ಡಾ. ಪುರುಷೋತ್ತಮ ಬಿಳಿಮಲೆ
ಗಾಂಧೀಜಿಯ ಬಗ್ಗೆ ದ್ವೇಷ ಹುಟ್ಟಿಸುವ ಕೆಲಸಗಳಿಂತ ಹೆಚ್ಚಾಗಿ ಗಾಂಧೀಜಿಯ ಬಗ್ಗೆ ಪ್ರೀತಿ ಹುಟ್ಟಿಸುವ ಕೆಲಸಗಳು ಈಚಿನ ದಿನಗಳಲ್ಲಿ ನಡೆಯುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಗೆಳೆಯ ಉದಯ ಗಾಂವಕಾರ ಅವರು ದಿಟ್ಟ ಹೆಜ್ಜೆಯೊಂದನ್ನು ಇರಿಸಿದ್ದಾರೆ. ಅವರು ಸರಳವಾದ ಕನ್ನಡದಲ್ಲಿ ಗಾಂಧಿಯವರ ಬದುಕಿನ ೫೧ ನೈಜ ಘಟನೆಗಳನ್ನು ವಿವರಿಸುವ ʻಮಕ್ಕಳಿಗಾಗಿ ಮಹಾತ್ಮʼ ಪುಟ್ಟ ಪುಸ್ತಕವನ್ನು ಬರೆದಿದ್ದಾರೆ.
ಪ್ರತಿ ಕತೆಯು ಸುಮಾರು ೫೦-೬೦ ಪದಗಳನ್ನು ಹೊಂದಿದ್ದು ಸ್ವತಂತ್ರವಾಗಿದೆ. ಅಂದರೆ ಯಾವ ಕತೆಯನ್ನಾದರೂ ಬೇಕಾದಾಗ, ಬೇಕಾದಲ್ಲಿಂದ ಓದಿಕೊಳ್ಳಬಹುದು. ಪ್ರತಿ ಕತೆಗೂ ಒಂದು ರೇಖಾ ಚಿತ್ರವನ್ನು ರಚಿಸಲಾಗಿದೆ. ಬೊಳುವಾರರ ಪುಟ್ಟ ಮುನ್ನುಡಿಯಿದೆ. ಕೇಶವ ಸಸಿಹಿತ್ಲು ಆಕರ್ಷಕವಾದ ವಿನ್ಯಾಸ ಮಾಡಿದ್ದಾರೆ. ೫೨ ಪುಟಗಳ ಈ ಪುಸ್ತಕವನ್ನು ಭಾರತ ಜ್ಞಾನ ವಿಜ್ಞಾನ ಸಮಿತಿ (ಕರ್ನಾಟಕ)ಯವರು ಕೇವಲ ೨೦ ರೂಪಾಯಿಗಳಿಗೆ ಮಕ್ಕಳಿಗೆ ತಲುಪಿಸುತ್ತಿದ್ದಾರೆ. ಈಗಾಗಲೇ ಸುಮಾರು ೫೦೦೦ ಪ್ರತಿಗಳು ಜನರನ್ನು ತಲುಪಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಗಾಂಧೀಜಿ ಆಕಾಶದಲ್ಲಿರುವ ಸೂರ್ಯನ ಹಾಗೆ. ಸೂರ್ಯನ ಬೆಳಕು ಮಲಗಿದ ಜನರನ್ನು ಎಚ್ಚರಿಸುತ್ತದೆ ಮಾತ್ರವಲ್ಲ ತನ್ನ ಎಳೆಯ ಮತ್ತು ಪ್ರಖರ ಕಿರಣಗಳನ್ನು ಎಲ್ಲೆಡೆಯೂ ಪಸರಿಸುತ್ತದೆ. ಅದಕ್ಕೆ ಮನುಷ್ಯ, ಪ್ರಾಣಿ, ಮರ, ಗಿಡ, ಬಳ್ಳಿ, ಹಳ್ಳ, ಗುಡ್ಡಗಳೆಂದು ವ್ಯತ್ಯಾಸ ಮಾಡಲು ಗೊತ್ತಿಲ್ಲ. ತನ್ನದೇ ಆದ ಬೆಳಕನ್ನು ನಿಸ್ವಾರ್ಥವಾಗಿ ಎಲ್ಲರಿಗೂ ಹಂಚುವುದು ಅದರ ಕೆಲಸ. ಆ ಬೆಳಕನ್ನು ಯಾರು ಹಿಡಿದುಕೊಂಡರೋ ಅವರು ಬದುಕಲ್ಲಿ ಗೆದ್ದರು, ಹಿಡಿದುಕೊಳ್ಳಲಾಗದವರು ಕತ್ತಲಲ್ಲಿ ಉಳಿದರು.
ಈ ಪುಸ್ತಕವು ಗಾಂಧೀಜಿಯ ವ್ಯಕ್ತಿತ್ವದ ಕೆಲವು ಕಿರಣಗಳನ್ನು ಸರಳವಾಗಿ ಹಿಡಿದುಕೊಡುತ್ತದೆ. ಇಲ್ಲಿನ ಹಲವು ಕಿರಣಗಳ ಮೂಲಕ ನಮಗೆ ಸೂರ್ಯನಂಥ ಗಾಂಧೀಜಿಯನ್ನು ಅರಿತುಕೊಳ್ಳಲು ಸಾಧ್ಯವಾದೀತು.
ಕಡಿಮೆ ಬೆಲೆಯ ಈ ಪುಸ್ತಕ ಹೆಚ್ಚು ಮಕ್ಕಳಿಗೆ ತಲುಪುವಂತೆ ಮಾಡಬೇಕಾದ್ದು ನಮ್ಮ ಕೆಲಸ. ನಮ್ಮೂರಿನ ಶಾಲೆಗಳಿಗೆ ತಲುಪಿಸುವ ಜವಾಬ್ದಾರಿ ನನ್ನದು.
ಉದಯ ಗಾಂವಕಾರ ಆಗಲೇ ಅಂಬೇಡ್ಕರ್ ಬಗ್ಗೆ ಇಂಥದ್ದೊಂದು ಪುಸ್ತಕ ತರುವ ಯೋಜನೆಯಲ್ಲಿ ತೊಡಗಿದ್ದಾರೆ.
ಪ್ರತಿಗಳಿಗೆ: ಭಾರತ ಜ್ಞಾನ ವಿಜ್ಞಾನ ಸಮಿತಿ(ಬಿಜಿವಿಎಸ್), ಕರ್ನಾಟಕ