ಬೆಂಗಳೂರು: ಸಿಐಟಿಯು ನೇತೃತ್ವದಲ್ಲಿ ಶ್ರಮಜೀವಿಗಳು ಇಂದಿನಿಂದ ಅಹೋರಾತ್ರಿ ಧರಣಿ ನಡೆಸುತ್ತಿವೆ. ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಧರಣಿಗೆ ಚಾಲನೆ ನೀಡಿದರು. ಕರ್ನಾಟಕ
ವೇದಿಕೆಯ ಮೇಲೆ ಗ್ರಾಮ ಪಂಚಾಯತಿ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷ ಮಂಟನಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ, ಖಜಾಂಚಿ ಆರ್ ಎಸ್ ಬಸವರಾಜ, ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ, ರಾಜ್ಯ ಕಾರ್ಯದರ್ಶಿಗಳಾದ ಎಚ್.ಎಸ್. ಸುನಂದಾ, ಕೆ.ಮಹಾಂತೇಶ್, ಸೈಯದ್ ಮುಜೀಬ್, ಮಾಲಿನಿ ಮೇಸ್ತಾ, ರಾಜ್ಯ ಉಪಾಧ್ಯಕ್ಷ ಡಾ. ಕೆ.ಪ್ರಕಾಶ್ ಮುಖಂಡರಾದ ಪರಮೇಶ್ವರ್, ಗೈಬು ಜೈನೇಖಾನ್, ರಾಜು, ರುದ್ರಪ್ಪ ಕಂದಗಲ್, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ಕೆ.ಎಸ್. ಲಕ್ಷ್ಮಿ, ಬಸ್ಸಮ್ಮ, ಸಿ ಕುಮಾರಿ, ಲಕ್ಷ್ಮಿದೇವಿ ಸೇರಿದಂತೆ ಸಾವಿರಾರು ಗ್ರಾಮ ಪಂಚಾಯತಿ ನೌಕರರು ಭಾಗವಹಿಸಿದ್ದಾರೆ.
ಅಹೋರಾತ್ರಿ ಹೋರಾಟದ ಕುರಿತ ವಿವರಗಳು ಈ ಕೆಳಗಿನಂತಿವೆ
ಆಳುವವರಿಂದ “ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ”, “ಮೂರು ಟ್ರಿಲಿಯನ್ ಆರ್ಥಿಕತೆ” ಮುಂತಾದ ಶೀರ್ಷಿಕೆಗಳ ಘೋಷಣೆಗಳನ್ನು ನೋಡುತ್ತಿರುತ್ತೇವೆ. ಆದರೆ, ಇದರ ಭಾರವನ್ನು ಹೊತ್ತಿರುವ ಕೋಟ್ಯಾಂತರ ಕಾರ್ಮಿಕರ ಬದುಕಿನ ಭವಣೆಗಳನ್ನು ಇವರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ತಮ್ಮ ಭವಣೆಗಳನ್ನು ಆಳುವವರಿಗೆ ತಲುಪಿಸಲು, ಅವುಗಳಿಗೆ ಪರಿಹಾರ ಪಡೆಯಲು ಕಾರ್ಮಿಕರು ಹೋರಾಟ ನಡೆಸುತ್ತಲೇ ಇರುತ್ತಾರೆ.
ಈಗ ಕರ್ನಾಟಕ ರಾಜ್ಯದ ವಿವಿಧ ವಲಯಗಳ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಮತ್ತೊಮ್ಮೆ ಹೋರಾಟಕ್ಕಿಳಿದಿದ್ದಾರೆ. ಈ ಬಾರಿ ವಿವಿಧ ವಲಯಗಳ ಕಾರ್ಮಿಕರು 6 ದಿನಗಳ ಅಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ 2025ರ ಮಾರ್ಚ್ 3ರಿಂದ 7ರವರೆಗೆ ಸತತವಾಗಿ 6 ದಿನಗಳ ಕಾಲ ಹೋರಾಟ ನಡೆಯಲಿದೆ.
ಇದನ್ನೂ ಓದಿ: ಕೋಲ್ಕತ್ತಾ| ಎಸ್‌ಎಫ್‌ಐ ಪ್ರತಿಭಟನೆ: ಗಾಯಗೊಂಡ ಶಿಕ್ಷಣ ಸಚಿವ ಬೃತ್ಯ ಬಸು
ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕಾರ್ಮಿಕರು ಮತ್ತೊಮ್ಮೆ ಹೋರಾಟಕ್ಕೆ ಇಳಿದಿದ್ದಾರೆ. ಈ ಬಾರಿ 6 ದಿನಗಳ ಅಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ 2025ರ ಮಾರ್ಚ್ 3ರಿಂದ 7ರವರೆಗೆ ಹೋರಾಟ ನಡೆಯಲಿದೆ. ಹಗಲು ರಾತ್ರಿ ನಡೆಯುವ ಈ ಹೋರಾಟದಲ್ಲಿ ವಿವಿಧ ವಲಯಗಳಿಗೆ ಸೇರಿದ ಕಾರ್ಮಿಕರು ಸರದಿಯಂತೆ ಹೋರಾಟದ ಕಣಕ್ಕಿಳಿದಿದ್ದಾರೆ. ಕರ್ನಾಟಕ
ಮೊದಲ ದಿನದ ಹೋರಾಟದಲ್ಲಿ, ಅಂದರೆ ಮಾರ್ಚ್ 3 ರಂದು ಗ್ರಾಮ ಪಂಚಾಯ್ತಿ ಕಾರ್ಮಿಕರು ಅಹೋರಾತ್ರಿ ಹೋರಾಟ ನಡೆಸುತ್ತಾರೆ. 4ರಂದು ಅಕ್ಷರ ದಾಸೋಹ ಕಾರ್ಮಿಕರು, 5ರಂದು ಕಟ್ಟಡ ನಿರ್ಮಾಣ ಕಾರ್ಮಿಕರು, 6ರಂದು ಸಂಘಟಿತ ವಲಯದ ಕಾರ್ಮಿಕರು ಹಾಗೂ ಗುತ್ತಿಗೆ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಎಲ್ಲಾ ಕಾರ್ಮಿಕರು, 7ರಂದು ಅಂಗನವಾಡಿ ಕಾರ್ಮಿಕರು ಭಾಗವಹಿಸುತ್ತಾರೆ. ಸಿಐಟಿಯು (ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್) ನೇತೃತ್ವದಲ್ಲಿ ಈ ಹೋರಾಟ ನಡೆಯುತ್ತಿದೆ. ಕರ್ನಾಟಕ
ಸಾರ್ವಜನಿಕ ಉದ್ದಿಮೆಗಳ ನೌಕರರು, ಐಟಿ ವಲಯದ ಉದ್ಯೋಗಿಗಳು, ಅಂಗನವಾಡಿ ಮತ್ತು ಬಿಸಿಯೂಟ ನೌಕರರು, ಮುನಿಸಿಪಲ್ ಕಾರ್ಮಿಕರು, ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು, ಆಟೋ ಚಾಲಕರು, ಖಾಸಗಿ ಸಾರಿಗೆ ನೌಕರರು, ಬೀಡಿ ಕಾರ್ಮಿಕರು, ತೋಟ ಕಾರ್ಮಿಕರು, ಗಿಗ್ ಕಾರ್ಮಿಕರು, ಸೇಲ್ಸ್ ಪ್ರಮೋಷನ್ ಕಾರ್ಮಿಕರು, ಮೀನುಗಾರರು, ಜೀವ ವಿಮಾ ಪ್ರತಿನಿಧಿಗಳು, ಕೃಷಿ ಕೂಲಿಕಾರರು, ಹಮಾಲಿ ಕಾರ್ಮಿಕರು, ಹೀಗೆ ಎಲ್ಲಾ ವಯಲದ ಕಾರ್ಮಿಕರು ಈ ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ. ಕರ್ನಾಟಕ
ನಿರಂತರವಾಗಿ ಕುಸಿಯುತ್ತಿರುವ ಕಾರ್ಮಿಕರ ವೇತನದ ಪಾಲು
ಆರ್ಥಿಕ ಅನಿಶ್ಚಿತತೆ, ಹಣದುಬ್ಬರ, ಇದರಿಂದಾಗಿ ಆಹಾರ, ಇಂಧನ, ವಿದ್ಯುತ್, ಔಷಧ ಇತರೆ ದೈನಂದಿನ ಜೀವನಕ್ಕೆ ಅಗತ್ಯವಾದ ವಸ್ತುಗಳ ಬೆಲೆಗಳು ಹೆಚ್ಚುತ್ತಿವೆ. ಸಾಮಾನ್ಯ ಜನರ ಸರಾಸರಿ ಆದಾಯ ಮಟ್ಟದಲ್ಲಿ ತೀವ್ರ ಕುಸಿತವಾಗಿದೆ. ನಿರುದ್ಯೋಗವು ಆತಂಕಕಾರಿ ಮಟ್ಟಕ್ಕೆ ಏರಿದ್ದು, ನಿರಂತರ ಉದ್ಯೋಗ ನಷ್ಟ ಮತ್ತು ಉದ್ಯೋಗದ ಗುಣಮಟ್ಟ ಕ್ಷೀಣಿಸುತ್ತಿದೆ. ಇದೂ ಅಲ್ಲದೆ, ಕಾರ್ಮಿಕರ ವೇತನದ ಪಾಲು ನಿರಂತರವಾಗಿ ಕುಸಿಯುತ್ತಿದೆ. ಇದು ದೊಡ್ಡ ಪ್ರಮಾಣದ ಬಡತನ, ನಿರ್ಗತಿಕತೆ ಮತ್ತು ಹಸಿವಿಗೆ ಕಾರಣವಾಗಿದೆ. ಕರ್ನಾಟಕ
ರಾಜ್ಯದಲ್ಲಿ ಸುಮಾರು 2.5 ಕೋಟಿ ಜನರು ಸಂಘಟಿತ, ಅನೌಪಚಾರಿಕ ವಲಯಗಳಲ್ಲಿ ದುಡಿಯುತ್ತಿದ್ದಾರೆ. ಖಾಯಂ ಸ್ವರೂಪದ ಕೆಲಸಗಳಲ್ಲಿ ಖಾಯಂ ಅಲ್ಲದ ಕಾರ್ಮಿಕರ ದುಡಿಮೆ ದೊಡ್ಡ ಪ್ರಮಾಣದಲ್ಲಿದೆ. ಕನಿಷ್ಠ ವೇತನವನ್ನು ಹೆಚ್ಚಿಸದೇ ಇವರನ್ನು ಸತತವಾಗಿ ಶೋಷಣೆ ಮಾಡಲಾಗುತ್ತಿದೆ. ಭಾರತದ ಸಂಘಟಿತ ವಲಯದ ನಿವ್ವಳ ಮೌಲ್ಯ ವರ್ಧನೆಯಲ್ಲಿ 2022-23 ರಲ್ಲಿ ಭಾರತದ ಮಾಲೀಕರ ಪಾಲು ಶೇ. 51.92ಕ್ಕೆ ಹೆಚ್ಚಿದೆ. ಮತ್ತೊಂದಡೆ, ಕಾರ್ಮಿಕರ ವೇತನದ ಪಾಲು ಶೇ. 15.94ಕ್ಕೆ ಕುಸಿದಿದೆ. ರಾಜ್ಯದಲ್ಲಿ ಮಾಲಿಕರ ಪಾಲು ಶೇ. 48.84 ಕ್ಕೆ ಹೆಚ್ಚಿದ್ದರೆ, ಕಾರ್ಮಿಕರ ವೇತನದ ಪಾಲು ಶೇ. 17.10ಕ್ಕೆ ಕುಸಿದಿದೆ. 1948 ರಲ್ಲಿ ಭಾರತ ಸರ್ಕಾರವು ನ್ಯಾಯೋಚಿತ ವೇತನ ಜಾರಿ ಮಾಡಲು ತ್ರಿಪಕ್ಷೀಯ ಸಮಿತಿ ರಚಿಸಿತ್ತು. ಕರ್ನಾಟಕ
ಈ ಸಮಿತಿ ಅಂದು ದೇಶದ ಆರ್ಥಿಕತೆ ಮತ್ತು ಕೈಗಾರಿಕೆಗಳ ಶಕ್ತಿ ಹೆಚ್ಚಿಲ್ಲದ ಕಾರಣ ನ್ಯಾಯೋಚಿತ ವೇತನದ ಬದಲಿಗೆ ಕನಿಷ್ಠ ವೇತನ ಕೊಡಲು ತೀರ್ಮಾನಿಸಿತ್ತು. ಆದರೆ, ಬಹಳಷ್ಟು ಕಾರ್ಮಿಕರಿಗೆ ಕನಿಷ್ಟ ವೇತನವೂ ಸಿಗುತ್ತಿಲ್ಲ. ಕೃಷಿಯಿಂದ ಜೀವನ ನಡೆಸಲು ಸಾಧ್ಯವಿಲ್ಲದೆ ರೈತರು ಮತ್ತು ಕೃಷಿ ಕೂಲಿ ಕೆಲಸ ಸಿಗದೆ ಕೃಷಿ ಕೂಲಿಕಾರರು, ಹಳ್ಳಿಗಳಿಂದ ನಗರ, ಪಟ್ಟಣಗಳಿಗೆ ವಲಸೆ ಬಂದು ಹಲವು ವಯಲಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಬಹಳಷ್ಟು ಜನರು ನಿರಾಶೆಯನ್ನು ಎದುರಿಸಿದ್ದಾರೆ. ಉದ್ಯೋಗ ಭದ್ರತೆ, ಸುರಕ್ಷಿತ ಮತ್ತು ಆರೋಗ್ಯಕರ ಕೆಲಸದ ಪರಿಸ್ಥಿತಿಗಳು ಮತ್ತು ಇತರ ಕಾರ್ಮಿಕ ಸೌಲಭ್ಯಗಳಿಲ್ಲದೆ ಬಹಳಷ್ಟು ಸಂಕಷ್ಟಗಳನ್ನು ಇವರು ಎದುರಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ), ಬಯೋಟೆಕ್ನಾಲಾಜಿ (ಬಿಟಿ)ಯಂತಹ 750 ಬಹುರಾಷ್ಟ್ರೀಯ ಕಂಪನಿಗಳಿವೆ. ದೇಶದ ಜಿಡಿಪಿ ಗೆ ಶೇ. 8.2ರಷ್ಟು ಕಾಣಿಕೆ ಕರ್ನಾಟಕದ್ದಾಗಿದೆ. ಜಿಎಸ್ ಟಿ ತೆರಿಗೆ ಸಂಗ್ರಹದಲ್ಲಿ 2ನೇ ಸ್ಥಾನ ಕರ್ನಾಟಕ್ಕಿದೆ. ಆದರೂ ರಾಜ್ಯದ ಜನರ ಜೀವನ ಮಟ್ಟ ಹೆಚ್ಚಾಗಿಲ್ಲ.
ಮತ್ತೊಂದಡೆ, ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಇಲ್ಲಿ ಬಹುತೇಕ ಖಾಯಂ ಉದ್ಯೋಗಗಳ ನೇಮಕಾತಿ ಇಲ್ಲದಂತಾಗಿದೆ. ಹಳೆಯ ಪಿಂಚಣಿ ಯೋಜನೆ ರದ್ದುಗೊಳಸಿ ಹೊಸ ಪಿಂಚಣಿ ಯೋಜನೆ ತರುವ ಮೂಲಕ ಕಾರ್ಮಿಕರ ವೃದ್ದಾಪ್ಯ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ.
ರಾಜ್ಯಾದ್ಯಂತ ವ್ಯಾಪಕ ಪ್ರಚಾರ
ಮಾರ್ಚ್ ಮೊದಲ ವಾರದ ಹೋರಾಟದ ಕುರಿತು ರಾಜ್ಯಾದ್ಯಂತ ವ್ಯಾಪಕ ಪ್ರಚಾರ ನಡೆಯುತ್ತಿದೆ. ವಿವಿಧ ಸಂಘಟನೆಗಳ ಕಾರ್ಯಕರ್ತರು ತಮ್ಮದೇ ಬೇಡಿಕೆಗಳ ಜೊತೆಗೆ, ವಿದ್ಯುತ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ, ಶಿಕ್ಷಣದ ಖಾಸಗೀಕರಣ, ಜನಸಾಮಾನ್ಯರಿಗೆ ಸಂಬಂಧಿಸಿದ ಬೇಡಿಕೆಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮೆಟ್ರೋ ರೈಲು ಪ್ರಯಾಣ ದರ ಹೆಚ್ಚಳದ ವಿರುದ್ದ ಪ್ರತಿಭಟನೆ ನಡೆಸುತ್ತಲೇ, ಕಾರ್ಮಿಕರ ಅಹೋರಾತ್ರಿ ಹೋರಾಟವನ್ನು ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು ಸೇರಿದಂತೆ ಹಲವು ನಗರ ಮತ್ತು ಪಟ್ಟಣಗಳಲ್ಲಿನ, ಗ್ರಾಮಗಳಲ್ಲಿನ ರಸ್ತೆ ಬದಿಗಳ ಗೋಡೆಗಳ ಮೇಲೆ ಬೇಡಿಕೆಗಳನ್ನು ಒಳಗೊಂಡ ಪೋಸ್ಟರ್ ಗಳು ಪ್ರದರ್ಶನಗೊಳ್ಳುತ್ತಿವೆ. ಬೆಂಗಳೂರು ಸೇರಿದಂತೆ ಕೆಲವು ನಗರ ಪಟ್ಟಣಗಳ ಆಟೋರಿಕ್ಷಾಗಳ ಮೇಲೂ ಪೋಸ್ಟರುಗಳನ್ನು ಹಾಕಿಕೊಳ್ಳುವ ಮೂಲಕ ಆಟೋ ಚಾಲಕರು ಪ್ರಚಾರಕ್ಕೆ ಮೆರುಗು ನೀಡಿದ್ದಾರೆ.
ರಾಜ್ಯದೆಲ್ಲೆಡೆ ಕಾರ್ಮಿಕರು ಬೇಡಿಕೆಗಳ ಪಟ್ಟಿ ಇರುವ ಕರಪತ್ರಗಳನ್ನು ಕಾರ್ಮಿಕರ ಮತ್ತು ಜನರ ನಡುವೆ ಕೊಂಡೊಯ್ಯುತ್ತಿದ್ದಾರೆ. ಸಂಘಟನೆಗಳ ಕಾರ್ಯಕರ್ತರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ಬೇಟಿ ನೀಡಿ ಜನತೆಯ ಸಮಸ್ಯೆಗಳನ್ನು ವಿವರಿಸುತ್ತಿದ್ದಾರೆ. ಆಟೋಗಳಲ್ಲಿ, ಜೀಪ್ ಗಳಲ್ಲಿ ಮತ್ತು ಇತರೆ ವಾಹನಗಳಲ್ಲಿ ಮೈಕ್ ಕಟ್ಟಿ, ಹೋರಾಟದ ಕುರಿತು ಪ್ರಚಾರ ಮಾಡತೊಡಗಿದ್ದಾರೆ. ಬೀದಿ ಬದಿಗಳಲ್ಲಿ ನಿಂತು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ನಡೆಯುತ್ತಿದೆ. ಕಾರ್ಮಿಕರು ಹೋರಾಟ ಮತ್ತು ಬೇಡಿಕೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಮತ್ತು ತಾವೂ ಪ್ರಚಾರದಲ್ಲಿ ತೊಡಗಿಕೊಂಡಿರುವ ಚಿತ್ರಗಳನ್ನು ತಮ್ಮದೇ ವಾಟ್ಸಫ್, ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿಕೊಂಡು ಪ್ರಚಾರಕ್ಕೆ ಮೆರುಗು ನೀಡತೊಡಗಿದ್ದಾರೆ.
ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಗೆ ಅನುದಾನ ನೀಡಿ
ಕನಿಷ್ಟ ವೇತನವನ್ನು ತಿಂಗಳಿಗೆ 35 ಸಾವಿರ ರೂ.ಗಳಿಗೆ ಪರಿಷ್ಕರಿಸಬೇಕು, ಗುತ್ತಿಗೆ ಪದ್ದತಿ ಎಂಬ ಜೀತಪದ್ದತಿಯಿಂದ ಕಾರ್ಮಿಕರನ್ನು ಹೊರತರಲು ಗುತ್ತಿಗೆ ಕೆಲಸಗಾರನ್ನು ಖಾಯಂ ಮಾಡಬೇಕು. ಮನೆಗೆಲಸ ಮಾಡುವವರು, ಬೀದಿಬದಿ ವ್ಯಾಪಾರಸ್ಥರು, ಕಟ್ಟಡ ಕಾರ್ಮಿಕರು, ಆಟೋರಿಕ್ಷಾ, ಟ್ಯಾಕ್ಸಿ, ಲಾರಿ, ಖಾಸಗಿ ಬಸ್ಸು ಸೇರಿದಂತೆ ಸಾರಿಗೆ ನೌಕರರಿಗೆ ಕಾರ್ಮಿಕರ ಕಲ್ಯಾಣ ಮಂಡಳಿಗಳು ಮತ್ತು ಯೋಜನೆಗಳನ್ನು ಖಚಿತಪಡಿಸಿಕೊಳ್ಳಬೇಕು.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಗೆ ರಾಜ್ಯ ಸರ್ಕಾರ ಕನಿಷ್ಟ 500 ಕೋಟಿ ರೂ.ಗಳ ಅನುದಾನ ನೀಡಬೇಕು. ಅಂಬೇಡ್ಕರ್ ಸ್ಮಾರ್ಟ್ ಕಾರ್ಡ್ ಪಡೆದವರಿಗೆ ಕನಿಷ್ಟ 3,000 ರೂ. ಮಾಸಿಕ ಪಿಂಚಣಿ ನೀಡಬೇಕು. ಇವರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಕನಿಷ್ಟ 2 ಲಕ್ಷ ರೂ. ಜೀವವಿಮೆ, ಆರೋಗ್ಯ ವಿಮೆಗೆ 2 ಲಕ್ಷ ರೂ, ಆಸ್ಪತ್ರೆಗೆ ದಾಖಲಾದಾಗ ಸಂಪೂರ್ಣ ವೈದ್ಯಕೀಯ ವೆಚ್ಚ, ಇಎಸ್ ಐ, ಭವಿಷ್ಯ ನಿಧಿ ಹಾಗೂ ಪಿಂಚಣಿ ಸೌಲಭ್ಯ, ವಸತಿ ಮತ್ತು ಮದುವೆ ಸಹಾಯಧನ, ವೃತ್ತಿ ಆದಾರಿತವಾಗಿ ಅಗತ್ಯ ಉಪಕರಣಗಳನ್ನು ಖರೀದಿಸಲು ಸಹಾಯಧನ ನೀಡಬೇಕು.
2025ರಿಂದಲೇ ಆಧ್ಯತೆ ಮೇರೆಗೆ ಹಮಾಲಿ ಕಾರ್ಮಿಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರು, ಮನೆಕೆಲಸಗಾರರು, ಗಿಗ್ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ವಾಹನಗಳ ಮೆಕಾನಿಕ್ ಗಳು ಹಾಗೂ ಟೈಲರ್ ಗಳಿಗೆ ಭವಿಷ್ಯನಿಧಿ ಜಾರಿಗೆ ತರಬೇಕು. ರಾಜ್ಯದಲ್ಲಿ ಜೀವ ವಿಮಾ ಪ್ರತಿನಿಧಿಗಳನ್ನು ರಾಜ್ಯ ಸರ್ಕಾರದ ಕಲ್ಯಾಣ ಮಂಡಳಿಯಲ್ಲಿ ಸೇರ್ಪಡೆ ಮಾಡಬೇಕು.
ಕಾರ್ಮಿಕರ ಪರವಾದ ಕಾನೂನುಗಳು ಜಾರಿಯಾಗಬೇಕು
29 ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಿರುವ ಕೇಂದ್ರದ ಶಾಸನಗಳ ನಿಯಮಾವಳಿಗಳನ್ನು ರಾಜ್ಯ ಸರ್ಕಾರ ಜಾರಿಮಾಡಬಾರದು ಮತ್ತು ಕಾರ್ಮಿಕರ ಪರವಾದ ಕಾನೂನುಗಳು ಜಾರಿಯಾಗಬೇಕು, ಸಾರ್ವಜನಿಕ ಉದ್ದಿಮೆಗಳನ್ನು, ಸಾರ್ವಜನಿಕ ಸೇವೆಗಳು ಹಾಗೂ ವಿದ್ಯುಚ್ಛಕ್ತಿ ವಲಯ ಇವುಗಳನ್ನು ಖಾಸಗೀಕರಣ ಮಾಡುವ ನೀತಿಗಳನ್ನು ಕೈ ಬಿಡಬೇಕು, ವಿದ್ಯುತ್ ತಿದ್ದುಪಡಿ ಮಸೂದೆ 2020 ಅನ್ನು ತಿರಸ್ಕರಿಸಬೇಕು, ಅಕುಶಲ ಕಾರ್ಮಿಕರಿಗೆ ಸಮಾನ ಕನಿಷ್ಟ ವೇತನ 31,566 ರೂ ಜಾರಿ ಮಾಡಬೇಕು, ಗುತ್ತಿಗೆ ಕಾರ್ಮಿಕರ ಖಾಯಂ ಮಾಡಬೇಕು, ಸಾರ್ವಜನಿಕ ಉದ್ಯಮಗಳಲ್ಲಿ, ನಿಗಮ ಮಂಡಳಿಗಳಲ್ಲಿ ದುಡಿಯುವ ಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.
ಖಾಸಗಿ ವಲಯದ ಉದ್ಯೋಗದಲ್ಲೂ ಎಸ್.ಟಿ/ಎಸ್.ಟಿ ಗೆ ಮೀಸಲಾತಿ ಸೌಲಭ್ಯ ಒದಗಿಸಬೇಕು, ಅರಣ್ಯ ಹಕ್ಕುಗಳ ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಆದಿವಾಸಿಗಳ ಬದುಕಿನ ಹಕ್ಕುಗಳ ರಕ್ಷಣೆ, ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್ ಕೆ ಜಿ, ಯುಕೆಜಿ ಪ್ರಾರಂಭಿಸಬೇಕು, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಮಿಕರಿಗೆ ವೇತನ ಪರಿಷ್ಕರಣೆ, ಗ್ರಾಚ್ಯುಟಿ ಪಾವತಿಗೆ ಕ್ರಮ, ನಿವೃತ್ತಿ ವೇತನ ಸೌಲಭ್ಯ ನೀಡಬೇಕು. ನರೇಗಾ ಯೋಜನೆಯಲ್ಲಿ 200 ದಿನಗಳ ಕೆಲಸ ಹಾಗೂ ದಿನಕ್ಕೆ 700 ರೂ ವೇತನ ನೀಡಬೇಕು ಮತ್ತು ಈ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಬೇಕು, ಇವು ಬೇಡಿಕೆಗಳ ಪಟ್ಟಿಯಲ್ಲಿವೆ.
ಕಟ್ಟಡ ಕಾರ್ಮಿಕರು
ಕಟ್ಟಡ ಕಾರ್ಮಿಕರ ಪ್ರಮುಖ ಬೇಡಿಕೆಗಳೆಂದರೆ, ಹೈಕೋರ್ಟ್ ತೀರ್ಪಿನಂತೆ ಮೂರು ವರ್ಷಗಳ ಶೈಕ್ಷಣಿಕ ಸಹಾಯಧನ ಬಿಡುಗಡೆ, ಕಟ್ಟಡ ಕಾರ್ಮಿಕರ ಕಾಯ್ದೆ-1996 ಮತ್ತು ಸೆಸ್ ಕಾಯ್ದೆ-1996 ಇವುಗಳನ್ನು ರದ್ದು ಮಾಡಬಾರದು, ಸಹಜ ಮರಣ ಪರಿಹಾರ ಧನವನ್ನು 2 ಲಕ್ಷಕ್ಕೆ ಮತ್ತು ಅಪಘಾತ ಮರಣ ಪರಿಹಾರವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು, ಸ್ವಂತ ಮನೆ ಕಟ್ಟಿಕೊಳ್ಳಲು 5 ಲಕ್ಷ ರೂ. ಸಹಾಯಧನ ನೀಡಬೇಕು, ಕಾರ್ಮಿಕರ ನಿಧಿ ದುರ್ಬಳಕೆ ತಪ್ಪಿಸಲು ಎಲ್ಲ ರೀತಿಯ ಕಿಟ್ ಖರೀದಿ ನಿಲ್ಲಿಸಬೇಕು, ಬಾಕಿ ಇರುವ ಸೌಲಭ್ಯಗಳ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು ಎಂಬುದಾಗಿವೆ.
ಕಾರ್ಯನಿರತ ಪತ್ರಕರ್ತರ ಕಾಯ್ದೆಗೆ ತಿದ್ದುಪಡಿ ತರಬೇಕು
ಯೋಗ್ಯ ವೇತನ ಮತ್ತು ಉದ್ಯೋಗ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು ಮತ್ತು ಕಾರ್ಮಿಕರನ್ನು ಸೇರಿಸಲು ಕಾರ್ಯನಿರತ ಪತ್ರಕರ್ತರ ಕಾಯಿದೆಗೆ ತಿದ್ದುಪಡಿ ತರಬೇಕು ಮತ್ತು ಮುದ್ರಣ, ಎಲೆಕ್ಟ್ರಾನಿಕ್, ಡಿಸಿಟಲ್ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ವೇತನ ಪರಿಷ್ಕರಿಸಲು ಅನುಕೂಲವಾಗುವಂತೆ ಹೊಸ ವೇತನ ಮಂಡಳಿ ರಚಿಸಬೇಕು ಎಂಬ ಬೇಡಿಕೆಯನ್ನೂ ಇಡಲಾಗಿದೆ.
ಇದನ್ನೂ ನೋಡಿ: ಫೆಬ್ರವರಿ 28| ರಾಷ್ಟ್ರೀಯ ವಿಜ್ಞಾನ ದಿನಾಚರಣೆ |ಸರ್ ಸಿ.ವಿ.ರಾಮನ್Janashakthi Media