ಗಾಯ ಕಥಾ ಸರಣಿ | ಸಂಚಿಕೆ 10 – ಕ್ರೌರ್ಯ ಮೆರೆದ ಧಣಿಗೆ ಮಾನವೀಯತೆಯ ಪಾಠ

ಗುರುರಾಜ ದೇಸಾಯಿ
(ಇಲ್ಲಿಯವರೆಗೆ….  ಶೇಂಗ ಕದ್ದರೆಂದು ಊರ ಧಣಿ ಶಿಕ್ಷೆ ಕೊಟ್ಟಿದ್ದು ಸರಿಯಾದ ಕ್ರಮವಲ್ಲ, ಇವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಡಿಸಿ ಸಾಹೇಬರು ಹೇಳಿದಾಗ ಧಣಿ  ಪೂರ್ತಿ ಹೆದರಿಕೊಂಡಿದ್ದ,  ದೌರ್ಜನ್ಯ ನಡೆಸುವ ಅಧಿಕಾರ ನಿಮಗೆ ಕೊಟ್ಟವರು ಯಾರು ಎಂದು ದಬಾಯಿಸಿದ್ದರು. ಮುಂದೆ ಓದಿ) ಗಾಯ

ಹೊರಗಡೆ ನಿಂತಿದ್ದ ಬಸ್ಯಾ ಮತ್ತು ಕೆಂಚರ ತಂದೆ ತಾಯಿಯನ್ನು ಡಿಸಿಯವರ ಸಹಾಯಕ ಒಳಗಡೆ ಕರೆದುಕೊಂಡು ಬಂದ.

ಸರ್‌, ಬಂದಾರ್‌ ನೋಡ್ರಿ… ಎಂದು ಸೆಲ್ಯೂಟ್‌ ಮಾಡಿ ಆಚೆಕಡೆ ಹೋದ.

ಈ ನಾಲ್ವರನ್ನು ನೋಡಿದ ಡಿಸಿ, ನೀವು ಧೈರ್ಯವಾಗಿರಿ, ಹೆದರುವ ಅಗತ್ಯವಿಲ್ಲ. ನಿಮ್ಮೂರಿನ ಹಿರಿಯರು ಎನಿಸಿಕೊಂಡ ಧಣಿ, ದಳಪತಿ, ಶಾನುಭೋಗ, ಗೌಡ ಈ ನಾಲ್ಕು ಜನ  ನಿಮ್ಮ ಮಕ್ಕಳಿಗೆ ಹಿಂಸೆ ನೀಡಿ ಹೊಡೆದಿದ್ದಾರೆ. ನೀವು ಧೈರ್ಯವಾಗಿ ಇವರ ವಿರುದ್ದ ದೂರು ಕೊಡಬಹುದು ಎಂದರು ಡಿಸಿ. ದೇವ್ಯಾ, ಮಲ್ಯಾ, ಭರ್ಮವ್ವ, ದೇವವ್ವ ಒಬ್ಬರನೊಬ್ಬರು ಪರಸ್ಪರ ನೋಡಿಕೊಂಡರು.

ಎರಡು ನಿಮಿಷ ಮೌನ ಆವರಿಸಿತ್ತು. ಡಿಸಿ ನಾಲ್ವರತ್ತ ಮುಖ ಮಾಡಿ, ನೋಡಿ ನಿಮಗೆ ಬೇಕಾದ ಸಪೋರ್ಟ್‌ ನಾನು ಮಾಡ್ತಿನಿ, ನ್ಯಾಯ ನಿಮ್ಮ ಪರ ಇದೆ. ಅದು ನೀವು ಪಡ್ಕೋಬೇಕು ಅಂದ್ರೆ ದೂರು ಕೊಡಬೇಕು. ಏ!!!! ಪಿಸಿ ಅವರಿಗೆ ಪೇಪರ್‌ ಪೆನ್ನು ಕೊಡು ಎಂದರು ಡಿಸಿ ಸಾಹೇಬರು.

ಸಾರ್‌… ನಾವು… ಸಾಲಿ …. ಕಲ್ತಿಲ್ರೀ… ನಮ್ಮ …. ಹೆಸರ…… ಬರೆಯದ ಆಟ ಗೊತ್ತಿರೋದ್ರಿ…. ನಮಗಾ…. ಎಂದು ಹೆದರುತ್ತಲೇ…..  ಮಲ್ಯಾ ಉತ್ತರ ನೀಡಿದ.

ಇವರು ದೂರು ಕೊಡಲು ಹಿಂದೇಟಾಕುತ್ತಿರುವುದನ್ನು ಗಮನಿಸಿದ ಡಿಸಿ ಸಾಹೇಬರು, ಪೇದೆಯೊಬ್ಬನನ್ನು ಕರೆದು, ಕೆಂಚ ಮತ್ತು ಬಸ್ಯಾರನ್ನು ಕರೆದುಕೊಂಡು ಬರಲು ಹೇಳಿದರು. ಪೇದೆ ಕೆಂಚ ಮತ್ತು ಬಸ್ಯಾರನ್ನು ಕರೆ ತಂದ

ಕೆಂಚ ಮತ್ತು ಬಸ್ಯಾ ಕುಂಟುತ್ತಾ, ಕಾಲು ಎಳೆದುಕೊಂಡು ಬಂದರು, ಗಾಯದಿಂದಾಗಿ ಅವರ ಮುಖ ರಕ್ತಸಿಕ್ತವಾಗಿತ್ತು. ಉಟ್ಟಿದ್ದ ಬಟ್ಟೆಗಳು ಅಲ್ಲಲ್ಲಿ ಹರಿದುಹೋಗಿದ್ದರಿಂದ, ಆ ತೂತುಗಳಲ್ಲಿ ದೇಹದ ತುಂಬೆಲ್ಲ ಅಂಟಿದ್ದ ರಕ್ತದ ಕಲೆಗಳು ಕಣ್ಣಿಗೆ ಕಾಣಿಸುತ್ತಿದ್ದವು.

ಈ ದೃಶ್ಯ ಕಂಡ ಭರ್ಮವ್ವ ಹಾಗೂ ದೇವವ್ವರ ಕಣ್ಣಿಂದ ನೀರು ಹರಿದು ಬಂತು, ಡಿಸಿ ಸಾಹೇಬರು ಏನಾದರೂ ಅಂದಾರು ಎಂದುಕೊಂಡು ಸೆರಗಿನಿಂದ ಕಣ್ಣೀರು ಒರಸಿಕೊಂಡರು.  ಇವರಿಗೆ ಗೊತ್ತಾಗದಂತೆ ಡಿಸಿ ಇತ್ತ ಕಡೆ ಕಣ್ಣು ಹಾಯಿಸಿದ್ದರು.

ಕೆಂಚ ಮತ್ತು ಬಸ್ಯಾರನ್ನು ನೋಡಿದ ಡಿಸಿ ಸಾಹೇಬರು ಇಬ್ಬರ ಆರೋಗ್ಯವನ್ನು ವಿಚಾರಿಸಿ, ನಿಮ್ಮ ಅಪ್ಪ ಅಮ್ಮ ಯಾಕೋ ದೂರು ಕೊಡುವ ಧೈರ್ಯ ಮಾಡ್ತಿಲ್ಲ, ನೀವು ದೂರು ಕೊಡೋದಕ್ಕೆ ಸಿದ್ದ ಆಗಿದ್ರೆ ಕೇಸ್‌ ಮಾಡೋಣ ಎಂದರು ಡಿಸಿ ಸಾಹೇಬರು.

ಕೆಂಚ ಮತ್ತು ಬಸ್ಯಾ ಪರಸ್ಪರ ಮುಖ ನೋಡಿಕೊಂಡರು, ಮತ್ತೊಮ್ಮೆ ತಮ್ಮ ತಂದೆ ತಾಯಿಯರತ್ತ ಮುಖ ಮಾಡಿದರು. ಕೆಂಚ ಮತ್ತು ಬಸ್ಯಾರಿಗೆ ಅರ್ಥವಾಗುವಂತೆ ಭರ್ಮವ್ವ ತಲೆ ಅಲ್ಲಾಡಿಸಿದಳು.

ನೀವು ಧೈರ್ಯವಾಗಿ ಇರಿ, ನಿಮ್ಮೂರ ಹಿರಿಯರಿಂದ ಏನೂ ತೊಂದರೆ ಆಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಆ ಭರವಸೆನಾ ನಾನು ಕೊಡಬಲ್ಲೆ. ನೀವು ದೂರು ಕೊಡಿ ಎಂದರು ಡಿಸಿ ಸಾಹೇಬರು.

ಇದನ್ನೂ ಓದಿ : ಗಾಯ ಕಥಾ ಸರಣಿ – ಸಂಚಿಕೆ 8 | ಲಾಠಿಗಿಂತ ಪೆನ್ನಿನ ತಾಕತ್ತು ದೊಡ್ಡದು!

ಆರು ಜನ ಪರಸ್ಪರ ಮುಖ ನೋಡಿಕೊಂಡರು, ಮಲ್ಯಾ ಮತ್ತು ದೇವ್ಯಾ ಪರಸ್ಪರ ಮಾತನಾಡಿಕೊಂಡು ಡಿಸಿ ಸಾಹೇಬರ ಜೊತೆ ಮಾತನಾಡಲು ಧೈರ್ಯ ತೋರಿದರು.

ಸಾಹೇಬರ, ದೂರು ಕೊಡೋದು ದೊಡ್ಡಮಾತು ಅಲ್ಲಾರಿ, ನಮ್ಮೂರ ಧಣಿ, ದಳಪತಿ, ಗೌಡ, ಶಾನುಭೋಗ ತಪ್ಪು ಮಾಡ್ಯಾರ ಅಂತ ನಮಗೂ ಗೊತ್ತೈತ್ರಿ, ನಮ್ಮನ್ನ ಕಾಪಾಡಕ ಕಾನೂನು ಐತಿ ಅಂತ ನೀವು ಧೈರ್ಯ ಕೊಡಕತ್ತೀರಿ ನಮಗ ಅದು ಖುಷಿ ಕೊಟ್ಟೈತ್ರಿ ಸಾಹೇಬರ… ಎಂದು ದೇವ್ಯಾ ಮಾತನ್ನು ಪೂರ್ಣಗೊಳಿಸಿರಲಿಲ್ಲ… ಗಾಯ

ಮತ್ಯಾಕೆ ತಡ ಮಾಡ್ತೀರಿ, ದೂರು ಕೊಟ್ಟು ಬಿಡಿ, ನಿಮ್ಮೂರ ಹಿರಿಯರ ಸೊಕ್ಕು ಹೇಗೆ ಇಳಿಸೋದು ಅಂತ ನನಗೆ ಗೊತ್ತು ಎಂದರು ಡಿಸಿ ಸಾಹೇಬರು…

ಇಲ್ರಿ…. ಸಾಹೇಬ್ರ ನಾವು ದೂರು ಕೊಟ್ಟರ ಅವರು ಜೈಲಿಗೆ ಹೋಗ್ತಾರ ಖರೆ, ಹಂಗಂತ ನಮ್ಮ ಮ್ಯಾಲೆ ನಡೆಯೋ ದೌರ್ಜನ್ಯ, ಶೋಷಣೆ ಏನೂ…. ನಿಂತು ಹೋಗಲ್ರೀ… ಅದು ನಡೀತಾನ ಇರ್ತೈತ್ರಿ ಎಂದ ಮಲ್ಯಾ.

ನೀವು ನಿರಾಶೆ ಆಗಿದ್ದೀರಾ…., ಆದರೆರ ಅದು ಅಂತಿಮ ಅಲ್ಲ, “ಉಪ್ಪು ತಿಂದೋನು ನೀರು ಕುಡಿಯಲೇ ಬೇಕು”, ನಾ ಹೇಳೋದು ಕೇಳಿ ದೂರು ಕೊಟ್ಟು ಬಿಡಿ ಎಂದರು ಡಿಸಿ ಸಾಹೇಬರು.

ಸಾಹೇಬ್ರ, ನಿಮ್ಮ ಕಾಳಜಿ ನಮ್ಮನ್ನ ಕಾಪಾಡುತ್ರೀ, ನಾವು ದೂರು ಕೊಡಾಕ ಹೆದ್ರತಿಲ್ರೀ…, ಊರ ಮರ್ಯಾದಿ ಬಗ್ಗೆ ಯೋಚನೆ ಮಾಡಕತ್ತಿವ್ರೀ… ನಾವು ಕೀಳ ಜನ ಇರಬಹುದ್ರಿ ಆದ್ರ ಕೀಳಾಗಿ ಯೋಚನೆ ಮಾಡಂಗಿಲ್ರಿ‌… ಎಂದಳು ಭರ್ಮವ್ವ.

ಭರ್ಮವ್ವಳ ಮಾತು ಧಣಿಯ ಎದೆಗೆ ಚಾಕುವಿನಿಂದ ಚುಚ್ಚಿದ ಹಾಗಾಯ್ತು, ಎದೆ ಮುಟ್ಟಿ ಕೊಳ್ಳುತ್ತಾ ಡಿಸಿ ಸಾಹೇಬರ ಕಡೆ ಕಣ್ಣು ಹಾಯಿಸಿದ ಧಣಿ. ನೋಡ್ರಿ!!!! ಮಿ. ಪ್ರತಾಪ್‌… ಇವರು ಓದದೆ ಇರಬಹುದು, ಆದರೆ ಎಷ್ಟು ಪ್ರಬುದ್ಧರು ಇದ್ದಾರೆ ನೋಡಿ, ಇವರು ನಿಮ್ಮ ವಿರುದ್ದ ದೂರು ಕೊಡ್ತಾರೆ ಅಂತ ಇವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ದೂರು ಕೊಡೋದಕ್ಕೆ ತಯಾರಿ ಮಾಡ್ಕೊಂಡಿದ್ರಿ, ಆದರೆ ಇವರು ನಿಮ್ಮ ವಿರುದ್ಧ ದೂರು ಕೊಟ್ರೆ ಊರ ಮರ್ಯಾದೆ ಹೋಗುತ್ತೆ ಅಂತ ಯೋಚಿಸ್ತಿದ್ದಾರೆ. ಈ ಪ್ರೀತಿ ನಿಮ್ಮ ಕಣ್ಣಿಗೆ ಯಾವತ್ತು ಕಾಣಲೇ ಇಲ್ವಾ??? ಎಂದು ಡಿಸಿ ಸಾಹೇಬರು ಧಣಿಯನ್ನು ದಬಾಯಿಸಿದರು. ಧಣಿ ಡಿಸಿ ಸಾಹೇಬರಿಗೆ ಉತ್ತರಿಸದೆ ತಲೆ ತಗ್ಗಿಸಿ ನಿಂತುಕೊಂಡಿದ್ದ.

ಸಾಹೇಬ್ರ…. ಅಷ್ಟು ದೊಡ್ಡ ದೊಡ್ಡ ಮಾತು ಬ್ಯಾಡ್ರಿ, ನಾವು ಕೊಡೊ ದೂರಿಂದ ಹತ್ತೂರಿಲ್ಲಿ ಈ ನಾಲ್ಕು ಮಂದಿ ಮಾನ ಹೋಕ್ಕೈತ್ರಿ…. ಆಗ ತಪಗಲೂರನ್ನು ಆಡ್ಕೊಂಡು ಜನ ನಗ್ತಾರ ನೋಡ್ರಿ…. ಇಷ್ಟು ದಿನ ಊರಿಗೆ ನಾವು ಏನೂ ಕೆಟ್ಟದು ಮಾಡಿಲ್ರೀ…, ಊರು ಸ್ವಚ್ಚ ಮಾಡಿ ನಾಲ್ಕು ಮಂದಿ ನೋಡಂಗ ಮಾಡೀವ್ರಿ… ಈಗ ನಮ್ಮೂರು ಮರ್ಯಾದಿ ನಾವ ತೆಗಿಯಂಗಿಲ್ರೀ… ಹಂಗಾಗಿ ನಾವು ರಾಜೀ ಆಗ್ತಿವ್ರಿ ಎಂದ ದೇವ್ಯಾ, ಭರ್ಮವ್ವ, ದೇವವ್ವ ಮತ್ತು ಮಲ್ಯಾ ಇದಕ್ಕೆ ಹೌದು ಎಂದು ತಲೆ ಆಡಿಸಿದರು. ನೋಡ್ರಿ!!!! ಮಿ. ಪ್ರತಾಪ್‌ ಇವರು ಎಷ್ಟು ಹೃದಯವಂತರು. ಇವರು ಊರನ್ನಷ್ಟೆ ಅಲ್ಲ, ನಿಮ್ಮಂತವರ ಮನಸ್ಥಿತಿಯನ್ನು ಸ್ವಚ್ಛ ಮಾಡಿದ್ರು. ಅವರಿಗೆ ಅವರ ಹಕ್ಕಿನ ಬಗ್ಗೆ ಗೊತ್ತಿದ್ರು, ಊರ ಧಣಿಯ ಮಾನ ಮುಖ್ಯ ಅಂತ ಯೋಚಿಸ್ತಾ ಇದ್ದಾರೆ. ನೀವು ನೋಡಿದ್ರೆ ನಾಲ್ಕು ಸೇರು ಶೇಂಗಾವನ್ನು ನಿಮಗೆ ಹೇಳದೆ ತೊಗೊಂಡ್ರು ಅಂತ ರಕ್ತ ಚಿಮ್ಮೋತರ ಹೊಡೆದಿದ್ದೀರಿ. ದೂರು ಕೊಡದೆ ಅವರು ದೊಡ್ಡವರು ಆದ್ರು, ಅವರಿಗಾದ ಗಾಯ ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದರು ಡಿಸಿ ಸಾಹೇಬರು.

ಇದನ್ನೂ ಓದಿ: ಗಾಯ ಕಥಾ ಸರಣಿ – ಸಂಚಿಕೆ 09 | ಶಿಕ್ಷೆ ಕೊಡೋಕೆ ನೀವು ಯಾರು? ಡಿಸಿ ಸಾಹೇಬನ ಪ್ರಶ್ನೆಗೆ ಧಣಿ ತಬ್ಬಿಬ್ಬು!

ಸಾಹೇಬ್ರ ಇನ್ನೊಂದು ಮಾತ್ರೀ…, ಇನ್ಮುಂದ ನಾವು ಇವರ ಹೊಲ್ದಾಗ ಕೆಲಸ ಮಾಡಲ್ಲರಿ, ಉಪವಾಸ ಇದ್ರು ಚಿಂತಿಲ್ಲ, ನಮಗೆ ಮರ್ಯಾದಿ ಮುಖ್ಯಾರೀ…, ನಾವು ಕೆಲಸಕ್ಕೆ ಬರಲ್ಲ ಅಂತ ಮತ್ತೆ ಇವರು ನಮಗ ಹಿಂಸೆ ಕೊಟ್ಟರ… ನಾವು ಪ್ರಾಣಾನ ಕಳ್ಕೋತೀವಿರಿ… ಎಂದಳು ದೇವವ್ವ.

ಸ್ವಲ್ಪ ಹೊತ್ತು ಮೌನ ಆವರಿಸಿತು…. ಗಾಯ

ಅಂತಿಮವಾಗಿ ಇಬ್ಬರ ಮಾತುಗಳನ್ನು ಪರಸ್ಪರ ಚರ್ಚಿಸಿದ ಡಿಸಿ ಸಾಹೇಬರು, ಧಣಿ, ದಳಪತಿ, ಶಾನುಭೋಗ ಹಾಗೂ ಗೌಡನಿಗೆ ಎಚ್ಚರಿಕೆ ಕೊಟ್ಟರು, ಕೆಂಚ, ಬಸ್ಯಾರ ಹೆಗಲನ್ನು ಸವರಿ, ಮಲ್ಯಾ, ದೇವ್ಯಾ, ಭರ್ಮವ್ವ, ದೇವವ್ವರಿಗೆ ಧೈರ್ಯ ನೀಡಿ ಹೊರಟು ಹೋದರು. ಅಷ್ಟೋತ್ತಿಗೆ ಅವರ ಸಹಾಯಕ ಒಂದು ಪತ್ರವನ್ನು ತಂದು ಕೊಟ್ಟನು.

ನೋಡ್ರಿ…. ಮಿ. ಪ್ರತಾಪ್‌, ಈ ಪತ್ರ ತೊಗೊಳ್ಳಿ, ಇನ್ನಾದರೂ ಬುದ್ಧಿ ಕಲಿಯಿರಿ, ಧಣಿ ಅಂತ ದೌರ್ಜನ್ಯ, ದಬ್ಬಾಳಿಕೆ ಮಾಡಿದ್ರೆ ಕಾನೂನಿಂದ ನಿಮ್ಮನ್ನು ಯಾರೂ ತಪ್ಪಿಸೋಕೆ ಆಗಲ್ಲ ಎಂದು ಪತ್ರವನ್ನು ಧಣಿಯ ಕೈಗಿತ್ತರು ಡಿಸಿ ಸಾಹೇಬರು.

ಪತ್ರವನ್ನು ತೆರೆದು ಓದಿದ ಧಣಿ ತಲೆಯ ಮೇಲೆ ಕೈ ಹೊತ್ತು ಕುಳಿತ, ಬಸ್ಯಾ, ಕೆಂಚ, ಅವರ ತಂದೆ ತಾಯಿ ಠಾಣೆಯ ಎದುರಿಗಿದ್ದ ಹೋಟೆಲ್‌ನತ್ತ ಧಾವಿಸಿದರು.

 

(ಮುಂದುವರೆಯುವುದು……)

ಈ ವಿಡಿಯೋ ನೋಡಿದುಡಿವ ಜನರ ಮಹಾಧರಣಿ ಹೇಗಿತ್ತು? ಮೂರು ದಿನಗಳ ಕಾಲ ಅಲ್ಲಿ ಏನು ನಡೆಯಿತು. ವಿಶೇಷ ಸುದ್ದಿ Janashakthi Media

 

Donate Janashakthi Media

Leave a Reply

Your email address will not be published. Required fields are marked *