ಬೆಂಗಳೂರು: ಜಿ.ರಾಜಶೇಖರ್ ಸ್ಮಾರಕ ಜ್ಞಾನ ವೇತನ 2023 ಹೆಸರಿನಲ್ಲಿ ಜಿ.ರಾಜಶೇಖರ್ ಅವರ ನೆನಪಿನಲ್ಲಿ ಜ್ಞಾನ ವೇತನ ನೀಡಲು ನಿರ್ಧರಿಸಲಾಗಿದೆ. ಸಾರ್ವಜನಿಕ ಚಿಂತಕ, ಸಾಮಾಜಿಕ ಚಳುವಳಿಗಾರ ಜಿ.ರಾಜಶೇಖರ್ ತೀರಿಕೊಂಡು ಇದೀಗ ಒಂದು ವರ್ಷವಾಗಿದೆ. ಸೆಪ್ಟೆಂಬರ್ 16 ಅವರ ಹುಟ್ಟುಹಬ್ಬದ ದಿನವಾಗಿದೆ. ಅವರಿಗೆ ಇಂತಹ ವೈಯಕ್ತಿಕ ಸಂಭ್ರಮಗಳ ಕುರಿತು ಯಾವ ಅಕ್ಕರೆಯೂ ಇರಲಿಲ್ಲ ಎನ್ನುವುದು ನಿಜವಾದರೂ, ನಾವು ಈ ದಿನವನ್ನು ಅವರ ಅಚ್ಚಳಿಯದ ಚಿಂತನಾಶೀಲ ಕಾರ್ಯಚಟುವಟಿಕೆಗಳಿಗೆ ಸೂಕ್ತ ಗೌರವ ಸಲ್ಲಿಸುವ ಅವಕಾಶವೆಂದು ಭಾವಿಸುತ್ತೇವೆ ಎಂದು ಜ್ಞಾನ ವೇತನ ಕಾರ್ಯಕಾರಿ ಸಮಿತಿ ಹೇಳಿದೆ. ಸ್ಮಾರಕ
ಇದನ್ನೂ ಓದಿ:ಶಾಶ್ವತ ಪ್ರಯೋಗಶೀಲ ಮೃಣಾಲ್ ಸೆನ್ : ಗಿರೀಶ್ ಕಾಸರವಳ್ಳಿ (ಭಾಗ -4 ಮೃಣಾಲ್ ಸೆನ್ ಅವರ ಕೆಲವು ಆಪ್ತ ನೆನಪುಗಳು)
ಈ ಪ್ರಯುಕ್ತ ಮೊದಲ ‘ಜಿ.ರಾಜಶೇಖರ್ ಸ್ಮಾರಕ ಜ್ಞಾನವೇತನ’ವನ್ನು ಪ್ರಾರಂಭಿಸುತ್ತಿದ್ದೇವೆ. ಯು.ಆರ್.ಅನಂತಮೂರ್ತಿ ಹಾಗು ಕೆ.ವಿ.ಸುಬ್ಬಣ ಅವರಂತಹ ದಿಗ್ಗಜರ ಬೆಂಬಲದ ಕಾರಣವಾಗಿ ಜಿ.ರಾಜಶೇಖರ್ ಅವರು ‘ಕಾಗೋಡು ಸತ್ಯಾಗ್ರಹ’ದಂತಹ ಕೃತಿಗಳನ್ನು ಪ್ರಕಟಿಸಲು ಸಾಧ್ಯವಾಯಿತು. ಚಾರಿತ್ರಿಕ ಆಕರ ಹಾಗು ಪತ್ರಿಕಾ ವರದಿಗಳ ವಿಸ್ತಾರವೂ ನಿಖರವೂ ಆದ ಆಧ್ಯಯನದ ಫಲವಾದ ಈ ಕೃತಿಯು ಸ್ವತಂತ್ರೋತ್ತರ ಕಾಲದ ಐತಿಹಾಸಿಕ ಜನ ಚಳುವಳಿಯ ಪ್ರಮುಖ ದಾಖಲೆಯಾಗಿದೆ. ಪ್ರಸ್ತುತ ಜ್ಞಾನವೇತನವು, ಕಾಲದ ಗುಣಗ್ರಾಹಿಯಾದ ‘ಕಾಗೋಡು ಸತ್ಯಾಗ್ರಹ’ ದಂತಹ ಕೃತಿಗಳನ್ನು ಕಟ್ಟಲು ಕನ್ನಡದ ಯುವ ಬರಹಗಾರರು, ಸಂಶೋಧಕರು ಹಾಗು ಪತ್ರಕರ್ತರಿಗೆ ಸ್ಪೂರ್ತಿದಾಯಕವಾಗಲಿ ಎಂಬುದು ನಮ್ಮ ಸದುದ್ದೇಶವಾಗಿದೆ ಎಂದು ಹೇಳಿದೆ.
ಜ್ಞಾನವೇತನದ ವಿವರ:
1) ಒಟ್ಟು 80,000 ರೂಪಾಯಿ ಮೊತ್ತದ ಜ್ಞಾನವೇತನವನ್ನು, 23 – 35 ವಯಸ್ಸಿನ ಗುಂಪಲ್ಲಿ ಬರುವ ಆಯ್ದ ಒಬ್ಬ ಅಭ್ಯರ್ಥಿಗೆ, ಆರು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ವಿತರಿಸಲಾಗುವುದು.
2) ವೇತನ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಸಂಶೋಧನೆಯ ವಿಷಯ ಹಾಗು ಸಂಶೋಧನಾ ವಿಧಾನವನ್ನು ಒಳಗೊಂಡ ಸಂಶೋಧನಾ ಪ್ರಸ್ತಾವನೆಯನ್ನು ಸಲ್ಲಿಸಬಹುದು. ಅಕ್ಟೋಬರ್ 16 ಪ್ರಸ್ತಾವನೆ ಸಲ್ಲಿಸಲು ಕೊನೆಯ ದಿನಾಂಕ.
3) ಶೈಕ್ಷಣಿಕ ಕ್ಷೇತ್ರದಲ್ಲಿ ನುರಿತರಾಗಿರುವವರು, ಅನುಭವಿ ಲೇಖಕರನ್ನು ಒಳಗೊಂಡ ಸಲಹಾ ಮಂಡಳಿಯು ಒಬ್ಬ ಅಭ್ಯರ್ಥಿಯನ್ನು ವೇತನಕ್ಕೆ ಆಯ್ಕೆ ಮಾಡುತ್ತದೆ.
4) ಆಯ್ಕೆಯಾದ ಅಭ್ಯರ್ಥಿಯು ಸಂಶೋಧನೆಗೆ ಆಯ್ದುಕೊಂಡ ಚಾರಿತ್ರಿಕ ವಿಷಯದ ಮೇಲೆ, ಸಾಕ್ಷಿ-ಪುರಾವೆ ಹಾಗು ಆಳ-ಅಗಲ ಉಳ್ಳ ವರದಿಗಳ ಆಧಾರದಲ್ಲಿ ಸಂಶೋಧನೆ ನಡೆಸಬೇಕು. ಸಲಹಾ ಮಂಡಳಿಯು ಸಂಶೋಧನಾ ಕಾರ್ಯದಲ್ಲಿ ಮಾರ್ಗದರ್ಶನ ನೀಡುತ್ತದೆ.
5) ಮಹಿಳೆ, ಕಡೆಗಣಿತ ಜಾತಿ ಪಗಂಡ ಹಾಗು ಅಲ್ಪ ಸಂಖ್ಯಾತ ವರ್ಗದ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯವಿರುತ್ತದೆ.
6) ಸೂಚಿತ ಸಂಶೋಧನಾ ವಲಯಗಳು:
• ಮತೀಯ ದ್ವೇಷ ಕೂಡುಕಟ್ಟು/ ಸಹಬಾಳ್ವೆ – ಇವುಗಳ ಸಾಮಾಜಿಕ- ಸಾಂಸ್ಕತಿಕ ಬೇರುಗಳು, ಇಂದಿನ ವಾಸ್ತವಿಕ ಸ್ಥಿತಿಗತಿ- ಸ್ಥಳ-ವಿದ್ಯಮಾನ ಅಧ್ಯಯನ.
• ಜಾತಿ ಯಜಮಾನಿಕೆ, ಅಸಮಾನತೆ, ಅನ್ಯಾಯಗಳ ಮುಂದುವರಿಕೆಯ ಸಾಮಾಜಿಕ ರಾಜಕೀಯ ಕಾರಣಗಳು- ಸ್ಥಳ ವಿದ್ಯಮಾನ ಅಧ್ಯಯನ.
• ಕಡೆಗಣಿತ ಸಮುದಾಯಗಳ (ಸ್ಥಳ, ಸಮುದಾಯ ನಿರ್ದಿಷ್ಟತೆ ಇರಬೇಕು) ಪ್ರತಿರೋಧ ಚರಿತ್ರೆ ಮತ್ತು ಪ್ರಸ್ತುತ ಪರಿಸ್ಥಿತಿಯ ನೈಜತೆ.
• ಆಧುನಿಕ ಸಾಂಸ್ಥಿಕ ವ್ಯವಸ್ಥೆಗಳ ( ಕಾನೂನು, ನ್ಯಾಯಿಕ ಆರೋಗ್ಯ, ಶಿಕ್ಷಣ, ಮಹಿಳೆ-ಮಕ್ಕಳ ಕಲ್ಯಾಣ ಇತ್ಯಾದಿ) ವೈಫಲ್ಯದ ಕಾರ್ಯ-ಕಾರಣ -ಪರಿಣಾಮ.
• ಶ್ರಮಿಕರ ಆಂತರಿಕ ವಲಸೆ: ಸಾಮಾಜಿಕ ಕಾರ್ಯ-ಕಾರಣ, ವಲಸೆಯ ನಕ್ಷೆ ಪ್ರದೇಶ ಭಿನ್ನತೆ, ಹೊರಗಿಡುವಿಕೆ, ಕಡೆಗಣಿಸುವಿಕೆ, ಸಾಮಾಜಿಕ ಪರಿಣಾಮಗಳು.
• ಕಡೆಗಣಿತ ಸಮುದಾಯಗಳ ಕಲ್ಯಾಣಕ್ಕಾಗಿ ವಿಜ್ಞಾನ ತಂತ್ರಜ್ಞಾನ- ವರ್ತಮಾನದ ಸ್ಥಿತಿ ಗತಿ, ಎದುರಿಸಬೇಕಾದ ಸವಾಲುಗಳು, ಸಾಗಬೇಕಾದ ಹಾದಿ,
• ಜೀವಸಂಕುಲ, ಪರಿಸರ ಮತ್ತು ಮಾನವ ಅಸ್ತಿತ್ವದ ಸಮಸ್ಯೆಗಳು.
• ಈ ಸೂಚಿತ ವಿಷಯಗಳಲ್ಲದೆ ಸಂಶೋಧನೆಗೆ ಅರ್ಹವಾದ ಸಾಮಾಜಿಕ ಕಾಳಜಿಯ/ಕುತೂಹಲಕರ ವಸ್ತುಗಳಿಗೂ ಅವಕಾಶವಿದೆ.
• ಸಲಹಾ ಸಮಿತಿಯ ಆಯ್ಕೆಯೇ ಅಂತಿಮ
7) ಪ್ರಸ್ತಾವನೆ ಕಳುಹಿಸಲು ವಿಳಾಸ: [email protected]
ಸಲಹಾ ಮಂಡಳಿ:
ಎಚ್ ಎಸ್ ಅನುಪಮಾ, ಬರಹಗಾರರುರಹಮತ್ ತರೀಕೆರೆ, ಬರಹಗಾರರು, ವಿಶ್ರಾಂತ ಪ್ರಾಧ್ಯಾಪಕರು ರಘುನಂದನ, ಕವಿ, ನಾಟಕಕಾರ, ರಂಗ ನಿರ್ದೇಶಕರು ಎನ್‌ಎಂ ಇಸ್ಮಾಯಿಲ್, ಬರಹಗಾರರು, ಮಾಧ್ಯಮ ತಜ್ಞರು ಡಿ ಉಮಾಪತಿ, ಬರಹಗಾರರು, ಹಿರಿಯ ಪತ್ರಕರ್ತರು ಕುಂಟಾಡಿ ನಿತೇಶ್, ಸಹ-ಸಂಪಾದಕರು, ಋತುಮಾನ ಕೆ ಫಣಿರಾಜ್, ಬರಹಗಾರರು, ಸಾಮಾಜಿಕ ಹೋರಾಟಗಾರರು.
ವಿಡಿಯೋ ನೋಡಿ:ಮೃಣಾಲ್ ಸೆನ್ ಶತಮಾನೋತ್ಸವ : ಸಿನಿಮಾ ಕಲೆಗೆ ಮೃಣಾಲ್ ಸೆನ್ ಕೊಡುಗೆ