ಉಚಿತ ಪ್ರಯಾಣ: ಗಂಡಾಳ್ವಿಕೆಗೆ ನಡುಕ ಹುಟ್ಟಿಸಿದ ಹೆಣ್ಣುಮಕ್ಕಳ ಆತ್ಮವಿಶ್ವಾಸದ ವಿಷಯ

                                                                                                                                                                                       – ಬಿ.ಪೀರ್ ಬಾಷ

ಇಷ್ಟು ದಿನ‌ ಮನೆ ಹೊರಗಿನ ಕೆಲಸ, ಪರ ಊರಿನ ಕೆಲಸ ವೇನಿದ್ದರೂ ಅದು ತಮ್ಮ ಅಧಿಕಾರ ಮತ್ತು ತಮ್ಮದಷ್ಟೇ ಸ್ವಾತಂತ್ರ್ಯ ಎಂದು ಭಾವಿಸಿದ್ದ “ಗಂಡಸುತನ” ಕ್ಕೆ ಈ ಯೋಜನೆ ಮೊದಲ ಪೆಟ್ಟು ನೀಡುವಂತಿದೆ. ತಾಸಿನ ಕೆಲಸಕ್ಕೂ ಮೂರು ತಾಸು ಹೊರ ಹೋಗಿ ಕಂಡಲ್ಲೆಲ್ಲ ಸುತ್ತಾಡಿ ಬರುವ ಗಂಡಸಿನ “ಊರಾಡುವ” ಚಾಳಿಗೆ ಈ ಯೋಜನೆ ಬಲವಾದ ಹೊಡೆತ ಹಾಕಲಿದೆ. ಇನ್ನು ಮುಂದೆ ಮಾರ್ಕೆಟ್ಟಿನ ಅಥವಾ ಆಫೀಸಿನ ಸಣ್ಣ ಪುಟ್ಟ ಕೆಲಸಗಳಿದ್ದರೆ ಮನೆಯ ಹೆಣ್ಣು ಮಕ್ಕಳೇ ಸಿಟಿ ಬಸ್ಸಿನಲ್ಲಿ ಫ್ರೀ ಇರುವುದರಿಂದ “ನಾನೇ ಹೋಗಿ ಬರುತ್ತೇನೆ” ಎಂದು ಹೆಜ್ಜೆ ಮುಂದಿಡುವ ಸಾಧ್ಯತೆಯೇ ಹೆಚ್ಚು.

ಹೆಣ್ಣುಮಕ್ಕಳ ಉಚಿತ ಬಸ್ ಪ್ರಯಾಣ ಕುರಿತಂತೆ ಸುದ್ದಿವಾಹಕನೊಬ್ಬನ ತರಲೆ ಪ್ರಶ್ನೆಗೆ ಹೆಣ್ಣು ಮಗಳೊಬ್ಬಳು ನೀಡಿದ ಮುಗ್ಧ ಖಡಕ್ ಉತ್ತರದ ವೈರಲ್ ಆಗುತ್ತಿರುವ ವಿಡಿಯೋ ಒಂದು ತುಂಬಾ ಚೆನ್ನಾಗಿದೆ. ಈ ವಿಡಿಯೋದಲ್ಲಿ ನೇರವಾಗಿ ಕಾಣದ, ಕೇಳಿಸುವ ಮಾತುಗಳ ನಡುವೆ ಕೇಳಿಸದ ಸತ್ಯಗಳ ವಿವರಣೆ ಇದೆ. ಆತ ಲಘುಧಾಟಿಯಲ್ಲಿ ಕೇಳುತ್ತಾನೆ “ಉಚಿತ ಪ್ರಯಾಣವಾಗಿರುವುದರಿಂದ ನೀವು ನಿಮ್ಮ ಮಗಳ ಮನೆಗೆ ಹೋಗಿ ಬರಬಹುದು, ದೇವಸ್ಥಾನ ಪುಣ್ಯಕ್ಷೇತ್ರಗಳಿಗೆ ಓಡಾಡಬಹುದು. ಇದಕ್ಕೆ ಅವಕಾಶ ಸಿಕ್ಕಿದೆ. ನಾಳೆ ನೀವು ಎಲ್ಲಿಗೆ ಹೋಗುತ್ತೀರಿ”. ಒಂದಿಷ್ಟೂ ತಡ ಮಾಡದೇ ಆಕೆ ತಕ್ಷಣವೆ ” ದುಡಿಯುವುದಕ್ಕೆ” ಎನ್ನುತ್ತಾಳೆ. ವರದಿಗಾರ ಮತ್ತು ಸುತ್ತಲಿನವರು ಅನಿರೀಕ್ಷಿತವಾದ ಈ ಉತ್ತರದಿಂದ ಗೊಳ್ಳೆಂದು ನಗುತ್ತಾರೆ.

ಉಚಿತ ಪ್ರಯಾಣದ ಸೌಲಭ್ಯ ಸಿಕ್ಕರೆ ಹೆಣ್ಣು ಮಕ್ಕಳು ಬರೀ ದೇವಸ್ಥಾನ, ಪ್ರವಾಸ ಸ್ಥಳಗಳಿಗೆ ಸುಮ್ಮನೇನು ಸುತ್ತಾಡುವುದಿಲ್ಲ. ಹೊಸತರಲ್ಲಿ ಒಂದಿಷ್ಟು ಉತ್ಸಾಹದಿಂದ ಸುತ್ತಾಡುವುದು ಇದ್ದೀತು, ಇಲ್ಲವೆಂತಲ್ಲ, ಆದರೆ ಸುಮ್ಮನೆ ಸುತ್ತುವುದೇ ಹೆಣ್ಣುಮಕ್ಕಳ ಕೆಲಸವೆಂದರೆ ಅದು ಅವರನ್ನು ಇನ್ನಷ್ಟು ಅವಮಾನಿಸಿದಂತೆ. ಇಂತಹ ಸೌಲಭ್ಯ ಸಿಕ್ಕರೆ ದುಡಿಮೆಯ ಕ್ಷೇತ್ರದಲ್ಲಿಯೂ ಹೆಣ್ಣು ಮಕ್ಕಳ ಹಾಜರಾತಿ ಹೆಚ್ಚುತ್ತದೆ. ಇದರಿಂದ ಈ ತನಕ ಇದ್ದುದಕ್ಕಿಂತ ಒಂದಿಷ್ಟು ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗುತ್ತದೆ. ಈ ಬಗೆಯ ಆರ್ಥಿಕ ಸ್ವಾವಲಂಬಿತನದಲ್ಲಿ ಹೆಚ್ಚಳವಾಗುವುದಾದರೆ ಇದಕ್ಕಿಂತ ಮಿಗಿಲು ಇನ್ನೇನಿದೆ? ಈ ಯೋಜನೆಯ ಯಶಸ್ಸನ್ನು ನಿರ್ಧರಿಸುವ ಪ್ರಧಾನ ನೆಲೆ ಇದು. ಲಘು ಧಾಟಿಯ ಪ್ರಶ್ನೆಗೆ ಪ್ರತಿಯಾಗಿ ಆ ಹಳ್ಳಿಯ ಹೆಣ್ಣುಮಗಳ ಬಾಯಿಂದ ಹೊರಹೊಮ್ಮಿದ ಅಷ್ಟೇ ಗಂಭೀರವಾದ ಉತ್ತರವಿದು. ಇದು ಉತ್ತರ ಮಾತ್ರವಲ್ಲ ಮತಿಗೆಟ್ಟವರು ಅರಿತು ಕೊಳ್ಳಬೇಕಾದ ಅರಿವು.ಒಬ್ಬರಿಬ್ಬರಲ್ಲ. ಬಹುತೇಕ ಚಾನಲ್ ಗಳ ವರದಿಗಾರರು, ಈ ಯೋಜನೆ ಘೋಷಣೆ ಆದಾಗಿನಿಂದ ಇಂಥದೇ ಕೆಲಸ ಮಾಡುತ್ತಿದ್ದಾರೆ. ಮಾಡಿದಷ್ಟೂ ಸೋಲುತ್ತಿದ್ದಾರೆ. ಮುಖಕ್ಕೆ ಇಕ್ಕಿಸಿಕೊಳ್ಳುತ್ತಿದ್ದಾರೆ ಬಳಿಕ ನಾಚಿಕೆ ತೋರಿಸಿಕೊಳ್ಳದೇ ಮಂಗನಂತೆ ನಕ್ಕು ಸಾಗುತ್ತಿದ್ದಾರೆ.

ಈ ಯೋಜನೆ ಜಾರಿಯಾದರೆ ಹೆಣ್ಣು ಮಕ್ಕಳು ಸುಖಾಸುಮ್ಮನೆ ಸುತ್ತಾಡುತ್ತಾರೆ. ಹೆಣ್ಣು ಮಕ್ಕಳ ತಿರುಗಾಟದಿಂದ ಮನೆ ಕೆಡುತ್ತದೆ, ಸಮಾಜ ಕೆಡುತ್ತದೆ ಮುಂದುವರಿದು ಸಂಸ್ಕೃತಿ ಕೆಡುತ್ತದೆ ಎಂಬ “ಸುಸಂಸ್ಕೃತ” “ಸಭ್ಯ”ರ ಹೊಟ್ಟೆ ಸಂಕಟದ ಗೊಣಗಾಟ ಇದು. ನಿಜವೆಂದರೆ ಹೆಣ್ಣು ಮಕ್ಕಳ ಸುತ್ತಾಟವನ್ನು ತಡೆದು, ಕುಟುಂಬ ಸಮಾಜದ ಕೇಡನ್ನು ಹೆಚ್ಚಿಸಿದ ಆಲೋಚನೆಯೇ ಈಗ ಕೇಡು ಕಡಿಮೆಯಾಗುವ ಸಾಧ್ಯತೆಗಳಿಂದಾಗಿ ಚಿಂತಿತರಾಗಿರುವುದು.

ಇಷ್ಟು ದಿನ‌ ಮನೆ ಹೊರಗಿನ ಕೆಲಸ, ಪರ ಊರಿನ ಕೆಲಸ ವೇನಿದ್ದರೂ ಅದು ತಮ್ಮ ಅಧಿಕಾರ ಮತ್ತು ತಮ್ಮದಷ್ಟೇ ಸ್ವಾತಂತ್ರ್ಯ ಎಂದು ಭಾವಿಸಿದ್ದ “ಗಂಡಸುತನ” ಕ್ಕೆ ಈ ಯೋಜನೆ ಮೊದಲ ಪೆಟ್ಟು ನೀಡುವಂತಿದೆ. ತಾಸಿನ ಕೆಲಸಕ್ಕೂ ಮೂರು ತಾಸು ಹೊರ ಹೋಗಿ ಕಂಡಲ್ಲೆಲ್ಲ ಸುತ್ತಾಡಿ ಬರುವ ಗಂಡಸಿನ “ಊರಾಡುವ” ಚಾಳಿಗೆ ಈ ಯೋಜನೆ ಬಲವಾದ ಹೊಡೆತ ಹಾಕಲಿದೆ. ಇನ್ನು ಮುಂದೆ ಮಾರ್ಕೆಟ್ಟಿನ ಅಥವಾ ಆಫೀಸಿನ ಸಣ್ಣ ಪುಟ್ಟ ಕೆಲಸಗಳಿದ್ದರೆ ಮನೆಯ ಹೆಣ್ಣು ಮಕ್ಕಳೇ ಸಿಟಿ ಬಸ್ಸಿನಲ್ಲಿ ಫ್ರೀ ಇರುವುದರಿಂದ “ನಾನೇ ಹೋಗಿ ಬರುತ್ತೇನೆ” ಎಂದು ಹೆಜ್ಜೆ ಮುಂದಿಡುವ ಸಾಧ್ಯತೆಯೇ ಹೆಚ್ಚು. ಇದು ಸಣ್ಣ ವಿಷಯವಾದರೂ ಇದರ ಪರಿಣಾಮ ಸಣ್ಣದಲ್ಲ. ಹೆಣ್ಣು ಮಕ್ಕಳು ಕಛೇರಿ ಕೆಲಸಗಳಲ್ಲಿ ತಿಳಿವಳಿಕೆ ಹೆಚ್ಚಿಸಿಕೊಳ್ಳುವ ಮತ್ತು ಜನರೊಂದಿಗೆ ಮುಕ್ತವಾಗಿ ಒಡನಾಡುವುದರ ಮೂಲಕ ಹೆಚ್ಚಿಸಿಕೊಳ್ಳುವ ಲೋಕಜ್ಞಾನ, ಆತ್ಮ ವಿಶ್ವಾಸ ಸಾಮಾನ್ಯವಾದುದೇನಲ್ಲ.

ಇದನ್ನೂ ಓದಿಉಚಿತ ಬಸ್‌ ಪಾಸ್‌ : ಮಹಿಳಾ ಸಶಕ್ತೀಕರಣಕ್ಕೆ “ಶಕ್ತಿ” ತುಂಬಬಹುದೆ?

ಗಂಡಸರೇ ತುಂಬಿರುವ ಬಸ್ಸು, ಬಸ್ಟ್ಯಾಂಡುಗಳಲ್ಲಿ ಹೆಣ್ಣುಮಕ್ಕಳು ಅನುಭವಿಸುವ ಮುಜುಗರ, ಗಂಡಸರ ಹೆಚ್ಚುಗಾರಿಕೆಯ ನಡವಳಿಕೆ ನುಡಿಗಟ್ಟುಗಳನ್ನು ಕಂಡಿದ್ದೇವೆ, ಕೇಳಿದ್ದೇವೆ. ಇನ್ನು ಮುಂದೆ ಈ ಬಸ್ಸು ಬಸ್ಟ್ಯಾಂಡುಗಳಲ್ಲಿ ಗಂಡಸರಿಗೆ ಸಮ ಪ್ರಮಾಣದಲ್ಲಿ ಹೆಣ್ಣು ಮಕ್ಕಳು ಕಂಡರೂ ಸಾಕು, ಈ ಗಂಡು – ಉರವಣಿಗೆ ಅಷ್ಟು ಮಟ್ಟಿಗೆ ತಗ್ಗಬಲ್ಲದು ಅಥವಾ ಹೆಣ್ಣು ಮಕ್ಕಳ ಓಡಾಟಕ್ಕೆ ಅಷ್ಟರ ಮಟ್ಟಿಗೆ ಮುಜುಗರ ಕಡಿಮೆಯಾಗಿ ಧೈರ್ಯ ಹೆಚ್ಚ ಬಲ್ಲದು. ಇದರ ವ್ಯತಿರಿಕ್ತ ಪರಿಣಾಮಗಳೂ‌ ಆಗಲಾರವು ಎಂದೇನಿಲ್ಲ. ಹೆಚ್ಚೆಂದರೆ ಬಸ್ಸುಗಳಲ್ಲಿ ಹೆಣ್ಣುಮಕ್ಕಳ ಧ್ವನಿ ಈಗಿರುವುದಕ್ಕಿಂತ ಹೆಚ್ಚಬಹುದು, ಒಂಚೂರು ಗಂಡಸರ ಜೊತೆಗೆ ಕಿರಿಕಿರಿ ಜಗಳಗಳು ಹೆಚ್ಚಬಹುದು. ಇವೆಲ್ಲವೂ ಅನಿವಾರ್ಯ ಮತ್ತು ಸಹಿಸಿಕೊಳ್ಳಲೇ ಬೇಕಾಗುತ್ತದೆ.

ಸಂತೆ ಬಜಾರುಗಳಲ್ಲಿ, ಮಾಲ್ ಮಾರ್ಕೆಟ್ಟುಗಳಲ್ಲಿ ಬಸ್ಸು ರೈಲುಗಳಲ್ಲಿ ಗಂಡಸರ ಸಂಖ್ಯೆಗೆ ಸಮಪ್ರಮಾಣದಲ್ಲಿ ಹೆಣ್ಣುಮಕ್ಕಳು ಕಾಣುತ್ತಿದ್ದಾರೆಂದರೆ ಅದು ಸಮಾನತೆಯ ಸಾಧನೆಯ ವ್ಯಕ್ತ ಲಕ್ಷಣ ಎಂದೇ ಗಮನಿಸಬೇಕು. ಆಗಬೇಕಾದ ಬಾಕಿ ಕೆಲಸ ಇದನ್ನು ಅನುಸರಿಸಿಯೇ ಬರಬಲ್ಲದು. ಉಚಿತ ಪ್ರಯಾಣದ ಸೌಲಭ್ಯದ ಪರಿಣಾಮವಾಗಿ ತಂಗಿಯೋ, ಹೆಂಡತಿಯೋ ಹೊರಗಿನ ಕೆಲಸಕ್ಕೆ ಹೋದ ಹೊತ್ತು ಕಸ ಬಳಿಯುವ, ಪಾತ್ರೆ ತೊಳೆಯುವ, ಬಟ್ಟೆ ಮಡಚುವ ಇಂತಹ ಚಿಕ್ಕಪುಟ್ಟ ಮನೆಯ ಕೆಲಸಗಳನ್ನು ಮಾಡುವ ಅನಿವಾರ್ಯತೆ ಸೃಷ್ಟಿಯಾದರೂ ಸಾಕು. ಇಂತಹ ಸಣ್ಣ ಬದಲಾವಣೆಯೇ ದೊಡ್ಡ ಪರಿಣಾಮಗಳನ್ನು ಹುಟ್ಟು ಹಾಕಬಲ್ಲದು.

ಇದೆಲ್ಲವನ್ನೂ ಊಹಿಸಿದ ಗಂಡುಗಳೇ ಈಗ ಒದರಾಡುತ್ತಿರುವುದು. ಹೀಗಾದರೆ ಹೆಣ್ಣುಮಕ್ಕಳು “ಕೆಡುತ್ತಾರೆ” ಎಂಬ “ಕಾಳಜಿ” ಯ ಕೂಗು ಹಾಕುತ್ತಿರುವುದು. ಹಾಗಾದರೆ ಈಗ ಬೇಕಾಬಿಟ್ಟಿ ಸುತ್ತಾಡುತ್ತಿರುವ ಗಂಡಸರೆಲ್ಲಾ ಕೆಟ್ಟಿದ್ದಾರೆಯೇ? ಕೆಲವರು ಅಂತಹ ಗಂಡಸರಿರಬಹುದು ಎಂದಾದರೆ ಕೆಲವರು ಹೆಣ್ಣುಮಕ್ಕಳು ಹಾಗೆ ಆಗ”ಬಹುದು” ಎಂದಾದರೂ ಅದು ಸಹಜ. ಹಾಗೆಂದೇ ಅದು ಸಹನೀಯ ಕೂಡ. ಬದಲಾವಣೆಯಲ್ಲಿ ಇಂತಹ ಬೆಳವಣಿಗೆಗಳನ್ನು ತಡೆಯಲಾಗುವುದಿಲ್ಲ.

ಆಗಲಿ. ಹೆಣ್ಣು ಮಕ್ಕಳು ತಿರುಗಾಡಲಿ. ಇದರಿಂದ ಅವರ ಲೋಕಜ್ಞಾನ, ಆತ್ಮವಿಶ್ವಾಸ ಹೆಚ್ಚಲಿ. ಇದರ ಪರಿಣಾಮವಾಗಿ ಖಂಡಿತ ಮುಂದಿನ ಒಂದು ತಲೆಮಾರಿನಲ್ಲಿ ಸಾಧ್ಯವಾಗಬಹುದಾದ “ಸಮಾನತೆ” ಅದು ಸಾಮಾನ್ಯವಾದುದೇನಲ್ಲ. ಈ ನೆಲೆಯಲ್ಲಿ ಸಿದ್ದರಾಮಯ್ಯನವರ ನೇತ್ರತ್ವದ ಸರಕಾರ ಜಾರಿಗೊಳಿಸಿರುವ “ಶಕ್ತಿ” ಯೋಜನೆಯೂ ಸಾಮಾನ್ಯವಾದುದೇನಲ್ಲ.

ಇದು ಬರೀ ಸರಕಾರಿ ಖಜಾನೆಯ ಲಾಭನಷ್ಟದ ಸಂಗತಿಯಲ್ಲ. ನೂರಾರು ವರ್ಷಕಾಲ ಸಂಸ್ಕೃತಿ ಸಭ್ಯತೆಯ ಹೆಸರಿನಲ್ಲಿ ಮೆರೆದ “ಗಂಡಾಳ್ವಿಕೆ”ಗೆ ನಡುಕ ಹುಟ್ಟಿಸಿರುವ ವಿಷಯ ಇದು. ಹಾಗೆಂದೇ ಅಂಥವರು ಕುಂತಲ್ಲಿ ನಿಂತಲ್ಲಿ ಹೆಣ್ಣು ಮಕ್ಕಳನ್ನು ಆಡಿಕೊಳ್ಳುತ್ತಿದ್ದಾರೆ. ಇಂಥವರನ್ನು ಮುಂದಿನ ದಿನಗಳಲ್ಲಿ ಉಚಿತ ತಿರುಗಾಡಿದ ಹೆಣ್ಣುಮಕ್ಕಳು ಆಡಿಸುವಂತಾದರೆ ಇದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕು?

 

Donate Janashakthi Media

Leave a Reply

Your email address will not be published. Required fields are marked *