ಗಡಿ ವಿವಾದ ಬೆಳೆಯಲು ಬಿಟ್ಟು ರಾಜಕೀಯ ಮಾಡುವುದು ಬಿಜೆಪಿಯ ಹುಟ್ಟುಗುಣ: ಸಿದ್ದರಾಮಯ್ಯ ಆರೋಪ

ಬೆಂಗಳೂರು: ಬಿಜೆಪಿ ಪಕ್ಷ ಗಡಿ ವಿವಾದವನ್ನು ಬೆಳೆಸುವುದು ಅದರ ಹುಟ್ಟುಗುಣವಾಗಿದೆ. ಆ ಮೂಲಕ ರಾಜಕೀಯಕ್ಕೆ ಬಳಸಿಕೊಳ್ಳುವುದು ಬಿಜೆಪಿ ಪಕ್ಷದ ಗುಣವಾಗಿದೆ ಎಂದು  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿ ಎದ್ದಿರುವ ವಿವಾದ ತಾರಕ್ಕೇರಿದ್ದು, ಈ ಬಗ್ಗೆ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ವಿವಾದಗಳನ್ನು ಬೆಳೆಯಲು ಬಿಟ್ಟು ರಾಜಕೀಯಕ್ಕೆ ಬಳಸುವುದು ಬಿಜೆಪಿ ಪಕ್ಷದ ಹುಟ್ಟುಗುಣ. ಸಂಧಾನದ ಮೂಲಕ ಪರಿಹರಿಸಬೇಕಿದ್ದ ಬೆಳಗಾವಿ ಗಡಿ ವಿವಾದವನ್ನು ಬೆಳೆಯಲು ಬಿಟ್ಟು ರಾಜ್ಯ ಸರ್ಕಾರ ಚಂದ ನೋಡುತ್ತಾ ಕೂತಿದೆ ಎಂದು ಬರೆದಿದ್ದಾರೆ.

ಬೆಳಗಾವಿ-ಮಹಾರಾಷ್ಟ್ರ ನಡುವಿನ ಬಸ್ ಸಂಚಾರ ಸ್ಥಗಿತಗೊಂಡಿರುವ ಕಾರಣ ಜನ ಪರದಾಡುವಂತಾಗಿದೆ. ಎರಡೂ ಕಡೆಗಳಲ್ಲಿ ಜನ ಉದ್ರಿಕ್ತರಾಗಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಶಾಂತಿ ಕಾಪಾಡಬೇಕು. ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ವಿರುದ್ಧ ಅಲ್ಲಿನ ಸರ್ಕಾರ ಅತಿರೇಕದ ಕ್ರಮಗಳಿಗೆ ಮುಂದಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಆ ರಾಜ್ಯದ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ಮಹಾರಾಷ್ಟ್ರದ ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಡಬಲ್ ಎಂಜಿನ್ ಸರ್ಕಾರ ಎಂದು ಎದೆ ಬಡಿದುಕೊಂಡರೆ ಸಾಲದು. ಆ ಅವಕಾಶವನ್ನು ಬಳಸಿಕೊಂಡು ಎರಡು ರಾಜ್ಯಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಿಕೊಳ್ಳಲು ಕೇಂದ್ರ ಬಿಜೆಪಿ ಸರ್ಕಾರದ ನೆರವನ್ನು ಪಡೆಯಬೇಕು ಎಂದು ಸಿದ್ದರಾಮಯ್ಯ  ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *