ಹೊಸದಿಲ್ಲಿ: ಗುಜರಾತಿ ಕಾವ್ಯದ ಮುಂದಿನ ಅತಿ ದೊಡ್ಡ ಪ್ರತೀಕ ಎಂದು ರಾಜ್ಯದ ಬಲಪಂಥೀಯ ಸಾಹಿತಿಗಳಿಂದ ಪ್ರಶಂಸೆಗೊಳಗಾದ ಗುಜರಾತ್ನ ಕವಯಿತ್ರಿ ಪಾರುಲ್ ಖಕ್ಕರ್ ಈಗ ಬಿಜೆಪಿಯ ಐಟಿ ಸೆಲ್ನ ಟ್ರೋಲ್ ಪಡೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೊರೋನ ಎರಡನೇ ಅಲೆ ನಿರ್ವಹಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿರುವುದರಿಂದ ಭಾರತೀಯರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಅವರು ಪ್ರಭಾವಶಾಲಿ ಕವನವೊಂದನ್ನು ಬರೆದಿದ್ದರು.
14 ಸಾಲುಗಳ ಈ ಕವನ ಒಂದು ವಾರದಲ್ಲಿ ಕನಿಷ್ಠ 6 ಭಾಷೆಗೆ ಭಾಷಾಂತರಗೊಂಡಿತ್ತು. ಇದು ಸಾಂಕ್ರಾಮಿಕ ರೋಗದಿಂದ ಉಂಟಾದ ದುರಂತಗಳಿಂದ ದುಃಖಿತರಾಗಿರುವ, ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸದೇ ಇರುವ ಹಾಗೂ ಅದರಿಂದ ದೂರ ಇರುವ ಕೇಂದ್ರ ಸರಕಾರದ ಬಗ್ಗೆ ಆಕ್ರೋಶಿತರಾದ ಎಲ್ಲ ಭಾರತೀಯನ ಧ್ವನಿಯಾಗಿತ್ತು.
ಪಾರುಲ್ ಖಕ್ಕರ್ ಅವರು ‘ಶಬ್ವಾಹಿನಿ ಗಂಗಾ’ ಎಂಬ ಶೀರ್ಷಿಕೆಯ ಕವನವನ್ನು ತನ್ನ ಸಾಮಾಜಿಕ ಜಾಲ ತಾಣದ ಖಾತೆಯಲ್ಲಿ ಮೇ 11ರಂದು ಪೋಸ್ಟ್ ಮಾಡಿದ್ದರು. ಪುಟ್ಟದಾದ ಹಾಗೂ ಪ್ರಭಾವಶಾಲಿಯಾದ ಈ ಗುಜರಾತಿ ವಿಡಂಬನಾತ್ಮಕ ಕವನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಮ ರಾಜ್ಯವನ್ನು ಆಳುತ್ತಿರುವ ‘ನಗ್ನ ದೊರೆ’ ಎಂದು ಹಾಗೂ ಪವಿತ್ರ ಗಂಗಾ ನದಿಯನ್ನು ಹೆಣಗಳನ್ನು ಸಾಗಿಸುವ ಗಾಡಿ ಎಂದು ವಿವರಿಸಲಾಗಿತ್ತು. ಕನ್ನಡದಲ್ಲಿಯೂ ಅನೇಕರು ಅನುವಾದಸಿ ಕವಿತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚುತ್ತಿದ್ದಾರೆ. ಅವುಗಳಲ್ಲಿ ಆಯ್ದು ಒಂದು ಅನುವಾದಿತ ಕವಿತೆ ಈ ಕೆಳಗಿನಂತಿದೆ
ಕಳವಳ ವೇಕೆ, ಸಂತಸದಿಂದಿರು
ಹೆಣದ ದೇಹದೊಳಗಿನ
ಒಂದು ಧ್ವನಿ.
ದೊರೆಯೇ
ನಿನ್ನ ರಾಮರಾಜ್ಯದ ಗಂಗೆಯೊಡಲಲ್ಲಿ ದೇಹಗಳು ತೇಲಿವೆ.
ದೊರೆಯೇ,
ರುದ್ರಭೂಮಿಗೆ ಸ್ಥಳವಿಲ್ಲ ಇಲ್ಲಿ
ಸುಡಲು ಉರುವುಗಳಿಲ್ಲ
ಮರಮುಟ್ಟು ಬೂದಿಯಾಗಿವೆ
ಬಿಳಿಬಟ್ಟೆ ತೊಟ್ಟವರಿಲ್ಲ
ದುಃಖಿಸುವವರಿಲ್ಲ ಎಲ್ಲವೂ ವಿದಾಯ ಹೇಳಿವೆ
ಚರಮಗೀತೆ ಹಾಡಲು ಕೊರಳು
ಕೊರಡು.
ದೊರೆಯೇ,
ಅವಳು ಕುಣಿದ ಹೆಜ್ಜೆಗಳ ಬೆಡಗ
ಮನೆ ತುಂಬಿಸಿಕೊಳ್ಳುವ ಮಹದಾಸೆ ಇತ್ತು
ಆದರೆ ದೊರೆಯೇ
ನಿನ್ನ ರಾಮರಾಜ್ಯದ ಗಂಗೆ ಒಡಲಲ್ಲಿ ದೇಹಗಳು ತೇಲಿವೆ.
ದೊರೆಯೇ
ಅಲುಗಾಡದೆ ಬಿಮ್ಮನೆ ಕೂತಿದೆ ರೋಗ
ಹೊಗೆಯುಗುಳುವ ನಳಿಗೆಗಳು ನಡುಗಿವೆ
ಬಿಲ್ಲಾ-ರಂಗರ ಈಟಿ ಮೊನೆಚಿನ ಇರಿತಕ್ಕೆ
ಕೈ ಬಳೆಗಳು ನುಚ್ಚು ನೂರಾಗಿವೆ
ಹೃದಯಗಳು ಛಿದ್ರವಾಗಿವೆ
ಅವರ ಕೈಗೊಂಬೆಗಳಂತೆ
ನಗರ ಸುಡುತ್ತಿದೆ
ದೊರೆಯೇ
ನಿನ್ನ ರಾಮರಾಜ್ಯದ ಗಂಗೆ ಒಡಲಲ್ಲಿ
ದೇಹಗಳು ತೇಲುವುದ ನಾ ಕಂಡೆ.
ದೊರೆಯೇ,
ನಿನ್ನ ಥಳುಕಿನ ಪೋಷಾಕಿಗೆ ನಿನ್ಧ ಹೊಳಪೆ
ನಗರ ಹೂಯಲ್ಟಿದೆ
ಕಟ್ಟ ಕಡೆಯ ನಿನ್ನ ನಿಜ ಮುಖದ ದರುಶನಕೆ
ಯಾವ ಆಕ್ಷೇಪಗಳಿಲ್ಲ
ನಿನ್ನ ದಿಟ್ಟತೆ ತೋರು, ಎಲ್ಲವನೂ ಮುಚ್ಚಿ ಹೊರಗೆ ಬಾ ಬಯಲಿಗೆ,
ಜೋರಾಗಿ ಕೂಗು.
” ದುರ್ಬಲ ದೊರೆ ಬೆತ್ತಲು “.
ದೊರೆಯೇ
ಸಾಕಿನ್ನು ಕುಂಟುನೆಪ
ಆವೇಶದಲಿ ನಗರ ರೊಚ್ಚಿಗೆದ್ದಿದೆ
ಮುಗಿಲೆತ್ತರ ಉರಿಯಲೆ ಚಿಮ್ಮಿದೆ
ದೊರೆಯೇ
ನೋಡಿದೆಯಾ
ನಿನ್ನ ರಾಮರಾಜ್ಯದ ಗಂಗೆ ಒಡಲಲ್ಲಿ
ತೇಲುವ ದೇಹಗಳಾ?.
ಪರುಳ್ ಖಕ್ಕರ್
ಗುಜರಾತಿ ಕವಯಿತ್ರಿ
ಭಾವಾನುವಾದ.
ಪಿ.ಆರ್.ವೆಂಕಟೇಶ್.