ತನ್ನ ಜಾಗತಿಕ ಪ್ರಾಬಲ್ಯವನ್ನು ಬಲಪಡಿಸುವ ಪ್ರಯತ್ನದಲ್ಲಿರುವ ಅಮೆರಿಕ ಸಂಯುಕ್ತ ಸಂಸ್ಥಾನ (ಯುಎಸ್‍ಎ)ಕ್ಕೆ ಇದರಲ್ಲಿ ದೊಡ್ಡ ಅಡ್ಡಿಯಾಗಿ ಕಾಣಿಸುತ್ತಿರುವುದು ಚೀನಾದ ಶಕ್ತಿ. ಆದ್ದರಿಂದ ಅದನ್ನು ಒಬ್ಬಂಟಿಯಾಗಿಸುವ ಕಾರ್ಯತಂತ್ರದಲ್ಲಿ ಅಮೆರಿಕಾದ ಪ್ರಸಕ್ತ ಬೈಡನ್ ಆಡಳಿತ ಭಾರತ ಒಂದು ಮಖ್ಯ ಅಂಶ ಎಂಬ ಆದ್ಯತೆ ನೀಡುತ್ತದೆ ಎಂಬುದು ಈ ಬಾರಿಯ ಮೋದಿಯವರ ಅಮೆರಿಕಾ ಭೇಟಿಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಆದ್ದರಿಂದ ಅದು ಮೋದಿ ಸರಕಾರದ ಮಾನವ ಹಕ್ಕು- ವಿರೋಧಿ, ಅಲ್ಪಸಂಖ್ಯಾತ-ವಿರೋಧಿ ಕೃತ್ಯಗಳನ್ನು ಕಂಡೂ ಕಾಣದಂತೆ ಮಾಡುತ್ತಿದೆ, ಬದಿಗೊತ್ತುತ್ತಿದೆ. ಭಾರತದಿಂದ ಹೊರ ಹೋದಾಗ , ವಿದೇಶಗಳಲ್ಲಿ ಗಾಂಧೀ, ದೇಶದಲ್ಲಿ ಗೋಡ್ಸೆ ಎಂಬುದು ಮೋದಿಯವರ ಸೂತ್ರ ತಾನೇ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಟಿಪ್ಪಣಿ ಮಾಡಿದ್ದಾರೆ.
ಆದರೂ ಮೋದಿ ಸರ್ಕಾರದ ಅಡಿಯಲ್ಲಿ ಭಾರತದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಸಮಸ್ಯೆಗಳನ್ನು ಎತ್ತಲು ಬೈಡೆನ್ ಆಡಳಿತದ ನಿರಾಕರಣೆಯು ವ್ಯಾಪಕ ಟೀಕೆಗೆ ಒಳಗಾಗಿದೆ. 75 ಅಮೆರಿಕನ್ ಸಂಸತ್ ಸದಸ್ಯರು ಈ ವಿಷಯವನ್ನು ಅಧ್ಯಕ್ಷ ಬೈಡನ್ ಪ್ರಧಾನಿ ಮೋದಿಯವರ ಬಳಿ ಎತ್ತಬೇಕು ಎಂದು ಆಗ್ರಹಿಸಿದ್ದರು. ತಾನು ಇದನ್ನು ಮೋದಿಯವರೊಂದಿಗೆ ಎತ್ತುತ್ತಿದೆ ಎಂದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರನ್ನು ಬಿಜೆಪಿ ಮಂದಿ ಟ್ರೋಲ್ ಮಾಡಿದ್ದಾರೆ. ಭಾರತವು ಈಗ ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಂದು ಪ್ರಮುಖ ರಕ್ಷಣಾ ಪಾಲುದಾರ ಎಂದೆನಿಸಿಕೊಳ್ಳುವಂತೆ ಮಾಡಿರುವ ಹಿಂದಿನ ಪ್ರಮುಖ ಮಿಲಿಟರಿ ಮತ್ತು ರಕ್ಷಣಾ ಒಪ್ಪಂದಗಳ ಬೆನ್ನಿಗೆ ಈಗ GE-F 414 ಜೆಟ್ ಎಂಜಿನ್‌ನ ಜಂಟಿ ಉತ್ಪಾದನೆಯಂತಹ ತೀರ್ಮಾನಿಸಲಾದ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಪ್ರಧಾನಿ ಮೋದಿಯವರ ಅಧಿಕೃತ ಅಮೆರಿಕ ಭೇಟಿಯು ಭಾರತವು ಅಮೆರಿಕನ್ ಸಾಮ್ರಾಜ್ಯಶಾಹಿಯ ಅಡಿಯಾಳು ಕಿರಿಯ ಪಾಲುದಾರನಾಗಿರುವುದನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿಪ್ರಾಯ ಪಟ್ಟಿರುವುದಾಗಿ ಯೆಚುರಿ ತಿಳಿಸಿದರು.
ಇದು ಭಾರತದ ಸ್ವತಂತ್ರ ವಿದೇಶಾಂಗ ನೀತಿಯ ಹಿತದಲ್ಲಿಲ್ಲ ಎಂದು ಅವರು ಹೇಳಿದರು. ಸೀತಾರಾಂ ಯೆಚುರಿ ಜೂನ್ 24-25 ರಂದು ನವದೆಹಲಿಯಲ್ಲಿ ನಡೆದ ಸಿಪಿಐ(ಎಂ) ಪೊಲಿಟ್ ಬ್ಯೂರೋ ಸಭೆಯ ನಂತರ, ಆ ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
15 ಪ್ರತಿಪಕ್ಷಗಳ ಪಾಟ್ನಾ ಸಭೆ- ಜಾತ್ಯತೀತ – ಪ್ರಜಾಸತ್ತಾತ್ಮಕ ಸ್ವರೂಪವನ್ನು ಕಾಪಾಡಿಕೊಳ್ಳುವತ್ತ
ಜೂನ್ 23 ರಂದು ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಆಹ್ವಾನದ ಮೇರೆಗೆ 15 ವಿರೋಧ ಪಕ್ಷಗಳು ಪಾಟ್ನಾದಲ್ಲಿ ಸಭೆ ಸೇರಿದ್ದವು. ನಮ್ಮ ಗಣರಾಜ್ಯದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪವನ್ನು ಮತ್ತು ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳು ಮತ್ತು ಮೂಲಭೂತ ಹಕ್ಕುಗಳ ಕುರಿತು ಜನರಿಗೆ ನಮ್ಮ ಸಂವಿಧಾನವು ಒದಗಿಸಿರುವ ಖಾತರಿಗಳನ್ನು ಕಾಪಾಡಿಕೊಳ್ಳಲು ಒಟ್ಟಾಗಿ ಕೆಲಸ ಮಾಡಬೇಕು ಎಂಬ ಬಗ್ಗೆ ಒಮ್ಮತ ಆ ಸಭೆಯಲ್ಲಿ ವ್ಯಕ್ತಗೊಂಡಿತು. ಮೋದಿ ಸರಕಾರದಿಂದ ಈ ಹಕ್ಕುಗಳ ಮೇಲೆ ದಾಳಿಗಳು ನಡೆಯುತ್ತಿರುವುದರಿಂದ ಬಿಜೆಪಿಯನ್ನು ಸರಕಾರದಿಂದ ಮತ್ತು ಪ್ರಭುತ್ವದ ಅಧಿಕಾರದಿಂದ ದೂರ ಮಾಡುವುದು ಹೇಗೆ ಎಂದು ಯೋಚಿಸಬೇಕು. ಈ ಉದ್ದೇಶದಿಂದ ಪರಸ್ಪರ ಸಹಕರಿಸಬೇಕು ಎಂದು ಈ 15 ಪಕ್ಷಗಳು ಅಭಿಪ್ರಾಯ ಪಟ್ಟವು. ಈ ಸಹಕಾರ ಹೇಗಿರಬೇಕು ಎಂಬ ಬಗ್ಗೆ ವಿಚಾರ-ವಿಮರ್ಶೆಗಳನ್ನು ಮುಂದುವರೆಸಲು ನಿರ್ಧರಿಸಲಾಯಿತು.
ಈ ನಿಟ್ಟಿನಲ್ಲಿ ಜುಲೈ ಮಧ್ಯಭಾಗದಲ್ಲಿ ಶಿಮ್ಲಾದಲ್ಲಿ ಮತ್ತೆ ಸಭೆ ಸೇರಲು ನಿರ್ಧರಿಸಲಾಗಿದೆ ಎಂದು ಯೆಚುರಿಯವರು ಹೇಳಿದರು. ಸಿಪಿಐ(ಎಂ) ಮಟ್ಟಿಗೆ ಹೇಳುವುದಾದರೆ, ನಾವು ಮೂರಂಶಗಳ ನಿಲುವನ್ನು ಸೂಚಿಸಿದ್ದೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಗುಜರಾತಿನಲ್ಲಿ ಚುನಾವಣಾ ಆಯೋಗದ ಅತಿರೇಕದ ನಡೆ -ಸೀತಾರಾಂ ಯೆಚುರಿ
ಮೊದಲನೆಯದಾಗಿ, ಜನಗಳ ಹಕ್ಕುಗಳ ರಕ್ಷಣೆ, ಸಂವಿಧಾನದ ರಕ್ಷಣೆ ಮುಂತಾದ ರಾಷ್ಟ್ರೀಯ ಕಾಳಜಿಯ ಪ್ರಮುಖ ಪ್ರಶ್ನೆಗಳ ಮೇಲೆ ವಿರೋಧ ಪಕ್ಷಗಳು ಜಂಟಿಯಾಗಿ ದೇಶದ ಪ್ರಮುಖ ಕೇಂದ್ರಗಳಲ್ಲಿ ಅಖಿಲ ಭಾರತ ಅಭಿಯಾನಗಳನ್ನು ನಡೆಸಬೇಕು.
ಎರಡನೆಯದಾಗಿ, ವಿಪರೀತಕ್ಕೇರಿರುವ ನಿರುದ್ಯೋಗ, ಬೆಲೆಯೇರಿಕೆ, ಅರ್ಥವ್ಯವಸ್ಥೆ ಇನ್ನೂ ಚೇತರಿಸಿಕೊಳ್ಳದಿರುವುದು, ದೇಶದ ಹೆಚ್ಚುತ್ತಿರುವ ಸಂಪತ್ತು ಕೇವಲ 1% ಮಂದಿಯ ಪಾಲಾಗಿ ಅಸಮಾನತೆ ವಿಪರೀತವಾಗಿ ಹೆಚ್ಚುತ್ತಿರುವುದು ಮುಂತಾದ ಶೀಘ್ರವಾಗಿ ಹದಗೆಡುತ್ತಿರುವ ಜನರ ಜೀವನೋಪಾಯದ ಸಮಸ್ಯೆಗಳ ಕುರಿತು ಜಂಟಿ ಪ್ರತಿಭಟನಾ ಕಾರ್ಯಾಚರಣೆಗಳನ್ನು ಕೈಗೆತ್ತಿಕೊಳ್ಳಬೇಕು.
ಮತ್ತು ಮೂರನೆಯದಾಗಿ, ರಾಜಕೀಯ ಪರಿಸ್ಥಿತಿ ಪ್ರತಿಯೊಂದು ರಾಜ್ಯದಲ್ಲಿ ಭಿನ್ನವಾಗಿದೆ. ಆದ್ದರಿಂದ ಮುಂಬರುವ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ವಿರೋಧ ಪಕ್ಷದ ಮತಗಳ ವಿಭಜನೆಯಿಂದ ಬಿಜೆಪಿ ಪಡೆಯುವ ಲಾಭವನ್ನು ಕನಿಷ್ಟಮಟ್ಟಕ್ಕಿಳಿಸಲು, ಚುನಾವಣಾ ರಂಗವನ್ನೋ, ಚುನಾವಣಾ ಹೊಂದಾಣಿಕೆಯನ್ನೋ ರೂಪಿಸುವ ಬಗ್ಗೆ ವಿರೋಧ ಪಕ್ಷಗಳ ನಡುವೆ ಪ್ರತಿ ರಾಜ್ಯದ ಮಟ್ಟದಲ್ಲಿ ಚರ್ಚೆಗಳನ್ನು ಪ್ರಾರಂಭಿಸಬೇಕು.
ಇದು ನಮ್ಮ ಗಣತಂತ್ರದ ಪ್ರಜಾಸತ್ತಾತ್ಮಕ ಮತ್ತು ಜಾತ್ಯಾತೀತ ಚಾರಿತ್ರ್ಯವನ್ನು ಕಾಪಾಡಿಕೊಳ್ಳುವ ದಿಕ್ಕಿನಲ್ಲಿ ಸಾಗಬೇಕಾದ ದಾರಿ ಎಂದು ತಮ್ಮ ಪಕ್ಷ ಸೂಚಿಸಿರುವುದಾಗಿ ಯೆಚುರಿ ಹೇಳಿದರು.
ಮಣಿಪುರ-ಧ್ರುವೀಕರಣದ ಪ್ರಯತ್ನಗಳು ತಕ್ಷಣವೇ ನಿಲ್ಲಬೇಕು
ಮೇ 3 ರಂದು ಪ್ರಾರಂಭವಾದ ಮಣಿಪುರದ ಜನಾಂಗೀಯ ಹಿಂಸಾಚಾರ 7 ವಾರಗಳ ನಂತರವೂ ಮುಂದುವರೆಯುತ್ತಿರುವ ಬಗ್ಗೆ ಪೊಲಿಟ್‍ಬ್ಯುರೊ ತೀವ್ರ ಕಳವಳ ವ್ಯಕ್ತಪಡಿಸಿತು ಎಂದು ತಿಳಿಸಿದ ಯೆಚುರಿಯವರು ಹಿಂಸಾಚಾರ ಈಗಲೂ ನಿಲ್ಲುವಂತೆ ಕಾಣುತ್ತಿಲ್ಲ, ಶಸ್ತ್ರಾಗಾರಗಳ ಮೇಲೆ ದಾಳಿ ಮಾಡಲಾಗುತ್ತಿದೆ, ಕಾದಾಡುವ ಗುಂಪುಗಳು ಪರಸ್ಪರರ ವಿರುದ್ಧ ಡ್ರೋನ್‍ಗಳನ್ನು ಕೂಡ ಬಳಸುತ್ತಿದ್ದಾರೆ, ಪೋಲೀಸ್ ವೈರ್‍ಲೆಸ್‍ಗಳನ್ನು ಬಳಸುತ್ತಿದ್ದಾರೆ ಎಂದರು.
ಮೋದಿ ಸರಕಾರ ಪರಿಸ್ಥಿತಿ ಈ ಮಟ್ಟದ ವರೆಗೆ ಹೋಗಲು ಬಿಟ್ಟಿದೆ ಎಂದ ಯೆಚುರಿಯವರು ಪ್ರಧಾನ ಮಂತ್ರಿಗಳು ಈ ಬಗ್ಗೆ ಉಸಿರೆತ್ತಿಲ್ಲದಿರುವುದು ಆಘಾತಕಾರಿ ಸಂಗತಿ ಎಂದು ಹೇಳಿದರು. ಹಿಂಸಾಚಾರ ಆರಂಭವಾಗಿ ಪೂರ್ಣ 26 ದಿನಗಳ ನಂತರ ಮೇ 29ರಂದು ಗೃಹ ಸಚಿವರು ಅಲ್ಲಿಗೆ ಭೇಟಿ ನೀಡಿದರು, ಶಾಂತಿ ಸಮಿತಿ ರಚಿಸುವುದಾಗಿ ಪ್ರಕಟಿಸಿದರು. ಆದರೆ
ಕಾನೂನು-ಸುವ್ಯವಸ್ಥೆಯ ಮೇಲೆ ಅವರ ಭೇಟಿ ಯಾವುದೇ ಪರಿಣಾಮ ಬೀರಿಲ್ಲ. ಡಬಲ್ ಇಂಜಿನ್ ಬಿಜೆಪಿ ಸರ್ಕಾರವು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಈ ಹಿಂಸಾಚಾರದಲ್ಲಿ ಶಾಮೀಲಾಗಿರುವ ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಅಸಮರ್ಥವಾಗಿರುವ ರಾಜ್ಯದ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಲು ಮೋದಿ ಸರ್ಕಾರ ನಿರಾಕರಿಸಿದ್ದರಿಂದ ಗೃಹ ಸಚಿವರು ಕರೆದ ಸರ್ವಪಕ್ಷ ಸಭೆಯು ಯಾವುದೇ ಪರಿಣಾಮ ಬೀರಲಿಲ್ಲ.
ಈ ಹಿಂಸಾಚಾರ ತಕ್ಷಣವೇ ನಿಲ್ಲಬೇಕು ಮತ್ತು ರಾಜ್ಯ ಬೇಗನೇ ಸಹಜ ಸ್ಥಿತಿಗೆ ಮರಳುವಂತಾಗಬೇಕು, ಈ ವಿಷಯದಲ್ಲಿ ಯಾವುದೇ ಹಿಂಜರಿಕೆ ಇರಬಾರದು, ಬಿಜೆಪಿ ಒಂದು ಗುಂಪಿನ ಅಸ್ಮಿತೆಯ ಎದುರು ಇನ್ನೊಂದರ ಅಸ್ಮಿತೆಯನ್ನು ಎತ್ತು ಕಟ್ಟುವುದನ್ನು, ಇದು ಹಿಂದು ಮೈತೇಯಿ ಮತ್ತು ಕ್ರೈಸ್ತ ಕುಕ್ಕಿ ಜನಾಂಗಗಳ ನಡುವಿನ ವೈಷಮ್ಯ ಎಂಬ ಕೋಮು ಧ್ರುವೀಕರಣದ ಪ್ರಯತ್ನಗಳನ್ನು ದೇಶದ ಹಿತದೃಷ್ಟಿಯಿಂದ ನಿಲ್ಲಿಸಬೇಕು ಎಂದು ಯೆಚುರಿ ಆಗ್ರಹಿಸಿದರು.
ಮತ್ತೆ ಏಕರೂಪ ನಾಗರಿಕ ಸಂಹಿತೆ
ಏಕರೂಪ ನಾಗರಿಕ ಸಂಹಿತೆ ಕುರಿತು ಕಾನೂನು ಆಯೋಗ ಮತ್ತೊಮ್ಮೆ ಸಮಾಲೋಚನೆ ಆರಂಭಿಸಿದೆ. ಹಿಂದಿನ ಕಾನೂನು ಆಯೋಗವು ಇದೇ ರೀತಿಯ ಕಸರತ್ತನ್ನು ನಡೆಸಿದ್ದು, 2018 ರಲ್ಲಿ “ಈ ಹಂತದಲ್ಲಿ ಅದರ ಅಗತ್ಯವೂ ಇಲ್ಲ ಅಥವಾ ಅಪೇಕ್ಷಣೀಯೂ ಅಲ್ಲ” ಎಂಬ ತೀರ್ಮಾನಕ್ಕೆ ಬಂದಿತ್ತು. ಸಿಪಿಐ(ಎಂ) ಈ ನಿಲುವನ್ನು ಅನುಮೋದಿಸಿತ್ತು ಎಂದು ಯೆಚುರಿ ನೆನಪಿಸಿದರು.
ಏಕರೂಪತೆ ಎಂದರೆ ಸಮಾನತೆ ಎಂದು ಸಮೀಕರಿಸಲು ಸಾಧ್ಯವಿಲ್ಲ. ಸಿಪಿಐ(ಎಂ) ಎಲ್ಲಾ ಸಮುದಾಯಗಳ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸುತ್ತದೆ. ಈ ಸಮುದಾಯಗಳ ಎಲ್ಲಾ ಪುರುಷರು ಮತ್ತು ಮಹಿಳೆಯರ ಸಕ್ರಿಯ ಪ್ರಜಾಸತ್ತಾತ್ಮಕ ಭಾಗವಹಿಸುವಿಕೆಯೊಂದಿಗೆ ವಿವಿಧ ಸಮುದಾಯಗಳಿಗೆ ಅನ್ವಯವಾಗುವ ವೈಯಕ್ತಿಕ ಅಥವಾ ಸಾಂಪ್ರದಾಯಿಕ ಕಾನೂನುಗಳ ಸುಧಾರಣೆಯ ಮೂಲಕ ಇದನ್ನು ಉತ್ತಮವಾಗಿ ಪ್ರತಿಪಾದಿಸಲು ಸಾಧ್ಯವಿದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಡುವುದಾಗಿ ಯೆಚುರಿ ಹೇಳಿದರು.
ಜನರ ಹಣದ ಲೂಟಿಯನ್ನು ಕಾನೂನುಬದ್ಧಗೊಳಿಸುವ ಆರ್ ಬಿ ಐ ಕ್ರಮ
ದೊಡ್ಡ ಮೊತ್ತದ ಬ್ಯಾಂಕ್ ಸಾಲಗಳನ್ನು ಪಡೆದಿರುವ ಮತ್ತು ಪಾವತಿಸುವ ಸಾಮರ್ಥ್ಯವಿದ್ದರೂ ಮರುಪಾವತಿ ಮಾಡಲು ನಿರಾಕರಿಸುವ ಉದ್ದೇಶಪೂರ್ವಕ ಸುಸ್ತಿದಾರರು ಮಾಡಿರುವ ಜನರ ಉಳಿತಾಯದ ಲೂಟಿಯನ್ನು ಕಾನೂನುಬದ್ಧಗೊಳಿಸುವ ಆರ್‌ಬಿಐ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಪೊಲಿಟ್ ಬ್ಯುರೊ ಒತ್ತಾಯಿಸಿದೆ. ಆರ್‌ಬಿಐ ಸುತ್ತೋಲೆಯು ಅಂತಹ ಸುಸ್ತಿದಾರರಿಗೆ ಬ್ಯಾಂಕ್‌ಗಳೊಂದಿಗೆ ರಾಜಿ ಇತ್ಯರ್ಥಕ್ಕೆ ಹೋಗಲು ಅನುಮತಿ ನೀಡುತ್ತದೆ. ಅಂತಹವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಬ್ಯಾಂಕ್ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ವಸೂಲಿ ಮಾಡಬೇಕು ಎಂದು ಪೊಲಿಟ್‍ಬ್ಯುರೊ ಆಗ್ರಹಿಸುವುದಾಗಿ ಯೆಚುರಿ ತಿಳಿಸಿದರು.
“ರಾಜ್ಯಗಳಿಗೆ ಅಕ್ಕಿ ಪೂರೈಕೆಯನ್ನು ಮರುಸ್ಥಾಪಿಸಿ”
ಅತ್ಯಂತ ಸರ್ವಾಧಿಕಾರಿ ಮತ್ತು ಪ್ರಜಾಸತ್ತಾತ್ಮಕವಲ್ಲದ ರೀತಿಯಲ್ಲಿ ಮೋದಿ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಅಕ್ಕಿಯನ್ನು ಮಾರಾಟ ಮಾಡದಂತೆ ಭಾರತೀಯ ಆಹಾರ ನಿಗಮಕ್ಕೆ ನಿರ್ದೇಶನ ನೀಡಿದೆ. ಬಿಜೆಪಿಯೇತರ ಸರ್ಕಾರಗಳು ಜನರಿಗೆ ಪರಿಹಾರ ನೀಡುವ ಭರವಸೆಗಳನ್ನು ಈಡೇರಿಸುವುದನ್ನು ತಡೆಯುವ ಗುರಿಯನ್ನು ಈ ಕ್ರಮ ಹೊಂದಿದೆ ಎಂದು ಯೆಚುರಿ ಹೇಳಿದರು.
ಪೂರ್ವ-ಪಾವತಿ ಸ್ಮಾರ್ಟ್ ಮೀಟರ್‌ಗಳ ಯೋಜನೆಯನ್ನು ಕೈಬಿಡಬೇಕು
ವಿದ್ಯುತ್ ಗ್ರಾಹಕರಿಗಾಗಿ ಪೂರ್ವ ಪಾವತಿ ವ್ಯವಸ್ಥೆಯೊಂದಿಗೆ ಸ್ಮಾರ್ಟ್ ಮೀಟರ್ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೊಳಿಸುತ್ತಿದೆ. ಅನೇಕ ರಾಜ್ಯಗಳ ಮೇಲೆ ಈ ಯೋಜನೆಯನ್ನು ಜಾರಿಗೊಳಿಸಲು ಮತ್ತು ಆ ಮೂಲಕ ವಿದ್ಯುತ್ ವಿತರಣೆಯ ಜವಾಬ್ದಾರಿಯಿಂದ ಹಿಂದೆ ಸರಿಯಲು ಹಾಗೂ ಅದನ್ನು ಖಾಸಗಿ ಕಾರ್ಪೊರೇಟ್‌ಗಳಿಗೆ ಗರಿಷ್ಟ ಲಾಭಗಳಿಕೆಗಾಗಿ ಹಸ್ತಾಂತರಿಸುವ ಒತ್ತಾಯ ಹಾಕಲಾಗುತ್ತಿದೆ. ಇದರಿಂದ ಬಡವರು ಹಾಗೂ ರೈತರ ಮೇಲೆ ಅಸಹನೀಯ ಹೊರೆ ಬೀಳಲಿದೆ. ಇನ್ನೊಂದೆಡೆಯಲ್ಲಿ ಇದರಿಂದ ಯಾರಿಗೆ ಲಾಭ ದಕ್ಕುತ್ತದೆ ಎಂಬುದು ಸ್ಪಷ್ಟ ಎಂದು ಅದಾಣಿ ಉದ್ಯಮ ಗುಂಪಿನತ್ತ ಸಂಕೇತ ಮಾಡುತ್ತ ಹೇಳಿದ ಕೂಡಲೇ ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಅಸ್ಸಾಂ ಚುನಾವಣಾ ಕ್ಷೇತ್ರಮರುವಿಂಗಡಣೆಗೆ ವಿರೋಧ
2001 ರ ಜನಗಣತಿಯ ಆಧಾರದ ಮೇಲೆ 2023 ರಲ್ಲಿ ಅಸ್ಸಾಂನ ವಿಧಾನಸಭಾ ಕ್ಷೇತ್ರಗಳ ಮರು ವಿಂಗಡಣೆಯನ್ನು ಮಾಡಬೇಕೆಂಬುದನ್ನು ಪೊಲಿಟ್‍ಬ್ಯುರೊ ವಿರೋಧಿಸುತ್ತದೆ. ಸ್ಪಷ್ಟವಾಗಿಯೂ, ಚುನಾವಣಾ ಆಯೋಗವು ಕ್ಷೇತ್ರಮರುವಿಂಗಡಣೆಗೆ ಒಂದು ಪ್ರತ್ಯೇಕ ಆಯೋಗವನ್ನು ರಚಿಸದೆ ಆಡಳಿತಾರೂಢ ಬಿಜೆಪಿ.ರಾಜಕೀಯ ಉದ್ದೇಶಗಳನ್ನು ಪೂರೈಸಲು ಮತ್ತು ಮುನ್ನಡೆಸಲು ಈ ಕಸರತ್ತನ್ನು ನಡೆಸಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿಪ್ರಾಯ ಪಟ್ಟಿದೆ. ಈ ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ ಹೀಗೆ ಮಾಡಲಾಗಿದೆ ಎಂದು ಯೆಚುರಿ ನೆನಪಿಸಿದರು.
ಕುಸ್ತಿಪಟುಗಳ ಪ್ರತಿಭಟನೆ- ಆರೋಪಿ ಸಂಸದರನ್ನು ಬಂಧಿಸಬೇಕು
ಮಹಿಳಾ ಕುಸ್ತಿಪಟುಗಳು ಬಿಜೆಪಿಯ ಸಂಸದನ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳಲ್ಲಿ ಮೇಲ್ನೋಟಕ್ಕೇ ಸಾಕ್ಷ್ಯಗಳಿದ್ದರೂ ಆತನನ್ನು ರಕ್ಷಿಸುವ ಸಂಕಲ್ಪ, ತಮ್ಮ ಬೆಂಬಲಿಗರಾಗಿರುವ ಲೈಂಗಿಕ ಕಿರುಕುಳ ಪ್ರಕರಣಗಳ ಆರೋಪಿಗಳನ್ನು ಕಾಪಾಡಲು ಮೋದಿ ಸರ್ಕಾರ ಮತ್ತು ಬಿಜೆಪಿ ನಾಚಿಕೆಯಿಲ್ಲದೆ ಮುಂದಾಗುತ್ತದೆ ಎಂಬುದನ್ನು ಪ್ರತಿಫಲಿಸಿದೆ. ಸಂತ್ರಸ್ತ ಮಹಿಳೆ ತನ್ನ ಹೇಳಿಕೆಯನ್ನು ಹಿಂಪಡೆಯುವಂತೆ ಒತ್ತಡ ಹೇರಲು ಆರೋಪಿಗೆ ಸಮಯಾವಕಾಶ ನೀಡಲಿಕ್ಕಾಗಿಯೇ ಪೋಕ್ಸೊ ಅಡಿಯಲ್ಲಿ ಆರೋಪಗಳನ್ನು ಒಳಗೊಂಡಂತೆ ಈ ಪ್ರಕರಣಗಳ ತನಿಖೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಲು ಕಾರ್ಯವಿಧಾನಗಳನ್ನು ಅದು ಬಾಗಿಸಿತ್ತು. ಇದು ಲೈಂಗಿಕ ಕಿರುಕುಳದ ಅಪ್ರಾಪ್ತ ವಯಸ್ಕ ಸಂತ್ರಸ್ತೆಯರ ದೂರುಗಳ ಎಲ್ಲಾ ಪ್ರಕರಣಗಳ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಬೀರುತ್ತದೆ. ಆರೋಪಿ ಸಂಸದರನ್ನು ತಡಮಾಡದೆ ಬಂಧಿಸಬೇಕೆಂಬ ತನ್ನ ಬೇಡಿಕೆಯನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಪುನರುಚ್ಚರಿಸಿರುವುದಾಗಿ ಯೆಚುರಿ ತಿಳಿಸಿದರು.
ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ- ಪ್ರತಿರೋಧದಿಂದಾಗಿ,
ಅವಿರೋಧ ಆಯ್ಕೆಯ ಸಂಖ್ಯೆಯಲ್ಲಿ 2/3 ರಷ್ಟು ಇಳಿಕೆ
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರದ ಅಡಿಯಲ್ಲಿ ಚುನಾವಣೆಗಳಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ಮತ್ತು ಭಯೋತ್ಪಾದನೆ ಒಂದು ಸಾಮಾನ್ಯ ಸಂಗತಿ ಎಂದು ಗುರುತಿಸಲ್ಪಟ್ಟಿದೆ. ಈಗ ನಡೆಯುತ್ತಿರುವ ಪಂಚಾಯತಿ ಚುನಾವಣೆಯಲ್ಲಿ, ಒಬ್ಬ ಯುವ ಸಿಪಿಐ(ಎಂ) ಕಾರ್ಯಕರ್ತ ಕಾಂ. ಮನ್ಸೂರ್ ಆಲಂ ಸೇರಿದಂತೆ 10 ಜನರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಹಿಂಸಾಚಾರ ಮತ್ತು ಭಯೋತ್ಪಾದನೆಯ ರಾಜಕೀಯದ ಹೊರತಾಗಿಯೂ, ಪಶ್ಚಿಮ ಬಂಗಾಳದ ಜನರು ಪ್ರಜಾಪ್ರಭುತ್ವದ ಈ ಕೊಲೆಯನ್ನು ವಿರೋಧಿಸುತ್ತಿದ್ದಾರೆ ಮತ್ತು ಜನರ ಪಂಚಾಯತ್‌ಗಳನ್ನು ಸ್ಥಾಪಿಸಲು ಧೈರ್ಯದಿಂದ ಮುಂದೆ ಬರುತ್ತಿದ್ದಾರೆ. ಕಳೆದ ಪಂಚಾಯತ್ ಚುನಾವಣೆಯಲ್ಲಿ ಅಭೂತಪೂರ್ವ ಭಯೋತ್ಪಾದನೆಯಿಂದಾಗಿ ಶೇಕಡಾ 34 ರಷ್ಟು ಸ್ಥಾನಗಳಿಗೆ ಚುನಾವಣೆಗಳು ಅವಿರೋಧವಾಗಿ ನಡೆದವು. ಈ ಚುನಾವಣೆಗಳಲ್ಲಿ, ಅಂತಹ ಭಯೋತ್ಪಾದನೆಗೆ ಬಂದ ಪ್ರತಿರೋಧದಿಂದಾಗಿ, ಅವಿರೋಧ ಆಯ್ಕೆಯ ಸಂಖ್ಯೆ ಸುಮಾರು 2/3 ರಷ್ಟು ಕಡಿಮೆಯಾಗಿದೆ ಎಂದು ಯೆಚುರಿ ಹೇಳಿದರು.
NFHS ಸಮೀಕ್ಷೆಯಿಂದ ಅಂಗವೈಕಲ್ಯ ಪ್ರಶ್ನೆಗಳನ್ನು ಕೈಬಿಟ್ಟಿರುವದೇಕೆ ?
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6 (NFHS -6)ರಿಂದ ಅಂಗವೈಕಲ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೈಬಿಡುವುದರ ಬಗ್ಗೆ ಪೊಲಿಟ್ ಬ್ಯೂರೋ ಗಂಭೀರ ಕಾಳಜಿ ವ್ಯಕ್ತಪಡಿಸಿದೆ. ಹಿಂದಿನ ಸುತ್ತಿನಲ್ಲಿ ಕೇಳಲಾದ ಪ್ರಶ್ನೆಗಳು ದೋಷಪೂರಿತವಾಗಿದ್ದರೂ ಸಹ, ಅವುಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಒಂದು ಹಿಮ್ಮುಖ ಹೆಜ್ಜೆಯಾಗಿದೆ. NFHS-6 ರಲ್ಲಿ ಅಂಗವೈಕಲ್ಯ ಸಂಬಂಧಿತ ಪ್ರಶ್ನೆಗಳನ್ನು ಸೇರಿಸಲು ಪೊಲಿಟ್ ಬ್ಯುರೊ ಒತ್ತಾಯಿ ಸಿದೆ ಎಂದು ಸೀತಾರಾಂ ಯೆಚುರಿ ಹೇಳಿದರು.