ಗುರುರಾಜ ದೇಸಾಯಿ
“ಗಾಯ” ಕಥಾ ಸರಣಿಯು ನಾಲ್ಕು ವಾರಗಳಿಂದ ಆರಂಭಗೊಂಡಿದೆ. ಪ್ರತಿ ಭಾನುವಾರು ಜನಶಕ್ತಿ ಮೀಡಿಯ ವೆಬ್ಸ್‌ಟ್‌ನಲ್ಲಿ ಪ್ರಸಾರವಾಗಲಿದೆ. ಮನಸನ್ನು ಗಾಯಗೊಳಿಸಿದ ನೈಜ ಘಟನೆಯನ್ನು ಅಕ್ಷರರೂಪಕ್ಕೆ ಇಳಿಸುವ ಪ್ರಯತ್ನ ಮಾಡಲಾಗಿದೆ. ಓದಿ ಪ್ರತಿಕ್ರಿಯೆ ನೀಡಬಹುದು. ಸಲಹೆ ಸೂಚನೆಗಳಿಗೂ ಸ್ವಾಗತ.
(ಇಲ್ಲಿಯವರೆಗೆ….ಕೆಂಚ ಮತ್ತು ಬಸ್ಯಾರ ಕೈಗೆ ಹಗ್ಗ ಕಟ್ಟಿ ಅದರ ಇನ್ನೊಂದು ತುದಿಯನ್ನು ಪಟಪಟಿಗೆ ಕಟ್ಟಿದರು. ಧಣಿ ಮುಂದೆ ಗಾಡಿ ಓಡಿಸುವಾಗ, ಕೆಂಚ, ಬಸ್ಯಾ ಗಾಡಿಯ ಹಿಂದೆ ಓಡತೊಡಗಿದರು. ಊರ ಹಿರಿಯರು ಕ್ರೌರ್ಯದ ನಗು ಬೀರುತ್ತಿದ್ದರು, ಅಯ್ಯೋ, ಅಮ್ಮಾ ಎಂದು ಅವರಿಬ್ಬರು ಹಿಂಸೆಯಿಂದ ಅರೆಚಾಡುವುದನ್ನು ನೋಡಿ ಸಂತೋಷ ಪಡುತ್ತಿದ್ದರು… ಮುಂದೆ ಓದಿ)
ಕೆಂಚ ಮತ್ತು ಬಸ್ಯಾರನ್ನು ಪಟಪಟಿ ದರದರನೇ ಎಳೆದುಕೊಂಡು ಹೋಗುತ್ತಿತ್ತು. ಹಣೆ, ಮೂಗು, ಕೈ, ಕಾಲಿನಿಂದ ರಕ್ತ ಸೋರುತ್ತಿತ್ತು. ಪೇಟೆಯ ಪೊಲೀಸ್ ಠಾಣೆ ಬರುವಷ್ಟರಲ್ಲಿ ಇವರಿಬ್ಬರು ಪ್ರಜ್ಞೆ ಕಳೆದುಕೊಂಡು ಬಿಟ್ಟಿದ್ದರು.
ರಾತ್ರಿ 9;30ರ ಸಮಯ ಪೇಟೆಯ ಅಂಗಡಿಗಳು ಬಾಗಿಲು ಹಾಕುವ ಸಮಯ. ಬೀದಿಯ ತುಂಬೆಲ್ಲ ಪಟಪಟಿಯ ಸದ್ದು. “ಇವರಿಬ್ಬರ ರಕ್ತ ಬೀದಿಗೆ ಚೆಲ್ಲಿ ರಕ್ತದ ರಂಗೋಲಿಯಾಗಿತ್ತು”. ಧಣಿಯ ಕ್ರೌರ್ಯವನ್ನು ಪೇಟೆಯ ಜನ ಬಾಯಿಯ ಮೇಲೆ ಬೆರಳಿಟ್ಟುಕೊಂಡು ನೋಡ ತೊಡಗಿದರು.
ಶಕ್ತಿ ಪತ್ರಿಕೆಯ ರಾಜಣ್ಣ ಮನೆ ಕಡೆ ಹೊರಟಿದ್ದ, ಪಟಪಟಿಯ ಸದ್ದು ಕೇಳಿ ಹಿಂದಕ್ಕೆ ತಿರುಗಿದ. ಭಯಾನಕ ದೃಶ್ಯ ಕಂಡು ಗಾಬರಿಯಾದ, ಅವರ ಮೈಮೇಲಿನ ರಕ್ತ ಕಂಡು ಮರುಗಿದ.
ಪಟಪಟಿ ಹತ್ತಿರ ಬರುತ್ತಿದ್ದಂತೆ ಅದನ್ನು ಅಡ್ಡಗಟ್ಟಿ “ ಏನ್ರಿ ಧಣಿ ಇದು?, ಇವರನ್ನ ಹಿಂಗ್ಯಾಕ ಕರ್ಕೊಂಡು ಹೊಂಟೀರಿ?, ಸುತ್ತ 10 ಹಳ್ಳಿಗೆ ನಿಮ್ಮ ತಂದ್ಯಾರು ಸಾಕಷ್ಟು ಒಳ್ಳೆ ಕೆಲ್ಸ ಮಾಡ್ಯಾರೀ, ನೀವು ಸರ್ಕಾರಿ ನೌಕ್ರ್ಯಾಗ ಇದ್ದು ಹಿಂಗ ದೌರ್ಜನ್ಯ ಮಾಡಿದ್ದು ಸರಿ ಕಾಣ್ತಿಲ್ಲ ನೋಡ್ರಿ”,……
ರಾಜಣ್ಣನ ಮಾತು ಪೂರ್ತಿ ಮುಗಿದಿರಲಿಲ್ಲ
“ಯೇ! ರಾಜಣ್ಣ, ಆ ಓಣಿಗೆ ನೀರಿಲ್ಲ, ಅಲ್ಲಿ ಕರೆಂಟ್ ಇಲ್ಲ, ಇಲ್ಲಿ ರಸ್ತೆ ಇಲ್ಲ ಅಂತ ಆ ಸುದ್ದಿಗೆ ತಲೆ ಕೆಡಿಸ್ಕೋಳ್ಳೋದು ಬಿಟ್ಟು, ಈ ಸುದ್ದಿಗೆ ನೀ ಯಾಕೋ ಬರ್ತಿ?, ಬದ್ಮಾಶ್”… ಎಂದು ಧಣಿ ಹಲ್ಲು ಕಡಿಯುತ್ತಾ ನಿಂತ.
ಇದನ್ನೂ ಓದಿ : ಗಾಯ | ಕಥಾ ಸರಣಿ – ಸಂಚಿಕೆ 03
ನೋಡ್ರಿ… ನಾನು ಅನ್ಯಾಯನ ಪ್ರಶ್ನೆ ಮಾಡೋ ಪತ್ರಕರ್ತ ಅದೀನಿ, ಕೇಳೋದು ನನ್ನ ಕೆಲಸ, ನೀವು ಹಿಂಗೆಲ್ಲ ಮಾತಾಡಬಾರ್ದು ಎಂದ ರಾಜಣ್ಣ.
ಏನ್ ರಾಜಣ್ಣ… ಎಲ್ಲಾ ನೀನ ನಿರ್ಧಾರ ಮಾಡಿದಂಗ ಕಾಣಕತ್ತೈತಿ. ನಾನು ಈ ಮಕ್ಳಿಗೆ ಶಿಕ್ಷೆ ಕೊಟ್ಟಿದ್ದು ನಿಂಗ ಅನ್ಯಾಯ ಅನ್ಸಕತ್ತೈತಿ, ಇವರು ಏನ್ ಮಾಡ್ಯಾರ ಅಂತ ಕಬರ್ ಐತನ ನಿಂಗ ಎಂದ ಧಣಿ.
ನೋಡ್ರಿ ಧಣಿ, ಇವರು ತಪ್ಪು ಮಾಡ್ಯಾರೋ… ಇಲ್ಲೋ… ಅಂತ ಹೇಳ ಉಸಾಬರಿ ನಂದಲ್ಲ್ರಿ, ನೀವೊಬ್ಬ ಓದಿರೋ ಮನುಷ್ಯ ಆಗಿ, ಮೃಗನಂಗ ನಡ್ಕೊಂಡಿರಲ್ಲ ಅದ್ಕ ನಾ ಹೇಳಕ್ಕತ್ತಿರದ. ಇವ್ರದು ತಪ್ಪಿದ್ರಾ ಪೊಲೀಸು, ಕಾನೂನು ಅಂತ ಐತಲ್ರೀ?, ಅವರು ನೋಡ್ಕೊತಿದ್ರರ್ಲಿ? ಎಂದು ರಾಜಣ್ಣ ಹೇಳಿದಾಗ, ಧಣಿ ಮರುಮಾತನಾಡದೆ, ಕೆಕ್ಕರಿಸಿ ನೋಡಿ, ಹಲ್ಲು ಕಡಿಯುತ್ತಾ, ರಾಜಣ್ಣನಿಗೆ ಕೈ ಸನ್ನೆ ಮಾಡಿ ಹೋಗ್… ಹೋಗ್… ಎಂದ.
ರಾಜಣ್ಣನನ್ನೂ ದಾಟಿ ಪಟಪಟಿ ಮುಂದೆ ಸಾಗಿತು. ಜೇಬಲ್ಲಿದ್ದ ಪೆನ್ನು ತೆಗೆದ, ಪ್ಯಾಂಟಿನ ಜೋಬಿಗೆ ಕೈ ಹಾಕಿದ, ಸಿಕ್ಕ ಕಾಗದವನ್ನು ತೆಗೆದುಕೊಂಡು ಗೀಚ ತೊಡಗಿದ. ಕಾಗದ ಬರೆದ ಮೇಲೆ ಸಮಯ ನೋಡಿಕೊಂಡ , ಓ ಇನ್ನೂ ಲಾಸ್ಟ್ ಬಸ್ ಹೋಗಿಲ್ಲ ಎಂದು ಮನಸಲ್ಲಿ ಅಂದುಕೊಂಡ. ಸ್ವಲ್ಪೊತ್ತು ಕಾದ…
ಪಾವಂ, ಪಾವಂ ಎಂದು ಬಸ್ ಕೂಗಿದ್ದನ್ನು ರಾಜಣ್ಣ ಕೇಳಿಸಿಕೊಂಡ. ನಿಲ್ಲಿಸುವಂತೆ ಕೈ ಅಡ್ಡ ಮಾಡಿದ.
“ ಯೇ ನಾಗಾರಾಜ, ರಾಜಣ್ಣ ಕೈ ಮಾಡಕತ್ತನ ಏನೋ ಸುದ್ದಿ ಕೊಡೋದು ಇರಬೇಕು, ಕೆಳಗಿಳಿದು ಕೇಳು” ಎಂದ ಡ್ರೈವರ್.
ಬಸ್ ನಿಲ್ಲುತ್ತಿದ್ದಂತೆ ಕಂಡಕ್ಟರ್ ಬಳಿ ಬಂದ ರಾಜಣ್ಣ,“ನೋಡ್ರಿ ನಾಗರಾಜರವರೇ, ಈ ಪತ್ರ ಬಹಳ ಮಹತ್ವದ್ದ ಐತಿ, ನಮ್ಮ ಕಚೇರಿಗೆ ಹೋಗಿ ಲಗೂನ ಇದನ್ನ ಕೊಡಬೇಕ ನೋಡ್ರಿ, ಹಂಗ ಜಿಲ್ಲಾಧಿಕಾರಿಗೆ ಪತ್ರನು ಬರ್ದಿನಿ, ಖುದ್ದು ಬೆಳಗ್ಗೆ ಲಗೂ ಹೋಗಿ ಅವರ ಕೈಗೆ ಇದನ್ನ ಕೊಟ್ಟು ಪೇಟೆ ಪೊಲೀಸ್ ಸ್ಟೇಷನ್ಗೆ ಬರ್ಬೇಕಂತ” ರಾಜಣ್ಣ ಹೇಳ್ಯಾನ ಅಂತ ಅವರಿಗೆ ತಿಳಸ್ಬೇಕು ಎಂದ. ನಾಗಣ್ಣ ತಲೆ ಆಡಿಸಿ ರೈಟ್… ರೈಟ್… ಎಂದು ಬಸ್ ಹಾರ್ನ್ ಮಾಡುತ್ತಾ ಮುಂದೆ ಸಾಗಿತು.
ಪಟಪಟಿ, ಪೇಟೆಯ ಠಾಣೆಯನ್ನು ಪ್ರವೇಶಿಸಿತು, ಕೆಂಚ, ಬಸ್ಯಾರನ್ನು ನೋಡಿ ಇಡೀ ಪೋಲೀಸ್ ಠಾಣೆಯೆ ಬೆಚ್ಚಿ ಬಿದ್ದಿತ್ತು. ಧಣಿ, ದಳಪತಿ, ಗೌಡ, ಶಾನುಭೋಗ ಠಾಣೆಯೊಳಗೆ ಹೊರಟರು.
ಟೇಬಲ್ ಮೇಲಿದ್ದ ಕಾಗದವನ್ನು ಕೈಗೆತ್ತಿಕೊಂಡು ದಳಪತಿ ದೂರು ಬರೆಯುತ್ತಿದ್ದ, ಕೆಂಚ, ಬಸ್ಯಾರಿಗೆ ಕುಡಿಯಲು ನೀರು ಕೊಡು ಎಂದು ಗೌಡ ಪೊಲೀಸರಿಗೆ ಕೈ ಸನ್ನೆ ಮಾಡಿದ.
“ಸಾಹೇಬ್ರು, ನಗರಕ್ಕ ಹೋಗ್ಯಾರ್ರಿ, ಎಷ್ಟ ತಡ ಆದ್ರು ಚಿಂತಿಲ್ಲ ಬಂದು ನಿಮ್ಮನ್ನ ಭೇಟಿ ಮಾಡಿ ಇವರ ಮ್ಯಾಲೆ ಕೇಸ್ ಮಾಡ್ತಾರಂತ್ರಿ” ಎಂದು ಪೇದೆಯೊಬ್ಬ ವರದಿ ಒಪ್ಪಿಸಿದ.
ನೀರು ಕೊಡಲು ಹೋಗಿದ್ದ ಪೊಲೀಸ್ ಓಡೋಡಿ ಬಂದು. “ ಅವರಿಬ್ರುಗೂ ಪ್ರಜ್ಞೆ ತಪ್ಪೈತ್ರಿ, ಎಷ್ಟ ಎಬ್ಸಿದ್ರು ಏಳವಲ್ರಿ ಹಂಗಾಗಿ ನಾನು ಡಾಕ್ಟರ್ನ ಕರ್ಕೊಂಡು ಬರ್ತಿನ್ರಿ” ಎಂದು ಪೇದೆ ಓಡತೊಡಗಿದ.
ಸ್ವಲ್ಪೊತ್ತಿನ ನಂತರ ಡಾಕ್ಟರ್ ಬಂದು ಇವರಿಬ್ಬರಿಗೆ ಚಿಕಿತ್ಸೆ ಕೊಟ್ಟರು, ಮೈಮೇಲೆ ತುಂಬಿದ್ದ ರಕ್ತದ ಕಲೆಗಳನ್ನು ಒರೆಸಿ ಮುಲಾಮು ಹಚ್ಚಿದರು. ಡಾಕ್ಟರ್ ಧಣಿ ಜೊತೆ ಸ್ವಲ್ಪೊತ್ತು ಮಾತಾಡಿ, ಬರುವುದಾಗಿ ಹೇಳಿ ಹೊರಟು ಹೋದರು.
ಇದನ್ನೂ ಓದಿ : ಗಾಯ | ಕಥಾ ಸರಣಿ – ಸಂಚಿಕೆ 04
ಯೇ! ಸಾಹೇಬ್ರು ಬಂದ್ರು… ಸಾಹೇಬ್ರು ಬಂದ್ರು… ಎಂದು ಪೇದೆಯೊಬ್ಬ ಕೂಗಿದ.
ಸಾಹೇಬ್ರು, ಒಳ ಬರುತ್ತಿದ್ದಂತೆ ಇವರೆಲ್ಲ ಎದ್ದು ನಿಂತರು.
ಬರ್ರಿ, ಒಳಗ ಕೂತು ಮಾತಾಡೋಣ ಎಂದು ಸಾಹೇಬ ತನ್ನ ಕೊಠಡಿಯೊಳಗೆ ಹೋದ, ಸಾಹೇಬರ ಹಿಂದೆ ಇವರೆಲ್ಲ ಹೋದರು.
ದಳಪತಿ ಊರಲ್ಲಿ ನಡೆದ ಘಟನೆಯನ್ನೂ, ಪತ್ರಕರ್ತ ರಾಜಣ್ಣ ಸಿಕ್ಕಿದ್ದ ವಿಚಾರವನ್ನು ಹೇಳಿದ.
ಸಾಹೇಬ ಪೇದೆಯೊಬ್ಬನನ್ನು ಕರೆದು “ಅವರಿಬ್ಬರನ್ನು ಒಳಗ ಕರ್ಕೊಂಡು ಬಾ” ಎಂದ.
ಕೆಂಚ, ಬಸ್ಯಾ ಇಬ್ಬರು ಒಳ ಬಂದಾಗ, ಇವರಿಬ್ಬರ ಸ್ಥಿತಿ ನೋಡಿ, ಸಾಹೇಬ ಹೌಹಾರಿದ.
ಧಣಿ ಎಂತ ಕೆಲ್ಸ ಮಾಡಿದ್ರಿ, ನಾನು ನಾಲ್ಕೇಟ್ ಬಾರ್ಸ್ರಿ ಅಂತ ನಿಮಗ ಹೇಳಿದ್ದೇನೋ ಖರೇ. ಆದರೆ… ನೀವು ಹಿಂಗ ರಕ್ತ ಸೋರಂಗ ಹಿಂಸೆ ಕೊಟ್ಟಿರಲ್ರಿ ಎಂದು ಸಾಹೇಬ ತಲೆ ಮೇಲೆ ಕೈಹೊತ್ತು ಕುಳಿತ.
ಸಾಹೇಬನ ಈ ವರ್ತನೆ ನೋಡಿ, ನೆತ್ತಿಗೆರಿದ್ದ ಧಣಿಯ ಕ್ರೌರ್ಯ ನಿಧಾನಕ್ಕೆ ಇಳಿಯತೊಡಗಿತು, ಕೈ ನಡುಗತೊಡಗಿದವು, ಅ.. ಅಲ್ಲ.. ಅಲ್ಲ ಸಿದ್ದಯ್ಯ ….. ಕ್ಷ, ಕ್ಷ, ಕ್ಷಮಿಸಿ ಸಾಹೇಬ್ರ ಈಗ ಏನ್ ಮಾಡೋದು ಎಂದು ಧಣಿ ಪತರಗುಟ್ಟತೊಡಗಿದ
ನೋಡ್ರಿ, ನೀವು ಸರ್ಕಾರಿ ನೌಕ್ರ್ಯಾಗ ಬೇರೆ ಅದೀರಿ, ಹಿಂಗ ರಕ್ತ ಬರಂಗ ಹೊಡ್ದೀರಿ, ಸಾಲದಕ್ಕ 10 ಕಿ.ಮೀ ಇವರನ್ನ ನಿಮ್ಮ ಪಟಪಟ ಮ್ಯಾಲೆ ಎಳ್ಕೊಂಡು ಬಂದಿರಿ. ಮೇಲಾಗಿ ಆ ರಾಜಣ್ಣ ಬೇರೆ ನೋಡ್ಯಾನ ಅಂತಿರಿ. ನಿಮ್ಮನ್ನ ಹಾಗೂ ನಿಮ್ಮ ಜೊತಿಗಿರೋ ಗೌಡ, ದಳಪತಿ, ಶಾನುಭೋಗ್ರನ್ನ ಬಚಾವ ಮಾಡದ ಬಹಳ ಕಷ್ಟ ಐತಿ ಎನ್ನುತ್ತಲೇ…
“ಯಪ್ಪ!!!!! ಸಾಹೇಬ, ಹಂಗ ಮಾಡ್ಬ್ಯಾಡೋ ನಿನ್ನ ನಂಬಿ, ಊರ ಮಂದಿ ನಂಗ ಹೆದ್ರಲಿ ಅಂತ ಹಿಂಗ ಮಾಡೀನಿ… ನೀ… ನನ್ನ ಕೈ ಬಿಟ್ರ ನನ್ನ ಮಾರ್ಯಾದಿ ಎಲ್ಲ ಮಣ್ಣಪಾಲ ಅಕ್ಕೈತಿ. ಇಲಿಗಿಂತ ಕಡಿ ಆಕ್ಕೈತೋ… ನನ್ನ ಜೀವನ”. ಎಂದು ಧಣಿ ಪೇಚಾಡ ತೊಡಗಿದ.
“ಸಮಾಧಾನ ಮಾಡ್ಕೋರಿ ಧಣಿ, ಏನ್ ಮಾಡಣ? ಅಂತ ಯೋಚಿಸೋಣ, ಈಗ ಅರಾಮ ಮಲ್ಕೋರಿ ಬೆಳಗೆ ಏನ್ ಮಾಡೋಣ ಅಂತ ವಿಚಾರಿಸೋಣ” ಎಂದ ಸಾಹೇಬ ಎದ್ದು ಹೊರಟ. ಪೇದೆಯೊಬ್ಬನಿಗೆ ಈ ನಾಲ್ವರಿಗೆ ಜಮಖಾನೆ ಕೊಡಲು ಹೇಳಿ ಹೋದ. ಠಾಣೆಯ ಹೊರಗಿನ ಜಾಗದಲ್ಲಿ ಜಮಖಾನಿ ಹಾಸ್ಕೊಂಡು ನಾಲ್ಕು ಜನ ಮಲಗಲು ಸಿದ್ದರಾದರು.
“ಧಣಿ ಆಕಾಶದ ಕಡೆ ಮುಖ ಮಾಡಿ ನಕ್ಷತ್ರಗಳನ್ನು ನೋಡುತ್ತಾ ನಿಂತ, ನಕ್ಷತ್ರದ ಬದಲಾಗಿ ರಾಜಣ್ಣನ ಮುಖ ಕಾಣತೊಡಗಿತು. ಈ ಹಾಳಾದ ರಾಜಣ್ಣ ಒಬ್ನು ಕಾಣಲಿಲ್ಲ ಅಂದಿದ್ರ ಅದರ ಕತಿ ಬ್ಯಾರೇನ ಅಕ್ಕಿತ್ತು ನೋಡ” ಎಂದು ಮನಸಲ್ಲಿ ಚಡಪಡಿಸಿದ.
ಧಣಿಗೆ ನಿದ್ದೆ ಬಾರಲೇ ಇಲ್ಲ, ಆ ಕಡೆ ಈ ಕಡೆ ಒದ್ದಾಡುತ್ತ ನಿದ್ದೆಗೆ ಜಾರಿದ.
ಮುಖಕ್ಕೆ ಏನೋ ಬಿದ್ದಂತಾಗಿ ಎಚ್ಚರಗೊಂಡು ನೋಡಿದ. “ಶಕ್ತಿ” ದಿನಪತ್ರಿಕೆ….
ಗಾಬರಿಯಾಗಿ ಎದ್ದು ಮುಖಪುಟ ತೆರೆದ “ ದಲಿತರ ರಕ್ತ ಕುಡಿದ ಧಣಿ” ಎಂಬ ತಲೆ ಬರಹ ನೋಡಿ ಹೌಹಾರಿದ. ಜೊತೆಗಿದ್ದವರನ್ನು ಎಬ್ಬಿಸಿ ಪತ್ರಿಕೆ ತೋರಿಸಿದ.
“ಏ… ರಾಜ್ಯಾ…. ನಿನ್ನ ಬುದ್ದಿ ತೋರ್ಸಿ ಬಿಟ್ಯಲ್ಲಾ? ಮಗನಾ” ಎಂದು ಧಣಿ ಹಲ್ಲು ಕಡಿಯುತ್ತಾ ಕುಳಿತ.
(ಮುಂದುವರೆಯುವುದು…..)
ಈ ವಿಡಿಯೋ ನೋಡಿ : ವೃತ್ತಿ ರಂಗಭೂಮಿ ಉಳಿಯಬೇಕು, ಕಲಾವಿದರ ಗೋಳನ್ನು ಸರ್ಕಾರ ಕೇಳಬೇಕು