ಪವಿತ್ರ ಎಸ್
ಸಹಾಯಕ ಪ್ರಾಧ್ಯಾಪಕರು
ಹೆಣ್ಣಿಗೆ ದುಃಖಗಳಿಲ್ಲ, ನೋವುಗಳಿಲ್ಲ, ಆಸೆ ಆಕಾಂಕ್ಷೆಗಳಿಲ್ಲ, ಅಳುವಂತೆಯೂ ಇಲ್ಲ, ಜೋರಾಗಿ ನಗುವಂತೆಯೂ ಇಲ್ಲ, ಜೋರಾಗಿ ಮಾತನಾಡುವಂತೆಯೂ ಇಲ್ಲ, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ, ಅಷ್ಟೇ ಏಕೆ ತಾನು ಮಾಡಿದ ಅಡುಗೆಯನ್ನು ತಾನೇ ಮೊದಲು ತಿನ್ನುವಂತೆಯೂ ಇಲ್ಲ. ಗಂಡ ಮಕ್ಕಳು ಬಿಟ್ಟ ಎಂಜಲು ಊಟವನ್ನು ಪ್ರಸಾದ ರೀತಿಯಲ್ಲಿ ಸ್ವೀಕರಿಸಬೇಕು. ಗಂಡನ ಬೇಕು ಬೇಡ ಗಳಿಗೆ ಹೆಣ್ಣು ಸ್ಪಂದಿಸುತ್ತಾ ಅವನ ದಾಸಿಯಾಗಿ, ಪತಿಯೇ ಪರದೈವ ಎಂಬ ಹೇಳಿಕೆಯಂತೆ ನಡೆದುಕೊಳ್ಳಬೇಕು. ಹೀಗೆ ನಡೆದುಕೊಂಡರೆ ಆಕೆ ಪತಿವ್ರತೆಯಾಗಿ ಮಹಾ ಗೃಹಿಣಿಯಾಗಿ ನಮ್ಮ ಸಮಾಜದಲ್ಲಿ ಗೌರವಕ್ಕೆ ಪಾತ್ರಳಾಗಿ ಕಂಡುಬರುತ್ತಾಳೆ. ಇದನ್ನೇ ಹೆಣ್ಣಿನ ಪಾಲಿನ ಸಂವಿಧಾನವಾಗಿ ಮನಸ್ಮೃತಿ ಶಾಸನ ವಾಗಿ ವಿಧಿಸಿದೆ.
ನವಂಬರ್ 26, 2022ರಂದು ಸಂವಿಧಾನ ದಿನವನ್ನು ಆಚರಿಸಿರುವ ನಾವು 28 ನವಂಬರ್ 2022 ರಂದು ಪತಿಯ ಆಜ್ಞೆಯನ್ನು ಪಾಲಿಸಬೇಕು ಎಂಬ ಲೇಖನವನ್ನು ಓದಿದೆವು. ಇಂತಹ ವೈರುಧ್ಯಗಳ ನಡುವೆ ಬದುಕುತ್ತಿದ್ದೇವೆ. ಎಂತಹ ವ್ಯಂಗ್ಯ ನೋಡಿ, ಒಂದೆಡೆ ಸಂವಿಧಾನದ ಶ್ರೇಷ್ಠತೆಯನ್ನು ಸಂಭ್ರಮಿಸುತ್ತ, ಮತ್ತೊಂದೆಡೆ ಅದರ ವಿರುದ್ಧವಾದ ನಡೆಗಳಲ್ಲಿ ಬದುಕುತ್ತಿದ್ದೆವೆ. ಯಾರು ಗುಲಾಮತನವನ್ನು ಧಿಕ್ಕರಿಸಬೇಕಿತ್ತೋ ಅವರೆ ಬೋಧನೆಯನ್ನು ಮಾಡುತ್ತಿದ್ದಾರೆ.
ಭಾರತದ ಸಂವಿಧಾನವು ಹೆಣ್ಣಿಗೆ ಎಷ್ಟೆಲ್ಲಾ ಹಕ್ಕುಗಳನ್ನು, ಸ್ವಾತಂತ್ರವನ್ನು, ಸಮಾನತೆಯನ್ನು ನೀಡಿದೆ, ಇಂತಹ ಮಹಾನ್ ಗ್ರಂಥವನ್ನು ತಿರಸ್ಕರಿಸಿ ಗುಲಾಮತನ ಹೇರುವ ಧಾರ್ಮಿಕ ಗ್ರಂಥಗಳನ್ನೆ ಶ್ರೇಷ್ಠವೆಂದು ಸಾರುವಲ್ಲಿ. ಸಂವಿಧಾನದಿಂದ ಅವಕಾಶ ಪಡೆದಿರುವ ನ್ಯಾಯಾಧೀಶರು, ಡಾಕ್ಟರ್, ಇಂಜಿನೀಯರು, ಶಿಕ್ಷಕ, ಇನ್ನಿತರ ಉನ್ನತ ಹುದ್ದೆಗೆರಿರುವ ಮಹಿಳೆಯರಿಗೆ ಸಂವಿಧಾನದ ಶಕ್ತಿಯ ಅರಿವಿರದಂತೆ ಮಾಡುವ ಹುನ್ನಾರಗಳು ಎಗ್ಗಿಲ್ಲದೇ ನಡೆದಿದೆ. ವಿಪರ್ಯಾಸ ಅಂದ್ರೆ ಸಂವಿಧಾನದಿಂದ ಘನತೆಯ ಬದುಕು ಕಂಡಿರುವ ಮಹಿಳೆಯರೆ, ತಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಂಡಿರುವ ಮನಸ್ಮೃತಿಯ ಶ್ರೇಷ್ಠವೆಂದು ನಂಬುವ, ಸಾರುವ ಸಮಾಜ ನಮ್ಮದು.
ಧರ್ಮ ಮತ್ತು ಧಾರ್ಮಿಕತೆಯ ಕಂದಾಚಾರಗಳ ಪಾಲನೆ ಕೇವಲ ಹೆಣ್ಣಿನ ಸ್ವತ್ತೇ? ಹೆಣ್ಣನ್ನು ಧರ್ಮಗಳು ಗುತ್ತಿಗೆ ತೆಗೆದುಕೊಂಡಿವೆಯೇ? ಕೊಂಡುಕೊಂಡಿವೆಯೇ? ಪುರುಷನಷ್ಟೆ ಸಾಮಾರ್ಥ್ಯ,ಆಲೋಚನೆ , ನಿರ್ವಹಣೆ ಶಕ್ತಿಯಿರುವ ಹೆಣ್ಣನ್ನು ಈ ಧರ್ಮ ಮತ್ತು ಗಂಡಸರು ಅಡಿಯಾಳಾಗಿ ಮಾಡಿಕೊಳ್ಳುವ ಹಪಹಪಿಕೆಯಾದರು ಏತಕ್ಕೆ?
ದೊಡ್ಡ ಸಂಖ್ಯೆಯಲ್ಲಿಯೇ ಇರುವ ಹೆಣ್ಣನ್ನು ಇಂದಿಗೂ ಸಮಾನವಾಗಿ ತಿಳಿಯುವ ಮನಸ್ಥಿತಿ ಮಾತ್ರ ಕರಗತವಾಗುವಂತೆ ಕಾಣುತ್ತಿಲ್ಲ. ಪುರುಷ ಶ್ರೇಷ್ಠತೆ ಪ್ರತಿಪಾದನೆಯನ್ನೆ ಧರ್ಮವೆಂದು ಸಾರುತ್ತಿವೆ. ಇದು ಕೇವಲ ಧಾರ್ಮಿಕ ಗ್ರಂಥಗಳಷ್ಟೇ ಅಲ್ಲ ಜನಪದರು ಸಹ ಹೆಣ್ಣನ್ನು ಗುಲಾಮಳಾಗಿಸುವ ಕಾರ್ಯದಲ್ಲಿ ಹಿಂದೆ ಬಿದ್ದಿಲ್ಲ. ಕೆರೆಗೆ ಹಾರ ಕಥನ ಗೀತೆಯಲ್ಲಿ ಮೊದಲ ಸೊಸೆಯನ್ನು ಬಲಿ ಕೊಡಬೇಕು ಎನ್ನುತ್ತಾರೆ ವಿನಃ ಮೊದಲ ಮಗನನ್ನು ಬಲಿ ಕೊಡಬೇಕು ಎಂದು ಹೇಳುವುದಿಲ್ಲ. ಕೊನೆಗೆ ಕಿರಿ ಸೊಸೆಯನ್ನು ಬಲಿಕೊಡುತ್ತಾರೆ. ಅಂದರೆ ಈ ಸಮಾಜದಲ್ಲಿ ಹೆಣ್ಣನ್ನು ತನ್ನ ವಸ್ತುವನ್ನಾಗಿ ಮಾರ್ಪಡಿಸಿಕೊಳ್ಳುವ ಪ್ರಯತ್ನಗಳು ಅನಾದಿಕಾಲದಿಂದಲೂ ನಡೆದು ಬಂದಿವೆ ಅದು ಈಗಲೂ ನಡೆಯುತ್ತಿದೆ.
ಹೆಣ್ಣಿಗೆ ದುಃಖಗಳಿಲ್ಲ, ನೋವುಗಳಿಲ್ಲ, ಆಸೆ ಆಕಾಂಕ್ಷೆಗಳಿಲ್ಲ, ಅಳುವಂತೆಯೂ ಇಲ್ಲ, ಜೋರಾಗಿ ನಗುವಂತೆಯೂ ಇಲ್ಲ, ಜೋರಾಗಿ ಮಾತನಾಡುವಂತೆಯೂ ಇಲ್ಲ, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ, ಅಷ್ಟೇ ಏಕೆ ತಾನು ಮಾಡಿದ ಅಡುಗೆಯನ್ನು ತಾನೇ ಮೊದಲು ತಿನ್ನುವಂತೆಯೂ ಇಲ್ಲ. ಗಂಡ ಮಕ್ಕಳು ಬಿಟ್ಟ ಎಂಜಲು ಊಟವನ್ನು ಪ್ರಸಾದ ರೀತಿಯಲ್ಲಿ ಸ್ವೀಕರಿಸಬೇಕು. ಗಂಡನ ಬೇಕು ಬೇಡ ಗಳಿಗೆ ಹೆಣ್ಣು ಸ್ಪಂದಿಸುತ್ತಾ ಅವನ ದಾಸಿಯಾಗಿ, ಪತಿಯೇ ಪರದೈವ ಎಂಬ ಹೇಳಿಕೆಯಂತೆ ನಡೆದುಕೊಳ್ಳಬೇಕು. ಹೀಗೆ ನಡೆದುಕೊಂಡರೆ ಆಕೆ ಪತಿವ್ರತೆಯಾಗಿ ಮಹಾ ಗೃಹಿಣಿಯಾಗಿ ನಮ್ಮ ಸಮಾಜದಲ್ಲಿ ಗೌರವಕ್ಕೆ ಪಾತ್ರಳಾಗಿ ಕಂಡುಬರುತ್ತಾಳೆ. ಇದನ್ನೇ ಹೆಣ್ಣಿನ ಪಾಲಿನ ಸಂವಿಧಾನವಾಗಿ ಮನಸ್ಮೃತಿ ಶಾಸನ ವಾಗಿ ವಿಧಿಸಿದೆ. ಈ ಮೇಲಿನ ಮಾತುಗಳನ್ನು ಪುರುಷ ಪ್ರಧಾನ ಸಮಾಜದಲ್ಲಿ ಪುರುಷರು ಸ್ತ್ರೀಯಿಂದ ಬಯಸುವ ನಡೆಗಳು ಹೀಗಿದ್ದರೆ ಪುರುಷನಿಗೆ ಶ್ರೇಯಸ್ಸು ಎಂಬ ಮಹಾ ದುರಂತವನ್ನು ಹೆಣ್ಣಿನ ಮೇಲೆ ಬಲವಂತವಾಗಿ ಹೇರಲಾಗಿದೆ ದುರಂತವೆಂದರೆ ಹೆಣ್ಣು ಹೇಗಿರಬೇಕು ಎಂಬುದನ್ನು ಹೆಣ್ಣಿನಿಂದಲೇ ಹೇಳಿಸಿರುವುದು ತನ್ನ ಮೇಲೆ ನಡೆಯುವ ದೌರ್ಜನ್ಯ, ದೌರ್ಜನ್ಯವೆಂಬುದು ಅವರ ಅರಿವಿಗೆ ಬಾರದಂತೆ ತಡೆಯುವ ಸೂಕ್ಷ್ಮವಾದ ಅಂಶಗಳಿಂದ ಕೂಡಿದೆ. ಗಂಡು ವೇಶ್ಯೆಯ ಮನೆಗೆ ಹೋದರು ತಾನು ಮಾತ್ರ ಪತಿವ್ರತೆಯಾಗಿರಬೇಕು. ಹೀಗೆ ಹೆಣ್ಣಿಗೆ ಧರ್ಮವು ಶಾಸನಗಳನ್ನು ವಿಧಿಸುತ್ತಾ ಹೋಗುವುದನ್ನು ನಾವು ಎಲ್ಲಿಂದ ಎಲ್ಲಿ ನೋಡಿದರೂ ಕಾಣಸಿಗುತ್ತದೆ.
ಅದೇ ಧರ್ಮ ಗ್ರಂಥಗಳು ಗಂಡಿನ ಕೆಲಸ, ಮಾತು, ನಡವಳಿಕೆಗಳಾಗಲಿ, ದೈಹಿಕವಾಗಿ, ಮಾನಸಿಕವಾಗಿ ಹೇಗಿರಬೇಕೆಂದು ಯಾವ ಧರ್ಮ ಗ್ರಂಥಗಳು ಗಂಡಿಗೆ ಬೋಧಿಸಿಲ್ಲವೇಕೆ? ಗಂಡನ ಕರ್ತವ್ಯಗಳನ್ನು ಬೋಧಿಸಿದರೂ ಅವು ಕೂಡ ಗಂಡಿನ ಪಾರಮ್ಯವೇ ಆಗಿವೆ.ಪುರುಷರಿಂದ ರಚಿಸಲ್ಪಟ್ಟ ಇತಂಹ ಧರ್ಮ ಗ್ರಂಥಗಳಿಗೆ ಸಮಾನತೆಯನ್ನು ಸಾರುವ ಬಾಯಿಯು ಇಲ್ಲ ,ಪುರುಷ ಪ್ರಧಾನ ಸಮಾಜದಲ್ಲಿ ಅವರುಗಳಿಗೆ ನಿರ್ಬಂಧ ವಿಧಿಸಿಕೊಳ್ಳಲು ಮನಸ್ಸು ಒಪ್ಪುವುದಿಲ್ಲ. ಕನಿಷ್ಠ ಪಕ್ಷ ಪ್ರಶ್ನೆಯನ್ನು ಕೂಡ ಮಾಡಿಕೊಳ್ಳುವುದಿಲ್ಲ.
ಗಂಡು ಎಂಬ ಅಹಂ ಹೆಣ್ಣು ಎದುರಿಗಿದ್ದಾಗಲೇ ಚಿಗುರುವುದಾದರೂ ಏತಕ್ಕೆ? ಹೆಣ್ಣನ್ನು ಗಂಡು ದೈಹಿಕವಾಗಿ ಉಪಯೋಗಿಸಲ್ಪಡುವ ವಸ್ತುವೆಂದೇ ಅನಾದಿಕಾಲದಿಂದಲೂ ಹೇಳುತ್ತಾ ಬಂದಿರುವ ಧರ್ಮ ಗ್ರಂಥಗಳು ಮತ್ತು ಜನಸಾಮಾನ್ಯರು ಕೂಡ ಅದು ಒಪ್ಪಿತ ಮೌಲ್ಯವೆಂದು ಹೆಣ್ಣಿಗೆ ರೇಖೆಗಳನ್ನು ವಿಧಿಸುತ್ತಾ ಬರುತ್ತಿದ್ದಾರೆ. ಹಾಗೂ ಗಂಡಿಗೆ ಯಾವ ರೇಖೆಗಳ ಅಗತ್ಯವು ಇಲ್ಲ ಎಂದು ಅವರೇ ನಿರ್ಧರಿಸಿ ಬಿಡುತ್ತಾರೆ. ಗಂಡು ತನ್ನ ಅಸ್ತಿತ್ವವನ್ನು ಸದಾ ಕಾಲ ಉಳಿಸಿಕೊಳ್ಳುವ ಹಪಹಪಿಕೆಯಿಂದ ಹೆಣ್ಣು ಅವನ ಅಧೀನದಲ್ಲಿ ಬದುಕಿ ಅವನು ಹೇಳಿದಂತೆ ಕೇಳುವ ಗುಲಾಮಳಾಗಿರಬೇಕು. ಅದಕ್ಕಾಗಿ ಈಗಿನ ಆಧುನಿಕ ಮಹಿಳೆಯರಿಗೆ ಗೃಹಿಣಿಯ ಸ್ಥಾನವನ್ನು ನೀಡಿ ಗೃಹದ ಸದಸ್ಯರ ನಿರ್ವಹಣೆ ಜವಾಬ್ದಾರಿ ನಿಮ್ಮದೆಂದು ಸಂತುಷ್ಟರಾಗಿಸಿದ್ದಾರೆ. ಇದರ ಅರಿವಿದ್ದು ಅಥವಾ ಅರಿವಿಲ್ಲದೆಯೊ ಮಹಿಳೆಯರು ಯಾಥವತ್ತು ಪಾಲಿಸಿಕೊಂಡು ಹೋಗುತ್ತಿದ್ದಾರೆ.
ಗಂಡನನ್ನು ಆಯಾಸ ಕೆಲಸಗಳಲ್ಲಿ ತೊಡಗಿಸಬಾರದು ಎಂದು ಹೇಳುವಲ್ಲಿ, ಗಂಡಿಗೆ ಯಾವೆಲ್ಲ ಸುಖ ನೆಮ್ಮದಿ ಸಿಗಬೇಕು ಎಲ್ಲಾ ಕಡೆಗಳಲ್ಲೂ ಅವನನ್ನು ಈ ಧರ್ಮ ರಕ್ಷಿಸಿದೆ. ಅದಕ್ಕೆ ಇರಬೇಕು ಧರ್ಮವನ್ನು ನಾವು ರಕ್ಷಿಸಿದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ ಎಂದು ಹೇಳುತ್ತಿರುವುದು. ಅದೇ ದೈಹಿಕವಾಗಿ ಶಕ್ತಿ ಕಡಿಮೆ ಇರುವ ಮಾನಸಿಕವಾಗಿ ದೃಢವಾಗಿರುವ ಹೆಣ್ಣಿಗೆ ಧಾರ್ಮಿಕ ಗ್ರಂಥಗಳು ಬೋಧಿಸುವುದಾದರೂ ಏನನ್ನು? ವಿರೋಧಾಭಸವೆಂದರೆ ಪುರುಷ ಪಾರಮ್ಯತೆಯನ್ನು ಹಿಡಿದೆತ್ತಿರುವ ಧರ್ಮಗಳನ್ನು ಚಾಚು ತಪ್ಪದೇ ಪಾಲಿಸುತ್ತಿರುವುದು ಇದೇ ಹೆಣ್ಣು ಸಂಕುಲ.
ಹೆಣ್ಣು ಗರ್ಭವತಿಯಾಗಿ ಮಗುವನ್ನು ಹೆತ್ತು ಹಾಲೂಡಿಸಿ ಶಕ್ತಿ ಹೀನಳಾದರೂ ಮನೆಯ ಕೆಲಸಗಳನ್ನು ತಪ್ಪದೇ ಮಾಡಬೇಕು. ಯಾವುದೇ ದೈಹಿಕ ನ್ಯೂನ್ಯತೆಗಳಿಲ್ಲದಿದ್ದರೂ, ಮಗುವನ್ನು ಹೆರದಿದ್ದರೂ, ಗಂಡಿಗೆ ಶ್ರಮದಾಯಕ ಕೆಲಸಗಳನ್ನು ನೀಡಬಾರದು. ಹೇಗಿದೆ ನೋಡಿ! ಪುರುಷನ ಲೆಕ್ಕಾಚಾರ! ಪುರುಷನನ್ನು ಲೈಂಗಿಕ ಶಕ್ತಿಯಲ್ಲಿ ತೊಡಗುವಂತೆ ಮಾಡುವುದು ಸಹ ಹೆಣ್ಣಿನ ಜವಾಬ್ದಾರಿ. ಗಂಡಿಗೇಕೆ ಯಾವ ಜವಾಬ್ದಾರಿಗಳು ಇಲ್ಲ? ಆ ಸಮಯದಲ್ಲಿಯೂ ಹೆಣ್ಣು ನಿರಾಕರಿಸದೆ ಗಂಡನ್ನು ಸಂತೃಪ್ತರಗೊಳಿಸುವುದು ನೈಜ ಕರ್ತವ್ಯವೆಂಬಂತೆ ವಿಧಿಸಲಾಗಿದೆ.
ಅಪೌಷ್ಟಿಕತೆಯಿಂದ ನರಳುತ್ತಿರುವ, ರಕ್ತಹೀನತೆಯಿಂದ ಬಳಲುತ್ತಿರುವ, ಹೆಚ್ಚು ಹೆಚ್ಚು ಕಾಯಿಲೆಗೆ ತುತ್ತಾಗುತ್ತಿರುವ, ಮಾನವರ ಕಳ್ಳ ಸಾಗಾಣಿಕೆಯಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಕಳ್ಳತನವಾಗುತ್ತಿರುವ, ವೇಶ್ಯಾವಾಟಿಕೆಯಲ್ಲಿ ತೊಡಗುತ್ತಿರುವವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದಾರೆ.
ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಲಿಂಗಾನುಪಾತ ಹೆಚ್ಚಾಗುತ್ತಿದೆ. ಕೆಲಸದ ಸ್ಥಳಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಓಡಾಡುವ ಬಸ್ಸು, ಟ್ರೈನುಗಳಲ್ಲಿ ಅತ್ಯಾಚಾರ ಲೈಂಗಿಕ ದೌರ್ಜನ್ಯಗಳಾಗುತ್ತಿವೆ. ಇವೆಲ್ಲವೂ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಇದಕ್ಕೆ ಕಾರಣವಾಗಿರುವ ಸಮುದಾಯವನ್ನು ಈಗಲೂ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಮಹಿಳೆ ಶ್ರೇಷ್ಠ ಭಾವದಿಂದ ಕಾಣುತ್ತಾ ಅವರಿಗೆ ಅಡಿಯಾಳಾಗಿ ಇರಬೇಕೆಂದು ಧರ್ಮದ ಧಾರ್ಮಿಕ ಮುಖಂಡರು ಬೋಧಿಸುತ್ತಾರೆ. ಅದನ್ನು ನಾಚಿಕೆ ಇಲ್ಲದೆ ಪ್ರಕಟಿಸುವ ಮಾಧ್ಯಮಗಳು ಇವೆ. ಇವುಗಳಿಗೆ ನೈತಿಕತೆ ಇದೆಯೇ? ಎಲ್ಲರಿಂದ ಆಕ್ರೋಶ ವ್ಯಕ್ತವಾದ ಮೇಲೆ ಹಾವು ಸಾಯಬಾರದು ಕೋಲು ಮುರಿಯಬಾರದು ಎಂಬಂತೆ ಸತ್ತವರಿಗೆ ವಿಷಾದ ಸೂಚಿಸುವಂತೆ ಆ ಧಾರ್ಮಿಕ ಗುರುಗಳು ನೋವಾದಲ್ಲಿ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳುವ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ.