ಎಂ.ಚಂದ್ರ ಪುಜಾರಿ
ರಾಜಕೀಯ ಪಕ್ಷಗಳು ಘೋಷಿಸುವ ಅಕ್ಕಿ, ವಿದ್ಯುತ್, ನಿರುದ್ಯೋಗ ಭತ್ತೆ, ಬಸ್ ಟಿಕೇಟು, ಗ್ಯಾಸ್ ಸಿಲಿಂಡರ್, ಹಾಲು ಇತ್ಯಾದಿಗಳೆಲ್ಲ ನಾಟಿ ದನದ ರೀತಿಯಲ್ಲಿ ಅತ್ಯಂತ ಕಡಿಮೆ ಸಂಪನ್ಮೂಲ ಬಳಸಿ ಹೆಚ್ಚು ಉತ್ಪಾದನೆ ಮಾಡುವ ಜನರಿಗೆ ತಲುಪುವ ಸವಲತ್ತುಗಳು. ಇವೆಲ್ಲ ಸವಲತ್ತುಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಂಡರೆ ಪ್ರತಿ ಕುಟುಂಬಕ್ಕೂ ಒಂದೆರಡು ಸಾವಿರ ರೂಗಳ ನೆರವು ಸಿಗಬಹುದು. ಹಲವು ಸಾವಿರ ಅಥವಾ ಲಕ್ಷದಲ್ಲಿ ಗಳಿಸುವವರಿಗೆ ಒಂದೆರಡು ಸಾವಿರ ದೊಡ್ಡ ಮೊತ್ತವಲ್ಲ. ಆದರೆ 10 ರಿಂದ 15 ಸಾವಿರ ಆದಾಯವುಳ್ಳವರಿಗೆ ಒಂದೆರಡು ಸಾವಿರ ದೊಡ್ಡ ಮೊತ್ತ. ಅದರಲ್ಲೂ ಇತ್ತೀಚಿನ ಕೆಲವು ವರ್ಷಗಳ ಬೆಳವಣಿಗೆಗಳು ಮುಖ್ಯವಾಗಿ ನೋಟು ರದ್ಧತಿ, ಜಿಎಸ್‌ಟಿ, ಕೋವಿಡ್ ಹೊಡೆತ, ಆರ್ಥಿಕ ಕುಸಿತ, ನಿರುದ್ಯೋಗ, ಹಣದುಬ್ಬರ ಇತ್ಯಾದಿಗಳು ಇವರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿವೆ. ಇವರೆಲ್ಲರ ಖರೀದಿಸುವ ಶಕ್ತಿ ಕುಂಠಿತವಾಗಿದೆ. ಇವರ ಖರೀದಿಸುವ ಶಕ್ತಿಯನ್ನು ಈ ಸವಲತ್ತುಗಳು ಅಲ್ಪಸ್ವಲ್ಪ ಸುಧಾರಿಸಬಹುದು. ಇವರನ್ನು ದಿವಾಳಿಗೊಳಿಸುವ ನೀತಿಗಳೇ ಹೆಚ್ಚಿರುವ ಸಂದರ್ಭದಲ್ಲಿ ಈ ಅಲ್ಪಸ್ವಲ್ಪ ನೆರವು ಕೂಡ ಬದುಕಿ ಉಳಿಯಲು ಇವರಿಗೆ ಆಸರೆಯಾಗಬಹುದು.
ಹಲವು ದಶಕಗಳಿಂದ ಬಂಡವಾಳಕ್ಕೆ ಮಹತ್ವ ನೀಡುವ ಅಭಿವೃದ್ಧಿ ಕಾರುಬಾರು ಮಾಡುತ್ತಿದೆ. ಇದು ಜನ ಸಾಮಾನ್ಯರ ಆರ್ಥಿಕ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿದೆ. ಇಂತಹ ಅಭಿವೃದ್ದಿ ದಿಶೆಯಿಂದ ನಮ್ಮ ಸಮಾಜದ ಮುಕ್ಕಾಲು ಭಾಗ ಜನ ಊಟ, ವಸತಿ, ಶಿಕ್ಷಣ, ಆರೋಗ್ಯಗಳಿಗೆ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಈ ಜನ ಒಂದೆರಡು ವರ್ಷಗಳ ನಂತರ ಸಿಗುವ ಭೂಮಿ, ಬಂಡವಾಳ ಅಥವಾ ಉದ್ಯೋಗದ ಭರವಸೆಯನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಇವರ ಬೇಡಿಕೆ ಏನಿದ್ದರೂ ಇವತ್ತು, ಈಗ, ತಕ್ಷಣ. ಜನರ ಚಿಂತಾಜನಕ ಆರ್ಥಿಕ ಸ್ಥಿತಿಯನ್ನು ಲಿಬರಲ್ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಬಳಸಿಕೊಳ್ಳುತ್ತಿವೆ. ಪ್ರತಿ ಚುನಾವಣೆಯಲ್ಲೂ ಕುಟುಂಬಗಳನ್ನು ಸ್ವಾವಲಂಬಿಗಳನ್ನಾಗಿಸುವ ಭರವಸೆಗಳ ಬದಲು ಜನರ ತಕ್ಷಣ ಅಗತ್ಯಗಳನ್ನು ಪೂರೈಸುವ ಸರಕುಸೇವೆಗಳನ್ನು ನೀಡುವ ಭರವಸೆ ನೀಡಿ ಪಕ್ಷಗಳು ಚುನಾವಣೆ ಗೆಲ್ಲುತ್ತವೆ. ಗೆದ್ದ ನಂತರ ಯಥಾ ಪ್ರಕಾರ ಬಂಡವಾಳಕ್ಕೆ ಮಹತ್ವ ನೀಡುವ ಅಭಿವೃದ್ಧಿಯನ್ನು ಮುಂದುವರಿಸುತ್ತವೆ.
ಜನರನ್ನು ಸ್ವಾವಲಂಬಿಗಳನ್ನಾಗಿಸಲು ಭೂಮಿ, ಬಂಡವಾಳ ನೀಡುವ ಪಕ್ಷಗಳು ಮತ್ತು ಜನರ ತಕ್ಷಣದ ಬೇಡಿಕೆಗಳನ್ನು ಪೂರೈಸುವ ಪಕ್ಷಗಳ ನಡುವೆ ಪೈಪೋಟಿ ಹಿಂದೆ ಇತ್ತು. ಆ ಪೈಪೋಟಿಯಲ್ಲಿ ಜನರನ್ನು ಸ್ವಾವಲಂಬಿಗಳನ್ನಾಗಿಸುವ ಪಕ್ಷಗಳು ಸೋತು ಜನರ ತಕ್ಷಣದ ಬೇಡಿಕೆಗಳನ್ನು ಪೂರೈಸುವ ಪಕ್ಷಗಳು ಅಧಿಕಾರ ಚುಕ್ಕಾಣಿ ಹಿಡಿದವು. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಸ್ಥಿತಿ ಇನ್ನೂ ಬಿಗಾಡಯಿಸಿದೆ. ಇವತ್ತು ಭೂಮಿ, ಬಂಡವಾಳ ನೀಡುವವರು ಮತ್ತು ತಕ್ಷಣದ ಬೇಡಿಕೆ ಈಡೇರಿಸುವ ಪಕ್ಷಗಳ ನಡುವೆ ಪೈಪೋಟಿ ನಡೆಯುತ್ತಿಲ್ಲ. ಅದರ ಬದಲು ತಕ್ಷಣದ ಬೇಡಿಕೆ ಈಡೇರಿಸುವ ಪಕ್ಷಗಳು ಮತ್ತು ಜನರ ತಕ್ಷಣದ ಸಮಸ್ಯೆಗಳನ್ನು ಪರಿಹರಿಸುವ ಸವಲತ್ತುಗಳನ್ನು ನೀಡದೆ ಚುನಾವಣೆ ಗೆಲ್ಲ ಬಯಸುವ ಪಕ್ಷಗಳ ನಡುವೆ ಪೈಪೋಟಿ ನಡೆಯುತ್ತಿದೆ. ಜನರಿಗೆ ಕಡಿಮೆ ಸವಲತ್ತು ನೀಡುವ ಪಕ್ಷಗಳು ಚುನಾವಣೆ ಗೆಲ್ಲಲು ಕೋಮು ಧ್ರುವೀಕರಣವನ್ನು ಅವಲಂಬಿಸಿದ್ದಾರೆ. ಜನರ ಉಣ್ಣುವ, ತಿನ್ನುವ, ಪ್ರೀತಿಸುವ, ಪೂಜಿಸುವ ವಿಚಾರಗಳನ್ನು ಬಳಸಿಕೊಂಡು ನಡೆಸುವ ಸಾಂಸ್ಕೃತಿಕ ರಾಜಕೀಯ, ಕೋಮು ಗಲಭೆ ಎಬ್ಬಿಸಿ, ಜಾತಿ, ಧರ್ಮಗಳ ಧ್ವೇಷ ಬಿತ್ತಿ ಮಾಡುವ ಮತಯಾಚನೆ, ಪರಸ್ಪರ ಅಪನಂಬಿಕೆ, ದ್ವೇಷಗಳನ್ನೇ ಬಿಂಬಿಸುವ ದೇಶಪ್ರೇಮ ಇತ್ಯಾದಿಗಳು ಇವರ ಚುನಾವಣ ಆಸ್ತ್ರಗಳು. ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಈ ಎರಡು ಮಾದರಿಗಳನ್ನು ನೋಡಬಹುದು.
ನೋಟು ರದ್ಧತಿ, ಜಿಎಸ್‌ಟಿ, ಕೋವಿಡ್, ಹಣದುಬ್ಬರ, ನಿರುದ್ಯೋಗ ಇತ್ಯಾದಿಗಳು ಜನರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿವೆ. ಬಹುತೇಕರ ಖರೀದಿಸುವ ಶಕ್ತಿ ಕುಂಠಿತವಾಗಿದೆ. ಊಟ, ಶಿಕ್ಷಣ, ಆರೋಗ್ಯ ಇತ್ಯಾದಿ ಮೂಲಸೌಕರ್ಯಗಳನ್ನು ಖರೀದಿಸಲು ಜನರು ಪರದಾಡುವ ಸ್ಥಿತಿ ಇದೆ. ಈ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟಕೊಂಡು ಜನರ ತಕ್ಷಣದ ಸಮಸ್ಯೆಗಳನ್ನು ಪರಿಹರಿಸುವ ಹಲವು ಭರವಸೆಗಳನ್ನು ಕಾಂಗ್ರೆಸ್ ಪಕ್ಷ ಜನರ ಮುಂದಿಟ್ಟಿದೆ. ಉಚಿತ ಅಕ್ಕಿ, ವಿದ್ಯುತ್, ನಿರುದ್ಯೋಗ ಭತ್ತೆ, ಗೃಹಲಕ್ಷಿö್ಮ ಯೋಜನೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇವೆಲ್ಲ ಕಾಂಗ್ರೆಸ್ ಪಕ್ಷದ ಭರವಸೆಗಳು. ಬಿಜೆಪಿ ಚುನಾವಣೆ ಮುನ್ನ ಜನರನ್ನು ಜಾತಿ, ಧರ್ಮದ ನೆಲೆಯಲ್ಲಿ ಧ್ರುವೀಕರಿಸಲು ಹಿಜಾಬ್, ಅಜಾನ್, ಹಲಾಲ್ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ತಮ್ಮ ಪಕ್ಷದ ದೃಷ್ಟಿಯಿಂದ ಲೋಕ ನೋಡಲು ಯುವಜನರಿಗೆ ತರಬೇತು ನೀಡುವ ಉದ್ದೇಶದಿಂದ ಪಠ್ಯ ಪರಿಷ್ಕರಣೆ ಕೆಲಸಕ್ಕೂ ಮುಂದಾಗಿತ್ತು. ಚುನಾವಣ ಸಂದರ್ಭದಲ್ಲಿ ಉಚಿತ ಗ್ಯಾಸ್ ಸಿಲಿಂಡರ್, ಅರ್ಧ ಲೀಟರ್ ಹಾಲು ನೀಡುವ ಭರವಸೆಯನ್ನೂ ನೀಡಿದೆ. ಜೊತೆಗೆ ಇಂತಹ ‘ಉಚಿತ’ ಸವಲತ್ತುಗಳನ್ನು ನೀಡುವುದರ ವಿರುದ್ಧ ಸಾಕಷ್ಟು ಪ್ರಶ್ನೆಗಳನ್ನು ಎತ್ತಿದೆ. ಸವಲತ್ತುಗಳನ್ನು ‘ಉಚಿತ’ ನೀಡುವುದು ಸರಿಯೇ? ಇವನ್ನು ಜಾರಿಗೊಳಿಸಲು ಸಾಧ್ಯವೇ? ಸಂಪನ್ಮೂಲ ಕೊರತೆಯಾಗುವುದಿಲ್ಲವೇ? ಇವೆಲ್ಲ ಅಭಿವೃದ್ಧಿ ಮಾರಕವಲ್ಲವೇ? ಇವೆಲ್ಲ ಅನುತ್ಪಾದಕವಲ್ಲವೇ? ಇತ್ಯಾದಿಗಳು ಪ್ರಮುಖ ಪ್ರಶ್ನೆಗಳು.
ಇದನ್ನೂ ಓದಿ : ಪ್ರಜಾಪ್ರಭುತ್ವ ಚುನಾವಣೆಗೆ ಸೀಮಿತವಾಗಿ ಅದೂ ಅರ್ಥಹೀನವಾಗುತ್ತಿದೆಯೇ? ಭಾಗ-೧
ಈ ಪ್ರಶ್ನೆಗಳನ್ನು ವಿಶ್ಲೇಷಿಸುವ ಮೂಲಕ ಮುಂದಿನ ದಿನಗಳಲ್ಲಿ ಮುಂಚೂಣಿಗೆ ಬರಬಹುದಾದ ರಾಜಕೀಯವನ್ನು ಊಹಿಸುವ ಪ್ರಯತ್ನ ಈ ಲೇಖನದಲ್ಲಿದೆ. ಒಂದು ವೇಳೆ ಈ ಚುನಾವಣೆಯಲ್ಲಿ ತಕ್ಷಣದ ಬೇಡಿಕೆಗಳನ್ನು ಪೂರೈಸುವ ಭರವಸೆಗಳು ಮಹತ್ವ ಪಡೆದರೆ ಕೋಮು ರಾಜಕೀಯ ಹಿಂದಕ್ಕೆ ಸರಿಯುವ ಸಾಧ್ಯತೆ ಇದೆ. ಈ ನಿರ್ಧಿಷ್ಟ ಊಹೆಯೊಂದಿಗೆ ಪ್ರಶ್ನೆಗಳನ್ನು ವಿಶ್ಲೇಷಿಸುತ್ತಿದ್ದೇನೆ. ಸವಲತ್ತುಗಳನ್ನು ‘ಉಚಿತ’ ನೀಡುವುದು ಸರಿಯೇ? ಉಚಿತ ಎನ್ನುವ ಪದ ಪ್ರಯೋಗವೇ ತಪ್ಪು. ಏಕೆಂದರೆ ಸವಲತ್ತುಗಳನ್ನು ಏನೇನೂ ಪ್ರತಿಫಲ ಇಲ್ಲದೆ ಕೊಡುವುದು ಉಚಿತ. ಇಲ್ಲಿ ಈ ಸವಲತ್ತುಗಳನ್ನು ಪಡೆಯುವ ಜನರು ನೇರವಾಗಿ ಮತ್ತು ಪರೋಕ್ಷವಾಗಿ ಕೋಟಿಗಟ್ಟಲೆ ಮೊತ್ತವನ್ನು ಸರಕಾರಕ್ಕೆ ಸಂದಾಯ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಗ್ರಹ ಮಾಡುವ ಪ್ರತಿ ನೂರು ರುಪಾಯಿ ತೆರಿಗೆಯಲ್ಲಿ ಮೂರನೇ ಎರಡರಷ್ಟು ಪರೋಕ್ಷ ತೆರಿಗೆಯಿಂದಲೇ ಅಂದರೆ ಅನನುಕೂಲಸ್ಥರಿಂದಲೇ ಬರುವುದು. ಬೆಳಿಗ್ಗೆ ಎದ್ದು ಹಲ್ಲು ಉಜ್ಜುವಲ್ಲಿಂದ ಹಿಡಿದು ರಾತ್ರಿ ಮಲಗುವ ತನಕ ಕೆಲವು ನೂರು ಗಳಿಸುವವರು ಕೂಡ ತಾವು ಗಳಿಸುವ ಪ್ರತಿ ನೂರು ರೂಗಳಲ್ಲಿ ಕನಿಷ್ಟ ಇಪ್ಪತೈದರಿಂದ ಮೂವತ್ತು ರೂಗಳ ತೆರಿಗೆ ಸಂದಾಯ ಮಾಡುತ್ತಾರೆ. ಇದರಿಂದಾಗಿಯೇ ರಾಜ್ಯದ ಆದಾಯದಲ್ಲಿ ಶೇ.84 ಕೂಡ ಜನ ಸಾಮಾನ್ಯರು ಕಟ್ಟುವ ತೆರಿಗೆಯಿಂದಲೇ ಬರುವುದು. ಹೀಗೆ ಈ ಸವಲತ್ತಗಳ ಭಾರವನ್ನು ಇವರೇ ಹೊರುವುದು ಹೊರತು ಅತ್ಯಲ್ಪ ಸಂಖ್ಯೆಯಲ್ಲಿರುವ ಮೇಲ್ ಮಧ್ಯಮ ಮತ್ತು ಶ್ರೀಮಂತ ವರ್ಗ ಹೊರುತ್ತಿಲ್ಲ.
ಮೇಲಿನವುಗಳೊಂದಿಗೆ ಜನರು ಸಂದಾಯ ಮಾಡುವ ಮೇಲ್ನೋಟಕ್ಕೆ ಕಾಣದ ಪರೋಕ್ಷ ತೆರಿಗೆ ಪಟ್ಟಿ ದೊಡ್ಡದಿದೆ. ಪ್ರತಿಯೊಬ್ಬರು ತಮ್ಮ ವಾಹನಕ್ಕೆ ಒಂದು ಲೀಟರ್ ಪೆಟ್ರೋಲ್/ಡಿಸೇಲ್ ತುಂಬುವಾಗ ಕನಿಷ್ಠ ರೂ.50 ತೆರಿಗೆ ಸಂದಾಯ ಮಾಡುತ್ತಾರೆ. ಸಾರ್ವಜನಿಕ ಸರಕುಗಳ ಮೇಲೆ ಸರಕಾರ ಅತ್ಯಂತ ಕಡಿಮೆ ವಿನಿಯೋಜಿಸುವುದರಿಂದ ದಿನಗೂಲಿಗೆ ದುಡಿಯುವವರು ಕೂಡ ತಮ್ಮ ದುಡಿತದ ಶೇ.30 ರಿಂದ 40ನ್ನು ಶಿಕ್ಷಣ, ಆರೋಗ್ಯಗಳ ಮೇಲೆ ವಿನಿಯೋಜಿಸಬೇಕಾಗಿದೆ. ಉದ್ದಿಮೆಗಳು ತಮ್ಮ ಲಾಭ ಹೆಚ್ಚಿಸಿಕೊಳ್ಳಲು ಬೆಲೆ ಏರಿಸುತ್ತವೆ. ಬೆಲೆ ಏರಿಸುವವರನ್ನು ಹದ್ದುಬಸ್ತಲ್ಲಿಟ್ಟುಕೊಳ್ಳುವ ಬದಲು ಸರಕಾರ ಹಣದುಬ್ಬರವನ್ನು ಹದ್ದುಬಸ್ತಲ್ಲಿಟ್ಟುಕೊಳ್ಳಲು ಮುಂದಾಗುತ್ತದೆ. ಬ್ಯಾಂಕ್ ಸಾಲದ ಮೇಲಿನ ಬಡ್ಡಿ ಏರಿಸುತ್ತದೆ. ಇದು ಕುಟುಂಬಗಳು ಕಟ್ಟುವ ಬಡ್ಡಿ ಮೊತ್ತವನ್ನು ಏರಿಸಿವೆ. ಏಕೆಂದರೆ ಇವತ್ತು ಬ್ಯಾಂಕ್‌ಗಳಲ್ಲಿ ಉದ್ದಿಮೆಗಳ ಸಾಲ ಬಾಕಿ ಶೇ.31ರಷ್ಟಿದ್ದರೆ ಕುಟುಂಬಗಳು ತಾವು ಬದುಕಿ ಉಳಿಯಲು ಮಾಡಿದ ಸಾಲ ಬಾಕಿ ಶೇ.49ರಷ್ಟಿದೆ. ಹೀಗೆ ಇವರು ಕಟ್ಟುವ ತೆರಿಗೆಯಿಂದಲೇ ಇವರಿಗೆ ನೀಡುವ ಅಲ್ಪಸ್ವಲ್ಪ ಸವಲತ್ತುಗಳನ್ನು ಕೂಡ ಉಚಿತ ಎನ್ನುವುದು ಈ ಜನರಿಗೆ ಮಾಡುವ ಅವಮಾನ.
ಇಂತಹ ಸವಲತ್ತುಗಳನ್ನು ನೀಡುವುದರಿಂದ ಸಂಪನ್ಮೂಲ ಕೊರತೆ ಆಗುವುದಿಲ್ಲವೇ ಎನ್ನುವುದು ಎರಡನೇ ಪ್ರಶ್ನೆ. ಮೇಲಿನ ಸವಲತ್ತುಗಳನ್ನು ನೀಡುವ ಮೊದಲೇ ರಾಜ್ಯಗಳು ಸಂಪನ್ಮೂಲ ಕೊರತೆ ಅನುಭವಿಸುತ್ತಿವೆ. ಇದಕ್ಕೆ ಹಲವು ಕಾರಣಗಳಿವೆ. ಒಂದು, 1/3ರಷ್ಟು ಅಭಿವೃದ್ಧಿ ಜವಾಬ್ದಾರಿ ಇರುವ ಕೇಂದ್ರ 2/3ರಷ್ಟು ತೆರಿಗೆ ಸಂಗ್ರಹ ಮಾಡುವುದು ಮತ್ತು ಹೆಚು ಅಭಿವೃದ್ಧಿ ಜವಾಬ್ದಾರಿ ಇರುವ ರಾಜ್ಯ ಅತ್ಯಲ್ಪ (1/3ರಷ್ಟು) ತೆರಿಗೆ ಸಂಗ್ರಹ ಮಾಡುವುದು. ಎರಡು, ಕೇಂದ್ರ ಸಂಗ್ರಹ ಮಾಡುವ ತೆರಿಗೆಯಲ್ಲಿ ರಾಜ್ಯದೊಂದಿಗೆ ಹಂಚಿಕೊಳ್ಳುವ ಮೂಲ ತೆರಿಗೆ ಸಂಗ್ರಹವನ್ನು ಶೇ.80ಕ್ಕೆ ಇಳಿಸಿ ರಾಜ್ಯದೊಂದಿಗೆ ಹಂಚಿಕೊಳ್ಳದಿರುವ ಸೆಸ್, ಸರ್‌ಚಾರ್ಜ್ನ್ನು ಶೇ.20ಕ್ಕೆ ಏರಿಸಿದ್ದು. ಇದರಿಂದಾಗಿ ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳು ಪಡೆಯುವ ಪಾಲು ಕಡಿಮೆಯಾಗುತ್ತಿದೆ. ಮೂರು, ಕೇಂದ್ರದ ತೆರಿಗೆ ಸಂಗ್ರಹದಲ್ಲಿ ರಾಜ್ಯಗಳ ಪಾಲನ್ನು ಜನಸಂಖ್ಯೆ ನೆಲೆಯಲ್ಲಿ ನಿರ್ಧರಿಸುವುದು. ಇದರಿಂದಾಗಿ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳು ಹೆಚ್ಚು ಪಾಲು ಪಡೆದು ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳು ಸಂಪನ್ಮೂಲ ಕೊರತೆ ಅನುಭವಿಸುವ ಸ್ಥಿತಿ ನಿರ್ಮಾಣ ಆಗಿದೆ.
ಕೇಂದ್ರದ ಹಣಕಾಸು ಸಮಿತಿ ಅನುಸರಿಸುವ ಅವೈಜ್ಞಾನಿಕ ಮಾನದಂಡಗಳಿAದ ಉತ್ತಮ ಅಭಿವೃದ್ಧಿ ಸಾಧನೆ ಮಾಡಿದ ರಾಜ್ಯಗಳು ಕಡಿಮೆ ಸಂಪನ್ಮುಲ ಪಡೆದು ಕಳೆಪ ಸಾಧನೆ ಮಾಡಿದ ರಾಜ್ಯಗಳು ಹೆಚ್ಚು ಸಂಪನ್ಮೂಲ ಪಡೆಯುತ್ತಿವೆ. ರಾಜ್ಯದಿಂದ ಕೇಂದ್ರಕ್ಕೆ ಹೋಗುವ ಪ್ರತಿ 1 ರೂಪಾಯಿ ತೆರಿಗೆಗೆ ಉತ್ತರ ಪ್ರದೇಶ ರೂ.1.79 ಹಿಂದಕ್ಕೆ ಪಡೆದರೆ ಕರ್ನಾಟಕ ಕೇವಲ 47 ಪೈಸೆ ಹಿಂದಕ್ಕೆ ಪಡೆಯುತ್ತಿದೆ. ಹೀಗೆ ಕೇಂದ್ರದ ಸಮೀಪ ದೃಷ್ಟಿಯ ಹಣಕಾಸು ನಿರ್ವಹಣೆಯಿಂದ ಸಂಪನ್ಮೂಲ ಕೊರತೆಯಾಗುತ್ತಿದೆಯೇ ಹೊರತು ಮೇಲಿನ ಸವಲತ್ತುಗಳನ್ನು ನೀಡುವುದರಿಂದ ಅಲ್ಲ. ನಮ್ಮ ರಾಜ್ಯದ ತೆರಿಗೆ ಸಂಗ್ರಹವನ್ನು ನಮ್ಮ ರಾಜ್ಯದ ಅಭಿವೃದ್ಧಿಗೆ ಬಳಸಿದರೆ, ಅನನುಕೂಲಸ್ಥರ ಬದಲು ಅನುಕೂಲಸ್ಥರಿಂದ ಹೆಚ್ಚು ತೆರಿಗೆ ಸಂಗ್ರಹಸಿದರೆ, ಶೇ.40 ಲಂಚಗುಳಿತವನ್ನು ಶೇ.10ಕ್ಕೆ ಇಳಿಸಿದರೆ ಮತ್ತು ರಾಜ್ಯ ಸರಕಾರ ಕೈಗೊಳ್ಳುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೇಂದ್ರ ಕೂಡ ಕೈಗೊಂಡು ಸಂಪನ್ಮೂಲ ಪೋಲು ಮಾಡುವುದನ್ನು ನಿಲ್ಲಿಸಿದರೆ ಮೇಲಿನ ಸವಲತ್ತುಗಳಿಗೆ ಸುಲಭದಲ್ಲಿ ಸಂಪನ್ಮೂಲ ಕ್ರೋಢಿಕರಿಸಬಹುದು.
ಈ ಸವಲತ್ತುಗಳನ್ನು ನೀಡುವುದು ಅಭಿವೃದ್ಧಿಗೆ ಪೂರಕವಲ್ಲ ಅಥವಾ ಅನುತ್ಪಾದಕ ಎನ್ನುವುದು ಮತ್ತೊಂದು ಆಕ್ಷೇಪ. ಇದೊಂದು ಬಂಡವಾಳ ಕೇಂದ್ರಿತ ಅಭಿವೃದ್ಧಿ ಚಿಂತನೆಯ ಪೂರ್ವಾಗ್ರಹ. ಅಂದರೆ ಸರಕುಸೇವೆಗಳ ಉತ್ಪಾದನೆಯಲ್ಲಿ ಬಂಡವಾಳದ್ದೇ ಪ್ರಮುಖ ಪಾತ್ರ ಇತರರ ಅದರಲ್ಲೂ ಮಾನವ ಶ್ರಮದ ಪಾತ್ರವನ್ನು ಸಂಪೂರ್ಣ ಅಲ್ಲಗೆಳೆಯುವ ಚಿಂತನೆ. ಇದೇ ಕಾರಣದಿಂದ ಉತ್ಪಾದನೆ ಹೆಚ್ಚಿಸಲು ಸರಕಾರ ನೀಡುವ ಎಲ್ಲ ಸವಲತ್ತುಗಳು (ಬ್ಯಾಂಕ್ ಸಾಲ, ಭೂಮಿ, ಪ್ರಾಕೃತಿಕ ಸಂಪನ್ಮೂಲ ಇತ್ಯಾದಿಗಳು) ಬಂಡವಾಳ ಹೂಡಿಕೆ ಮೇಲೆ ನಿರ್ಧರಿಸಲ್ಪಡುತ್ತಿವೆ. ಅಂದರೆ ಹೆಚ್ಚು ಬಂಡವಾಳ ವಿನಿಯೋಜಿಸುವವರಿಗೆ ಹೆಚ್ಚು ಕಡಿಮೆ ವಿನಿಯೋಜಿಸುವವರಿಗೆ ಕಡಿಮೆ. ಇಷ್ಟೆಲ್ಲ ಬೆಂಬಲ ನೀಡಿದರೂ ದೇಶದ ಒಟ್ಟು ಉತ್ಪನ್ನಕ್ಕೆ (ಜಿಡಿಪಿ) ದೊಡ್ಡ ಬಂಡವಾಳಿಗರ ಕೊಡುಗೆ ಶೇ.50ರ ಆಸುಪಾಸಿನಲ್ಲಿದೆ. ಸರಕಾರದಿಂದ ವಿಶೇಷ ಬೆಂಬಲ ಪಡೆಯದ ಸಣ್ಣ ಮತ್ತು ಅತೀ ಸಣ್ಣ ಕೃಷಿ, ವ್ಯಾಪಾರ, ಉದ್ದಿಮೆ ಮತ್ತು ಇವುಗಳಲ್ಲಿ ದುಡಿಯುವವರ ಜಿಡಿಪಿ ಕೊಡುಗೆ ಶೇ.40-45ರಷ್ಟಿದೆ. ಇದೊಂದು ರೀತಿ ಹಲವು ಕೆಜಿ ಹಿಂಡಿ ತಿಂದು 10 ಲೀಟರ್ ಹಾಲು ಕೊಡುವ ಹೈಬ್ರಿಡ್ ದನ ಮತ್ತು ಹಿತ್ತಲ ಹುಲ್ಲು ಮೇದು 4 ಲೀಟರ್ ಹಾಲು ಕೊಡುವ ನಾಟಿ ದನದ ಕತೆ ಇದ್ದಂತೆ.
ರಾಜಕೀಯ ಪಕ್ಷಗಳು ಘೋಷಿಸುವ ಅಕ್ಕಿ, ವಿದ್ಯುತ್, ನಿರುದ್ಯೋಗ ಭತ್ತೆ, ಬಸ್ ಟಿಕೇಟು, ಗ್ಯಾಸ್ ಸಿಲಿಂಡರ್, ಹಾಲು ಇತ್ಯಾದಿಗಳೆಲ್ಲ ನಾಟಿ ದನದ ರೀತಿಯಲ್ಲಿ ಅತ್ಯಂತ ಕಡಿಮೆ ಸಂಪನ್ಮೂಲ ಬಳಸಿ ಹೆಚ್ಚು ಉತ್ಪಾದನೆ ಮಾಡುವ ಜನರಿಗೆ ತಲುಪುವ ಸವಲತ್ತುಗಳು. ಇವೆಲ್ಲ ಸವಲತ್ತುಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಂಡರೆ ಪ್ರತಿ ಕುಟುಂಬಕ್ಕೂ ಒಂದೆರಡು ಸಾವಿರ ರೂಗಳ ನೆರವು ಸಿಗಬಹುದು. ಹಲವು ಸಾವಿರ ಅಥವಾ ಲಕ್ಷದಲ್ಲಿ ಗಳಿಸುವವರಿಗೆ ಒಂದೆರಡು ಸಾವಿರ ದೊಡ್ಡ ಮೊತ್ತವಲ್ಲ. ಆದರೆ 10 ರಿಂದ 15 ಸಾವಿರ ಆದಾಯವುಳ್ಳವರಿಗೆ ಒಂದೆರಡು ಸಾವಿರ ದೊಡ್ಡ ಮೊತ್ತ. ಅದರಲ್ಲೂ ಇತ್ತೀಚಿನ ಕೆಲವು ವರ್ಷಗಳ ಬೆಳವಣಿಗೆಗಳು ಮುಖ್ಯವಾಗಿ ನೋಟು ರದ್ಧತಿ, ಜಿಎಸ್‌ಟಿ, ಕೋವಿಡ್ ಹೊಡೆತ, ಆರ್ಥಿಕ ಕುಸಿತ, ನಿರುದ್ಯೋಗ, ಹಣದುಬ್ಬರ ಇತ್ಯಾದಿಗಳು ಇವರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿವೆ. ಇವರೆಲ್ಲರ ಖರೀದಿಸುವ ಶಕ್ತಿ ಕುಂಠಿತವಾಗಿದೆ. ಇವರ ಖರೀದಿಸುವ ಶಕ್ತಿಯನ್ನು ಈ ಸವಲತ್ತುಗಳು ಅಲ್ಪಸ್ವಲ್ಪ ಸುಧಾರಿಸಬಹುದು. ಇವರನ್ನು ದಿವಾಳಿಗೊಳಿಸುವ ನೀತಿಗಳೇ ಹೆಚ್ಚಿರುವ ಸಂದರ್ಭದಲ್ಲಿ ಈ ಅಲ್ಪಸ್ವಲ್ಪ ನೆರವು ಕೂಡ ಬದುಕಿ ಉಳಿಯಲು ಇವರಿಗೆ ಆಸರೆಯಾಗಬಹುದು.
ಮೇಲಿನ ಆರ್ಥಿಕ ಸಮರ್ಥನೆಯ ಜೊತೆಗೆ ಈ ಕಾರ್ಯಕ್ರಮಗಳಿಗೆ ರಾಜಕೀಯ ಸಮರ್ಥನೆ ಕೂಡ ಇದೆ. ಅದೇನೆಂದರೆ ಕೋಮು ಗಲಭೆ ಎಬ್ಬಿಸಿ, ಜಾತಿ, ಧರ್ಮಗಳ ಧ್ವೇಷ ಬಿತ್ತಿ ಮತಯಾಚನೆ ಮಾಡುವುದಕ್ಕಿಂತ, ಜನರಿಗೆ ಹೆಂಡ ಸರಾಯಿ ಕುಡಿಸಿ, ಒಂದೆಡರು ಸಾವಿರ ರೂಗಳನ್ನು ಹಂಚಿ ಮತ ಪಡೆಯುವುದಕ್ಕಿಂತ, ಜನರಿಗೆ ಸೀರೆ, ಕುಪ್ಪಸ, ಕುಕ್ಕರ್, ಟಿವಿಗಳನ್ನು ನೀಡಿ ಮತಯಾಚನೆ ಮಾಡುವುದಕ್ಕಿಂತ ಇಂತಹ ಸವಲತ್ತುಗಳನ್ನು ನೀಡಿ ಮತಯಾಚನೆ ಮಾಡುವುದು ಉತ್ತಮ. ಇದು ಚುನಾವಣೆಯ ಚರ್ಚೆಯನ್ನು ಕೋಮು ಧ್ರುವೀಕರಣದ ಭಾಷಣಗಳಿಂದ ಇಂತಹ ಸವಲತ್ತುಗಳ ಚರ್ಚೆಯ ಕಡೆಗೆ ಒಯ್ಯಬಹುದು. ಒಂದು ವೇಳೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಜನರು ಕೋಮು ರಾಜಕೀಯಕ್ಕಿಂತ ಹೆಚ್ಚು ಅಭಿವೃದ್ದಿ ರಾಜಕೀಯಕ್ಕೆ ಮಹತ್ವ ನೀಡುತ್ತಾರೆ ಎನ್ನುವ ತೀರ್ಮಾನಕ್ಕೆ ಬರಬಹುದು. ಕೋಮು ಧ್ರುವೀಕರಣದಿಂದ ಗೆಲ್ಲುವುದಕ್ಕಿಂತ ಜನರ ತಕ್ಷಣದ ಬೇಡಿಕೆಗಳನ್ನು ಪೂರೈಸಿ ಗೆಲ್ಲುವುದು ಉತ್ತಮ. ಇಂತಹ ಬೆಳವಣಿಗೆ ಸಾಧ್ಯವಾದರೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಮುಂಚೂಣಿಗೆ ಬಂದು ಕೋಮುವಾದ ಹಿಂದಕ್ಕೆ ಸರಿಯಬಹುದು. ಕಾಲಕ್ರಮೇಣ ಜನರ ತಕ್ಷಣದ ಸಮಸ್ಯೆಗಳು ಕಡಿಮೆಯಾದರೆ ಅಥವಾ ತಕ್ಷಣದ ಸಮಸ್ಯೆಗೂ ದೂರಗಾಮಿ ಪರಿಹಾರಗಳು ಬೇಕೆನ್ನುವುದು ಜನರಿಗೆ ಮನವರಿಕೆಯಾದರೆ ಸ್ವಾವಲಂಬಿಗಳನ್ನಾಗಿಸುವ ರಾಜಕೀಯಕ್ಕೂ ಅವಕಾಶ ಬರಬಹುದು.