆಯು 2020-21ನೇ ಸಾಲಿನಲ್ಲಿ ಸಾಂಕ್ರಾಮಿಕ-ಪ್ರೇರಿತ ಲಾಕ್‌ಡೌನ್‌ನಿಂದಾಗಿ ಒಂದು ಹೀನಾಯ ಕೆಳಮಟ್ಟಕ್ಕೆ ಇಳಿದಿತ್ತು ಎಂಬುದನ್ನು ಮತ್ತು ತಾನು ಹೇರಿದ ಲಾಕ್‌ಡೌನ್ ವಿಶ್ವದಲ್ಲೇ ಅತ್ಯಂತ ಕಠೋರವಾಗಿತ್ತು ಎಂಬುದನ್ನು. ಪಾತಾಳಕ್ಕೆ ಇಳಿದಿದ್ದ ಜಿಡಿಪಿಯು ಸಾಂಕ್ರಾಮಿಕ-ಪೂರ್ವ ಮಟ್ಟಕ್ಕೆ ಏರಿದ ದರವು ಅತಿ ಉನ್ನತವಾಗಿ ಕಾಣಿಸಿಕೊಳ್ಳುತ್ತದೆ, ಏಕೆಂದರೆ, ತೀವ್ರವಾಗಿ ಕುಸಿದ ಮಟ್ಟವನ್ನು ಆಧಾರವಾಗಿ ಪರಿಗಣಿಸಿ ಲೆಕ್ಕ ಹಾಕಲಾಗುತ್ತದೆ. ಮೊದಲೇ ಹೇಳಿದಂತೆ, ಸಾಂಕ್ರಾಮಿಕ ವರ್ಷದಲ್ಲಿ ಕಂಡ ಕುಸಿತ ಮತ್ತು ತದನಂತರ ಕಂಡ ಚೇತರಿಕೆಯ ವರ್ಷವನ್ನು ನಿರ್ಲಕ್ಷಿಸಿ, ಸಾಂಕ್ರಾಮಿಕ ಪೂರ್ವದ 2019-20 ಮತ್ತು ಸಾಂಕ್ರಾಮಿಕ ತರುವಾಯದ 2022-23 ಸಾಮಾನ್ಯ ವರ್ಷಗಳನ್ನು ಪರಿಗಣಿಸಿದರೆ, ವಾರ್ಷಿಕ ಬೆಳವಣಿಗೆಯ ದರವು ಕೇವಲ ಶೇ. 2.85ರಷ್ಟಿದೆ. ಈ ಮಟ್ಟದ ಬೆಳವಣಿಗೆಯು, ಪ್ರಭಾವಶಾಲಿ ಬೆಳವಣಿಗೆಯ ಮಾತಿರಲಿ, ಅರ್ಥವ್ಯವಸ್ಥೆಯು ನಿಂತಲ್ಲೇ ನಿಂತಿದೆ ಎಂಬುದನ್ನು ಸೂಚಿಸುತ್ತದೆ.

ನಿರುದ್ಯೋಗ ದರದಲ್ಲಿ ಏಕೆ ತೀವ್ರ ಏರಿಕೆಯಾಗಬೇಕು?

ಇತ್ತೀಚಿನ ಜಿಡಿಪಿ ಅಂಕಿಅಂಶಗಳು ಒಂದು ಗಮನಾರ್ಹ ಮತ್ತು ಗೊಂದಲದ ವಿದ್ಯಮಾನವನ್ನು ಎತ್ತಿ ತೋರಿಸುತ್ತವೆ ಎಂಬುದನ್ನು ಅನೇಕರು ಗಮನಿಸಿದ್ದಾರೆ. 2018-19ಕ್ಕೆ ಹೋಲಿಸಿದರೆ 2022-23ರಲ್ಲಿ ಜಿಡಿಪಿಯು ಶೇ. 13.37ರಷ್ಟು ಹೆಚ್ಚಿದೆ. ಆದರೆ, ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಒದಗಿಸಿದ ಮಾಹಿತಿಯ ಪ್ರಕಾರ, 2018-19ರಲ್ಲಿ ಶೇ. 6.3ರಷ್ಟಿದ್ದ ನಿರುದ್ಯೋಗ ದರವು ಮಾರ್ಚ್ 2023ರ ವೇಳೆಗೆ ಶೇ. 7.9ಕ್ಕೆ ಏರಿದೆ. ಜಿಡಿಪಿಯು ಹೆಚ್ಚುತ್ತಿರುವ ಈ ಅವಧಿಯಲ್ಲಿ ನಿರುದ್ಯೋಗ ದರ ಏರಿದೆ. ಏಕೆ? ನಾವು ಈಗಷ್ಟೇ ನೋಡಿರುವಂತೆ ಪ್ರಭಾವಶಾಲಿಯಾಗಿ ಅಲ್ಲದಿದ್ದರೂ, ಶ್ರಮ ಶಕ್ತಿಯ ಬೆಳವಣಿಗೆಯ ದರಕ್ಕೆ ಸಂಬಂಧಪಟ್ಟ ಜನಸಂಖ್ಯೆಯ ಬೆಳವಣಿಗೆಯ ದರಕ್ಕಿಂತ ಹೆಚ್ಚಿನ ದರದಲ್ಲಿ\ ಜಿಡಿಪಿಯು ಬೆಳೆದಿದೆ. ವಾಸ್ತವವಾಗಿ ಶ್ರಮಶಕ್ತಿಯ ಭಾಗವಹಿಸುವಿಕೆಯ ಪ್ರಮಾಣ, ಅಂದರೆ ದುಡಿಯುವ ವಯಸ್ಸಿನ ಜನರಲ್ಲಿ ಉದ್ಯೋಗ ಮಾಡುವವರ ಅನುಪಾತವು ಈ ಅಲ್ಪಾವಧಿಯಲ್ಲಿ ಏರಿಕೆಯಾಗಿಲ್ಲ. ಹಾಗಾದರೆ, ನಿರುದ್ಯೋಗ ದರವು ಏಕೆ ತೀವ್ರವಾಗಿ ಏರಿಕೆಯಾಗಬೇಕು?

ನಿರುದ್ಯೋಗ ದರದ ಹೆಚ್ಚಳವು ವಾಸ್ತವವಾಗಿ ಶ್ರಮಶಕ್ತಿಯ ಪೂರೈಕೆಯಲ್ಲಿನ ಯಾವುದೇ ಹಠಾತ್ ಹೆಚ್ಚಳದಿಂದ ಆಗಿಲ್ಲ. ಬದಲಿಗೆ, ಶ್ರಮಶಕ್ತಿಯ ಮೇಲಿನ ಬೇಡಿಕೆಯ ಕುಸಿತದಿಂದಾಗಿದೆ ಎಂಬ ಅಂಶವನ್ನು ಸಿಎಂಐಇಯ ಮತ್ತೊಂದು ಪುರಾವೆಯು ದೃಢಪಡಿಸುತ್ತದೆ. 2019-20ರಲ್ಲಿ 40.89 ಕೋಟಿ ಇದ್ದ ಉದ್ಯೋಗಿಗಳ ಸಂಖ್ಯೆಯು 2023ರ ಮಾರ್ಚ್‍ ನಲ್ಲಿ 40.76 ಕೋಟಿಗೆ ಕುಸಿದಿದೆ. ಈ ಕುಸಿತವು ಮೂರು ವಿಷಯಗಳನ್ನು ಸೂಚಿಸುತ್ತದೆ: ಮೊದಲನೆಯದು, 2020-21ರಲ್ಲಿ ಇಳಿದ ಹೀನಾಯ ಕೆಳಮಟ್ಟದಿಂದ ಅರ್ಥವ್ಯವಸ್ಥೆಯು ಕಂಡ ಚೇತರಿಕೆಯು ಕಡಿಮೆ-ಉದ್ಯೋಗ ಕೇಂದ್ರಿತ ಚಟುವಟಿಕೆಗಳಲ್ಲಿ ಹೆಚ್ಚು ಬಲವಾಗಿತ್ತು ಮತ್ತು ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚು ಪೆಟ್ಟು ತಿಂದ ಅಸಂಘಟಿತ ವಲಯದಂತಹ ಹೆಚ್ಚು-ಉದ್ಯೋಗ ಕೇಂದ್ರಿತ ಚಟುವಟಿಕೆಗಳಲ್ಲಿ ಕಂಡ ಚೇತರಿಕೆಯು ದುರ್ಬಲವಾಗಿತ್ತು ಎಂಬುದನ್ನು. (ನೋಟು ರದ್ದತಿಯ ಸಂದರ್ಭದಲ್ಲಿ ಮತ್ತು ಜಿಎಸ್‌ಟಿ ಜಾರಿಯ ಪರಿಣಾಮವಾಗಿ ಈ ವಲಯವು ತಿಂದ ಹೊಡೆತಗಳನ್ನು ಇಲ್ಲಿ ಪರಿಗಣಿಸಿಲ್ಲ).

ಎರಡನೆಯದು, ಡಿಜಿಟಲೀಕರಣವು ಮಾನವ ಚಟುವಟಿಕೆಯನ್ನು ಹೆಚ್ಚು ಹೆಚ್ಚಾಗಿ ಬದಲಾಯಿಸುತ್ತಿರುವ ಸನ್ನಿವೇಶದಲ್ಲಿ ಕಾರ್ಮಿಕರ ಉತ್ಪಾದಕತೆಯು ನಿರಂತರವಾಗಿ ಹೆಚ್ಚುತ್ತಿದ್ದರೂ, ಉದ್ಯೋಗದ ಬೆಳವಣಿಗೆಯ ದರವು ಕಡಿಮೆ ಇರುತ್ತದೆ ಎಂಬುದು.

ಮೂರನೆಯದು, ಶ್ರಮಶಕ್ತಿಯ ಮೇಲಿನ ಬೇಡಿಕೆಯ ಇಳಿಕೆಯಿಂದಾಗಿ ಅಥವಾ ‘ಮಿತವ್ಯಯ’ವನ್ನು ಜಾರಿಗೊಳಿಸುವ ಸಾಧನವಾಗಿ ಹಲವಾರು ಕ್ಷೇತ್ರಗಳಲ್ಲಿ ಕೆಲಸಗಾರರ ವಾಸ್ತವಿಕ ವಜಾಗಳು ನಡೆದಿವೆ ಎಂಬುದು. ಉದಾಹರಣೆಗೆ, ಫೆಬ್ರವರಿ 2023ರಲ್ಲಿ 40.99 ಕೋಟಿ ಇದ್ದ ಉದ್ಯೋಗಿಗಳ ಸಂಖ್ಯೆಯು ಮಾರ್ಚ್ ತಿಂಗಳ ವೇಳೆಗೆ 40.76 ಕೋಟಿಗೆ ಇಳಿದ ಹಠಾತ್ ಕುಸಿತವು ವಜಾಗಳು ವಾಸ್ತವಿಕವಾಗಿ ನಡೆದಿವೆ ಎಂಬುದನ್ನು ವಿವರಿಸುತ್ತದೆ.

ಉತ್ಪ್ರೇಕ್ಷಿತ ಅಂದಾಜುಗಳು

ನಿರುದ್ಯೋಗ ದರದ ಏರಿಕೆಯನ್ನು ವಿವರಿಸುವ ಈ ಕೆಲವು ಅಂಶಗಳೇ 2022-23ರ ನಾಲ್ಕನೇ ತ್ರೈಮಾಸಿಕದ ಮತ್ತು ಒಟ್ಟಾರೆಯಾಗಿ 2022-23ರ ವರ್ಷದ ಜಿಡಿಪಿ ಬೆಳವಣಿಗೆಯನ್ನು ಏಕೆ ಹಿಗ್ಗಿಸಿ ಅಂದಾಜು ಮಾಡಲಾಗಿದೆ ಎಂಬುದನ್ನು ಸೂಚಿಸುತ್ತವೆ. ಜಿಡಿಪಿಯನ್ನು ಅಂದಾಜು ಮಾಡುವ ಹೊಸ ವಿಧಾನದಲ್ಲಿ, ನಾವು ಈಗ ಪಡೆದಿರುವ ರೀತಿಯ 2022-23ರ ನಾಲ್ಕನೇ ತ್ರೈಮಾಸಿಕದ ಮೊದಲ ಅಂದಾಜು, ಸಂಘಟಿತ ವಲಯದ ಚಟುವಟಿಕೆಗಳ ಬೆಳವಣಿಗೆಯ ದರವೇ ಕೃಷಿಯೇತರ ಅಸಂಘಟಿತ ವಲಯಕ್ಕೂ ಅನ್ವಯಿಸುತ್ತದೆ ಎಂಬ ಊಹನೆಯನ್ನು ಆಧರಿಸಿದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಅಸಂಘಟಿತ ವಲಯದ ದತ್ತಾಂಶಗಳನ್ನು ಸಂಗ್ರಹಿಸಲು ಬಹಳ ಸಮಯ ಹಿಡಿಯುವ ಕಾರಣದಿಂದ, ಸಂಘಟಿತ ವಲಯದ ದತ್ತಾಂಶಗಳೇ ಎರಡೂ ವಲಯಗಳಿಗೂ ಒಟ್ಟಿಗೆ ಅನ್ವಯಿಸುತ್ತವೆ ಎಂದು ಊಹಿಸಲಾಗಿದೆ. ಆದರೆ, ಸಾಂಕ್ರಾಮಿಕದ ಸಮಯದಲ್ಲಿ ಅಸಂಘಟಿತ ವಲಯವು ವಿಶೇಷವಾಗಿ ಒಂದು ತೀವ್ರ ಹಾನಿಗೆ ಒಳಗಾಗಿದ್ದರಿಂದ ಮತ್ತು ಅದರಿಂದ ಈ ವಲಯವು ಇನ್ನೂ ಚೇತರಿಕೆ ಹೊಂದದ ಕಾರಣದಿಂದ, ಸಂಘಟಿತ ವಲಯದ ಬೆಳವಣಿಗೆಯ ದತ್ತಾಂಶವನ್ನು ಈ ಎರಡೂ ವಲಯಗಳಿಗೆ ಒಟ್ಟಾಗಿ ಅನ್ವಯಿಸುವ ಈ ವಿಧಾನವು ಅರ್ಥವ್ಯವಸ್ಥೆಯ ಒಟ್ಟಾರೆ ಬೆಳವಣಿಗೆಯ ದರವನ್ನು ಉತ್ಪ್ರೇಕ್ಷೆಗೊಳಿಸುತ್ತದೆ.

ಸಂಘಟಿತ ವಲಯದಲ್ಲೂ ಸಹ, ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಕೆಲವು ಕಂಪನಿಗಳ ಆರ್ಥಿಕ ಕಾರ್ಯಕ್ಷಮತೆಯ ಬಗ್ಗೆ ತ್ರೈಮಾಸಿಕವಾಗಿ ಲಭಿಸುವ ಖಾಸಗಿ ವಲಯದ ಕಾರ್ಪೊರೇಟ್‌ಗಳ ದತ್ತಾಂಶವು ಸಂಘಟಿತ ವಲಯದ ಒಟ್ಟಾರೆ ಬೆಳವಣಿಗೆಯ ದರವನ್ನು ಅಳೆಯುವಲ್ಲಿ ಹೆಚ್ಚಿನ ತೂಕವನ್ನು ಹೊಂದಿದೆ ಮತ್ತು ಈ ಅಂಶವು ಜಿಡಿಪಿ ಬೆಳವಣಿಗೆಯ ದರದ ಅಂಕಿಅಂಶಗಳನ್ನು ಉತ್ಪ್ರೇಕ್ಷಿಸಿ ತೋರಿಸುತ್ತದೆ. ಕೇಂದ್ರೀಯ ಅಂಕಿಅಂಶಗಳ ಸಂಗ್ರಹಣಾ ಸಂಸ್ಥೆಗೆ(ಸಿಎಸ್‌ಒ) ಮುಕ್ತ ಅವಕಾಶ ನೀಡಿದರೆ ಮತ್ತು ಅದು ನ್ಯಾಯನಿಷ್ಠವಾಗಿ ಕಾರ್ಯನಿರ್ವಹಿಸಿದರೆ ಬೆಳವಣಿಗೆಯ ಈ ಅಂಕಿಅಂಶವನ್ನು ನಂತರ ಕೆಳಮುಖವಾಗಿ ಸರಿಹೊಂದಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೂ, ಜಿಡಿಪಿ ಬೆಳವಣಿಗೆಯ ಉತ್ಪ್ರೇಕ್ಷಿತ ಅಂಕಿ-ಅಂಶವು ಮೋದಿ ಸರ್ಕಾರದ ಪ್ರಚಾರದ ಅಗತ್ಯಗಳನ್ನು ಸದ್ಯಕ್ಕೆ ಉತ್ತಮವಾಗಿ ಪೂರೈಸುತ್ತದೆ.

ಈ ಅಂಕಿ-ಅಂಶಗಳು ಬದಲಾಗದೆ ಉಳಿದರೂ, ಗಮನಾರ್ಹವಾದ ಸಂಗತಿಯೆಂದರೆ, ಉತ್ಪಾದನಾ ವಲಯದ ಬೆಳವಣಿಗೆಯ ದರವು (ಒಟ್ಟು ಮೌಲ್ಯವರ್ಧನೆ) ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 1.3ರಷ್ಟಿದೆ. ಉತ್ಪಾದನೆಯು ವ್ಯಾಪಕ ಏರಿಳಿತಗಳಿಗೆ ಒಳಪಟ್ಟಿರುವ ಕೃಷಿ ವಲಯ (4%) ಮತ್ತು ವೇಗವಾಗಿ ಬೆಳೆದ &” ವ್ಯಾಪಾರ, ಹೋಟೆಲ್‌ಗಳು, ಸಾರಿಗೆ, ಸಂಚಾರ ಮತ್ತು ಪ್ರಸಾರ ಸಂಬಂಧಿಸಿದ ಸೇವೆಗಳು”; ಕೂಡಿದ ಸೇವಾ ವಲಯ(14%), ಇವು ಒಟ್ಟಾರೆ ಬೆಳವಣಿಗೆಯ ದರವನ್ನು ಹೆಚ್ಚಿಸಿವೆ.

ಇದನ್ನೂ ಓದಿ:ಜಿಡಿಪಿ ವೃದ್ಧಿ ದರ 8.7%, ಆದರೆ ಚೇತರಿಕೆಯ ಹಾದಿ ಇನ್ನೂ ದೂರ

ವಾಸ್ತವವನ್ನು ಮರೆಮಾಚಲಾಗದು

ಇದು ಮಹತ್ವಪೂರ್ಣವಾಗಿದೆ. ಸೇವಾ ವಲಯವು ಸಾಮಾನ್ಯವಾಗಿ ಭೌತಿಕ ಸರಕು ಉತ್ಪಾದನಾ ವಲಯಗಳಲ್ಲಿ ಉತ್ಪತ್ತಿಯಾಗುವ ಮಿಗುತಾಯ ಮೌಲ್ಯದ ಆಧಾರದ ಮೇಲೆ ಹುಲುಸಾಗಿ ಬೆಳೆಯುತ್ತದೆ. ಅದಕ್ಕಾಗಿಯೇ ಸೇವಾ ಕ್ಷೇತ್ರದಲ್ಲಿ ತೊಡಗಿರುವ ಕಾರ್ಮಿಕರನ್ನು "ಅನುತ್ಪಾದಕ ಕಾರ್ಮಿಕರು" ಎಂದು ಆಡಮ್ ಸ್ಮಿತ್ ವರ್ಗೀಕರಿಸಿದ್ದರು ಮತ್ತು ಸೋವಿಯತ್ ಒಕ್ಕೂಟ ಮತ್ತು ಇತರ ಪೂರ್ವ ಯುರೋಪಿಯನ್ ಸಮಾಜವಾದಿ ದೇಶಗಳಲ್ಲಿ, ಸೇವಾ ವಲಯದ ಉತ್ಪಾದನೆಯನ್ನು ಜಿಡಿಪಿ ಅಂದಾಜಿನಲ್ಲಿ ಸೇರಿಸುತ್ತಿರಲಿಲ್ಲ. ಇದಲ್ಲದೆ, ಸೇವಾ ವಲಯದ ಬೆಳವಣಿಗೆಯು ಹೆಚ್ಚಾಗಿ ಈ ಹಿಂದೆ ಮನೆಯೊಳಗೆ ನಡೆಸಲಾಗುತ್ತಿದ್ದ ಒಂದು ಶ್ರೇಣಿಯ ಚಟುವಟಿಕೆಗಳ ಸರಕೀಕರಣವನ್ನು ಮಾತ್ರ ಪ್ರತಿಬಿಂಬಿಸುತ್ತದೆ ಮತ್ತು ಈ ಕಾರಣದಿಂದಾಗಿ ಅದು ಚಟುವಟಿಕೆಯ ಮಟ್ಟದಲ್ಲಿ ಯಾವುದೇ ನೈಜ ಸೇರ್ಪಡೆಯನ್ನು ಪ್ರತಿಬಿಂಬಿಸುವುದಿಲ್ಲ. ಜೊತೆಗೆ, ಸೇವಾ ವಲಯದ ಉತ್ಪತ್ತಿಯನ್ನು ಅಂದಾಜು ಮಾಡುವ ಕಾರ್ಯವಿಧಾನವು ತೊಂದರೆಗಳಿಂದ ಕೂಡಿದೆ, ವಿಶೇಷವಾಗಿ ಅದರ ಅಸಂಘಟಿತ ವಿಭಾಗದಲ್ಲಿ. ಈ ಎಲ್ಲಾ ಕಾರಣಗಳಿಂದಾಗಿ, ವಿಶೇಷವಾಗಿ ತಯಾರಿಕಾ ವಲಯದ ಬೆಳವಣಿಗೆಯು ಸ್ಥಗಿತಗೊಂಡಿರುವಾಗ, ಸೇವಾ ವಲಯದ ಉನ್ನತ ಬೆಳವಣಿಗೆಯ ದರವನ್ನು ಸಂಭ್ರಮಿಸುವುದು ಸರಿಯಲ್ಲ.

ಅದಲ್ಲದೆ, ಸಂಘಟಿತ ವಲಯದ ಬೆಳವಣಿಗೆಯನ್ನು ಅಸಂಘಟಿತ ವಲಯಕ್ಕೂ ಅನ್ವಯಿಸುವ ಕ್ರಮವು ಬೆಳವಣಿಗೆಯ ವಾಸ್ತವ ದರವನ್ನು ಉತ್ಪ್ರೇಕ್ಷಿಸುತ್ತದೆ ಎಂಬ ವಾದವು ಸೇವಾ ವಲಯಕ್ಕೂ ಅರ್ಥಪೂರ್ಣವಾಗಿ ಅನ್ವಯಿಸುತ್ತದೆ. ದುಡಿಯುವ ಜನರು ಸಾಮಾನ್ಯವಾಗಿ ತಮ್ಮ ಆದಾಯವನ್ನು, ಆಹಾರವನ್ನು ಹೊರತುಪಡಿಸಿ, ತಯಾರಿಕಾ ಸರಕುಗಳ ಮೇಲೆ ಮತ್ತು ಅಸಂಘಟಿತ ಸೇವಾ ವಲಯದ ಉತ್ಪಾದನೆಗಳ ಮೇಲೆ ಖರ್ಚು ಮಾಡುತ್ತಾರೆ. ಹಾಗಾಗಿ, ಉತ್ಪಾದನಾ ವಲಯವು ಸ್ಥಗಿತಗೊಂಡಿರುವ ವಾಸ್ತವ ಮತ್ತು ಅಸಂಘಟಿತ ಸೇವಾ ವಲಯದ ಉತ್ಪತ್ತಿಯೂ ಅಷ್ಟೇನೂ ಉತ್ತಮವಾಗಿರದ ಅಂಶವು ದುಡಿಯುವ ಜನರ ಬಳಕೆಯು ಬಹಳವಾಗಿ ತಗ್ಗಿದೆ ಎಂಬುದನ್ನು ಸೂಚಿಸುತ್ತದೆ. ಅದರೊಟ್ಟಿಗೆ ಸರ್ಕಾರದ ಖರ್ಚು- ವೆಚ್ಚಗಳು ಅಕ್ಷರಶಃ ಸ್ಥಗಿತಗೊಂಡಿರುವ ಅಂಶವೂ ಸೇರುತ್ತದೆ. ಒಟ್ಟು ಸ್ಥಿರ ಬಂಡವಾಳ ಹೂಡಿಕೆ ಹೆಚ್ಚಿದೆ, ನಿಜ. ಆದರೆ ಬಳಕೆ ಮತ್ತು ನಿವ್ವಳ ರಫ್ತುಗಳು ಹಿಂದೆ ಬಿದ್ದರೆ ಹೂಡಿಕೆಯ ಬೆಳವಣಿಗೆಯನ್ನು ದಕ್ಕಿಸಿಕೊಳ್ಳುವುದು ಸಾಧ್ಯವಿಲ್ಲ.

ದುಡಿಯುವ ಜನರ ಬಳಕೆಯು ತಗ್ಗಿದೆ ಎಂಬುದು ಜಿಡಿಪಿ ಅಂಕಿ-ಅಂಶಗಳು ಬಹಿರಂಗಪಡಿಸಿರುವ ಅತ್ಯಂತ ಆತಂಕಕಾರಿ ಸಂಗತಿ. ಭಾರತವು ವಿಶ್ವದ “ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆ” ಎಂದು ಎಷ್ಟೇ ಜೋರಾಗಿ ಡಂಗುರ ಹೊಡೆದರೂ ಈ ವಾಸ್ತವವನ್ನು ಬಹುಶಃ ಮರೆಮಾಚುವುದು ಸಾಧ್ಯವಿಲ್ಲ.

ಸೇವಾವಲಯದ ಬೆಳವಣಿಗೆಯು ಹೆಚ್ಚಾಗಿ ಈ ಹಿಂದೆ ಮನೆಯೊಳಗೆ ನಡೆಸಲಾಗುತ್ತಿದ್ದ ಒಂದು ಶ್ರೇಣಿಯ ಚಟುವಟಿಕೆಗಳ ಸರಕೀಕರಣವನ್ನು ಮಾತ್ರಪ್ರತಿ ಬಿಂಬಿಸುತ್ತದೆ ಮತ್ತುಈ ಕಾರಣದಿಂದಾಗಿ ಅದು ಚಟುವಟಿಕೆಯ ಮಟ್ಟದಲ್ಲಿ ಯಾವುದೇ ನೈಜ ಸೇರ್ಪಡೆಯನ್ನು ಪ್ರತಿಬಿಂಬಿಸುವುದಿಲ್ಲ. ಜೊತೆಗೆ, ಸೇವಾವಲಯದ ಉತ್ಪತ್ತಿಯನ್ನು ಅಂದಾಜು ಮಾಡುವ ಕಾರ್ಯವಿಧಾನವು ತೊಂದರೆಗಳಿಂದ ಕೂಡಿದೆ, ವಿಶೇಷವಾಗಿ ಅದರ ಅಸಂಘಟಿತ ವಿಭಾಗದಲ್ಲಿ. ಈ ಎಲ್ಲಾ ಕಾರಣಗಳಿಂದಾಗಿ, ವಿಶೇಷವಾಗಿ ತಯಾರಿಕಾವಲಯದ ಬೆಳವಣಿಗೆಯು ಸ್ಥಗಿತಗೊಂಡಿರುವಾಗ, ಸೇವಾವಲಯದ ಉನ್ನತ ಬೆಳವಣಿಗೆಯ ದರವನ್ನು ಸಂಭ್ರಮಿಸುವುದು ಸರಿಯಲ್ಲ.

ಅದಲ್ಲದೆ, ಸಂಘಟಿತ ವಲಯದ ಬೆಳವಣಿಗೆಯನ್ನು ಅಸಂಘಟಿತ ವಲಯಕ್ಕೂ ಅನ್ವಯಿಸುವ ಕ್ರಮವು ಬೆಳವಣಿಗೆಯ ವಾಸ್ತವದರವನ್ನು ಉತ್ಪ್ರೇಕ್ಷಿಸುತ್ತದೆ ಎಂಬ ವಾದವು ಸೇವಾವಲಯಕ್ಕೂ ಅರ್ಥಪೂರ್ಣವಾಗಿ ಅನ್ವಯಿಸುತ್ತದೆ. ದುಡಿಯುವ ಜನರು ಸಾಮಾನ್ಯವಾಗಿ ತಮ್ಮಆದಾಯವನ್ನು, ಆಹಾರವನ್ನುಹೊರತುಪಡಿಸಿ, ತಯಾರಿಕಾ ಸರಕುಗಳ ಮೇಲೆ ಮತ್ತು ಅಸಂಘಟಿತ ಸೇವಾವಲಯದ ಉತ್ಪಾದನೆಗಳ ಮೇಲೆ ಖರ್ಚುಮಾಡುತ್ತಾರೆ. ಹಾಗಾಗಿ, ಉತ್ಪಾದನಾವಲಯವು ಸ್ಥಗಿತಗೊಂಡಿರುವ ವಾಸ್ತವ ಮತ್ತು ಅಸಂಘಟಿತ ಸೇವಾವಲಯದ ಉತ್ಪತ್ತಿಯೂ ಅಷ್ಟೇನೂ ಉತ್ತಮವಾಗಿರದ ಅಂಶವು ದುಡಿಯುವ ಜನರ ಬಳಕೆಯು ಬಹಳವಾಗಿ ತಗ್ಗಿದೆ ಎಂಬುದನ್ನು ಸೂಚಿಸುತ್ತದೆ. ಅದರೊಟ್ಟಿಗೆ ಸರ್ಕಾರದ ಖರ್ಚು-ವೆಚ್ಚಗಳು ಅಕ್ಷರಶಃ ಸ್ಥಗಿತಗೊಂಡಿರುವ ಅಂಶವೂ ಸೇರುತ್ತದೆ. ಒಟ್ಟು ಸ್ಥಿರಬಂಡವಾಳ ಹೂಡಿಕೆ ಹೆಚ್ಚಿದೆ, ನಿಜ. ಆದರೆ ಬಳಕೆ ಮತ್ತು ನಿವ್ವಳರಫ್ತುಗಳು ಹಿಂದೆ ಬಿದ್ದರೆ ಹೂಡಿಕೆಯ ಬೆಳವಣಿಗೆಯನ್ನು ದಕ್ಕಿಸಿಕೊಳ್ಳುವುದು ಸಾಧ್ಯವಿಲ್ಲ.

ದುಡಿಯುವ ಜನರ ಬಳಕೆಯು ತಗ್ಗಿದೆ ಎಂಬುದು ಜಿಡಿಪಿಅಂಕಿ-ಅಂಶಗಳು ಬಹಿರಂಗ ಪಡಿಸಿರುವ ಅತ್ಯಂತ ಆತಂಕಕಾರಿ ಸಂಗತಿ. ಭಾರತವುವಿಶ್ವದ “ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆ” ಎಂದು ಎಷ್ಟೇ ಜೋರಾಗಿ ಡಂಗುರ ಹೊಡೆದರೂ ಈ ವಾಸ್ತವವನ್ನು ಬಹುಶಃ ಮರೆ ಮಾಚುವುದುಸಾಧ್ಯವಿಲ್ಲ.

Donate Janashakthi Media

Leave a Reply

Your email address will not be published. Required fields are marked *