ಗುರುರಾಜ ದೇಸಾಯಿ
(ಗಾಯ ಇಲ್ಲಿಯವರೆಗೆ…… ಪೊಲೀಸ್ ಠಾಣೆಗೆ ಬಂದ ಕೆಂಚ ಮತ್ತು ಬಸ್ಯಾರ ತಂದೆ ತಾಯಿ ಅಲ್ಲಿಯ ದೃಶ್ಯಕಂಡು ಭಯಭೀತರಾದರು, ರಕ್ತ ಕುದಿಯುತ್ತಿದ್ದರು, ಪೊಲೀಸರು ಹಾಗೂ ಧಣಿ ಎದರು ಮಾತನಾಡುವ ಶಕ್ತಿ ಅವರಿಗೆ ಇರಲಿಲ್ಲ, ಇವರ ಬಡತನವನ್ನೆ ಮುಂದೆ ಮಾಡಿ ಸಾಹೇಬ ಇವರನ್ನು ಹೆದರಿಸಿದ, ಆಗ ಅವರಿಗೆ ಪ್ರಪಂಚವೆ ತಲೆಯಮೇಲೆ ಬಿದ್ದಂತೆ ಆಗಿತ್ತು. ಮುಂದೆ ಓದಿ )
ಮಕ್ಕಳನ್ನು ಉಳ್ಸ್ಕೋಬೇಕು, ಧಣಿ ಕಡೆಯಿಂದನಾ ತಪ್ಸಕೋಬೇಕು ಎಂಬ ಸಂದಿಗ್ಧ ಸ್ಥಿತಿ ಈ ನಾಲ್ವರದ್ದಾಗಿತ್ತು. ಡಿಸಿ ಸಾಹೇಬ ಬಂದಾಗ ಏನ್ ಹೇಳ್ಬೇಕು? ಎನ್ನುವ ಯೋಚನೆಯಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು.
ಸ್ವಲ್ಪ ಸಮಯದ ನಂತರ ಪತ್ರಕರ್ತ ರಾಜಣ್ಣ ಠಾಣೆಗೆ ಬಂದ. ಬಂದವನೇ ಠಾಣೆಯ ಆವರಣದ ಸುತ್ತ ಕಣ್ಣು ಹಾಯಿಸಿದ. ಕೆಂಚ ಮತ್ತು ಬಸ್ಯಾರ ಅಪ್ಪ, ಅಮ್ಮ ಇದ್ದ ಜಾಗಕ್ಕೆ ಬಂದ.
ಯಾಕ ಹಿಂಗ ಕುಂತಿರಪಾ, ಗಾಬ್ರಿಯಾಗಿ! ಏನಾಯ್ತು? ಎಂದ ರಾಜಣ್ಣ.
ಬರ್ರಿ ರಾಜಣ್ಣ, ಅಡ ಕತ್ರಿನ್ಯಾಗ ಅಡಕಿ ಸಿಕ್ಕಂಗ ಆಗೈತ್ರಿ ನಮ್ಮ ಬಾಳೇವು, ಬಡವರಾಗಿ ಹುಟ್ಬಾರ್ದ್ರಿ ಯಪ್ಪ ಎಂದ ದೇವ್ಯಾ…
ಯಾಕ ದೇವಣ್ಣ? ಪೊಲೀಸ್ರೇನು ಹೆದ್ರಿಸಿದ್ರಾ? ಏನ್ ಮಲ್ಲಣ್ಣ ಹೇಳ್ರಿ ಹಂಗೇನಾದ್ರು ಇದ್ರ, ಡಿಸಿ ಸಾಹೇಬರ ಹತ್ರ ನಾನು ಮಾತಾಡ್ತಿನಿ ಎಂದ ರಾಜಣ್ಣ.
ಹಂಗೇನಿಲ್ರಿ ರಾಜಣ್ಣ, ಅದು… ಎಂದು ದೇವವ್ವ ನಡೆದ ವಿಷಯ ಹೇಳಲು ಮುಂದಾದಾಗ ಭರ್ಮವ್ವ ಆಕೆಯ ಸೀರೆಯ ಚುಂಗನ್ನು ಜಗ್ಗಿ, ಸುಮ್ಮನಿರು ಎಂದು ಕಣ್ಣಲ್ಲಿ ಸನ್ನೆ ಮಾಡಿದಳು.
ಇವರೋ ಏನೋ ಮುಚ್ಚಿಡುತ್ತಿದ್ದಾರೆ, ಪೊಲೀಸರು ಕೇಸ್ ಮಾಡದಂತೆ ಹೆದರಿಸಿದ್ದಾರೆ ಎಂಬುದನ್ನು ರಾಜಣ್ಣ ಗ್ರಹಿಸಿದ. ನೋಡ್ರಿ….. ನಿಮ್ಮ ನಡವಳಿಕಿ ನೋಡಿದ್ರ ಅಲ್ಲಿ ಏನ್ ನಡದೈತಿ ಅನ್ನೋದು ನಂಗ ಗೊತ್ತಾತು. ಅವ್ರು ನಿಮ್ಮನ್ನ ಎಷ್ಟ ಹೆದ್ರಸಲಿ, ಕಾನೂನು ಐತಿ, ತಪ್ಪು ಮಾಡಿದ್ದು ಅವರು, ಅವರು ಹೆದರಬೇಕು, ನೀವಲ್ಲ…. ಎಂದು ರಾಜಣ್ಣ ಧೈರ್ಯ ನೀಡಲು ಮುಂದಾದ.
ರಾಜಣ್ಣರ ನೀವು ತಿಳ್ದೋರ ಅದಿರಿ, ಇಂತಾವೆಲ್ಲ ದಿನ ನೋಡಿರ್ತಿರಿ, ನೀವು ಹೇಳಿದಂಗ ಕೇಳೊ ಸ್ಥಿತಿ ನಮಗಿಲ್ರಿ ಯಪ್ಪ… ಎಂದು ಮಲ್ಯಾ ತೇವವಾಗಿದ್ದ ಕಣ್ಣುಗಳನ್ನು ಒರಸಿಕೊಂಡ.
ಯೇ!!!! ಮಲ್ಲಣ್ಣ ಯಾಕ ಅಳ್ತೀ? ನಾನು ನಿಮ್ಮ ಜೊತಿಗೆ ಅದೀನಿ, ನೀವು ಡಿಸಿ ಸಾಹೇಬ್ರ ಹತ್ರ ಧೈರ್ಯವಾಗಿ ಮಾತಾಡ್ರಿ, ಮುಂದಿಂದು ನಾನು ನೋಡ್ಕೋತಿನಿ ಎಂದ ರಾಜಣ್ಣ.
ನಿಮ್ಮ ಋಣ ಹೆಂಗ ತೀರ್ಸದು ಅಂತ ಗೊತ್ತಿಲ್ರಿ ರಾಜಣ್ಣ. ಏನರ ಮಾಡಿ ಈ ಘಟ್ನಿನಾ ಮುಚ್ಚಿ ಹಾಕಾಕ ಹೊಂಟಿದ್ರು, ನೀವು ನೋಡಿ ನೂರಾರು ಮಂದಿಗೆ ಗೊತ್ತಾಗಂಗ ಮಾಡಿದ್ರಿ, ಇಲ್ಲ ಅಂದಿದ್ರ ಇವರೆಲ್ಲ ಸೇರಿ ನಮ್ಮ ಚರ್ಮ ಸುಲ್ದು ನಮ್ಮ ಮಕ್ಕಳ್ನ ಜೈಲಿಗೆ ಅಟ್ಟತಿದ್ರು. ನೀವು ನಮ್ಮ ಜೊತೆ ನಿಲ್ತೀನಿ ಅಂತ ಹೇಳಿರಲ ಅಷ್ಟ ಸಾಕು ನಮಗ… ಎಂದಳು ಭರ್ಮವ್ವ. ಗಾಯ
ಇದನ್ನೂ ಓದಿ : ಗಾಯ ಕಥಾ ಸರಣಿ – ಸಂಚಿಕೆ ; 06 – ಕ್ರೌರ್ಯ ಮೆರೆದಿದ್ದ ಧಣಿ, ಪೊಲೀಸ್ ಠಾಣೆಯಲ್ಲಿ ಬೆವತು ಹೋಗಿದ್ದ!
ಅಷ್ಟರಲ್ಲಿ ಟೀ ಕುಡಿಯಲು ಹೋಗಿದ್ದ ಸಾಹೇಬನ ಜೀಪಿನ ಶಬ್ದ ಕೇಳಿತು, ಇವರ ಮುಂದೆಯೆ ಬರ್ರ್… ಎಂದು ಹೋಯಿತು. ನಾಲ್ಕು ಜನ ತಲೆ ತಗ್ಗಿಸಿ ಕುಳಿತರು, ಎದ್ದೇಳ್ರಿ!!! ತಲೆ ಎತ್ತಿ ನಿಂತ್ಕೋರಿ! ಎಂದು ರಾಜಣ್ಣ ಕೈ ಸನ್ನೆ ಮಾಡಿದ.
ಜೀಪ್ನಿಂದ ಕೆಳಗಿಳಿದ ಸಾಹೇಬ, ರಾಜಣ್ಣನ ಕಡೆ ನೋಡಿ, ಏನು? ಪತ್ರಕರ್ತರು ಈ ಕಡೆ ಬಂದಿರಿ? ಬರ್ರಿ ಒಳಗ ಕುಂದರ್ರಿ… ಎಂದು ಕರೆದರು.
ಇರ್ಲಿ… ಸರ್, ನಾ ಒಳಗ ಬರಂಗಿಲ್ಲರಿ, ಇಲ್ಲೇ ಇವರ ಜೊತೆ ಮಾತಾಡೋದೈತಿ, ಮಾತಾಡ್ತಿನ್ರಿ. ಮಾತಾಡ್ರಿ… ಮಾತಾಡ್ರಿ, ಆದ್ರ… ಅವರ ತೆಲಿ ಕೆಡಸಬ್ಯಾಡ್ರಿ. ನೀವು… ಅವರ ಜೊತೆ ಒಂದು ದಿನ ಇರ್ತಿರಿ, ಎರಡು ದಿನ ಇರ್ತಿರಿ… ಮುಂದ? ಅವರ ಜೊತಿ ನಿಲ್ಲಾಕ ಆಗೋದಿಲ್ಲ…. ಆಮ್ಯಾಲೆ ನಿಮ್ಮ ರಿಪೋರ್ಟಗಿರಿ ಬಿಟ್ಟು ಇವರ ಸೇವೆ ಮಾಡ್ಕೋಂತ ಕುಂದ್ರಂಗ ಅಕ್ಕೈತಿ ನೋಡ್ರಿ… ಎಂದ ಸಾಹೇಬ.
ಏನ್ ಸರ್? ನನಗ ಹೆದ್ರಸ್ತೀರಿ! ನೀವು ರಕ್ಷಣೆ ಮಾಡಬೇಕಾಗಿದ್ದು ಇವರನ್ನ, ಆದ್ರ ಯಾರ್ನ ರಕ್ಷಣೆ ಮಾಡಕತ್ತೀರಿ? ಅಂತ ನಂಗ ಚಲೋ ಗೊತ್ತೈತಿ, ಬಾಳ ದಿನ ನಡೆಯಲ್ರಿ ಇದು, ನಿಮ್ಮ ಲಾಠಿಗೆ ಎಷ್ಟು ಪವರ್ ಐತೋ…. ನನ್ನ ಪೆನ್ನಿಗೂ ಅಷ್ಟ ಪವರ್ ಐತ್ರಿ… ಎಂದು ರಾಜಣ್ಣ ಹೇಳುವಷ್ಟರಲ್ಲಿ…
ಯೇ!!! ಗೊತ್ತೈತಿ ಹೋಗು… ಪೊಲೀಸೋರ್ನ ಎದುರು ಹಾಕೊಂಡು ಹೆಂಗ ಇರ್ತಿ? ಅಂತ ನಾನು ನೋಡ್ತಿನಿ ಎಂದ ಸಾಹೇಬ.
ಆಯ್ತಪ್ಪಾ… ಆಫೀಸರ್!!! ನೋಡ್ವಂತಿ… ನೋಡ್ವಂತಿ… ಪೆನ್ನಿನ ಶಕ್ತಿ ನಿನ್ನ… ನಿನ್ನ… ಹೆಂಗ, ಮತ್ತ ಎಲ್ಲಿಗೆ ತಂದು ನಿಲ್ಸುತ್ತ ಅನ್ನದ್ನ ನೋಡ್ವಂತೆ… ಎಂದ ರಾಜಣ್ಣ.
ಕೈಯಲ್ಲಿದ್ದ ಲಾಠಿಯನ್ನು ಗೋಡೆಗೆ ಪಟಾರ್ ಎಂದು ಹೊಡೆದು ರಾಜಣ್ಣನನ್ನು ದುರು ದುರು ನೋಡುತ್ತಾ ನಿಂತ ಸಾಹೇಬ. ಇಷ್ಟಕ್ಕ ಹಿಂಗ ಆಡಿದ್ರ ಹೆಂಗ್ರಿ ಸರ್? ಎಂದು ರಾಜಣ್ಣ ಮುಗಳ್ನಕ್ಕ.
ಸಾಹೇಬ ಆ ನಾಲ್ವರತ್ತ ಕಣ್ಣು ಬಿಟ್ಟು, ರಾಜಣ್ಣನ ಮಾತು ಕೇಳಿದ್ರೀ… ಹುಷಾರ್!!! ಎಂದು ತೋರ್ಬೆರಳು ತೋರಿಸಿ ಬಿರ ಬಿರನೆ ಒಳಗೆ ನಡೆದ.
ರಾಜಣ್ಣ – ಸಾಹೇಬರ ಸಂಭಾಷಣೆಯಿಂದ ಈ ನಾಲ್ವರು ಇನ್ನಷ್ಟು ದಿಗಿಲುಗೊಂಡಿದ್ದರು. ತಿಳ್ವಳಿಕಿ ಇರೋ ರಾಜಣ್ಣನ ಜೊತಿ ಇವರು ಹಿಂಗ ನಡ್ಕೊಂತಾರ ಅಂದ್ರ…. ಇನ್ನು ನಮ್ಮ ಜೊತೆ ಹೆಂಗ ನಡ್ಕೊಬ್ಯಾಡ. ಇವ್ರ ಸಾವಾಸ ಸಾಕು ರಾಜಿಯಾಗಿ ಬಿಡೋಣ ಎಂದು ತಮ್ಮ ತಮ್ಮಲ್ಲೆ ಮಾತನಾಡಿಕೊಳ್ಳುತ್ತಿದ್ದರು.
ಸ್ವಲ್ಪ ಸಮಯದ ನಂತರ, ರಾಜಣ್ಣರ ನೀವು ಹೊಂಡ್ರಿ, ಸುಮ್ನೆ ನಮ್ಮಿಂದ ನಿಮಗ ತೊಂದರಿ ಅಕ್ಕೈತಿ, ಮಕ್ಕಳು ಮರಿ ಸಣ್ಣವು ಅದಾವ, ಇವರ್ನ ಎದುರು ಹಾಕೊಂಡು ಬಾಳಕ ಆಗಲ್ರಿ ಎಂದ ಮಲ್ಯಾ.
ಇವರೇನು ಮಾಡಲ್ಲ ಮಲ್ಲಣ್ಣ, ಸುಮ್ನೆ ಹೆದ್ರಸ್ತಾರ, ಹೆದರಿದಷ್ಟು ಹೆದರಸ್ತಾರ ಇದು ಅವರ ಅಸ್ತ್ರ ಅಷ್ಟ ಎಂದ ರಾಜಣ್ಣ,
ರಾಜಣ್ಣರ ನೀವು ನಮ್ಮ ಜೊತೆ ಕೊನೆ ವರೆಗೂ ಇರ್ತಿರಿ ಅಂತ ನಮಗ ಗೊತ್ತೈತಿ, ಆದ್ರ ನಮ್ಮ ಬಡತನ, ನಮ್ಮೂರ ಧಣಿಗಳ ಕಾರ್ಬಾರು, ನಾವು ನಿಮ್ಮ ಜೊತಿ ನಿಂದ್ರಾಕ ಬಿಡೋದಿಲ್ಲ ಎಂದ ದೇವ್ಯಾ. ಗಾಯ
ಅಲ್ಲ ನನ್ನ ಮಾತ ಕೇಳ್ರಪ… ಎಂದು ರಾಜಣ್ಣ ಅವರನ್ನು ಸಮಾಧಾನಿಸಲು ಮುಂದಾದ, ನಾಲ್ವರು ಕೈಮುಗಿದು ಮುಂದ ಹೋಗೋದು ಬ್ಯಾಡ ಅಂದರು.
ಇವರ ಸ್ಥಿತಿ ರಾಜಣ್ಣನಿಗೆ ಅರ್ಥವಾಯಿತು. ಬಡತನ ಅನ್ಯಾಯವನ್ನು ಹೇಗೆ ನ್ಯಾಯವಾಗಿಸಿ ಬಿಡುತ್ತೆ ಅಲ್ವಾ ಛೇ!!!! ಎಂದು ಬೇಸರಿಸಿಕೊಂಡು, ನಾನೇ ಏನಾದರೂ ಮಾಡಿದರಾಯಿತು ಎಂದು ಎದ್ದ. ನಾ ಹೋಗಿ ಬರ್ತಿನಿ, ಧೈರ್ಯವಾಗಿ ಇರ್ರಿ. ನನ್ನ ಕೈಲಾದಷ್ಟು ನಾ ಸಹಾಯ ಮಾಡ್ತಿನಿ, ಡಿಸಿ ಸಾಹೇಬ್ರು ಬಂದಾಗ ಧೈರ್ಯವಾಗಿ ಮಾತಾಡ್ರಿ ಎಂದು ಎದ್ದು ಹೊರಟ.
ನಾಲ್ವರು ಎದ್ದು ರಾಜಣ್ಣನಿಗೆ ಕೈ ಮುಗಿದು ಕಳಿಸಿಕೊಟ್ಟರು. ಅವರಲ್ಲಿನ ಕಣ್ಣೀರು ರಾಜಣ್ಣನ ಬೇಗುದಿಯನ್ನು ಹೆಚ್ಚಿಸಿತ್ತು. ರಾಜಣ್ಣ ಅಲ್ಲಿಂದ ಹೊರಟು ಹೋದ, ರಾಜಣ್ಣ ಮರೆಯಾಗುವ ವರೆಗೂ ಈ ನಾಲ್ವರು ಆತನನ್ನು ನೋಡುತ್ತಾ ನಿಂತರು.
ರಾಜಣ್ಣ ಇವರ ಜೊತೆ ಮಾತಾನಾಡಿ ಹೋಗಿದ್ದನ್ನು ಧಣಿ ಮತ್ತು ಆತನ ಗೆಳೆಯರು ಕಿಟಕಿಯಿಂದಲೇ… ನೋಡುತ್ತಿದ್ದದ್ದನ್ನು ದೇವ್ಯಾ ಗಮನಿಸಿದ, ಬಾಯಿಮೇಲೆ ಬೆರಳಿಟ್ಟುಕೊಂಡ. ಅವರನ್ನು ಹೆದರಿಸಬೇಕು ಎಂಬ ಕಾರಣಕ್ಕಾಗಿಯೇ ಧಣಿ ಮತ್ತು ದಳಪತಿ ಕೋಣೆಯಿಂದ ಇವರಿದ್ದ ಜಾಗಕ್ಕೆ ಬಂದರು.
ಏನಪ್ಪಾ, ರಾಜಣ್ಣ ಏನೋ ಕಿವ್ಯಾಗ ಊದಿ ಹೋದಂಗ… ಕಾಣಕತ್ತೈತಿ, ಏನ್ ಊದಿದ್ನಪ್ಪ? ಎಂದ ದಳಪತಿ. ಏನೂ ಇಲ್ಲ ಎಂಬಂತೆ ನಾಲ್ವರು ತಲೆ ಅಲ್ಲಾಡಿಸಿದರು.
ಅವ ಹೇಳಿದಂಗ ಏನಾದ್ರು ಕೇಳಿದ್ರಿ, ಮುಂದ ಆಗ ಕತೀ ಬ್ಯಾರೇನ ಐತಿ ಎಂದು ಧಣಿ ಜೇಬಿನಿಂದ ಕೈ ತೆಗೆದು ತೋರ್ಬೆರಳು ತೋರಿಸಿದ. ನೀವು ಹೇಳಿದಂಗ ಕೇಳ್ತಿವ್ರಿ ಧಣಿ, ಎಂದು ನಾಲ್ವರು ತಲೆ ತಗ್ಗಿಸಿದರು.
ಅಷ್ಟರಲ್ಲಿ ಡಿಸಿ ಸಾಹೇಬರ ಕಾರಿನ ಸದ್ದು ಕೇಳಿಸಿತು, ಅವರು ಬರುವುದನ್ನು ಗಮನಿಸಿದ ಧಣಿ, ಸಾಹೇಬನಿಗೆ ವಿಷಯ ತಿಳಿಸಲು ಠಾಣೆಯ ಒಳಗೆ ಹೊರಟರು, ಮೂವರು ಧಣಿಯನ್ನು ಹಿಂಬಾಲಿಸಿದರು. ಸಾಹೇಬ್ರ, ಡಿಸಿ ಸರ್ ಬಂದ್ಹಂಗ ಆಯ್ತು ಎಂದ ದಳಪತಿ. ಹೌದಾ, ನೀವು ಇಲ್ಲೆ ಇರ್ರಿ ನಾ ಅವರನ್ನ ಕರ್ಕೊಂಡು ಬರ್ತಿನಿ ಎಂದು ಎದ್ದು ಹೊರಗಡೆ ಬಂದ ಸಾಹೇಬ.
ಇದನ್ನೂ ಓದಿ : ಗಾಯ ಕಥಾ ಸರಣಿ – ಸಂಚಿಕೆ ; 07 – ಬಡತನದ ಅಸ್ತ್ರ ಪ್ರಯೋಗಿಸಿದ ಸಾಹೇಬ!
ಡಿಸಿಯವರ ಕಾರು ಠಾಣೆಯ ಆವರಣವನ್ನು ಪ್ರವೇಶಿಸಿತು, ಕಾರಿನಿಂದ ಇಳಿದ ಡಿಸಿಯವರನ್ನು ಸಾಹೇಬ ಸ್ಯೆಲೂಟ್ ಮೂಲಕ ಸ್ವಾಗತಿಸಿದ.
ಏನ್ರಿ ಅದು ಗಲಾಟೆ? ಪೇಪರಲ್ಲಿ ಬಂದಿದೆಯಲ್ಲ? ಕಾನೂನು ಏನೂ ಇಲ್ಲ ನಿಮ್ಮ ಸ್ಟೇಷನ್ನಿನಲ್ಲಿ ಎಂದು ಡಿಸಿ ಸಾಹೇಬರು ದಬಾಯಿಸಿದರು.
ಟೋಪಿ ತೆಗೆದು, ಸರ್, ಅದು… ಬರ್ರಿ… ಒಳಗ ಕುಂತು ಮಾತಾಡೋಣ, ಎಲ್ಲ ಹೇಳ್ತೀನಿ ನಿಮಗ ಎಂದ ಸಾಹೇಬ.
ಅವರಿಬ್ಬರು ಎಲ್ಲಿದ್ದಾರೆ? ಮೊದ್ಲು ಅವರನ್ನ ನೋಡ್ಬೇಕು. ಆಮೇಲೆ ಎಲ್ಲಾದ್ನು ಕೇಳ್ತೀನಿ ಎಂದ ಡಿಸಿ ಸಾಹೇಬ.
ಡಿಸಿ ಸಾಹೇಬನನ್ನು, ಸಾಹೇಬ ಒಳಗಡೆ ಕರೆದುಕೊಂಡು ಹೋದ, ಕೆಂಚ ಬಸ್ಯಾರನ್ನು ಹಾಕಿದ್ದ ಜೈಲಿನ ಕೋಣೆಯನ್ನು ತೋರಿಸಿದ, ಚನ್ನಾಗಿ ಏಟು ತಿಂದು ಗಾಯಗಳಾಗಿದ್ದ ಇಬ್ಬರೂ ನಿತ್ರಾಣರಾಗಿ ತೇಲುಗಣ್ಣು ಬಿಡುತ್ತಿದ್ದ ಆ ದೃಶ್ಯವನ್ನು ನೋಡಿ ಡಿಸಿ ಸಾಹೇಬ ಕೋಪಗೊಂಡ.
ನಾನ್ಸೆನ್ಸ್!!! ಏನ್ರಿ ಇದು? ಹಿಂಗೆಲ್ಲ ಹೊಡೆದದ್ದು ಯಾರು? ಇವರ ಮೈಯೆಲ್ಲ ಗಾಯಗಳಾಗಿವೆ… ಮೊದ್ಲು ಇವರನ್ನ ಆಸ್ಪತ್ರೆಗೆ ಸೇರಿಸಿ ಎಂದ ಡಿಸಿ ಸಾಹೇಬ.
ಇಲ್ಲೇ… ಡಾಕ್ಟ್ರು ಬಂದು ನೋಡಿ ಹೋಗ್ಯಾರ್ರಿ ಎಂದ ಸಾಹೇಬ.
ನಾನು ಹೇಳ್ತಾ ಇದ್ದೀನಿ ಅಲ್ವಾ….. ಇವರನ್ನು ಆಸ್ಪತ್ರೆಗೆ ಕಳಿಸೋ ವ್ಯವಸ್ಥೆ ಮಾಡಿ. ಎಂದು ಡಿಸಿ ಸಾಹೇಬ ಜೋರು ಮಾಡಿದ.
ದಾರಿ ಇಲ್ಲದೆ ಸಾಹೇಬ ಇಬ್ಬರು ಪೇದೆಯ ಜೊತೆ ಅವರಿಬ್ಬರನ್ನು ಆಸ್ಪತ್ರೆಗೆ ಕಳುಹಿಸಿದ. ಕುಳಿತುಕೊಳ್ಳಿ ಎಂದು ಸಾಹೇಬ ತನ್ನ ಚೇಂಬರಿನತ್ತ ಡಿಸಿ ಸಾಹೇಬರನ್ನು ಕರೆದೊಯ್ದ.
ಸ್ವಲ್ಪ ಸಮಯ ಕಳೆದ ನಂತರ, ಯಾರ್ರಿ ಅದು? ಹಂಗೆ ಹೊಡ್ದದ್ದು? ಅವರನ್ನ ಅರೆಸ್ಟ್ ಮಾಡಿದ್ದೀರಾ? ಎಲ್ಲಿದ್ದಾರೆ ಅವರು? ಎಂದು ಡಿಸಿ ಸಾಹೇಬ ಕೋಪದಿಂದ ಪ್ರಶ್ನೆಗಳ ಸುರಿಮಳೆಗೈದ.
ಈ ಪ್ರಶ್ನೆಗಳಿಗೆ ಹೇಗೆ ಉತ್ತರ ನೀಡೋದು? ಎಂದು ಸಾಹೇಬ ತತ್ತರಿಸಿ ಹೋದ. ಅದು… ಅದು… ಇ…ಇ…ಇ… ಇಬ್ಬರು ಕಳ್ಳತನ ಮಾಡಿದ್ರಂತೆ ಅದಕ್ಕೆ ಆ ಊರ ಧಣಿ ಮತ್ತು ದಳಪತಿ ಸೇರಿ ಹೊಡ್ದಾರಿ ಸರ್ ಎಂದು ತಡವರಿಸುತ್ತ ಸಾಹೇಬ ಉತ್ತರ ನೀಡಿದ.
ಡಿಸಿಯ ಕೋಪ ಇನ್ನಷ್ಟು ಜಾಸ್ತಿಯಾಯಿತು. ಅವರಿಗೆ ಯಾರ್ರೀ ಅಧಿಕಾರ ಕೊಟ್ಟೋರು ಹೊಡ್ಯಾಕ? ಅವರನ್ನ ಕರೆಸಿ ಎಂದು ಸಾಹೇಬನಿಗೆ ಹೇಳಿದ.
ಅವರೂ…. ಇಲ್ಲೇ ಅದಾರ್ರಿ. ಆ ಕಡೆ ಕೋಣ್ಯಾಗ ಕುಂತಾರ…. ಕರಿತೀನ್ರಿ…. ಎಂದ ಸಾಹೇಬ.
ಏನು? ಅವರು ಇಲ್ಲೆ ಇದ್ದಾರಾ!, ಎಂದು ಹುಬ್ಬು ಗಂಟಿಕ್ಕಿ ಆಯ್ತು… ಕರೀರಿ ಎಂದ ಡಿಸಿ ಸಾಹೇಬ.
ಆಯ್ತು… ಎಂದು ಸಾಹೇಬ ಪೇದೆಯನ್ನು ಕರೆದು ಧಣಿ, ದಳಪತಿ, ಗೌಡ, ಶ್ಯಾನುಭೋಗನನ್ನು ಕರೆತರಲು ಹೇಳಿದ.
(ಮುಂದುವರೆಯುವುದು…….)
ಈ ವಿಡಿಯೋ ನೋಡಿ : ಮಾನವೀಯತೆ ಜಾಗಕ್ಕೆ ಮತೀಯತೆ ಬಂದಿದೆ – ಬರಗೂರು ರಾಮಚಂದ್ರಪ್ಪ Janashakthi Media