ನಿರುದ್ಯೋಗ ಸೃಷ್ಟಿಸುವ ‘ಮುಕ್ತ ವ್ಯಾಪಾರ’ ಎಂಬ ಟೊಳ್ಳು ತರ್ಕ

ಪ್ರೊ. ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ.ನಾಗರಾಜ್
ಯಾವ ವಸ್ತುಗಳ ಉತ್ಪಾದನೆಯಲ್ಲಿ ದೇಶಗಳುತೌಲನಿಕ ಅನುಕೂಲಹೊಂದಿವೆಯೋ ಅವುಗಳಲ್ಲೇ ಪರಿಣತರಾಗಬೇಕು, ಪ್ರತಿಯೊಂದು ದೇಶವೂ ತಾನು ನೈಪುಣ್ಯತೆ ಹೊಂದಿರುವ ವಸ್ತುಗಳ ತಯಾರಿಕೆಯಲ್ಲೇ ಪರಿಣತಿ ಹೊಂದಿದರೆ, ಇಡೀ ಪ್ರಪಂಚದ ಒಟ್ಟು ಉತ್ಪಾದನೆ ಬಹಳ ದೊಡ್ಡದಾಗಿರುತ್ತದೆ. ಹಾಗಾಗಿ, ಎಲ್ಲ ದೇಶಗಳೂ ಮೊದಲಿಗಿಂತ ಉತ್ತಮವಾದ ಸ್ಥಿತಿಯಲ್ಲಿರಬಹುದುಎಂಬ ಒಂದು ಹುಸಿ ವಾದವನ್ನು, ಮುಕ್ತ ವ್ಯಾಪಾರವು ಒಳ್ಳೆಯದು ಎಂಬ ಅನಿಸಿಕೆಯನ್ನು ಉಂಟುಮಾಡಲು ಮಂಡಿಸಲಾಗಿದೆ. ಇದು ಸಂಪೂರ್ಣವಾಗಿ ಮೋಸ. ಮುಕ್ತ ವ್ಯಾಪಾರ ಆಳ್ವಿಕೆಯಲ್ಲಿ ಒಂದು ದೇಶದ ಸರ್ಕಾರವು ಒಟ್ಟು ಬೇಡಿಕೆಯನ್ನು ಹೆಚ್ಚಿಸುವುದಕ್ಕಾಗಿ ಮಧ್ಯಪ್ರವೇಶ ಮಾಡುವುದು, ಮೂಲಕ ಉದ್ಯೋಗವನ್ನು ಹೆಚ್ಚಿಸುವುದು ಸಾಧ್ಯವಿಲ್ಲ. ಅಂದರೆ ಒಂದು ನಿರ್ದಿಷ್ಟ ದೇಶದಲ್ಲಿ ಅಥವಾ ವಿಶ್ವ ಮಟ್ಟದಲ್ಲಿ, ಉದ್ಯೋಗ ಪರಿಸ್ಥಿತಿಯು,  ಅರ್ಥವ್ಯವಸ್ಥೆಯನ್ನು ರಕ್ಷಿಸಿಕೊಂಡ ಸನ್ನಿವೇಶದಲ್ಲಿ ಯಾವ ಮಟ್ಟದಲ್ಲಿ ಇರುತ್ತದೆಯೋ, ಮುಕ್ತ ವ್ಯಾಪಾರಗಳಿಗೆ ತೆರೆದುಕೊಂಡ ಸನ್ನಿವೇಶದಲ್ಲಿ ಅದಕ್ಕಿಂತಲೂ ಕೆಳ ಮಟ್ಟದಲ್ಲಿ ಇರಬಹುದು ಎಂದಾಗುತ್ತದೆ. ವಿದ್ಯಮಾನವುಮುಕ್ತ ವ್ಯಾಪಾರ ಮೂಲ ತರ್ಕವನ್ನೇ ಪೂರ್ಣವಾಗಿ ನಿರಾಕರಿಸುತ್ತದೆ.

ಹೆಚ್ಚು ನಿರ್ಬಂಧಗಳಿಲ್ಲದ ವ್ಯಾಪಾರ ನೀತಿಯನ್ನು ಹೊಂದಿದ ಒಂದು ದೇಶವು ವಿದೇಶ ವ್ಯಾಪಾರಗಳಲ್ಲಿ ತೊಡಗುವ ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳೋಣ. ಇಂಥಹ ವ್ಯಾಪಾರ ನೀತಿಯ ಕಾರಣದಿಂದಾಗಿ ಎರಡು ಸಮಸ್ಯೆಗಳು ಆ ದೇಶಕ್ಕೆ ಎದುರಾಗಬಹುದು: ಮೊದಲನೆಯದು, ಆಮದು ಬಾಕಿ ತೀರಿಸುವ ಸಮಸ್ಯೆ ಅಥವಾ ಪಾವತಿ ಶೇಷವನ್ನು ಚುಕ್ತಾ ಮಾಡುವ ಸಮಸ್ಯೆ. ಇದು ಸಮಸ್ಯೆಯಾಗುತ್ತದೆ ಏಕೆಂದರೆ, ಆ ದೇಶದ ರಫ್ತುಗಳು ಅದರ ಆಮದುಗಳಿಗಿಂತ ಕಡಿಮೆ ಇರುತ್ತವೆ. ಎರಡನೆಯ ಸಮಸ್ಯೆ ಎಂದರೆ, ನಿರುದ್ಯೋಗದ ಸೃಷ್ಟಿ ಮತ್ತು ಆಮದುಗಳೊಂದಿಗೆ ಸ್ಪರ್ಧಿಸಲಾಗದ ಕಾರಣದಿಂದ ಬಳಕೆಯಾಗದೆ ಉಳಿಯುವ ದೇಶೀಯ ಸಂಪನ್ಮೂಲಗಳು. ಇವೆರಡೂ ಒಂದೇ ರೀತಿಯ ಸಮಸ್ಯೆಗಳಲ್ಲ. ಹೆಚ್ಚಿನ ಮಟ್ಟದ ಆಮದುಗಳು ಇಲ್ಲದಿದ್ದರೂ ನಿರುದ್ಯೋಗ ಉಂಟಾಗಬಹುದು. ಈ ಪರಿಸ್ಥಿತಿ ಭಾರತದಲ್ಲಿ ಸಂಭವಿಸಿತ್ತು ಕೂಡ. ವಸಾಹತುಶಾಹಿ ಅವಧಿಯಲ್ಲಿ ಹೆಚ್ಚು ಆಮದುಗಳಿಲ್ಲದಿದ್ದರೂ ಸಹ (ವಾಸ್ತವವಾಗಿ ರಫ್ತುಗಳೇ ಜಾಸ್ತಿ ಇದ್ದವು ಮತ್ತು ಅವುಗಳ ಮೌಲ್ಯವನ್ನು ಕೊಡದೇ ಬ್ರಿಟಿಷ್ ವಸಾಹತುಶಾಹಿಗಳು ಸೂರೆ ಮಾಡಿದರು), ದೇಶದ ಕೈಗಾರಿಕೆಗಳನ್ನು ಹಾಳುಗೆಡವಿದ(ಅಪ-ಕೈಗಾರಿಕೀಕರಣ- de-industrialisation) ಪರಿಣಾಮವಾಗಿ ಭಾರತದ ಕುಶಲಕರ್ಮಿಗಳು ಮತ್ತು ಸೃಜನಶೀಲ ಕೈಕಸಬುದಾರರು ನಿರುದ್ಯೋಗಿಗಳಾದರು. ಇಲ್ಲಿ ಪ್ರಸ್ತಾಪಿಸುವ ವಿಷಯಗಳಲ್ಲಿ, ನಿರ್ಬಂಧಗಳಿಲ್ಲದ ವಿದೇಶ ವ್ಯಾಪಾರಗಳಿಂದಾಗಿ ಮೂರನೇ ಜಗತ್ತಿನ ದೇಶಗಳಲ್ಲಿ ಉಂಟಾದ ಪಾವತಿ ಶೇಷ ಇತ್ಯರ್ಥದ ಸಮಸ್ಯೆಯ ಗೊಡವೆಗೆ ನಾನು ಹೋಗುವುದಿಲ್ಲ. ಉದ್ಯೋಗ ಸಮಸ್ಯೆಯ ಬಗ್ಗೆ ಮಾತ್ರ ನಾವು ಸೀಮಿತಗೊಳ್ಳೋಣ.

ವಿದೇಶಗಳೊಂದಿಗಿನ ವ್ಯಾಪಾರಗಳಲ್ಲಿ ಕೆಲವು ನಿರ್ಬಂಧಗಳನ್ನು ಹೇರದಿದ್ದರೆ ದೇಶದಲ್ಲಿ ನಿರುದ್ಯೋಗ ಸೃಷ್ಟಿಯಾಗುತ್ತದೆ ಎಂಬುದು ವಸಾಹತುಶಾಹಿ ಆಳ್ವಿಕೆಯ ಅವಧಿಯಲ್ಲಿ ಅಪ-ಕೈಗಾರಿಕೀಕರಣದ ಪರಿಣಾಮವನ್ನು ಅನುಭವಿಸಿದ ಮೂರನೇ ಜಗತ್ತಿನ ದೇಶಗಳ ಜನರಿಗೆ ತಿಳಿದಿದೆ. ಆದಾಗ್ಯೂ, ಮುಕ್ತ ವ್ಯಾಪಾರವು ಒಳ್ಳೆಯದು ಎಂಬ ಸಾಮಾನ್ಯ ಅನಿಸಿಕೆಯೂ ಅವರಲ್ಲಿದೆ. ಇಂಥಹ ಒಂದು ಅನಿಸಿಕೆಯನ್ನು ಉಂಟುಮಾಡಲು ಒಂದು ಹುಸಿ ವಾದವನ್ನು ಮಂಡಿಸಲಾಗಿದೆ. ಹಾಗೆ ನೋಡಿದರೆ, ವಿಶ್ವ ವ್ಯಾಪಾರ ಸಂಘಟನೆಯ ಅಡಿಯಲ್ಲಿ ರೂಪಿಸಿದ ಜಾಗತಿಕ ವ್ಯಾಪಾರ ನಿಯಮಗಳು ಈ ಹುಸಿ ವಾದವನ್ನೇ ಆಧರಿಸಿವೆ. ಈ ವಾದವು ಹೇಳುವುದೇನೆಂದರೆ, ಯಾವ ವಸ್ತುಗಳ ಉತ್ಪಾದನೆಯಲ್ಲಿ ದೇಶಗಳು “ತೌಲನಿಕ ಅನುಕೂಲ” ಹೊಂದಿವೆಯೋ ಅವುಗಳಲ್ಲೇ ಪರಿಣತರಾಗಬೇಕು ಎಂಬುದು. ಪ್ರತಿಯೊಂದು ದೇಶವೂ ತಾನು ನೈಪುಣ್ಯತೆ ಹೊಂದಿರುವ ವಸ್ತುಗಳ ತಯಾರಿಕೆಯಲ್ಲೇ ಪರಿಣತಿ ಹೊಂದಿದರೆ, ಇಡೀ ಪ್ರಪಂಚದ ಒಟ್ಟು ಉತ್ಪಾದನೆ ಬಹಳ ದೊಡ್ಡದಾಗಿರುತ್ತದೆ. ಹಾಗಾಗಿ, ಎಲ್ಲ ದೇಶಗಳೂ ಮೊದಲಿಗಿಂತ ಉತ್ತಮವಾದ ಸ್ಥಿತಿಯಲ್ಲಿರಬಹುದು.

ಮೋಸದ ಪರಿಕಲ್ಪನೆ

“ತೌಲನಿಕ ಅನುಕೂಲ”ವನ್ನು (ಇದು ಮುಕ್ತ ವ್ಯಾಪಾರವನ್ನು ಸಮರ್ಥಿಸುವ ಏಕೈಕ ವಾದವೂ ಹೌದು) ಆಧರಿಸಿರುವ ಈ ಮುಕ್ತ ವ್ಯಾಪಾರವಾದದ ಪರಿಕಲ್ಪನೆಯು ಸಂಪೂರ್ಣವಾಗಿ ಮೋಸದ್ದು. ಪ್ರತಿಯೊಂದು ದೇಶದಲ್ಲೂ ಮತ್ತು ಅದರಿಂದಾಗಿ ಇಡೀ ವಿಶ್ವದಲ್ಲಿ, ಇಡೀ ಶ್ರಮಿಕ-ಪಡೆಯನ್ನೂ ಸೇರಿದಂತೆ ಎಲ್ಲ ಸಂಪನ್ಮೂಲಗಳನ್ನೂ ಪೂರ್ಣವಾಗಿ ಬಳಕೆ ಮಾಡಿಕೊಳ್ಳಲಾಗಿರುತ್ತದೆ ಎಂದು ಈ ಪರಿಕಲ್ಪನೆ ಊಹಿಸಿಕೊಳ್ಳುತ್ತದೆ. ಅದು ವ್ಯಾಪಾರದಲ್ಲಿ ತೊಡಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಮಾಡುವ ಕೇವಲ ಊಹೆ ಇದು. ಇದು ನಿಜ ಎಂದಿಟ್ಟುಕೊಂಡರೆ, ಒಂದು ದೇಶವು ಅದರ ಶ್ರಮಿಕ-ಪಡೆಯೂ ಸೇರಿದಂತೆ ಎಲ್ಲ ಸಂಪನ್ಮೂಲಗಳನ್ನು ಒಂದು ವೇಳೆ ವ್ಯಾಪಾರದ ಮೊದಲು ಮತ್ತು ವ್ಯಾಪಾರದ ನಂತರ ಪೂರ್ಣವಾಗಿ ಬಳಸಿಕೊಂಡಿದ್ದರೆ, ಆಗ ವ್ಯಾಪಾರವೆಂದರೆ, ಸಂಪನ್ಮೂಲಗಳ ಬಳಕೆಯನ್ನು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ತಿರುಗಿಸುವುದು, ಅಷ್ಟೇ. ಅಂದರೆ, ದೇಶದ ಶ್ರಮಿಕ-ಪಡೆಯೂ ಸೇರಿದಂತೆ ಯಾವ ಸಂಪನ್ಮೂಲವೂ ಬಳಕೆಯಾಗದೆ ಉಳಿಯದು ಎಂದು ಊಹಿಸಿಕೊಳ್ಳಲಾಗುತ್ತದೆ.

ಈ ಊಹೆಯನ್ನು ನಾವು ತಿರಸ್ಕರಿಸಲೇ ಬೇಕಾಗುತ್ತದೆ, ಏಕೆಂದರೆ, ವಾಸ್ತವಾಂಶಗಳಲ್ಲಾಗಲಿ ಅಥವಾ ಸಿದ್ಧಾಂತದಲ್ಲಾಗಲಿ, ಈ ಊಹೆಗೆ ಯಾವ ಆಧಾರವೂ ಇಲ್ಲ (ಅದರ ಸೈದ್ಧಾಂತಿಕ ವಿಚಾರ-ಶೂನ್ಯತೆಯನ್ನು 1930ರ ದಶಕದಲ್ಲಿ ಮೈಕಲ್ ಕಲೆಕಿ ಮತ್ತು ಜಾನ್ ಮೇನಾರ್ಡ್ ಕೀನ್ಸ್ ವಿವರಿಸಿದ್ದರು ಮತ್ತು ಅವರ ಈ ಸೈದ್ಧಾಂತಿಕ ನಾವೀನ್ಯತೆಯನ್ನು ಅದಕ್ಕೂ ಮೊದಲೇ, ಮುಕ್ಕಾಲು ಶತಮಾನದ ಹಿಂದೆಯೇ ಮಾರ್ಕ್ಸ್ ಮುಂಗಂಡಿದ್ದರು); ಹಾಗೆ ತಿರಸ್ಕರಿಸಿದೆವೆಂದರೆ, ಒಂದು ದೇಶಕ್ಕೆ ಎದುರಾಗುವ ಮುಕ್ತ ವ್ಯಾಪಾರದ ಸಂಭಾವ್ಯ ಹಾನಿಕಾರಕ ಪರಿಣಾಮಗಳು ಸ್ಪಷ್ಟವಾಗುತ್ತವೆ.

ಇದನ್ನೂ ಓದಿಕೃಷಿಯನ್ನು ಮುಕ್ತ ಮಾರುಕಟ್ಟೆಯ ಆಟಕ್ಕೆ ಬಿಡುವಂತಿಲ್ಲ

ಕೈಕಟ್ಟಿ ಹಾಕಿರುವ ಅವಾಸ್ತವಿಕ ತರ್ಕ

ಈ ಊಹೆಯು ಅದೆಷ್ಟು ಅವಾಸ್ತವಿಕ ಎಂಬುದನ್ನು ಅರ್ಥಮಾಡಿಕೊಳ್ಳಲು ಒಂದು ತುಂಬಾ ಸರಳವಾದ ಮಾರ್ಗವಿದೆ. ವಿಶ್ವ ಅರ್ಥವ್ಯವಸ್ಥೆಯ ಒಟ್ಟು ಉತ್ಪಾದನಾ ಸಾಮರ್ಥ್ಯವು 100 ಯೂನಿಟ್‌ಗಳು ಎಂದು ಭಾವಿಸೋಣ. ವಿಶ್ವ ಅರ್ಥವ್ಯವಸ್ಥೆಯ ಒಟ್ಟು ಬೇಡಿಕೆಯು 80 ಯೂನಿಟ್‌ಗಳಾಗಿದ್ದರೆ, ಆಗ, ವಿಶ್ವ ಉತ್ಪಾದನಾ ಸಾಮರ್ಥ್ಯದ 20 ಯುನಿಟ್‌ಗಳು ಬಳಕೆಯಾಗದೆ ಉಳಿಯುತ್ತವೆ. ಹಾಗೆಯೇ, ಬಂಡವಾಳಶಾಹಿ ಪರಿಸ್ಥಿತಿಗಳಲ್ಲೂ 20 ಯೂನಿಟ್‌ಗಳು ಬಳಕೆಯಾಗದೆ ಉಳಿಯುತ್ತವೆ. ಪರಿಣಾಮವಾಗಿ, ಬಳಕೆಯಾಗದೆ ಉಳಿದ ಸಂಪನ್ಮೂಲಗಳನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ದೇಶಗಳ ನಡುವೆ ಹಂಚಲಾಗುತ್ತದೆ.

ಈ ಸಂದರ್ಭದಲ್ಲಿ ಒಂದು ಪ್ರಶ್ನೆಯನ್ನು ಎತ್ತಬಹುದು. ಬಂಡವಾಳಶಾಹಿಯು ಸೃಷ್ಟಿಸುವ ನಿರುದ್ಯೋಗದಿಂದ ಭ್ರಮನಿರಸನಗೊಂಡ ಕಾರ್ಮಿಕರು ಸಮಾಜವಾದದ ಕಡೆಗೆ ಚಲಿಸುತ್ತಾರೆ ಎಂದು ಹೆದರಿದ ಕೀನ್ಸ್, ಒಟ್ಟಾರೆ ಬೇಡಿಕೆಯ ಮಟ್ಟವನ್ನು ಹೆಚ್ಚಿಸಲು ಮತ್ತು ಆ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಪ್ರಭುತ್ವ ಮಧ್ಯಪ್ರವೇಶಿಸಬೇಕು ಎಂದು ಸೂಚಿಸಿದ್ದರು. ಮುಕ್ತ ವ್ಯಾಪಾರ ನೀತಿಯನ್ನು ಅನುಸರಿಸುವ ಸಂದರ್ಭದಲ್ಲಿ, ಯಾವುದೇ ದೇಶದ ಸಂಪನ್ಮೂಲಗಳು ಬಳಕೆಯಾಗದೆ ಉಳಿಯದಂತಾಗಲು ಕೀನ್ಸ್ ಅವರ ಈ ಸೂಚನೆಯನ್ನು ವಿಶ್ವ ಮಟ್ಟದಲ್ಲಿ ಅನುಸರಿಸಲು ಏಕೆ ಪ್ರಯತ್ನಿಸಬಾರದು?

ಈ ಪ್ರಶ್ನೆಯಲ್ಲಿ ಅಂತರ್ಗತವಾಗಿರುವ ಜಟಿಲ ವಿವರಗಳಿಗೆ ಹೋಗದೆ, ಹೇಳಬಹುದಾದ ಅತಿ ಸರಳವಾದ ಮತ್ತು ಸ್ಪಷ್ಟವಾದ ಉತ್ತರವೆಂದರೆ, ವಿಶ್ವ ಮಟ್ಟದಲ್ಲಿ ಪ್ರಭುತ್ವದ ಮಧ್ಯಪ್ರವೇಶ ಇರಬೇಕು ಎಂದಾದರೆ, ವಿಶ್ವ ಸರ್ಕಾರವನ್ನು ಹೊಂದಿದ ಒಂದು ವಿಶ್ವ ಪ್ರಭುತ್ವವೂ ಇರಬೇಕಾಗುತ್ತದೆ. ಇದು ಬಂಡವಾಳಶಾಹಿಯ ಅಡಿಯಲ್ಲಿ ಸಾಧ್ಯವಿಲ್ಲದ ಮಾತು. ಮತ್ತು, ವಿಶ್ವದ ಒಟ್ಟು ಬೇಡಿಕೆಯು ಸಾಕಷ್ಟು ಇಲ್ಲದೆ ಇರುವುದರಿಂದ, ಸಂಪನ್ಮೂಲಗಳು ಬಳಕೆಯಾಗದೆ ಉಳಿದ ದೇಶಗಳಲ್ಲಿ, ಆ ದೇಶದ ನಿರ್ದಿಷ್ಟ ರಾಜ್ಯಗಳು ದೊಡ್ಡ ಪ್ರಮಾಣದ ನಿರುದ್ಯೋಗವನ್ನು ಸೃಷ್ಟಿಸಲು ಆ ಅರ್ಥವ್ಯವಸ್ಥೆಗಳಲ್ಲಿ ಬೇಡಿಕೆಯನ್ನು ಹೆಚ್ಚಿಸಲು ಪ್ರಯತ್ನಿಸಿದರೆ, ನಂತರ ಮುಕ್ತ ವ್ಯಾಪಾರ ಪರಿಸ್ಥಿತಿಗಳಲ್ಲಿ ಈ ಅಧಿಕ ಬೇಡಿಕೆಯು ಸೋರಿಕೆಯಾಗಿ ಅಧಿಕ ಆಮದುಗಳಿಗೆ ಕಾರಣವಾಗಬಹುದು ಮತ್ತು ಆ ಮೂಲಕ ತಾಳಿಕೊಳ್ಳಲಾರದ ಒಂದು ವ್ಯಾಪಾರ ಕೊರತೆಗೆ ಕಾರಣವಾಗಬಹುದು. ಈ ದೇಶಗಳು ಮುಕ್ತ ವ್ಯಾಪಾರ ಪದ್ಧತಿಗೆ ತೆರೆದುಕೊಳ್ಳದಿದ್ದರೆ ಮತ್ತು ತಮ್ಮ ಅರ್ಥವ್ಯವಸ್ಥೆಯನ್ನು ರಕ್ಷಿಸಿಕೊಳ್ಳಲು ಸಾಧ್ಯವಾದರೆ, ಅವರ ಸರ್ಕಾರಗಳು ದೇಶೀಯ ಒಟ್ಟು ಬೇಡಿಕೆಯನ್ನು ಹಿಗ್ಗಿಸಬಹುದು ಮತ್ತು ಆ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸಿಕೊಳ್ಳಬಹುದು. ಆದರೆ ಮುಕ್ತ ವ್ಯಾಪಾರ ಪದ್ಧತಿ ಅವರ ಕೈಗಳನ್ನು ಕಟ್ಟಿಹಾಕಿದೆ.

ಮುಕ್ತ ವ್ಯಾಪಾರ ಆಳ್ವಿಕೆಯಲ್ಲಿ ಒಂದು ದೇಶದ ಸರ್ಕಾರವು ಒಟ್ಟು ಬೇಡಿಕೆಯನ್ನು ಹೆಚ್ಚಿಸುವುದಕ್ಕಾಗಿ ಮಧ್ಯಪ್ರವೇಶ ಮಾಡುವುದು ಸಾಧ್ಯವಿಲ್ಲ ಮತ್ತು ಆ ಮೂಲಕ ಉದ್ಯೋಗವನ್ನು ಹೆಚ್ಚಿಸುವುದು ಸಾಧ್ಯವಿಲ್ಲ. ಆದರೆ, ವಿಶ್ವದ ಬೇಡಿಕೆಯ ಮಟ್ಟವು ಏನೇ ಇರಲಿ, ಅದರಿಂದ ಹೊರಬೀಳುವ ಪರಿಣಾಮಗಳನ್ನು ಭಕ್ತಿಗೌರವಗಳಿಂದ ಒಪ್ಪಿಕೊಳ್ಳಬೇಕು ಎಂದೇ ಅದರ ಅರ್ಥ, ಒಂದು ನಿರ್ದಿಷ್ಟ ದೇಶದಲ್ಲಿ ಅಥವಾ ವಿಶ್ವ ಮಟ್ಟದಲ್ಲಿ, ಉದ್ಯೋಗ ಪರಿಸ್ಥಿತಿ ಅರ್ಥವ್ಯವಸ್ಥೆಯನ್ನು ರಕ್ಷಿಸಿಕೊಂಡ ಸನ್ನಿವೇಶದಲ್ಲಿ ಯಾವ ಮಟ್ಟದಲ್ಲಿ ಇರುತ್ತದೆಯೋ, ಮುಕ್ತ ವ್ಯಾಪಾರಗಳಿಗೆ ತೆರೆದುಕೊಂಡ ಸನ್ನಿವೇಶದಲ್ಲಿ ಅದಕ್ಕಿಂತಲೂ ಕೆಳ ಮಟ್ಟದಲ್ಲಿ ಇರಬಹುದು ಎಂದಾಗುತ್ತದೆ. ಈ ವಿದ್ಯಮಾನವು ಮುಕ್ತ ವ್ಯಾಪಾರದ ಮೂಲ ವಾದವನ್ನು ಪೂರ್ಣವಾಗಿ ನಿರಾಕರಿಸುತ್ತದೆ. ಮುಕ್ತ ವ್ಯಾಪಾರ ವಾದವು ಏನನ್ನು ಹೇಳುತ್ತದೆ ಎಂಬುದನ್ನು ನೆನಪಿಸಿಕೊಳ್ಳಬಹುದು: ಪ್ರತಿಯೊಂದು ದೇಶವೂ ಯಾವ ವಸ್ತುಗಳ ಉತ್ಪಾದನೆಯಲ್ಲಿ “ತೌಲನಿಕ ಅನುಕೂಲ” ಹೊಂದಿದೆಯೋ ಅವುಗಳಲ್ಲೇ ಪರಿಣತಿ ಹೊಂದಬೇಕು ಮತ್ತು ನೈಪುಣ್ಯತೆ ಹೊಂದಿರುವ ವಸ್ತುಗಳ ತಯಾರಿಕೆಯಲ್ಲೇ ಪರಿಣತಿ ಹೊಂದಿದರೆ, ಇಡೀ ಪ್ರಪಂಚದ ಒಟ್ಟು ಉತ್ಪಾದನೆ ಹೆಚ್ಚುತ್ತದೆ ಮತ್ತು ಅದು ಎಲ್ಲ ದೇಶಗಳಿಗೂ ಅನುಕೂಲಕರವಾಗುವ ಸಾಧ್ಯತೆ ಇರುತ್ತದೆ. ಆದರೆ, ಮುಕ್ತ ವ್ಯಾಪಾರಗಳಿಗೆ ತೆರೆದುಕೊಂಡ ನಂತರ, ಒಂದು ವೇಳೆ ವಿಶ್ವದ ಬೇಡಿಕೆ ಕುಸಿದರೆ, ಮುಕ್ತ ವ್ಯಾಪಾರಗಳಿಗೆ ತೆರೆದುಕೊಳ್ಳುವ ಮೊದಲು ವಿಶ್ವದ ಬೇಡಿಕೆ ಒಟ್ಟು ಎಷ್ಟಿತ್ತೋ ಅದಕ್ಕಿಂತಲೂ ಕಡಿಮೆ ಇರಬಹುದು ಎಂಬುದನ್ನು ಗುರುತಿಸಿದ ಕೂಡಲೇ ಈ ವಾದವು ಕುಸಿದು ಬೀಳುತ್ತದೆ.

ರಾಷ್ಟ್ರಪ್ರಭುತ್ವ vs ಬದಲಿ ವಿಶ್ವಪ್ರಭುತ್ವ

ಮುಕ್ತ-ವ್ಯಾಪಾರ-ನಂತರದ ವಿಶ್ವದ ಒಟ್ಟು ಬೇಡಿಕೆಯು ಏನನ್ನು ಅವಲಂಬಿಸಿದೆ ಎಂದು ಕೇಳಬಹುದು? ವಿಶ್ವದ ಒಟ್ಟು ಬೇಡಿಕೆಯ ಪ್ರಾಥಮಿಕ ನಿರ್ಧಾರಕ ಅಂಶ ಯಾವುದು ಎಂದರೆ, ಪ್ರಮುಖ ಬಂಡವಾಳಶಾಹಿ ದೇಶದೊಳಗೆ – ಪ್ರಸ್ತುತ ಸಂದರ್ಭದಲ್ಲಿ ಅದು ಅಮೇರಿಕಾದೊಳಗೆ – ಸೃಷ್ಟಿಯಾಗುವ ಬೇಡಿಕೆಯೇ; ಈ ಬೇಡಿಕೆಯು ಇತರ ದೇಶಗಳಿಗೆ “ಸೋರಿಕೆ”ಯಾದಾಗಲೂ ಬೇಡಿಕೆಯನ್ನು ಸೃಷ್ಟಿಸುವಲ್ಲಿ ಅಮೇರಿಕಾ ಒಂದು ರೀತಿಯ ಸ್ವಾತಂತ್ರ‍್ಯವನ್ನು ಹೊಂದಿದೆ. ಪರಿಸ್ಥಿತಿ ಹೀಗಾಗಿದೆ ಏಕೆಂದರೆ, ವ್ಯಾಪಾರ ಕೊರತೆಯ ಬಗ್ಗೆ ಅಮೇರಿಕಾ ಚಿಂತಿಸಬೇಕಾಗಿಲ್ಲ. ಏಕೆಂದರೆ, ಅದರ ಡಾಲರ್ ಕರೆನ್ಸಿಯನ್ನು “ಚಿನ್ನಕ್ಕೆ ಸಮ” ಎಂದೇ ಪರಿಗಣಿಸಲಾಗಿದೆ. ಆದ್ದರಿಂದ, ಅಮೇರಿಕಾ ತನ್ನ ಬಾಹ್ಯ ವ್ಯಾಪಾರ ಕೊರತೆಗಳಿಗೆ ಬೇಕಾಗುವಷ್ಟು ಡಾಲರ್‌ಗಳನ್ನು ಸುಮ್ಮನೇ ಪ್ರಿಂಟ್ ಮಾಡಬಹುದು ಮತ್ತು ಈ ಡಾಲರ್‌ಗಳನ್ನು ಹಿಡಿಟ್ಟುಕೊಳ್ಳಲು ವಿಶ್ವದ ಉಳಿದ ದೇಶಗಳು ತುದಿಗಾಲಲ್ಲಿ ನಿಂತಿವೆ.

ಈ ಕಾರಣದಿಂದಾಗಿಯೇ ಅಮೆರಿಕಾದಲ್ಲಿ ಬಳಕೆ+ಹೂಡಿಕೆ+ಸರ್ಕಾರದ ವೆಚ್ಚಗಳು ವಿಶ್ವದ ಒಟ್ಟು ಬೇಡಿಕೆಯ ಪ್ರಾಥಮಿಕ ನಿರ್ಣಾಯಕ ಅಂಶಗಳಾಗಿವೆ. ನಿರ್ದಿಷ್ಟವಾಗಿ ಅಮೆರಿಕಾ ಸರ್ಕಾರದ ವೆಚ್ಚಗಳು ಇಲ್ಲಿ ಮುಖ್ಯವಾಗುತ್ತವೆ. ಏಕೆಂದರೆ, ಅಮೆರಿಕಾ ಒಂದು ನಿರ್ದಿಷ್ಟ ಸ್ವಾತಂತ್ರ‍್ಯವನ್ನು ಹೊಂದಿದೆ: ನಲ್ಲಿಯನ್ನು ತಿರುಗಿಸಿ ಬೇಕಾದಾಗ ನೀರು ಹಿಡಿಯುವಂತೆ ಅದು ಸಾಲವನ್ನು ಬಳಕೆ ಮಾಡಬಹುದು. ಈ ಅರ್ಥದಲ್ಲಿ ಅಮೆರಿಕಾ ಪ್ರಭುತ್ವವು, ಒಂದು ರಾಷ್ಟ್ರ-ಪ್ರಭುತ್ವವಾಗಿರುವುದರ ಹೊರತಾಗಿಯೂ, ಸಮಕಾಲೀನ ಬಂಡವಾಳಶಾಹಿ ಪರಿಸ್ಥಿತಿಗಳಲ್ಲಿ ಒಂದು ಬದಲಿ (surrogate) ವಿಶ್ವ-ಪ್ರಭುತ್ವವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಮತ್ತು ವಾಸ್ತವವಾಗಿ ಒಂದು ಹಂತದವರೆಗೆ ಅದು ಹಾಗೆ ಕಾರ್ಯನಿರ್ವಹಿಸಿರುವುದೂ ಹೌದು.

ಸದ್ಗುಣಗಳ ಧೂರ್ತ ಬೋಧನೆ

ಇಲ್ಲಿ ಒಂದು ವೈರುಧ್ಯವಿದೆ. ಅದು ಈಗ ಪ್ರಕಟಗೊಳ್ಳಲಾರಂಭಿಸಿದೆ. ಅಮೆರಿಕಾ ಪ್ರಭುತ್ವವು ಬದಲಿ ವಿಶ್ವ ಪ್ರಭುತ್ವವಾಗಿ ಕಾರ್ಯನಿರ್ವಹಿಸಬಹುದಾದರೂ, ಅದು ವಿಶ್ವ ಪ್ರಭುತ್ವವಲ್ಲ; ಏನೇ ಹೇಳಿದರೂ, ಅಂತಿಮವಾಗಿ ಅದು ಒಂದು ರಾಷ್ಟ್ರ-ಪ್ರಭುತ್ವವೇ. “ಸೋರಿಕೆ”ಯಾಗುವ ತನ್ನ ಆಂತರಿಕ ಒಟ್ಟು ಬೇಡಿಕೆಯನ್ನು ಅಮೆರಿಕಾ ಪ್ರಭುತ್ವವು ಒಂದು ವೇಳೆ ಹೆಚ್ಚಿಸಿದರೆ, ಆಗ, ಅಮೆರಿಕಾ ತನ್ನ ಬಾಹ್ಯ ಕೊರತೆಗೆ ಹಣಕಾಸು ಹೊಂದಿಸಿಕೊಳ್ಳುವಲ್ಲಿ ಸಮಸ್ಯೆಗಳಿಲ್ಲದಿದ್ದರೂ ಸಹ, ಆ ಬಾಹ್ಯ ಕೊರತೆಯನ್ನು ನೀಗಿಸಿಕೊಳ್ಳುವಲ್ಲಿ ಅದು ಸಾಲಗಾರನಾಗುತ್ತದೆ. ಮತ್ತು ಉದ್ಯೋಗ ಸೃಷ್ಟಿಸುವಾಗಲೂ – ಹೆಚ್ಚಿನ ಉದ್ಯೋಗಗಳು (ಬೇಡಿಕೆ “ಸೋರಿಕೆ”ಯಾಗುವುದರಿಂದ) ಹೊರ ದೇಶದಲ್ಲಿವೆಯಾದ್ದರಿಂದ – ಅದು ಸಾಲಗಾರನಾಗುತ್ತದೆ. ಸರ್ಕಾರದ ಬೃಹತ್ ವೆಚ್ಚಗಳ ಮೂಲಕ ಒಟ್ಟು ಬೇಡಿಕೆಯನ್ನು ಹಿಗ್ಗಿಸುವ ಅಮೆರಿಕಾದ ಕ್ರಮವು, ತಾಳಿಕೆಯಿರದ್ದು ಎಂಬ ಅರ್ಥದಲ್ಲಿ ಅಮೆರಿಕಾಗೆ ಯಾವ ತಾಂತ್ರಿಕ ಸಮಸ್ಯೆಗಳು ಈ ಸಂಬಂಧವಾಗಿ ಉದ್ಭವವಾಗದಿದ್ದರೂ, ಸಂಕುಚಿತ ರಾಷ್ಟ್ರೀಯ ದೃಷ್ಟಿಕೋನದ ವಿರುದ್ಧ ಸೆಣಸಾಟಕ್ಕೆ ಇಳಿಯುತ್ತದೆ. ಈ ಸೆಣಸಾಟವನ್ನು ಅಮೆರಿಕಾ ಪ್ರಭುತ್ವವು ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅದರ ರಾಷ್ಟ್ರ-ಪ್ರಭುತ್ವದ ಪಾತ್ರವು ಅದರ ಬದಲಿ ವಿಶ್ವ-ಪ್ರಭುತ್ವದ ಪಾತ್ರದಲ್ಲಿ ತೊಡಕಾಗುತ್ತದೆ.

ಈ ವೈರುಧ್ಯವು ಈಗ ಒಂದು ಉಗ್ರ ಸ್ವರೂಪವನ್ನು ಪಡೆಯುತ್ತಿದೆ. ಕೊರೊನಾ ಸಮಯದಲ್ಲಿ ಅಮೆರಿಕಾ ಮತ್ತು ಇತರ ಮುಂದುವರಿದ ದೇಶಗಳು ತಮ್ಮ ಜನರಿಗೆ ಪರಿಹಾರ ಒದಗಿಸಲು ಹಣದ ಬಹು ದೊಡ್ಡ ಕೊರತೆಯನ್ನು ಎದುರಿಸಿದವು. ಕೊರೊನಾ ಕೊನೆಗೊಂಡ ನಂತರದ ಅವಧಿಯಲ್ಲಿ, ಒಟ್ಟು ಆಂತರಿಕ ಬೇಡಿಕೆಯನ್ನು ಹೆಚ್ಚಿಸಲು, ಹಣಕಾಸಿನ ಪರಿಸ್ಥಿತಿ ಅದಾಗಲೇ ಕೊರತೆಯಲ್ಲಿದ್ದರೂ ಸಹ, ಮತ್ತಷ್ಟು ಕೊರತೆಗೆ ಹೊಂದಿಕೊಳ್ಳಲು(ಅಂದರೆ, ಸಾಲ ಮಾಡಲು) ಅಮೆರಿಕಾ ಉತ್ಸುಕವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಹಣದುಬ್ಬರ ತೀವ್ರವಾಗಿ ಏರಿದ್ದರಿಂದ ಈ ಉತ್ಸಾಹ ತಗ್ಗಿದೆ. ಈ ಹಣದುಬ್ಬರ ಒಮ್ಮೆ ತಗ್ಗಿದ ಕೂಡಲೇ, ಪ್ರಭುತ್ವದ ವೆಚ್ಚಗಳ ಮೂಲಕ ಅಮೆರಿಕಾದಲ್ಲಿ ಒಟ್ಟು ಆಂತರಿಕ ಬೇಡಿಕೆಗೆ ಉತ್ತೇಜನ ನೀಡುವ ಸಾಧ್ಯತೆಯಿದೆ. ಮತ್ತು, ಈ ಉತ್ತೇಜನವು, ಇತರ ದೇಶಗಳಿಗೆ ಬೇಡಿಕೆ “ಸೋರಿಕೆ”ಯಾಗುವುದನ್ನು ತಡೆಗಟ್ಟುವ ಸ್ವಸಂರಕ್ಷಕ ನೀತಿಯಿಂದ (protectionism) ಕೂಡಿರುತ್ತದೆ. ವಾಸ್ತವವಾಗಿ, ಸ್ವಲ್ಪ ಸಮಯದ ಹಿಂದಿನಿಂದ, ಸ್ವದೇಶೀ ಕೈಗಾರಿಕೆಗಳನ್ನು ವಿದೇಶಿ ಪೈಪೋಟಿಯಿಂದ ರಕ್ಷಿಸಲು, ವಿದೇಶೀ ಉತ್ಪನ್ನಗಳ ಮೇಲೆ ಅಧಿಕ ಸುಂಕ ವಿಧಿಸುವ ಸ್ವಸಂರಕ್ಷಣಾತ್ಮಕ ಆರ್ಥಿಕ ನೀತಿಯನ್ನು ಅಮೆರಿಕಾ ಅನುಸರಿಸುತ್ತಾ ಬಂದಿದೆ. ಈ ಕ್ರಮವು ಹೆಚ್ಚು ಸ್ಪಷ್ಟವಾಗಿ ಚೀನಾದ ವಿರುದ್ಧ ನಿರ್ದೇಶಿಸಲ್ಪಟ್ಟಿದೆ ಮತ್ತು ಮೂರನೆಯ ಜಗತ್ತಿನ ಇತರ ದೇಶಗಳಿಗೂ ಈ ನೀತಿಯ ಬಿಸಿ ತಟ್ಟುತ್ತಿದೆ.

ಸ್ವಸಂರಕ್ಷಣಾ ಆರ್ಥಿಕ ನೀತಿಯನ್ನು ಅನುಸರಿಸುತ್ತಾ ಬಂದಿರುವ ಅಮೆರಿಕಾದ ಕ್ರಮವನ್ನು ಕೆಲವರು “ಅಪ-ಜಾಗತೀಕರಣ” ಎಂದು ಕರೆದಿದ್ದಾರೆ. ಅದು ಸರಿಯಲ್ಲ. ಈ ಸ್ವಸಂರಕ್ಷಣಾವಾದವನ್ನು ಪರಿಚಯಿಸುವ ಪ್ರವೃತ್ತಿಯನ್ನು ಅಮೆರಿಕಾ ಹೊಂದಿದ್ದರೂ ಸಹ, ಹಣಕಾಸು ಬಂಡವಾಳದ ಹರಿದಾಟದ ಮೇಲೆ ಅದು ಯಾವುದೇ ನಿರ್ಬಂಧಗಳನ್ನು ಹೇರಿಲ್ಲ. ಬದಲಾಗಿ, ಬಂಡವಾಳದ ಹರಿವಿನ ಮೇಲೆ ನಿಯಂತ್ರಣಗಳನ್ನು ಹೇರುವ ಯಾವುದೇ ಮೂರನೇ ಜಗತ್ತಿನ ದೇಶವು ಅಮೆರಿಕಾದ ಸಿಟ್ಟಿಗೆ ಬಲಿಯಾಗಬೇಕಾಗುತ್ತದೆ. ಇಂಥಹ ವೈರುಧ್ಯಗಳು ಅಮೇರಿಕಾಕ್ಕೇನೂ ಪರಿವೆಯೇ ಇಲ್ಲ. ಎಷ್ಟೆಂದರೂ, ಅದು ತಾನು ಸ್ವಸಂರಕ್ಷಣಾವಾದಿಯಾಗುತ್ತಿರುವಾಗಲೇ, ಜಗತ್ತಿನ ಇತರ ದೇಶಗಳಿಗೆ ಮುಕ್ತ ವ್ಯಾಪಾರದ ಸದ್ಗುಣಗಳನ್ನು ಬೋಧಿಸುತ್ತಾ ಬಂದಿದೆ ತಾನೇ?

ಈ ವಿಡಿಯೋ ನೋಡಿಬರಗಾಲದಿಂದ ರೈತರು ಕಂಗಾಲು : ರಾಮ ಭಜನೆಯಲ್ಲಿ ಕೇಂದ್ರ ಸರ್ಕಾರ, ನಿದ್ದೆಗೆ ಜಾರಿದ ರಾಜ್ಯ ಸರ್ಕಾರ

 

 

Donate Janashakthi Media

Leave a Reply

Your email address will not be published. Required fields are marked *