ಬೆಂಗಳೂರು: ಶೋಷಿತರ ದನಿ, ದಲಿತ ಕವಿ ಡಾ ಸಿದ್ದಲಿಂಗಯ್ಯನವರ ಅಂತ್ಯಕ್ರಿಯೆಯು ಬೌದ್ಧ ಧರ್ಮದ ಸಂಪ್ರದಾಯದಂತೆ ಬೆಂಗಳೂರಿನ ಕಲಾ ಗ್ರಾಮದಲ್ಲಿ ನಡೆಯಿತು. ಬೌದ್ಧ ಬಿಕ್ಕುಗಳ ನೇತೃತ್ವದಲ್ಲಿ ಬೌದ್ಧ ಧರ್ಮದ ವಿಧಿ ವಿಧಾನದಂತೆ ಅಂತಿಮ ಸಂಸ್ಕಾರ ನೆರವೇರಿತು. ಬೌದ್ಧ ಪಥದ ಸಾಲುಗಳನ್ನು ಪಠಿಸಲಾಯಿತು.
ಇದನ್ನು ಓದಿ: ಕವಿ ಡಾ. ಸಿದ್ದಲಿಂಗಯ್ಯ ನಿಧನ
ಕಲಾಗ್ರಾಮದಲ್ಲಿರುವ ಡಾ ಯು ಆರ್ ಅನಂತಮೂರ್ತಿಯವರ ಸಮಾಧಿ ಪಕ್ಕದಲ್ಲಿಯೇ ಡಾ ಸಿದ್ದಲಿಂಗಯ್ಯನವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಕೋವಿಡ್-19 ನಿರ್ಬಂಧಗಳ ನಡುವೆ ಕುಟುಂಬಸ್ಥರು, ಸಮೀಪದ ಬಂಧುಗಳು, ಗಣ್ಯರು ಅಂತ್ಯಕ್ರಿಯೆ ಸಮಯದಲ್ಲಿ ಉಪಸ್ಥಿತರಿದ್ದರು.
ಅಪಾರ ಜನಸಮುದಾಯವನ್ನು ಕಂಬನಿ ಮಿಡಿದಿದ್ದು, ಹಲವು ಗಣ್ಯರು, ಚಳುವಳಿಗಾರರು, ಸಾರ್ವಜನಿಕರು ಅಂತ್ಯಕ್ರಿಯೆ ಸಂದರ್ಭದಲ್ಲಿ ಹಾಜರಿದ್ದರು. ಸರ್ಕಾರದ ಪರವಾಗಿ ಡಾ ಸಿದ್ದಲಿಂಗಯ್ಯನವರ ಮೃತದೇಹದ ಅಂತಿಮ ದರ್ಶನವನ್ನು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಆರ್ ಅಶೋಕ್ ಪಡೆದಿದ್ದರು. ಶಾಸಕ ಮುನಿರತ್ನ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಉಪಸ್ಥಿತರಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಅಂತಿಮ ದರ್ಶನ ಪಡೆದಿದ್ದರು.
ಮಗ ಗೌತಮ ಅವರು ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಪತ್ನಿ ರಮಾ, ಮಗಳು ಮಾನಸ, ಅಳಿಯ ಗಿರಿ ಉಪಸ್ಥಿತರಿದ್ದರು.
ಇದನ್ನು ಓದಿ: ದಮನಿತ, ಶೋಷಿತ ಸಮುದಾಯದ ಒಡಲೊಳಗಿಂದ ಚಿಮ್ಮಿದ ಕವಿ – ಡಾ ಸಿದ್ದಲಿಂಗಯ್ಯ: ಸಿಪಿಐ(ಎಂ) ಶ್ರದ್ಧಾಂಜಲಿ