ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರದಲ್ಲಿ ಇಂದು ಮತ್ತೆ ಭೂಕಂಪನ ಸಂಭವಿಸಿದ ಅನುಭವವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದು, ಬೆಳಗ್ಗೆ 11.20ರ ಸುಮಾರಿನಲ್ಲಿ ಭೂಮಿಯಿಂದ ಜೋರು ಸದ್ದು ಕೇಳಿಬಂದಿದೆ. ಭೂಮಿ ಕಂಪಿಸಿದ ಅನುಭವವಾಗಿದೆ ಎಂದಿದ್ದಾರೆ.
ಕಳೆದ ಕೆಲವು ದಿನಗಳಿಂದ ಭೂಕಂಪನದಿಂದಾಗಿ ಗಡಿಕೇಶ್ವಾರದಲ್ಲಿ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ. ಇಂದು ಭೂಕಂಪನ ಸಂಭವಿಸಿದ ಕೂಡಲೇ ಎಚ್ಚೆತ್ತ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ಓಡಿದ್ದಾರೆ. ಸತತವಾಗಿ ಇಲ್ಲಿ ಭೂಮಿ ಕಂಪಿಸುತ್ತಿದ್ದು ಇದರಿಂದ ಇಲ್ಲಿ ನಿವಾಸಗಳು ಬೀದಿಗೆ ಬಿದ್ದಿವೆ.
ಗಡಿಕೇಶ್ವಾರ ಗ್ರಾಮವು ಕಲಬುರಗಿಯಿಂದ 75 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿನ ಜನರ ಬದುಕು ಈಗ ಅತಂತ್ರವಾಗಿದೆ. ಸುಮಾರು 800 ಮನೆಗಳಿದ್ದು, ಪದೇ ಪದೇ ಭೂಮಿ ಕಂಪಿಸಿದ ಅನುಭವವಾಗುತ್ತಿರುವುದರಿಂದ ಗ್ರಾಮಸ್ಥರು ಆತಂಕದಿಂದ ಊರು ತೊರೆಯುತ್ತಿದ್ದಾರೆ. ಈಗಾಗಲೇ ಶೇಕಡಾ 75ರಷ್ಟು ಮಂದಿ ನಿವಾಸಿಗಳು ಗ್ರಾಮ ತೊರೆದಿದ್ದು, ಅಳಿದುಳಿದ ನಿವಾಸಿಗಳು ಬೀದಿಗಳಲ್ಲೇ ಜೀವನ ಸಾಗಿಸುವಂತಾಗಿದೆ.
ಗಡಿಕೇಶ್ವಾರ ಸುತ್ತಮುತ್ತಲಿನ ಪ್ರದೇಶದಲ್ಲಿ ಅಕ್ಟೋಬರ್ 8ರಿಂದ ನಿರಂತರ ಭೂಕಂಪನ ಸಂಭವಿಸುತ್ತಿದ್ದು, ಅಕ್ಟೋಬರ್ 11ರಂದು ಸಂಭವಿಸಿದ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.0 ದಾಖಲಾಗಿತ್ತು. ಅಕ್ಟೋಬರ್ 12ರಂದು ಸಂಭವಿಸಿದ ಭೂಕಂಪನ ತೀವ್ರತೆ 3.5 ದಾಖಲಾಗಿದೆ. ಸುಮಾರು 20 ಕಿ.ಮೀ ವ್ಯಾಪ್ತಿಯಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿವೆ. ಇಲ್ಲಿನ ಗಡಿಕೇಶ್ವಾರ, ಕೊಡದೂರು, ಹಲಚೇರಾ, ಕುಪನೂರ, ಕೊರವಿ ಗ್ರಾಮಗಳ ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿಸಿದೆ.
ಗ್ರಾಮದಲ್ಲಿ ನಿರಂತರ ಭೂಕಂಪನ ಹಾಗೂ ಭೂಮಿಯಿಂದ ಸದ್ದು ಕೇಳಿ ಬರುತ್ತಿದ್ದು ಇವುಗಳು ಭೂಕಂಪದ ಪೂರ್ವ ಕಂಪನಗಳೆ ಅಥವಾ ಲಘು ಕಂಪನ ಎಂಬುದು ಪತ್ತೆ ಹಚ್ಚಲು ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ. ಇಂದು ಹೈದರಾಬಾದ್‌ನ ರಾಷ್ಟ್ರೀಯ ಭೂಭೌತ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಸುರೇಶ ಗುಂಡಪತಿ ಭೇಟಿ ನೀಡಲಿದ್ದಾರೆ. ಭಾನುವಾರ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳಾದ ಡಾ. ರಮೇಶ ದಿಕ್ಪಾಲ್, ಡಾ. ಅಭಿನಯ, ಸಂತೋಷಕುಮಾರ ಭೇಟಿ ನೀಡಿ ಅಧ್ಯಯನ ಮುಂದುವರೆಸುವರು ಎಂದು ತಹಶೀಲ್ದಾರ್ ಅಂಜುಮ್ ತಬಸ್ಸುಮ್ ತಿಳಿಸಿದ್ದಾರೆ.
ಎರಡು ಪ್ರತ್ಯೇಕ ಆಶ್ರಯ ಕೇಂದ್ರ ಸ್ಥಾಪನೆ
ಭೂಕಂಪನ ಪೀಡಿತ ಗ್ರಾಮದಲ್ಲಿ ಗ್ರಾಮಸ್ಥರು ಗ್ರಾಮ ತೊರೆಯುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸ್ಥಳೀಯರಿಗಾಗಿ ಎರಡು ಪ್ರತ್ಯೇಕ ಆಶ್ರಯ ಕೇಂದ್ರಗಳನ್ನು ನಿರ್ಮಿಸಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಆಶ್ರಯ ನೀಡಲಾಗಿದೆ. ಈ ಹಿಂದೆ ಇದೇ ಗಡಿಕೇಶ್ವಾರ ಗ್ರಾಮದ ಗ್ರಾಮಸ್ಥರು ಆಶ್ರಯ ಕೇಂದ್ರ ನಿರ್ಮಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಅಲ್ಲದೆ ಗ್ರಾಮಸ್ಥರು ಹೊದಿಕೆ ಮತ್ತು ಕಂಬಳಿಗಾಗಿ ಮನವಿ ಮಾಡಿದ್ದು. ಈ ಸಂಬಂಧ ಶೀಘ್ರದಲ್ಲೇ ಕ್ರಮಕೈಗೊಳ್ಳುತ್ತೇವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಕಳೆದ ಮಂಗಳವಾರ ಉಪ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ಅವರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಈ ವೇಳೆ ಸೇಡಂ ಶಾಸಕ ರಾಜ್ ಕುಮಾರ್ ಪಾಟೀಲ್ ತೆಲ್ಕುರ್, ಕಲಬರಗಿ ಸಂಸದ ಉಮೇಶ್ ಜಾದವ್ ಅವರು ಕೂಡ ಗ್ರಾಮಕ್ಕೆ ಆಗಮಿಸಿ ತಜ್ಞರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಎಲ್ಲ ಅಧಿಕಾರಿಗಳು ಮತ್ತು ನಾಯಕರು ಗ್ರಾಮಸ್ಥರಲ್ಲಿ ಧೈರ್ಯ ತುಂಬುವ ಕಾರ್ಯ ಮಾಡಿದರು.
ಅಧಿಕಾರಿಗಳು ಗ್ರಾಮದ ಆಯಕಟ್ಟಿನ ಸ್ಥಳಗಳಲ್ಲಿ ಮಾರ್ಗದರ್ಶಿ ಫಲಕಗಳ ಅಳವಡಿಸಿದ್ದು, ಇದರಲ್ಲಿ ಭೂಕಂಪನ ಸಂಭವಿಸಿದಾಗ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ ಕುರಿತು ಮಾರ್ಗದರ್ಶನ ಮಾಡಲಾಗಿದೆ.